ADVERTISEMENT

ಕುವೆಂಪು ಪದ ಸೃಷ್ಟಿ: ತಿಂಗಳ್ವಕ್ಕಿ

ಜಿ.ಕೃಷ್ಣಪ್ಪ
Published 4 ಮೇ 2024, 23:30 IST
Last Updated 4 ಮೇ 2024, 23:30 IST
<div class="paragraphs"><p>ಕುವೆಂಪು</p></div>

ಕುವೆಂಪು

   
ತಿಂಗಳ್ವಕ್ಕಿ

ತಿಂಗಳ್ವಕ್ಕಿ (ನಾ). ಬೆಳುದಿಂಗಳನ್ನೇ ಆಹಾರವಾಗಿ ಉಪಯೋಗಿಸಿಕೊಳ್ಳುವುದೆಂದು ಭಾವಿಸಲಾದ ಒಂದು ಬಗೆಯ ಪಕ್ಷಿ; ಜೊನ್ನವಕ್ಕಿ; ಚಕೋರಪಕ್ಷಿ.

(ತಿಂಗಳ್ + ಪಕ್ಕಿ)

ADVERTISEMENT

ಸೀತಾಪಹರಣವಾದ ಅನಂತರ ರಾಮಚಂದ್ರನ ಮನಸ್ಥಿತಿ, ಅವಳ ನೆನಹಿನಲ್ಲಿ ಹದಗೆಡುತ್ತದೆ. ಅವನಿಗೆ ನಿದ್ರೆ ಇನ್ನೆಲಿಯದು? ರಾಮಭದ್ರನಿಗೆ ನಿದ್ರೆ ಸತ್ತು ಹೋಗುತ್ತದೆ. ಅವನ ಉನ್ಮಾದಕ್ಕೆ ದಟ್ಟ ಬೆಳುದಿಂಗಳು ಮದಿರೆಯನ್ನು ಹೊಯ್ದಂತಾಗುತ್ತದೆ. ದೂರದ ಅಡವಿಯಲ್ಲಿ ಹುಲಿಯ ಅಬ್ಬರ ಕೇಳಿ ‘ಓ ಲಕ್ಷ್ಮಣಾ, ಅಸುರನು ಸತಿಯ ಕೊರಳು ಮುರಿಯುತ್ತಿದ್ದಾನೆ! ಅಯ್ಯೊ ಕೂಗುತ್ತಿದ್ದಾಳೆ! ಕೋಮಲೆ ಹೆದರದಿರು ಬಂದೆ’ ಎಂದು ಧನುಸ್ಸನ್ನು ಹುಡುಕುತ್ತಾನೆ. ಆಗ ಲಕ್ಷ್ಮಣನು ನಿಟ್ಟುಸಿರು ಬಿಡುತ್ತ ಅಳುತ್ತ ಅಣ್ಣನನ್ನು ಬಿಗಿದಪ್ಪಿ ಸಂತೈಸುತ್ತಾನೆ.

ಪ್ರಕೃತಿಯ ಸುಮಧುರ ಲೋಕದಲ್ಲಿ ತನ್ನ ಭಾವಲಹರಿಯನ್ನು ಮೇಳೈಸಿದಂತೆ- ಜೊನ್ನವಕ್ಕಿ ಜೊತೆಹಕ್ಕಿಯನ್ನು ಕೂಗಿ ಕರೆಯುವುದನ್ನು ರಾಮಚಂದ್ರನು ಆಲಿಸುತ್ತಾನೆ. ಕವಿಯು ಆ ಚಂದ್ರ ಸುಂದರ ರಾತ್ರಿಯ ಉಲಿತಕ್ಕೆ ಕಿವಿಯಾಗಿ ತನ್ಮಯತೆಯಿಂದ ‘ತಿಂಗಳ್ವಕ್ಕಿ’ ಎಂಬ ಅಚ್ಚ ಕನ್ನಡ ಪದ ಸೃಷ್ಟಿಸಿ ಚಕೋರ ಪಕ್ಷಿಯನ್ನು ಕರೆದಿದ್ದಾರೆ.

ಮಂಡ್ಯ ಮೈಸೂರು ಪ್ರದೇಶದಲ್ಲಿ ಈಗಲೂ ಚಂದ್ರನನ್ನು ‘ತಿಂಗಳು’ ಎಂದು ಜನಪದರು ಕರೆಯುವರು. ಅವನನ್ನು ಅಕ್ಕರೆಯಿಂದ ‘ತಿಂಗಳ ಮಾವ’ ಎಂದು ಮಕ್ಕಳಿಗೆ ತೋರಿಸಿ ಆಡಿಸಿ ಆನಂದಪಡುವರು. ತಿಂಗಳ ಇನ್ನೊಂದು ಅರ್ಥ ಚಂದ್ರನ ಬೆಳಕು.

ಪತ್ನಿ ಚಂದ್ರನಂತಹ ಶಾಂತ ಬೆಳಕು. ಅವಳು ‘ತಿಂಗಳ್ವಕ್ಕಿ’ಯಾಗಿ ಕರೆಯುತ್ತಿರುವಳು ಎಂಬುದು ಕಲ್ಪನಾ ಸೌಂದರ್ಯ. ಅದನ್ನು ಕೇಳಿ ರಾಮಚಂದ್ರನು ‘ಓ ಲಕ್ಷ್ಮಣಾ, ಕಲ್ಲೆದೆಯಾಗಿ ಏಕೆ ಸುಮ್ಮನಿರುವೆ ಓಡು’ ಎಂದು ಹೇಳಿ ಹಣೆ ಬಡಿದುಕೊಂಡು ಉರುಳಿ ಬೀಳುತ್ತಾನೆ. ಅಂತಹ ಮಧುರ ನೇಹ ಹೆಣೆದ ಮಹಾಕಾವ್ಯ ಒಂದು ಆಪ್ತ ಆನಂದ.

ಮತ್ತೆ ತಿಂಗಳ್ವಕ್ಕಿ,

ತೇನೆ, ತನ್ನೆಣೆವಕ್ಕಿಯಂ ಕರೆದು ಕೂಗುತ್ತೆ

ಜೊನ್ನಂಬರದೊಳಲೆವುದಂ ನಿಮಿರ್‍ಗೇಳ್ದು: ‘ಓ

ಲಕ್ಷ್ಮಣಾ; ನಿನ್ನನಯ್ಯೋ ಕರೆವಳದೊ ದೇವಿ!

ಏಕೆ ಕಲ್ಲೆರ್ದೆಯಾಗಿ ಕೆಮ್ಮುನಿಹೆ? ಓಡು ನಡೆ,

ಓಡುನಡೆ!’ ಎನುತೆ ಹಣೆಬಡಿದುಕೊಂಡುರುಳಿದಾ

ಅಗ್ರಜಗೆ, ಕೇಳ್, ಗಾಳಿಬೀಸುವ ಊರ್ಮಿಳೇಶನಾ

ಬಗೆಯ ಬಣ್ಣಿಸೆ ಬಾಯಿಹುದೆ ಹಾ ಕವಿಯ ಕಲ್ಪನೆಗೆ?’

ಬಿಲ್ದಿಂಗಳು

ಬಿಲ್ದಿಂಗಳು (ನಾ). ಬಿಲ್ಲಿನ ತಿಂಗಳು; ಬಿಲ್ಲಿನ ಚಂದ್ರ

(ಬಿಲ್ಲಿನ + ತಿಂಗಳು)

ಯುದ್ಧ ಸಂದರ್ಭದಲ್ಲಿ ಒಂದು ದಿನ ಸಂಜೆ ಕಳೆದು, ಚುಕ್ಕಿಗಳು ಕಿಕ್ಕಿರಿದು ರಾತ್ರಿ ಶೋಭಿಸುತ್ತಿರುತ್ತದೆ. ಆಗ ರಾಮಚಂದ್ರನು ಸೇನಾನಿ ನೀಲನೊಡನೆ ಆಪ್ತ ಸಮಾಲೋಚನೆಯಲ್ಲಿರುತ್ತಾನೆ. ಅವರ ಕಡೆಗೆ ಸೈನಿಕ ಸ್ನೇಹಿತರಾದ ವಹ್ನಿ ಮತ್ತು ರಂಹರು ಬರುತ್ತಿರುತ್ತಾರೆ. ಅವರೊಡನೆ ರಾಮನು ಅವರ ದಾಂಪತ್ಯದ ವೈಯಕ್ತಿಕ ವಿಚಾರ ಮಾತನಾಡಿ, ಅವರ ಧರ್ಮನಿಷ್ಠೆ ಕೇಳಿ ಸಂತೋಷಪಡುತ್ತಾನೆ. ಸೈನಿಕರು ಸೇನಾಪತಿಯ ಸನ್ನೆ ಅರಿತು ಕೈ ಮುಗಿದು ತೆರಳುತ್ತಾರೆ.

ಆಗಿನ ನಿಸರ್ಗವನ್ನು ಕುವೆಂಪು ಅವರು ಜೊನ್ನಿರುಳು ಬಿಲ್ದಿಂಗಳನ್ನು ಮುಡಿದು ಶೋಭಿಸುತ್ತಿತ್ತು ಎಂದು ಚಿತ್ರಿಸಿದ್ದಾರೆ. ಕವಿಯು ಸೃಜನಶೀಲ ಚಿಂತನೆಯಲ್ಲಿ ‘ಬಿಲ್ದಿಂಗಳು’ ಪದ ಸೃಷ್ಟಿಸಿ ವೃದ್ಧಿಯಾಗುವ ಬಾಲಚಂದ್ರನ ಸಹಜ ಲಕ್ಷಣವನ್ನು ಕಡೆದಿಟ್ಟಿದ್ದಾರೆ.

ಜೊನ್ನಿರುಳ್

ಭೂವ್ಯೋಮ ಸಾಗರಂಗಳನೊಂದು ಮಾಳ್ಪಂತೆ

ಬೆಸೆದಪ್ಪಿದುದು, ಮುಡಿದ ಬಿಲ್ದಿಂಗಳಿಂದೊಪ್ಪಿ.

ಕಣ್ಣೊಸಗೆ

ಕುವೆಂಪು ಅವರು ‘ದೀಪಾವಳಿ’ ಹಬ್ಬದಂದು ಮನೆಯನ್ನು ಸಿಂಗರಿಸಿ ಕವಿಗಳನ್ನು, ಋಷಿಗಳನ್ನು, ಮಹಾಪುರುಷರನ್ನು ಜಗದಖಿಲ ಮಹಿಮರನ್ನು ಕೃಪೆ ಮಾಡಿ ಬನ್ನಿ ಎಂದು ಆಹ್ವಾನಿಸಿದ್ದಾರೆ. ಅವರು ಮನೆಯಲ್ಲಿಯ ಹೂವಿನ ಅಲಂಕರಣವನ್ನು ಹೀಗೆ ಚಿತ್ರಿಸಿದ್ದಾರೆ:

‘ಬಣ್ಣ ಬಣ್ಣದ ಹೂವು ಕಣ್ಣೊಸಗೆಯಾಗಿದೆ;

ತರತರದ ಪರಿಮಳದ ಕಂಪು ಹೊಗೆ ತುಂಬಿದೆ.’ (ದೀಪಾವಳಿ ಕದರಡಕೆ)

ಕವಿಯು ಆ ಹೂಗಳು ಕಣ್ಣಿಗೆ ಶುಭ ಉತ್ಸವವಾಗಿ ಸಂತೋಷವನ್ನುಂಟು ಮಾಡಿರುವುದನ್ನು ‘ಕಣ್ಣೊಸಗೆ’ ಪದ ಸೃಷ್ಟಿಸಿ ಬಣ್ಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.