ADVERTISEMENT

ಆ ವೃದ್ಧರ ಆರೈಕೆಗೆ ಈ ಕೈಗಳು...

ಗಣಪತಿ ಹೆಗಡೆ
Published 15 ಅಕ್ಟೋಬರ್ 2023, 0:30 IST
Last Updated 15 ಅಕ್ಟೋಬರ್ 2023, 0:30 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

‘ಇಬ್ಬರು ಗಂಡುಮಕ್ಕಳಲ್ಲಿ ಒಬ್ಬ ಊರಲ್ಲೇ ದಿನಗೂಲಿಗೆ ಇದ್ದಾನೆ. ಇನ್ನೊಬ್ಬ ಮಗ ಸಾವಿರಾರು ಕಿಲೋಮೀಟರ್ ದೂರದ ಇಸ್ರೇಲ್‍ನಲ್ಲಿ ವೃದ್ಧರೊಬ್ಬರ ಆರೈಕೆ ಮಾಡುತ್ತಾನೆ. ಕುಟುಂಬದ ಜವಾಬ್ದಾರಿ ಎಲ್ಲವೂ ಆತನದ್ದೇ. ಅಲ್ಲಿ 78 ವರ್ಷದ ವೃದ್ಧನಿಗೆ ಆತ ಸಕಾಲಕ್ಕೆ ಔಷಧ, ಊಟ ನೀಡಿದರೆ ಮಾತ್ರ ನಮಗೆ ಇಲ್ಲಿ ಸರಿಯಾದ ಸಮಯಕ್ಕೆ ಹಣ ಬರುತ್ತದೆ. ಆಗ ನಾವು ಔಷಧ ಕೊಳ್ಳಲು ಮತ್ತು ಮನೆಗೆ ಅಗತ್ಯ ವಸ್ತುಗಳಿಗಾಗಿ ಖರ್ಚು ಮಾಡಲು ಸಾಧ್ಯವಾಗುತ್ತದೆ’–ಹೀಗೆ ಹೇಳುತ್ತಲೇ, ಪ್ರತಿ ಮಾತಿನ ನಡುವೆ ಆಗಾಗ್ಗೆ ಕೆಮ್ಮುತ್ತ, ಕೊಂಚ ಸುಧಾರಿಸಿಕೊಳ್ಳುತ್ತ ಕುಟುಂಬದ ಪರಿಸ್ಥಿತಿಯನ್ನು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮೀಪದ ಗ್ರಾಮವೊಂದರ ವೃದ್ಧರು ಬಿಚ್ಚಿಡತೊಡಗಿದರು.

‘ನನಗೂ ವಯಸ್ಸು 75 ದಾಟಿದೆ. ಇಬ್ಬರು ಹೆಣ್ಣುಮಕ್ಕಳ ಮದುವೆಗೆ ಲಕ್ಷಾಂತರ ರೂಪಾಯಿ ಸಾಲ ಮಾಡಿದೆವು. ಒಬ್ಬ ಮಗ ನರ್ಸಿಂಗ್ ಶಿಕ್ಷಣ ಪಡೆದ. ಆತನೇ ಉದ್ಯೋಗಕ್ಕೆಂದು ಮೂರು ವರ್ಷಗಳ ಹಿಂದೆ ಇಸ್ರೇಲ್‍ಗೆ ತೆರಳಿದ್ದು. ‘ತಿಂಗಳಿಗೆ ಲಕ್ಷಕ್ಕೂ ಹೆಚ್ಚು ಸಂಬಳ ಸಿಗುತ್ತೆ’ ಎನ್ನುವ ಆತನಿಂದ ತಿಂಗಳ ಖರ್ಚಿಗೆ ಹಣ ಬರುತ್ತೆ. ಅದರಿಂದಲೇ ಮದುವೆಯ ಸಾಲ ತೀರಿಸುತ್ತಿದ್ದೇವೆ’ ಎನ್ನುವಾಗ ಮುಖದಲ್ಲಿ ಕೊಂಚ ಸಮಾಧಾನದ ಭಾವ ಕಂಡಿತು.

‘ಅಲ್ಲಿ ನನ್ನ ಮಗ ವೃದ್ಧ ವ್ಯಕ್ತಿಯನ್ನು ಪ್ರತಿ ಕ್ಷಣವೂ ಕಾಳಜಿಯಿಂದ ನೋಡಿಕೊಳ್ಳುತ್ತಾನೆ. ಯಾವುದೇ ಸಂಕೋಚವಿಲ್ಲದೆ ಎಲ್ಲಾ ರೀತಿಯ ಸೇವೆ ಮಾಡುತ್ತಾನೆ. ಆದರೆ, ನನಗಿಲ್ಲಿ ಜ್ವರ ಬಂದರೆ ಪಕ್ಕದ ಮನೆಯವರ ನೆರವು ಪಡೆಯಬೇಕು. ಆರು ಕಿ.ಮೀ. ದೂರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಟೊರಿಕ್ಷಾದಲ್ಲಿ ಹೋಗಬೇಕು’ ಎಂದು ಹೇಳುವಷ್ಟರಲ್ಲಿ ಕಣ್ಣಂಚಿನಲ್ಲಿ ನೀರಿತ್ತು. ಅದುಮಿಟ್ಟುಕೊಂಡರೂ ಸಂಕಟ ಉಮ್ಮಳಿಸಿ ಬರುತ್ತಿತ್ತು.

ADVERTISEMENT

ನರ್ಸಿಂಗ್ ಓದಿದವರಿಗೆ ಭಾರತದಲ್ಲಿ ದೊಡ್ಡ ಮೊತ್ತದ ಸಂಬಳ ಸಿಗದು ಎಂಬ ಕಾರಣಕ್ಕೆ ಕುಟುಂಬದಿಂದ ದೂರವಾಗಿ ಕಿರಣ್ ವಿದೇಶಕ್ಕೆ ತೆರಳಿದರು. ಅವರಿಗೆ ಅದು ಅನಿವಾರ್ಯವೂ ಆಗಿತ್ತು. ಈಗ ಇಸ್ರೇಲ್‌ನಲ್ಲಿ ಯುದ್ಧದ ವಾತಾವರಣವಿದೆ ಎಂದು ಗೊತ್ತಾಗಿ ಕುಟುಂಬದವರಲ್ಲಿ ಆತಂಕ ಮಡುಗಟ್ಟಿದೆ. ಪ್ರತಿದಿನ ಅವರಿಗೆ ಫೋನಾಯಿಸಿ ಯೋಗಕ್ಷೇಮ ವಿಚಾರಿಸುತ್ತಾರೆ. ಆದರೆ, ಕಿರಣ್ ಮಾತ್ರ ನಿರಾಳವಾಗಿ ಹೇಳುವುದು ಇಷ್ಟೇ: ‘ಇಲ್ಲಿ ಯುದ್ಧದ ಭಯ ಇಲ್ಲ. ದಾಳಿ, ಪ್ರತಿ ದಾಳಿ ಎಲ್ಲವೂ ಇಲ್ಲಿ ತುಂಬಾ ಕಾಮನ್. ನೀವು ಯಾವುದಕ್ಕೂ ಆತಂಕಗೊಳ್ಳಬೇಡಿ.’

ಇದು ಒಂದು ಕುಟುಂಬದ ಕಥೆ–ವ್ಯಥೆಯಲ್ಲ. ಉದ್ಯೋಗಕ್ಕಾಗಿ ಇಸ್ರೇಲ್‍ನಲ್ಲಿ ವಾಸಿಸುತ್ತಿರುವ ಸಾವಿರಾರು ಭಾರತೀಯರ ವಾಸ್ತವವೂ, ಅಸಹಾಯಕವೂ ಆದ ಸ್ಥಿತಿ.

ಭಾರತದಲ್ಲಿ ಯುವಕರು ನಗರಪ್ರದೇಶಕ್ಕೆ ವಲಸೆ ಹೋಗುತ್ತಿರುವುದರಿಂದ ಗ್ರಾಮಗಳು ಬಿಕೋ ಎನ್ನುತ್ತಿವೆ. ಇಳಿ ವಯಸ್ಸಿನ ತಂದೆ–ತಾಯಂದಿರು ಮನೆಗಳಲ್ಲಿ ತಮ್ಮಷ್ಟಕ್ಕೆ ತಾವು ವಾಸವಿದ್ದಾರೆ. ಮಹಾನಗರಗಳಲ್ಲಿ ವೃದ್ಧಾಶ್ರಮಗಳು ಇವೆ. ಕೆಲವು ಕಡೆ ಹೈಟೆಕ್ ಸೌಲಭ್ಯಗಳಿವೆ. ಎಷ್ಟೋ ಗ್ರಾಮಗಳನ್ನು ನೋಡಿದರೆ ಸಹಜವಾಗಿಯೇ ಯಾವುದೇ ಸೌಕರ್ಯವಿಲ್ಲದ ವೃದ್ಧಾಶ್ರಮಗಳಾಗಿ ಮಾರ್ಪಡುತ್ತಿರುವುದು ಎದ್ದುಕಾಣುತ್ತದೆ.

‘ಇಸ್ರೇಲ್ ದೇಶದಲ್ಲಿ ಭಾರತಕ್ಕಿಂತ ವಿಭಿನ್ನ ವ್ಯವಸ್ಥೆ ಇದೆ. ಅಲ್ಲಿನ ಕೌಟುಂಬಿಕ ವ್ಯವಸ್ಥೆಯೇ ವಿಚಿತ್ರ. ಅಲ್ಲಿ ವಯಸ್ಸಿಗೆ ಬಂದ ನಂತರ ಮಕ್ಕಳು ಪಾಲಕರಿಂದ ದೂರ ಉಳಿಯುತ್ತಾರೆ. 60 ವರ್ಷ ದಾಟಿದ ಅಶಕ್ತರನ್ನು ಕಾಳಜಿಯಿಂದ ನೋಡಿಕೊಳ್ಳುವ ಹೊಣೆಯನ್ನು ಅಲ್ಲಿನ ಸರ್ಕಾರ ವಹಿಸಿಕೊಳ್ಳುತ್ತದೆ. ಇದರಿಂದ ನಮಗೂ ಕೆಲಸ ಸಿಗುತ್ತಿದೆ’–ಇಸ್ರೇಲ್ ರಾಜಧಾನಿ ಟೆಲ್ ಅವೀವ್ ನಗರದಲ್ಲಿ ನೆಲೆಸಿರುವ ಕುಮಟಾದ ವಿಲ್ಫ್ರೆಡ್ ಅಲ್ಮೆಡಾ ಅಲ್ಲಿನ ವಸ್ತುಸ್ಥಿತಿಯ ಮೇಲೆ ಬೆಳಕು ಚೆಲ್ಲಿದ್ದು ಹೀಗೆ.

ಅವರು ಮಾತನ್ನು ಮುಂದುವರಿಸಿ ಹೇಳಿದ್ದಿಷ್ಟು: ‘‘ಭಾರತೀಯರಿಗೆ ಇಸ್ರೇಲ್‍ನಲ್ಲಿ ‘ಕೇರ್ ಟೇಕರ್’ ಉದ್ಯೋಗ ಸಿಗುವುದು ಸುಲಭ. ಆದರೆ, ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು. ಒಮ್ಮೆ ಕೆಲಸ ಪಡೆದು, ಇಸ್ರೇಲ್ ನೆಲದಲ್ಲಿ ಬಂದಿಳಿದರೆ ತಿಂಗಳಿಗೆ ಲಕ್ಷಕ್ಕೂ ಹೆಚ್ಚು ಮೊತ್ತದ ಸಂಬಳ ಪಡೆಯುವುದು ನಿಶ್ಚಿತ. ಆರಂಭದ ಕೆಲವು ದಿನ ಇಲ್ಲಿನ ವ್ಯವಸ್ಥೆ, ಭಾಷೆ, ಜನಜೀವನಕ್ಕೆ ಹೊಂದಿಕೊಳ್ಳುವುದು ಕಷ್ಟ. ಒಮ್ಮೆ ಹೊಂದಿಕೊಂಡುಬಿಟ್ಟರೆ ಇಲ್ಲಿನ ಜೀವನ ಸುಲಭ.’’

‘ಕೇರ್ ಟೇಕರ್ ಹುದ್ದೆಗೆ ಆಯ್ಕೆಯಾಗುವವರಿಗೆ ಈ ಹಿಂದೆಲ್ಲ ಕಠಿಣ ನಿಯಮಗಳು ಇರಲಿಲ್ಲ. ನಿರ್ದಿಷ್ಟ ಶೈಕ್ಷಣಿಕ ಮಾನದಂಡವೂ ಇರಲಿಲ್ಲ. ಇದೇ ಕಾರಣಕ್ಕೆ ದಶಕಗಳ ಹಿಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿಗೆ ವಲಸೆ ಬಂದರು. ಆದರೆ ಈಗ ಕೇರ್ ಟೇಕರ್ ಹುದ್ದೆಗೆ ನರ್ಸಿಂಗ್ ಶಿಕ್ಷಣ ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ಉದ್ಯೋಗ ಒದಗಿಸಿಕೊಡುವ ಖಾಸಗಿ ಏಜೆನ್ಸಿಗಳ ಹಣದ ಬೇಡಿಕೆಯೂ ಹೆಚ್ಚಾಗಿದೆ. ಇದೇಕಾರಣಕ್ಕೆ ಇಸ್ರೇಲ್‍ಗೆ ಬರುವುದು ದುಬಾರಿಯಾಗಿದೆ’ ಎಂದು ಇಸ್ರೇಲ್‌ನ
ನೇತನ್ಯಾ ಎಂಬ ನಗರದಲ್ಲಿ ವಾಸ ಇರುವ ಕಾರವಾರದ ರೇಮಿ ಇನ್ನೊಂದು ಮಾಹಿತಿಯನ್ನು ಕೊಟ್ಟರು. 

ಅಲ್ಲಿಯೇ ಇರುವ ಪರಶುರಾಮ ಮಂಗೇಶ್ವರ್ ಹೇಳುವ ಪ್ರಕಾರ, ಆರೈಕೆ ಬಯಸಿರುವ ವೃದ್ಧರ ಮನೆಯಲ್ಲೇ ಕೇರ್‌ ಟೇಕರ್‌ಗಳು ಇರಬೇಕು. ನಗರ ಪ್ರದೇಶದಲ್ಲಾದರೆ ಪ್ರತ್ಯೇಕ ಬಾಡಿಗೆ ಮನೆ ಪಡೆಯಬೇಕು. ಗ್ರಾಮಗಳಲ್ಲಿ ವೃದ್ಧರ ಮನೆಯಲ್ಲೇ ಒಂದು ಕೊಠಡಿ ಕೊಡುತ್ತಾರೆ. ಇಡೀ ದಿನ ಅವರ ಕಾಳಜಿಯ ಹೊರತಾಗಿ ಬೇರೆ ಯಾವುದೇ ಕೆಲಸ ಇರುವುದಿಲ್ಲ. ಹಿಬ್ರೂ ಭಾಷೆ ಕಲಿತು, ಇಸ್ರೇಲ್ ಆಹಾರ ಪದ್ಧತಿಗೆ ಹೊಂದಿಕೊಳ್ಳುವುದು ಮಾತ್ರ ದೊಡ್ಡ ಸವಾಲು.

ಆಸಕ್ತಿಕರ ಸಂಗತಿಯೆಂದರೆ, ಇಸ್ರೇಲಿಗರಲ್ಲಿ ದರ್ಪ, ದಬ್ಬಾಳಿಕೆ, ಅಹಂಕಾರದ ಮನೋಭಾವವಿಲ್ಲ. ಕೇರ್ ಟೇಕರ್‌ಗಳು ನಾಲ್ಕು ವರ್ಷ ಮೂರು ತಿಂಗಳವರೆಗೆ ಇಸ್ರೇಲ್‍ನಲ್ಲಿ ನೆಲೆ ನಿಲ್ಲಬೇಕು ಎಂಬ ನಿಯಮ ಪಾಲಿಸುವುದು ಕಡ್ಡಾಯವಿದೆ. ಚೆನ್ನಾಗಿ ಆರೈಕೆ ಮಾಡಿದರೆ ವೃದ್ಧರು ಸರ್ಕಾರವನ್ನು ಕೇಳಿಕೊಂಡು, ಆಯಾ ಕೇರ್‌ಟೇಕರ್‌ಗಳ ಕೆಲಸದ ಅವಧಿಯನ್ನು ವಿಸ್ತರಿಸುತ್ತಾರೆ. ಭಾರತೀಯ ಜೀವನಶೈಲಿ, ಪದ್ಧತಿಗಳ ಆಚರಣೆಗೂ ಇಲ್ಲಿ ಅವಕಾಶವಿದೆ. ಭಾರತೀಯ ಸ್ನೇಹಿತರೆಲ್ಲ ಸೇರಿ ಆಗಾಗ್ಗೆ ಸ್ನೇಹಕೂಟ ಆಯೋಜಿಸುತ್ತಾರೆ.

ದೇಶ, ಧರ್ಮಕ್ಕೆ ಆದ್ಯತೆ!

ಇಸ್ರೇಲ್‍ನ ಕಾರ್ಮಿಕ ಕಾಯ್ದೆಗಳು ಕಟ್ಟುನಿಟ್ಟು. ಭಾರತ, ನೇಪಾಳ, ಫಿಲಿಪ್ಪೀನ್ಸ್ ದೇಶದವರನ್ನು ಮಾತ್ರ ಕೇರ್ ಟೇಕರ್ ಹುದ್ದೆಗೆ ಪರಿಗಣಿಸಲಾಗುತ್ತದೆ. ಅದರಲ್ಲೂ ಹಿಂದೂ, ಕ್ರೈಸ್ತ, ಬೌದ್ಧ ಧರ್ಮೀಯರಿಗೆ ಆದ್ಯತೆ. ಮುಸ್ಲಿಂ ಸಮುದಾಯದವರಿಗೆ ಈ ಉದ್ಯೋಗ ಕೊಡಲು ಇಸ್ರೇಲ್‌ನಲ್ಲಿ ವಿರೋಧವಿದೆ. ಜಪಾನ್, ತೈವಾನ್ ಸೇರಿ ಕೆಲ ಆಯ್ದ ದೇಶಗಳ ಜನರಿಗೆ ತಾಂತ್ರಿಕ ಹುದ್ದೆಗಳು ಸಿಗುತ್ತವೆ.

ಇಸ್ರೇಲ್ ತನ್ನ ದೇಶದ ಪ್ರಜೆಗಳಿಗೆ ಅಲ್ಲದೇ ಕೆಲಸ ಮಾಡುವ ವಿದೇಶಿ ಪ್ರಜೆಗಳ ಸುರಕ್ಷತೆಗೂ ವಿಶೇಷ ಆದ್ಯತೆ ಕೊಡುತ್ತದೆ. ಈ ನೆಲದಲ್ಲಿ ಕಟ್ಟಲಾಗುವ ಪ್ರತಿ ಕಟ್ಟಡದಲ್ಲಿ ಬಾಂಬ್, ಕ್ಷಿಪಣಿ ದಾಳಿ ತಡೆಯುವ ಭದ್ರತಾ ಕೊಠಡಿ (ಬಂಕರ್) ನಿರ್ಮಿಸುವುದು ಕಡ್ಡಾಯ. ಬಹುಮಹಡಿ ಕಟ್ಟಡಗಳಲ್ಲಾದರೆ ನೆಲಮಾಳಿಗೆಯಲ್ಲಿ, ಹಳ್ಳಿಗಳಲ್ಲಿರುವ ವಿಲ್ಲಾ ಮಾದರಿಯ ಮನೆಗಳಲ್ಲಿ ಆದರೆ ಮನೆ ಪಕ್ಕದಲ್ಲಿ ಪ್ರತ್ಯೇಕ ಕೊಠಡಿ ನಿರ್ಮಿಸಬೇಕು. ಲೋಹಗಳಿಂದ ತಯಾರಾದ ಕೊಠಡಿಯ ಮೇಲೆ ಬಾಂಬ್ ಬಿದ್ದರೂ ಛಿದ್ರಗೊಳ್ಳದು. ದಾಳಿಯ ಸನ್ನಿವೇಶಗಳು ಎದುರಾದರೆ ಈ ಕೊಠಡಿಯಲ್ಲಿ ರಕ್ಷಣೆ ಪಡೆಯುವಂತೆ ಅಲ್ಲಿನ ಸರ್ಕಾರ ಸೂಚನೆ ನೀಡುತ್ತದೆ.

‘ಗಡಿ ಭಾಗದಲ್ಲಿ ಮಾತ್ರ ಯುದ್ಧದ ಸನ್ನಿವೇಶವಿದೆ. ಇಸ್ರೇಲ್‍ನ ಒಳಭಾಗದ ನಗರ, ಹಳ್ಳಿಗಳು ಸುರಕ್ಷಿತವಾಗಿವೆ. ಆದರೂ ಎಲ್ಲೆಡೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕ್ಷಿಪಣಿಗಳು ಎರಗಿಬಂದರೆ ತಕ್ಷಣ ಸೈರನ್ ಮೊಳಗುತ್ತದೆ. ಆಗ ಪ್ರತಿಯೊಬ್ಬರೂ ಆಯಾ ಕಟ್ಟಡದ ಬಂಕರ್‌ಗಳಿಗೆ ಹೋಗಿ ಕೂರಬೇಕು. ಸೂಚನೆ ಪಾಲಿಸದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ’ ಎನ್ನುವ ಕುಮಟಾದ ದೀಪಕ್ ಪಿಂಟೋ ಸ್ವಲ್ಪ ಆತಂಕದ ದನಿಯನ್ನು ದಾಟಿಸಿದರು.

ಇಸ್ರೇಲಿಗಳಿಂದ ಕಲಿಯುವುದು ಸಾಕಷ್ಟಿದೆ

‘ಇಸ್ರೇಲ್ ದೇಶದಲ್ಲಿ ಪ್ರತಿ ಶನಿವಾರ ಶಬ್ಬತ್ ಆಚರಿಸಲಾಗುತ್ತದೆ. ಯೆಹೂದಿ ಸಮುದಾಯದ ಪಾಲಿಗೆ ಇದು ಪವಿತ್ರ ದಿನ. ಅಂದು ಇಡೀ ಇಸ್ರೇಲ್‍ಗೆ ರಜೆ. ನಮಗೂ ರಜೆ ನೀಡುತ್ತಾರೆ. ಆದರೆ ಈ ದಿನವೂ ನಾವು ವೃದ್ಧರನ್ನು ಆರೈಕೆ ಮಾಡಿದರೆ ಎರಡು ಪಟ್ಟು ವೇತನ ಸಿಗುತ್ತದೆ. ಶಬ್ಬತ್ ವೇಳೆ ಯೆಹೂದಿಗಳು ಪವಿತ್ರಗ್ರಂಥದ ಪಠಣದಲ್ಲಿ ತೊಡಗುತ್ತಾರೆ. ಪ್ರತಿ ಇಸ್ರೇಲಿ ಪ್ರಜೆಯ ಮನೆಯಲ್ಲಿ ಪುಸ್ತಕಗಳ ಭಂಡಾರವೇ ಇದೆ. ಬಿಡುವಿನ ವೇಳೆಯಲ್ಲಿ ಟಿವಿ, ಮೊಬೈಲ್ ಬದಲು ಅವರು ಪುಸ್ತಕ ಓದಲು ಇಷ್ಟಪಡುತ್ತಾರೆ. ಸಮಯ ಪರಿಪಾಲನೆಗೆ ಅವರು ನೀಡುವಷ್ಟು ಮಹತ್ವವನ್ನು ಬೇರೊಬ್ಬರು ನೀಡಲಿಕ್ಕಿಲ್ಲ’ ಎಂದು 14 ವರ್ಷದಿಂದ ಇಸ್ರೇಲ್‍ನಲ್ಲಿರುವ ದೀಪಕ್ ಪಿಂಟೋ ಇನ್ನೊಂದು ಸಂಗತಿಯ ಮೇಲೆ ಬೆಳಕು ಚೆಲ್ಲಿದರು.

‘18 ವರ್ಷ ತುಂಬಿದ ಬಳಿಕ ಇಲ್ಲಿನ ಪ್ರಜೆ ಸೈನ್ಯ ಸೇರುವುದು ಕಡ್ಡಾಯ. ಯುವತಿಯರಿಗೆ ಕನಿಷ್ಠ ಮೂರು, ಯುವಕರಿಗೆ ಕನಿಷ್ಠ ಐದು ವರ್ಷ ಸೈನ್ಯದಲ್ಲಿ ಕೆಲಸ ಮಾಡಬೇಕೆಂಬ ನಿಯಮವಿದೆ. ಸೈನ್ಯದಲ್ಲಿ ಕೆಲಸ ಮಾಡುತ್ತಲೇ ಶಿಕ್ಷಣ ಪಡೆಯುತ್ತಾರೆ’ ಎಂದು ಮಾಹಿತಿ ಹಂಚಿಕೊಂಡರು.

ಮರಳುವ ಆತಂಕ...ತುಟಿ ಬಿಚ್ಚದ ಇಸ್ರೇಲಿ ಕನ್ನಡಿಗರು

ಇಸ್ರೇಲ್‍ನಲ್ಲಿ ಯುದ್ಧದ ಸನ್ನಿವೇಶ ಇರುವುದರಿಂದ ಸಹಜವಾಗಿ ಯಾವುದೇ ಕ್ಷಣದಲ್ಲಿ ದಾಳಿ ತೀವ್ರಗೊಳ್ಳಬಹುದು ಎಂದು ದೂರದ ಭಾರತದಲ್ಲಿರುವ ಅನೇಕರು ಆತಂಕಗೊಳ್ಳುತ್ತಿದ್ದಾರೆ. ಆದರೆ ಇಸ್ರೇಲ್‌ನಲ್ಲಿ ಹಲವು ವರ್ಷಗಳಿಂದ ಇರುವ ತಮಗೆ ದಾಳಿಯ ವಿಚಾರ ಭಯ ಹುಟ್ಟಿಸದು. ಬಂಡುಕೋರರ ದಾಳಿಗಿಂತ ಏಕಾಏಕಿ ಭಾರತಕ್ಕೆ ಮರಳಿ ಕರೆಯಿಸಿಕೊಂಡರೆ ಗತಿ ಏನು ಎಂದು ಮಂಗಳೂರಿನ ಯುವತಿಯೊಬ್ಬರು ಆತಂಕಭರಿತ ದನಿಯಲ್ಲಿ ಹೇಳಿಕೊಂಡರು.

‘ಕೇರ್ ಟೇಕರ್ ಉದ್ಯೋಗ ಪಡೆಯಲು ₹30–35 ಲಕ್ಷ ಖರ್ಚು ಮಾಡಿದ್ದೇವೆ. ನಮ್ಮ ಕುಟುಂಬದವರು ಸಾಲ ಮಾಡಿ ನಮಗೆ ಇಲ್ಲಿಗೆ ಕಳುಹಿಸಿದ್ದಾರೆ. ಕುಟುಂಬದ ನಿರ್ವಹಣೆಗೆ ಹಣ ನೀಡುವ ಜತೆಗೆ ಸಾಲದ ಕಂತನ್ನೂ ಭರಿಸಬೇಕು. ಯುದ್ಧದ ಭೀತಿ ಹುಟ್ಟಿಸಿ ಉದ್ಯೋಗ ಕಸಿದರೆ ಹೊಟ್ಟೆ ಪಾಡಿಗೆ ಏನು ಮಾಡಬೇಕು?’ ಎಂದು ದುಗುಡ ತೋಡಿಕೊಂಡರು.

ಆರಂಭದಲ್ಲಿ ಇಸ್ರೇಲ್ ದೇಶದಲ್ಲಿನ ಸ್ಥಿಗತಿ ವಿವರಿಸುತ್ತಿದ್ದ, ವಾಟ್ಸ್‌ ಆ್ಯಪ್ ಮೂಲಕ ಸಂಪರ್ಕದಲ್ಲಿದ್ದ ಇಸ್ರೇಲ್‍ನ ವಿವಿಧ ಭಾಗಗಳಲ್ಲಿ ನೆಲೆ ನಿಂತ ಹತ್ತಾರು ಕನ್ನಡಿಗರು ಈಗೀಗ ಮಾಧ್ಯಮಗಳ ಜತೆ ಮಾತನಾಡುವುದನ್ನೂ ನಿಲ್ಲಿಸಿದ್ದಾರೆ. ಒಂದು ವೇಳೆ ಪತ್ರಿಕೆ ಸೇರಿ ಮಾಧ್ಯಮದವರ ಜೊತೆ ಮಾತನಾಡಿದರೆ, ಭಾರತದವರು ತಮ್ಮ ವಿಳಾಸವನ್ನು ಪಡೆದು ಸಂಪರ್ಕಿಸಿ ವಾಪಸ್ ಕರೆಸಿಕೊಂಡಾರು ಎಂಬ ಭಯವಿದೆ.

‘ನಾವಿಲ್ಲಿ ಚೆನ್ನಾಗಿದ್ದೇವೆ. ಸುರಕ್ಷಿತವಾಗಿ ಇರುತ್ತೇವೆ ಎಂಬ ನಂಬಿಕೆ ಇದೆ. ಇಸ್ರೇಲ್‍ನ ಕಠಿಣ ಸಮಯದಲ್ಲಿ ನಾವು ಅವರೊಂದಿಗೆ ಇರಲಿದ್ದೇವೆ. ನಮ್ಮ ಕುಟುಂಬಗಳು ಆತಂಕಗೊಳ್ಳುವಂತೆ ಯಾವುದೇ ವರದಿ ಮಾಡದಿರಿ’ ಎಂದು ಅಲ್ಲಿನ ಬಹುತೇಕ ಕನ್ನಡಿಗರು ವಾಟ್ಸ್ ಆ್ಯಪ್‌ನಲ್ಲಿ ಕೈಮುಗಿಯುವ ಎಮೋಜಿ ಕಳಿಸಿ ಸುಮ್ಮನಾಗಿದ್ದಾರೆ.

ಮರಳುವ ಆತಂಕ...

ತುಟಿ ಬಿಚ್ಚದ ಇಸ್ರೇಲಿ ಕನ್ನಡಿಗರು ಇಸ್ರೇಲ್‍ನಲ್ಲಿ ಯುದ್ಧದ ಸನ್ನಿವೇಶ ಇರುವುದರಿಂದ ಸಹಜವಾಗಿ ಯಾವುದೇ ಕ್ಷಣದಲ್ಲಿ ದಾಳಿ ತೀವ್ರಗೊಳ್ಳಬಹುದು ಎಂದು ದೂರದ ಭಾರತದಲ್ಲಿರುವ ಅನೇಕರು ಆತಂಕಗೊಳ್ಳುತ್ತಿದ್ದಾರೆ. ಆದರೆ ಇಸ್ರೇಲ್‌ನಲ್ಲಿ ಹಲವು ವರ್ಷಗಳಿಂದ ಇರುವ ತಮಗೆ ದಾಳಿಯ ವಿಚಾರ ಭಯ ಹುಟ್ಟಿಸದು. ಬಂಡುಕೋರರ ದಾಳಿಗಿಂತ ಏಕಾಏಕಿ ಭಾರತಕ್ಕೆ ಮರಳಿ ಕರೆಯಿಸಿಕೊಂಡರೆ ಗತಿ ಏನು ಎಂದು ಮಂಗಳೂರಿನ ಯುವತಿಯೊಬ್ಬರು ಆತಂಕಭರಿತ ದನಿಯಲ್ಲಿ ಹೇಳಿಕೊಂಡರು.

‘ಕೇರ್ ಟೇಕರ್ ಉದ್ಯೋಗ ಪಡೆಯಲು ₹30–35 ಲಕ್ಷ ಖರ್ಚು ಮಾಡಿದ್ದೇವೆ. ನಮ್ಮ ಕುಟುಂಬದವರು ಸಾಲ ಮಾಡಿ ನಮಗೆ ಇಲ್ಲಿಗೆ ಕಳುಹಿಸಿದ್ದಾರೆ. ಕುಟುಂಬದ ನಿರ್ವಹಣೆಗೆ ಹಣ ನೀಡುವ ಜತೆಗೆ ಸಾಲದ ಕಂತನ್ನೂ ಭರಿಸಬೇಕು. ಯುದ್ಧದ ಭೀತಿ ಹುಟ್ಟಿಸಿ ಉದ್ಯೋಗ ಕಸಿದರೆ ಹೊಟ್ಟೆ ಪಾಡಿಗೆ ಏನು ಮಾಡಬೇಕು?’ ಎಂದು ದುಗುಡ ತೋಡಿಕೊಂಡರು. ಆರಂಭದಲ್ಲಿ ಇಸ್ರೇಲ್ ದೇಶದಲ್ಲಿನ ಸ್ಥಿಗತಿ ವಿವರಿಸುತ್ತಿದ್ದ ವಾಟ್ಸ್‌ ಆ್ಯಪ್ ಮೂಲಕ ಸಂಪರ್ಕದಲ್ಲಿದ್ದ ಇಸ್ರೇಲ್‍ನ ವಿವಿಧ ಭಾಗಗಳಲ್ಲಿ ನೆಲೆ ನಿಂತ ಹತ್ತಾರು ಕನ್ನಡಿಗರು ಈಗೀಗ ಮಾಧ್ಯಮಗಳ ಜತೆ ಮಾತನಾಡುವುದನ್ನೂ ನಿಲ್ಲಿಸಿದ್ದಾರೆ. ಒಂದು ವೇಳೆ ಪತ್ರಿಕೆ ಸೇರಿ ಮಾಧ್ಯಮದವರ ಜೊತೆ ಮಾತನಾಡಿದರೆ ಭಾರತದವರು ತಮ್ಮ ವಿಳಾಸವನ್ನು ಪಡೆದು ಸಂಪರ್ಕಿಸಿ ವಾಪಸ್ ಕರೆಸಿಕೊಂಡಾರು ಎಂಬ ಭಯವಿದೆ. ‘ನಾವಿಲ್ಲಿ ಚೆನ್ನಾಗಿದ್ದೇವೆ. ಸುರಕ್ಷಿತವಾಗಿ ಇರುತ್ತೇವೆ ಎಂಬ ನಂಬಿಕೆ ಇದೆ. ಇಸ್ರೇಲ್‍ನ ಕಠಿಣ ಸಮಯದಲ್ಲಿ ನಾವು ಅವರೊಂದಿಗೆ ಇರಲಿದ್ದೇವೆ. ನಮ್ಮ ಕುಟುಂಬಗಳು ಆತಂಕಗೊಳ್ಳುವಂತೆ ಯಾವುದೇ ವರದಿ ಮಾಡದಿರಿ’ ಎಂದು ಅಲ್ಲಿನ ಬಹುತೇಕ ಕನ್ನಡಿಗರು ವಾಟ್ಸ್ ಆ್ಯಪ್‌ನಲ್ಲಿ ಕೈಮುಗಿಯುವ ಎಮೋಜಿ ಕಳಿಸಿ ಸುಮ್ಮನಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.