ರಾತ್ರಿಯ ಆಕಾಶವನ್ನು ಜನರು ಆಸ್ವಾದಿಸುತ್ತಿದ್ದ ಕಾಲವೊಂದಿತ್ತು. ಜನ ತಲೆ ಎತ್ತಿ ನೋಡಿ ನಕ್ಷತ್ರಗಳ ಮಧ್ಯೆ ಕಲ್ಪನಾ ವಿಹಾರ ನಡೆಸುತ್ತಿದ್ದುದ್ದೂ ಉಂಟು. ಆದ್ದರಿಂದಲೇ ಅವು ಕಥನ ಕಾವ್ಯಗಳಲ್ಲಿ, ಕಾದಂಬರಿಗಳಲ್ಲಿ ಪ್ರವೇಶ ಪಡೆಯುತ್ತಿದ್ದವು.
ಹೀಗೊಮ್ಮೆ ನಕ್ಷತ್ರವನ್ನು ಕಂಡದ್ದು, ಆಮೇಲೆ ಬರೆದಿಟ್ಟಿದ್ದು ಓದಲು ಸಿಕ್ಕರೆ, ಅದು ಸ್ವಾತಿ ಎಂದೋ, ರೋಹಿಣಿ ಎಂದೋ ಆಗಿದ್ದರೆ ಹೊಸತೇನೂ ಅನ್ನಿಸುವುದಿಲ್ಲ. ಆದರೆ ಪರಿಚಿತವಲ್ಲದ ನಕ್ಷತ್ರವೊಂದು ಜಾಗ ಗಿಟ್ಟಿಸಿಕೊಂಡಿದ್ದರೆ ಅದು ಹೇಗೆ ಎಂಬ ಪ್ರಶ್ನೆ ಏಳುತ್ತದೆ.
ವಿಖ್ಯಾತ ಖಗೋಳಜ್ಞ ಟಿಕೋ ಬ್ರಾಹೆಗೆ 1572ರಲ್ಲಿ ಉದ್ಭವಿಸಿದ್ದೂ ಇಂತಹುದೇ ಒಂದು ಪ್ರಶ್ನೆ. ಉತ್ತರ ದಿಕ್ಕಿನಲ್ಲೊಂದು ಉಜ್ವಲ ನಕ್ಷತ್ರ ಕಂಡಾಗ, ಶುಕ್ರ ಗ್ರಹ ಅಲ್ಲಿಗೆ ಹೇಗೆ ಹೋಗಲು ಸಾಧ್ಯ? ಅಥವಾ ಧೂಮಕೇತು ಇರಬಹುದು ಎಂದೋ ತಲೆ ಕೆಡಿಸಿಕೊಳ್ಳಬೇಕಾಯಿತು. ಅವೆರಡೂ ಅಲ್ಲ ಎಂದಾದಾಗ ಅದೊಂದು ಹೊಸ ನಕ್ಷತ್ರ ಎಂದು ಘೋಷಿಸಿದ್ದಾಯಿತು. ನಕ್ಷತ್ರಗಳಿಗೆ ಹುಟ್ಟಿಲ್ಲ; ಸಾವೂ ಇಲ್ಲ ಎಂಬ ಅರಿಸ್ಟಾಟಲ್‍ನ ತತ್ವಕ್ಕೆ ಇದು ವಿರೋಧವಾಗಿದ್ದರಿಂದ ಸಾಕಷ್ಟು ಬಿಸಿ ಬಿಸಿ ಚರ್ಚೆಗಳೇ ನಡೆದವು.
ಇದಾದ ಹನ್ನೆರಡು ವರ್ಷಕ್ಕೆ ಇನ್ನೊಂದು ಹೊಸ ನಕ್ಷತ್ರ ಕಾಣಿಸಿಕೊಂಡಿತು. ಇದನ್ನು ಇಟಲಿಯ ಲೊಡೊವಿಕೊ ಕೊಲಂಬೇ ಮೊದಲು ಗುರುತಿಸಿ ‘ನೋವಾ’ ಎಂದು ಪ್ರಕಟಿಸಿದನು. ನೋವಾ ಎಂಬ ಪದದ ಅರ್ಥ ಹೊಸ ನಕ್ಷತ್ರ ಎಂದು. ಟೆಕೋನ ಶಿಷ್ಯ ಕೆಪ್ಲರ್ ಈ ನಕ್ಷತ್ರದ ಅಧ್ಯಯನ ಮಾಡಿದ ಕಾರಣ ಇದಕ್ಕೆ ಕೆಪ್ಲರ್‍ನ ನೋವಾ ಎಂದೇ ಹೆಸರಾಯಿತು. ಹಿಂದಿನದು ಟೆಕೋನ ನೋವಾ ಎಂದು ಹೆಸರು ಪಡೆದಿತ್ತು.
ಹೀಗೆ ಇದ್ದಕ್ಕಿದ್ದಂತೆ ಆಕಾಶದಲ್ಲಿ ಶುಕ್ರನಿಗಿಂತ ಪ್ರಕಾಶಮಾನವಾಗಿ ಕಾಣುವ ನಕ್ಷತ್ರಗಳು ಎಲ್ಲ ದೇಶಗಳ ಜನ ಸಾಮಾನ್ಯರನ್ನು ಆಕರ್ಷಿಸಿರಲೇಬೇಕು. ಚೀನಾದಲ್ಲಿ ಇವನ್ನು ‘ಅತಿಥಿ ನಕ್ಷತ್ರಗಳು’ ಎಂದು ಕರೆಯುತ್ತಿದ್ದರು. ಅಲ್ಲಿಯ ಹಳೆಯ ದಾಖಲೆಗಳಲ್ಲಿರುವ ಇಂತಹ ಅತಿಥಿಗಳನ್ನೆಲ್ಲಾ ಹುಡುಕಿ ತೆಗೆದಾಗ ಒಂದು ಆಶ್ಚರ್ಯವೇ ಕಾದಿತ್ತು. ಈಗ್ಗೆ ಐವತ್ತು ವರ್ಷಗಳ ಹಿಂದೆ ಹೊರ ಬಿದ್ದ ಅಂಶ ಇದು. ಆಕಾಶದಲ್ಲಿ ಬಣ್ಣ ಬಣ್ಣವಾಗಿ ಕಾಣುವ ಕ್ರಾಬ್ ನೆಬ್ಯುಲಾ ಇರುವ ಸ್ಥಳದಲ್ಲಿಯೇ ಹಿಂದೆ ಅತಿಥಿ ನಕ್ಷತ್ರವೊಂದು ಕಂಡಿತ್ತು ಎಂದು ಚೀನೀಯರು ದಾಖಲು ಮಾಡಿದ್ದರು. ಈ ಕ್ರಾಬ್ ನೆಬ್ಯುಲಾ ಎಲ್ಲ ಬಗೆಯ ದೂರದರ್ಶಕಗಳಿಗೆ ಮತ್ತು ಹವ್ಯಾಸಿ ಹಾಗೂ ವೃತ್ತಿಪರರಿಗೆ ಬಹಳ ಅಚ್ಚು ಮೆಚ್ಚಿನ ಕಾಯ. ಹಾಗಾಗಿ ಈ ನೆಬ್ಯುಲಾ ಎಂಬುದರಲ್ಲಿರುವ ಅನಿಲ ಅಗಾಧ ವೇಗದಿಂದ ವಿಸ್ತರಿಸುತ್ತಿದೆ ಎಂದೂ ಕಂಡು ಹಿಡಿದುಕೊಂಡಿದ್ದರು. ವೇಗವನ್ನು ಹಿಂದುವರೆಸಿ ಲೆಕ್ಕ ಮಾಡಿದಾಗ ಸುಮಾರು ಒಂದು ಸಾವಿರ ವರ್ಷದ ಹಿಂದೆ ಈ ಅನಿಲಗಳೆಲ್ಲ ತಮ್ಮ ನೆಗೆತವನ್ನು ಆರಂಭಿಸಿದವು ಎಂದು ತಿಳಿಯಿತು. ಹಾಗಾದರೆ ಕ್ರಿಸ್ತಶಕ 1054ರಲ್ಲಿ ‘ನೋವಾ’ ಎಂಬ ಹೊಸ ನಕ್ಷತ್ರ ಕಂಡಿದ್ದವರಿರಬೇಕು...– ‘ಬೇಕು’ ಅಲ್ಲ ಕಂಡಿತ್ತು. ಚೀನೀಯರು ಅದನ್ನು ಬರೆದಿಟ್ಟಿದ್ದರು. ಹಗಲಿನಲ್ಲಿಯೂ ಕಾಣುವಷ್ಟು ಪ್ರಕಾಶಮಾನವಾಗಿದ್ದ ಅದು ಹಲವಾರು ತಿಂಗಳಲ್ಲಿ ಕ್ಷೀಣಿಸಿ ಕಾಣದಂತಾಯಿತು. ಅಂದರೆ ಕಳೆದೇ ಹೋಯಿತು.
ಗೆಲಿಲಿಯೋ ದೂರದರ್ಶಕವನ್ನು ಆಕಾಶಕ್ಕೆ ತಿರುಗಿಸಿದ ನಂತರ ಅದೊಂದು ಹೊಸ ಸಾಧನ ಎಂದು ಗುರುತಿಸಿಕೊಳ್ಳಲು ಸಾಕಷ್ಟು ಸಮಯವೇ ಬೇಕಾಯಿತು. ಗೆಲಿಲಿಯೋ ಏನೆಲ್ಲ ವಿರೋಧಗಳನ್ನು ಎದುರಿಸಬೇಕಾಯಿತಾದರೂ ಸುಮಾರು ನೂರು ವರ್ಷಗಳಲ್ಲಿ ಅದು ಎಲ್ಲಾ ಖಗೋಳ ವೀಕ್ಷಕರ ಸಂಗಾತಿಯಾಯಿತು. ನಕ್ಷತ್ರದಂತೆ ಚುಕ್ಕೆಯಾಗಿಲ್ಲದೆ ಹತ್ತಿಯ ಪದರದಂತೆ, ಹೊಗೆಯಂತೆ ಕಾಣುತ್ತಿದ್ದ ಕಾಯಗಳನ್ನು ದೂರದರ್ಶಕಗಳು ತೋರಿಸಿಕೊಟ್ಟವು. ಅವುಗಳಿಗೆ ನೆಬ್ಯುಲಾ ಎಂಬ ಹೆಸರು ದೊರಕಿತು. 1731ರಲ್ಲಿ ಕ್ರಾಬ್ ನೆಬ್ಯುಲ ಪತ್ತೆಯಾದದ್ದೇ ಹೀಗೆ- ಪುಟ್ಟ ದೂರದರ್ಶಕದ ಮೂಲಕ. ಹೀಗೆ ಚಿಂದಿಯಾಗಿ ಹೋದದ್ದು ಕಳೆದುಹೋದ ನಕ್ಷತ್ರವೇ ಎಂದು ತಿಳಿಯಿತು.
ಟೆಕೋ ಮತ್ತು ಕೆಪ್ಲರ್ ನೋವಾಗಳು ಈಗ ಹೀಗೆ ನೆಬ್ಯುಲಾಗಳಾಗಿವೆ. ನಕ್ಷತ್ರಗಳ ಅಧ್ಯಯನ ಕೈಗೆತ್ತಿಕೊಂಡವರು ಅವುಗಳ ರಹಸ್ಯವನ್ನು ತಿಳಿದುಕೊಂಡಿದ್ದಾರೆ. ಇಷ್ಟು ಪ್ರಕಾಶಮಾನವಾಗಿಲ್ಲದ ಸ್ಫೋಟಕ ಘಟನೆಗಳನ್ನು ಗುರುತಿಸಿ, ಅವುಗಳಿಗೆ ನೋವಾ ಎಂದು ಹೆಸರಿಸಿದ್ದಾರೆ. ಯಮಳ ನಕ್ಷತ್ರಗಳ ವಿಕಾಸದ ಹಂತವನ್ನು ನೋವಾಗಳು ಸೂಚಿಸುತ್ತವೆ. ಆದರೆ ಕ್ರಾಬ್ ನೆಬ್ಯುಲಾ ಅಥವಾ ಟೆಕೋನ ನೋವಾ ಈ ವರ್ಗದ್ದಲ್ಲ. ಅಗಾಧ ಪ್ರಮಾಣದ ಚೈತನ್ಯವನ್ನು ಉತ್ಸರ್ಜಿಸಿದ ಅವುಗಳನ್ನು ಸೂಪರ್‍ನೋವಾ ಎಂದು ಕರೆದದ್ದು ಸುಮಾರು ಎಪ್ಪತ್ತು ವರ್ಷಗಳ ಹಿಂದೆ.
ಇತ್ತೀಚಿನದು ಎನ್ನಬಹುದಾದ ಮೂರು ಸೂಪರ್ ನೋವಾಗಳು 1054, 1572 ಮತ್ತು 1604 ರಲ್ಲಿ ಘಟಿಸಿವೆ. ಅವುಗಳ ಕುರುಹಾಗಿ ನೆಬ್ಯುಲಾಗಳೂ ಇವೆ. ಹೀಗೆ ನೆಬ್ಯುಲಾಗಳ ಮೂಲವನ್ನು ಕೆದಕುತ್ತಾ ಹೊರಟವರಿಗೆ ಬರಿಗಣ್ಣಿಗೆ ಸೂಪರ್‍ನೋವಾಗಳನ್ನು ಗುರುತಿಸಿದ್ದ ಹಲವಾರು ದಾಖಲೆಗಳು ಸಿಕ್ಕಿದವು. ಚೀನಾ ಅಲ್ಲದೆ ಕೊರಿಯಾದಲ್ಲೂ ಸ್ಪಷ್ಟವಾಗಿ ಕಡತಗಳಲ್ಲಿ ಬರೆದಿಟ್ಟಿದ್ದರು. ಜೊತೆಗೆ ಉತ್ತರ ಅಮೆರಿಕದಲ್ಲಿ ಬಂಡೆಗಲ್ಲಿನ ಮೇಲೆ ಬರೆದಿದ್ದ ಚಿತ್ರವೊಂದು ಸಹ ಸಿಕ್ಕಿತು.
ಮುಂದಿನ ಪ್ರಶ್ನೆ ನಮಗೆ ಅನ್ವಯಿಸುವಂತಹುದು. ಖಗೋಳವಿಜ್ಞಾನದಲ್ಲಿ ಮತ್ತು ಗಣಿತದಲ್ಲಿ ಪಾರಂಗತರಾಗಿದ್ದ ಭಾರತೀಯರು ಈ ಸೂಪರ್‍ನೋವಾಗಳನ್ನು ಎಲ್ಲಿಯೂ ದಾಖಲಿಸಲಿಲ್ಲವೇಕೆ ಎಂಬುದು. ಸೂಪರ್‌ನೋವಾ ಎಂಬ ಪುಸ್ತಕವನ್ನೇ ಬರೆದ ದಿವಂಗತ ಜಿ.ಟಿ. ನಾರಾಯಣರಾಯರು ಎರಡು ದಶಕದ ಹಿಂದೆ ಇದೇ ಪ್ರಶ್ನೆಯನ್ನು ಕೇಳಿದ್ದರು. ಆಗ್ಗೆ ಈ ಬಗ್ಗೆ ಚುರುಕಾಗಿ ಸಂಶೋಧನೆ ನಡೆಯುತ್ತಿತ್ತು. ವಿಖ್ಯಾತ ವಿಜ್ಞಾನಿ ಜಯಂತ್ ನಾರ್ಳೀಕರ್ ಅವರು ಖ್ಯಾತ ಸಂಸ್ಕೃತ ಹಾಗೂ ಪ್ರಾಕೃತ ಪರಿಣತೆ ಸರೋಜಾ ಭಾಟೆ ಅವರೊಡಗೂಡಿ ಎಲ್ಲ ಸಂಸ್ಕೃತ ಪಠ್ಯಗಳನ್ನೂ ಜಾಲಾಡಿದ್ದರು. 2001ರಲ್ಲಿ ತಮ್ಮ ಫಲಿತಾಂಶ ಪ್ರಕಟಿಸಿದ್ದರು- ‘ಎಲ್ಲೂ ದಾಖಲೆ ಸಿಗಲಿಲ್ಲ!’ ಎಂದು (ಇದು ಕರೆಂಟ್ ಸೈನ್ಸ್‌ನಲ್ಲಿ ಪ್ರಕಟವಾಗಿದೆ).
ಅಲ್ಲಿಗೇ ಹುಡುಕಾಟ ನಿಂತು ಹೋಗಲಿಲ್ಲ. ದೆಹಲಿ ತಾರಾಲಯದ ನಿರ್ದೇಶಕಿಯಾಗಿದ್ದ ದಿವಂಗತ ನಿರುಪಮಾ ರಾಘವನ್ ಅವರು ನಟರಾಜನ ವಿಶಿಷ್ಟ ನೃತ್ಯ ಭಂಗಿಯಲ್ಲಿ ಕಾಣುವ ಅಗ್ನಿಯೇ ಸೂಪರ್‍ನೋವಾ ಇರಬಹುದು ಎಂದು ಸೂಚಿಸಿದರು. ಮುಂಬಯಿನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ ಮಾಯಂಕ್ ವಾಹಿಯಾ ಮತ್ತು ತಂಡದವರು ಶ್ರೀನಗರದಲ್ಲಿ ಬಂಡೆಯ ಮೇಲೆ ದೊರಕಿದ ಚಿತ್ರವೊಂದನ್ನು ಅಭ್ಯಸಿಸಿದರು. ಅಲ್ಲಿಯ ಮಸೀದಿಯ ಗೋಡೆಯ ಮೇಲೆ ಹುಲಿಯ ಬಾಲಕ್ಕೆ ಗೊಂಡೆಯಂತೆ ಚಿತ್ರಿಸಿದ್ದ ಬೆಂಕಿಯ ಜ್ವಾಲೆಯನ್ನು ಸೂಪರ್‍ನೋವಾ ಇರಬಹುದು ಎಂದು ತರ್ಕಿಸಿದ್ದರು. ಆದರೆ ಈ ವಾದಗಳಿಗೆ ಪುಷ್ಟಿ ಸಿಗಲಿಲ್ಲ. ಏಕೆಂದರೆ ಅವುಗಳ ನಿರ್ದಿಷ್ಟ ತಾರೀಕನ್ನೇ ತಿಳಿಯಲಾಗಲಿಲ್ಲ.
ಈ ಸಂದರ್ಭದಲ್ಲಿ ಶಾಸನಗಳು ಹೊಸ ಆಕರಗಳಾಗಿ ಒದಗಿಬಂದವು. ಅವುಗಳಲ್ಲಿ ಗ್ರಹಣ ಮುಂತಾದ ಖಗೋಳ ವೈಜ್ಞಾನಿಕ ಘಟನೆಗಳನ್ನು ವಿವರವಾಗಿ ಅಭ್ಯಸಿಸುವಾಗ ಹಲವೊಂದು ಹೊಸ ಸಂಗತಿಗಳು ನನ್ನ ಕಣ್ಣಿಗೆ ಬಿದ್ದವು. ಪೂರ್ಣಗ್ರಹಣ ಎಂದು ನಿಖರವಾಗಿ ಬರೆದಿಟ್ಟಿದ್ದ ಶಾಸನ ದಾಖಲೆಗಳಿಂದ ಭೂಮಿಯ ತಿರುಗಾಟದಲ್ಲಿಯ ಸಣ್ಣ ವ್ಯತ್ಯಾಸಗಳನ್ನು ಗುರುತಿಸುವುದು ಸಾಧ್ಯವಾಯಿತು. ಕಾಂಬೋಡಿಯಾದ ಅಂಗ್ಳೋರ್ ವಾಟ್ ದೇವಾಲಯದಲ್ಲಿ ದೊರಕಿದ ಸಂಸ್ಕೃತ ಶಾಸನದಲ್ಲಿ ಹೊಸ ಆಕಾಶಕಾಯವೊಂದರ ಸೂಚನೆ ಸಿಕ್ಕಿತ್ತು. ಕಾಂಬೋಡಿಯಾದಲ್ಲಿಯೇ ಪೂಮ್ ದಾ ಎಂಬ ಪ್ರಾಂತದಲ್ಲಿ ಶಿವಲಿಂಗದ ಪ್ರತಿಷ್ಠಾಪನೆಯ ಸಂದರ್ಭದ ಇನ್ನೊಂದು ಶಾಸನ ಸಿಕ್ಕಿತು. ಇದು ಕ್ರಿ.ಶ. 1054ರಲ್ಲಿ ನಡೆದ ಘಟನೆ. ಸಂಸ್ಕೃತ ಭಾಷೆಯಲ್ಲಿದೆ. ಶಿವನನ್ನು ಸ್ತುತಿಸುವ ಗುಣವಾಚಕಗಳಲ್ಲಿ ‘ಶುಕ್ರತಾರಾ ಪ್ರಭಾವಾಯ’ ಎಂಬ ಪದವಿದೆ. ಇದರ ಅರ್ಥವೇನು? ತಾರೆಯೊಂದನ್ನು ಶುಕ್ರದ ಹಾಗೆ ಬೆಳಗುವಂತೆ ಪ್ರಭಾವ ಬೀರುವವನು ಎಂದಾಗಬಹುದು. ಅಥವಾ ಶುಕ್ರದಂತೆ ಬೆಳಗುವ ತಾರೆಯನ್ನು ಸೃಷ್ಟಿಸಿದವನು ಎಂದೂ ಆಗಬಹುದು. ಹೇಗಾದರೂ ಸರಿ. ಶುಕ್ರದಷ್ಟು ಪ್ರಕಾಶಮಾನವಾದ ತಾರೆ ಕಂಡಿತ್ತು; ಅದನ್ನು ಕವಿ ಈ ಪದ್ಯದಲ್ಲಿ ಬಳಸಿಕೊಂಡಿದ್ದ ಎನ್ನಬಹುದಲ್ಲವೇ? ಇದೇ ಶಾಸನದ ಇನ್ನೊಂದು ಭಾಗ ಕೆಮೇರ್ ಭಾಷೆಯಲ್ಲಿದೆ. ಅಲ್ಲಿ ಇಂತಹುದೇ ಏನಾದರೂ ವಿಶೇಷಣ ಇರಬಹುದೇ? ಇದಕ್ಕಾಗಿ ಅಲ್ಲಿನ ಸಂಶೋಧಕಿಯೊಬ್ಬರನ್ನು (ಡಾ. ಕುಂಥಿಯಾ ಚೋಮ್) ಸಂಪರ್ಕಿಸಿದಾಗ ಇದೇ ಪದಪುಂಜವನ್ನೇ ಬಳಸಿದೆ ಎಂದುತ್ತರ ಬಂದಿತು. 1054ರ ಸೂಪರ್‍ನೋವಾ ಸ್ಫೋಟವನ್ನು ಹೀಗೆ ದಾಖಲಿಸಿದೆ ಎಂದು ಹೇಳಬಹುದು ಅಲ್ಲವೆ?
ಈ ಸಮಯದ ಕನ್ನಡ ಶಾಸನಗಳಲ್ಲಿ ಈ ಉಲ್ಲೇಖ ಇದುವರೆಗೂ ಕಂಡಿಲ್ಲ. ಅದು ಪುಲಿಕೇಶಿ ಸೋಲನ್ನು ಅನುಭವಿಸಿದ ವರ್ಷ. ಅವನು ಗೆದ್ದಿದ್ದರೆ ಈ ಹೊಸ ನಕ್ಷತ್ರ ಗೆಲುವಿನ ಚಿಹ್ನೆಯಾಗಿ ದಾಖಲಾಗುತ್ತಿತ್ತೋ ಏನೋ.
ಕರ್ನಾಟಕದ ಇನ್ನೊಂದು ಶಾಸನ 1604ರ ಘಟನೆಯ ಬಗ್ಗೆ ಬೆಳಕು ಚೆಲ್ಲಿದೆ. ವೇಣೂರಿನ ಈ ಶಾಸನ ಬಾಹುಬಲಿಯ ಪ್ರತಿಷ್ಠಾಪನೆಯ ಸಂದರ್ಭದ್ದು. ಇಲ್ಲಿ ಭಾಷೆ ಸಂಸ್ಕೃತ. ಲಿಪಿ ಕನ್ನಡ. ಈ ಪ್ರತಿಷ್ಠಾಪನೆಗೆ ಕಾರಣರಾದ ಚಾರುಕೀರ್ತಿ ಭಟ್ಟಾರಕರನ್ನು ಬೆಳಗೊಳ ಎಂಬ ಕ್ಷೀರ ಸಮುದ್ರದ ನಿಶಾಪತಿ ಎಂದು ಹೊಗಳಲಾಗಿದೆ. ಇದನ್ನು ‘ಬೆಳಗೊಳ ಅಂದರೆ ಹಾಲಿನ ಕೊಳ– ಅಲ್ಲಿಯ ನಿಶಾಪತಿ ಎಂದರೆ ಚಂದ್ರ’ ಎಂದು ಅರ್ಥೈಸಬಹುದು. ಆದರೆ ನಿಶಾಪತಿ ಎಂಬ ಪದಕ್ಕೆ ಕರ್ಪೂರ ಎಂಬ ಅರ್ಥವೂ ಇದೆ. ಕ್ಷೀರಾಂಬುಧಿ ಎಂಬುದು ಆಕಾಶಗಂಗೆಗೆ ಇರುವ ಹೆಸರು. ಆದ್ದರಿಂದ ಆಕಾಶಗಂಗೆಯಲ್ಲಿ ಕರ್ಪೂರದಂತೆ ಇರುವ ಎಂಬಂತೆ ಅರ್ಥ ಮಾಡಿಕೊಂಡರೆ ಅದು ಸೂಪರ್‍ನೋವಾ ಘಟನೆಯನ್ನೇ ಸೂಚಿಸುತ್ತದೆ. 1604ರಲ್ಲಿ ಕೆಪ್ಲರ್ ನೋವಾ ಸ್ಫೋಟಿಸಿದ್ದು ಧನುರಾಶಿಯ ಉತ್ತರಕ್ಕೆ– ಆಕಾಶಗಂಗೆಯ ನಕ್ಷತ್ರಗಳ ದಟ್ಟಣೆಯ ನಡುವೆ. ಆದ್ದರಿಂದ ಶಾಸನದ ದಿನಾಂಕವೂ ಹೊಂದುತ್ತದೆ. ಹೀಗೆ ಈ ಶಾಸನವೂ ಸೂಪರ್‍ನೋವಾದ ಘಟನೆಯನ್ನು ಚಿತ್ರಿಸಿದೆ.
1572ರ ಸೂಪರ್‍ನೋವಾ (ಟೆಕೋನ ನೋವಾ) ಸಂಸ್ಕೃತ ಪಠ್ಯವೊಂದರಲ್ಲಿ ಸ್ವಾರಸ್ಯಕರ ರೀತಿಯಲ್ಲಿ ದಾಖಲಾಗಿದೆ. ಅಪ್ಪಯ್ಯ ದೀಕ್ಷಿತ ಎಂಬ ಹೆಸರು ಸಂಸ್ಕೃತಾಭ್ಯಾಸಿಗಳಿಗೆ ಬಹಳ ಪರಿಚಿತವಾದದ್ದು. ಎಲ್ಲ ವಿದ್ಯೆಗಳಲ್ಲೂ ಪಾರಂಗತರಾಗಿದ್ದ ಇವರು ‘ಕುವಲಯಾನಂದ’ ಎಂಬ ಅಲಂಕಾರ ಶಾಸ್ತ್ರದ ಗ್ರಂಥವನ್ನು ರಚಿಸಿದ್ದಾರೆ. 1521ರಿಂದ 1596 ಇವರ ಜೀವಿತಾವಧಿ. ಅಪಹ್ನುತಿ ಅಲಂಕಾರವನ್ನು ವಿವರಿಸಲು ಅವರು ಆರಿಸಿಕೊಂಡ ಉದಾಹರಣೆ ಹೀಗಿದೆ: ‘ಅದು ಚಂದ್ರನಲ್ಲ; ವ್ಯೋಮಗಂಗೆಯಲ್ಲಿ ಇರುವ ಸರೋರುಹ’ – ಅಪಹ್ನುತಿ ಎಂದರೆ ಯಾವುದೇ ವಸ್ತುವಿಗೆ ಅದರದಲ್ಲದ ಗುಣವನ್ನು ಆರೋಪಿಸಿ ನಕಾರಾತ್ಮಕವಾಗಿ ಹೋಲಿಸುವುದು. ಇಲ್ಲಿಯ ಉದಾಹರಣೆ ವ್ಯೋಮಗಂಗೆಯಲ್ಲಿರುವ ಸರೋರುಹದ್ದು. ಅದು ಚಂದ್ರ ಎಂಬುದು ಆರೋಪ; ಚಂದ್ರ ಅಲ್ಲ ಎಂದು ಸೂಚಿಸುತ್ತಿರುವುದೇ ಅಲಂಕಾರ. ಅಂದರೆ ವ್ಯೋಮಗಂಗೆಯಲ್ಲಿ ಪ್ರಕಾಶಮಾನವಾದದ್ದು ಏನೋ ಇದ್ದಿತು ಎಂದಾಯಿತು. ಮುಂದಿನ ಶ್ಲೋಕದಲ್ಲಿ ಇನ್ನೊಂದು ಉದಾಹರಣೆ– ‘ಅದು ಬಹಳ ತೀವ್ರವಾಗಿದೆ ಆದ್ದರಿಂದ ಚಂದ್ರನಲ್ಲ; ರಾತ್ರಿಯಲ್ಲಿ ಕಾಣುತ್ತಿರುವುದರಿಂದ ಸೂರ್ಯನೂ ಅಲ್ಲ. ಅದು ವ್ಯೋಮಗಂಗೆಯಲ್ಲಿ ಉದ್ಭವಿಸಿರುವ ಬಡಬಾಗ್ನಿ’ ಇದೂ ಕೂಡ ಆಕಾಶಗಂಗೆಯಲ್ಲಿ ಕಂಡ ಒಂದು ಪ್ರಕಾಶಮಾನವಾದ ವಸ್ತುವನ್ನೇ ಸೂಚಿಸುತ್ತಿದೆ. 1572ರ ಸೂಪರ್‍ನೋವಾ ಸ್ಫೋಟವನ್ನು ಅವರು ಹೀಗೆ ದಾಖಲಿಸಿರಬಹುದಲ್ಲವೆ?
ಖಗೋಳ ವಿಜ್ಞಾನಿಗಳೇ ಗುರುತಿಸಿರುವ ಇನ್ನೊಂದು ಅಪೂರ್ವ ದಾಖಲೆಯೂ ಈಗ ಸಿಕ್ಕಿದೆ. ಅಸ್ಟ್ರೋಲೇಬ್ ಎಂಬ ಲೋಹದ ಉಪಕರಣವನ್ನು ಸುಮಾರು 1000 ವರ್ಷಗಳ ಹಿಂದೆ ಅರಬ್ಬರು ಭಾರತಕ್ಕೆ ತಂದರು. ಇದು ಒಂದು ವಿಶಿಷ್ಟವಾದ ಗಣಕಯಂತ್ರದಂತೆ ಎನ್ನಬಹುದು. ಸಾಗರಯಾನದಲ್ಲಿ ಬಹಳ ಉಪಯೋಗಿಯಾಗಿತ್ತು. ಹಗಲು– ರಾತ್ರಿಗಳಲ್ಲಿ ಸಮಯ ಕಂಡುಹಿಡಿಯುವುದು, ಅಕ್ಷಾಂಶ ರೇಖಾಂಶಗಳನ್ನು ತಿಳಿಯುವುದು, ಸೂರ್ಯೋದಯ, ಸೂರ್ಯಾಸ್ತಗಳನ್ನು ಲೆಕ್ಕ ಹಾಕುವುದು- ಹೀಗೆ ಎಷ್ಟೊಂದು ಕಾರ್ಯಗಳಿಗೆ ನೆರವಾಗುತ್ತಿದ್ದ ಸಂಕೀರ್ಣ ಉಪಕರಣ. ಇದರಲ್ಲಿ ತಿರುಗಿಸಬಹುದಾದ ಫಲಕಗಳಿರುತ್ತಿದ್ದವು. ಅದರ ಮೇಲೆ ನಕ್ಷತ್ರಗಳ ಸ್ಥಾನಗಳನ್ನು ಹಕ್ಕಿಯ ಕೊಕ್ಕಿನ ಆಕಾರದಲ್ಲಿ ಗುರುತು ಮಾಡುವುದು ಖಗೋಳಜ್ಞರ ಕೆಲಸ. ಇದಕ್ಕೆ ನಕ್ಷತ್ರಚಂಚು ಎಂದೇ ಹೆಸರು. ಆ ಚಂಚುವಿನ ಪಕ್ಕ ನಕ್ಷತ್ರದ ಹೆಸರನ್ನು ಕೊರೆಯಲಾಗಿರುತ್ತದೆ. ಅಲ್ಲದೇ ಅದನ್ನು ತಯಾರಿಸಿದವನ ಹೆಸರು, ಊರು, ದಿನಾಂಕ– ಈ ಎಲ್ಲ ವಿವರಗಳೂ ಇರುತ್ತವೆ. ಇದು ಅರಬ್ಬರಿಂದ ಬಂದ ಯಂತ್ರವಾದರೂ ಭಾರತದಲ್ಲಿಯೂ ಜನಪ್ರಿಯವಾಗಿತ್ತು. ಅನೇಕರು ಹಿತ್ತಾಳೆ/ಕಂಚಿನ ಪಲಕವನ್ನು ತಯಾರಿಸುವುದರಲ್ಲಿ ನಿಷ್ಣಾತರಾಗಿದ್ದರು. ಜರ್ಮನಿಯ ಪ್ರೊ. ಎಸ್. ಆರ್. ಶರ್ಮ ಅವರು ಹೀಗೆ ಜಗತ್ತಿನ ಮೂಲೆ ಮೂಲೆಗಳಲ್ಲಿರುವ ಅಸ್ಟ್ರೋಲೇಬ್‍ಗಳ ಅಧ್ಯಯನ ನಡೆಸಿ, ಸುಮಾರು 4000 ಪುಟಗಳ ಬೃಹತ್ ಪಟ್ಟಿಯನ್ನು ತಯಾರಿಸಿದ್ದಾರೆ. (ಇದು ಇಂಟರ್ ನೆಟ್ ನಲ್ಲಿ ಲಭ್ಯವಿದೆ) ಅದರಲ್ಲಿ ಅ ಎಂಬ ವಿಭಾಗ ಸಂಸ್ಕೃತ ಅಸ್ಟ್ರೋಲೇಬ್‍ಗಳದ್ದು. ಇದರಲ್ಲಿ ಅಹಮದಾಬಾದ್‍ನ ದಾಮೋದರ ಎಂಬ ಖಗೋಳಜ್ಞ ತಯಾರಿಸಿದ ಅಸ್ಟ್ರೋಲೇಬ್ (ಇಂಗ್ಲೆಂಡಿನ ವಸ್ತು ಸಂಗ್ರಹಾಲಯದಲ್ಲಿದೆ) ಮೊದಲನೆಯ ನಮೂದು. ಇದರ ನಕ್ಷತ್ರ ಫಲಕದ ಮೇಲೆ ಧನುರಾಶಿಯಲ್ಲಿ ಒಂದು ನಕ್ಷತ್ರವನ್ನು ಗುರುತಿಸಿದ್ದಾರೆ. ಚುಂಚಿನ ಪಕ್ಕ ಧನುಶರ ಎಂಬ ಹೆಸರೂ ಇದೆ. ಕೆಲವು ದಶಕಗಳ ಹಿಂದೆ ಇದನ್ನು ಪರಿಶೀಲಿಸಿದ ಅಮೆರಿಕದ ಪ್ರೊಫೆಸರ್ ಡೇವಿಡ್ ಪಿಂಗ್ರಿ ಅವರು ಈ ಗುರುತಿಗೆ ಅನ್ವಯವಾಗುವ ಯಾವುದೇ ನಕ್ಷತ್ರ ದೊರಕದ ಕಾರಣ ಸಮೀಪದ ಬೇರೊಂದು ನಕ್ಷತ್ರವನ್ನು ಗುರುತಿಸಿ ಧನುಶರಾಗ್ರ ಎಂಬ ಹೆಸರು ಕೊಟ್ಟಿದ್ದಾರೆ. ಆದರೆ ಈ ನಕ್ಷತ್ರದ ಸ್ಥಾನ ವಿವರಗಳು ಅದಕ್ಕೆ ತಾಳೆಯಾಗುವುದಿಲ್ಲ. ಬದಲಿಗೆ 1604ರ ಸೂಪರ್ ನೋವಾಗೆ ಸರಿಯಾಗಿ ತಾಳೆಯಾಗುತ್ತವೆ. ಆದ್ದರಿಂದ ದಾಮೋದರ ಎಂಬ ಈ ಖಗೋಳಜ್ಞ ಹೊಸ ನಕ್ಷತ್ರವನ್ನು ಕಂಡು ಅದನ್ನೂ ಫಲಕದಲ್ಲಿ ಅಳವಡಿಸಿದ್ದಾನೆ ಎಂದಾಯಿತಲ್ಲವೆ? ಈ ಫಲಕದ ಮೇಲೆ ಅದನ್ನು ತಯಾರಿಸಿದ ದಿನಾಂಕ, ವರ್ಷ ಎಲ್ಲವೂ ಇರುವುದರಿಂದ ಈ ಅಂಶ ಸಾಬೀತಾಗುತ್ತದೆ.
ಹೀಗೆ ಪರೋಕ್ಷವಾಗಿಯಾದರೂ ಸೂಪರ್ ನೋವಾಗಳನ್ನು ವೀಕ್ಷಿಸಿ ದಾಖಲಿಸಿದ ಅಂಶಗಳೂ ದೊರಕಿರುವುದರಿಂದ ‘ಭಾರತೀಯರು ಆಕಾಶವನ್ನು ನೋಡಲೇ ಇಲ್ಲ; ಬರಿಯ ಲೆಕ್ಕ ಮಾಡುತ್ತಾ ಕುಳಿತಿದ್ದರು’ ಎಂಬಂತಹ ಆರೋಪಗಳಿಂದ ಮುಕ್ತಿ ಪಡೆಯಬಹುದು.
**
ಕಾವ್ಯದಲ್ಲಿ ಸೂಪರ್‌ನೋವಾ
ಸೂಪರ್‍ನೋವಾಗಳನ್ನು ವೀಕ್ಷಿಸಿ ಖಗೋಳ ಪಠ್ಯವಲ್ಲದ ಆಕರಗಳಲ್ಲಿ ದಾಖಲಿಸಿದ ಅಂಶಗಳು ಈ ಅಧ್ಯಯನದಿಂದ ಹೊರಬಿದ್ದಿವೆ. ಈ ಸಂದರ್ಭದಲ್ಲಿ ಕನ್ನಡದ ಕಾವ್ಯವೊಂದರಲ್ಲಿ ಚಂದ್ರೋದಯದ ವರ್ಣನೆಯನ್ನು ಉದಾಹರಿಸಬಹುದು. ಮಲ್ಲ ಕವಿ ಎಂಬಾತ ಸಂಪಾದಿಸಿದ ಕಾವ್ಯಸಾರ ಎಂಬುದರಲ್ಲಿ ಹೀಗೊಂದು ಪದ್ಯವಿದೆ.
ಅಸ್ತ ಗಿರೀಂದ್ರ ಮಸ್ತಕದೊಳುಪ್ಪುವ ಭಾಸ್ಕರಲಿಂಗದಗ್ರದೊಳ್ಶ
ಸ್ತತರೇಂದ್ರದಿಗ್ವಧು ಸುನರ್ತಕಿ ಸಂಜೆಯೊಲಾಡಲೆಂದು ತಾಂ
ವಿಸ್ತರಶುಕ್ರದೀಪವನೆ ಪೊತ್ತಿಸುತೆತ್ತಿದ ಮಂಗಳಾರತಾಪ್ರ
ಸ್ತುತ ಪಾತ್ರೆಯಂತೆಸೆಯುತಿರ್ದುದು ಪೂರ್ವದಿಶೇಂದುಮಂಡಲಂ
ಇದರ ಅರ್ಥ: ಪೂರ್ವದಿಕ್ಕಿನಲ್ಲಿ ಉದಯಿಸುವ ಪೂರ್ಣಚಂದ್ರ ಆರತಿಯ ತಟ್ಟೆಯ ಹಾಗೆ ಬೆಳಗುತ್ತಿದ್ದಾನೆ. ಅದರ ಮೇಲೆ ಶುಕ್ರ ದೀಪವು ಉರಿಯುತ್ತಿದೆ.
ಸಂಜೆಯ ಹೊತ್ತು ಪೂರ್ವದಲ್ಲಿ ಶುಕ್ರ ಕಾಣಲು ಸಾಧ್ಯವೇ ಇಲ್ಲ ಎಂಬುದು ಎಲ್ಲ ಆಕಾಶ ವೀಕ್ಷಕರಿಗೆ ಚೆನ್ನಾಗಿ ಮನದಟ್ಟಾಗಿರುವ ಅಂಶ. ಹಾಗಾದರೆ ಈ ಶುಕ್ರ ದೀಪ ಏನಿರಬಹುದು?
ಈ ಕಾವ್ಯದ ದಿನಾಂಕ ಅಂದಾಜಾಗಿ ತಿಳಿದುಬಂದರೆ ಇದನ್ನು 1054ರ ಅಥವಾ 1604ರ ಸೂಪರ್ ನೋವಾ ಎಂದು ಖಚಿತವಾಗಿ ತಿಳಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.