ರೂಪಾಗ್ನಿರಾಶಿ
ಕುವೆಂಪು ಅವರು ಬ್ರಹ್ಮಶಿಲ್ಪಿಯ ಅನನ್ಯ ಕೃತಿ ಹೆಣ್ಣನ್ನು ‘ರೂಪಾಗ್ನಿರಾಶಿ’ ರೂಪಕದಲ್ಲಿ ಚಿತ್ರಿಸಿದ್ದಾರೆ. ಆ ಪದ ಹೊಸತಾಗಿದೆ. ಆ ‘ರೂಪಾಗ್ನಿರಾಶಿ’ಗೆ ಕವಿಯ ಕಣ್ಣು ಪತಂಗದಂತೆ ಮೃತ್ಯುಮಾಧುರ್ಯಕ್ಕೆ ಮನಸೋತು ಓಡೋಡಿ ಮುನ್ನುಗ್ಗುತ್ತಿದೆ ಎಂದು ಬಣ್ಣಿಸಿದ್ದಾರೆ. ಅದು ಹೆಣ್ಣಿನ ಆಕಾರ ಚೆಲುವು ಬಣ್ಣದ ಮಧುರತೆಗೆ ಗಂಡು ಆಕರ್ಷಿತನಾಗಿ ಬಂಧಿಯಾಗುವುದನ್ನು ಧ್ವನಿಸಿದೆ. ಅವರು ಇಲ್ಲಿ ಪ್ರಯೋಗಿಸಿರುವ ‘ಮೃತ್ಯು ಮಾಧುರ್ಯ’ ವಿಶಿಷ್ಟ ಪದವಾಗಿದ್ದು - ಸೌಂದರ್ಯಾಕರ್ಷಣೆ ಮೀರಿ ಆಧ್ಯಾತ್ಮ ಭಾವಾಲಿಂಗನಕ್ಕೂ ಒಳಗಾಗುತ್ತದೆ.
‘ಕಬ್ಬಿಗನ ಕಣ್ಣು
ರೂಪಾಗ್ನಿರಾಶಿಗೆ ಪತಂಗದಂದದೊಳೋಡಿ
ಮುನ್ನುಗುತಿದೆ, ಮೃತ್ಯು ಮಾಧುರ್ಯಕ್ಕೆ ಮನಸೋತು.’
(ಹೆಣ್ಣು – ಕೃತ್ತಿಕೆ)
ಸಂತೆಗಣ್ಣು
ಗುಂಪುಸೇರಿ ವ್ಯಾಪಾರ ಮಾಡುವ ಸ್ಥಳ ಸಂತೆ. ಅದು ಅನೇಕ ಬಗೆಯ ವಸ್ತುಗಳ ಪ್ರದರ್ಶನ, ಮನರಂಜನೆಗಳಿಂದ ಕೂಡಿದ ನೆರವಿ (ಸಮೂಹ). ಅಲ್ಲಿ ಸಮುದಾಯವು ತನ್ನ ಉಪಯೋಗ, ಅನುಕೂಲಕ್ಕೆ ತಕ್ಕಂತೆ ಸಾಮಾನ್ಯವಾದ ವಸ್ತು ಸಂಗತಿಗಳತ್ತ ಗಮನಹರಿಸುತ್ತದೆ. ಅಂತಹ ಸಂತೆ ಮಂದಿಯ ಕಣ್ಣುಗಳ ಲಕ್ಷಣವನ್ನು ಕುವೆಂಪು ‘ಸಂತೆಗಣ್ಣು’ ಎಂಬ ಪದ ಸೃಷ್ಟಿಸಿ ಕಾವ್ಯದಲ್ಲಿ ಪ್ರಯೋಗಿಸಿದ್ದಾರೆ. ಅದಕ್ಕೆ ಸೂಕ್ಷ್ಮವಾಗಿ ವಸ್ತು ವಿಶೇಷವನ್ನು, ವ್ಯಕ್ತಿತ್ವದ ಘನತೆಯನ್ನು ಅವಲೋಕಿಸುವ ಸಮಾಧಾನದ, ಶಾಂತಚಿತ್ತದ ಗುಣಲಕ್ಷಣಗಳಿರುವುದಿಲ್ಲ.
ಅಂತಹ ‘ಸಂತೆಗಣ್ಣು’ಗಳಿಗೆ ಕಾಣದೆ ಇದ್ದ ತಪಸ್ವಿ ಊರ್ಮಿಳೆ ಯನ್ನು ಕುವೆಂಪು ಒಂದು ಸಾನೆಟ್‍ನಲ್ಲಿ ಹೀಗೆ ಚಿತ್ರಿಸಿದ್ದಾರೆ.
‘ರಾಮಾಯಣದ ಮಹಾರತ್ನವೇದಿಯ ಮೇಲೆ
ಮೂಲೆಯಲಿ, ನಿಂತಿರುವುದೊಂದಮೃತ ಶಿಲ್ಪಕೃತಿ,
ನಾಣ್ಚಿ, ಕಾಣದೆ ಸಂತೆಗಣ್ಗಳಿಗೆ: ಪೂರ್ಣಸತಿ,
ಊರ್ಮಿಳಾದೇವಿ, ಲಕ್ಷ್ಮಣ ಚಿರ ತಪಶ್ಯೀಲೆ!’
(ಊರ್ಮಿಳಾದೇವಿ - ಕೃತ್ತಿಕೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.