ADVERTISEMENT

ಸಲಾಂ ಮಾಡ್ತೇವಿ ಭಾವೈಕ್ಯದ ವಾಣೀಗೆ

ನಿಂಗಪ್ಪ ಮುದೇನೂರು
Published 12 ಫೆಬ್ರುವರಿ 2022, 19:30 IST
Last Updated 12 ಫೆಬ್ರುವರಿ 2022, 19:30 IST
ಭಾವೈಕ್ಯತೆಯ ತೊಟ್ಟಿಲು ವಿಜಯಪುರ–ಕಲಬುರಗಿ ಸೀಮೆ. ಮತಭೇದ, ಘರ್ಷಣೆ, ಜಾತಿಯ ವಿಷದ ಗಾಳಿ ಸುಡದ ಹಾಗೆ ಇಲ್ಲಿನ ನದಿಗಳು ಈ ನೆಲವನ್ನು ತಣ್ಣಗಿಟ್ಟಿರುವ ಪ್ರತೀಕವಾಗಿ ಈ ಅಜ್ಜಂದಿರು ಗೋಚರಿಸುತ್ತಾರೆ  –ಚಿತ್ರ: ತಾಜುದ್ದೀನ್‌ ಆಜಾದ್‌
ಭಾವೈಕ್ಯತೆಯ ತೊಟ್ಟಿಲು ವಿಜಯಪುರ–ಕಲಬುರಗಿ ಸೀಮೆ. ಮತಭೇದ, ಘರ್ಷಣೆ, ಜಾತಿಯ ವಿಷದ ಗಾಳಿ ಸುಡದ ಹಾಗೆ ಇಲ್ಲಿನ ನದಿಗಳು ಈ ನೆಲವನ್ನು ತಣ್ಣಗಿಟ್ಟಿರುವ ಪ್ರತೀಕವಾಗಿ ಈ ಅಜ್ಜಂದಿರು ಗೋಚರಿಸುತ್ತಾರೆ  –ಚಿತ್ರ: ತಾಜುದ್ದೀನ್‌ ಆಜಾದ್‌   

‘ಹಳ್ಳಿಗಳು ಭಾರತದ ಆತ್ಮ, ಭಾರತದ ಭವಿಷ್ಯ ಹಳ್ಳಿಗಳಲ್ಲಿ ಅಡಗಿದೆ’ ಎಂದು ಹೇಳಿದ ಗಾಂಧೀಜಿಯವರ ಮಾತು ಮಹಾಲಿಂಗಪುರವೆಂಬ ದೇವರ ಹೆಸರಿನ ನಾಡಿಗೆ ಹೆಚ್ಚು ಅನ್ವಯಿಸುತ್ತದೆ. ಅದಕ್ಕೆ ತಕ್ಕಂತೆ ಇಲ್ಲಿ ಸಾಮರಸ್ಯವೊಂದು ತಲೆತಲಾಂತರಗಳಿಂದ ಹಬ್ಬಿ ನಿಂತಿದೆ. ಈ ಊರಿನ ಸಾರ್ಥಕ ಬದುಕಿನ ಕುರಿತು, ಹಸನಾದ ಏಕತೆಯ ಬಾಳಿನ ಕುರಿತು ಆಧುನಿಕ ಸಂತರು ಹಾಡಿದ್ದನ್ನೇ, ನುಡಿದಿದ್ದನ್ನೇ ಕವಿಯೊಬ್ಬರು ಪದ್ಯದ ಸಾಲುಗಳಲ್ಲಿ ಹೇಳಿದ್ಹಿಂಗೆ

‘ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲ ಒಂದೇ ಎಂದು

ಇಬ್ರಾಹಿಂ ಸುತಾರ ಸಾರುವರಿಲ್ಲಿ ಹೀಗೆಂದು

ADVERTISEMENT

ಇಲ್ಲ ಇಲ್ಲಿ ಯಾತ್ಯಾತಕೂ ಕಮ್ಮಿ

ನೀವೂ ಇಲ್ಲಿಗೆ ಬಂದು ಹೋಗಿರೊಮ್ಮಿ’

ಅಲ್ಲಿಗೆ ನಾವು ಹೋಗಲಿ, ಹೋಗದೇ ಇರಲಿ ಭಾವೈಕ್ಯದ ಬೆಳೆ ಕಣ್ಣಿಗಿಂತ ಮನಸ್ಸಿಗೆ, ಹೃದಯಕ್ಕೆ ಕಾಣುವಂತಹದ್ದು. ಭಾವೈಕ್ಯತೆಯಲ್ಲಿ ಮಹಾಲಿಂಗಪುರದ ಬಗ್ಗೆ ಹೇಳುವುದೇನಿದೆ? ಹಾಗೆಯೇ ಅಲ್ಲಿ ಹರಿಯುವ ಜೀವನದಿ ಘಟಪ್ರಭದ ಬಗೆಗೆ ಹೇಳುವುದೇನಿದೆ? ಜನತೆಯ ತುಂಬು ದುಡಿಮೆ, ಜೀವನ ವಿಧಾನವೇ ಎಲ್ಲ ಕಥೆ ಹೇಳುತ್ತದೆ. ಹಿಂದೂಗಳಿರಲಿ, ಮುಸ್ಲಿಮರಿರಲಿ ಯಾವುದೇ ಮತಭೇದ, ಘರ್ಷಣೆ, ಜಾತಿಯ ವಿಷದ ಗಾಳಿ ಸುಡದ ಹಾಗೆ ತಾಯಿ ಘಟಪ್ರಭೆ ಅವರನ್ನು ತಣ್ಣಗಿಟ್ಟಿರುವಳು.

ನಲವತ್ತು ಹಿನ್ನಾಡು ಹಳ್ಳಿಗಳುಳ್ಳ ಊರು ಮಹಾಲಿಂಗಪುರ ಒಂದು ಪುಟ್ಟ ಭಾರತದಂತೆಯೇ ಇದೆ. ವೈವಿಧ್ಯಮಯ ಬದುಕಿನ ಜೊತೆ ಕಬ್ಬು, ಗೋಧಿ, ಮುಸುಕಿನ ಜೋಳ, ಹತ್ತಿ, ಸದಕ, ಸೋಯ ಮತ್ತು ಸೂರ್ಯಕಾಂತಿಯ ಬೆಳೆಗಳಿಂದಾಗಿ ಅವಿಭಕ್ತ ಕುಟುಂಬಗಳು ಇಲ್ಲಿ ಮಣ್ಣು ನೆಚ್ಚಿಕೊಂಡು ಬದುಕಿವೆ. ಹೊಸ ಕಾಲಕ್ಕೆ ಹೊಂದಿಕೊಂಡು ಮೂಲ ಕೂಡಿಕಟ್ಟುವ ದಾರಿ ಬಿಡದೆ ಎಲ್ಲರೂ, ಎಲ್ಲ ಧರ್ಮ ಗುರುಗಳೂ ಪ್ರಜಾಪ್ರಭುತ್ವದ ಬದುಕನ್ನು ಬದುಕುತ್ತಿರುವುದು ಈ ನೆಲದ ಅನನ್ಯ ಗುಣ. ಮಹಾಲಿಂಗೇಶ್ವರ ಲಕ್ಷ ದೀಪೋತ್ಸವ ನಡೆದಾಗ ಇಡೀ ಊರು ಒಂದು ಗುಣಗ್ರಾಹಿ ಭಾರತವಾಗಿದ್ದರ ಸಾಂಸ್ಕೃತಿಕ ಸಂಗತಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟವರು ಕವಿ, ಪ್ರಾಧ್ಯಾಪಕ ಡಾ. ಅಶೋಕ ನರೋಡೆ.

ಆದಿದೈವ ಮಹಾಲಿಂಗೇಶ್ವರ ಮಠ, ಮಹಾಲಿಂಗೇಶ್ವರ ಮಂದಿರ, ಚೆನ್ನಗಿರೀಶ್ವರ ದೇವಾಲಯ, ಬಸವ ತೀರ್ಥ, ಶರಣ ಸಿದ್ಧಾಯಿಯ ಗುಡಿ, ನಾಲ್ಕು ಮಹಾದ್ವಾರಗಳು, ಹೂ ಬನದ ನಿರ್ಮಾಣ ಇವೆಲ್ಲವೂ ಮಹಾಲಿಂಗಪುರವನ್ನು ಹಚ್ಚಹಸಿರಾಗಿಟ್ಟಿವೆ. ಊರ ದೈವ ಮಹಾಲಿಂಗೇಶ್ವರನ ವಾರದ ದಿನವಾದ ಸೋಮವಾರ ಹಿಂದೂಗಳಂತೆ ಮುಸ್ಲಿಮರೂ ಇಲ್ಲಿ ಸೋಮವಾರದ ವ್ರತ ಪಾಲಿಸುತ್ತಾರೆ. ಅಂದು ಮುಸ್ಲಿಮರ ಮನೆಗಳಲ್ಲಿ ಮಾಂಸದ ಅಡುಗೆ ಇರುವುದಿಲ್ಲ. ಮಾರುಕಟ್ಟೆಯಲ್ಲೂ ಮಾಂಸದ ಅಂಗಡಿಗಳೂ ತೆರೆದಿರುವುದಿಲ್ಲ. ಇದು ಅವರೇ ಮನದ ಭಾವೈಕ್ಯತೆಯಲ್ಲಿ ಮೂಡಿಸಿಕೊಂಡಿರುವ ಜೀವನ ಪ್ರೇಮ.

ಮುಸ್ಲಿಮರಿಗೆ ಇಲ್ಲಿನ ಹಿಂದೂ ಜನ ಮಸೀದಿ, ದರ್ಗಾ ಕಟ್ಟಿಸಿಕೊಡುವುದು, ಹಿಂದೂ ಮಂದಿರಗಳನ್ನು ಮುಸ್ಲಿಮರು ಕಟ್ಟುವುದು – ಇದು ಇಲ್ಲಿನ ವಾಸ್ತವ ಬದುಕಿನ ಕನ್ನಡಿ. ಬರೀ ಭೌತಿಕ ಜಗತ್ತಿನ ಮಾತೇಕೆ, ಇಲ್ಲಿಯೇ ಹುಟ್ಟಿ ಬೆಳೆದ ಆಧುನಿಕ ಕಬೀರ, ನಮ್ಮ ನಡುವೆ ಸಂದುಹೋದ ಸಂತ ಇಬ್ರಾಹಿಂ ಸುತಾರರವರು ಮುಸ್ಲಿಂ ಧರ್ಮದಲ್ಲಿ ಹುಟ್ಟಿದರೂ ಅವರು ಅಳವಡಿಸಿಕೊಂಡ ತತ್ವಗಳು ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು. ಹಿಂದೂ ಶಾಸ್ತ್ರ ಪುರಾಣಗಳ ಸಾರವನ್ನು ಮೈಗೂಡಿಸಿಕೊಂಡು ಜಗತ್ತಿನ ದರ್ಶನಗಳನ್ನು ಅದರಲ್ಲೂ ಕುರಾನ್, ಬೈಬಲ್, ಭಗವದ್ಗೀತೆಯ ನುಡಿ ತತ್ವಗಳನ್ನು ಅವರು ಸಾರಿ ನಿಂತ ಚರಿತ್ರೆ ಈ ನೆಲಕ್ಕೆ ಇದೆ.

ಅಧ್ಯಾತ್ಮದ ಒಡಲೊಂದು ಮಧುರಚೆನ್ನರ ಹಾಡಿನಂತೆ ಇಲ್ಲಿಯೂ ತುಂಬಿ ನಿಂತಿದೆ. ‘ಪ್ರೀತಿಯಂಥ ವಸ್ತು ಭವದಲ್ಲಿ ಕಾಣೆ, ಮನಗಂಡ ಮಾತು’ ಕುರಿತು ಹೇಳುವಾಗ ಅವರ ಬುದ್ಧಿಯಾಚೆಗಿನ ಸಹಬಾಳ್ವೆಯ ತಂತಿಯನ್ನು ನುಡಿಸುವ ಪ್ರಯತ್ನವನ್ನು ಈ ನಾಡು ಕಂಡಿದೆ. ಸಾಧು ನಿರಂಜನಾವಧೂತ ಪರಂಪರೆಯ ಬೇರುಳ್ಳ ಕಥನಗಳು ಇಲ್ಲಿನ ತತ್ವ ವಿಚಾರಗಳಾಗಿ ಹೊರಹೊಮ್ಮಿವೆ. ಇಲ್ಲಿಯೂ ಮಹಾಲಿಂಗಪುರವನ್ನು ಧರ್ಮ ಸಮನ್ವಯದ ನಾಡೆಂದೇ ಗುರುತಿಸಲಾಗಿದೆ. ಅದಕ್ಕೆ ಕಾರಣವೂ ಇದೆ.

ಬಸವಾನಂದರ ಪುಣ್ಯರಾಧನಾ ಮಹೋತ್ಸವದಲ್ಲಿ ಮುಸ್ಲಿಂ ಬಾಂಧವರು ಶ್ರದ್ಧೆಯಿಂದ ಪಾಲ್ಗೊಳ್ಳುವರು. ‘ಮೊಹರಂ’ನಲ್ಲಿ ಅಲೈದೇವರು ಕೊನೆಗೆ ಸಾಯುವ ಆಚರಣೆ ಬಸವತೀರ್ಥದಲ್ಲಿ ಜರುಗುವುದು. ಇದು ಧರ್ಮದ ಒಲುಮೆಗೆ ಸಾಕ್ಷಿ. ದೇಶದಲ್ಲಿ ಹಿಂದೂ-ಮುಸ್ಲಿಂ ಆತಂಕದ ವಾತಾವರಣ ನಿರ್ಮಾಣವಾದಾಗಲೂ, ರಾಮ ಜನ್ಮಭೂಮಿ, ಬಾಬ್ರಿ ಮಸೀದಿಗಳ ಧಾರ್ಮಿಕ ರಾಜಕಾರಣ ಶುರುವಾದಾಗಲೂ ಇಲ್ಲಿನ ಹಿಂದೂ–ಮುಸ್ಲಿಂ ಜನತೆ ಪರಸ್ಪರ ಸಹೋದರರಂತೆ, ಕುಟುಂಬದ ಐಕ್ಯತೆ ತೋರಿದ್ದು ಸಹಬಾಳ್ವೆಯ ಪ್ರತೀಕ. ಯಾಕೆಂದರೆ ಹಳ್ಳಿಗಳಾಗಲಿ, ನಗರ ಪ್ರದೇಶಗಳಾಗಲಿ ಅವು ಸೌಹಾರ್ದತೆಯಿಂದ ಬದುಕಿದರೇನೇ ಅವುಗಳಿಗೆ ಜೀವನ ಸೌಂದರ್ಯ ಒದಗುವುದು. ಮಹಾಲಿಂಗಪುರದ ಸಿದ್ಧಾರೂಢರ ಮಠದಲ್ಲಿ ಜರುಗುವ ಗುತ್ತಿ ಪೂಜೆಯಲ್ಲಿ ಮುಸ್ಲಿಂ ಬಾಂಧವರೂ ಭಾಗವಹಿಸಿ ಪೂಜೆ ಸಲ್ಲಿಸುವರು. ಸ್ವತಃ ಮಹಾಲಿಂಗೇಶ್ವರ ಮಠದ ಟ್ರಸ್ಟಿನಲ್ಲಿ ಹುಸೇನಸಾಬ್‌ ಕಲಾಲ, ರಸೂಲಸಾಬ್‌ ಎಕ್ಸಂಬಿ, ಕಾಸೀಮಸಾಬ್‌ ಯಾದವಾಡ ಇದ್ದ ಸಮನ್ವಯವು ನಮಗೆ ತೋರಿ ಬರುವುದು.

ನೀಲಕಂಠೇಶ್ವರ ಮಠದ ನಿಜಗುಣ ಶಿವಯೋಗಿಗಳ ಜಯಂತಿ ಉತ್ಸವದಂದು ನಡೆಯುವ ಸಾಮೂಹಿಕ ವಿವಾಹದಲ್ಲಿ ಎಲ್ಲ ಮತಧರ್ಮಗಳ ವಧುವರರು ಕೂಡಿ ಇಲ್ಲಿ ಹೊಸಬಾಳು ಕಟ್ಟಿಕೊಳ್ಳುವ ಪ್ರತಿಜ್ಞೆ ಮಾಡುವರು. ನಾವು ಒಂದೇ ಎಂಬುವ ಬೀಜವೊಂದು ಮನದಲ್ಲಿ ಮೊಳೆಯಲು ಇಂಥ ಸಂಗತಿಗಳು ನಾಂದಿ ಹಾಡುತ್ತವೆ. ಹೇಳುತ್ತಾ ಹೋದಂತೆ ತೂಗುತ್ತಾ ಹೋಗುವ ಭಾವೈಕ್ಯತೆಯ ತೊಟ್ಟಿಲುಗಳು ಇಲ್ಲೆಲ್ಲಾ ಇವೆ.

ಕೃಷಿ ಮತ್ತು ನೇಕಾರಿಕೆಯನ್ನೇ ವೃತ್ತಿ ಮಾಡಿಕೊಂಡ ಇಲ್ಲಿನ ಜನತೆ ಗುರು ಮಹಾಲಿಂಗ ಯೋಗಿಗಳನ್ನು ಬಲ್ಲವರು. ಮಹಾಲಿಂಗಪುರವನ್ನು ನಿರ್ಮಿಸಿದರು ಎಂಬುವ ಪ್ರತೀತಿಯೊಂದಿಗೆ ಈ ಊರಿನ ಕಲೆ, ಸಾಹಿತ್ಯ, ಅಧ್ಯಾತ್ಮ, ಶಿಕ್ಷಣ, ಸಾಮಾಜಿಕ ಬದುಕು ಹುರಿಗೊಳ್ಳುತ್ತಾ ಸಾಗುತ್ತದೆ. ರನ್ನನ ಗದಾಯುದ್ಧ ಬೆಳೆದ, ಘಟಪ್ರಭೆ ತುಂಬಿ ಹರಿದ ನಾಡ ಮಣ್ಣಿದು. ವಿಜಯಪುರ, ಬಾಗಲಕೋಟೆಯ ಜನಸಂಸ್ಕೃತಿಯ ವಾತಾವರಣವೂ ಇದಕ್ಕೆ ಹೇಳಿ ಮಾಡಿಸಿದಂತಿದೆ. ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಸಂಸ್ಥಾನದ ಆಡಳಿತಕ್ಕೆ ಒಳಪಟ್ಟಿದ್ದ ಇಲ್ಲಿನ ಪ್ರದೇಶಗಳು ರಾಜ ಪ್ರಭುತ್ವದ ಅನುಭವಗಳನ್ನು ಪಡೆದರೂ ಸರ್ವಧರ್ಮದ ಸಾಮರಸ್ಯವೊಂದು ಇಲ್ಲೆಲ್ಲಾ ಹರಡಿ ನಿಂತಿದೆ.

ಹಾಗೆ ನೋಡಿದರೆ ಬೆಲ್ಲದ ಸಿಹಿ ಸೊಬಗಿನ ಮಾರುಕಟ್ಟೆ ಮಹಾಲಿಂಗಪುರದ ಬದುಕನ್ನು ಹಸನಾಗಿಸುತ್ತಲೇ ಬಂದಿದೆ.

ಕರಡಿ ವಾದ್ಯ ನುಡಿಸುವ ನೇಕಾರರು, ಶಹನಾಯ್ ನುಡಿಸುವ ಭಜಂತ್ರಿಗಳು, ಖಣಿ ನುಡಿಸುವ ದಲಿತರು, ರಥ ಸೇವೆ ಮಾಡುವ ಪಾತ್ರೋಟದವರು, ಬಂಡಿ ವಡ್ಡರು, ಪಲ್ಲಕ್ಕಿ ಸೇವೆ ಮಾಡುವ ಲಿಂಗಾಯತರು, ಪ್ರಸಾದ ಸೇವೆ ಮಾಡುವ ವೀರಶೈವರು, ಅಭಿಷೇಕದ ಜಂಗಮರು, ಹೂವಿನ ಅಲಂಕಾರ ಮಾಡುವ ಹೂಗಾರರು, ಮಠದಲ್ಲಿ ಜಾತ್ರೆ, ಜಟೋತ್ಸವಗಳು ನಡೆದರೆ ಆ ಸುದ್ದಿ ಮುಟ್ಟಿಸುವ ಮಾಲದಾರ ಮನೆತನದ ಮುಸ್ಲಿಂ ಬಾಂಧವರಾದಿಯಾಗಿ ಎಲ್ಲರೂ ಬಾಳು ಕಟ್ಟಿಕೊಂಡು ಬದುಕಿದ್ದು ಮಹಾಲಿಂಗೇಶ್ವರರ ಸನ್ನಿಧಾನದಲ್ಲಿ.

ಕರಡಿ ವಾದ್ಯ ನುಡಿಸುವ ನೇಕಾರರು, ಶಹನಾಯ್ ನುಡಿಸುವ ಭಜಂತ್ರಿಗಳು, ಖಣಿ ನುಡಿಸುವ ದಲಿತರು, ರಥ ಸೇವೆ ಮಾಡುವ ಪಾತ್ರೋಟದವರು, ಬಂಡಿ ವಡ್ಡರು, ಪಲ್ಲಕ್ಕಿ ಸೇವೆ ಮಾಡುವ ಲಿಂಗಾಯತರು, ಪ್ರಸಾದ ಸೇವೆ ಮಾಡುವ ವೀರಶೈವರು, ಅಭಿಷೇಕದ ಜಂಗಮರು, ಹೂವಿನ ಅಲಂಕಾರ ಮಾಡುವ ಹೂಗಾರರು, ಮಠದಲ್ಲಿ ಜಾತ್ರೆ, ಜಟೋತ್ಸವಗಳು ನಡೆದರೆ ಆ ಸುದ್ದಿ ಮುಟ್ಟಿಸುವ ಮಾಲದಾರ ಮನೆತನದ ಮುಸ್ಲಿಂ ಬಾಂಧವರಾದಿಯಾಗಿ ಎಲ್ಲರೂ ಬಾಳು ಕಟ್ಟಿಕೊಂಡು ಬದುಕಿದ್ದು ಮಹಾಲಿಂಗೇಶ್ವರರ ಸನ್ನಿಧಾನದಲ್ಲಿ. ಇಂತಹ ವಾತಾವರಣ ಇರುವುದರಿಂದಲೇ ನಮ್ಮ ಹಳ್ಳಿಗಳಲ್ಲಿ ಭಾವೈಕ್ಯತೆಯ ಬೇರು ಗಟ್ಟಿಯಾಗಿ ಉಳಿಯಲು ಸಾಧ್ಯವಾಗಿದೆ.

ಮಹಾಲಿಂಗಪುರದಲ್ಲಿ ಹಿಂದೂ ಮುಸ್ಲಿಂರು ಕೂಡಿ ಆಚರಿಸುವ ಹಬ್ಬವೆಂದರೆ ಮೊಹರಂ. ನಾನು ಸಣ್ಣವನಿರುವಾಗ, ಬೆಳೆದು ದೊಡ್ಡವನಾಗಿ ಪದವಿ ಹಂತಕ್ಕೆ ಬಂದಾಗಲೂ ಮೊಹರಂನಲ್ಲಿ ‘ಫಕೀರ’ನಾಗುತ್ತಿದ್ದೆ. ಕೈಯಲ್ಲಿ, ಕೊರಳಲ್ಲಿ ಕೆಂಪು ಲಾಡಿ ಕಟ್ಟಿಕೊಂಡು ಹಸನ್ ಹುಸೇನರನ್ನು ಸ್ಮರಿಸುತ್ತಾ ಅವ್ವ ಕೊಟ್ಟ ಜೋಳಿಗೆ ಹಿಡಿದು ಊರ ಮನೆಗೆಲ್ಲಾ ಹೋಗಿ ‘ಇಮಾಮಲೋ ಯಾಮೊಮ್ದೀನ್’ ಎಂದರೆ ಮನೆಯೊಳಗಿನ ತಾಯಂದಿರು ಜೋಳಿಗೆಯಲ್ಲಿ ಕಾಳು ಹಾಕಿ ಕಳಿಸುತ್ತಿದ್ದರು. ಊರಾಡಿ ಬಂದರೆ ಅವ್ವನೇ ಊದಿನ ಕಡ್ಡಿ ಹಚ್ಚಿಕೊಂಡು ಬಂದು ಹೊರಗೆ ನಿಂತ ನನಗೆ ನಮಸ್ಕರಿಸಿ ಒಳಗೆ ಕರೆದುಕೊಂಡು ಹೋಗುತ್ತಿದ್ದಳು.

ನಮಗೆ ಬಯ್ಯದೇ ಹೊಡೆಯದೇ ಕಸಬರಿಗೆಯನ್ನೂ ಮುಟ್ಟಿಸಕೊಡದೇ ಇರುವ ದಿನಗಳವು. ಆಗ ಕೂಡಿಟ್ಟ ಕಾಳುಗಳನ್ನೆಲ್ಲಾ ಒಂದು ಅಂಗಡಿಗೆ ಹಾಕಿ ದೇವರ ಹೆಸರಿನಲ್ಲಿ ಉಪ್ಪು, ಸಕ್ಕರೆ, ಎಣ್ಣಿ ಬತ್ತಿ ತಂದು, ಉಪ್ಪನ್ನು ಅಲೆ ಕುಣಿಗೆ ಹಾಕಿ, ದೇವರಿಗೆ ಸಕ್ಕರೆ ಓದಿಸಿ, ಆಶೀರ್ವಾದ ಪಡೆದುಕೊಂಡು ಬರುತ್ತಿದ್ದೆವು. ಡೋಲಿಗೆ ಹೆಗಲು ಕೊಡುವ ಹಸನ್ ಹುಸೇನರ ಪಂಜಾ ಹಿಡಿದು ಹೋಗುವ, ಚಾವಂಗಿ (ಚೌಂಗೆ), ಮಾದಲಿ ಸವೆಯುವ ಆ ಮೊಹರಂನ ಮಧುರ ದಿನಗಳು ಇನ್ನೂ ಮಾಸಿಲ್ಲ. ಆ ಮೊಹರಂ ಪದಗಳೆಂದರೆ ನಮ್ಮ ಬಾಳಿನ ಸುಖ ದುಃಖದ ಪದಗಳೇ ಆಗಿದ್ದವು.

ಅಂತಹ ಭಾವೈಕ್ಯತೆಯ ವಿಶಿಷ್ಟ ಆಚರಣೆ ಮಹಾಲಿಂಗಪುರದ ಮೊಹರಂನಲ್ಲಿಯೂ ಇದೆ. ನಾಲ್ಕು ದಿಕ್ಕಿನಲ್ಲಿರುವ ‘ತಾಬೂತ’ಗಳು (ಡೋಲಿ) ಮಹಾಲಿಂಗೇಶ್ವರ ಮಠದವರೆಗೆ ರಥಗಳಂತೆ ಬರುವ ಈ ಸಮಾನಾಂತರ ದೃಶ್ಯ ಎಷ್ಟೊಂದು ಮನೋಹರ. ಮಠದ ಪೀಠಾಧಿಪತಿಗಳು ಆಗಮಿಸಿ ಡೋಲಿಗಳ ಸ್ವಾಗತಿಸಿ ಊದ್ ಹಾಕಿ ಮಂತ್ರ ಪಠಿಸಿ ಬೀಳ್ಕೊಡುವ ಈ ಪರಂಪರೆ ಭಾವಪೂರ್ಣವೂ ಸಾಮರಸ್ಯವೂ ಆಗಿ ನಿಂತಿದೆ. ಚವಂಗಿ, ಸಕ್ಕರೆ, ಪಾನಕ ನೀಡುವ ಈ ಹಬ್ಬವನ್ನು ಮನುಜರಾದ ನಾವು ಮರೆಯಲಾದೀತೆ?

ಇನ್ನೊಂದು ವಿಶೇಷವೆಂದರೆ ಇಬ್ರಾಹಿಂ ಸುತಾರರವರೇ ನೆನಪಿಸುವಂತೆ ‘ಚಿಮ್ಮಡ’ ಓಣಿಯ ಮಸೀದಿಯ ನಿರ್ಮಾಣಕ್ಕೆ ನೀಲಕಂಠ ಮಠದ ಶಂಕರ ಶಿವಾಚಾರ್ಯ ಸ್ವಾಮೀಜಿ ಶಂಕುಸ್ಥಾಪನೆ ಮಾಡಿದ್ದು, ಬನಶಂಕರಿ ದೇವಸ್ಥಾನದಲ್ಲಿ ನಡೆದ ಇಫ್ತಾರಕೂಟ ಎಲ್ಲವೂ ಭಾವೈಕ್ಯದ ಕಥೆ ಹೇಳುವುದು. ರಮ್ಜಾನ್‌ ತಿಂಗಳ ಈ ಶ್ರದ್ಧೆಯ ಇಫ್ತಾರಕೂಟವನ್ನು ಗ್ರಾಮದ ಹಿರಿಯರಾದ ಸಿದಗಿರೆಪ್ಪಣ್ಣ ಬೆಳಗಲಿಯವರು ಏರ್ಪಡಿಸಿದ್ದು, ದೇವಸ್ಥಾನದ ಕಲ್ಯಾಣ ಮಂಟಪದಲ್ಲಿಯೇ ನಮಾಜ ಮಾಡಿದ್ದು ಒಂದು ಪರಂಪರೆಯ ಭಾಗವಾಗಿದೆ.

ಯಾವುದೇ ಒಳಿತಿನ ಪಥ ಸಂಚಲನಗಳು ನಡೆಯಲಿ ಅವು ದರ್ಗಾದ ಬಳಿಗೆ ಬಂದಾಗ ಗುಲಾಬಿ ಪುಷ್ಪಗಳನ್ನು ಅರ್ಚಿಸುವುದು ಒಂದು ರೂಢಿ. ಧಾರ್ಮಿಕ ಪಂಡಿತರ ‘ದುವಾ’ (ಪ್ರಾರ್ಥನೆ) ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಮಹಾಲಿಂಗೇಶ್ವರ ಮಠದ ಸ್ವಾಮಿಗಳನ್ನು ಬರಮಾಡಿಕೊಂಡು ಅವರಿಗೆ ಗೌರವಿಸಿ ಪ್ರೀತಿ ತೋರುವುದು ಈ ನೆಲದ ಸಾಮರಸ್ಯದ ದ್ಯೋತಕ. ನವರಾತ್ರಿ ದೇವಿ ಉತ್ಸವ ಬಂತೆಂದರೆ ಬನಶಂಕರಿ ದೇವಿ ದೇವಸ್ಥಾನದವರೆಗೆ ಸಾಗುವ ಈ ಮೆರವಣಿಗೆ ವೈಭವಕ್ಕೆ ಮುಸ್ಲಿಂ ಬಾಂಧವರು ಸಾಕ್ಷಿಯಾಗುತ್ತಾರೆ. ಬೆಳ್ಳಿ ದೇವಿ ಮೂರ್ತಿಗೆ ಇವರು ಮಾಲಾರ್ಪಣೆ ಮಾಡಿ ತಮ್ಮ ಹಿಂದೂ ದೈವಭಕ್ತಿ ಮೆರೆಯುತ್ತಾರೆ. ಅನ್ನ, ಆರೋಗ್ಯ, ಯೋಗ, ಶಿಕ್ಷಣ, ವನಮಹೋತ್ಸವದಂಥ ಅಭಿಯಾನಗಳನ್ನು ನಡೆಸುವ ಸಿದ್ಧಗಂಗಾ ಶ್ರೀಗಳ ಜನಹಿತ ಟ್ರಸ್ಟ್ ಇಲ್ಲಿದೆ. ನಾಡನ್ನು ಸುಭಿಕ್ಷೆಯಾಗಿಟ್ಟುಕೊಳ್ಳಲು ಈ ಕಾರ್ಯಗಳು ಸಹಕಾರಿ.

‘ನಡೆದಷ್ಟು ನಾಡು ಪಡೆದಷ್ಟು ಭಾಗ್ಯ’ವೆಂಬಂತೆ ಇಲ್ಲಿ ಹಲವಾರು ದೈವಿಕ ಪಾದಯಾತ್ರೆಗಳಿವೆ. ಢಪಳಾಪುರ ಪಾದಯಾತ್ರೆ, ಪಂಢರಪುರ ದಿಂಡಿ ಪಾದಯಾತ್ರೆಯಿಂದ ಹಿಡಿದು ಹಜ್ ಯಾತ್ರೆಯವರೆಗೂ ಹಲವು ಕಥನಗಳು ಇಲ್ಲಿ ಬಿಚ್ಚಿಕೊಳ್ಳುತ್ತವೆ. ಹಾಗೆ ನೋಡಿದರೆ ನಮ್ಮ
ಕರ್ನಾಟಕದಲ್ಲಿ ನಡೆಯುವ ಬಹುದೊಡ್ಡ ಜಾತ್ರೆಗಳೆಲ್ಲ ಬಹುದೊಡ್ಡ ಪಾದಯಾತ್ರೆಗಳಂತೆಯೇ ಇವೆ. ನಾವು ಮೈಲಾರಕ್ಕೊ, ಕೊಟ್ಟೂರಿಗೊ,ನಾಯಕನಹಟ್ಟಿಗೊ ಹೋದಂತೆ ಜನ ಇಲ್ಲಿ ಮಹಾಲಿಂಗೇಶ್ವರನ ಜಾತ್ರೆಗೆ ಬರುತ್ತಾರೆ. ಮಹಾಲಿಂಗಪುರ, ಬನಹಟ್ಟಿ, ರಬಕವಿ, ಮುಧೋಳ ಇಲ್ಲೆಲ್ಲಾ ಹಲವು ಸಿದ್ಧ ಪರಂಪರೆಗಳ ಕೂಡು ದಾರಿಗಳಿವೆ. ಶರಣರು ಓಡಾಡಿದ ಕಲ್ಯಾಣಕ್ಕಿಂತ ಭಿನ್ನವಾದ ಸೂಫಿ, ಸಂತ, ಶರಣರ ಹಿಂದೂ–ಮುಸ್ಲಿಂ ಭಾವೈಕ್ಯತೆಯ ಕಲ್ಯಾಣವೊಂದು ಇಲ್ಲಿ ಸೃಷ್ಟಿಗೊಂಡು ನಿಂತಿದೆ.

ಬದುಕನ್ನು ವೈವಿಧ್ಯಮಯಗೊಳಿಸಿರುವ ನೂರಾರು ಸಂಗತಿಗಳು ಇಲ್ಲಿವೆ. ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಎಲ್ಲಾ ಮಗ್ಗಲುಗಳನ್ನು ಹಾದು ಬಂದಿರುವ ಈ ನೆಲ ‘ಸರ್ವ ಜನಾಂಗದ ಶಾಂತಿಯ ತೋಟ’ದಂತೆ ಈಗಲೂ ಕಂಗೊಳಿಸುತ್ತಿದೆ. ನೂರಾರು ಸಂತರ ಹೆಜ್ಜೆ ಗುರುತುಗಳ ಜೊತೆ ಮಹಾಲಿಂಗಪುರ ಇಂದು ಅಭಿವೃದ್ಧಿಯ ಪಥದತ್ತ ಸಾಗುತ್ತಿದ್ದರೂ ಮಾರುಕಟ್ಟೆ, ಶಿಕ್ಷಣ, ಔದ್ಯೋಗಿಕತೆಗೆ ತನ್ನನ್ನು ತಾನು ತೆರೆದುಕೊಂಡರೂ ಅದು ತನ್ನ ಹೃದಯ ವೈಶಾಲ್ಯವನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಸಾಂವಿಧಾನಿಕ ಆಶಯಗಳಂತೆ ಬದುಕುವ, ಸಂಸ್ಕೃತಿ, ಧರ್ಮ ಸಮನ್ವಯವನ್ನು ಒಳಗೊಂಡಿರುವ ವಿಶಿಷ್ಟ ಮಾನವ ಸಂಬಂಧದ ಸರಪಳಿಯ ಸೂತ್ರವನ್ನು ಗಟ್ಟಿಯಾಗಿಯೇ ಹೆಣೆದುಕೊಂಡು ನಿಂತಿದೆ. ಇದೇ ಇದರ ಜೀವನ ಸೌಂದರ್ಯದ ಗುಟ್ಟು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.