ದೇಶದಲ್ಲಿ 40ರ ದಶಕದಲ್ಲಿ ತೀವ್ರಗೊಂಡಿದ್ದ ಸ್ವಾತಂತ್ರ್ಯ ಹೋರಾಟದ ಕಾವು ಉತ್ತರ ಕರ್ನಾಟಕದಲ್ಲಿಯೂ ಪ್ರಬಲವಾಗಿ ಪ್ರಜ್ವಲಿಸುತ್ತಿತ್ತು.
ಇಂತಹ ಪ್ರಕ್ಷುಬ್ಧ ವಾತಾವರಣದಲ್ಲಿ ಅರಳಿದ ಕ್ರಾಂತಿಯ ಪುತ್ರ ಧಾರವಾಡದ ಹುಸೇನ್ ಸಾಬ್ ಗೂಡುಭಾಯಿ. ಬುದ್ದಿಶಾಲಿ, ಬಲಶಾಲಿ, ದೇಶಭಕ್ತರೂ, ಬಹುಭಾಷಾ ಪ್ರವೀಣರೂ ಆಗಿದ್ದ ಅವರು ತಮ್ಮ 16ನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ, ಲಕ್ಷಾಂತರ ಹೋರಾಟಗಾರರಿಗೆ ಸ್ಫೂರ್ತಿಯಾದವರು.
ಮೂಲತಃ ಬೆಳಗಾವಿಯಹಲಕರಣಿಯವರಾದ 1928ರಲ್ಲಿ ಜನಿಸಿದ ಹುಸೇನ್ ಸಾಬ್ ಕೃಷಿಕರಾದ ಅಮೀನ್ ಸಾಬ್ ಗೂಡುಭಾಯಿ, ಫಾತಿಮಾ ದಂಪತಿಯ ಪುತ್ರ.
ಬಾಲ್ಯದಲ್ಲೇ ಕುಟುಂಬ ಸಮೇತ ಧಾರವಾಡಕ್ಕೆ ಬಂದಹುಸೇನ್‌ಸಾಬ್ ಅವರಿಗೆ ಜೀವನ ರೂಪಿಸಿದವರುರೈಲ್ವೆ ಇಲಾಖೆಯ ಗುತ್ತಿಗೆದಾರರಾಗಿದ್ದ ದಾದಾಸಾಹೇಬ್. ಅಮೀನ್ ಸಾಬ್ ಅವರು ಅವರ ಮನೆಯಲ್ಲಿ ಕಾರಕೂನರಾಗಿದ್ದರು. ಅವರ ಮನೆಯ ಜಾನುವಾರುಗಳನ್ನು ಮೇಯಿಸುತ್ತಿದ್ದ ಹುಸೇನ್ ಸಾಬ್ ಅವರ ಶಿಕ್ಷಣ ಆಸಕ್ತಿ ಕಂಡು ಕರ್ನಾಟಕ ಹೈಸ್ಕೂಲ್‌ನಲ್ಲಿ ದಾಖಲಿಸಿದರು. ಉನ್ನತ ಶ್ರೇಣಿಯಲ್ಲಿ ಎಸ್ಸೆಸ್ಸಿ (ಇಂದಿನ ಎಸ್ಸೆಸ್ಸೆಲ್ಸಿ) ತೇರ್ಗಡೆಯಾದ ಗೂಡುಭಾಯಿ ಯಾರಿಗೂ ತಿಳಿಸದೆ ಸೈನ್ಯಕ್ಕೆ ಸೇರಲು ಮುಂದಾದರು.
ಅದು ಎಲ್ಲೆಡೆ ಎರಡನೇ ವಿಶ್ವ ಯುದ್ಧದ ತಯಾರಿ ನಡೆಯುತ್ತಿದ್ದ ಸಮಯ. ಬ್ರಿಟಿಷರು ತಮ್ಮ ಶತ್ರುಗಳ ವಿರುದ್ಧ ಹೋರಾಡಲು ಭಾರತೀಯರನ್ನೂ ಸೈನ್ಯದಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಇದೇ ಸಂದರ್ಭದಲ್ಲಿ ಹುಸೇನ್ ಸಾಬ್ ಅವರೂ ಸೈನ್ಯಕ್ಕೆ ಸೇರಲು ನಿರ್ಧರಿಸಿದರು.
ಅವರಿಗೆ ಕೇವಲ 16 ವರ್ಷ ವಯಸ್ಸು ಎಂಬ ಕಾರಣಕ್ಕೆ ಸೈನ್ಯಕ್ಕೆ ಆಯ್ಕೆಯಾಗಲಿಲ್ಲ. ಇದರಿಂದ ಬೇಸರಗೊಳ್ಳದೆ ತಮಗೆ 18 ವರ್ಷ ಎಂದು ಸೈದಾಪುರದ ಗೌಡರ ಬಳಿ ದಾಖಲೆ ತಿದ್ದಿಸಿ, ತಿಂಗಳೊಳಗೆ ಸೈನ್ಯಕ್ಕೆ ಸೇರಿಯೇ ಬಿಟ್ಟರು. ಧಾರವಾಡದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಪಾರ್ಕ್‌ನ ಐಬಿಯಲ್ಲಿ ಸೈನಿಕ ಪರೀಕ್ಷೆ ನಡೆದಿತ್ತು.
ಯುದ್ಧದಲ್ಲಿ ಕೈದಿಯಾಗಿದ್ದ ಲಕ್ಷಾಂತರ ಭಾರತೀಯರನ್ನು ಬಂಧಿ ಮಾಡಿ ಮಲೇಷಿಯಾನಲ್ಲಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿಯೇ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರನ್ನು ಭೇಟಿಯಾದರು.
‘ಬ್ರಿಟಿಷರು ನಮ್ಮ ಶತ್ರುಗಳು. ನಮ್ಮನ್ನೇ ಬಳಸಿಕೊಂಡು ಯುದ್ಧದಲ್ಲಿ ಗೆಲ್ಲುವ ಕುತಂತ್ರ ನಡೆಸುತ್ತಿದ್ದಾರೆ. ನಾವು ಭಾರತೀಯರು ಬ್ರಿಟಿಷರ ಸಂಕೋಲೆಯಿಂದ ಭಾರತವನ್ನು ಬಿಡಿಸಬೇಕಿದೆ. ಬಂದೂಕುಗಳನ್ನು ಬ್ರಿಟಿಷರ ವಿರುದ್ಧ ತಿರುಗಿಸಬೇಕಿದೆ’ ಎಂದು ಬೋಸ್ ಕರೆ ಕೊಟ್ಟರು.
ನೇತಾಜಿ ಅವರ ಕರೆಗೆ ಸ್ಫೂರ್ತಿಗೊಂಡು ಗೂಡುಭಾಯಿ ಅವರೂ ಐಎನ್‌ಎ ಸೈನ್ಯಕ್ಕೆ ಸೇರಿದರು. ಅಲ್ಲಿಂದ ಅವರ ಹೋರಾಟದ ಮತ್ತೊಂದು ಮಹತ್ವದ ಮಗ್ಗುಲುಆರಂಭವಾಯಿತು.
ಐಎನ್‌ಎದಲ್ಲಿ ಸೈನಿಕರಿಗೆ ಆಹಾರ ವಿತರಣೆಯ ಜವಾಬ್ದಾರಿ ಹೊಂದಿದ್ದವರಲ್ಲಿ ಗೂಡುಭಾಯಿ ಹಾಗೂ ಧಾರವಾಡದವರೇ ಆಗಿದ್ದ ಮತ್ತೊಬ್ಬ ಹೋರಾಟಗಾರ ಘೋರ್ಪಡೆ ಅವರೂ ಪ್ರಮುಖರಾಗಿದ್ದರು. ಸುಭಾಷ್ ಅವರಿಗೂ ಇವರೇ ಆಹಾರ ಪೂರೈಸುತ್ತಿದ್ದರು. ಒಮ್ಮೆ ಸಣಕಲು ದೇಹದ ಗೂಡುಭಾಯಿ ಅವರನ್ನು ಕರೆದ ಸುಭಾಷರು ಗೂಡುಭಾಯಿ ಅವರ ಮೇಲಂಗಿ ತೆಗೆಯಲು ತಿಳಿಸಿದರು.
ಎದೆಯ ಮೇಲೆ ಇನ್ನು ಒಂದು ಕೂದಲು ಬೆಳೆದಿಲ್ಲ. ಮೀಸೆಯೂ ಚಿಗುರಿಲ್ಲ. ಇಂತಹ ಬಾಲಕರನ್ನು ಬ್ರಿಟಿಷರು ತಮ್ಮ ಹಿತಾಸಕ್ತಿಗೆ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಮರುಗಿದರಂತೆ.
1942ರಲ್ಲಿ ಎರಡನೇ ವಿಶ್ವ ಯುದ್ಧದ ಆರಂಭವಾಗಿತ್ತು.ಮಲೇಷಿಯಾದಲ್ಲಿ ಶಿಬಿರ ಹಾಕಿಕೊಂಡಿದ್ದ ಐಎನ್‌ಎ ಸೈನ್ಯಕ್ಕೆ ಭೀಕರ ಸಮಸ್ಯೆಗಳು ಎದುರಾದವು.ಆಹಾರ, ಗಾಯಾಳಿಗೆ ಔಷಧದ ಕೊರತೆ ಕಾಡಿತು. ಮತ್ತೊಂದೆಡೆ ಕಾಲರಾ ಮಹಾಮಾರಿಯ ಆಕ್ರಮಣವೂ ಹೆಚ್ಚಾಗುತ್ತಿತ್ತು. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಅಗತ್ಯ ಔಷಧ ಸಂಗ್ರಹಿಸುವುದು. ಸೈನಿಕರನ್ನು ಉಳಿಸುವುದು ಸವಾಲಿನ ಸಂಗತಿಯಾಗಿತ್ತು.
ಔಷಧ ಸಂಗ್ರಹಿಸಲೆಂದೇ ಐವರ ತಂಡ ರಚಿಸಲಾಗಿತ್ತು. ಶತ್ರುಗಳ ಕಣ್ಣಿಗೆ ಬೀಳದ ಹಾಗೆ ಯಾವುದೇ ಲ್ಯಾಟಿನ್ ಬಳಸದೆ, ರಾತ್ರಿ ಸಣ್ಣ ದೋಣಿನಲ್ಲಿ ತಂಡ ಹೊರಟಿತ್ತು. ದೂರ ಸಾಗುತ್ತಿದ್ದಂತೆ ದೋಣಿ ಹಡಗಿಗೆ ಡಿಕ್ಕಿಹೊಡೆದು ಮೂವರು ಮೃತರಾದರು. ಅವರಲ್ಲಿ ವಿಜಯಪುರದ ಒಬ್ಬರಿದ್ದರು. ಉಳಿದ ಗೂಡುಭಾಯಿ ಹಾಗೂ ಘೋರ್ಪಡೆ ದೋಣಿಯ ಮರದ ತುಂಡನ್ನು ಹಿಡಿದು ದಡ ಸೇರಿದರಂತೆ. ಅವರನ್ನು ಕಂಡ ಮೀನುಗಾರರು ತಕ್ಷಣ ಚಿಕಿತ್ಸೆ ಒದಗಿಸಿದ್ದರಿಂದ ಅವರಿಬ್ಬರು ಬದುಕುಳಿದರು.
ಯುದ್ಧದ ಮತ್ತೊಂದು ಘಟನೆಯಲ್ಲಿ ಗೂಡುಭಾಯಿ ಅವರು ತೀವ್ರ ಗಾಯಾಳಾಗಿದ್ದರು. ಅವರ ಹೊಟ್ಟೆಗೆ ಬಾಂಬ್‌ನ ಚೂರುಗಳು ತಾಗಿ 24 ಹೊಲಿಗೆಗಳನ್ನು ಹಾಕಲಾಗಿತ್ತು. ಕಾಲಿಗೆ ಗುಂಡುಗಳು ತಾಗಿದ್ದವು. ಮಲೇಷಿಯಾದ ಸೈನಿಕ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಯಿತು. ಅವರ ಕೈಕಾಲುಗಳನ್ನು ಕಟ್ಟಲಾಗಿತ್ತು. ಶಸ್ತ್ರ ಚಿಕಿತ್ಸೆಯಾದ ಮಾರನೇ ದಿನ ಶತ್ರು ಸೈನ್ಯ ಆಸ್ಪತ್ರೆ ಮೇಲೆ ಬಾಂಬ್ ಹಾಕಲಿತ್ತು. ವಿಷಯ ತಿಳಿದ ಎಲ್ಲಾ ಸೈನಿಕರು ಅನಿವಾರ್ಯವಾಗಿ ಆ ಸ್ಥಳದಿಂದ ಹೊರಡಬೇಕಾಯಿತು. ಗೂಡುಭಾಯಿ ಆರೋಗ್ಯ ಹಾಗೇ ಇತ್ತು. ಆದರೂ ಜಗ್ಗದ ಗೂಡುಭಾಯಿ ಪಕ್ಕದಲ್ಲಿದ್ದ ಗಾಯಾಳಿಗೆ ಕರೆದು ಕೈಕಾಲಿಗೆ ಕಟ್ಟಿದ್ದ ಹಗ್ಗ ತೆಗೆಯಲು ಹೇಳಿ, ತೆವಳುತ್ತಲೇ ಹೊರನಡೆದರು. ಇತರ ಗಾಯಾಳುಗಳ ಜತೆ ಅಲ್ಲಿಯೇ ಇದ್ದ ಕಾರನ್ನು ಚಾಲನೆ ಮಾಡಿದ ಕೆಲವೇ ನಿಮಿಷಗಳಲ್ಲಿ ಆಸ್ಪತ್ರೆ ಬಾಂಬ್‌ಗೆ ಛಿದ್ರವಾಯಿತು. ಗಾಯದ ಸ್ಥಿತಿಯಲ್ಲೂ ಅಂದಾಜು 35 ಕಿ.ಮೀ ಚಾಲನೆ ಮಾಡಿ ಮತ್ತೊಂದು ಆಸ್ಪತ್ರೆಗೆ ದಾಖಲಾದರಂತೆ.
1945 ಆಗಸ್ಟ್ 18ರಂದು ಶಸ್ತ್ರಾಸ್ತ್ರ ಖರೀದಿಸಲು ಜಪಾನ್‌ಗೆ ತೆರಳುತ್ತಿದ್ದಾಗ ವಿಮಾನ ಅಪಘಾತದಲ್ಲಿ ಬೋಸ್ ನಿಧನರಾದ ಸುದ್ದಿ ಮೊದಲು ಗೂಡುಭಾಯಿ ಅವರ ತಂಡಕ್ಕೆ ತಲುಪಿತಂತೆ. ಅತ್ಯಂತ ನೋವಿನ ಘಟನೆಯಲ್ಲಿ ನೇತಾಜಿ ಅವರ ಮರಣ ಸಂದೇಶವೂ ಒಂದುಎನ್ನುತ್ತಿದ್ದರಂತೆ ಗೂಡುಭಾಯಿ.
ಸ್ವಾತಂತ್ರ ನಂತರ ಭಾರತಕ್ಕೆ ಮರಳಿದ ಗೂಡುಭಾಯಿ ಸ್ವತಂತ್ರ ಭಾರತ ಸರ್ಕಾರದಿಂದ ಸನ್ಮಾನಿತಗೊಂಡರು. ನಂತರಧಾರವಾಡದಲ್ಲಿ ಪೊಲೀಸ್ ಇಲಾಖೆಯಲ್ಲಿ ಹವಾಲ್ದಾರ್ ಆಗಿಯೂ ಕಾರ್ಯನಿರ್ವಹಿಸಿದರು. ಹಾಕಿ ಆಟಗಾರರೂ ಆಗಿದ್ದ ಅವರುಬಾಂಬೆಯ ವಾಂಖೇಡ ಸ್ಟೇಡಿಯಂನಲ್ಲಿ ಧಾರವಾಡದ ಪೊಲೀಸ್ ಇಲಾಖೆ ನಡೆಸಿದ ಕ್ರೀಡೆಯಲ್ಲಿ ತಮ್ಮ ಚಾತುರ್ಯ ತೋರಿದರು. 1978ರಲ್ಲಿ ನಿವೃತ್ತರಾದರು.
ಸುಮ್ಮನೆ ಕೂರುವ ವ್ಯಕ್ತಿತ್ವ ಅವರದ್ದಾಗಿರಲಿಲ್ಲ. ಆದ್ದರಿಂದ ನಿವೃತ್ತಿ ನಂತರವೂ 13 ವರ್ಷ ಆಟೊ ಚಾಲನೆ ಮಾಡಿದರು. ವೈದ್ಯರಿಗೆ ಕಡಿಮೆ ದರದಲ್ಲಿ, ಕೆಲವೊಮ್ಮೆ ಉಚಿತವಾಗಿ ತುರ್ತು ಸೇವೆ ಒದಗಿಸುತ್ತಿದ್ದರು.
ಮರಾಠಿ, ಇಂಗ್ಲಿಷ್, ಉರ್ದು, ಕನ್ನಡ, ಹಿಂದಿ, ಕೊಂಕಣಿ, ಲಂಬಾಣಿ ಸೇರಿದಂತೆ ಎಂಟಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರವೀಣರಾಗಿದ್ದರು. ಇವರ ಇಂಗ್ಲಿಷ್ ಚಾತುರ್ಯಕ್ಕೆ ಮಾರು ಹೋಗದವರಿರಲಿಲ್ಲ ಎಂದು ನೆನೆಯುತ್ತಾರೆ ಕುಟುಂಬದವರು.
ಏಪ್ರಿಲ್ 6, 2006ರಲ್ಲಿ ಅವರು ನಿಧನರಾದರು.
ದೇಶದ ವಿಮುಕ್ತಿಗಾಗಿ ವೀರಾವೇಶವಾಗಿ ಹೋರಾಡಿದ ಗೂಡುಭಾಯಿರಂತಹ ಹತ್ತಾರು ಜನರನ್ನು ಧಾರವಾಡ ತನ್ನ ಮಡಿಲಲ್ಲಿ ಸಲಹಿದೆ. ಘೋರ್ಪಡೆ, ಗೂಡುಭಾಯಿ ಅವರ ಗುರುವಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಕೆ.ಜಿ. ಜೋಶಿಯಂತಹವರೂ ಈ ನೆಲಕ್ಕಾಗಿ ಬಲಿದಾನವಾದರು.
ಸ್ವಾತಂತ್ರ್ಯ ಅನುಭವಿಸುತ್ತಿರುವ ಕೋಟ್ಯಂತರ ಜನ ಇತಿಹಾಸದ ಪುಟಗಳಿಂದ ಮರೆಯಾಗುತ್ತಿರುವ ಇತಿಹಾಸ ಸೃಷ್ಟಿಕರ್ತರನ್ನು ಮರೆಯುತ್ತಿರುವುದು ಅತ್ಯಂತ ನೋವಿನ ಸಂಗತಿ.
ಮಾಹಿತಿ: ಮಹಮ್ಮದ್ ಅಲಿ ಗೂಡುಭಾಯಿ, ಇಂಟೆಲಿಜೆನ್ಸ್ ನಿವೃತ್ತ ಅಧಿಕಾರಿ,ಸಯ್ಯದ್ ಬಾಶಾ ಗೂಡುಭಾಯಿ, ಸಾಹಿತಿ (ಹುಸೇನ್ ಸಾಬ್ ಅವರ ಪುತ್ರರು).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.