‘ವಿಮಾನ ನಿಲಯ’ ಹಾಗೂ ‘ವಿಮಾನ ನಿಲ್ದಾಣ’ ಇವೆರಡರ ನಡುವಿನ ವ್ಯತ್ಯಾಸವೇನು?
ಈ ಪ್ರಶ್ನೆ ಎದುರಾದದ್ದು, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾಮಗಾರಿಯ ಕೊನೆಯ ಹಂತದಲ್ಲಿ. ಮುಖ್ಯ ರಸ್ತೆಯಿಂದ ಶುರುಮಾಡಿ ಏರ್‌ಪೋರ್ಟಿನ ಮೂಲೆಯ ಶೌಚಾಲಯದವರೆಗೂ ಎಲ್ಲೆಡೆ ಸೂಚನಾ ಫಲಕಗಳನ್ನು ಅಳವಡಿಸುವ ತರಾತುರಿಯಲ್ಲಿದ್ದೆವು ನಾವು. ನಿಲ್ದಾಣದಲ್ಲಿ ಬಳಸಲ್ಪಡುವ ವಿಶಿಷ್ಟವಾದ ಇಂಗ್ಲಿಷ್ ಭಾಷೆಯ ಪದಗಳಿಗೆ ಪರ್ಯಾಯ ಹಾಗೂ ಯೋಗ್ಯವೆನಿಸುವ ಕನ್ನಡ ಶಬ್ದಗಳನ್ನು ಹೊಂದಿಸುವುದು ಭಾರೀ ಸವಾಲಾಗಿತ್ತು ನಮಗೆ. ಅದಕ್ಕೆಂದೇ ಪರಿಣಿತ ಕನ್ಸಲ್‌ಟೆಂಟುಗಳಿದ್ದರು. ಅವರು ಭಾಷಾಂತರಿಸಿ ನೀಡುವ ಕನ್ನಡ ಶಬ್ದಗಳು ಬಲು ವಿಲಕ್ಷಣವಾಗಿರುತ್ತಿದ್ದವು. ‘ಡೇ ಹೋಟೆಲ್’ಗೆ ‘ಹಗಲಿನ ಹೋಟೆಲ್’ ಎಂದೂ ‘ಬ್ಯಾಗೇಜ್ ಕ್ಲೇಮ್’ ಬದಲಿಗೆ ‘ಸಾಮಾನುಗಳ ವಾರಸು’ ಎಂದೆಲ್ಲಾ ಬರೆದು ಕೊಟ್ಟದ್ದನ್ನು ಒಪ್ಪಿಕೊಳ್ಳಲು ಮನಸ್ಸಾಗುತ್ತಿರಲಿಲ್ಲ. ‘ವಿಮೆನ್ ಸೆಕ್ಯೂರಿಟಿ ಚಕ್’ ಅನ್ನುವುದಕ್ಕೆ ‘ಮಹಿಳೆ ಭದ್ರತಾ ತಪಾಸಣೆ’ ಅನ್ನುವ ಬದಲು ‘ಮಹಿಳೆಯರ ಭದ್ರತಾ ತಪಾಸಣೆ’ ಎನ್ನುವುದು ಸಮಂಜಸವಲ್ಲವೇ? ‘ಡೊಮೆಸ್ಟಿಕ್’ ಅನುವುದಕ್ಕೆ ಒಂದೆಡೆ ‘ಸ್ವದೇಶೀ’ ಎಂಬುದಾಗಿಯೂ ಮತ್ತೊಂದೆಡೆ ‘ದೇಶೀಯ’ ಎಂದೂ ಬಳಸುವುದ್ಯಾಕೆ?
ಇವೆಲ್ಲವುಗಳಿಗಿಂತ ಹೆಚ್ಚು ಗೊಂದಲಮಯವೆಂದರೆ ‘ಟರ್ಮಿನಲ್’ನ ಕನ್ನಡ ರೂಪಾಂತರ. ಅದಕ್ಕೆ ಅವರಿಟ್ಟ ಕನ್ನಡದ ಹೆಸರು ‘ವಿಮಾನ ನಿಲಯ’! ಈ ಶಬ್ದಕ್ಕೆ ತಗಾದೆ ತೆಗೆಯದೇ ಇರಲಾಗಲಿಲ್ಲ ನನಗೆ. ಟರ್ಮಿನಲ್ ಎನ್ನುವ ಇಂಗ್ಲಿಷ್ ಪದಕ್ಕೆ ಒಂದು ನಿರ್ದಿಷ್ಟ ಅರ್ಥವಿದೆ. ಕೊನೆಯ, ಅಂತ್ಯದ, ಕಡೆಯ, ಸೀಮಾ... ಹೀಗೆ. ಈ ರೀತಿಯ ತಾತ್ಪರ್ಯದ ಟರ್ಮಿನಲ್ ಶಬ್ದವನ್ನು ಪ್ರಯಾಣಿಕರು ವಿಮಾನವನ್ನೇರುವ ಸ್ಥಳ ಅಥವಾ ಕಟ್ಟಡಕ್ಕೆ ಅನ್ವಯಿಸುವುದರಲ್ಲೂ ಒಂದು ಲಾಜಿಕ್ ಇದೆ. ಒಂದು ರೀತಿಯಲ್ಲಿ ನೋಡುವುದಾದರೆ ಪ್ರಯಾಣಿಕನೊಬ್ಬನಿಗೆ ಭೂಮಿಯ ಮೇಲಿನ ಕೊನೆಯ ತಾಣ ಅದು. ಭಾಷೆಯ ಲೆಕ್ಕಾಚಾರಕ್ಕೇ ಬಂದರೆ, ಟರ್ಮಿನಲ್ಲಿಗೂ ವಿಮಾನಕ್ಕೂ ಯಾವುದೇ ನೇರ ಸಂಬಂಧವಿಲ್ಲ. ‘ಬಸ್ ಟರ್ಮಿನಲ್’ ಅಂತಲೂ ಹೇಳುತ್ತಾರಲ್ಲ? ಸಾವು ಖಚಿತವಾದ ಕಾಯಿಲೆಯಿಂದ ಬಳಲುತ್ತಿರುವವರಿಗೆ ‘ಟರ್ಮಿನಲಿ ಇಲ್’ ಎನ್ನುತ್ತೇವಲ್ಲ? ಹೀಗಾಗಿ ತಾರ್ಕಿಕ ಅರ್ಥದಲ್ಲಿ ವ್ಯಕಿಯೊಬ್ಬ ತನ್ನ ನೆಲದ ನಂಟನ್ನು ಕಳೆದುಕೊಳ್ಳುವ ಜಾಗಕ್ಕೆ ಈ ಪದಬಳಕೆ ಯೋಗ್ಯವಿದೆ. ‘ವಿಮಾನ ನಿಲಯ’ ಎಂದರೆ ಅದಕ್ಕೆ ಏರ್‌ಪೋರ್ಟ್ ಅನ್ನುವ ಅರ್ಥವೇ ಬರುತ್ತೆ. ಹಾಗಾಗಿ ಈ ಶಬ್ದದ ಉಪಯೋಗ ದಿಕ್ಕು ತಪ್ಪಿಸುವುದಾಗಿದೆ ಎಂಬುದು ನನ್ನ ವಾದವಾಗಿತ್ತು. 'Stations and airports are rehearsals for separation by death' ಎನ್ನುವ ಯಾವುದೋ ಪಾಶ್ಚಾತ್ಯ ಲೇಖಕಿಯ ಹೇಳಿಕೆಯನ್ನೆಲ್ಲಾ ಅಸಂಗತವೆನ್ನಿಸಿದರೂ ಉಲ್ಲೇಖಿಸಿ ನನ್ನ ಮಾತನ್ನು ಪ್ರತಿಪಾದಿಸಲು ಪ್ರಯತ್ನಿಸಿದೆ.
ವಿಮಾನ ನಿಲ್ದಾಣದ ಟೆಕ್ನಿಕಲ್ ಮ್ಯಾನೇಜರ್ ಆಗಿದ್ದ ನನಗೆ ಅದನ್ನೆಲ್ಲ ಪ್ರಶ್ನಿಸುವ ಅಧಿಕಾರವೇನೋ ಇತ್ತು, ಆದರೆ ಕನ್ಸಲ್‌ಟಂಟುಗಳ ಒಪ್ಪಿಗೆಯಿಲ್ಲದೇ ತಿದ್ದುಪಡಿ ಮಾಡುವಂತಿರಲಿಲ್ಲ. ‘ಕೆಲವು ಪದಗಳಿಗೆ ಸಮಾನಾಂತರ ಕನ್ನಡ ಪದ ಇರುವುದಿಲ್ಲ’ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದರು ಅವರು.
‘ಹಾಗಾದರೆ ‘Check-in’ ಅನ್ನುವುದಕ್ಕೆ ಏನು ಹೇಳುತ್ತೀರಿ?’ ನಾನು ಸುಲಭಕ್ಕೆ ಒಪ್ಪಲು ಸಿದ್ಧನಿರಲಿಲ್ಲ
‘ಅದನ್ನು ‘ಚಕ್-ಇನ್’ ಎಂದೇ ಹಾಕುತ್ತೇವೆ’
‘ಇಲ್ಲಿಯೂ ಟರ್ಮಿನಲ್ ಎಂದೇ ಬರೆಯಬಹುದಲ್ಲ. ಅಸಮಂಜಸ ಅನುವಾದಕ್ಕಿಂತ ಇಂಗ್ಲಿಷಿನಲ್ಲೇ ಇರುವುದು ಒಳ್ಳೆಯದು’ ನಾನಂದೆ.
‘Airports Authority of India ದವರು ಪ್ರತೀ ಇಂಗ್ಲಿಷ್ ಪದಕ್ಕೂ ಆಯಾ ಪ್ರಾದೇಶಿಕ ಭಾಷೆಯಲ್ಲಿ ಏನು ಬರೆಯಬೇಕೆಂಬ ಪಟ್ಟಿ ಮಾಡಿಟ್ಟಿದ್ದಾರೆ. ಅದಕ್ಕೆ ವಿರುದ್ಧ ಹೋದರೆ ನಿಮಗೆ ಅನುಮತಿ ಪಡೆಯಲು ಕಷ್ಟವಾಗುತ್ತದೆ. ಹೀಗಾಗಿ ಇದನ್ನೇ ಇಟ್ಟುಕೊಳ್ಳುವುದು ಅನಿವಾರ್ಯ’ ಎನ್ನುವ ಕೊನೆಯ ಅಸ್ತ್ರ ಪ್ರಯೋಗಿಸಿದರು ಅವರು.
BIAL(Bangalore International Airports Limited) ಎನ್ನುವ ಸಂಸ್ಥೆ ಸ್ಥಾಪಿತವಾದ ಆರಂಭದ ದಿನಗಳಲ್ಲಿ ಆ ಕಂಪನಿಯಲ್ಲಿದ್ದ ಕೆಲವೇ ಕೆಲವು ಕನ್ನಡಿಗರಲ್ಲಿ ನಾನು ಒಬ್ಬ. ಹೀಗಾಗಿ ಕನ್ನಡದ ವಿಷಯ ಬಂದಾಗಲೆಲ್ಲ ನನ್ನ ಕಿವಿ ಹಾಗೂ ಕಣ್ಣುಗಳು ಒಮ್ಮೆಲೇ ಜಾಗೃತವಾಗುವುದೂ ಹಾಗೂ ಕನ್ನಡಕ್ಕೆ ಸಂಬಂಧಿಸಿದ ಯಾವುದೇ ಸಂಗತಿಯಾದರೂ ಅದು ನನ್ನ ಟೇಬಲ್ಲಿಗೇ ಎಡತಾಕುವುದೂ ಸಹಜವಾಗಿತ್ತು. ಸರೋಜಿನಿ ಮಹಿಷಿ ವರದಿಯನ್ನು ಕಾರ್ಯರೂಪಕ್ಕೆ ತರುವ ಸಾಧ್ಯಾಸಾಧ್ಯತೆಗಳ ಚರ್ಚೆ, ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳೊಡನೆಯ ಸಂವಹನ ಇತ್ಯಾದಿ ಒಂದು ಕಡೆಯಾದರೆ; ನಿರ್ಮಾಣ ಕಾಮಗಾರಿಯಲ್ಲಿ ಸ್ಥಳೀಯರನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಕಚೇರಿಗೆ ಮುತ್ತಿಗೆ ಹಾಕಿದ ಗುಂಪಿನೊಡನೆ ಮಾತುಕತೆಗೂ ನನ್ನನ್ನೇ ಮುಂದೂಡುತ್ತಿದ್ದರು. ಶ್ರೀಯುತ ವಾಟಾಳ್ ನಾಗರಾಜ್ ತಮ್ಮ ಸಂಗಡಿಗ
ರೊಂದಿಗೆ ಬಂದು, ‘ಏರ್‌ಪೋರ್ಟಿಗೆ ಇದೇ ವ್ಯಕ್ತಿಯ ಹೆಸರನ್ನಿಡಬೇಕು’, ‘ವಿಮಾನ
ದಲ್ಲಿ ಆಹಾರ ನೀಡುವಾಗ ಮುದ್ದೆಯನ್ನೂ ಕೊಡಬೇಕು’ ಇತ್ಯಾದಿ ಬೇಡಿಕೆಗಳನ್ನಿಟ್ಟು ಧರಣಿ ಕುಳಿತಾಗ, ಅವರನ್ನು ಸಂಭಾಳಿಸುವ ಜವಾಬ್ದಾರಿ ನನ್ನದಾಗಿತ್ತು. ಇಲ್ಲಿಯ ಜನ ಮಾತನಾಡುವುದು ಕೆನಡಾ ದೇಶದ ಭಾಷೆ ಎಂದು ಬಹುದಿನದ ವರೆಗೆ ಅಂದುಕೊಂಡಿದ್ದ ನನ್ನ ವಿದೇಶೀ ಬಾಸ್‌ನ ಜೊತೆಗೂಡಿ (ಕನಡಾ ಎನ್ನುವ ಪದ ಕೆನಡಾ ಎಂಬುದಾಗಿ ಸ್ವಿಸ್ ದೇಶದ ಪ್ರಜೆಯೊಬ್ಬನಿಗೆ ಕೇಳಿಸಿದರೆ ಅಂಥಾ ಆಶ್ಚರ್ಯವೇನೂ ಇಲ್ಲ ಬಿಡಿ) ವಾಟಾಳ್ ಹಾಗೂ ಅವರ ಸಂಗಡಿಗರೊಡನೆ ಮಾತನಾಡುವಾಗ, ನಾನೂ ಅವರ ಬಣದಲ್ಲೇ ಇದ್ದಿದ್ದರೆ ಚೆನ್ನಾಗಿತ್ತು ಎಂದೆನಿಸಿದ್ದು ಸುಳ್ಳಲ್ಲ.
ಇಂಥವುಗಳನ್ನೆಲ್ಲ ಬಹಳ ಖುಷಿಯಿಂದಲೇ ನಿರ್ವಹಿಸುತ್ತಿದ್ದ ನನಗೆ ನಿಜಕ್ಕೂ ಕಷ್ಟದ ಪ್ರಸಂಗವೊಂದು ಎದುರಾಯ್ತು. ವಿಮಾನ ನಿಲ್ದಾಣಕ್ಕಾಗಿ ಸರ್ಕಾರ ನಾಲ್ಕು ಸಾವಿರ ಎಕರೆಗಳನ್ನು ಸ್ವಾಧೀನ ಪಡಿಸಿಕೊಂಡಿತ್ತಷ್ಟೆ. ಅಲ್ಲಿ ಉಳುವಳಿ ಮಾಡುತ್ತಿರುವ ರೈತರನ್ನೆಲ್ಲ ಮಾಮೂಲಿನಂತೆ ಒಕ್ಕಲೆಬ್ಬಿಸಿಯೂ ಆಗಿತ್ತು. ಆದರೆ ಒಬ್ಬ ವೃದ್ಧೆ ಮಾತ್ರ ಹೊರಹೋಗದೇ ತನ್ನ ದ್ರಾಕ್ಷಿ ತೋಟವನ್ನು ಅಲ್ಲಿಯೇ ಕಾಪಿಟ್ಟುಕೊಂಡು ಬಂದಿದ್ದಳು. ಕನ್ನಡ ಮಾತ್ರ ಬಲ್ಲ ಅವಳಿಗೆ ತಿಳಿ ಹೇಳುವ ಕೆಲಸ ನನಗೇ ಬಂತು. ಆರಂಭದ ಹಂತದಲ್ಲಿ ಕಾಮಗಾರಿ ಕೆಲವು ಸೀಮಿತ ಪ್ರದೇಶದಲ್ಲಿ ಮಾತ್ರ ನಡೆಯುತ್ತಿದ್ದು, ಒಂದು ಮೂಲೆಯಲ್ಲಿರುವ ಆಕೆಯ ದ್ರಾಕ್ಷಿ ತೋಟದಿಂದ ನಿರ್ಮಾಣ ಕಾರ್ಯಕ್ಕೆ ತೊಂದರೆಯೇನೂ ಇರಲಿಲ್ಲ. ಹೀಗಾಗಿ ಆಕೆಯನ್ನು ಅಲ್ಲಿಂದ ಹೊರದೂಡುವುದನ್ನು ನಾನೂ ಮುಂದೂಡುತ್ತಲೇ ಇದ್ದೆ. ನಡುನಡುವೆ ತೋಟದತ್ತ ಹೋಗಿ ಆ ಅಜ್ಜಿಯನ್ನು ಸೌಮ್ಯವಾಗಿ ಎಚ್ಚರಿಸಿ ಬರುತ್ತಿದ್ದೆ. ಆಕೆ- ‘ಇದೊಂದು ಬೆಳೆ ತೆಗೆದು ಹೋಗುತ್ತೇನೆ ಮಗಾ,, ‘ಇದನ್ನ ಬಿಟ್ಟರೆ ನನಗೆ ಮತ್ಯಾವುದೂ ದಿಕ್ಕಿಲ್ಲ’ ಎಂದೆಲ್ಲಾ ಗೋಗರೆಯುವಾಗ ನನಗೆ ಮರು ಮಾತನಾಡುವುದು ಸಾಧ್ಯವಾಗುತ್ತಿರಲಿಲ್ಲ.
ಮೀಟಿಂಗುಗಳಲ್ಲಿ ಕುಳಿತಾಗ ಈ ದ್ರಾಕ್ಷಿ ತೋಟವಿನ್ನೂ ಖಾಲಿಯಾಗದ ವಿಷಯ ಬಂದಾಗಲೆಲ್ಲ ಎಲ್ಲರೂ ನನ್ನತ್ತ ನೋಡುತ್ತಿದ್ದರು. ಪೊಲೀಸರನ್ನು ಕರೆಸಿ, ಜೇಸಿಬಿ ಓಡಿಸಿ ತೋಟವನ್ನು ನೆಲಸಮ ಮಾಡುವುದು ಕೆಲವೇ ಗಂಟೆಗಳ ಕೆಲಸವೆಂಬುದು ಎಲ್ಲರಿಗೂ ಗೊತ್ತಿದ್ದುದೇ. ಆದರೆ ಸದ್ಯದಲ್ಲೇ ಖಾಲಿ ಮಾಡಿಸುವ ಆಶ್ವಾಸನೆಯನ್ನು ನಾನು ಪ್ರತಿ ಬಾರಿಯೂ ನೀಡುತ್ತಿದ್ದೆನಾದ್ದರಿಂದ ಮ್ಯಾನೇಜ್‍ಮೆಂಟೂ ಸುಮ್ಮನಿತ್ತು. ನಾಲ್ಕು ಕಿಲೋಮೀಟರು ಉದ್ದದ ರನ್-ವೇ ತಯಾರಾಗುತ್ತ ಆಗುತ್ತ ದ್ರಾಕ್ಷಿ ಚಪ್ಪರದ ಹತ್ತಿರವೇ ಬಂದು ನಿಂತಿತು. ಆದರೂ ಮುದುಕಿ ಕದಲಲಿಲ್ಲ. ಆ ಬಾರಿಯ ಬೋರ್ಡ್ ಮೀಟಿಂಗಿನಲ್ಲಿ ಗಂಭೀರವಾಗಿಯೇ ವಿಷಯದ ಕುರಿತು ಚರ್ಚೆಯಾಯಿತು. ‘ಅವರಿಗೆಲ್ಲ ಕೈತುಂಬ ಪರಿಹಾರ ಧನ ನೀಡಲಾಗಿದೆ. ಯಾವುದೇ ಕರುಣೆ ತೋರುವ ಅಗತ್ಯವಿಲ್ಲ. ಹೋಗಿ ಕೊನೆಯ ಬಾರಿ ಮಾತಾಡಿ ನೋಡಿ’ ಎಂಬ ತಾಕೀತಾಯಿತು ನನಗೆ.
ನಾನು ಅಜ್ಜಿಯೊಡನೆ ಈ ವಿಷಯ ಪ್ರಸ್ತಾಪಿಸಿದೆ. ಪರಿಹಾರ ಸಿಕ್ಕಿದ್ದೇನೋ ನಿಜ. ‘ಆದ್ರೆ ಅದ್ರಾಗೆ ನನ್ಮಗಾ ಹ್ಯಾಮ್ಮರ್ ಒಡೀತವ್ನೆ...ನನ್ ಒಟ್ಟೆಗೆ ಚಪ್ಡೀನೇಯಾ’ ಎಂದಳು ಆಕೆ. ನನಗಂತೂ ಆಕೆಯ ಮಾತು ಅರ್ಥವಾಗಲಿಲ್ಲ. ಮತ್ತೂ ವಿವರಿಸಿ ಹೇಳಿದಾಗ, ಪರಿಹಾರದಿಂದ ಈಕೆಗೆ ದಕ್ಕಿದ್ದೇನೂ ಇಲ್ಲ. ಅದನ್ನೆಲ್ಲ ಆಕೆಯ ಮಗನೇ ಕಬಳಿಸಿದ್ದಾನೆ, ಇವಳಿಗೆ ಈ ವ್ಯವಸಾಯವಿಲ್ಲದಿದ್ದರೆ ಹೊಟ್ಟೆಗೂ ಗತಿ ಇಲ್ಲ ಎಂಬ ಅರಿವಾಗಿತ್ತು. ‘ಮಗ ಸುತ್ತಿಗೆ ತೆಗೆದುಕೊಂಡು ಹೊಡೆಯುತ್ತಿದ್ದಾನೆ’ ಎನ್ನುವ ಉಪಮೆ ಬಳಸಿ ತನ್ನ ಗೋಳು ಹೇಳಿಕೊಳ್ಳುತ್ತಿದ್ದಾಳೆ ಅಂದುಕೊಂಡೆ. ನಂತರ ಇನ್ನಷ್ಟು ವಿಚಾರಿಸಲಾಗಿ, ಸರ್ಕಾರದಿಂದ ಸಿಕ್ಕ ಹಣದಲ್ಲಿ ಆಕೆಯ ಮಗ ಅತಿಐಷಾರಾಮಿ ‘ಹಮ್ಮರ್’ ವಾಹನ ಖರೀದಿಸಿ ಮೋಜು ಮಾಡುತ್ತಿರುವುದಾಗಿ ತಿಳಿದು ಬಂತು.
**
ಹೀಗೊಂದು ಮುಂಜಾನೆ ನಾನು ಪರಿಶೀಲನೆಗೆಂದು ಹೋದಾಗ, ದ್ರಾಕ್ಷಿ ತೋಟದ ಜಾಗದಲ್ಲಿ ದೊಡ್ದ ದೊಡ್ದ ಏರ್‌ಫೀಲ್ಡ್ ಲೈಟ್ಸ್‌ಗಳನ್ನು ನೆಲದಮೇಲೆ ಅಳವಡಿಸಿ ಅವುಗಳ ಪ್ರಯೋಗಾತ್ಮಕ ಪರೀಕ್ಷೆ ನಡೆಸಲಾಗುತ್ತಿತ್ತು. ಪಾತಿಯಂತೆ ಸಾಲಿನಲ್ಲಿ ಜೋಡಿಸಿಟ್ಟಿದ್ದ ಅವುಗಳ ಬೆಳಕು ಹಗಲಿನಲ್ಲೂ ಕಣ್ಣು ಕುಕ್ಕುತ್ತಿತ್ತು. ಸುಮಾರು ದಿನದಿಂದ ಕಟ್ಟದೇ ಹಾಗೇ ಬಿಟ್ಟಿದ್ದ ಭಾಗದ ಕಾಂಪೌಂಡ್ ಪೂರ್ಣಗೊಂಡು ಅದರ ಮೇಲೆ ಮುಳ್ಳು ತಂತಿಯ ಸುರುಳಿ ಕುಳಿತಿತ್ತು. ಅಲ್ಲೇ ತುಸು ದೂರದಲ್ಲಿ ತಯಾರಾಗಿ ನಿಂತಿದ್ದ ಟರ್ಮಿನಲ್ ಕಟ್ಟಡಕ್ಕೆ ಕೊನೆಯ ಹಂತದ ಗಾಜು ಅಳವಡಿಕೆ ಕೆಲಸ ನಡೆಯುತ್ತಿತ್ತು.
ಕಾಂಪೌಂಡಿನ ಆಚೆ ನಿಂತು, ಹಿಮ್ಮಡೆಯೆತ್ತಿ ಕತ್ತು ಚಾಚಿ ಆ ವೃದ್ಧ ಹೆಂಗಸು ಇತ್ತಲೇ ನೋಡುತ್ತಿರಬಹುದೇ ಅನ್ನಿಸಿತು ನನಗೆ. ಹಾಗೆ ನೋಡಿದರೆ ಆಕೆಗೆ ಕಾಣುವುದು ಬಣ್ಣ ಬಳಿದುಕೊಂಡು ವಿರಾಜಿಸುತ್ತಿರುವ ನಿಲ್ದಾಣದ ಟರ್ಮಿನಲ್ ಮಾತ್ರ. ಅನುವಾದಕ ಕನ್ಸಲ್‌ಟಂಟನೊಂದಿಗೆ ಇದೇ ಶಬ್ದದ ಕುರಿತು ವಾದ ಮಾಡಿದ್ದೆಲ್ಲಾ ಬೇಡಬೇಡವೆಂದರೂ ನೆನಪಿಗೆ ಬರತೊಡಗಿತು.
(ಲೇಖಕ: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಟೆಕ್ನಿಕಲ್ ಲೀಡ್ ಆಗಿದ್ದವರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.