ಬೆಂಗಳೂರು: ಕೋಣಗಳ ಮಾಲೀಕರ ಪ್ರತಿಷ್ಠೆಯಾಗಿರುವ ಕಂಬಳದಲ್ಲಿ, ಅವುಗಳ ಅಲಂಕಾರಕ್ಕೂ ಭಾರೀ ಖರ್ಚು ಮಾಡಲಾಗುತ್ತದೆ. ಕೋಣಗಳ ವಿಚಾರದಲ್ಲಿ ಪ್ರತಿಯೊಂದರಲ್ಲೂ ಕಾಳಜಿ ಮಾಡುವ ಮಾಲೀಕರು, ಕಂಬಳದ ವೇಳೆ ಬಳಸುವ ಹಗ್ಗಗಳ ಬಗ್ಗೆಯೂ ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ.
ಸ್ಪರ್ಧೆಯ ಸಮಯದಲ್ಲಿ ಕಂಬಳದ ಕೋಣಗಳ ಅಲಂಕಾರ, ನಿಯಂತ್ರಣ ಹಾಗೂ ಓಡಿಸಲು ವಿಶೇಷವಾಗಿ ತಯಾರಿಸಲಾದ ಹಗ್ಗಗಳನ್ನು ಬಳಸಲಾಗುತ್ತದೆ. ವಿಶಿಷ್ಟವಾಗಿ ನೆಯ್ದು ತಯಾರಿಸುವ ಹಗ್ಗಗಳೂ ಕೂಡ ಕಂಬಳದ ಆಕರ್ಷಣೆಯೇ. ಕೋಣಗಳ ಮಾಲೀಕರು ಪ್ರತಿಷ್ಠೆಗಾಗಿ ತಮ್ಮ ಆಯ್ಕೆಯ ಬಣ್ಣಗಳ ಹಗ್ಗಗಳನ್ನೇ ಬಳಸುತ್ತಾರೆ.
ಕಂಬಳ ಸ್ಪರ್ಧೆಯಲ್ಲಿ ಪ್ರಸಿದ್ಧಿ ಪಡೆದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾರ್ಕೂರು ಶಾಂತರಾಮ ಶೆಟ್ಟರ ಕೋಣಗಳು ಕಟ್ಟಿದ್ದ ಹಟ್ಟಿಯಲ್ಲಿ ವಿವಿಧ ಹಗ್ಗಗಳ ದರ್ಶನವಾಯಿತು. ಕಂಬಳ ಅಕಾಡೆಮಿಯ ನಿರ್ದೇಶಕ ಹಾಗೂ ಕಂಬಳ ಕರೆ ನಿರ್ಮಾಣದಲ್ಲಿ ಪ್ರಸಿದ್ಧಿ ಪಡೆದ ಅಪ್ಪಣ್ಣ ಅಲಿಯಾಸ್ ಜಾನ್ ಸಿರಿಲ್ ಡಿ’ಸೋಜಾ ಅವರು ಹಗ್ಗಗಳ ಬಳಕೆ ಬಗ್ಗೆ ತಿಳಿಸಿಕೊಟ್ಟರು.
ಈ ಹಗ್ಗಗಳನ್ನು ಕೈಯಲ್ಲಿಯೇ ನೇಯ್ದು ತಯಾರಿಸಲಾಗುತ್ತದೆ. ಮೀನುಗಾರರು ಬಳಸುವ ಹಗ್ಗವನ್ನು ಬಳಸಿ ಈ ಹಗ್ಗಗಳನ್ನು ನೇಯಲಾಗುತ್ತದೆ. ಸಾಮಾನ್ಯ ಹಗ್ಗಗಳಿಗಿಂತ ಇದು ಕೆ.ಜಿಗೆ ₹150-200 ತುಟ್ಟಿ. ಮಂಗಳೂರಿನ ಬಂದರ್‌ನ ದಕ್ಕೆಯಿಂದ ಈಗ ಹಗ್ಗಗಳನ್ನು ತಂದು ನೇಯಲಾಗುತ್ತದೆ. ಯಂತ್ರಗಳ ಮೂಲಕ ಈ ಹಗ್ಗ ನೇಯುವುದು ಸಾಧ್ಯವಿಲ್ಲ. ಇಡೀ ಕಂಬಳದಲ್ಲಿ ಈ ಹಗ್ಗ ನೇಯುವವರು 10 ಮಂದಿ ಮಾತ್ರ. ಕಂಬಳ ಅಕಾಡೆಮಿಯಲ್ಲಿ ಇದಕ್ಕೆ ವಿಶೇಷ ತರಬೇತಿ ಕೂಡ ನೀಡಲಾಗುತ್ತದೆ ಎಂದರು ಅಪ್ಪಣ್ಣ.
ಹಗ್ಗದಂತೆ ಕಂಬಳದ ಬೆತ್ತಗಳಲ್ಲಿ ವಿವಿಧ ಬಗೆ ಇವೆ. ಮಾಲೀಕರು ಹಾಗೂ ಜಾಕಿಗಳು ಓಡಿಸುವ ಬೆತ್ತಗಳು ಬೇರೆ ಬೇರೆ. ಮಾಲೀಕರ ಬೆತ್ತಗಳನ್ನು ಉಣ್ಣೆ ಹಾಗೂ ಹತ್ತಿಯ ನೂಲುಗಳ ಮೂಲಕ ವಿನ್ಯಾಸ ಮಾಡಲಾಗುತ್ತದೆ. ಬೆತ್ತದ ತುದಿಯಲ್ಲಿ ಉಂಡೆಯಂಥ ರಚನೆ ಇದ್ದು, ಇದನ್ನು ಉಣ್ಣೆಯಿಂದ ಮಾಡಲಾಗುತ್ತದೆ. ಕೆಲವು ಕೋಣಗಳ ಮಾಲೀಕರು ಅದಕ್ಕೆ ಬೆಳ್ಳಿಯ ಲೇಪನ ಕೂಡ ಮಾಡಿಸುತ್ತಾರೆ. ಮಾಲೀಕರು ಬಳಸುವ ಬೆತ್ತದ ದರ ₹3 ರಿಂದ 25 ಸಾವಿರದವರೆಗೆ ಇದೆ. ಓಡಿಸುವವ ಬಳಸುವ ಬೆತ್ತ ₹600-800 ಬೆಳೆಬಾಳುತ್ತದೆ.– ಅಪ್ಪಣ್ಣ, ಕಂಬಳ ಅಕಾಡೆಮಿಯ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.