ಕನ್ನಡದ ಕಬೀರ ಎಂದೇ ಖ್ಯಾತರಾದ ಇಬ್ರಾಹಿಂ ಸುತಾರ ಅವರು ಮೊನ್ನೆ ಮಾತಿಗೆ ಸಿಕ್ಕರು. ನಾಡಿನ ಕೋಮು ಸಾಮರಸ್ಯ ಪರಂಪರೆಗೆ ಕನ್ನಡಿ ಹಿಡಿದರು. ಸಾಮರಸ್ಯದ ಎಳೆಗಳು ಈಗ ತುಂಡರಿಸಿ ಹೊರಟಿರುವುದಕ್ಕೆ ಮರುಗಿದರು. ಧರ್ಮದ ಬಾವುಟ ಹಿಡಿದು ಹೊರಟವರ ಕಿವಿಯನ್ನೂ ಹಿಂಡಿದರು...
‘ನೀವು ಒಂದು ಶಾಲೆಗೆ ಹೋಗ್ತೀರಿ. ಅಲ್ಲಿನ ಮಕ್ಕಳಿಗೆ ಯಾವ ಧರ್ಮ ಶ್ರೇಷ್ಠ ಎಂದು ಕೇಳಿ. ಮಕ್ಕಳು ತಮಗೆ ತಿಳಿದ ಏನೇನೋ ಉತ್ತರ ನೀಡುತ್ತಾರೆ. ಆದರೆ ನೀವು ಮಾತ್ರ ‘ಮಾನವ ಧರ್ಮವೇ ಶ್ರೇಷ್ಠ’ ಎಂದು ಹೇಳಬೇಕು. ಮಕ್ಕಳಿಗೆ ನೀವು ಯಾರು ಅಂತ ಕೇಳಿ. ಅವರ ಉತ್ತರ ಏನಾದರೂ ಇರಲಿ. ನೀವು ಮಾತ್ರ ‘ನಾವು ಭಾರತೀಯರು, ನಾವು ಕನ್ನಡಿಗರು’ ಅಂತಲೇ ಹೇಳಿಕೊಡಿ. ನಮ್ಮ ರಾಷ್ಟ್ರಧರ್ಮ ಯಾವುದು ಎಂದು ಕೇಳಿದರೆ ಭಾವೈಕ್ಯತೆಯೇ, ಸಾಮರಸ್ಯವೇ, ಪ್ರಜಾಪ್ರಭುತ್ವವೇ ನಮ್ಮ ರಾಷ್ಟ್ರ ಧರ್ಮ ಎಂದು ಹೇಳಿ. ಸಂವಿಧಾನವೇ ರಾಷ್ಟ್ರೀಯ ಗ್ರಂಥ ಎಂದು ನಮ್ಮ ಮಕ್ಕಳಿಗೆ ಹೇಳಿ ಕೊಡಿ’.
ಹೀಗೆಂದು ಖಡಾಖಂಡಿತವಾಗಿ ಹೇಳುತ್ತಾರೆ ಇಬ್ರಾಹಿಂ ಸುತಾರ. ಕನ್ನಡದ ಕಬೀರ ಎಂದೇ ಖ್ಯಾತರಾದ ಸುತಾರ ‘ಅಲ್ಲಾ ಮತ್ತು ಅಲ್ಲಮ ಎರಡೂ ಒಂದೇ’ ಎಂದು ನಂಬಿದವರು. ಸಮಾಜದಲ್ಲಿ ಸಾಮರಸ್ಯದ ಬೀಜ ಬಿತ್ತಲು ಹೆಣಗಿದವರು. ಉತ್ತರ ಕರ್ನಾಟಕದ ನೆಲದಲ್ಲಿ ಸೂಫೀ ಸಂತರ ಪರಂಪರೆಯನ್ನು ಮುಂದುವರಿಸಿದವರು. ಕುರಾನ್ ಅಲ್ಲದೆ ಭಗವದ್ಗೀತೆ, ಶರಣ ತತ್ವ, ಬಸವ ತತ್ವ, ವೇದ ಉಪನಿಷತ್‌ಗಳನ್ನು ಅಧ್ಯಯನ ಮಾಡಿ ಎಲ್ಲ ಧರ್ಮಗಳ ಸಾರವೂ ಒಂದೇ ಎಂದು ತಿಳಿದವರು ಮತ್ತು ಅದರ ಪ್ರಚಾರಕ್ಕೆ ಟೊಂಕ ಕಟ್ಟಿ ನಿಂತವರು. ಹೀಗಿರ್ಪ ಇಬ್ರಾಹಿಂ ಸುತಾರ ಅವರು ಇತ್ತೀಚೆಗೆ ಮಹಾಲಿಂಗಪುರದಲ್ಲಿ ಪ್ರಜಾವಾಣಿ ‘ಭಾನುವಾರದ ಪುರವಣಿ’ಗೆ ಮಾತಿಗೆ ಸಿಕ್ಕರು. ಅವರ ಜೊತೆ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.
‘ಇಸ್ಲಾಂ ಧರ್ಮದ ಬಗ್ಗೆ ಮಾತನಾಡಲು ನನ್ನನ್ನು ಕರೆಯಬೇಡಿ. ನನಗೆ ಹಿಂದೂ ಧರ್ಮ ಅಥವಾ ಜೈನ ಧರ್ಮದ ಬಗ್ಗೆ ಮಾತನಾಡಲು ಹೇಳಿ. ನನ್ನ ಧರ್ಮದ ಬಗ್ಗೆಯೇ ನನಗೆ ಉಪನ್ಯಾಸ ನೀಡಲು ಹೇಳಿದರೆ ನಾನು ನನ್ನ ಧರ್ಮವೇ ಶ್ರೇಷ್ಠ ಎಂದು ಹೇಳುವ ಸಾಧ್ಯತೆ ಇರುತ್ತದೆ. ಉಪನ್ಯಾಸ ಮಾಡುವುದಕ್ಕಾದರೂ ನಾನು ಇನ್ನೊಂದು ಧರ್ಮವನ್ನು ಅಭ್ಯಾಸ ಮಾಡುವಂತಾಗಲಿ. ಅದೇ ರೀತಿ ಹಿಂದೂ ವಿದ್ವಾಂಸರಿಗೆ ಬೇರೆ ಧರ್ಮದ ಬಗ್ಗೆ ಉಪನ್ಯಾಸ ನೀಡಲು ಹೇಳಿ. ಆಗ ಒಂದಿಷ್ಟು ಪರಿವರ್ತನೆ ಆಗುತ್ತದೆ. ಧರ್ಮ ಗುರುಗಳಿಗೆ ಸಾಮರಸ್ಯದ ತರಬೇತಿ ಅಗತ್ಯ. ಇಲ್ಲವಾದರೆ ಅವರು ಕೋಮುವಾದದ ವಿಷಬೀಜ ಬಿತ್ತುತ್ತಾರೆ’.
‘ಶಿಶುನಾಳ ಷರೀಫರನ್ನು ಎಲ್ಲರೂ ಹೊಗಳುತ್ತಾರೆ. ಆದರೆ ನನ್ನ ದೃಷ್ಟಿಯಲ್ಲಿ ಶಿಶುನಾಳ ಷರೀಫರಿಗಿಂತ ಅವರ ತಂದೆ ಇಮಾಂ ಸಾಬ್ ಶ್ರೇಷ್ಠ. ಯಾಕೆಂದರೆ ಅವರು ತಮ್ಮ ಮಗನನ್ನು ಮಠಕ್ಕೆ ಕರೆದುಕೊಂಡು ಹೋಗಿ ಬಸವತತ್ವ, ಶರಣ ತತ್ವ ಕಲಿಸಲು ವಿನಂತಿಸಿಕೊಂಡರು. ಗೋವಿಂದ ಭಟ್ಟರ ಬಳಿಗೆ ಹೋಗಿ ಯೋಗ, ಉಪನಿಷತ್, ಅದ್ವೈತ ಕಲಿಸಲು ಕೋರಿದರು. ಇಮಾಂ ಸಾಬ್ ಹೀಗೆ ಮಾಡದೇ ಇದ್ದರೆ ಷರೀಫರು ಕೂಡ ಒಬ್ಬ ಕೋಮುವಾದಿ ಆಗುತ್ತಿದ್ದರು’.
‘ಒಮ್ಮೆ ಮಹಮ್ಮದ ಪೈಗಂಬರರಿಗೆ ಒಬ್ಬ ಶಿಷ್ಯ ಕೇಳಿದ. ‘ನಾನು ನನ್ನ ಧರ್ಮದ ಜನರನ್ನು ಪ್ರೀತಿಸುವುದು ಕೋಮುವಾದವಾಗುತ್ತದೆಯೇ?’ ಎಂದು. ಅದಕ್ಕೆ ಪೈಗಂಬರರು ‘ನೀನು ನಿನ್ನ ಧರ್ಮವನ್ನು ನಂಬುವುದು, ನಿನ್ನ ಜನರನ್ನು ಪ್ರೀತಿಸುವುದು ಕೋಮುವಾದವಲ್ಲ. ನಿನ್ನ ಜನರು ತಪ್ಪು ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದ್ದೂ ಅವರನ್ನು ಬೆಂಬಲಿಸುವುದು ಕೋಮುವಾದ’ ಎಂದು ಉತ್ತರಿಸಿದರು. ಅದಕ್ಕಾಗಿ ನಾವು ನಮ್ಮ ಧರ್ಮವನ್ನು ತಿಳಿದರೆ ಸಾಲದು. ಇತರ ಧರ್ಮಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ತುಲನಾತ್ಮಕ ಅಧ್ಯಯನ ನಡೆಸಬೇಕು. ಹಾಗೆ ಮಾಡಿದಾಗ ಮಾತ್ರ ಎಲ್ಲ ಧರ್ಮಗಳ ಸಾರವೂ ಒಂದೇ ಎನ್ನುವುದು ಗೊತ್ತಾಗುತ್ತದೆ.
ನಾನು ಚಿಕ್ಕವನಿದ್ದಾಗ ಕುರಾನ್ ಅಧ್ಯಯನ ಮಾಡಿದ್ದೆ. ಮಹಾಲಿಂಗಪುರದಲ್ಲಿ ಬಸವಾನಂದ ಸ್ವಾಮಿಗಳು ಅಂತ ಇದ್ದರು. ಅವರು ತೀರಿಕೊಂಡ ನಂತರ ಅವರ ಸ್ಮರಣೆಗಾಗಿ ಒಂದು ತಿಂಗಳು ಬೇರೆ ಬೇರೆ ವಿದ್ವಾಂಸರಿಂದ ಉಪನ್ಯಾಸವನ್ನು ಏರ್ಪಡಿಸುತ್ತಿದ್ದರು. ಬೆಳಿಗ್ಗೆ ಮತ್ತು ಸಂಜೆ ವಿದ್ವತ್ ಗೋಷ್ಠಿ. ನಾನು ಕೇಳಲು ಹೋಗುತ್ತಿದ್ದೆ. ನನಗೆ ಅದೇ ವಿಶ್ವವಿದ್ಯಾಲಯ ಆಯಿತು. ವೇದ, ಉಪನಿಷತ್, ಶರಣತತ್ವ ಎಲ್ಲವುದರ ಅರಿವು ಸಿಕ್ಕಿತು. ಆರಾಧನಾ ವಿಧಾನ ಬೇರೆ. ಆದರೆ ಪರಮಾತ್ಮ ಒಂದೇ ಎನ್ನುವುದು ಮನದಟ್ಟಾಯಿತು’.
ನಂತರ ನಾನು ಭಜನಾ ಸಂಘ ಸೇರಿದೆ. ಪ್ರಶ್ನೋತ್ತರ ರೂಪದಲ್ಲಿ ಭಜನಾ ಸಂಘ ನಡೆಸುತ್ತಿದ್ದೆ. ಜನರು ನನ್ನ ಮಾತನ್ನು ಕೇಳತೊಡಗಿದರು. ಇದರಿಂದ ನನ್ನ ಮೂಲ ವೃತ್ತಿ ನೇಕಾರಿಕೆ ಮಾಡುವುದು ಕಷ್ಟವಾಯಿತು. ಭಜನಾ ಸಂಘ ಅಥವಾ ನೇಕಾರಿಕೆ ಎರಡರಲ್ಲಿ ಯಾವುದಾದರೂ ಒಂದನ್ನು ನಾನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಆಗ ನನ್ನ ತಾಯಿ ‘ನಿನಗೆ ಯಾವುದು ಇಷ್ಟವೋ ಅದನ್ನು ಮಾಡು. ನಿನ್ನ ಹೆಂಡತಿ ಮಕ್ಕಳ ಚಿಂತೆ ಬಿಡು. ನಾನು ಮಂದಿ ಮನೆಯಲ್ಲಿ ಕೂಲಿ ಮಾಡಿಯಾದರೂ ನಿನ್ನ ಹೆಂಡತಿ ಮಕ್ಕಳನ್ನು ಸಾಕುತ್ತೇನೆ. ನೀನು ಭಜನಾ ಮಂಡಳಿಗೇ ಹೋಗು’ ಎಂದರು. ತಾಯಿ ಬೆನ್ನೆಲುಬಾಗಿ ನಿಂತಿದ್ದರಿಂದ ನಾನು ಈ ಮಟ್ಟಕ್ಕೆ ಬೆಳೆದೆ ಎಂದು ತಾಯಿಯನ್ನು ನೆನಪಿಸಿಕೊಂಡು ಅವರ ಕಣ್ಣುಗಳಲ್ಲಿ ನೀರಿನ ಪಸೆ ಹರಿಯಿತು.
ಒಬ್ಬ ವ್ಯಕ್ತಿ ಪರಿಪೂರ್ಣ ಆಗಬೇಕು ಎಂದರೆ ತಂದೆ ತಾಯಿ, ಶಿಕ್ಷಕ, ಧರ್ಮಗುರು, ಸಮಾಜದವರು ಎಲ್ಲರೂ ಸರಿಯಾದ ರೀತಿಯಲ್ಲಿ ಪ್ರಯತ್ನಿಸಬೇಕು. ಯಾರಾದರೂ ಒಬ್ಬರು ಬೇಜವಾಬ್ದಾರಿಯಿಂದ ನಡೆದುಕೊಂಡರೂ ವ್ಯಕ್ತಿ ಅಪರಿಪೂರ್ಣನಾಗುತ್ತಾನೆ. ಎಲ್ಲರೂ ಕೋಮುವಾದಿಗಳಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ವಿಶಾಲ ಮನೋಭಾವದಿಂದ ಅಧ್ಯಯನ ಮಾಡುವವರ ಕೊರತೆ ಇದೆ.
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ಎಂದು ಭಗವದ್ಗೀತೆ ಹೇಳುತ್ತದೆ. ಇದೇ ಮಾತನ್ನು ಕುರಾನ್ ಕೂಡ ಹೇಳುತ್ತದೆ. ಅಲ್ಲಮ ಕೂಡಾ ಇದನ್ನೇ ಹೇಳುತ್ತಾನೆ. ಧರ್ಮ ಒಂದೆ. ಭಾಷೆ ಬೇರೆ ಅಷ್ಟೆ. ಧರ್ಮದ ಸಂಸ್ಥಾಪಕ ಸರ್ವಜ್ಞನಾದ ದೇವರೇ ಹೊರತು ಅಲ್ಪಜ್ಞನಾದ ಜೀವಿಯಲ್ಲ. ಹಾಗಾದರೂ ಇಷ್ಟೊಂದು ಧರ್ಮಗಳು ಹೇಗೆ ಹುಟ್ಟಿಕೊಂಡವು? ಹೇಗೆಂದರೆ ಧರ್ಮಪ್ರಚಾರಕರ ಅನುಯಾಯಿಗಳು ಮೂಲತತ್ವವನ್ನು ಬಿಟ್ಟು ವ್ಯಕ್ತಿಪೂಜೆಗೆ ಇಳಿದರು. ಮಹಮದ್ ಪೈಗಂಬರರಿಗಿಂತಲೂ ಮೊದಲು ಇಸ್ಲಾಂ ಧರ್ಮ ಇರಲಿಲ್ಲವೇ? ಇತ್ತು ಎನ್ನುವುದಕ್ಕೆ ಕುರಾನ್ ಸಾಕ್ಷಿ. ಯೇಸು ಕ್ರಿಸ್ತ, ಬಸವಣ್ಣ, ಬುದ್ಧ, ಮಹಾವೀರ ಎಲ್ಲರ ವಿಷಯದಲ್ಲಿಯೂ ಹೀಗೆಯೇ ಆಯಿತು.
ಮನುಷ್ಯ ಹುಟ್ಟಿದಾಗಿನಿಂದಲೂ ಧರ್ಮ ಇದೆ. ಅದನ್ನು ಸುಧಾರಣೆ ಮಾಡಿಕೊಂಡು ಬರಲಾಗುತ್ತಿದೆ. ಬಿದ್ದವನನ್ನು ಮೇಲೆತ್ತುವುದೇ ಧರ್ಮ. ಪ್ರಾಮಾಣಿಕವಾಗಿ, ಸತ್ಯಗ್ರಾಹಿಯಾಗಿ ಇನ್ನೊಂದು ಧರ್ಮವನ್ನು ನೋಡಿದರೆ ಇದು ಗೊತ್ತಾಗುತ್ತದೆ. ಇಲ್ಲವಾದರೆ ಕೋಮುವಾದದ ಕೂಪದಲ್ಲಿ ಮುಳುಗುತ್ತೇವೆ ಅಷ್ಟೆ. ರಾಮಕೃಷ್ಣಾಶ್ರಮದ ರಾಮತೀರ್ಥರು ವಿದೇಶಗಳಿಗೆ ಹೋಗಿ ಧರ್ಮ ಪ್ರಚಾರ ಮಾಡುತ್ತಿದ್ದರು. ಯಾರೋ ಭಕ್ತರೊಬ್ಬರು ‘ನೀವು ಯಾಕೆ ಆಶ್ರಮ, ಮತ ಪಂಥ ಸ್ಥಾಪಿಸಲಿಲ್ಲ ಎಂದು ಕೇಳಿದಾಗ ‘ಎಲ್ಲ ಮತ ಪಂಥಗಳೂ ಹೋಗಲಿ ಎಂದು ನಾನು ಪ್ರಯತ್ನ ಪಡುತ್ತಿದ್ದೇನೆ. ಅದು ಸಾಧ್ಯವಾಗಲಿಲ್ಲ. ಕನಿಷ್ಠ ನನ್ನದೊಂದು ಪಂಥವಾದರೂ ಕಡಿಮೆಯಾಗಲಿ ಎಂದು ಆಶ್ರಮ ಸ್ಥಾಪಿಸಲಿಲ್ಲ’ ಎಂದು ಉತ್ತರಿಸಿದರು. ಮುಸ್ಲಿಂ ಧರ್ಮದಲ್ಲಿ ಗಾನ ಬಜಾನಾ ಹರಾಮ್. ಆದರೂ ನೀವು ಭಜನೆ ಮಾಡುತ್ತೀರಲ್ಲ ಎಂದು ಕೆಲವು ಮೌಲ್ವಿಗಳು ನನ್ನ ಕೇಳಿದ್ದರು. ‘ಯಾವ ಹಾಡಿನಲ್ಲಿ ಕೇಳುವವರ ಮನಸ್ಸು ವಿಕಾರಗೊಳಿಸುವ ಸಾಲುಗಳು ಇವೆಯೋ, ಧರ್ಮ ಪ್ರಚಾರ ಮಾಡುವ ಸಾಹಿತ್ಯ ಇದೆಯೋ ಅದನ್ನು ನಿಷೇಧ ಮಾಡಿದ್ದಾರೆ. ಧರ್ಮ ಪ್ರಚಾರವೇ ಹಾಡಿನಲ್ಲಿ ಇದ್ದರೆ ಅದನ್ನು ಯಾಕೆ ನಿಷೇಧ ಮಾಡುತ್ತಾರೆ ಎಂದು ನಾನು ಪ್ರಶ್ನೆ ಮಾಡಿದೆ. ನನ್ನ ಭಜನಾ ಕಾರ್ಯಕ್ರಮಕ್ಕೆ ಅವರನ್ನೂ ಕರೆದೆ. ಅವರು ಬಂದು ಕೇಳಿ ನನ್ನ ವಾದವನ್ನು ಒಪ್ಪಿದರು.
ಮನುಷ್ಯ ವಿರೋಧ ಮಾಡುವುದು ತಪ್ಪು ತಿಳಿವಳಿಕೆಯಿಂದ. ಇಂತಹ ತಪ್ಪು ತಿಳಿವಳಿಕೆಗಳು ಮುಸ್ಲಿಮರಲ್ಲಿಯೂ ಇವೆ. ಹಿಂದೂಗಳಲ್ಲಿಯೂ ಇವೆ. ಇಬ್ಬರೂ ಬೇರೆ ಧರ್ಮದ ಆಂತರ್ಯವನ್ನು ಸರಿಯಾಗಿ ತಿಳಿದುಕೊಂಡರೆ ಸಾಮರಸ್ಯ ಮೂಡುತ್ತದೆ. ಅದಕ್ಕಾಗಿಯೇ ನಾನು ಧರ್ಮಗುರುಗಳಿಗೆ ಸಾಮರಸ್ಯದ ತರಬೇತಿ ಬೇಕು ಎಂದು ಹೇಳುವುದು.
ಜಗದ್ಗುರುಗಳು ಜಗತ್ತಿಗೇ ತಾನು ಗುರು ಎಂದುಕೊಂಡಿದ್ದಾರೆ. ಆದರೆ ನಿಜವಾದ ಜಗದ್ಗುರು ಯಾರು ಎಂದರೆ ‘ಈ ಜಗತ್ತೇ ನನ್ನ ಗುರು ಎಂದು ಯಾರು ತಿಳಿದುಕೊಂಡಿರುತ್ತಾರೋ ಅವರು ಜಗದ್ಗುರುಗಳು. ಇದಕ್ಕೆ ಒಂದು ಉದಾಹರಣೆ ಹೇಳುತ್ತೇನೆ. ಒಮ್ಮೆ ಸಿದ್ದೇಶ್ವರ ಸ್ವಾಮೀಜಿಗೆ ಒಬ್ಬ ಕುಡುಕ ಬಂದು ನಮಸ್ಕಾರ ಮಾಡಿದ. ಸುತ್ತಲೂ ಇದ್ದ ಭಕ್ತರು ಈ ಕುಡುಕನಿಗೆ ಆಶೀರ್ವಾದ ಮಾಡಬೇಡಿ ಎಂದರು. ಆದರೆ ಸಿದ್ದೇಶ್ವರ ಸ್ವಾಮೀಜಿ ಮಾತ್ರ ಆತ ನನ್ನ ಗುರು ಎಂದರು. ಹೇಗೆ ಎಂದು ಕೇಳಿದ್ದಕ್ಕೆ ‘ನೋಡಿ ನಾನು ಕುಡಿದು ಕುಡಿದು ಹೀಗೆ ಆಗಿದ್ದೀನಿ. ನಿಮ್ಮ ಕಾಲಿಗೆ ಬಿದ್ದು ಕೇಳಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ನೀವು ಕುಡಿಯಬೇಡಿ ಎನ್ನುತ್ತಾನೆ ಅವನು’ ಎಂದರು. ಎಲ್ಲರಿಂದ ಎಲ್ಲದರಿಂದ ಕಲಿಯುವವನು ಗುರು ಆಗುತ್ತಾನೆ. ಜಗದ್ಗುರುಗಳು ಉಪದೇಶ ಮಾಡುವಾಗ ಎಚ್ಚರದಿಂದ ಇರಬೇಕು. ಕೇಳುಗರನ್ನು ಸತ್ಯದ ಸಮೀಪ ಕರೆದುಕೊಂಡು ಹೋಗುವುದು ಉಪದೇಶ. ನಡೆನುಡಿ ಒಂದಾಗದೆ ಮಾಡುವ ಉಪದೇಶ ಅದು ಎಷ್ಟೇ ದೊಡ್ಡದಿದ್ದರೂ ಉಪಯೋಗವಿಲ್ಲ.
ಶರಣೆಯೊಬ್ಬಳು ಕೇಳುತ್ತಾಳೆ. ‘ಶಿವನ ನೆನೆದರೆ ಭವ ಹರಿಯುವುದೆಂಬ ವಿವರಗೇಡಿಗಳ ಮಾತು ಕೇಳಲಾಗದು. ಜ್ಯೋತಿಯ ನೆನೆದರೆ ಕತ್ತಲೆ ಹರಿಯುವುದೇ? ಮೃಷ್ಟಾನ್ನ ನೆನೆದರೆ ಹಸಿವು ಇಂಗುವುದೇ?’ ಎಂದು ಪ್ರಶ್ನೆ ಮಾಡುತ್ತಾಳೆ. ಬರೀ ದೇವರ ಪೂಜೆಯಿಂದ ಏನೂ ಆಗದು. ಒಳ್ಳೆಯದು ಮಾಡುವ ಸಂಕಲ್ಪದಿಂದ ಮಾತ್ರ ಒಳ್ಳೆಯದು ಆಗುತ್ತದೆ. ಸುತಾರ ಅವರ ಮಾತುಗಳಿಗೆ ಬಿಡುವು ಇಲ್ಲ. ಕೇಳುಗರ ಮನಸ್ಸಿನಲ್ಲಿ ಅಚ್ಚು ಒತ್ತುವ ಹಾಗೆ ಮಾತನಾಡುತ್ತಾರೆ. ಅವರ ಮಾತುಗಳೂ ಸ್ಪಷ್ಟ. ವಿಚಾರಗಳೂ ಸ್ಪಷ್ಟ. ಅಲ್ಲಿ ಗೊಂದಲಗಳಿಗೆ ಅವಕಾಶವಿಲ್ಲ. ನಾವು ತಿಳಿದುಕೊಳ್ಳಬೇಕು ಅಷ್ಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.