ಮಳೆಗಾಲದ ಹನಿಗಳು ಒಬ್ಬೊಬ್ಬರಿಗೆ ಒಂದೊಂದು ತರಹ. ಬೆಳ್ಳಿ ತೆರೆಯ ಮೇಲೆ ಮಳೆಯಲ್ಲಿ ನೆನೆದವರು, ತಮ್ಮ ಬದುಕಿನ ಮಳೆಯಲ್ಲಿ ಮಿಂದದ್ದು ಹೇಗೆಲ್ಲಾ ಇದೆ. ಬಣ್ಣ, ಬೆಳಕಿನಾಚೆಯ ನಿಜಮಳೆಯ ಸೊಬಗು, ಬದುಕಿನ ಅರ್ಥ ಕಲಿಸಿದ ಮಳೆಯ ಪಾಠಗಳ ಪುಟ್ಟ ಝರಿ ಇಲ್ಲಿದೆ. ನಿಮ್ಮಲ್ಲೂ ಇಂಥ ಕಥೆಗಳಿರಬಹುದಲ್ವಾ... ಓದುತ್ತಾ ನೆನಪಿಸಿಕೊಳ್ಳಿ
ಮಳೆ ಒಂದು ಕಡೆ ಆಶೀರ್ವಾದ. ಅದೇ ಮಳೆ ತನ್ನ ಆಕ್ರೋಶ ವ್ಯಕ್ತಪಡಿಸಿದರೆ... ಭಯಾನಕ. ಅಂಥ ಮಳೆ ಅನುಭವ ನನಗೆ, ನಮ್ಮ ಕೊಡಗಿನ ಜನರಿಗೆ ಆಗಿದೆ.
ಮಳೆ ಎಂದರೆ ನನಗೆ ಮರೆಯಲಾಗದ ನೆನಪು. ನಮಗೆ ಇಂಥದ್ದೊಂದು ಅನುಭವ ಕೊಡಬಹುದು ಎಂದು ಊಹಿಸದ ರೀತಿಯಲ್ಲಿ ಬಂದ ಮಳೆ, ಪ್ರವಾಹ, ಮಳೆಗಾಲದಲ್ಲೇ ಉಲ್ಭಣಿಸಿದ ಕೋವಿಡ್ ಪ್ರಕರಣಗಳು ಬಹಳಷ್ಟು ಕಲಿಸಿವೆ.
ಸುಮಾರು ನಾಲ್ಕು ವರ್ಷಗಳ ಹಿಂದೆ ಕೊಡಗಿನಲ್ಲಿ ಬಂದ ಪ್ರವಾಹ ಈ ಅನುಭವ ನೀಡಿತು. ನಮ್ಮ ಬಂಧುಗಳು ಸಹಿತ ನೂರಾರು ಜನರು ತಮ್ಮ ಮನೆ, ಭೂಮಿ ಕಳೆದುಕೊಂಡು ಗಂಜಿ ಕೇಂದ್ರಗಳಲ್ಲಿ ಆಸರೆ ಪಡೆದಿದ್ದರು. ಅವರಿಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕು ಎಂದು ನಾನು ಮತ್ತು ಭುವನ್ ಧಾವಿಸಿದೆವು. ನಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾದೆವು ಅಷ್ಟೇ.
ಆ ಬಳಿಕ ಕೋವಿಡ್ ಎರಡನೇ ಅಲೆ ಬಂದಾಗಲೂ ಭಾರೀ ಮಳೆ. ಆ ಹೊತ್ತಿನಲ್ಲಿ ಕೊಡಗಿನಲ್ಲಿ ಕೋವಿಡ್ ಪೀಡಿತರ ಅಷ್ಟೂ ಮನೆಗಳನ್ನು ತಲುಪಿದ್ದೆವು.ಆಗ ಸೀಲ್‌ಡೌನ್ ಆದ ಪ್ರದೇಶವೊಂದಕ್ಕೆ ಭೇಟಿ ಕೊಟ್ಟು ಅಗತ್ಯ ವಸ್ತುಗಳನ್ನು ಕೊಟ್ಟೆವು. ಅಲ್ಲಿಂದ ವಾಪಸಾಗುವಾಗ ಒಬ್ಬಳು ಹೆಣ್ಣುಮಗಳು ಬಂದು ನನ್ನನ್ನು ಮಾತನಾಡಿಸಿದಳು.
‘ಮೇಡಂ ನನ್ನ ಪರಿಚಯ ಆಯ್ತಾ?. ನಾಲ್ಕು ವರ್ಷಗಳ ಹಿಂದೆ ಕೊಡಗಿನ ಪ್ರವಾಹದ ಸಂದರ್ಭದಲ್ಲಿ ನಾವಿದ್ದ ಗಂಜಿ ಕೇಂದ್ರಕ್ಕೆ ನೀವು ಬಂದಿದ್ರಿ. ನಮ್ಮ ಮಕ್ಕಳನ್ನೆಲ್ಲಾ ನೀವು ಆಟವಾಡಿಸಿದ್ರಿ. ನಮ್ಮೊಂದಿಗೆ ನಗುನಗುತ್ತಾ ಕಾಲ ಕಳೆದಿರಿ. ನಮಗೆ ಬೇಕಾದ ವಸ್ತುಗಳನ್ನೆಲ್ಲಾ ಕೊಟ್ಟು ಸಹಾಯ ಮಾಡಿದ್ರಿ. ಈಗ ನೋಡಿ ಆ ಮಕ್ಕಳೆಲ್ಲಾ ದೊಡ್ಡವರಾಗಿದ್ದಾರೆ...’ ಎಂದು ಮಕ್ಕಳನ್ನು ತೋರಿಸಿದಳು.
ಅವಳ ಮಾತು ಕೇಳಿ, ನಾವು ಅಲ್ಲಿಗೆ ಭೇಟಿ ನೀಡಲು ಪಟ್ಟ ಕಷ್ಟವೆಲ್ಲಾ ಮರೆತುಹೋಯಿತು. ನನ್ನ ಸಿನಿಮಾಗಳನ್ನು ನೋಡಿಯೋ ಅಥವಾ ಇನ್ನೆಲ್ಲೋ ಪರಿಚಯವಾದಾಗಲೋ ನೆನಪಿಟ್ಟು ಮಾತನಾಡುವುದು ಬೇರೆ. ಆದರೆ, ನಾಲ್ಕು ವರ್ಷಗಳ ಹಿಂದೆ ಯಾವತ್ತೋ ಒಂದು ದಿನ ಭೇಟಿ ನೀಡಿದ್ದನ್ನೇ ನೆನಪಿಟ್ಟುಕೊಂಡು ಕೃತಜ್ಞತೆಯಿಂದ ಮಾತನಾಡುವುದಿದೆಯಲ್ಲಾ... ಅದನ್ನು ಮರೆಯಲಾಗದು.
ನಾವು ಮಾತು ಮುಗಿಸಿ ವಾಪಸಾಗುವಾಗ ನಮ್ಮ ಜೀಪಿನ ತುಂಬಾ ನಾಲ್ಕೈದು ಹಲಸಿನ ಹಣ್ಣು, ಜೇನುತುಪ್ಪ, ಮತ್ತೊಂದಿಷ್ಟು ಹಣ್ಣುಗಳು ಹೀಗೆ ಏನೇನೋ ತುಂಬಿ ಕಳುಹಿಸಿದ್ದರು. ಅಂಥ ಜನರಿಗೆ ನಾವು ತುಂಬಾ ಹತ್ತಿರವಾಗಿದ್ದೇವೆ.ಇನ್ನೂ ಹೇಳಬೇಕಾ... ಅದೇ ಮಳೆಗಾಲದಲ್ಲಿ ಹುಟ್ಟಿದ ಮಗುವಿಗೆ ನನ್ನ ಹೆಸರನ್ನಿಟ್ಟು ಜನ ಪ್ರೀತಿ ತೋರಿದ್ದರು. ಹೌದು ಜಗತ್ತಿನಲ್ಲಿ ಪ್ರೀತಿಗೆ, ನಿಸ್ವಾರ್ಥತೆಗೆ ಇನ್ನೂ ಮೌಲ್ಯವಿದೆ. ಅದೂ ನಮ್ಮ ಹಳ್ಳಿಗಳಲ್ಲಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.