ADVERTISEMENT

ಮಡಿದವರ ಸ್ಮಾರಕ ಮರೆತರು ಏಕೆ?

ಮಲ್ಲಿಕಾರ್ಜುನ ಹೊಸಪಾಳ್ಯ
Published 11 ಆಗಸ್ಟ್ 2024, 0:13 IST
Last Updated 11 ಆಗಸ್ಟ್ 2024, 0:13 IST
<div class="paragraphs"><p>ನಿರ್ವಹಣೆ ಇಲ್ಲದೆ ಸೊರಗಿದ ಸ್ಮಾರಕ... </p></div>

ನಿರ್ವಹಣೆ ಇಲ್ಲದೆ ಸೊರಗಿದ ಸ್ಮಾರಕ...

   

(ಚಿತ್ರ: ದೀಪಕ್ ಕುಮಾರ್)

ಹೊಸಪೇಟೆಯಲ್ಲಿರುವ ‘ತುಂಗಭದ್ರಾ’ ರಾಜ್ಯದ ಅತಿ ದೊಡ್ಡ ನೀರಾವರಿ ಜಲಾಶಯಗಳಲ್ಲೊಂದು. 1945ರಲ್ಲಿ ಇದರ ನಿರ್ಮಾಣ ಶುರುವಾಗಿ 1958ರಲ್ಲಿ ಮುಕ್ತಾಯವಾಯಿತು. ಅಚ್ಚುಕಟ್ಟಿಗೆ ನೀರುಣಿಸುವ ನದಿಯ ಎಡಭಾಗದ ಎರಡು ಮತ್ತು ಬಲಭಾಗದ ಎರಡು ಕಾಲುವೆಗಳು ಮತ್ತು ರಾಯ-ಬಸವ ಕಾಲುವೆಗಳ ನಿರ್ಮಾಣ ಪೂರ್ಣವಾಗಿದ್ದು 1967ರ ಹೊತ್ತಿಗೆ. ಒಟ್ಟಾರೆ 22 ವರ್ಷ ಜಲಾಶಯದ ಕಾಮಗಾರಿ ನಡೆಯಿತು. ಈ ಅವಧಿಯಲ್ಲಿ ಕೆಲಸದಲ್ಲಿ ತೊಡಗಿದ್ದ ಹತ್ತಾರು ಕಾರ್ಮಿಕರು ಮೃತಪಡುತ್ತಾರೆ. ಕೆಲವರು ಮಲೇರಿಯಾ ಇತ್ಯಾದಿ ಕಾಯಿಲೆಗಳಿಂದ, ಇನ್ನು ಕೆಲವರು ಕೆಲಸ ನಡೆಯುವಾಗಿನ ಅವಘಡಗಳಿಂದ ಜೀವ ಕಳೆದುಕೊಳ್ಳುತ್ತಾರೆ. ಇವರ ನೆನಪಿಗಾಗಿ ಜಲಾಶಯ ಉದ್ಘಾಟನೆ ಸಮಯದಲ್ಲಿ ಶಿಲಾ ಸ್ಮಾರಕವನ್ನು ನಿರ್ಮಿಸಲಾಗುತ್ತದೆ. ಜಲಾಶಯದ ಎಡಭಾಗದಲ್ಲಿ (ನೀರಾವರಿ ಕೇಂದ್ರ ವಲಯದ ಕಚೇರಿ ಕಡೆ) ಅಣೆಕಟ್ಟೆಯ ಶುರುವಿನಲ್ಲೇ ಈ ಸ್ಮಾರಕವನ್ನು ಕಾಣಬಹುದು.

ADVERTISEMENT

ಈ ವರ್ಷ ಉತ್ತಮ ಮಳೆಯಾಗಿ ತುಂಗಭದ್ರಾ ಜಲಾಶಯ ಜುಲೈನಲ್ಲಿಯೇ ತುಂಬಿತು. ಎಲ್ಲಾ 33 ಗೇಟುಗಳನ್ನು ತೆರೆದು ನದಿಗೆ ನೀರು ಹರಿಸಿದರು. ಆ ವೈಭವ ಹಾಗೂ ಕಾರ್ಮಿಕರ ಸ್ಮಾರಕವನ್ನು ನೋಡಬೇಕೆಂದು ವಿಶೇಷ ಅನುಮತಿ ಪಡೆದು ಕೆಲ ಸ್ನೇಹಿತರು ಹೋಗಿದ್ದೆವು. ರಭಸದಿಂದ ಹರಿಯುವ ಜಲಾಶಯವೇನೋ ಚೆನ್ನಾಗಿತ್ತು. ಆದರೆ ಸ್ಮಾರಕವನ್ನು ನೋಡಿ ಪಿಚ್ಚೆನಿಸಿತು. ನಾವು ಸ್ಮಾರಕ ನೋಡಬೇಕೆಂದು ಜೀಪು ನಿಲ್ಲಿಸಿದಾಗ ದೂರದ ಗೇಟಿನ ಬಳಿ ಇದ್ದ ಪೋಲೀಸ್‌ ಒಬ್ಬರು ‘ಅಲ್ಲಿ ಏನೂ ಇಲ್ಲ, ಮುಂದೆ ಹೋಗಿ’ ಎಂದು ದಬಾಯಿಸಿದರು. ಅವರಿಗೆ ಸ್ಮಾರಕ ಇರುವ ಬಗ್ಗೆ ಹೇಳಿದಾಗ ಅಚ್ಚರಿಪಟ್ಟು ‘ಅಲ್ಲೆಲ್ಲಾ ಹಾವುಗಳಿವೆ, ಹುಷಾರು’ ಎಂದು ಎಚ್ಚರಿಸಿ ಒಳಗೆ ಬಿಟ್ಟರು.

ಶಿಲೆಯಿಂದ ನಿರ್ಮಿಸಿರುವ ಸ್ಮಾರಕ ಭವ್ಯವಾಗಿದೆ. ದೀಪದಕಂಬವನ್ನು ಹೋಲುವ ಶೈಲಿ. ಕೆಳಭಾಗದಲ್ಲಿ ಅಗಲವಾಗಿದ್ದು ಮೇಲೆ ಹೋದಂತೆ ಕಿರಿದಾಗುವ ವಿನ್ಯಾಸ. ತುದಿಯಲ್ಲಿ ಬಿಳಿಯ ದೀಪ ಅಳವಡಿಸಲಾಗಿದ್ದು, ಈಗ ಅದು ಒಡೆದುಹೋಗಿದೆ. ಒಂದು ಕಾಲದಲ್ಲಿ ಉತ್ತಮ ನಿರ್ವಹಣೆ ಇತ್ತು ಎಂಬುದರ ಕುರುಹುಗಳಾಗಿ ಸುತ್ತಲೂ ಬೆಂಚುಗಳು, ಕಾಲುಹಾದಿ, ನೆಟ್ಟಗಿಡಗಳನ್ನು ಕಾಣಬಹುದು. ಸ್ಮಾರಕದ ನಾಲ್ಕೂ ಭಾಗಗಳಲ್ಲಿ ಕನ್ನಡ, ತೆಲುಗು, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಜಲಾಶಯ ನಿರ್ಮಾಣಕ್ಕಾಗಿ ಪ್ರಾಣ ತೆತ್ತ ಶ್ರಮಿಕರನ್ನು ಸ್ಮರಿಸಲಾಗಿದೆ.

ಜೊತೆಗೆ ಪ್ರತಿಯೊಂದು ಕಡೆಯೂ ಕಾರ್ಮಿಕರ ಕೆಲಸದ ಗುರುತುಗಳಾಗಿ ಕರಣೆ, ಸುತ್ತಿಗೆ, ಪಿಕಾಸಿ, ವಿದ್ಯುತ್‌ ತಂತಿ ಮುಂತಾದವುಗಳನ್ನು ಕಲ್ಲಿನಲ್ಲಿಯೇ ಕೆತ್ತಿರುವುದು ಅರ್ಥಪೂರ್ಣ.

ಆದರೆ, ಈಗ ಸ್ಮಾರಕ ಇರುವ ಸ್ಥಳ ಹಾಳು ಸುರಿಯುತ್ತಿದೆ. ಇಲಾಖೆಯವರೇ ತ್ಯಾಜ್ಯ ಸುರಿಯುತ್ತಿದ್ದಾರೆ. ಇಲ್ಲಿ ಸೂಚನಾಫಲಕವೂ ಇಲ್ಲ. ಎಲ್ಲಿಂದ ಒಳಗೆ ಹೋಗಬೇಕೆಂದು ಹುಡುಕಬೇಕು. ಜಲಾಶಯ ನೋಡಲು ಬರುವ ಪ್ರವಾಸಿಗರಿಗೆ ಇಂತಹದೊಂದು ಸ್ಮಾರಕ ಇರುವುದೇ ತಿಳಿದಿಲ್ಲ. ತಿಳಿಸುವ ಪ್ರಯತ್ನವನ್ನೂ ಯಾರೂ ಮಾಡುತ್ತಿಲ್ಲ.

ಮೂರು ರಾಜ್ಯ, ಹತ್ತಾರು ಜಿಲ್ಲೆಗಳು, ಲಕ್ಷಾಂತರ ಹೆಕ್ಟೇರ್‌ ಜಮೀನಿಗೆ ನೀರುಣಿಸುವ, ಕುಡಿಯುವ ನೀರು ಪೂರೈಸುವ, ಕಾರ್ಖಾನೆಗಳಿಗೆ ಆಸರೆಯಾಗಿರುವ ಜಲಾಶಯವನ್ನು ನಿರ್ಮಿಸುವಾಗ ಪ್ರಾಣ ತೆತ್ತ ಶ್ರಮಿಕರನ್ನು ಗೌರವದಿಂದ ಸ್ಮರಿಸಿ, ಅವರ ನೆನಪಿಗಾಗಿ ಕಟ್ಟಿರುವ ಸ್ಮಾರಕ ಸ್ಥಳಕ್ಕೆ ಕಾಯಕಲ್ಪಬೇಕಿದೆ.

ಶ್ರಮಿಕರ ಸ್ಮರಣೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.