ಕಲ್ಯಾಣ ಕರ್ನಾಟಕ ಶನಿವಾರವಷ್ಟೇ ‘ವಿಮೋಚನಾ ದಿನ’ವನ್ನು ಆಚರಿಸಿದೆ. ಹೈದರಾಬಾದ್ ನಿಜಾಮರು ಆಳ್ವಿಕೆ ನಡೆಸುತ್ತಿದ್ದಾಗ ಕಲಬುರಗಿಯೂ ಆ ಸಂಸ್ಥಾನದ ಭಾಗವಾಗಿತ್ತು. ಆ ಅವಧಿಯಲ್ಲಿ ನಿರ್ಮಾಣವಾದ ಕಟ್ಟಡಗಳು ಈಗ ವಿವಿಧ ಕಚೇರಿಗಳ ತಾಣವಾಗಿ ಬದಲಾಗಿವೆ. ಆದರೆ, ಚರಿತ್ರೆಯ ಸಾಕಷ್ಟು ಕಥೆಗಳನ್ನು ಉಸುರುತ್ತಲೇ ಇವೆ, ಗೊತ್ತೆ?
***
ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿಜಾಮರ ಅವಧಿಯಲ್ಲಿ ಅರಮನೆಯಾಗಿದ್ದ ಕಟ್ಟಡಗಳೆಲ್ಲ ಈಗ ಸರ್ಕಾರಿ ಕಚೇರಿಗಳಾಗಿವೆ. ಅನನ್ಯ ವಾಸ್ತುಶೈಲಿಯನ್ನು ಬಿಂಬಿಸುವ ಇವುಗಳ ಹಿಂದೆ ಈಗಲೂ ಸ್ವಾರಸ್ಯಕರ ಕಥೆಗಳಿವೆ. ಕಲಬುರಗಿಯ ಜಿಲ್ಲಾ ಪಂಚಾಯಿತಿ ಕಚೇರಿಯೂ ಒಂದು ಕಾಲದಲ್ಲಿ ಮೀರ್ ಮೆಹಬೂಬ್ ಅಲಿ ಖಾನ್ ಅವರು ನಿರ್ಮಿಸಿದ ಅರಮನೆಯಾಗಿತ್ತು ಎಂಬುದು ಬಹುತೇಕರಿಗೆ ಗೊತ್ತೇ ಇಲ್ಲ.
ನಿಜಾಮರ ವೈಭವ ಮತ್ತು ಘನತೆಗೆ ಸಾಕ್ಷಿಯಾಗಿ ಈ ಅರಮನೆ ಈಗಲೂ ಸುಸ್ಥಿತಿಯಲ್ಲಿದೆ. ಜಿಲ್ಲಾ-ತಾಲ್ಲೂಕು ಕಚೇರಿಯಾಗಿ ಬಳಸಲಾಗುತ್ತಿದ್ದ ಈ ಅರಮನೆಯು ಕಲಬುರಗಿ ನಗರದ ಜಗತ್ ವೃತ್ತದಲ್ಲಿದೆ. ಅದನ್ನೀಗ ಸರ್ಕಾರಿ ಅತಿಥಿಗೃಹವಾಗಿ ಬಳಕೆ ಮಾಡಲಾಗುತ್ತಿದೆ.
ಇದು ಅಸಫ್ ಜಾಹಿ ರಾಜವಂಶದ ಆರಂಭಿಕ ಏಕ-ಅಂತಸ್ತಿನ ಕಟ್ಟಡವಾಗಿದೆ. ಇದು ನಿಜಾಮರ ಅರಮನೆಯಾಗಿತ್ತು. ಈ ಕಟ್ಟಡವನ್ನು 1881ರಲ್ಲಿ ಆರನೇ ನಿಜಾಮ್ ಮೀರ್ ಮೆಹಬೂಬ್ ಅಲಿ ಖಾನ್ ಬಹದ್ದೂರ್ ನಿರ್ಮಿಸಿದರು. ಇಲ್ಲಿಂದ ಐತಿಹಾಸಿಕ ಮೆಹಬೂಬ್ ಸಾಗರ್ ಮತ್ತು ಮೆಹಬೂಬ್ ಗುಲ್ಶನ್ ಗಾರ್ಡನ್ ಸ್ಪಷ್ಟವಾಗಿ ಗೋಚರಿಸುತ್ತವೆ.
ಈ ರಚನೆಯು ಬಲವಾದ ನೆಲಮಾಳಿಗೆಯ ಮೇಲೆ ಮತ್ತು ವಿಶಾಲವಾದ ವೇದಿಕೆಯ ಮೇಲೆ ನಿಂತಿದೆ. ಜಿಲ್ಲೆಯಾದ್ಯಂತ ಲಭ್ಯವಿರುವ ಕಪ್ಪು ಕಲ್ಲಿನಲ್ಲಿ ಇದನ್ನು ನಿರ್ಮಿಸಲಾಗಿದೆ. ಚಾವಣಿಯು ಕೊನೆಗೊಳ್ಳುವ ಮಧ್ಯ ಮತ್ತು ಮೇಲಿನ ಭಾಗಗಳಲ್ಲಿ ಶಹಾಬಾದ್ ಬಿಳಿ ಕಲ್ಲಿನ ಸಂಯೋಜನೆಯನ್ನು ಹೊಂದಿದೆ. ಈ ದಪ್ಪ ನಯಗೊಳಿಸಿದ ಕಲ್ಲನ್ನು ಜಿಜ್-ಜಾಗ್ ಶೈಲಿಯಲ್ಲಿ ಇರಿಸಲಾಗಿದೆ. ಪ್ರತಿ ಕೋಣೆಗಳ ನಿರ್ಮಾಣಕ್ಕೆ ಹೆಚ್ಚಾಗಿ ಸಾಗುವಾನಿ ಮರಮಟ್ಟನ್ನು ಬಳಸಲಾಗಿದೆ. ಈಕಟ್ಟಡ ಅರ್ಧ ವೃತ್ತಾಕಾರದ ಕಮಾನುಗಳ ಮೇಲೆ ನಿಂತಿರುವ ಎರಡು ಬೃಹತ್ ದ್ವಾರಗಳನ್ನು ಹೊಂದಿದ ದೊಡ್ಡ ತೆರೆದ ನ್ಯಾಯಾಲಯದ ಅಂಗಳವನ್ನೂ ಹೊಂದಿದೆ. ಉತ್ತರ ಭಾಗದಲ್ಲಿ ಹುಲ್ಲುಹಾಸು ಮತ್ತು ಉದ್ಯಾನವನ್ನು ಕಾಣಬಹುದು. ಸದ್ಯ ಅಲ್ಲಿ ಜಿಲ್ಲಾಧಿಕಾರಿಗಳ ಬಂಗಲೆ ಇದೆ.
ಗೋಥಿಕ್ ಯುರೋಪಿಯನ್ ವಾಸ್ತುಶೈಲಿಯ ಪ್ರಭಾವವನ್ನು ಇದು ಹೊಂದಿದೆ. ಕಟ್ಟಡವು ಅನೇಕ ದೊಡ್ಡ ಸಭಾಂಗಣಗಳು ಮತ್ತು ಸಣ್ಣ ಕೊಠಡಿಗಳನ್ನು ಒಳಗೊಂಡಿದೆ. ಅರಮನೆಯ ಆವರಣ ಪ್ರವೇಶಿಸಿದೊಡನೆ ಸುಂದರ ವಿಶಾಲವಾದ ಕಮಾನುಗಳುಳ್ಳ ಕಟ್ಟಡವಿದೆ. ಇದೇ ದಿವಾನ್–ಎ-ಆಮ್ ಅಥವಾ ಸಮಾ ಖಾನಾ. ಇದು ಆ ಕಾಲದಲ್ಲಿ ಜನ ತಮ್ಮ ಕುಂದು ಕೊರತೆಗಳನ್ನು ಹೇಳಿಕೊಳ್ಳಲು ಮೀಸಲಿಟ್ಟಿದ್ದ ಪ್ರದೇಶವಾಗಿತ್ತು. ಈ ಸಭಾಂಗಣವಲ್ಲದೆ ಸಣ್ಣ ವಿಶ್ರಾಂತಿ ಕೊಠಡಿ, ಅಡುಗೆ ಮನೆ ಮತ್ತು ರಾಜರ ಸ್ನಾನಗೃಹಗಳಿವೆ.
ನಾಲ್ಕು ಬದಿಗಳ ಭಾಗಗಳು ಬಹು ಕಮಾನುಗಳ ಸಾಲನ್ನು ಹೊಂದಿದ್ದು, ಅರ್ಧ ವೃತ್ತ ಮತ್ತು ಉದ್ದ ಕಮಾನುಗಳು ಗೋಥಿಕ್ ಮತ್ತು ಯುರೋಪಿಯನ್ ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದಿವೆ. ಸಿಲಿಂಡರ್ ಆಕಾರದ ಎರಡು ಗೋಪುರಗಳು ಕಟ್ಟಡದ ದಕ್ಷಿಣ ಭಾಗದಲ್ಲಿವೆ. ಈ ಗೋಪುರಗಳು ಮತ್ತು ಪ್ಯಾರಪೆಟ್ಗೋಡೆಯು ಅರಮನೆಯಾದ್ಯಂತ ವೀಕ್ಷಿಸಲು ತೆರೆದ ಕಿಟಕಿಗಳನ್ನು ಒಳಗೊಂಡಿದೆ.
ರಚನೆಯ ಮಧ್ಯ ಭಾಗವನ್ನು ಸುಮಾರು 30 ಅಡಿ ಎತ್ತರದಲ್ಲಿ ವೆಂಟಿಲೇಟರ್‌ಗಳೊಂದಿಗೆ ನಿರ್ಮಿಸಲಾಗಿದೆ. ಕಟ್ಟಡದೊಳಗೆ ವರ್ಷವಿಡೀ ತಂಪಿರುವಂತೆ ವಿನ್ಯಾಸಗೊಳಿಸಲಾಗಿದೆ. ಕಟ್ಟಡವನ್ನು ನಿರ್ಮಿಸಿದ ವಾಸ್ತುಶಿಲ್ಪಿಯ ಹೆಸರು ತಿಳಿದಿಲ್ಲ. ಕಟ್ಟಡದ ಮುಖ್ಯದ್ವಾರದ ಮುಂದೆ ಒಂದು ಫಿರಂಗಿ ಅಳವಡಿಸಲಾಗಿದ್ದು, ಅದು ಸುಸ್ಥಿತಿಯಲ್ಲಿದೆ.
ಇಂಥ ರಚನೆಗಳನ್ನು ಆರನೇ ಅಸಫ್ ಜಾಹಿ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಸರ್ ಮೀರ್ ಮೆಹಬೂಬ್ ಅಲಿ ಖಾನ್ ಬಹದ್ದೂರ್ (1866-1911) ಮತ್ತು ಅವನ ಮಗ ಮೀರ್ ಓಸ್ಮಾನ್ ಅಲಿ ಖಾನ್ ಬಹದ್ದೂರ್ ಕೊನೆಯ ಮತ್ತು ಏಳನೇ ನಿಜಾಮ್ ಅವರನ್ನು ಹೈದರಾಬಾದ್ ಆಧುನಿಕ ವಾಸ್ತುಶಿಲ್ಪಿ ಎಂದು ಕರೆಯುತ್ತಾರೆ. ಅವರು ಅಸಫ್ ಜಾಹಿ ರಾಜವಂಶದ ಕೊನೆಯ ಆಡಳಿತಗಾರರಾಗಿದ್ದರು. 1948ರ ಸೆಪ್ಟೆಂಬರ್ 17ರಂದು ಹೈದರಾಬಾದ್‌ನ ಸ್ವತಂತ್ರ ಮತ್ತು ಅತಿದೊಡ್ಡ ರಾಜಪ್ರಭುತ್ವದ ಭಾಗವಾಗಿದ್ದ ಈ ಪ್ರದೇಶವನ್ನು ಸ್ವತಂತ್ರ ಭಾರತೀಯ ಒಕ್ಕೂಟವು ಸ್ವಾಧೀನಪಡಿಸಿಕೊಂಡಿತು.
ಸಂಸ್ಕೃತಿ, ಪಾಕಪದ್ಧತಿ, ಸೌಂದರ್ಯಶಾಸ್ತ್ರ, ಕಟ್ಟಡ, ವಾಸ್ತುಶಿಲ್ಪ, ಶಿಕ್ಷಣ, ಆರೋಗ್ಯ ರಕ್ಷಣೆ, ಬ್ಯಾಂಕಿಂಗ್, ರಸ್ತೆ, ರೈಲು ಮಾರ್ಗ, ವಿದ್ಯುತ್ ಶಕ್ತಿ ಸ್ಥಾಪನೆ, ದೂರವಾಣಿ ಮಾರ್ಗ ಮತ್ತು ಅಂಚೆ ಸೇವೆಗೆ ಸಂಬಂಧಿಸಿದಂತೆ ಹೆಚ್ಚಿನ ಅಭಿವೃದ್ಧಿಯು ಮೀರ್ ಮೆಹಬೂಬ್ ಅಲಿ ಖಾನ್ ಆಳ್ವಿಕೆಯಲ್ಲಿ ನಡೆದಿದೆ. ಕೊನೆಯ ಇಬ್ಬರು ನಿಜಾಮರು ಇಲ್ಲಿ ಆಳ್ವಿಕೆ ನಡೆಸಿದರು ಮತ್ತು ಅವರ ಆಡಳಿತದ ಪುರಾವೆಗಳನ್ನು ಇಂದಿಗೂ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಾಣಬಹುದು. ಅವರು ಸ್ವತಂತ್ರವಾಗಿ ‘ಹಲಿ ಸಿಕ್ಕಾ’ ಎಂದು ಕರೆಯಲಾಗುವ ಹೊಸ ನಾಣ್ಯಗಳನ್ನು ಟಂಕಿಸಿದರು. ಕಾಗದದ ನೋಟುಗಳನ್ನು ಉರ್ದು, ಕನ್ನಡ, ತೆಲುಗು, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮುದ್ರಿಸಿದರು. 1918 ರಿಂದ 1926ರ ನಡುವೆ ಉಸ್ಮಾನಿಯಾ ಸಿಕ್ಕಾ ಎಂದು ಗುರುತಿಸುವ ನೋಟುಗಳನ್ನು 1, 5, 10, 100 ಮತ್ತು 1,000 ರೂಪಾಯಿ ಮುಖಬೆಲೆಯಲ್ಲಿ ನೀಡಲಾಯಿತು. ಅಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಲಾಗುತ್ತಿತ್ತು. ಇತರ ರಾಜ್ಯಗಳ ಮರುಸಂಘಟನೆಯ ಹಿನ್ನೆಲೆಯಲ್ಲಿ 1959ರಲ್ಲಿ ಉಸ್ಮಾನಿಯಾ ಸಿಕ್ಕಾವನ್ನು ರದ್ದುಗೊಳಿಸಲಾಯಿತು. ನೋಟುಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಮುದ್ರಿಸುತ್ತಿತ್ತು. ಈ ಬ್ಯಾಂಕ್ 2017ರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆಗೆ ವಿಲೀನವಾಯಿತು.
ಕಲಬುರಗಿ, ರಾಯಚೂರು, ಬೀದರ್, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಇಂದಿಗೂ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿ, ತಹಶೀಲ್ದಾರ್ ಕಚೇರಿ, ಪೊಲೀಸ್ ಠಾಣೆ, ಶಾಲೆಮತ್ತು ಕಾಲೇಜು ನಿಜಾಮರ ಕಾಲದಲ್ಲಿ ನಿರ್ಮಿಸಲಾದ ಅನೇಕ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ಕಲಬುರಗಿಯಲ್ಲಿ ನಿಜಾಮರ ಆಳ್ವಿಕೆಯಲ್ಲಿ ನಿರ್ಮಿಸಲಾದ ರಚನೆಯ ಅವಶೇಷಗಳೆಂದರೆ ವಿಕಾಸ ಭವನದ ಪ್ರವೇಶ ದ್ವಾರ (ಮಿನಿ ವಿಧಾನ ಸೌಧ), ಎಂಎಸ್‌ಕೆ ಮಿಲ್ಸ್, ಮೆಹಬೂಬ್ ಗುಲ್ಶನ್ ಸಾರ್ವಜನಿಕ ಉದ್ಯಾನವನದ ಪ್ರವೇಶ ದ್ವಾರ ಮತ್ತು ಛತ್ರಿ, ಮೆಹಬೂಬ್ ಸಾಗರ್ (ಈಗ ಶರಣಬಸವೇಶ್ವರ ಕೆರೆ), ಟೌನ್ ಹಾಲ್, ಎಂಪಿಎಚ್ಎಸ್ ಶಾಲೆ, ಅಸಫ್ ಗುಂಜ್ ಶಾಲೆ, ತಹಶೀಲ್ದಾರ್ ಕಚೇರಿ.
ಮೀರ್ ಮೆಹಬೂಬ್ ಅಲಿಖಾನ್ ಬಹದ್ದೂರ್ ಅವರ ಅರಮನೆಯು ಕಲಬುರಗಿಯ ವಾಸ್ತುಶಿಲ್ಪ ಪರಂಪರೆಯ ಅತ್ಯಂತ ಪ್ರಮುಖ ಭಾಗವಾಗಿದೆ. ರಾಜ್ಯ ಪುರಾತತ್ವ ಅಥವಾ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಇದನ್ನು ವಹಿಸಿಕೊಳ್ಳಬೇಕು ಮತ್ತು ಇದನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಬೇಕು. ಇದನ್ನು ವಸ್ತು ಸಂಗ್ರಹಾಲಯವಾಗಿಯೂ ಪರಿವರ್ತಿಸಬಹುದು ಎನ್ನುವುದು ಕಲಬುರಗಿ ಭಾಗದ ಇತಿಹಾಸ ಪ್ರಿಯರ ಆಶಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.