ADVERTISEMENT

ಲಹರಿ: ಪರದೆ ವ್ಯಸನ ಮರೆಯಾಗುವುದೆ?

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 23:30 IST
Last Updated 1 ನವೆಂಬರ್ 2024, 23:30 IST
   

ಮೊನ್ನೆ ಜ್ವರ ಎನ್ನುವ ಕಾರಣಕ್ಕೆ ಕ್ಲಿನಿಕಿಗೆ ಹೋಗಿದ್ದೆ. ನನ್ನ ಸರದಿ ಬಂದರೂ ಅನಿವಾರ್ಯವಾಗಿ ಶಾಲೆಗೆ ಹೋಗುವ ಹುಡುಗನಿಗೆ ಒಳಹೋಗಲು ಅವಕಾಶ ನೀಡಬೇಕಾಯಿತು. ಆ ಹುಡುಗನನ್ನು ಅವರಮ್ಮ ತಬ್ಬಿ ಹಿಡಿದಿದ್ದರು. ಅವರಪ್ಪ ಬಡಿಗೆ ತೆಗೆದುಕೊಂಡು ಬಡಿಯೊ ಹಾಗೆ ನೋಡುತ್ತಿದ್ದರು!. ಡಾಕ್ಟರ್ ‘ಏನಾಯಿತು?’ ಎಂದು ಕೇಳುವ ಹೊತ್ತಿಗೆ ‘ಇಪ್ಪತ್ತನಾಲ್ಕು ಗಂಟೆಯೂ ಮೊಬೈಲ್ ಹಿಡಿದಿರ್ತಾನೆ ಅದಕ್ಕೆ ಸರಿಯಾಗಿ ಕೊಟ್ಟೆ. ದೈಹಿಕ ಚಟುವಟಿಕೆ ಅನ್ನುವುದೇ ಇಲ್ಲ ಇವನಿಗೆ’ ಎನ್ನುತ್ತಿದ್ದಂತೆ ನನಗೆ ಇದು ‘ಪರದೆ ವ್ಯಸನ’ ಎಂಬುದರ ಅರಿವಾಯಿತು.

ಈ ಹೊಸ ಕಾಯಿಲೆಯ ಬಗ್ಗೆ ನಿಮಗೆಲ್ಲ ತಿಳಿದೇ ಇದೆ. ಮೊಬೈಲ್‌ ಎಂಬ ಮಾಯೆ ಇಡೀ ಬದುಕನ್ನು ಆವರಿಸಿಕೊಂಡಿರುವ ಈ ಹೊತ್ತಿನಲ್ಲಿ ಈ ವ್ಯಸನಕ್ಕೆ ಅಂಟದೆ ಉಳಿದವರು ತೀರಾ ಕಡಿಮೆ ಎಂದೇ ಹೇಳಬೇಕು. ಈ ವ್ಯಸನಕ್ಕೆ ‘ಮಕ್ಕಳು ವೃದ್ಧರು ಎನ್ನುವಂತಿಲ್ಲ. ಅದು ಮೊಬೈಲ್ ಪರದೆಯಾಗಿರಬಹುದು ಟಿ.ವಿ, ಕಂಪ್ಯೂಟರ್,ಲ್ಯಾಪ್‌ಟ್ಯಾಪ್‌, ಟ್ಯಾಬ್‌ ಹೀಗೆ ಗ್ಯಾಜೆಟ್‌ಗಳ ಮೋಹಕ್ಕೆ ಅಂಟಿಕೊಂಡೇ ಇರುವುದು.

‘ವ್ಯಸನಾಭಿಭೂತನಾವನುಮನುರಾಗವೇಗದೆ ಹಿತಾಹಿತಚಿಂತೆಯನೇಕೆ ಮಾಡುವಂ’ ಇದು ನಾಗಚಂದ್ರನ ‘ರಾಮಚಂದ್ರಚರಿತಪುರಾಣ’ದಲ್ಲಿ ಬರುವ ಮಾತು. ಸೀತೆಯ ವ್ಯಾಮೋಹಕ್ಕೆ ಸಿಲುಕಿದ ರಾವಣನ ಕುರಿತು ಆಡಿದ್ದಾಗಿದೆ. ಹೌದು! ಅವನ ಕಣ್ಣಿಗೆ ಸೀತೆ ಎನ್ನುವ ವ್ಯಾಮೋಹ ಆವರಿಸಿತ್ತು. ಹಾಗಾಗಿ ಯಾರು ಬುದ್ಧಿ ಹೇಳಿದರೂ ಕೇಳುವ ಮನಃಸ್ಥಿತಿಯಲ್ಲಿ ಅವನು ಇರಲಿಲ್ಲ.

ADVERTISEMENT

ಮೊಬೈಲ್‌ಗೆ ಹೋಲಿಸಿದರೆ ಇಂಥಹುದ್ದೇ ವ್ಯಸನ ಕಾಡುತ್ತಿದೆಯೇ?. ವಾಶ್‌ರೂಮಿಗೆ ಹೋದರೂ ಮೊಬೈಲ್ ಬೇಕು. ಅಲ್ಲಿಗೆ ತೆಗೆದುಕೊಂಡು ಹೋಗಿದ್ದು ಎಂದು ಮೊಬೈಲ್‌ನಂತೂ ತೊಳೆಯಲಾಗದು. ಅದರಲ್ಲಿರುವ ಬ್ಯಾಕ್ಟೀರಿಯಾಗಳು ಮತ್ತೆ ಊಟ ತಿಂಡಿಗಳ ಮೂಲಕ ದೇಹವನ್ನು ಪ್ರವೇಶಿಸುತ್ತವೆ.

ಬೆಳಿಗ್ಗೆ ಹಾಸಿಗೆಯಿಂದ ಏಳುವಾಗಲೂ, ರಾತ್ರಿ ದಿಂಬಿಗೆ ತಲೆ ಕೊಡುವಾಗಲೂ ಮೊಬೈಲ್ ಬೇಕೇ ಬೇಕು. ಅದು ದಿನಚರಿಯ ಭಾಗವಾಗಿಬಿಟ್ಟಿದೆ. ಸಂಜೆಯ ಬಿರುಸು ನಡಿಗೆಯಲ್ಲಿಯೂ ಮೊಬೈಲ್‌ ಬೇಕು. ಮೊಬೈಲನ್ನು ತೀಡಿ ತೀಡಿ ನಿದ್ರೆಯಲ್ಲೂ ಕೈ ಬೆರಳುಗಳು ಚಲಿಸುತ್ತಿರುತ್ತವೆ.

ಬೆಳಿಗ್ಗೆಯಿಂದ ಸಂಜೆವರೆಗೆ ಮೊಬೈಲ್ ಹಿಡಿದರೆ ಉಳಿಗಾಲವಿದೆಯೇ? ಬುದ್ಧಿ , ಮನಸ್ಸು ವಿಕಾಸಗೊಳ್ಳದೇ, ವಿಕಾರಗೊಳ್ಳುತ್ತದೆ. ದೃಷ್ಟಿ ಮಂದವಾಗುತ್ತದೆ. ಕೈಬೆರಳುಗಳು ಸೋಲುತ್ತವೆ. ಮೊಣಕೈ ಹಾಗೂ ಭುಜದ ಭಾಗದಲ್ಲಿ ಅಸಾಧ್ಯ ನೋವು ಬಂದು ಆಸ್ಪತ್ರೆ ಸೇರಬೇಕಾಗುತ್ತದೆ. ಕಲರ್ ಟಿ.ವಿ ಬಂದಾಗ ಮೂರು ಹೊತ್ತು ಟಿ.ವಿ ನೋಡುತ್ತಾರೆ ಎನ್ನುವ ದೂರಿತ್ತು. ತರಹೇವಾರಿ ಚಾನೆಲ್‌ಗಳು ಬಂದ ಮೇಲೆ ಸೀರಿಯಲ್ ನೋಡಿ ಸಂಸಾರ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬ ಅಪಸ್ವರ ಎದ್ದಿತ್ತು. ಮನೆಯಲ್ಲಿದ್ದವರ ವಿರುದ್ಧ ಮಾತನಾಡಲು ಈ ವಿಷಯ ಬಳಕೆಯಾಗುತ್ತಿತ್ತು. ಈಗ ಮೊಬೈಲ್ ಎಲ್ಲಾ ಕಡೆ ತನ್ನ ವಿರಾಟ್ ಸ್ವರೂಪವನ್ನು ತೋರಿಸುತ್ತಿದೆ.

ಸರಿಯಾದ ಸಮಯಕ್ಕೆ ಏಳುವ, ಮಲಗುವ, ಉಣ್ಣುವ ಶಿಸ್ತು ಬದುಕಿನಿಂದ ಕಣ್ಮರೆಯಾಗಿದೆ. ಪ್ರತಿಯೊಂದಕ್ಕೂ ಗೂಗಲ್‌ನ ಅಭಿಪ್ರಾಯ ಪಡೆಯುವ ಹಾಗಾಗಿದೆ. ಮನಸ್ಸು ಚಂಚಲವಾಗಿ ಯಾವುದು ಸರಿ, ತಪ್ಪು ಎನ್ನುವ ತೀರ್ಮಾನಕ್ಕೆ ಬರಲಾಗದ ಸ್ಥಿತಿ ಉಂಟಾಗಿದೆ. ಹಾಗಾಗಿ ಎಲ್ಲರೂ ಅವಶ್ಯವಾಗಿ ವ್ರತವೊಂದನ್ನು ಆಚರಿಸಬೇಕು. ಅದುವೇ ಮೊಬೈಲ್‌ ಸನ್ಯಾಸ.

ಸಾಮಾಜಿಕ ಜಾಲತಾಣಗಳು ಮನುಷ್ಯನನ್ನು ಖಿನ್ನತೆಗೆ ದೂಡುತ್ತಿವೆ. ಸಾಮಾಜಿಕ ವಿಷಯಗಳಿಗೆ ಸೀಮಿತವಾಗಬೇಕಿದ್ದ ಈ ಜಾಲತಾಣಗಳು ಖಾಸಗಿ ಬದುಕನ್ನು ಆಕ್ರಮಿಸಿಕೊಂಡು ಹಲವು ವರ್ಷಗಳೇ ಕಳೆದಿವೆ. ಖಾಸಗಿ ಬದುಕಿನ ಒಳತೋಟಿಗಳೆಲ್ಲ ಸ್ಟೇಟಸ್‌ನ ರೂಪ ಪಡೆದುಕೊಂಡಿವೆ. ಇದಕ್ಕೆ ಬೇಕಾದವರು ಸರಿಯಾದ ರೀತಿಯಲ್ಲಿ ಸ್ಪಂದಿಸದೇ ಹೋದಾಗ ಸಹಜವಾಗಿ ಬೇಸರವಾಗುತ್ತದೆ. ಅಷ್ಟಕ್ಕೆ ಮನಸ್ಸು ವ್ಯಗ್ರಗೊಂಡು, ಆ ದಿನದ ಕೆಲಸಗಳು ಅಲ್ಲಿಗೇ ಮೊಟಕುಗೊಳ್ಳುತ್ತವೆ. ಅಲ್ಲಿಗೆ ಒಂದು ದಿನ ವ್ಯರ್ಥ. ಹಾಗಂತ ಮೊಬೈಲ್ ಬಳಸುವುದು ತಪ್ಪು ಎಂದಲ್ಲ.

ತೀರಾ ಅವಶ್ಯಕ ಎನ್ನುವ ವಿಚಾರಗಳಿಗೆ, ತುರ್ತು ವಿಷಯಗಳ ತಿಳಿವಳಿಕೆಗೆ ಮೊಬೈಲ್ ಸಹಾಯಕ. ಆದರೆ, ಅಮೂಲ್ಯ ಗ್ರಂಥ ರಾಶಿಗಳಿರುವಾಗ ಮೊಬೈಲ್ ಏಕೆ ?. ಪುಸ್ತಕ ಓದುವ ಸಂಸ್ಕೃತಿ ಏಕಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ಶೀಘ್ರವೇ ಕಂಡುಕೊಳ್ಳಬೇಕಿದೆ.

ಕೊರೊನಾ ಕಾಲಘಟ್ಟದಲ್ಲಿ ಪರದೆಗಳು ಅನಿವಾರ್ಯವಾಗಿದ್ದವು. ಕೊರೊನಾದಿಂದ ಮುಕ್ತರಾಗಿದ್ದೇವೆ. ಹೀಗಿದ್ದೂ ಪರದೆಗೆ ಅಂಟಿಕೊಳ್ಳುವುದನ್ನು ಬಿಟ್ಟಿಲ್ಲ.

ಈ ಪರದೆ ವ್ಯಸನದಿಂದಲೇ ಸಾಮಾಜಿಕ ಸಂಬಂಧಗಳು ಮೌಲ್ಯ ಕಳೆದುಕೊಂಡಿವೆ. ಒಂದೇ ಕೊಠಡಿಯಲ್ಲಿ ಕುಳಿತರೂ ಆಫೀಸು, ಶಾಲಾ ಕಾಲೇಜು ಸಿಬ್ಬಂದಿಯಲ್ಲಿ ಅನ್ಯೋನ್ಯತೆಯಿಲ್ಲ.

ಮನೆಯಲ್ಲಿ ಎಲ್ಲರೂ ಇದ್ದರೂ ಒಂಟಿ ಬದುಕು. ಬಾಂಧವ್ಯದ ಬೆಸುಗೆ ಬಿಡುತ್ತಿದೆ. ಮಮತೆಯಿಂದ ಅಮ್ಮಾ ಮಾಡಿದ ಅಡುಗೆ ಇಷ್ಟವಿಲ್ಲ ಎಂದು ಜೊಮ್ಯಾಟೊ, ಸ್ವಿಗ್ಗಿಯಲ್ಲಿ ಆರ್ಡರ್ ಹಾಕಿ ತಿನ್ನುವ ಹಾಗಾಗಿದೆ. ಚಿಕ್ಕ ಚಿಕ್ಕ ದೈಹಿಕ ಸಮಸ್ಯೆಗಳು ಮೊಬೈಲ್ ಕಾರಣದಿಂದ ದೊಡ್ಡದು ಎನಿಸುತ್ತಿವೆ. ಹೊಸ ಮನೆಯೊಂದರ ನಿರ್ಮಾಣ ಕಾರ್ಯ ಆಗುವಾಗ ನೀರಿನ ತೊಟ್ಟಿಗೆ ಗುಂಡಿ ತೋಡಲು ಬಂದಿದ್ದ ನಾಲ್ವರ ಸಂಗಡ ಮೂರುವರ್ಷದ ಮಗುವೊಂದು ಬಂದಿತ್ತು. ನಾನು ಆಚೆಯಿಂದ ಬರುವಷ್ಟರಲ್ಲಿ ಮಗು ಬಿದ್ದು ಹೊರಳಾಡುತ್ತಿತ್ತು. ಮೊಬೈಲ್ ಕೊಟ್ಟ ನಂತರ ಸುಮ್ಮನಾಯಿತು.

‘ಸರಿಯಾಗಿ ಮಾತು ಬರಲ್ಲ. ಅಕ್ಷರ ಗೊತ್ತಿಲ್ಲ. ಏನು ನೋಡುತ್ತಾನೆ’ ಎಂದೆ. ‘ರೀಲ್ಸ್ ನೋಡ್ತಾನೆ. ಮೊಬೈಲ್ ಬೇಕು ಅಷ್ಟೆ. ನಮಗೂ ತಲೆಬಿಸಿ ಇಲ್ಲ. ಅಲ್ಲಿ ಇಲ್ಲಿ ಹೋಗುತ್ತಾನೆ ಅನ್ನೋ ಭಯ ಇಲ್ಲ’ ಎನ್ನುವ ಉತ್ತರ ಬಂತು.

ಏನ್ ಹೇಳೋದು ಇದಕ್ಕೆ ‘ಯಥಾ ಪೇರೆಂಟ್ಸ್ ತಥಾ ಚಿಲ್ಡ್ರನ್ಸ್’ ಎನ್ನಬೇಕೇ? ಪೋಷಕರೆ ಮಕ್ಕಳನ್ನು ಮೊಬೈಲ್ ಪರದೆ ವ್ಯಸನಕ್ಕೆ ಅಂಟಿಸಿದ್ದಾರೆ ಎನ್ನಬೇಕೆ? ಇಲ್ಲವೆ ಅವರ ಅನಿವಾರ್ಯತೆ ಎನ್ನಬೇಕೇ?. ಏನೇ ಹೇಳಿ ಈ ಪರದೆಯ ವ್ಯಸನ ಬಹಳ ಕೆಟ್ಟದ್ದು. ನಾಟಕಗಳಲ್ಲಿ ಪ್ರತಿ ದೃಶ್ಯಗಳಿಗೂ ಬೇರೆ ಬೇರೆ ಪರದೆಗಳು ಇರುತ್ತವೆ. ನಾಟಕ ಮುಗಿದ ನಂತರ ಪರದೆಗಳೆ ಇರುವುದಿಲ್ಲ. ಮನೆಗಳು, ಆಫೀಸುಗಳು, ಶಾಲೆಗಳು ಕಡೆಗೆ ವಾಹನಗಳಿಗೂ ಇರುತ್ತವೆ. ಅಲ್ಲಿ ಹಾಕಿದ ಪರದೆಗಳನ್ನು ಸರಿಸಬಹುದು; ತೊಳೆಯಬಹುದು, ಬೇಡವಾದರೆ ಕಿತ್ತು ಎಸೆಯಬಹುದು. ಆದರೆ ಮೊಬೈಲ್ ಪರದೆ ಎನ್ನುವ ಗೀಳನ್ನು ಕಡಿಮೆ ಮಾಡಲಾಗುತ್ತಿಲ್ಲ. ತೆಗೆದು ಎಸೆಯಲಾಗುತ್ತಿಲ್ಲ. ಇಂಥ ವ್ಯಸನದಿಂದ ಆಚೆ ಬರಬೇಕೆಂದರೆ ಮೊಬೈಲ್ ಬಳಸುವವರೆ ಜಾಗೃತರಾಗಬೇಕು. ಪರದೆ ವ್ಯಸನ ಮರೆಯಾಗಲಾರದು ಅದರೆ ಕಡಿಮೆ ಮಾಡಿಕೊಳ್ಳಬಹುದು. ಪರದೆ ವ್ಯಸನದಿಂದ ಹೊರಬರುವ ನಿರ್ಧಾರವನ್ನು ಎಲ್ಲರೂ ಮಾಡೋಣ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.