ನೂರಾರು ಮೈಲಿಯಾಚೆಯ ನೇತಾರರ ನುಡಿಗಳು ಕಾಡಿನೂರಿಗೆ ತಲುಪಿ ರಸ್ತೆ , ಬೆಳಕಿಲ್ಲದ ಗ್ರಾಮ ಭಾರತ ಚಳವಳಿಗೆ ಕಾರಣವಾಗುತ್ತದೆ. ಅಂಕೋಲೆಯ ಹದಿಮೂರು ವರ್ಷದ ಬಾಲಕಿ ಬ್ರಿಟಿಷ್ ಗವರ್ನರ್ ವಿರುದ್ಧ ಧಿಕ್ಕಾರ ಕೂಗುತ್ತಾಳೆ. ಬಾಲ ವಿಧವೆಯೊಬ್ಬಳು ಆಶ್ರಮದಲ್ಲಿ ಬೆಳೆದು ಚಳವಳಿಗೆ ಜತೆಯಾಗುತ್ತಾಳೆ. ಎತ್ತಿನ ಗಾಡಿ ಸಂಚರಿಸಲೂ ವ್ಯವಸ್ಥೆ ಇಲ್ಲದ ಕಾಲದಲ್ಲಿ ದೇಶಕ್ಕೆ ಬೆಳಕಾದ ಸಂಗ್ರಾಮ ಮಾರ್ಗದ ಅಮರ ಕಥೆಗಳನ್ನು ನೆನಪಿಸಿಕೊಳ್ಳಲು ಈಗ ‘ಅಮೃತ’ ಸಮಯ...
**
ಅದು 1930ರ ಮೇ ತಿಂಗಳು. ಉಪ್ಪಿನ ಸತ್ಯಾಗ್ರಹ ಚಳವಳಿ ಸಂದರ್ಭ. ಗುಜರಾತಿನ ಧರಸನ ಮತ್ತು ಮಹಾರಾಷ್ಟ್ರದವಡಾಲದಲ್ಲಿ ಸತ್ಯಾಗ್ರಹ ನಿಶ್ಚಯವಾಗಿತ್ತು. ದೇಶದ ವಿವಿಧ ಭಾಗಗಳಿಂದ ಹೋರಾಟಗಾರರು ಅಲ್ಲಿಗೆ ಬಂದು ಸೇರುತ್ತಿದ್ದರು. ಹುಬ್ಬಳ್ಳಿಯ ಸೇವಾದಳದ ಸೇನಾಪತಿ ಡಾ. ನಾ.ಸು. ಹರ್ಡಿಕರ್ ಅವರು ಕರ್ನಾಟಕದ ಸತ್ಯಾಗ್ರಹಿಗಳನ್ನು ಮುಂಬೈಗೆ ಕಳಿಸಲು ಸಿದ್ಧತೆ ನಡೆಸಿದ್ದರು. ಕಾರ್ಯಕರ್ತ ವಿ.ಟಿ. ಮಾಗಡಿ ಅವರನ್ನು ಕರೆದು, ‘ನೀನು ಶಿರಸಿಗೆ ಹೋಗು. ಅಲ್ಲಿ ಮಾರಿಕಾಂಬಾ ದೇವಾಲಯದಲ್ಲಿ ಸತ್ಯಾಗ್ರಹ ಶಿಬಿರ ಇದೆ. ಅಲ್ಲಿಂದ 50 ಜನರನ್ನು ಆರಿಸಿಕೊಂಡು ನಾಳೆ ಸಂಜೆಯ ಒಳಗಡೆ ಹುಬ್ಬಳ್ಳಿಗೆ ಬಾ. ರೈಲಿನಲ್ಲಿ ಅವರನ್ನೆಲ್ಲ ಮುಂಬೈಗೆ ಕರೆದುಕೊಂಡು ಹೋಗಬೇಕು’ ಎಂದಿದ್ದರು.
ಮಾಗಡಿಯವರು ಬಸ್ಸಿನಲ್ಲಿ ಶಿರಸಿ ತಲುಪಿದರು. ಮಾರಿಕಾಂಬಾ ದೇಗುಲ ಸೇರುವ ಹೊತ್ತಿಗೆ ಸಂಜೆಯಾಗಿ ಅಲ್ಲಿದ್ದ ಕಾರ್ಯಕರ್ತರು ಊರಿಗೆ ಹೋಗಿದ್ದರು. ‘25 ಮೈಲಿ ದೂರದ ಸಿದ್ದಾಪುರದ ಶಿಬಿರದಲ್ಲಿ ಜನರಿದ್ದಾರೆ. ಅವರು ಬರಬಹುದು...’ ಎಂದು ಯಾರೋ ಸಲಹೆ ನೀಡಿದರು. ಸಿದ್ದಾಪುರದ ಕೊನೆಯ ಬಸ್ಸು ಹೊರಟುಹೋಗಿತ್ತು. ಆದರೂ ಅಲ್ಲಿಗೆ ಹೋಗಲು ನಿರ್ಧರಿಸಿದ ಮಾಗಡಿಯವರು ಬಾಡಿಗೆ ಸೈಕಲ್ ಪಡೆದರು. ಟಾರ್ಚ್ ಬೆಳಕಿನಲ್ಲಿ ಸೈಕಲ್ ತುಳಿಯಲು ಆರಂಭಿಸಿದರು. ಮಿತ್ರರೊಬ್ಬರು ಅವರ ನೆರವಿಗೆ ಬಂದರು. ತ್ಯಾಗಲಿ ಎಂಬ ಹಳ್ಳಿಗೆ ಹೋಗುವ ಹೊತ್ತಿಗೆ ಟಾರ್ಚ್ ಹಾಳಾಯಿತು! ಕತ್ತಲಿನಲ್ಲಿ ಸೈಕಲ್ ಯಾತ್ರೆ ಮಾಡುವುದೆಂತು? ಅಲ್ಲಿನ ಮನೆಯವರೊಬ್ಬರಲ್ಲಿ ಹಣ ಠೇವಣಿ ಇಟ್ಟು ಲಾಟೀನು ಪಡೆದರು. ಕೊನೆಗೆ ಸಿದ್ದಾಪುರ ತಲುಪಿದಾಗ ರಾತ್ರಿ 12 ಗಂಟೆ. ಅಲ್ಲಿ ಗಂಗಾಧರ ಶಾನಭಾಗ್, ಶಂಕರ ಗುಲ್ವಾಡಿ, ಮಹಾಬಲ ಭಟ್ಟರು ಸಿಕ್ಕರು. ಅವರು 50 ಜನ ಸ್ವಯಂ ಸೇವಕರನ್ನು ಮುಂಬೈಗೆ ಕಳಿಸಲು ಒಪ್ಪಿದರು.
ಉಪ್ಪಿನ ಸತ್ಯಾಗ್ರಹಕ್ಕೆ 50 ಸ್ವಯಂಸೇವಕರು ಬರುತ್ತಾರೆಂದು ಹರ್ಡಿಕರ್‌ರಿಗೆ ತಿಳಿಸುವ ಉತ್ಸಾಹ ಮಾಗಡಿಯವರದು. ಬೇರೆ ಮಾರ್ಗವಿಲ್ಲದೇ ಮುಂಜಾನೆ ಮೂರು ಗಂಟೆಗೆ ಪುನಃ ಸೈಕಲ್ ತುಳಿಯಲು ನಿರ್ಧರಿಸಿದರು. ಸಿದ್ದಾಪುರದಿಂದ ನಸುಕಿನ 3.30ಕ್ಕೆ ಹೊರಟವರು ಸೂರ್ಯೋದಯದ ಹೊತ್ತಿಗೆ ಶಿರಸಿ ತಲುಪಿದರು. ಬರೋಬ್ಬರಿ 50 ಮೈಲಿಯ ರಾತ್ರಿಯ ಯಾತ್ರೆ ಅದು. ಅಲ್ಲಿಂದ ಹುಬ್ಬಳ್ಳಿ ಬಸ್ಸಿಗೆ ಪ್ರಯಾಣ ಮಾಡಿ ಹರ್ಡಿಕರ್‌ರಿಗೆ ವಿಷಯ ತಿಳಿಸಿದರು. ಈ ಸಾಹಸ ಯಾತ್ರೆಯ ಕುರಿತು ಕೇಳಿ ಹರ್ಡಿಕರ್ ಬಹಳ ಅಚ್ಚರಿಪಟ್ಟರು.
ಬ್ರಿಟಿಷರ ಕಣ್ತಪ್ಪಿಸಿ ನಡೆಸುವ ಕಾರ್ಯಾಚರಣೆಗೆ ಬಹುತೇಕ ರಾತ್ರಿಯೇ ಪ್ರಶಸ್ತ ಸಮಯವಾಗಿತ್ತು. ಜೋರು ಮಳೆ, ಪ್ರವಾಹ, ಇಂಬಳಗಳ ಕಡಿತ, ಹಾವು, ಹುಲಿಗಳ ಭಯ – ಇಂತಹ ಸಂಕಷ್ಟಗಳ ಮಧ್ಯೆ ನಡುರಾತ್ರಿ ಹಳ್ಳಿಯಿಂದ ಹಳ್ಳಿಗೆ ಸುದ್ದಿ ತಲುಪಿಸುವ ಕಾರ್ಯಕರ್ತರ ದೊಡ್ಡ ಜಾಲವಿತ್ತು. ಮುದ್ರಿತ ಪತ್ರಿಕೆಯನ್ನು ಪ್ರಕಟಣಾಪೂರ್ವ ಪರಿಶೀಲನೆಗೆ ಒಪ್ಪಿಸಬೇಕೆಂಬ ಕಟ್ಟಾಜ್ಞೆಯಿಂದ ಪತ್ರಿಕೆಗಳೂ ಪ್ರಕಟವಾಗುತ್ತಿರಲಿಲ್ಲ. ಕಾಡಿನ ಗುಹೆ, ನೆಲಮಾಳಿಗೆಗಳಲ್ಲಿ ಭೂಗತ ಪತ್ರಿಕೆ ಮುದ್ರಿಸಿ ಯುದ್ಧ ಮಂಡಲಗಳಿಗೆ ತಲುಪಿಸುವ ನಿತ್ಯದ ಕೆಲಸ ನಡೆಯುತ್ತಿತ್ತು.
ಸಿದ್ದಾಪುರ ಜೈಲಿನಲ್ಲಿದ್ದ ಶಂಕರ ಗುಲ್ವಾಡಿಯವರಿಗೆ ನಿತ್ಯ ಸಾಂತಪ್ಪ ನಾಯ್ಕ್ ಕರಪತ್ರ ಒದಗಿಸುತ್ತಿದ್ದ ರೀತಿ ವಿಶೇಷ. ಆಗ ಜೈಲಿನಲ್ಲಿ ಶೌಚಾಲಯ ಇರಲಿಲ್ಲ. ಬೆಳಿಗ್ಗೆ ಶೌಚಕಾರ್ಯಕ್ಕೆ ಕೈದಿಗಳನ್ನು ಹೊರಗಡೆ ಬಿಡುತ್ತಿದ್ದರು. ಮಾವಿನ ಮರದ ಬುಡದಲ್ಲಿ ಬೈಸಿಕಲ್ ಟ್ಯೂಬಿನ ಒಳಗಡೆ ಕರಪತ್ರವನ್ನು ಸಾಂತಪ್ಪ ರಾತ್ರಿ ಬಚ್ಚಿಡುತ್ತಿದ್ದರು. ಶೌಚಕ್ಕೆ ಬಂದ ಗುಲ್ವಾಡಿಯವರು ಅದನ್ನು ಓದುತ್ತಿದ್ದರು. ನಂತರ ಹೋರಾಟದ ಸ್ಥಿತಿಗತಿಗಳನ್ನು ಜೈಲಿನ ಒಳಗಡೆ ಇದ್ದವರಿಗೆ ಗುಟ್ಟಾಗಿ ಹೇಳುತ್ತಿದ್ದರು. ಹಾಗೆಯೇ ಅಂಕೋಲೆಯ ಮಾಣಿದೇವಿ ಎಂಬ ಬಡ ಮಹಿಳೆ ತನ್ನ ಕಟ್ಟಿಗೆ ಹೊರೆಯಲ್ಲಿ ಕರಪತ್ರ ಸಾಗಿಸಿ ಹಳ್ಳಿ ಹಳ್ಳಿಗೆ ತಲುಪಿಸಿದವಳು. ಪೊಲೀಸರು ಇವಳಿಗೆ ಹಿಂಸೆ ನೀಡಿ ಕಣ್ಣಿಗೆ ಕಾರದ ಪುಡಿ ಹಾಕಿದರೂ ಹಿಂಜರಿಯದ ಸಾಹಸಿ, ಅಪ್ಪಟ ರಾಷ್ಟ್ರಪ್ರೇಮಿಯಾಗಿದ್ದಳು ಆಕೆ.
ಸಾಗರ ಪಟ್ಟಣ ಆಗ ಮೈಸೂರು ಆಳ್ವಿಕೆಯಲ್ಲಿತ್ತು. ಉತ್ತರ ಕನ್ನಡದ ಪೊಲೀಸರು ಅಲ್ಲಿಗೆ ಹೋಗಿ ಹೋರಾಟಗಾರರನ್ನು ಬಂಧಿಸುವುದಕ್ಕೆ ಆ ರಾಜ್ಯದ ಪೂರ್ವಾನುಮತಿ ಪಡೆಯಬೇಕಿತ್ತು. ಈ ಅವಕಾಶ ಬಳಸಿಕೊಂಡು ತಡಗಳಲೆ ಹಳ್ಳಿ ಹೋರಾಟದ ಗುಪ್ತ ಕಾರ್ಯಾಚರಣೆಯ ಪ್ರಮುಖ ಕೇಂದ್ರವಾಯಿತು. 1932ರಲ್ಲಿ ಈ ಹಳ್ಳಿಯಲ್ಲಿ ನಡೆದ ಸಭೆಯೊಂದರಲ್ಲಿ 200 ಭೂಗತ ಕಾರ್ಯಕರ್ತರು ಭಾಗವಹಿಸಿದ್ದನ್ನು ಗಮನಿಸಿದರೆ ಹೋರಾಟದ ತಂತ್ರ ಅಚ್ಚರಿ ಮೂಡಿಸದಿರದು. ಅಂಕೋಲೆಯ ಹೋರಾಟಗಾರರು ರಾತ್ರಿ ಕಾಡಿನಲ್ಲಿ ಅವಿತು ಕಾರ್ಯಾಚರಣೆ ನಡೆಸುವಾಗ ಸುತ್ತಲೂ ಬೆಂಕಿ ಹಾಕಿಕೊಂಡು ಕೂತಿದ್ದರು. ಕಾಡಿನ ಎರಡು ಹುಲಿಗಳು ಇವರು ಕುಳಿತ ಸನಿಹದಲ್ಲಿಯೇ ಮಲಗಿ ಬೆಂಕಿ ಕಾಯಿಸುತ್ತಿದ್ದ ಘಟನೆಯೂ ನಡೆದಿತ್ತು!
ಸಾಗರದ ಕಾನ್ಲೆಯ ವಿಶ್ವೇಶ್ವರಯ್ಯ ಎಂಟು ಮೈಲಿ ದೂರಕ್ಕೆ ಒಂದೂವರೆ ಗಂಟೆಯಲ್ಲಿ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರಿಂದ ಅವರನ್ನು ‘ಅಮೃತ ಮಹಲ್’ ತಳಿಯೆಂದು ತಮಾಷೆ ಮಾಡಲಾಗುತ್ತಿತ್ತು. ಮಲೆನಾಡಿನಲ್ಲಿ ಆಗ ದೂರದ ಪ್ರಯಾಣವು ಕಾಲ್ನಡಿಗೆ ಇಲ್ಲವೆ ಚಕ್ಕಡಿ ಗಾಡಿಯನ್ನು ಅವಲಂಬಿಸಿತ್ತು. ಉತ್ತರ ಕನ್ನಡ ಜಿಲ್ಲೆಯ ಸಂಘಟನೆಯ ಹೊಣೆ ಹೊತ್ತಿದ್ದ ಸರ್ದಾರ್ ವೆಂಕಟ್ರಾಮಯ್ಯ ಬೆಂಗಳೂರಿನಿಂದ ಹಾವೇರಿಗೆ ರೈಲಿನಲ್ಲಿ ಬಂದು ನಂತರ ಎತ್ತಿನ ಗಾಡಿಯಲ್ಲಿ ಶಿರಸಿ, ಸಿದ್ದಾಪುರಕ್ಕೆ ಬರುತ್ತಿದ್ದರು. ಇವರು ಬೆಂಗಳೂರಿಗೆ ಹೋಗುವಾಗ ಬರುವಾಗ ಸುಗಾವಿಯ ಸುಬ್ಬಣ್ಣಭಟ್ಟರ ಮನೆಯಲ್ಲಿ ಇರುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ಕೊರ್ಲಕಟ್ಟೆಯ ದತ್ತೋಬರಾವ್ ಅವರಲ್ಲಿ ಇದ್ದ ಕುಲದೆತ್ತುಗಳಂತೆ! ಆ ಎತ್ತಿನ ಗಾಡಿ ಗಂಟೆಗೆ ನಾಲ್ಕು ಮೈಲಿ ವೇಗದಲ್ಲಿ ಹೋಗುತ್ತಿತ್ತು. ರಾತ್ರಿ 12 ಗಂಟೆಗೆ ಪಯಣ ಆರಂಭಿಸಿದರೆ ಮುಂಜಾನೆ ನಿಗದಿತ ಸ್ಥಳ ತಲುಪುತ್ತಿತ್ತು.
ಒಮ್ಮೆ ಮುಂಬೈಯಿಂದ ಬ್ರಿಟಿಷ್ ಗವರ್ನರ್ ಕಾರವಾರಕ್ಕೆ ಬರುವವರಿದ್ದರು. ಈ ಸಂದರ್ಭದಲ್ಲಿ ಅವರಿಗೆ ಸನ್ಮಾನ ಮಾಡಿ ಎರಡು ಸಾವಿರ ರೂಪಾಯಿ ಹಮ್ಮಿಣಿ ನೀಡಲು ಡಿಸ್ಟ್ರಿಕ್ ಲೋಕಲ್ ಬೋರ್ಡಿನವರು ನಿರ್ಧರಿಸಿದ್ದರು. ಕರನಿರಾಕರಣೆ ವಿರುದ್ಧ ಇಡೀ ಜಿಲ್ಲೆ ಹೋರಾಡಿ ಎಲ್ಲರೂ ಆಸ್ತಿ ಮನೆಗಳನ್ನು ಕಳಕೊಂಡು ನಿರ್ಗತಿಕರಾಗಿ ಸಂಕಷ್ಟದಲ್ಲಿ ಇರುವಾಗ ನಮ್ಮದೇ ಜನ ಗವರ್ನರ್‌ಗೆ ಸನ್ಮಾನ ಮಾಡಲು ಮುಂದಾಗಿದ್ದು ತೀವ್ರ ವಿರೋಧಕ್ಕೆ ಕಾರಣವಾಯಿತು. ಶಿರಸಿ, ಸಿದ್ದಾಪುರ, ಅಂಕೋಲಾದಲ್ಲಿ ‘ಗೋ ಬ್ಯಾಕ್ ಗವರ್ನರ್’ ಎಂದು ಹೋರಾಟ ನಡೆಯಿತು. ಚಳವಳಿಗಾರರು ಕಾರವಾರಕ್ಕೆ ಹೊರಟಾಗ ಎಲ್ಲರನ್ನೂ ಬಂಧಿಸಲಾಯಿತು. ಅಂಕೋಲಾದಲ್ಲಿಯೂ ಪೊಲೀಸರ ಕಾರ್ಯಾಚರಣೆಯಿಂದ ಪ್ರತಿಭಟನೆ ಹತ್ತಿಕ್ಕುವ ಕೆಲಸ ನಡೆಯಿತು. ಆಗ ಕಾಣೇ ಬೊಮ್ಮಕ್ಕ ಎಂಬ 13 ವರ್ಷದ ಬಾಲಕಿ ನಡುರಾತ್ರಿ ಗುಡ್ಡ ಇಳಿದು ಕಾರವಾರ ತಲುಪಿದಳು. ಪೊಲೀಸ್ ಕಟ್ಟುನಿಟ್ಟಿನ ಕಾವಲಿನಲ್ಲಿ ನುಸುಳಿ ಕಪ್ಪುಬಟ್ಟೆ ಪ್ರದರ್ಶಿಸಿ ‘ಗೋ ಬ್ಯಾಕ್ ಗವರ್ನರ್’ ಎಂದು ಕರಪತ್ರ ಹಂಚಿದಳು.
ಕ್ರಿ.ಶ. 1932ರ ಆಗಸ್ಟ್‌ನಲ್ಲಿ ಮುಂಬೈಯಲ್ಲಿ ಅಲ್ಲಿನ ಸತ್ಯಾಗ್ರಹಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಮುಂಬೈಗೆ ಹೋಗಿದ್ದ ಸರ್ದಾರ್ ವೆಂಕಟ್ರಾಮಯ್ಯರ ಜೊತೆಗೆ ಮಾತಾಡುತ್ತ ಹೋರಾಟಗಾರ ಸೂಟಿ ಬಾಟಿವಾಲಾ ಒಂದು ವಿಷಯ ಗಮನಕ್ಕೆ ತಂದರು. ‘ಮುಂಬೈ ಸರ್ಕಾರದಲ್ಲಿ ಕೊಂಕಣಿ, ಮರಾಠಿ ಮಾತಾಡುವ ಕಾರವಾರದ ಪೊಲೀಸರು ಜಾಸ್ತಿ. ಇವರು ಲಾಠಿ ಪ್ರಹಾರದಲ್ಲಿ ತೊಡಗಿದ್ದಾರೆ. ಇವರಿಗೆ ದೇಶದ ಹೋರಾಟದ ಅರಿವು ಸ್ವಲ್ಪವೂ ಇಲ್ಲ’ ಎಂದು ಅವರು ಹೇಳಿದ್ದರು. ಸರ್ದಾರ್ ವೆಂಕಟ್ರಾಮಯ್ಯ ಊರಿಗೆ ಮರಳಿದವರು ಕಾರವಾರ, ಗೋಕರ್ಣ, ಅಂಕೋಲಾ ಸುತ್ತಾಡಿ ಸ್ಥಳೀಯ ಕಾರ್ಯಕರ್ತರ ಜೊತೆಗೆ ಮಾತಾಡಿ, ಕೊಂಕಣಿಯಲ್ಲಿ ಮಹಾಭಾರತ, ರಾಮಾಯಣ ಕಥೆ ಹೇಳುವ ಜನರನ್ನು ಗುರುತಿಸಿದರು.
ಅವರೆಲ್ಲ ಈ ಪ್ರದೇಶ ಸುತ್ತಾಡಿ ಪುರಾಣ ಕಥೆ ಹೇಳುವಾಗ ಗಾಂಧಿ ಹೂಡಿರುವ ಅಸಹಕಾರ ಚಳವಳಿ, ಕರನಿರಾಕರಣೆ ಮುಂತಾದ ಚಳವಳಿಗಳ ಮಹತ್ವವನ್ನೂ ಹೇಳುವಂತೆ ವಿನಂತಿಸಿದರು. ಹೋರಾಟ ಜಾಗೃತಿಗೆ ಇವರನ್ನು ಉತ್ತೇಜಿಸಿದರು.
ಕ್ರಿ.ಶ. 1917-18ರಲ್ಲಿ ಸಿದ್ದಾಪುರದ ಗುಡ್ಡಗಾಡಿನ ಊರು ದೊಡ್ಮನೆಗೆ ಹಿರಿಯ ಅಧಿಕಾರಿಯೊಬ್ಬರು ಬಂದಿದ್ದರು. ವರ್ಷಕ್ಕೆ ಒಂದು ಸಾವಿರದಿಂದ 5 ಸಾವಿರ ರೂಪಾಯಿವರೆಗೆ ಭೂಕಂದಾಯ ನೀಡುವ ಮನೆತನಗಳು ಆ ಊರಿನಲ್ಲಿದ್ದವು. ಹೀಗಾಗಿ ವರ್ಷಕ್ಕೆ ಒಮ್ಮೆ ಕಲೆಕ್ಟರ್ ಸಾಹೇಬರು ಬಂದು ಬಿಡಾರ ಹೂಡುವುದು ಸಹಜವಾಗಿತ್ತು. ಅವರ ಜೊತೆಗೆ ಸಹಾಯಕರು, ಇನ್ನುಳಿದ ಅಧಿಕಾರಿಗಳು ಬಂದಿದ್ದರು. ಸಾಹೇಬರು ಕಾರಿನಲ್ಲಿ ಬಂದಿದ್ದರು. ಆದರೆ, ಸಹಾಯಕರು ಬಿಡಾರ ಸಾಮಗ್ರಿ ತುಂಬಿಕೊಂಡು ಎತ್ತಿನ ಗಾಡಿಯಲ್ಲಿ ತಲುಪಿದ್ದರು. ಹಸಿದ ಎತ್ತುಗಳನ್ನು ಆಳುಗಳು ಅಲ್ಲಿಯೇ ಮೇವಿಗೆ ಬಿಟ್ಟಿದ್ದರು. ಅವು ದೊಡ್ಮನೆ ನಾರಾಯಣ ಹೆಗಡೆಯವರ ಜಮೀನಿಗೆ ನುಗ್ಗಿ ಬೆಳೆ ಹಾಳು ಮಾಡಿದವು. ಎತ್ತು ಯಾರದ್ದಾದರೇನು? ಬೆಳೆ ಹಾಳು ಮಾಡಿದ್ದು ತಪ್ಪೆಂದು ಎತ್ತುಗಳನ್ನು ಕಟ್ಟಿ ಹಾಕಿದರು. ಇದು ಬ್ರಿಟಿಷ್ ಅಧಿಕಾರಿಯನ್ನು ಕೆರಳಿಸಿತು. ಹಳ್ಳಿಯ ಒಬ್ಬ ಸಾಮಾನ್ಯ ರೈತ ಜಿಲ್ಲಾಧಿಕಾರಿಗಳ ಬಿಡಾರ ಹೊತ್ತು ತಂದ ಎತ್ತುಗಳನ್ನು ಕಟ್ಟಿ ಹಾಕುವುದು ಮಹಾ ಪ್ರಮಾದವಲ್ಲವೇ? ತಕ್ಷಣ ಜಿಲ್ಲಾಧಿಕಾರಿಗಳು ನಾರಾಯಣ ಹೆಗಡೆಯವರಿಗೆ ಬಂಧನದ ವಾರಂಟ್ ಹೊರಡಿಸಿದರು.
ಸುದ್ದಿ ಸುತ್ತೆಲ್ಲ ಹಬ್ಬಿ ಹಲವರನ್ನು ತಲುಪಿತು. ಶಿರಳಗಿ ಸುಬ್ರಾಯ ಭಟ್ಟರು, ಹೊಬಾಳಿ ಗಣಪ ಭಟ್ಟರು, ಅಡವಿತೋಟದ ಗಣೇಶ ಭಟ್ಟರು ಇದರ ವಿರುದ್ಧ ಪ್ರತಿಭಟನೆಯ ತಯಾರಿ ನಡೆಸಿದರು. ಮೊದಲ ಹಂತವಾಗಿ ಪಟೇಲರು ರಾಜೀನಾಮೆ ನೀಡಿದರು! ತಕ್ಷಣ ಕಂಗಾಲಾದ ಅಧಿಕಾರಿ, ನಾರಾಯಣ ಹೆಗಡೆ ಅವರ ಜಮೀನಿಗೆ ಎತ್ತು ಮೇಯಲು ಬಿಟ್ಟಿದ್ದು ತಮ್ಮ ಸಿಬ್ಬಂದಿ ತಪ್ಪೆಂದು ಪ್ರಕರಣ ಅಲ್ಲಿಗೇ ತಣ್ಣಗಾಗಿಸಿದರು. ಆ ಕಾಲದ ಜನಸಂಖ್ಯೆಯಲ್ಲಿ ಶೇ 10-15ರಷ್ಟೂ ಸಾಕ್ಷರರಿರಲಿಲ್ಲ. ಆದರೆ, ಆಗಲೇ ಪುಣೆಯ ಫರ್ಗ್ಯೂಸನ್ ರಾಷ್ಟ್ರೀಯ ಕಾಲೇಜಿನಲ್ಲಿ ಓದಿದ್ದ ನಾರಾಯಣ ಹೆಗಡೆ, ಗೋಖಲೆ ಹಾಗೂ ತಿಲಕರ ಭಾಷಣ ಕೇಳಿ ಬೆಳೆದವರು. ಉನ್ನತ ಶಿಕ್ಷಣದಿಂದಾಗಿ ಸ್ವಾತಂತ್ರ್ಯ ಹೋರಾಟಗಾರರ ನಿರಂತರ ಒಡನಾಟದಿಂದ ಪ್ರಭುತ್ವಕ್ಕೆ ಸವಾಲು ಹಾಕುವ ಶಕ್ತಿ ಅವರಲ್ಲಿ ಬಂದಿತ್ತೆಂದು ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ ಅವರ ಮೊಮ್ಮಗ ನಾರಾಯಣ ಹೆಗಡೆ ದೊಡ್ಮನೆ ನೆನಪಿಸಿಕೊಳ್ಳುತ್ತಾರೆ. ಈ ಕಗ್ಗಾಡಿನ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವವರು ಆ ಚಳವಳಿಗಾರ.
ಶಿರಸಿಗೆ ದಕ್ಷಿಣ ವಿಭಾಗದ ಕಮಿಷನರ್ ಕೆಡೆಲ್ ಬಂದಾಗಿನ ಘಟನೆ ನೋಡಿ. ಇಲ್ಲಿನ ಆಡಳಿತ ಕಾರ್ಯ ಮುಗಿಸಿ ಅವರು ಕುಮಟಾಕ್ಕೆ ಪ್ರಯಾಣದ ಸಿದ್ಧತೆ ನಡೆಸಿದ್ದರು. ಅಧಿಕಾರಿಗಳೇನೋ ಕಾರಿನಲ್ಲಿ ಹೋಗುತ್ತಿದ್ದರು. ಅವರ ಸಹಚರರ ವಸ್ತು ಸಾಗಾಟಕ್ಕೆ ಎತ್ತಿನ ಗಾಡಿ ಬೇಕಿತ್ತು. ಮೇಲಧಿಕಾರಿಗಳು ಬಂದಾಗೆಲ್ಲ ಪೊಲೀಸರು ರೈತರ ಎತ್ತಿನ ಗಾಡಿಗಳನ್ನು ಹಿಡಿದು ಅವುಗಳಲ್ಲಿ ಪುಕ್ಕಟೆಯಾಗಿ ವಸ್ತುಗಳನ್ನು ಕರಾವಳಿಗೆ ಸಾಗಿಸುತ್ತಿದ್ದರು. ‘ಬಿಟ್ಟೀಗಾಡಿ’ ಎಂದು ಕರೆಯಲ್ಪಡುವ ಈ ಸೇವೆಯನ್ನು ಮನಸೋಇಚ್ಛೆ ಬಳಸುತ್ತಿದ್ದರು. ಕೆಡಲ್ ಬಂದ ದಿನವೂ ಹಲವು ಎತ್ತಿನ ಗಾಡಿಗಳನ್ನು ಹಿಡಿದು ಬಂಗ್ಲೆಯತ್ತ ಕಳಿಸಿದರು.
ಶಿರಸಿಯ ಮುಂಡಗೇಸರದ ಹೆಗಡೆಯವರೊಬ್ಬರು ಮನೆಯಲ್ಲಿ ಯಾರಿಗೋ ತೀವ್ರ ಅನಾರೋಗ್ಯವೆಂದು ಪೇಟೆಗೆ ಬಂದವರು ಗಾಡಿ ಹೊಡೆದುಕೊಂಡು ಬೇಗ ಬೇಗ ಹೊರಟಿದ್ದರು. ಪೊಲೀಸರು ಅವರನ್ನು ತಡೆದರು, ಹೆಗಡೆಯವರು ತಮ್ಮ ಮನೆಯ ಅನಾರೋಗ್ಯದ ವಿಚಾರ ಪ್ರಸ್ತಾಪಿಸಿದರು. ಪೊಲೀಸರು ಕೇಳಲಿಲ್ಲ. ವಿಷಯ ತಿಳಿದು ಕಮಿಷನರ್ ಸ್ಥಳಕ್ಕೆ ಬಂದರು. ಅಷ್ಟರಲ್ಲಿ ಅಕದಾಸ ಗಣಪತಿ ಭಟ್, ಅಡಿಕೆ ವ್ಯಾಪಾರಿ ನಾರಾಯಣ ಹೆಗಡೆ ಹೂಡ್ಲಮನೆ, ವಾಸುದೇವ ಕೊಲ್ಲಾಳಿ ಮೊದಲಾದವರು ಘಟನಾ ಸ್ಥಳಕ್ಕೆ ಬಂದು ಪ್ರತಿಭಟನೆ ನಡೆಸಿದರು. ಬಿಟ್ಟೀಗಾಡಿ ನೀಡಲು ಪ್ರತಿಭಟಿಸುವುದು ರಾಜದ್ರೋಹವೆಂದು ಆಗ ಪ್ರಕರಣ ದಾಖಲಾಯ್ತು. ಪ್ರಕರಣವನ್ನು ಹೋರಾಟಗಾರರು ನ್ಯಾಯಾಲಯಕ್ಕೆ ಒಯ್ದರು. ವಿಚಾರಣೆ ಬಳಿಕ ‘ಬಿಟ್ಟೀಗಾಡಿ’ ವಿರುದ್ಧದ ಹೋರಾಟಕ್ಕೆ ಜಯ ದೊರೆಯಿತು. ಕಲೆಕ್ಟರ್ ಉಪಟಳದಿಂದ ತೊಂದರೆ ಅನುಭವಿಸುತ್ತಿದ್ದ ರೈತರು ತೀರ್ಪಿನಿಂದ ಖುಷಿಪಟ್ಟರು. ಬಯಲುಸೀಮೆಯ ಜನಗಳಂತೂ ಬಿಟ್ಟೀಗಾಡಿ ರದ್ದುಪಡಿಸಿದ ಅಕದಾಸ ಗಣಪತಿ ಭಟ್ಟರ ಸಾಹಸವನ್ನು ಮೆಚ್ಚಿ ಆ ಕಾಲಕ್ಕೆ ಲಾವಣಿ ಕಟ್ಟಿ ಹಾಡಿದರಂತೆ!
ನೆಲದ ಹೋರಾಟದ ಘಟನೆಗಳನ್ನು ಓದುತ್ತ ಹೋದರೆ ಮಣ್ಣಿನ ಮಹಾತ್ಮೆ ಅಚ್ಚರಿ ಮೂಡಿಸುತ್ತದೆ. ಸಿದ್ದಾಪುರ ಮಾವಿನಗುಂಡಿಯಲ್ಲಿ ತ್ಯಾಗಲಿಯ ಭುವನೇಶ್ವರಮ್ಮ 31 ದಿನ ಹಾಗೂ ಕಲ್ಲಾಳ ಲಕ್ಷ್ಮಮ್ಮ ಸತತ 21 ದಿನ ಉಪವಾಸ ಸತ್ಯಾಗ್ರಹ ನಡೆಸಿದ ಸಾಹಸಿ ಮಹಿಳೆಯರು. ಇಂಥ ಅದ್ಭುತ ಹೋರಾಟ ‘ಹಿಂದೂ’ ಪತ್ರಿಕೆಯ ಇಡೀ ಪುಟದಲ್ಲಿ ಕ್ರಿ.ಶ. 1932ರ ಜೂನ್ 3ರಂದು ಪ್ರಕಟವಾಯಿತು. ಅಲ್ಲಿಂದ ಕರನಿರಾಕರಣೆಯ ಕಗ್ಗಾಡಿನ ಹೋರಾಟ ದೇಶದ ನಾಯಕರನ್ನು ಸೆಳೆಯಿತು.
ನೆಲಮೂಲದ ಹೋರಾಟಕ್ಕೆ ಮಾದರಿ
ಕರನಿರಾಕರಣೆ ಚಳವಳಿಯಲ್ಲಿ ರಾಜ್ಯದ ಉತ್ತರ ಕನ್ನಡ ಜಿಲ್ಲೆ ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಹೋರಾಟ ಅನುಪಮವಾದುದು. ರಾಷ್ಟ್ರದ ಹಲವು ಮಹಾನಾಯಕರು ಇಲ್ಲಿಗೆ ಭೇಟಿ ನೀಡಿದ್ದರು. ಇದು ದಕ್ಷಿಣದ ಬಾರ್ಡೊಲಿ ಎಂದು ಹೆಸರಾಗಿದೆ. ಶಿರಸಿ, ಸಿದ್ದಾಪುರ, ಅಂಕೋಲಾ ಸೇರಿದಂತೆ ಇಲ್ಲಿನ ವಿವಿಧ ಪ್ರದೇಶ ಚಳವಳಿಯ ನೆಲ. ಇಡೀ ಕುಟುಂಬಕ್ಕೆ ಕುಟುಂಬವೇ ಹೋರಾಟಕ್ಕೆ ಹೋಗಿ ಜೈಲು ಶಿಕ್ಷೆ ಅನುಭವಿಸಿವೆ, ಸಾವಿರಾರು ಕುಟುಂಬಗಳು ಮನೆ, ಪಾತ್ರೆ, ಭೂಮಿ ಕಳಕೊಂಡಿವೆ.
ಇಪ್ಪತ್ತು ಗಿದ್ನ (70 ಕಿಲೊ) ಭತ್ತಕ್ಕೆ ಆಗ ಏಳು ರೂಪಾಯಿ ಬೆಲೆ. ಆದರೆ ಜನಕ್ಕೆ ಇಷ್ಟು ದುಡ್ಡು ಕೊಟ್ಟು ಖರೀದಿಸಲು ಹಣವಿರಲಿಲ್ಲ. ಭತ್ತದ ಬೇಸಾಯದ ಬನವಾಸಿ ಅಲ್ಲಿಂದ ಸುಮಾರು 45 ಕಿಲೊಮೀಟರ್ ದೂರ. ಮುಂಜಾನೆ ಅಲ್ಲಿಗೆ ಕಾಲ್ನಡಿಗೆಯಲ್ಲಿ ಹೋಗಿ ಭತ್ತ ಖರೀದಿಸಿ ತಲೆ ಹೊರೆಯಲ್ಲಿ ಹೊತ್ತು ನಡೆಯುತ್ತಿದ್ದರು. ಇದಕ್ಕೆ ಕಾರಣ ಈ ಪ್ರಮಾಣದ ಭತ್ತ ಬನವಾಸಿಯಲ್ಲಿ 6 ರೂಪಾಯಿಗೆ ಸಿಗುತ್ತಿತ್ತು! ಒಂದೇ ಒಂದು ರೂಪಾಯಿ ಉಳಿಸಲು ಬರೋಬ್ಬರಿ ತೊಂಬತ್ತು ಕಿಲೊಮೀಟರ್ ನಡೆಯುವ ಅನಿವಾರ್ಯ ಜನಕ್ಕೆ ಇತ್ತು ಎಂದು ಸ್ವಾತಂತ್ರ್ಯ ಹೋರಾಟಗಾರ ದಿ. ಮಗೇಗಾರ್ ನರಸಿಂಹ ಹೆಗಡೆ ನೆನಪಿಸಿಕೊಂಡಿದ್ದರು.
ಅಂಕೋಲಾ ಕರನಿರಾಕರಣೆ ಚಳವಳಿಯಲ್ಲಿ 400 ಖಾತೆದಾರರ 625 ಎಕರೆ ಭತ್ತದ ಗದ್ದೆ ಸರ್ಕಾರದ ಪಾಲಾಗಿತ್ತು. ಸಿದ್ದಾಪುರದಲ್ಲಿ 420 ಖಾತೆದಾರರ 1,400 ಎಕರೆ ಭೂಮಿ ಸರ್ಕಾರದ ವಶವಾಗಿತ್ತು. ಮನೆಯ ಹಿರಿಯರೆಲ್ಲ ಜೈಲಿಗೆ ಹೋದಾಗ ಮಕ್ಕಳು ಶಿವಮೊಗ್ಗ ಬಾಲಿಕಾಶ್ರಮ ಸೇರಿದರು. ವೀರ ನೆಲದ ವಿಶೇಷವೆಂದರೆ ಹಿರಿಯರು, ಮಹಿಳೆಯರು, ಮಕ್ಕಳು ಎಲ್ಲರೂ ಚಳವಳಿಯಲ್ಲಿ ಭಾಗಿಯಾದವರು. ರಾಷ್ಟ್ರ ರಾಜಕೀಯದ ವಿಷಯಗಳನ್ನು ಭಾಷಣ, ಕರಪತ್ರಗಳ ಮೂಲಕ ಅರಿತವರು ನೆಲಮೂಲದಲ್ಲಿ ಹೋರಾಟ ಸಂಘಟಿಸಿದ ರೀತಿಯೇ ಅನೂಹ್ಯವಾದುದು.
(ಸ್ವಾತಂತ್ರ್ಯ ಚಳವಳಿಯ ವಿವಿಧ ದಾಖಲೆ ಆಧರಿಸಿ ಈ ಲೇಖನ ಬರೆಯಲಾಗಿದೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.