ADVERTISEMENT

ಉದ್ಯೋಗ... ಮೊದಲು ಮನೆ ಮಕ್ಕಳಿಗೆ! ಮೀಸಲಾತಿಯನ್ನು ಮೀರಿದ ಹಾದಿ...

ಮ್ಯಾಥ್ಯೂ ಇಡಿಕ್ಕುಳ
Published 29 ಆಗಸ್ಟ್ 2020, 19:30 IST
Last Updated 29 ಆಗಸ್ಟ್ 2020, 19:30 IST
ಕಲೆ: ನಭಾ ಒಕ್ಕುಂದ
ಕಲೆ: ನಭಾ ಒಕ್ಕುಂದ   
""

‘ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ’ ಎಂಬ ಘೋಷಣೆ ಲಾಗಾಯ್ತಿನಿಂದಲೂ ಮತ ಗಳಿಕೆಯ ರಾಜಕೀಯ ದಾಳವಾಗಿ ಬಳಕೆಯಾಗುತ್ತಾ ಬಂದಿದೆ. ಏಕೆಂದರೆ, ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಜನ್ಮ ಅಥವಾ ವಾಸಸ್ಥಳದ ಆಧಾರದ ಮೇಲೆ ಮೀಸಲಾತಿ ಕಲ್ಪಿಸಲು ಆಸ್ಪದ ಇಲ್ಲವೇ ಇಲ್ಲ. ಹಾಗಾದರೆ ‘ನಮ್ಮವರಿಗೆ’ ಉದ್ಯೋಗಾವಕಾಶವನ್ನು ಸೃಷ್ಟಿಸುವುದು ಹೇಗೆ? ರಾಜ್ಯದ ಅವಕಾಶಗಳನ್ನು‘ಹೊರಗಿನವರು’ ಬಾಚಿಕೊಳ್ಳದಂತೆ ತಡೆಯುವ ದಾರಿಯಾದರೂ ಯಾವುದು?

ಮಧ್ಯ‌ ಪ್ರದೇಶ ಸರ್ಕಾರದ ಎಲ್ಲ ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡಲಾಗುವುದು ಎಂದು ಅಲ್ಲಿನ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಕಳೆದ ವಾರವಷ್ಟೇ ಪ್ರಕಟಿಸಿದ್ದಾರೆ. ‘ಮಧ್ಯ ಪ್ರದೇಶದ ಸಂಪನ್ಮೂಲಗಳ ಮೇಲೆ ಇನ್ಮುಂದೆ ರಾಜ್ಯದ ಮಕ್ಕಳಿಗೇ ಮೊದಲ ಹಕ್ಕು’ ಎಂದೂ ಅವರು ಹೇಳಿದ್ದಾರೆ. ಸದ್ಯ ಘೋಷಣೆಯನ್ನಷ್ಟೇ ಮಾಡಲಾಗಿದ್ದು, ಉದ್ಯೋಗದಲ್ಲಿ ಯಾವ ರೀತಿಯಲ್ಲಿ ಸ್ಥಳೀಯರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲಾಗುತ್ತದೆ ಎನ್ನುವುದನ್ನು ಅವರು ಇನ್ನೂ ಬಹಿರಂಗಪಡಿಸಿಲ್ಲ. ‘ಕಾನೂನುಬದ್ಧವಾಗಿಯೇ ಈ ಮೀಸಲು ಸೌಲಭ್ಯವನ್ನು ತರಲಾಗುವುದು’ ಎಂದು ಅಲ್ಲಿನ ಸರ್ಕಾರ ಹೇಳುತ್ತಿದೆ.

ರಾಜ್ಯದ ಮಕ್ಕಳಿಗೆ ಅಥವಾ ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ‘ಮಣ್ಣಿನ ಮಕ್ಕಳು’ ಎಂದು ಆಯಾ ರಾಜ್ಯಗಳು ಗುರುತಿಸುವ ಜನರಿಗೆ, ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂಬ ಬೇಡಿಕೆಯೇನೂ ಇಂದು–ನಿನ್ನೆಯದಲ್ಲ. ಚೌಹಾಣ್‌ ಅವರಿಗಿಂತ ಮೊದಲು ಆ ಸ್ಥಾನದಲ್ಲಿದ್ದ ಕಮಲ್‌ನಾಥ್‌ ಅವರೂ ರಾಜ್ಯದ ಕೈಗಾರಿಕೆಗಳ ಉದ್ಯೋಗಗಳಲ್ಲಿಶೇಕಡ 70ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಲು ಕಾಯ್ದೆ ಮಾಡಲಾಗುವುದು ಎಂದು ಪ್ರಕಟಿಸಿದ್ದರು. ‘ಪ್ರತಿಶತ 100ರಷ್ಟು ಉದ್ಯೋಗಗಳು ಸ್ಥಳೀಯರಿಗೆ’ ಎಂಬ ಚೌಹಾಣ್‌ ಅವರ ಘೋಷಣೆಯ ಹಿಂದೆ ಅಲ್ಲಿನ 27 ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಛಾಯೆ ಎದ್ದುಕಾಣುತ್ತಿದೆ. ಕಾಂಗ್ರೆಸ್‌ನಿಂದ ಪಕ್ಷಾಂತರಗೊಂಡ ಶಾಸಕರ ಬೆಂಬಲದಿಂದ ಅಧಿಕಾರದ ಗದ್ದುಗೆಗೆ ಏರಿರುವ ಅವರಿಗೆ, ಅದನ್ನು ಉಳಿಸಿಕೊಳ್ಳಬೇಕಾದರೆ ಉಪಚುನಾವಣೆಯಲ್ಲಿ ಗೆಲುವು ಅನಿವಾರ್ಯವಾಗಿದೆ.

ADVERTISEMENT

ಮಧ್ಯಪ್ರದೇಶವೊಂದೇ ಅಲ್ಲ; ಹಲವು ರಾಜ್ಯ ಸರ್ಕಾರಗಳು ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವಂತಹ ಘೋಷಣೆಗಳನ್ನು ಆಗಾಗ ಮಾಡುತ್ತಲೇ ಬಂದಿವೆ. ಆದರೆ, ಬಹುತೇಕ ಘೋಷಣೆಗಳು ಕಾಗದದಲ್ಲಿ ಮಾತ್ರ ಇವೆಯೇ ಹೊರತು ಅನುಷ್ಠಾನಕ್ಕೆ ಬಂದಿಲ್ಲ. ಹರಿಯಾಣ ಹಾಗೂ ಆಂಧ್ರಪ್ರದೇಶದಲ್ಲೂ ಖಾಸಗಿ ವಲಯದ ಉದ್ಯೋಗಗಳಲ್ಲಿ ಶೇಕಡ 75ರಷ್ಟು ಮೀಸಲಾತಿ ಕಲ್ಪಿಸುವ ಘೋಷಣೆ ಇತ್ತೀಚೆಗಷ್ಟೇ ಹೊರಬಿದ್ದಿದೆ.

ಮಹಾರಾಷ್ಟ್ರದಲ್ಲಿ ‘ಮರಾಠಿ’ಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಬೇಕೆನ್ನುವುದು ಸುದೀರ್ಘ ಅವಧಿಯಿಂದ ಚರ್ಚಿತವಾಗುತ್ತಿರುವ ವಿಷಯ. ಕರ್ನಾಟಕದಲ್ಲಿ ಇರುವ ಉದ್ಯೋಗಾವಕಾಶಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ನಿರ್ಧಾರವನ್ನು ಇಲ್ಲಿನ ಸರ್ಕಾರ ಈ ಹಿಂದೆ ತೆಗೆದುಕೊಂಡಿತ್ತು. ಆದರೆ, ಆಗಿನ ಅಡ್ವೋಕೇಟ್‌ ಜನರಲ್‌ ಅವರ ಸಲಹೆ ಮೇರೆಗೆ ಅನುಷ್ಠಾನಕ್ಕೆ ತಂದಿರಲಿಲ್ಲ. ಕರ್ನಾಟಕ ಸರ್ಕಾರ ಈಗ ಮತ್ತೆ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಕುರಿತು ಮಾತನಾಡುತ್ತಿದೆ.

ಸಂವಿಧಾನ ಏನು ಹೇಳುತ್ತದೆ?

ಜನ್ಮ ಸ್ಥಳದ ಆಧಾರದ ಮೇಲೆ ಅಥವಾ ಸ್ಥಳೀಯ ನಿವಾಸಿಯ ಹೆಸರಿನಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸುವಂತಹ ಕ್ರಮವು ಸಾಂವಿಧಾನಿಕವಾಗಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಸಂವಿಧಾನದ ವಿಧಿ 19ರ ಪ್ರಕಾರ, ‘ಎಲ್ಲ ನಾಗರಿಕರು ಭಾರತದ ಭೂಪ್ರದೇಶದಲ್ಲಿ ಮುಕ್ತವಾಗಿ ಚಲಿಸಬಹುದು’ ಮತ್ತು ‘ಭಾರತದ ಯಾವುದೇ ಭೂಭಾಗದಲ್ಲಿ ವಾಸಿಸಬಹುದು ಹಾಗೂ ನೆಲೆ ಕಂಡುಕೊಳ್ಳಬಹುದು.’ ಜನಿಸಿದ ಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ವಿಧಿ 15 ನಿರ್ಬಂಧಿಸುತ್ತದೆ. ಸರ್ಕಾರಿ ಉದ್ಯೋಗಗಳಲ್ಲಿ ಎಲ್ಲ ನಾಗರಿಕರಿಗೆ ಸಮಾನ ಅವಕಾಶವನ್ನು ವಿಧಿ 16 ಖಾತರಿಪಡಿಸುತ್ತದೆ. ಜನ್ಮ ಅಥವಾ ವಾಸಸ್ಥಳದ ಆಧಾರದ ಮೇಲೆ ಉದ್ಯೋಗದ ಅವಕಾಶವನ್ನು ನಿರಾಕರಿಸುವಂತಿಲ್ಲ ಎಂದೂ ಅದು ಹೇಳುತ್ತದೆ. ಉದ್ಯೋಗದಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡುವ ಸಂಬಂಧ ಕಾನೂನುಗಳಿಗೆ ಏನಾದರೂ ಮಾರ್ಪಾಡು ಆಗಬೇಕಿದ್ದರೆ ಅದು ಸಂಸತ್ತಿನಿಂದ ಆಗಬೇಕಾದ ಕೆಲಸವೇ ಹೊರತು ರಾಜ್ಯಗಳ ವಿಧಾನಸಭೆಗಳಲ್ಲಿ ಅಲ್ಲ.

ಜನ್ಮ ಅಥವಾ ವಾಸಸ್ಥಳದ ಆಧಾರದ ಮೇಲೆ ಕಲ್ಪಿಸಲಾಗಿದ್ದ ಮೀಸಲಾತಿಯನ್ನು ಕೋರ್ಟ್‌ಗಳು ರದ್ದುಪಡಿಸಿದ ಉದಾಹರಣೆಗಳು ಬೇಕಾದಷ್ಟಿವೆ. ‘ಪ್ರದೀಪ್‌ ಜೈನ್‌ ವಿರುದ್ಧ ಭಾರತ ಸರ್ಕಾರ’ (1984) ಪ್ರಕರಣದಲ್ಲಿ ‘ಮಣ್ಣಿನ ಮಕ್ಕಳಿಗೆ ಆದ್ಯತೆ ನೀಡುವಂತಹ ನೀತಿಗಳನ್ನು ಅಳವಡಿಸಿಕೊಳ್ಳುವುದಕ್ಕೆ, ಜನ್ಮ ಅಥವಾ ವಾಸಸ್ಥಳದ ಆಧಾರದಲ್ಲಿ ಸ್ಥಳೀಯರಿಗೆ ಮೀಸಲಾತಿ ಕಲ್ಪಿಸುವುದಕ್ಕೆ ಸಂವಿಧಾನದ ಅನುಮತಿ ಇಲ್ಲ’ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ‘ಸುನಂದಾ ರೆಡ್ಡಿ ವಿರುದ್ಧ ಆಂಧ್ರಪ್ರದೇಶ ಸರ್ಕಾರ’ (1995) ಪ್ರಕರಣದಲ್ಲಿ ತೆಲುಗು ಭಾಷಿಕ ಅಭ್ಯರ್ಥಿಗಳಿಗೆ ಶೇಕಡ 5ರಷ್ಟು ಹೆಚ್ಚುವರಿ ಆದ್ಯತೆ ನೀಡುವ ನಿರ್ಧಾರವನ್ನೂ ಸುಪ್ರೀಂ ಕೋರ್ಟ್‌, ಮೇಲಿನ ತೀರ್ಪಿನ ಆಧಾರದ ಮೇಲೆಯೇ ರದ್ದುಗೊಳಿಸಿತ್ತು.

ಇತ್ತೀಚಿನ ಉದಾಹರಣೆಯನ್ನೇ ತೆಗೆದು ಕೊಳ್ಳುವುದಾದರೆ, ‘ಚಾರು ಖುರಾನಾ ವಿರುದ್ಧ ಭಾರತ ಸರ್ಕಾರ’ (2014) ಪ್ರಕರಣದಲ್ಲಿ ಸ್ಥಳೀಯ ನಿವಾಸಿ ಎನ್ನುವುದಕ್ಕೆ ಕಾನೂನಿನ ಯಾವುದೇ ಮಾನ್ಯತೆ ಇಲ್ಲ ಮತ್ತು ಇದರ ಆಧಾರದ ಮೇಲೆ ತಾರತಮ್ಯ ಮಾಡುವುದು ಸಂವಿಧಾನದ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಈ ಪ್ರಕರಣದಲ್ಲಿ ದೂರುದಾರರಿಗೆ, ಅವರೊಬ್ಬ ಪ್ರಸಾಧನ ಕಲಾವಿದೆ, ಮಹಿಳೆ ಹಾಗೂ ಮಹಾರಾಷ್ಟ್ರದಲ್ಲಿ ಹಿಂದಿನ ಐದು ವರ್ಷಗಳಿಂದ ನಿವಾಸಿಯಾಗಿಲ್ಲ ಎಂಬ ಕಾರಣಕ್ಕಾಗಿ ಕಾರ್ಮಿಕ ಒಕ್ಕೂಟದ ಸದಸ್ಯತ್ವವನ್ನು ನಿರಾಕರಿಸಲಾಗಿತ್ತು. ಲಿಂಗ ಹಾಗೂ ವಾಸಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡುವುದು ವಿಧಿ 14, 15 ಮತ್ತು 21ರ ಸ್ಪಷ್ಟ ಉಲ್ಲಂಘನೆ ಎಂದು ಕೋರ್ಟ್‌ ಹೇಳಿತ್ತು.

ವಾಸಸ್ಥಳ ಆಧಾರದ ಮೇಲೆ ಉನ್ನತ ಶಿಕ್ಷಣದಲ್ಲಿ ಮೀಸಲಾತಿಗೆ ನ್ಯಾಯಾಲಯಗಳು ಸಮ್ಮತಿಸಿದ ಉದಾಹರಣೆಗಳು ಇದ್ದರೂ ಉದ್ಯೋಗದ ವಿಷಯದಲ್ಲಿ ಇಂತಹ ಮೀಸಲಾತಿಗೆ ಯಾವತ್ತೂ ಸಮ್ಮತಿ ನೀಡಿಲ್ಲ.

ಸ್ಥಳೀಯ ಪ್ರತಿಭೆಗಳನ್ನು ಸೃಷ್ಟಿಸಿ

ಉದ್ಯೋಗಾವಕಾಶಗಳ ಮೇಲೆ ಹೊರಗಿನವರಿಗೆ ಪ್ರತಿಬಂಧ ಹೇರುವಂತಹ ನಿರ್ಧಾರ ತೆಗೆದು ಕೊಳ್ಳುವುದು ಸಾಂವಿಧಾನಿಕವಾಗಿ, ನೈತಿಕವಾಗಿ ಸರಿಯಲ್ಲ ಎನ್ನುವುದು ವಾದವನ್ನು ಒಪ್ಪಿದರೂ ರಾಜ್ಯದ ಜನರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬ ವಿಷಯವನ್ನು ಯಾವುದೇ ಕಾರಣಕ್ಕೂ ಅಲಕ್ಷ್ಯ ಮಾಡಲಾಗದು. ಸೆಂಟರ್‌ ಫಾರ್‌ ದಿ ಸ್ಟಡಿ ಆಫ್‌ ಡೆವಲಪಿಂಗ್‌ ಸೊಸೈಟೀಸ್‌ (ಸಿಎಸ್‌ಡಿಎಸ್‌) ವತಿಯಿಂದ 2016ರಲ್ಲಿ ದೇಶದ 19 ರಾಜ್ಯಗಳಲ್ಲಿ ಸಮೀಕ್ಷೆಯೊಂದು ನಡೆದಿತ್ತು. ‘ಆಯಾ ರಾಜ್ಯಗಳಲ್ಲಿ ಇರುವ ಉದ್ಯೋಗಾವಕಾಶಗಳಲ್ಲಿ ಬೇರೆ ರಾಜ್ಯಗಳ ಜನರಿಗಿಂತಲೂ ಸ್ಥಳೀಯರಿಗೆ ಆದ್ಯತೆ ನೀಡಬೇಕು’ ಎಂದು ಆ ಸಮೀಕ್ಷೆಯಲ್ಲಿ ಶೇಕಡ 63ರಷ್ಟು ಜನ ಅಭಿಪ್ರಾಯಪಟ್ಟಿದ್ದರು. ಅದರ ಆಧಾರದ ಮೇಲೆ ಹೇಳುವುದಾದರೆ, ‘ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ’ ವಿಷಯಕ್ಕೆ ಸಾರ್ವಜನಿಕರ ಬೆಂಬಲ ವ್ಯಾಪಕವಾಗಿದೆ.

ರಾಜ್ಯ ಸರ್ಕಾರಗಳು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಹಾತೊರೆಯುತ್ತಿರುವುದು ಸಂಕುಚಿತ ಮನೋಭಾವದ, ಹುಸಿ ಭರವಸೆಯಿಂದ ಕೂಡಿದ, ಜನಪ್ರಿಯತೆಯನ್ನು ಗಳಿಸುವ ಹಪಹಪಿತನದ ರಾಜಕೀಯ ನಡೆಯಾಗಿದೆ. ‘ಹೊರಗಿನವರ’ ವಿರುದ್ಧ ಸ್ಥಳೀಯರು ಹೊಂದಿರಬಹುದಾದ ಪೂರ್ವಗ್ರಹಗಳ ಲಾಭವನ್ನು ಪಡೆಯುವ ದುರುದ್ದೇಶವೂ ಇದರಲ್ಲಿ ಅಡಗಿದೆ. ಇಂತಹ ನಿರ್ಧಾರಗಳು ಅಪ್ರಾಮಾಣಿಕತೆಯಿಂದ ಕೂಡಿದ್ದು, ಮಹತ್ವದ ಚುನಾವಣೆಗಳ ಸಂದರ್ಭದಲ್ಲಿ ಮತದಾರರನ್ನು ಸೆಳೆಯುವ ಏಕೈಕ ಉದ್ದೇಶದಿಂದ ಈ ರೀತಿಯ ಘೋಷಣೆಗಳು ಹೊರಬಿದ್ದಿರುತ್ತವೆ. ಬಳಿಕ ಅನುಷ್ಠಾನಕ್ಕೆ ಬರದೆ ನೇಪಥ್ಯಕ್ಕೆ ಸರಿಯುತ್ತವೆ. ಭಾರತದಂತಹ ಒಕ್ಕೂಟ ವ್ಯವಸ್ಥೆಯಲ್ಲಿ ಸ್ಥಳೀಯ ನಿವಾಸಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವುದು ಎಷ್ಟೊಂದು ಕಾರ್ಯಸಾಧು ಹಾಗೂ ನೈತಿಕವಾದುದು ಎಂಬ ವಿಷಯವಾಗಿ ಗಂಭೀರ ಚರ್ಚೆಗಳು ನಡೆಯದಂತೆ ರಾಜ್ಯ ಸರ್ಕಾರಗಳ ಇಂತಹ ಎಡಬಿಡಂಗಿ ನಿರ್ಣಯಗಳು ಕಾರಣವಾಗಿವೆ.

ಯಾವುದೇ ರಾಜ್ಯ ಸರ್ಕಾರ ಈ ವಿಷಯದಲ್ಲಿ ಸಮತೋಲನದ ಹೆಜ್ಜೆ ಇಡಲು ಸಾಧ್ಯವಿದೆ. ಸ್ಥಳೀಯರಿಗೆ ಉದ್ಯೋಗಗಳಲ್ಲಿ ಆದ್ಯತೆಯೂ ಸಿಗಬೇಕು, ಅದೇ ಕಾಲದಲ್ಲಿ ಸಂವಿಧಾನದ ಆಶಯದಂತೆ ದೇಶದ ಎಲ್ಲ ನಾಗರಿಕರಿಗೆ ಮುಕ್ತ ಅವಕಾಶವೂ ಇರಬೇಕು –ಈ ಎರಡನ್ನೂ ಸಮತೋಲನದಿಂದ ನೋಡುವಂತಹ ಹೆಜ್ಜೆ ಇದು. ರಾಜ್ಯದ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವಾಗ ಉದ್ಯೋಗಾಕಾಂಕ್ಷಿಗೆ ರಾಜ್ಯದ ಭಾಷೆ ಕಡ್ಡಾಯವಾಗಿ ಗೊತ್ತಿರಬೇಕು ಎಂಬ ನಿಯಮವನ್ನು ಅಳವಡಿಸಿಕೊಳ್ಳುವುದು ಸರಳ ಉಪಾಯ. ಕೆಲವು ರಾಜ್ಯಗಳಲ್ಲಿ ಸರ್ಕಾರಿ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಸುವಾಗ ಅಭ್ಯರ್ಥಿಗಳು ರಾಜ್ಯದ ಭಾಷಾ ಪರೀಕ್ಷೆ ಬರೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

ಖಾಸಗಿ ವಲಯದ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸುವುದು ಜನ್ಮ ಅಥವಾ ವಾಸಸ್ಥಳ ಆಧಾರದ ಮೇಲೆ ತಾರತಮ್ಯ ಮಾಡಿದಂತಾಗುತ್ತದೆ. ಇದಕ್ಕೂ ಒಂದು ಪರಿಹಾರವಿದೆ. ರಾಜ್ಯ ಸರ್ಕಾರಗಳು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ದೊರಕಿಸಿಕೊಡಲು ಖಾಸಗಿ ವಲಯದೊಂದಿಗೆ ಸಹಭಾಗಿತ್ವದ ಒಪ್ಪಂದ ಮಾಡಿಕೊಳ್ಳಬೇಕು. ಉದ್ಯಮ ವಲಯಕ್ಕೆ ಅಗತ್ಯವಾದ ಮಾನವ ಸಂಪನ್ಮೂಲ ಒದಗಿಸಲು ಯುವಕರಿಗೆ ಸರ್ಕಾರದ ವತಿಯಿಂದಲೇ ವೃತ್ತಿಪರ ತರಬೇತಿಯನ್ನು ನೀಡುವ ವ್ಯವಸ್ಥೆ ಮಾಡಬೇಕು.

ಕೋವಿಡ್‌ ಸಂಕಟದ ಈ ಸಮಯದಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಲು ಅಗತ್ಯವಾದ ಹೊಸ ಹಾಗೂ ಗಟ್ಟಿ ನೀತಿಗಳನ್ನು ಸರ್ಕಾರ ಈಗ ರೂಪಿಸಬೇಕಿದೆ. ಉದ್ಯೋಗವನ್ನು ಖಾತರಿ ಪಡಿಸುವಂತಹ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನೂ ಅದು ಹಾಕಿಕೊಳ್ಳಬೇಕಿದೆ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಿಂದ ಕಳೆದ ವರ್ಷ ಪ್ರಕಟಿಸಲಾದ ನೀತಿಗಳ ಕುರಿತಾದ ಪ್ರಬಂಧದಲ್ಲಿ ನಾವು ಕೆಲವರು, ಒಂದು ಸಲಹೆಯನ್ನು ಸರ್ಕಾರದ ಮುಂದಿಟ್ಟಿದ್ದೆವು. ನಗರ ಉದ್ಯೋಗ ಖಾತರಿ ಯೋಜನೆಯನ್ನೂ ಆರಂಭಿಸಬೇಕು. ಅದರಿಂದ ಕಾರ್ಮಿಕರಿಗೆ ಉದ್ಯೋಗಾವಕಾಶ ನೀಡುವ ಜತೆಗೆ ವಿದ್ಯಾವಂತ ಯುವಕರಿಗೆ ವೇತನ ಆಧಾರಿತ ತರಬೇತಿ ಸೌಲಭ್ಯವನ್ನೂ ಕಲ್ಪಿಸಬೇಕು ಎನ್ನುವುದು ನಮ್ಮ ಸಲಹೆಯಾಗಿತ್ತು.

ಅಂತಹ ನೀತಿಯ ಜರೂರತ್ತು ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಸ್ಥಳೀಯರು ಬೇರೆ ಕಡೆಗೆ ಉದ್ಯೋಗಕ್ಕಾಗಿ ಆಸೆಗಣ್ಣಿನಿಂದ ನೋಡುವಂತಾಗದ, ಹೊರಗಿನವರಿಗೆ ನಿರ್ಬಂಧ ವಿಧಿಸದಿದ್ದರೂ ರಾಜ್ಯದಲ್ಲಿ ಸ್ಥಳೀಯರಿಗೇ ಉದ್ಯೋಗ ಸಿಗುವಂತಹ ವಾತಾವರಣವನ್ನು ಸೃಷ್ಟಿಸುವುದು ಸರ್ಕಾರದ ಆದ್ಯತೆಯಾದರೆ ಮಾತ್ರ, ಉದ್ಯೋಗದ ಪ್ರಶ್ನೆಗೆ ಉತ್ತರ ಸಿಕ್ಕೀತು. ಸ್ಥಳೀಯರಿಗೆ ಅನ್ನವೂ ದಕ್ಕೀತು.

ಲೇಖಕ: ವಕೀಲ ಹಾಗೂ ಸೆಂಟರ್‌ ಫಾರ್‌ ಲಾ ಆ್ಯಂಡ್‌ ಪಾಲಿಸಿ ರಿಸರ್ಚ್‌ನಲ್ಲಿ ಸಂಶೋಧನಾ ಸಲಹೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.