ADVERTISEMENT

ಆರ್ಯ ಈಡಿಗರ ಸಂಘದ ಅಮೃತಮಹೋತ್ಸವ: ಶಕ್ತಿಗಾಗಿ ಸಂಘಟನಾ ಸಮಾವೇಶ

ಲಕ್ಷ್ಮಣ ಕೊಡಸೆ
Published 10 ಡಿಸೆಂಬರ್ 2023, 0:29 IST
Last Updated 10 ಡಿಸೆಂಬರ್ 2023, 0:29 IST
ಕೆ.ಎನ್‌. ಗುರುಸ್ವಾಮಿ ಅವರು 1958ರ ನವೆಂಬರ್‌ 10ರಂದು ಬೆಂಗಳೂರಿನಲ್ಲಿ ನಡೆದ ಆರ್ಯ ಈಡಿಗರ ಸಂಘದ ಸಮ್ಮೇಳನದಲ್ಲಿ ಮೈಸೂರಿನ ಮಹಾರಾಜರಾಗಿದ್ದ ಹಾಗೂ ಮೈಸೂರಿನ ಆಗಿನ ರಾಜ್ಯಪಾಲರೂ ಆಗಿದ್ದ ಹಿಸ್‌ ಹೈನೆಸ್‌ ಜಯಚಾಮರಾಜೇಂದ್ರ ಒಡೆಯರ್‌ ಅವರ ಮುಂದೆ ತಮ್ಮ ಮಾತುಗಳನ್ನು ಪ್ರಸ್ತುತಪಡಿಸಿದರು
–ಕೆ.ಎನ್‌. ಹರಿ ಕುಮಾರ್‌ ಅವರ ‘ಅಜ್ಜ–ಅಜ್ಜಿ ನೆನಪುಗಳು’ ಕೃತಿಯಿಂದ ಬಳಸಿದ ಚಿತ್ರ
ಕೆ.ಎನ್‌. ಗುರುಸ್ವಾಮಿ ಅವರು 1958ರ ನವೆಂಬರ್‌ 10ರಂದು ಬೆಂಗಳೂರಿನಲ್ಲಿ ನಡೆದ ಆರ್ಯ ಈಡಿಗರ ಸಂಘದ ಸಮ್ಮೇಳನದಲ್ಲಿ ಮೈಸೂರಿನ ಮಹಾರಾಜರಾಗಿದ್ದ ಹಾಗೂ ಮೈಸೂರಿನ ಆಗಿನ ರಾಜ್ಯಪಾಲರೂ ಆಗಿದ್ದ ಹಿಸ್‌ ಹೈನೆಸ್‌ ಜಯಚಾಮರಾಜೇಂದ್ರ ಒಡೆಯರ್‌ ಅವರ ಮುಂದೆ ತಮ್ಮ ಮಾತುಗಳನ್ನು ಪ್ರಸ್ತುತಪಡಿಸಿದರು –ಕೆ.ಎನ್‌. ಹರಿ ಕುಮಾರ್‌ ಅವರ ‘ಅಜ್ಜ–ಅಜ್ಜಿ ನೆನಪುಗಳು’ ಕೃತಿಯಿಂದ ಬಳಸಿದ ಚಿತ್ರ   

ಇಂದು(ಡಿ.10) ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತಮಹೋತ್ಸವವು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಈಡಿಗರ ಸಂಘದ ನಡೆಗಳು ಹಾಗೂ ಸಮುದಾಯದ ಹೆಜ್ಜೆಗುರುತುಗಳ ಮೆಲುಕು...

ದೇಶದಲ್ಲಿ ಬ್ರಿಟಿಷರ ಆಳ್ವಿಕೆ 1857ರ ನಂತರ ಸ್ಥಿರಗೊಂಡು ಶಿಕ್ಷಣವನ್ನು ಸಮಾಜದ ಎಲ್ಲ ವರ್ಗಗಳಿಗೆ ಮುಕ್ತವಾಗಿ ತೆರೆದಿದ್ದರೂ ಕರ್ನಾಟಕದ ವಿವಿಧ ಸಮುದಾಯಗಳಲ್ಲಿ ಜಾಗೃತಿ ಮೂಡಿದ್ದು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ. ಶಿಕ್ಷಣ, ಸಂಘಟನೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಳ್ಳುವ ಸಮಾನ ಉದ್ದೇಶದಿಂದ ವೀರಶೈವ ಮಹಾಸಭೆ (1904), ಒಕ್ಕಲಿಗರ ಸಂಘ (1906) ಅಸ್ತಿತ್ವಕ್ಕೆ ಬಂದವು. ಕುರುಬರ ಸಂಘ ಮತ್ತು ದೇವಾಂಗ ಸಂಘಗಳು 1923-24ರ ಸುಮಾರಿಗೆ ರೂಪುಪಡೆದವು.

ಅಂದಿನ ಮೈಸೂರು ಸಂಸ್ಥಾನದಲ್ಲಿ ಅಬಕಾರಿ ವ್ಯವಹಾರವನ್ನು ಬೆಳೆಸಿದವರಲ್ಲಿ ಕೆ.ನೆಟ್ಟಕಲ್ಲಪ್ಪನವರು ಪ್ರಮುಖರು. ಆಂಧ್ರಪ್ರದೇಶದ ರಾಯದುರ್ಗದ ಕಣೇಕಲ್‌ನವರಾಗಿದ್ದ ನೆಟ್ಟಕಲ್ಲಪ್ಪನವರು ಅಬಕಾರಿ ಕಂಟ್ರಾಕ್ಟ್ ಮಾಡಲು ಬೆಂಗಳೂರಿಗೆ ಬಂದು ನೆಲೆಸಿದರು. ಅವರ ದಾನ, ಧರ್ಮ ಹಾಗೂ ಇನ್ನಿತರ ಸೇವಾಕಾರ್ಯಗಳನ್ನು ಮೆಚ್ಚಿದ ಅಂದಿನ ಪ್ರಭುತ್ವ ಕಣೇಕಲ್ ನೆಟ್ಟಕಲ್ಲಪ್ಪನವರಿಗೆ ‘ರಾವ್ ಸಾಹೇಬ್’ ಬಿರುದನ್ನು ಕೊಟ್ಟು ಗೌರವಿಸಿತ್ತು.

ADVERTISEMENT

ಅವರು ಬೆಂಗಳೂರಿಗೆ ಬರುವ ಮೊದಲು ಈಡಿಗ ಸಮುದಾಯದ ಸಂಘಟನೆಗೆ ಸಂಬಂಧಿಸಿ 1910ರ ಸುಮಾರಿಗೆ ಬಳ್ಳಾರಿಯಲ್ಲಿ ಪ್ರಯತ್ನ ನಡೆದಿತ್ತು. ಅವರ ಮುಂದಾಳತ್ವದಲ್ಲಿ ಜನಾಂಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ವಿದ್ಯಾರ್ಥಿನಿಲಯ 1914ರಲ್ಲಿ ಬಳ್ಳಾರಿಯಲ್ಲಿ ಸ್ಥಾಪನೆಗೊಂಡಿತು. ಅದರ ಮುಂದುವರಿಕೆಯಾಗಿ 1944ರ ವೇಳೆಗೆ, ರಾವ್ ಸಾಹೇಬ್ ನೆಟ್ಟಕಲ್ಲಪ್ಪನವರ ಹಿರಿಯ ಪುತ್ರ ಕೆ. ಎನ್. ಗುರುಸ್ವಾಮಿಯವರ ಮುಂದಾಳುತನದಲ್ಲಿ ಈಡಿಗರ ಸಂಘಟನೆಗೆ ಚಾಲನೆ ಲಭಿಸಿತು. ಗುರುಸ್ವಾಮಿಯವರ ವ್ಯವಹಾರದಲ್ಲಿ ಸಹಭಾಗಿತ್ವ ಹೊಂದಿದ್ದ ಕೆ.ವೆಂಕಟಸ್ವಾಮಿಯವರ ಒತ್ತಾಸೆಯಿಂದ 1944ರ ಮೇ 10ರಂದು ಆರ್ಯ ಈಡಿಗರ ಸಂಘ ಅಸ್ತಿತ್ವಕ್ಕೆ ಬಂದಿತ್ತು. ಕೆ.ಎನ್.ಗುರುಸ್ವಾಮಿಯವರು ಸಂಘ ಸ್ಥಾಪನೆಗೆ ಮೊದಲೇ ಸುಲ್ತಾನ್ ಪೇಟೆಯ ತಮ್ಮ ಗಾಡಿಖಾನೆಯಲ್ಲಿ ವಿದ್ಯಾರ್ಥಿಗಳಿಗಾಗಿ ಉಚಿತ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಚಿಕ್ಕಮಾವಳ್ಳಿಯಲ್ಲಿ ಒಂದು ವಿದ್ಯಾರ್ಥಿನಿಲಯ ಪ್ರಾರಂಭವಾಯಿತು. ಮುಂದೆ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಸ್ವಂತ ಕಟ್ಟಡದಲ್ಲಿ ವಿದ್ಯಾರ್ಥಿನಿಲಯ ಸ್ಥಾಪನೆ ಆಯಿತು.

ಗುರುಸ್ವಾಮಿಯವರ ಅಧ್ಯಕ್ಷತೆಯಲ್ಲಿ ಈಡಿಗರ ಪುರೋಭಿವೃದ್ಧಿಗಾಗಿ 1958ನೇ ನವೆಂಬರ್ 9 ಮತ್ತು 10ರಂದು ಬೆಂಗಳೂರಿನಲ್ಲಿ ಸಮಾವೇಶಗೊಂಡಿದ್ದ ಪ್ರಥಮ ಈಡಿಗರ ಸಮ್ಮೇಳನದಲ್ಲಿ ಕೆಲವು ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಈಡಿಗರು, ಬಿಲ್ಲವರು, ನಾಮಧಾರಿಗಳು, ಹಳೇಪೈಕರು, ದೀವರು ಮತ್ತು ಈಳಿಗರು ಎಂಬ ಭಿನ್ನ ಭಿನ್ನವಾದ ಪಂಗಡಗಳು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿದ್ದು, ಇಡೀ ಜನಾಂಗದ ಏಕತೆ ಮತ್ತು ಪುರೋಭಿವೃದ್ಧಿಗಾಗಿ ಈ ಎಲ್ಲ ಪಂಗಡಗಳವರೂ ಸೇರಿದ ಈ ಸಂಘಕ್ಕೆ ‘ಮೈಸೂರು ಪ್ರದೇಶ ಆರ್ಯ ಈಡಿಗರ ಸಂಘ’ ಎಂದು ನಾಮಕರಣ ಮಾಡಲು ಸಮ್ಮೇಳನದಲ್ಲಿ ನಿರ್ಣಯಿಸಲಾಯಿತು.

ಈಡಿಗ ಸಂಘದ ಎರಡನೇ ಸಮ್ಮೇಳನವು ಮೈಸೂರಿನಲ್ಲಿ 1961ನೇ ಜನವರಿಯಲ್ಲಿ ಸಮಾವೇಶಗೊಂಡಿತ್ತು. ಅಧಿವೇಶನವನ್ನು ಆಂಧ್ರದ ಮಾಜಿ ಮಂತ್ರಿ ಲಚ್ಚಣ್ಣನವರು ಉದ್ಘಾಟಿಸಿದರು. ಎರಡನೇ ದಿನದ ಸಮ್ಮೇಳನವನ್ನು ಉದ್ಘಾಟಿಸಿದ ಕೇರಳದ ಮಾಜಿ ಮುಖ್ಯಮಂತ್ರಿಯಾಗಿದ್ದ ಆರ್. ಶಂಕರ್, ಕೇರಳದಲ್ಲಿ ಈ ಜನಾಂಗದವರು (ಈಳವರು) ಸಂಘಟಿತರಾದ ರೀತಿ, ಎದುರಿಸಿದ ಸಮಸ್ಯೆಗಳನ್ನು ವಿವರಿಸಿದ್ದರು.

ಮೈಸೂರಿನಲ್ಲಿ ಈಡಿಗರ ಎರಡನೇ ಸಮ್ಮೇಳನವು ನಡೆದ ಸಂದರ್ಭದಲ್ಲಿಯೇ ಪ್ರಥಮ ಯುವಕ ಸಮ್ಮೇಳನವೂ ನಡೆಯಿತು. ಅಲ್ಲಿ
ಕೆ.ಎನ್. ಗುರುಸ್ವಾಮಿಯವರ ದತ್ತುಪುತ್ರ ಕೆ.ಎ.ನೆಟ್ಟಕಲ್ಲಪ್ಪ ಅವರು ಯುವಕ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದರು. ಕೇಂದ್ರ ಸಂಘವು ಕೆ.ಎ. ನೆಟ್ಟಕಲ್ಲಪ್ಪನವರನ್ನು ಈಡಿಗ ವಿದ್ಯಾರ್ಥಿನಿಲಯ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಿತು.

ಯುವಕ ಸಂಘವು, ರಾಜಕುಮಾರ್ ಅವರ ತಂಡದವರಿಂದ ಬೆಂಗಳೂರು ವಿದ್ಯಾರ್ಥಿನಿಲಯದ ಸಹಾಯಾರ್ಥ ಬೆಂಗಳೂರಿನ ಪುರಭವನದಲ್ಲಿ ‘ಬೇಡರ ಕಣ್ಣಪ್ಪ’ ನಾಟಕ ಪ್ರದರ್ಶನವನ್ನು ಏರ್ಪಡಿಸಿ 28 ಸಾವಿರ ರೂಪಾಯಿಗಳನ್ನು ಸಂಗ್ರಹಿಸಿತು. ಈ ಹಣವನ್ನು ಬೆಂಗಳೂರು ಈಡಿಗ ಸಂಘದ ವಿದ್ಯಾರ್ಥಿನಿಲಯದ ಮುಂಭಾಗದ ಕಟ್ಟಡದ ವಿಸ್ತರಣೆ ಕಾರ್ಯಕ್ಕೆ ಉಪಯೋಗಿಸಲಾಯಿತು.

ಕೆ. ಎನ್. ಗುರುಸ್ವಾಮಿ

ಕೆ.ಎ.ನೆಟ್ಟಕಲ್ಲಪ್ಪನವರ ಪ್ರೇರಣೆಯಂತೆ ಎಂ.ಕೆ. ಶ್ರೀನಿವಾಸ್ ಅವರಿಂದ ಮೈಸೂರಿನಲ್ಲಿ ವಿದ್ಯಾರ್ಥಿನಿಲಯ ಆರಂಭವಾಯಿತು. ಬೆಂಗಳೂರು ವಿದ್ಯಾರ್ಥಿನಿಲಯದಲ್ಲಿದ್ದು ಓದಿ ವಕೀಲರಾಗಿದ್ದ ಕಾಗೋಡು ತಿಮ್ಮಪ್ಪನವರು ಸಾಗರದಲ್ಲಿ ವಿದ್ಯಾರ್ಥಿನಿಲಯ ಆರಂಭಿಸಿದರು. ಹಾಸನದಲ್ಲಿ ಅಜ್ಜಪ್ಪನವರು ವಿದ್ಯಾರ್ಥಿನಿಲಯ ಕಟ್ಟಡಕ್ಕೆ ನಿವೇಶನ ಪಡೆದರು. ದಾವಣಗೆರೆಯಲ್ಲಿ ಮೂಲಾ ರಾಮಪ್ಪನವರ ಹೆಸರಿನಲ್ಲಿ ಸ್ಥಾಪಿತವಾದ ವಿದ್ಯಾರ್ಥಿನಿಲಯ ಕಟ್ಟಡವನ್ನು ವಿಸ್ತರಿಸಲಾಯಿತು. ಈ ಎಲ್ಲ ಕಾರ್ಯಗಳಿಗೂ ಸ್ಫೂರ್ತಿ ನಿರ್ದೇಶನ ನೀಡಿದವರು ಕೆ.ಎ. ನೆಟ್ಟಕಲ್ಲಪ್ಪನವರು.

ಕೆ.ಎನ್.ಗುರುಸ್ವಾಮಿಯವರು ಸಂಘದ ಅಧ್ಯಕ್ಷ ಸ್ಥಾನದಿಂದ ವಿರಮಿಸಿದಾಗ ಸಂಘದ ನೇತೃತ್ವ ವಹಿಸಿದ ಎಚ್.ಆರ್.ಬಸವರಾಜ್ ಅವರು 1996ರಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ಈಡಿಗ ಸಮುದಾಯದ ಮೂರನೇ ಬೃಹತ್ ಸಮ್ಮೇಳನ ನಡೆಸಿ ಸಮಾಜದ ಸಮಸ್ಯೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟರು. ಹೆಂಡ, ಸಾರಾಯಿ ನಿಷೇಧ ಕ್ರಮದಿಂದ ಕಸುಬಿನಿಂದ ವಂಚಿತರಾಗುವ ಈಡಿಗರಿಗೆ ಪುನರ್ವಸತಿಗೆ ಸೂಕ್ತ ವ್ಯವಸ್ಥೆ ಆಗುವಂತೆ ಆ ಸಮ್ಮೇಳನದಲ್ಲಿ ಒತ್ತಾಯಿಸಲಾಯಿತು.

ಕೆ.ಎ. ನೆಟ್ಟಕಲ್ಲಪ್ಪ

ಬಸವರಾಜ್ ನಂತರ ಸಂಘದ ನೇತೃತ್ವ ವಹಿಸಿದ ಡಿ. ದಾಸಪ್ಪನವರು ವಿದ್ಯಾರ್ಥಿನಿಲಯಗಳ ಸುಧಾರಣೆಗೆ ಆದ್ಯತೆ ನೀಡಿದರು. ನಂತರ ಬಂದ ಜೆ.ಪಿ.ನಾರಾಯಣಸ್ವಾಮಿಯವರು ಸಂಘದ ಕಟ್ಟಡವನ್ನು ವಿಸ್ತರಿಸಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದರು. 2017ರಲ್ಲಿ ಸಂಘದ ಅಧ್ಯಕ್ಷಸ್ಥಾನಕ್ಕೆ ಬಂದಿರುವ ಡಾ.ಎಂ. ತಿಮ್ಮೇಗೌಡರು ಈಡಿಗ ಸಮುದಾಯಕ್ಕೆ ಸೇರಿದ ಎಲ್ಲ ಪಂಗಡಗಳನ್ನು ಒಗ್ಗೂಡಿಸಿ ಡಿಸೆಂಬರ್ 10ರಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಮೃತಮಹೋತ್ಸವ ಆಚರಣೆಗೆ ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲಿ ಬೃಹತ್ ಜಾಗೃತ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಇದಕ್ಕೆ ರಾಜ್ಯದ ವಿವಿಧ ಭಾಗಗಳಲ್ಲಿ ಈಚಿನ ವರ್ಷಗಳಲ್ಲಿ ಅಸ್ತಿತ್ವಕ್ಕೆ ಬಂದ ಧಾರ್ಮಿಕ ಪೀಠಗಳ ಸ್ವಾಮೀಜಿಗಳು ಸಾಕ್ಷಿಯಾಗಲಿದ್ದಾರೆ.

‘ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ’ ಎಂಬ ಪರಮಗುರು ಶ್ರೀ ನಾರಾಯಣಗುರುಗಳ ಆಶಯವನ್ನು ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘವು ಈ ಬೃಹತ್ ಸಮಾವೇಶದ ಮೂಲಕ ಸಾಕಾರಗೊಳಿಸುವ ದೃಢ ಹೆಜ್ಜೆಯನ್ನು ಇರಿಸಿದೆ.

ಕೆ. ವೆಂಕಟಸ್ವಾಮಿ

2ಎ ಪ್ರವರ್ಗದಲ್ಲಿ: ಎಪ್ಪತ್ತರ ದಶಕದಲ್ಲಿ ರಚನೆಯಾಗಿದ್ದ ಹಾವನೂರು ಆಯೋಗವು ಈಡಿಗ ಸಮುದಾಯದ ಅಡಿಯಲ್ಲಿ ವಿಭಿನ್ನ ಹೆಸರುಗಳ ಮೂಲಕ ಗುರುತಿಸಿಕೊಳ್ಳುತ್ತಿರುವ ಇಲ್ಲಾವನ್, ಇಳಿಗ, ಈಡಿಗ, ಎಳವ, ಎಳಿಗ, ಕಲಾಲ್, ಗಾಮಲ್ಲ, ಗೂಂಡ್ಲ ತಿಯನ್, ಗೌಂಡ್ಲ ಥಿಯಾನ್, ಥಿಯ್ಯ ಥಿಯ್ಯಾನ್, ದೀವರ, ದೀವರಮಕ್ಕಳು, ದೇವರ, ದೇವರಮಕ್ಕಳು, ದೇಶಭಂಡಾರಿ, ನಾಡಾರ್, ನಾಮಧಾರಿ, ಪೂಜಾರಿ, ಬಂಢಾರಿ, ಬಿಲ್ಲವ, ಬೆಲ್ಚಡ, ಮಲೆಯಾಳಿ ಬಿಲ್ಲವ, ಹಳೇಪೈಕರು, ಹಾಲಕ್ಷತ್ರಿಯ ಜಾತಿಗಳನ್ನು ಸೇರಿಸಿದೆ. 1971ರ ಜನಗಣತಿಯನ್ನು ಆಧರಿಸಿದ ಹಾವನೂರು ಆಯೋಗವು ರಾಜ್ಯದ ಜನಸಂಖ್ಯೆಯಲ್ಲಿ ಈಡಿಗರ ಸಂಖ್ಯಾ ಪ್ರಮಾಣ ಶೇ 2.51 ಎಂಬುದನ್ನು ಲೆಕ್ಕ ಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.