ADVERTISEMENT

ಅಂತರಂಗದ ಮಾರ್ಗದರ್ಶಿ ಕನಕದಾಸರು

ರಘು ವಿ
Published 2 ಡಿಸೆಂಬರ್ 2020, 19:54 IST
Last Updated 2 ಡಿಸೆಂಬರ್ 2020, 19:54 IST
ಕನಕದಾಸರು (ಸಂಗ್ರಹಚಿತ್ರ)
ಕನಕದಾಸರು (ಸಂಗ್ರಹಚಿತ್ರ)   

ಇಂದಿನ ಭಾರತೀಯ ಮನಃಸ್ಥಿತಿಯ ದುರ್ದೈವವೆಂದರೆ ಸಂತರನ್ನು, ಮಹಾತ್ಮರನ್ನು ಅವರವರ ಜಾತಿ ಮತಗಳ ಸೀಮಿತ ಪರಿಧಿಯೊಳಗೆ ಇರಿಸಿ, ಅವರನ್ನು ಪೂಜನೀಯರನ್ನಾಗಿಸಿಬಿಡುವುದು. ಹೀಗೆ ಸಂಸ್ಥೀಕರಣಗೊಂಡ ಅನೇಕ ಸಾಂಸ್ಕೃತಿಕ ನೆಲೆಗಳಲ್ಲಿ ದಾಸಪರಂಪರೆಯೂ ಒಂದು.

ಕನಕದಾಸರು ಪ್ರಾಂತೀಯ ನಾಯಕನೊಬ್ಬನ ಮಗನಾಗಿ, ಅತ್ಯಂತ ಪ್ರಸಿದ್ಧ ಗುರುಗಳ ಶಿಷ್ಯನಾಗಿ, ಶಿಷ್ಯಗಣದಲ್ಲಿ ಅಗ್ರಗಣ್ಯನಾಗಿ ಬೆಳೆದವರು. ಒಬ್ಬ ಅನುಭಾವಿ ಸಾಹಿತಿಯಾಗಿ ಅವರ ಸಾಹಿತ್ಯಕ ಕೊಡುಗೆ ಅನನ್ಯವಾದುದು. ಅವರ ‘ಮೋಹನತರಂಗಿಣಿ’ಯ ಮೂಲಕಥಾವಸ್ತು ಕೃಷ್ಣಚರಿತೆಯಾದರೂ ಅವರು ಬಣ್ಣಿಸುವುದು ಕೃಷ್ಣದೇವರಾಯರ ವಿಜಯನಗರವನ್ನು ಮತ್ತು ರಾಯರನ್ನು. ದ್ವಾರಕಾಪುರಿಯ ಶ್ರೀಮಂತಿಕೆಯನ್ನು ಬಣ್ಣಿಸುವಾಗ ಅವರು ವಿಜಯನಗರದ ವೈಭವವನ್ನೇ ನಮ್ಮೆದುರಿಗೆ ಇಡುತ್ತಾರೆ. ಅಲ್ಲಿ ವರ್ಣಿತವಾಗುವ ಯುದ್ಧಗಳೆಲ್ಲ ವಿಜಯನಗರದ ಕದನಗಳೇ. ದಣ್ಣಾಯಕ ಕನಕನ ನೆನಪಿನ ತರಂಗ ಕವಿಕನಕನ ಮೂಲಕ ಮೋಹನತರಂಗಿಣಿಯಾಯಿತೋ ಎಂಬ ಸಂದೇಹ ಕಾಡುತ್ತದೆ. ವಾಣಿಜ್ಯವ್ಯವಹಾರದಿಂದ ರಾಜ್ಯ ಶ್ರೀಮಂತವಾದ ಬಗೆಯನ್ನು ಅವರು ಬಣ್ಣಿಸುವುದು ಹೀಗೆ:

‘ಓರಂತೆ ಮರಕಾಲರು ಹಡಗಿನ ವ್ಯವಹಾರದಿ ಗಳಿಸಿದ ಹಣವಭಾರ ಸಂಖ್ಯೆಯಲಿ ತೂಗುವರು ಬೇಡಿದರೆ ಕುಬೇರಂಗೆ ಕಡವ ಕೊಡುವರು’

ADVERTISEMENT

ಕುಬೇರನಿಗೂ ಸಾಲ ನೀಡುವ ಮಟಕ್ಕೆ ಬೊಕ್ಕಸ ಬೆಳೆಸಿದರೆಂಬಲ್ಲಿ ಶ್ರೀಮಂತಿಕೆಯ ಮಾಪಕವನ್ನೇ ಎತ್ತರಿಸಿಬಿಟ್ಟಿದ್ದಾರೆ ಕನಕರು!ಇದು ದ್ವಾರಕಾಪುರಿಗೂ ಅನ್ವಯ, ವಿಜಯನಗರಕ್ಕೂ ಅನ್ವಯ. ಒಂದು ದೇಶದ ಚರಿತ್ರೆಯನ್ನೂ ಅದರ ಸಾಂಸ್ಕೃತಿಕ ನೆಲೆಗಟ್ಟನ್ನೂ ಹೇಗೆ ಹಿಡಿದಿಡಬಹುದು ಎಂಬುದಕ್ಕೆ ಮೋಹನತರಂಗಿಣಿ ಒಂದು ಉತ್ತಮ ಉದಾಹರಣೆ.

ಕನಕದಾಸರ ಬಗ್ಗೆ ಬಹಳ ರಮ್ಯವಾದ ಚಿತ್ರಣ ನಮ್ಮ ಮುಂದಿದೆ. ಅವರ ಸಾಂಸ್ಕೃತಿಕ ಕೊಡುಗೆಯನ್ನು ಪರಿಕಿಸುವ ಪ್ರಯತ್ನ ನಡೆಯಬೇಕು. ಭಕ್ತರು, ದಾಸರು ಪವಾಡಪುರುಷರೂ ಆದ ಕನಕದಾಸರಿಗಿಂತ ಅವರ ಸಾಮಾಜಿಕ ಬದ್ಧತೆಯ ಅಂಶವನ್ನು ನಾವು ಪರಿಗಣಿಸಬೇಕು.

‘ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ?’ ಎನ್ನುವ ಆಧ್ಯಾತ್ಮಮುಖಿ ಕನಕರು ಇಹದ ನೆಲೆಯಲ್ಲಿ, ‘ನಾವು ಕುರುಬರು, ನಮ್ಮ ದೇವರು ಬೀರಯ್ಯ, ಕಾವ ನಮ್ಮಜ್ಜ ನರಕುರಿ ಹಿಂಡುಗಳ' ಎಂದು ದಾಖಲಿಸಲು ಹಿಂಜರಿಯಲಿಲ್ಲ. ದೈವದರ್ಶನದ ಬಳಿಕ ಅವರು ಉದ್ಗರಿಸುವುದು ಹೀಗೆ: ಕಂಡೆ ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ಧಂಡ ನರಸಿಂಹನ'. ಭಾಷೆ ಸರಳವಾದರೂ ಅವರು ತಮಗೆ ಬೇಕಾದಂತೆ ಅದನ್ನು ಗಡುಸಾಗಿ ಬಳಸಿಕೊಳ್ಳುವ ಕೌಶಲವನ್ನು ನಾವಿಲ್ಲಿ ಗಮನಿಸಬಹುದು. ಹಾಗೆಯೇ ‘ಮೋಹನತರಂಗಿಣಿ’ಯಲ್ಲಿನ ಶೃಂಗಾರವರ್ಣನೆಗಳನ್ನು ಮತ್ತು ಅವರ ಮತ್ತೊಂದು ಕೃತಿ ‘ನಳಚರಿತ್ರೆ’ಯಲ್ಲಿನ ಶೃಂಗಾರವರ್ಣನೆಗಳನ್ನು ಗಮನಿಸುವಾಗ, ತರಂಗಿಣಿಯ ಇಂದ್ರಿಯಕೇಂದ್ರಿತ ಶೃಂಗಾರ ನಳಚರಿತ್ರೆಯಲ್ಲಿ ಪರಿಪಾಕಗೊಂಡಂತೆ ಕಾಣುತ್ತದೆ; ಅಲ್ಲಿ ಕರುಣರಸವೇ ಮುಖ್ಯವಾಗಿ ಕಾಣಿಸಿಕೊಳ್ಳುತ್ತದೆ: ‘... ಬಿಗಿಯಪ್ಪಿದನು ಸೆರಗಿನೊಳಿರಿಸಿ ಕಂಬನಿಯ ಜೋಕೆಯಲಿ ಕುಳ್ಳಿರಿಸಿ ತೊಡೆಯೊಳನೇಕ ಪ್ರೀತಿಯೊಳೆಂದ... ಎನ್ನುವಾಗ ಭಾಷೆಯ ಸೊಗಸನ್ನು ಗಮನಿಸಬೇಕು. ಕಂಬನಿಯನ್ನೊರೆಸಿದುದನ್ನು ಎಷ್ಟು ಸೊಗಸಾಗಿ ‘ಸೆರಗಿನೊಳಗಿರಿಸಿ ಕಂಬನಿಯ’ ಎನ್ನುತ್ತಾನೆ, ಕವಿಕನಕ. ಮನುಷ್ಯಸಂವೇದನೆಗಳಿಗೆ ಕವಿ ಇಲ್ಲಿ ಬಾಯಾಗುವುದು ನಮ್ಮ ಮನಸೆಳೆಯುತ್ತದೆ. ಇದೇ ಕೃತಿಯಲ್ಲಿ,

‘ಬಿದಿರ ಮೆಳೆ ಧಗಧಗಿಸೆ ಘನ ಹೆಬ್ಬಿದಿರು ಛಟಛಟಿರೆನಲು ಉರಿಯೊಳು ಕದಳಿಗಳು ಸಿಮಿಸಿಮಿಸೆ ತರುಗಳನರುಹಿ ಮೆಳೆಗಳಲಿ ಗದಗದಿಸೆ ಗುಹೆಗಳಲಿ ಮೃಗತತಿ ಬೆದರಿ ಹಾಯ್ದುವು ಪಕ್ಷಿಸಂಕುಲ ಉದುರಿದವು ಗರಿಸಹಿತ ಬೆಂದಾವನದ ಮಧ್ಯದಲಿ’

- ಎನ್ನುವಾಗ ಕಾಡ್ಗಿಚ್ಚಿನ ನೇರ ಅನುಭವವನ್ನು ಓದುಗನಿಗೆ ನೀಡುತ್ತಾರೆ ಕನಕಕವಿ. ಇವರ `ರಾಮಧಾನ್ಯಚರಿತೆ' ಕೇವಲ ಅಕ್ಕಿ-ರಾಗಿಯ ನಡುವಣ ಸಂಭಾಷಣೆ ಆಗಿರದೆ, ಮೇಲ್ವರ್ಗ ಮತ್ತು ಕೆಳವರ್ಗದ ನಡುವಣ ಆಹಾರಸಂಸ್ಕೃತಿಯ ತಿರಸ್ಕಾರ-ಪುರಸ್ಕಾರಗಳ ವಾಖ್ಯಾನವಾಗಿದೆ.

ಕನಕದಾಸರು ಭಾವಪ್ರಧಾನ ಕೀರ್ತನೆಗಳನ್ನು ರಚಿಸಿದ್ದಾರೆ. ಕರ್ನಾಟಕ ಸಂಗೀತ ಪರಂಪರೆಗೆ ಸಾಹಿತ್ಯ ಒದಗಿಸುವುದರಲ್ಲಿ ಪುರಂದರದಾಸರಂತೆ ಇವರದೂ ಮಹತ್ವದ ಕೊಡುಗೆ. ಇವರ ಕೀರ್ತನೆಯ ಅಭ್ಯಾಸವಿಲ್ಲದೆ ಸಂಗೀತಪಾಠವಿಲ್ಲ. ಇವರು ಒಂದು ವರ್ಗದ ಪ್ರತಿನಿಧಿಯಲ್ಲ, ನಮ್ಮ ಸಾಂಸ್ಕೃತಿಕ ಪ್ರತಿನಿಧಿ. ಅಧ್ಯಾತ್ಮ, ಕಾವ್ಯ, ಸಾಮಾಜಿಕ ಕಾಳಜಿ – ಇಂಥ ಹಲವು ಮೌಲ್ಯಗಳ ಸಂಗಮವಾಗಿರುವ ಅವರನ್ನು ನಾವು ಇಂದು ಎಂದಿಗಿಂತಲೂ ಹೆಚ್ಚು ತೀವ್ರವಾಗಿ ಅನುಸಂಧಾನಿಸಬೇಕಾಗಿದೆ. ಆದರೆ ನಮ್ಮ ಸಂಕುಚಿತ ದೃಷ್ಟಿಯಿಂದ ಅವರನ್ನು ಕಂಡರಿಸುವ ಪ್ರಯತ್ನಗಳನ್ನು ಕೈ ಬಿಡಬೇಕು. ಎಂದರೆ ಅವರನ್ನು ಅವರು ಎಂತಿರುವರೋ ಅಂತೆಯೇ ಅಧ್ಯಯನ ಮಾಡಬೇಕಾಗಿದೆ. ಅದೇ ಕೇಶವನ ನಿಜಕಾಗಿನೆಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.