ADVERTISEMENT

ಕೃತಿಗಳಲ್ಲಿ ದುಡಿಮೆಯ ಗ್ರಹಿಕೆ

ಕೆ.ಸತ್ಯನಾರಾಯಣ
Published 17 ಅಕ್ಟೋಬರ್ 2020, 19:30 IST
Last Updated 17 ಅಕ್ಟೋಬರ್ 2020, 19:30 IST
ಶಿವರಾಮ ಕಾರಂತ
ಶಿವರಾಮ ಕಾರಂತ   

ಕನ್ನಡದ ಅನನ್ಯ ಕಾದಂಬರಿಕಾರ ಕೋಟ ಶಿವರಾಮ ಕಾರಂತರ ಕೃತಿಗಳನ್ನು ಕನ್ನಡಿಗರು ಯಾವುದೇ ರೀತಿಯ ಒತ್ತಾಯವಿಲ್ಲದೆ ನಿರಂತರವಾಗಿ ತಮ್ಮ ತಮ್ಮ ಬದುಕಿನ ಭಾಗವಾಗಿ ಓದುತ್ತಲೇ ಇರುತ್ತಾರೆ ಎಂಬುದೇನೋ ನಿಜ. ಆದರೆ, ಈಗ ನಮ್ಮ ಸಮಾಜವು ಎದುರಿಸುತ್ತಿರುವ ಬಿಕ್ಕಟ್ಟು ಮತ್ತು ಅದಕ್ಕೆ ಮಾನವೀಯವಾಗಿ ಸ್ಪಂದಿಸಲಾಗದ ನಮ್ಮೆಲ್ಲರ ಸಂವೇದನಾರಹಿತ ಮಾನಸಿಕ ಸ್ಥಿತಿಯ ಹಿನ್ನೆಲೆಯಲ್ಲಿ ಅವರ ಕೆಲವು ಕಾದಂಬರಿಗಳನ್ನು ವಿಶೇಷವಾಗಿ ಓದುವ, ಮರು ಓದುವ ಸಾಂಸ್ಕೃತಿಕ ಜರೂರಿದೆ. ನಮಗಾಗಿ, ನಮ್ಮೊಡನೆಯೇ ಬದುಕುತ್ತಿರುವ ಸಹ ನಾಗರಿಕರಿಗಾಗಿ.

ಕೊರೊನಾ ಬಿಕ್ಕಟ್ಟಿನಿಂದಾಗಿ ನಮ್ಮ ಸಮಾಜದ ಎಲ್ಲ ವರ್ಗಗಳ ಮೇಲೆ ನಾನಾ ರೀತಿಯ ಪರಿಣಾಮವಾಗಿ ಎಲ್ಲರ ಬದುಕು ದುಸ್ತರವಾಗಿದೆ. ಅದರಲ್ಲೂ ಅಸಂಘಟಿತ ವಲಯದಲ್ಲಿರುವ ಶ್ರಮಜೀವಿಗಳ, ಬಡವರ ಬದುಕು ಹೆಚ್ಚು ದುಸ್ತರವಾಗಿದೆ. ಮಧ್ಯಮ ವರ್ಗದವರಿಗೆ, ಮೇಲುವರ್ಗದವರಿಗೆ ಇರುವಂತೆ, ಈ ಬಿಕ್ಕಟ್ಟನ್ನು ಎದುರಿಸಲು ಇವರಲ್ಲಿ ಸಂಪನ್ಮೂಲಗಳಿಲ್ಲ, ವ್ಯವಧಾನವಿಲ್ಲ, ಸಂಘಟನೆಯಿಲ್ಲ. ಈ ವರ್ಗದ ಜನಗಳ ಸಮಸ್ಯೆ ಕುರಿತು ಸರ್ಕಾರ, ಸಮಾಜ ಗಮನಕೊಡಲಿಲ್ಲ ಎಂದು ಇದರ ಅರ್ಥವಲ್ಲ. ಹಾಗೆ ತೆಗೆದುಕೊಂಡ ಕ್ರಮಗಳಲ್ಲಿ ಪ್ರೀತಿಯಿರಲಿಲ್ಲ, ದಿಟ್ಟತನವಿರಲಿಲ್ಲ, ದೂರದೃಷ್ಟಿಯಿರಲಿಲ್ಲ. ಹೀಗಾಗಲು ಕಾರಣ ನಮ್ಮ ಕಾಳಜಿ ಅಪ್ರಾಮಾಣಿಕ ಆದದ್ದರಿಂದಲ್ಲ, ಸಂವೇದನಾರಹಿತ ಆಗಿದ್ದರಿಂದ.

ಶ್ರಮಿಕರ, ಬಡವರ ಪರವಾಗಿ, ವೈಚಾರಿಕವಾಗಿ ಮಿಡಿಯುವುದಕ್ಕೂ ಅವರನ್ನು ಅಂಕಿ-ಅಂಶಗಳಾಗಿ, ಗುಂಪುಗಳಾಗಿ ಕಾಣುವುದಕ್ಕೂ ವ್ಯತ್ಯಾಸವಿದೆ. ಅವರು ಪ್ರತಿನಿತ್ಯ ಹೇಗೆ ದುಡಿಯುತ್ತಾರೆ, ಉಣ್ಣುತ್ತಾರೆ, ಮಲಗುತ್ತಾರೆ, ವಿರಾಮವೆಂಬುದು ಇದ್ದರೆ ಆ ಕಾಲವನ್ನು ಹೇಗೆ ಕಳೆಯುತ್ತಾರೆ, ಹಬ್ಬಹರಿದಿನಗಳನ್ನು ಹೇಗೆ ಆಚರಿಸುತ್ತಾರೆ ಎಂಬುದನ್ನೆಲ್ಲ ವಿವರವಾಗಿ ತಿಳಿದು, ಅವರ ಸಮಸ್ಯೆಗಳಿಗೆ ಮಿಡಿದು, ನೀತಿನಿಯಮಗಳನ್ನು ರೂಪಿಸುವ ಅಗತ್ಯವಿದೆ. ಕಾರಂತರ ಆಯ್ದ ಆರೂ ಕಾದಂಬರಿಗಳು ಬದುಕನ್ನು ಈ ನೆಲೆಯಲ್ಲಿ ಗ್ರಹಿಸಿ ಅಭಿವ್ಯಕ್ತಗೊಳಿಸುವುದರಿಂದ, ಅವುಗಳ ಓದು ನಮ್ಮನ್ನು ಸಂವೇದನಾಶೀಲರನ್ನಾಗಿ ಮಾಡುವ ಸಾಧ್ಯತೆಯಿದೆ. ನಾವು ತೆರೆದ ಮನಸ್ಸಿನವರಾಗಿದ್ದರೆ 1940-1950ರ ದಶಕಗಳಲ್ಲಿ ಬರೆದ ಈ ಕಾದಂಬರಿಗಳು ಶ್ರಮಿಕರ ಬದುಕನ್ನು ವಲಸೆ, ರೋಗರುಜಿನ, ದಿನನಿತ್ಯದ ದುಡಿಮೆ, ನಿಟ್ಟುಸಿರು ಈ ನೆಲೆಗಳಲ್ಲಿ ಗ್ರಹಿಸಿದ್ದು ಎದ್ದು ಕಾಣುತ್ತದೆ.

ADVERTISEMENT

ಕಾರಂತರ ವಿಶೇಷವೆಂದರೆ, ದುಡಿಮೆಯ ಎಲ್ಲ ಸ್ತರಗಳನ್ನು ಅವರು ಸಮಾನ ಶ್ರದ್ಧೆ ಕಾಳಜಿಯಿಂದ ಗ್ರಹಿಸುತ್ತಾರೆಂಬುದು. ಗೃಹಿಣಿಯರ, ಭೂರಹಿತರ, ದಲಿತರ, ಗಿರಿಜನರ, ಮನೆಯ ಜೀತದಾಳುಗಳ, ಗುತ್ತಿಗೆದಾರರ ಕಪಿಮುಷ್ಟಿಯಲ್ಲಿ ಸಿಕ್ಕಿಹಾಕಿಕೊಂಡು ಹೊರಬರಲಾರದೆ ನರಳುತ್ತಾ, ಸಾಯುತ್ತಾ ದುಡಿಯುವವರ ಬದುಕು, ಬವಣೆಯನ್ನು ಅವರು ಸೂಕ್ಷ್ಮವಾಗಿ ಗ್ರಹಿಸುತ್ತಾರೆ. ಕಾರಂತರ ಸೃಜನಶೀಲತೆಯ ವ್ಯಾಪಕತೆಯ ಸ್ವರೂಪ ಎಷ್ಟು ವಿಶಾಲವಾಗಿದೆಯೆಂದರೆ, ಆಧುನಿಕ ಶಿಕ್ಷಣ ಪದ್ಧತಿ, ಮಧ್ಯಮವರ್ಗದ ವೃತ್ತಿ, ನಗರ ಪ್ರದೇಶಗಳಲ್ಲಿ ಸೃಷ್ಟಿಯಾಗುವ ಹೊಸ ರೀತಿಯ ಶ್ರಮದ ವಿನ್ಯಾಸವನ್ನು ಕೂಡ ಗುರುತಿಸುತ್ತಾರೆ. ಈ ಎಲ್ಲ ಗ್ರಹಿಕೆಯ ಹಿಂದೆ ಅವರ ಪ್ರವಾಸ ಪರಿಶ್ರಮವಿದೆ. ಗ್ರಾಮ ಸಮೀಕ್ಷೆಯನ್ನು ಮಾಡುವುದರ ಜೊತೆಗೆ, ದಲಿತರ ಕೇರಿಗಳಿಗೆ ಮಲೆಯರ ಕುಡಿಗಳಿಗೆ ಹೋಗಿ ವಾಸಮಾಡಿ ಕ್ಷೇತ್ರ ಅಧ್ಯಯನವನ್ನು ಕೂಡ ನಡೆಸುತ್ತಾರೆ. ಬೇರೆ ದೇಶಗಳಿಂದ ಬಂದ ಸಮಾಜಶಾಸ್ತ್ರಜ್ಞರನ್ನೂ ಇಂತಹ ಕೇರಿ-ಕುಡಿಗಳಿಗೆ ಕರೆದುಕೊಂಡು ಹೋಗುತ್ತಾರೆ.

ಕಾರಂತರ ಈ ಕಾದಂಬರಿಗಳನ್ನು ಓದುವುದರಿಂದ ಮಾತ್ರವಲ್ಲ, ಆ ಕಾದಂಬರಿಗಳು ರಚನೆಯಾದ ಹಿನ್ನೆಲೆ, ಮನೋಭೂಮಿಕೆಯನ್ನು ತಿಳಿಯುವುದರಿಂದಲೂ ಓದುಗರು ಹೆಚ್ಚು ಸೂಕ್ಷ್ಮತೆಯನ್ನು ಪಡೆಯಬಹುದು. ಶ್ರಮ, ಶ್ರಮಿಕರ ದುಡಿಮೆ, ಜೀವನ ವಿನ್ಯಾಸವನ್ನು ಕಾರಂತರು ಶೋಧಿಸಿದಷ್ಟು ವ್ಯಾಪಕತೆ ಮತ್ತು ಸೂಕ್ಷ್ಮತೆಯಲ್ಲಿ ಕನ್ನಡದ ಮತ್ಯಾವ ಕಾದಂಬರಿಕಾರರೂ ಶೋಧಿಸಿಲ್ಲ. ‘ಚೋಮನ ದುಡಿ’ ದಲಿತ ಕುಟುಂಬವೊಂದರ ಬಡತನ, ವಿಘಟನ, ಆಸೆ-ಆಕಾಂಕ್ಷೆ, ಹೋರಾಟಗಳನ್ನು ಕಾದಂಬರಿಯ ಕಾಲದ ಎಲ್ಲ ಒತ್ತಡಗಳ ವಿನ್ಯಾಸದ ಹಿನ್ನೆಲೆಯಲ್ಲಿ ಗ್ರಹಿಸುತ್ತದೆ. ದುಡಿಯಲು ಎಲ್ಲರಿಗೂ ಒಂದು ಪಾಳಿಯಾದರೆ ಚೋಮನ ಮಗಳು ಬೆಳ್ಳಿಗೆ ಎರಡು ಮೂರು ಪಾಳಿ. ತನ್ನ ಮನೆಯ ಕೆಲಸ, ಒಡೆಯರ ಮನೆಯ ಕೆಲಸ, ಬುಟ್ಟಿ ಹೆಣೆಯುವುದು, ಸೊಪ್ಪು ಕುಯ್ದು ತರುವುದು, ಎಲ್ಲ ಜವಾಬ್ದಾರಿಯೂ ಅವಳದೇ. ತಂದೆ - ಸಹೋದರರಿಗೆ ಸಾಧ್ಯವಿಲ್ಲದೆ ಹೋದಾಗ ದೂರದ ತೋಟಕ್ಕೆ ಹೋಗಿ ದುಡಿಯಬೇಕು. ಚೋಮ ಭೂಮಿಯನ್ನು ಗೇಣಿಗೆ ಪಡೆಯಲಾಗದ ಸೋಲಿನಲ್ಲಿ ಪ್ರತಿಭಟನ ರೂಪವಾಗಿ ಎತ್ತುಗಳಿಗೆ ಹಿಂಸಿಸುವುದು, ಮಕ್ಕಳಿಗೆ ನೀಡುವ ಹಿಂಸೆ, ಆತ್ಮಹಿಂಸೆ, ವಿಕ್ಷಿಪ್ತವಾಗಿ ಅತಿಯಾಗಿ ದುಡಿಯುವುದು ಹೀಗೆಲ್ಲ ಮಾಡುತ್ತಾನೆ.

ಸಾಂಪ್ರದಾಯಿಕ ಜೀತಪದ್ಧತಿಗಿಂತ ಭಿನ್ನವಾಗಿ ಪ್ಲಾಂಟೇಶನ್‍ಗಳಲ್ಲಿ ಚಾಲ್ತಿಗೆ ಬರುತ್ತಿರುವ ನಗದು ಕೂಲಿಯ ವ್ಯವಸ್ಥೆಯಲ್ಲಿ ಕೂಡ ಇಂತಹ ಕುಟುಂಬಗಳಿಗೆ ಬಿಡುಗಡೆಯಿಲ್ಲ. ಶ್ರಮಿಕರನ್ನು ಗುಂಪುಗುಂಪಾಗಿ ಗುಳೆ ಹೊರಡಿಸಿಕೊಂಡು ಹೋಗುವುದು, ಅವರನ್ನು ಹೊಸ ರೀತಿಯ ಕಾಯಿಲೆ - ಕಸಾಲೆಗಳಿಗೆ ಗುರಿಪಡಿಸಿ, ಶಾಶ್ವತವಾಗಿ ಅವರನ್ನು ದುರ್ಬಲರನ್ನಾಗಿ ಮಾಡುವುದು, ಕೆಳಮಟ್ಟದ ವಸತಿಗಳಲ್ಲಿ ವಾಸ ಮಾಡುವಂತೆ ಮಾಡುವುದು - ಇದೆಲ್ಲದರ ಚಿತ್ರಣವನ್ನು ಓದುವಾಗ ಏಪ್ರಿಲ್ - ಮೇ, 2020ರ ಕಾಲಾವಧಿಯಲ್ಲಿ ನಾವು ಕಂಡ ಆದರೆ ಸ್ಪಂದಿಸಲಾಗದೆ ಹೋದ ವಲಸೆ ಶ್ರಮಿಕರ ‘ಮಹಾಪ್ರಸ್ಥಾನ’ ಮತ್ತೆ ಮತ್ತೆ ಕಣ್ಣು ಮುಂದೆ ಬರುತ್ತದೆ. ಕನ್ನಡ ವಿಮರ್ಶೆ ಗಮನಿಸುವುದರಲ್ಲಿ ವಿಫಲವಾದ, ಕಾರಂತರ ಉತ್ತಮ ಕಾದಂಬರಿಗಳಲ್ಲೊಂದಾದ ‘ಜಾರುವ ದಾರಿಯಲ್ಲಿ’ ಕೃತಿ ಯುದ್ಧದ ಹಿನ್ನೆಲೆಯಲ್ಲಿ ಜರುಗುವ ಶ್ರಮಿಕರ ವಲಸೆ, ಅರಣ್ಯ ಸಂಪತ್ತಿನ ವಿನಾಶ, ಅರಣ್ಯಗಳ ನಡುವೆ ತಾತ್ಕಾಲಿಕವಾಗಿ ನಿರ್ಮಿಸುವ ಜನವಸತಿಗಳಿಂದ ಹರಡುವ ರೋಗ-ರುಜಿನಗಳನ್ನು ದರ್ಶನ ಮಾಡಿಸುತ್ತದೆ. ‘ಆ ಬಯಲಿನ ನಟ್ಟ ನಡುವೆ, ಊರ ನಾಟಕ ಕಂಪನಿಗಳ ಮಳೆಗಾಲದ ಥಿಯೇಟರಿನಂತೆ ಕಟ್ಟಿದ ಭಾರಿ ದೊಡ್ಡ ಮಳೆಮಾಡಿದೆ; ಅದರೊಳಕ್ಕೆ ನೀಳವಾದ ಗುಂಡಿಗಳಿವೆ. ಅವುಗಳ ಮೇಲೆ ಮರದ ಸೇತುವೆಗಳಿವೆ. ಈ ಸೇತುವೆಗಳ ಮೇಲೆ ಭುಜಬಲದಿಂದ ನಾಟಗಳನ್ನುರುಳಿಸಿ, ಹಲವರು ಮರ ಸಿಗಿಯತೊಡಗುತ್ತಾರೆ. ಒಮ್ಮೊಮ್ಮೆ ಇಪ್ಪತ್ತು ಮೂವತ್ತು ಜೊತೆ ಕೆಲಸಗಾರರು ಸಾಲುಸಾಲಾಗಿ ಮರ ಸಿಗಿಯುವಂತಹ ಈ ಚಿತ್ರ ಗರುಡ ಪುರಾಣದ ನರಕ ಕಲ್ಪನೆಯನ್ನು ಹುಟ್ಟಿಸುತ್ತದೆ. ಪಾಪವನ್ನು ಮಾಡಿ, ದೆವ್ವದಾಕಾರದ ಮರಗಳಿಗೆ ಹುಟ್ಟಿದ ಈ ಜೀವಗಳಿಗೆ ಯಮಾಲಯದಲ್ಲಿ ಸಲ್ಲಿಸುವ ಒಂದು ಘೋರ ದೃಶ್ಯದಂತೆ ಕಾಣುತ್ತದೆ.’

‘ದುಡಿಮೆ’ ಮನುಷ್ಯ ಜೀವನ ನಿರ್ವಹಣೆಗಾಗಿ ಮಾತ್ರವಲ್ಲ. ಶ್ರಮಕ್ಕಿರುವ ಆಧ್ಯಾತ್ಮಿಕ, ಸೌಂದರ್ಯಾತ್ಮಕ ಸಂಬಂಧಗಳನ್ನು ಕೂಡ ಕಾರಂತರು ಗುರುತಿಸುತ್ತಾರೆ. ದುಡಿಮೆಯು ಮನುಷ್ಯ, ಸಾಹಸಶೀಲ ಪ್ರವೃತ್ತಿಗೂ ಒಂದು ಅಭಿವ್ಯಕ್ತಿಯ ಮಾಧ್ಯಮ ಎಂಬುದನ್ನು ‘ಕುಡಿಯರ ಕೂಸು’ ಕಾದಂಬರಿಯ ಕರಿಯನಂತಹ ಪಾತ್ರಗಳು ಸಾದರಪಡಿಸುತ್ತವೆ. ‘ಚಿಗುರಿದ ಕನಸು’ ಕಾದಂಬರಿಯ ಶಂಕರ ತನ್ನ ಆದರ್ಶದ ಪ್ರೀತಿ ಮತ್ತು ಸಾಕ್ಷಾತ್ಕಾರದ ಭಾಗವಾಗಿ ವೈಜ್ಞಾನಿಕ ಕೃಷಿಯ ಜೀವನ ಕ್ರಮವನ್ನು ಅಳವಡಿಸಿಕೊಳ್ಳುವುದು ಕೂಲಿಕಾರರಿಗೆ ನ್ಯಾಯಸಮ್ಮತವಾದ ಕೂಲಿ ಕೊಡುವುದು, ಒಳ್ಳೆಯ ವಸತಿ ಒದಗಿಸಿಕೊಡುವುದು, ಕಾರಂತರ ಮನಸ್ಸಿನ ಆ ಆದ್ಯತೆಯನ್ನು ಸೂಚಿಸುತ್ತದೆ. “ಬೆಟ್ಟದ ಜೀವ” ಕಾದಂಬರಿಯ ಗೋಪಾಲಯ್ಯ - ಶಂಕರಮ್ಮ ಸಾಂಸಾರಿಕವಾಗಿ ಅನ್ಯೋನ್ಯವಾಗಿರುವುದು ಕಾಡಿನ ಒಂಟಿತನದ ನಡುವೆಯೂ ಜೀವಂತಿಕೆಯಿಂದ ಬದುಕುತ್ತಿರುವುದಕ್ಕೆ ಕಾರಣ. ಅವರು ಭೂ ಮಾಲೀಕರಾಗಿರುವುದರ ಜೊತೆಗೆ, ವೈಯಕ್ತಿಕವಾಗಿ ನಿರಂತರ ಜಮೀನಿನಲ್ಲಿ ಕೆಲಸ ಮಾಡುವುದು ಕೂಡ ಕಾರಣ ಎಂದು ಕಾರಂತರು ಮತ್ತೆ ಮತ್ತೆ ಸೂಚಿಸುತ್ತಾರೆ.

“ವಲಸೆ”ಯು ತನ್ನೆಲ್ಲ ಸಮಸ್ಯೆಗಳೊಡನೆ ಕಾರ್ಮಿಕರಿಗೆ ಬಿಡುಗಡೆಯ, ಉನ್ನತ ಜೀವನ ಕ್ರಮಕ್ಕೆ ರಹದಾರಿ ಎಂಬುದು ಕಾರಂತರ ನಿಲುವು. ಆದರೆ ವಲಸೆಯನ್ನು ಕಾರ್ಮಿಕರು ತಮ್ಮ ಬೇಸಾಯ ವ್ಯವಹಾರಗಳ ಅಗತ್ಯಕ್ಕಾಗಿ ಬಳಸಿಕೊಳ್ಳುವ, ಕಾರ್ಮಿಕರ ದೇಹಾರೋಗ್ಯ ಮತ್ತು ಸೌಂದರ್ಯವನ್ನು ನಾಶ ಮಾಡುವ ಗುತ್ತಿಗೆದಾರರ ಹಾಗೂ ಭೂಮಾಲೀಕರ ಮನೋಧರ್ಮವನ್ನು ಕೂಡ ಈ ಕಾದಂಬರಿಗಳು ಗುರುತಿಸುತ್ತವೆ. ಗೋಪಾಲಯ್ಯ ಕೂಡ ವಲಸಿಗರು ಬಂದು ತನ್ನ ಜಮೀನಿನಲ್ಲಿ ಉಳಿಯುವುದಿಲ್ಲ, ಜ್ವರ ಎಂದು ಓಡಿ ಹೋಗುತ್ತಾರೆ ಎಂದು ಹಪಹಪಿಸುತ್ತಲೇ ಇರುತ್ತಾನೆ.

“ಮರಳಿ ಮಣ್ಣಿಗೆ” ಕಾದಂಬರಿಯು ಗೃಹಿಣಿಯರು ಕೃಷಿ ಕಾರ್ಮಿಕರೂ ಆದಾಗ ಅನುಭವಿಸಬೇಕಾದ ವಿಪರೀತ ಶ್ರಮ, ಅದರಿಂದಾಗಿ ವ್ಯಕ್ತಿತ್ವದಲ್ಲಿ ಮೂಡುವ ಖಿನ್ನತೆ, ಆತ್ಮನಾಶದ ಎಳೆಗಳನ್ನು ಮನೋಜ್ಞವಾಗಿ ಚಿತ್ರಿಸುತ್ತದೆ. ಯಾವುದೇ ರೀತಿಯ ‘ದುಡಿಮೆ’ಯನ್ನು ಗೌರವಿಸದ ಲಚ್ಚನಂತಹವರಲ್ಲಿ ಮುಂಬೈನಂತಹ ಮಹಾನಗರದಲ್ಲಿ ನಿರುದ್ಯೋಗದಿಂದ ಮೂಡುವ ಸಿನಿಕತೆ, ಅಸಹಾಯಕತೆ, ಹಗಲುಗನಸುಗಾರಿಕೆಯನ್ನು ಕಲೆ ಮತ್ತು ಸೃಜನಶೀಲತೆ ವಾಣಿಜ್ಯೀಕರಣಕ್ಕೆ ಒಳಗಾಗುವ ದುರಂತವನ್ನು ಕೂಡ ಪರಿಶೀಲಿಸುತ್ತದೆ.

ಹೀಗೆ ಕಾರಂತರ ಆಯ್ದ ಈ ಆರು ಕಾದಂಬರಿಗಳು ಶ್ರಮ, ಶ್ರಮಿಕರ ವಿವಿಧ ವಿನ್ಯಾಸಗಳನ್ನು ಒಂದು ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ವಿನ್ಯಾಸಗೊಳಿಸುತ್ತವೆ. ಆದರೆ ಈ ಕಾದಂಬರಿಗಳನ್ನು ಬರೆದು ಏಳೆಂಟು ದಶಕಗಳಾದ ಮೇಲೂ ಈ ವರ್ಗದವರ ಜೀವನ ವಿನ್ಯಾಸ ಮತ್ತು ನಮ್ಮ ಸಂವೇದನೆಯ ಸ್ವರೂಪ ಇನ್ನೂ ಹಾಗೆಯೇ ಇದೆ ಎಂಬುದು ಏನನ್ನು ಸೂಚಿಸುತ್ತದೆ? ಈ ಆರು ಕಾದಂಬರಿಗಳನ್ನು ಮತ್ತೆ ಓದುತ್ತಾ ಕನ್ನಡ ಓದುಗರು ಕಾರಂತರಿಗೆ ನಾವು ಬದುಕುತ್ತಿರುವ ಸಂದರ್ಭದ ಶುಭಾಶಯಗಳನ್ನು ಹೇಳಬಹುದು.

(ಲೇಖಕರ 'ಕಾರಂತರ ಕಾದಂಬರಿಗಳಲ್ಲಿ 'ದುಡಿ'ಮೆ' ಕೃತಿ ಕಳೆದ ವಾರವಷ್ಟೇ ನವಕರ್ನಾಟಕದಿಂದ ಪ್ರಕಟಿತವಾಗಿದೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.