ಸಣ್ಣಕತೆಯ ಕ್ಷೇತ್ರದಲ್ಲಿ ಕೆಲವರು ತಮ್ಮ ಮೊದಲ ಕೃತಿಗಳಿಂದಲೇ ಓದುಗರ ಗಮನ ಸೆಳೆದಿರುವುದುಂಟು; ಆಮೇಲೆ ಅಷ್ಟಾಗಿ ಬರೆಯದೆ, ನಂತರದ ಪೀಳಿಗೆಯ ಓದುಗರ ಗಮನ ಸೆಳೆಯದೆ ಮರೆಗೆ ಸರಿದಿರುವುದೂ ಉಂಟು. ವೆಂಕಟರಾಜ ಪಾನಸೆಯವರ ‘ಮನ್ಮಥನ ಹೆಂಡತಿ’, ಕೆ. ಸದಾಶಿವರ ‘ನಲ್ಲಿಯಲ್ಲಿ ನೀರು ಬಂದಿತು’, ರಾಜಲಕ್ಷ್ಮಿ ಎನ್. ರಾವ್ ಅವರ ‘ಸಂಗಮ’, ರಾಘವೇಂದ್ರ ಖಾಸನೀಸರ ‘ಖಾಸನೀಸರ ಕತೆಗಳು’, ಕಾಮರೂಪಿಯವರ ‘ಒಂದು ತೊಲ ಪುನುಗು’. ಟಿ.ಎನ್. ಕೃಷ್ಣರಾಜು ಅವರ ‘ಭೇತಾಳರಾಯ’, ಇವು ನನಗೆ ತಕ್ಷಣಕ್ಕೆ ನೆನಪಾಗುವ ಮೊದಲ ಕಥಾ ಸಂಕಲನಗಳು. ಇವುಗಳ ಜೊತೆಗೆ ಮೊನ್ನೆಯಷ್ಟೇ ತೀರಿಕೊಂಡ ಶ್ರೀಕಾಂತ ಅವರ ‘ಭೂಮಿ ಕಂಪಿಸಲಿಲ್ಲ’ ಸಂಕಲನವನ್ನೂ ಸೇರಿಸಿಕೊಳ್ಳಬೇಕು.
1960ರ ದಶಕದಲ್ಲಿ ಶ್ರೀಕಾಂತ ನಾಮಾಂಕಿತ ಎನ್. ವೆಂಕೋಬರಾವ್ ‘ಭೂಮಿ ಕಂಪಿಸಲಿಲ್ಲ’ವಲ್ಲದೆ ‘ಪಾಪು-ಪುಟ್ಟು’ ಎಂಬ ಇನ್ನೊಂದು ಸಂಕಲನವನ್ನೂ ಪ್ರಕಟಿಸಿ ಸಾಕಷ್ಟು ಪ್ರಸಿದ್ಧರಾಗಿದ್ದರು. ಗೋಪಾಲಕೃಷ್ಣ ಅಡಿಗರ ‘ಸಾಕ್ಷಿ’ ಪತ್ರಿಕೆಯ ಮೊದಲ ಸಂಚಿಕೆಯಲ್ಲೇ ಅವರ ‘ಪಾಪು ಪುಟ್ಟು’ ಕತೆ ಪ್ರಕಟವಾಗಿತ್ತು. ಇನ್ನೊಂದು ಕತೆ ‘ಪ್ರತಿಮೆಗಳು’ ‘ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ’ಯಲ್ಲಿ ಪ್ರಥಮ ಬಹುಮಾನ ಪಡೆದಿತ್ತು. ತೀರ್ಪುಗಾರರಲ್ಲಿ ಒಬ್ಬರಾಗಿದ್ದ ಜಿ.ಎಸ್.ಶಿವರುದ್ರಪ್ಪನವರು ‘ತುಂಬಾ ತೃಪ್ತಿಯನ್ನು ತಂದ ಅಂಶವೆಂದರೆ ಭಾಷಾಪ್ರಯೋಗ ಪರಿಣತಿ, ವಿಶೇಷ ಎಚ್ಚರಿಕೆಯಿಂದ ಕಡೆದು ನಿರ್ಮಿಸಿದಂಥ ಶಿಲ್ಪ, ಅರ್ಥಪೂರ್ಣ ಧ್ವನಿಪ್ರಚುರ ಭಾಷ್ಯ, ವಿಚಾರದ ಪ್ರಖರತೆ, ದೃಷ್ಟಿಯ ನಾವೀನ್ಯ, ಭಾಷಾ ನಿರ್ಮಾಣದ ಕುಶಲತೆ, ಪರಿಣಾಮದ ತೀವ್ರತೆ ಇವುಗಳಿಂದ (ಈ ಕತೆ) ಜೀವಂತವಾಗಿದೆ ಮತ್ತು ಜ್ವಲಂತವಾಗಿದೆ’ ಎಂದು ಬರೆದಿದ್ದರು.
ನವೋದಯದಿಂದ ನವ್ಯಕ್ಕೆ ಹೊರಳಿಕೊಂಡ ಸಂದರ್ಭದಲ್ಲಿ ಕಾಣಿಸಿಕೊಂಡ ಕತೆಗಾರರಲ್ಲಿ ಆತ್ಮಪ್ರಜ್ಞೆ ಮತ್ತು ಅಂತರ್ಮುಖತೆಗಳು ಪ್ರಮುಖ ಲಕ್ಷಣಗಳಾಗಿದ್ದವಷ್ಟೆ. ಹಳೆಯ ಸಾಮಾಜಿಕ ಮತ್ತು ಸಾಸ್ಕೃತಿಕ ಮೌಲ್ಯಗಳನ್ನು ಪ್ರಶ್ನಿಸಿದ ಆ ಕತೆಗಾರರು ವೈಯಕ್ತಿಕ ನೆಲೆಯಲ್ಲೇ ಅನುಭವದ ಅಧಿಕೃತತೆಯನ್ನು ಹುಡುಕಿದರು; ಅಭಿವ್ಯಕ್ತಿಗಾಗಿ ಕಾವ್ಯಭಾಷೆಯ ರೂಪಕ, ಪ್ರತಿಮೆ, ಪ್ರತೀಕಗಳಂಥ ವಿಧಾನಗಳನ್ನು ಅನುಸರಿಸಿದರು. ಶ್ರೀಕಾಂತರ ಕತೆಗಳಲ್ಲಿ ಕೂಡ ಈ ಎಲ್ಲ ಅಂಶಗಳೂ ಇವೆ. ಕತೆಯ ವಿಶಿಷ್ಟ ಸನ್ನಿವೇಶಗಳ ಧ್ವನಿಯನ್ನು ಮನಗಾಣಿಸುವುದಕ್ಕಾಗಿ ಅವರು, ಆ ಕಾಲದ ನವ್ಯಕತೆಗಾರರಂತೆಯೇ, ವ್ಯಂಗ್ಯವನ್ನು ತುಂಬ ಪರಿಣಾಮಕಾರಿಯಾಗಿ ಬಳಸಿದರು.
ಪಾತ್ರಸೃಷ್ಟಿಯಲ್ಲಿ ಕಂಡುಬರುವ ನಾಟಕೀಯತೆ, ರೂಪಕಗಳ ಮೂಲಕ ಅನಾವರಣಗೊಳ್ಳುವ ಹೆಣ್ಣಿನ ಮನಸ್ಸು, ಭಾವಗೀತಾತ್ಮಕ ನಿರೂಪಣೆ, ಇವು ಅವರಲ್ಲಿ ಎದ್ದುಕಾಣುವ ಅಂಶಗಳು. ಎಲ್ಲ ಕತೆಗಳಲ್ಲೂ ಹೆಣ್ಣಿನ ಬಗ್ಗೆ ಅನುಕಂಪಭರಿತ ತಿಳಿವಳಿಕೆಯಿದೆ, ಮನುಷ್ಯನ ಅಪ್ರಜ್ಞಾಪೂರ್ವಕ ವರ್ತನೆಗಳನ್ನು ಕುರಿತ ಸೂಕ್ಷ್ಮಗ್ರಹಿಕೆಯಿದೆ, ಜೀವಂತವಲ್ಲದ ಮನುಷ್ಯಪ್ರಕೃತಿಯ ಬಗ್ಗೆ ಅನಾದರವಿದೆ. ಒಳಿತು ಮತ್ತು ಕೆಡುಕಿನ ನಡುವಣ ಸಂಬಂಧದ ಬಗ್ಗೆ ಕುತೂಹಲವಿದೆ. ಇವೆಲ್ಲವೂ ಶರತ್ಕಾಲದ ಬದಲಾಗುವ ಬಣ್ಣಗಳಂತೆ ಭಾವನೆಗಳ ರೂಪಾಂತರಕ್ಕೆ ಕಾರಣವಾಗುತ್ತವೆ. ಅವರ ಪಾತ್ರಗಳೆಲ್ಲವೂ ಸಾಮಾನ್ಯರನ್ನು ಪ್ರತಿನಿಧಿಸುವ ಪಾತ್ರಗಳೇ. ಆದರೆ ಅವರಲ್ಲೂ ಅಂತರ್ಗತವಾಗಿರುವ, ಕೆಲವು ಸಂದರ್ಭಗಳಲ್ಲಿ ಮಾತ್ರ ಮೇಲೆ ಕಾಣಿಸಿಕೊಳ್ಳುವ ಹಿಂಸಾತ್ಮಕ ಪ್ರವೃತ್ತಿಯನ್ನೂ ಅವರು ವಿಶ್ಲೇಷಿಸುತ್ತಾರೆ.
ನಾನು ಮೊದಲು ಶ್ರೀಕಾಂತರನ್ನು ನೋಡಿದ್ದು 1961ರಷ್ಟು ಹಿಂದೆ. ಆಗವರು ಬೆಂಗಳೂರಿನ ಚಾಮರಾಜಪೇಟೆಯಲ್ಲಿದ್ದ ‘ವಿಕ್ರಮ’ ವಾರಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಇನ್ನೂ ಪಿ.ಯು.ಸಿ.ಯಲ್ಲಿದ್ದ, ಸಾಹಿತ್ಯದಲ್ಲಿ ಆಸಕ್ತಿಯಷ್ಟೇ ಇದ್ದ, ಆರ್‌ಎಸ್‌ಎಸ್ ಎಂದರೇನೆಂದು ಗೊತ್ತೇ ಇರದಿದ್ದ ನನಗೆ ಅವರು ಮೊದಲ ಭೇಟಿಯಲ್ಲೇ ತಮ್ಮ ‘ಭೂಮಿ ಕಂಪಿಸಲಿಲ್ಲ’ ಎಂಬ ಕಥಾ ಸಂಕಲನವನ್ನು ಕೊಟ್ಟಿದ್ದರು. ಅದಕ್ಕೆ ಡಾಡಾಯಿಸ್ಟರ ಅಮೂರ್ತ ಕಪ್ಪು ಬಿಳುಪು ಚಿತ್ರಗಳನ್ನು ಹೋಲುವಂತಿದ್ದ ಮುಖಪುಟವಿತ್ತು. ಅದನ್ನು ರಚಿಸಿದ್ದವರು ರೇಣು ಆನಂದರಾವ್ (ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯ ನಿರ್ದೇಶಕರಾಗಿದ್ದ ಅವರು ಟಿ.ಜಿ. ರಾಘವರ ‘ಜ್ವಾಲೆ ಆರಿತು’, ನಿಸಾರ್ ಅಹಮದರ ‘ಮನಸು ಗಾಂಧಿಬಜಾರು’ ಮೊದಲಾದ ಇನ್ನೂ ಕೆಲವು ಪುಸ್ತಕಗಳಿಗೂ ಪುಖಪುಟ ವಿನ್ಯಾಸಗೊಳಿಸಿದ್ದರು). ಆ ಕಾಲದಲ್ಲಿ ಒಂದೆರಡು ತಿಂಗಳು ನಾನು ಆಗಾಗ ಶ್ರೀಕಾಂತರನ್ನು ಭೇಟಿಯಾಗುತ್ತಿದ್ದ ನೆನಪು. ಆಮೇಲೆ 2008ರ ವರೆಗೂ ನನಗೆ ಅವರ ಸಂಪರ್ಕವಿರಲಿಲ್ಲ. ಆ ಹೊತ್ತಿಗೆ ಹೊಸ ಪೀಳಿಗೆಯ ಓದುಗರಿಗೆ ಅವರ ಪರಿಚಯವೇ ಇಲ್ಲಲಿಲ್ಲವೆನ್ನಬೇಕು. 2011ರಲ್ಲಿ ನಾನೇ ಅವರ ಎಲ್ಲ ಕತೆಗಳನ್ನೂ ಒಟ್ಟುಗೂಡಿಸಿ ಅದಕ್ಕೊಂದು ಮುನ್ನುಡಿ ಬರೆದೆ. ಅದು ‘ಸಮಗ್ರ ಕತೆಗಳು’ ಎಂಬ ಹೆಸರಿನಲ್ಲಿ ಸಾಗರ್ ಪ್ರಕಾಶನದಿಂದ ಪ್ರಕಟವಾಯಿತು.
ಆ ಪುಸ್ತಕಕ್ಕಾಗಿ ಅವರು ನನ್ನ ಒತ್ತಾಯದಿಂದ, ಅದೂ ಮನಸ್ಸಿಲ್ಲದ ಮನಸ್ಸಿನಿಂದ, ‘ಕತೆಗಳನ್ನು ಓದುವ ಮುನ್ನ’ ಎಂಬ ಶೀರ್ಷಿಕೆಯಲ್ಲಿ ಒಂದು ಲೇಖನ ಬರೆದರು. ಅದರಲ್ಲಿರುವ 1974ರಲ್ಲಿ ನಡೆದ ಒಂದು ಪ್ರಸಂಗ: “ಆಹ್ವಾನಿತ ಕತೆಯಾಗಿ ‘ಪ್ರಜಾವಾಣಿ’ಯಲ್ಲಿ ನನ್ನ ಕತೆ ಪ್ರಕಟವಾಯಿತು. ಹೆಸರು ‘ವಿವೇಕಾನಂದ ಭೂತ’. ಗದ್ದಲವೆಬ್ಬಿಸಿತು. ನೂರಾರು ಕಾಗದಗಳು; ಎಲ್ಲವೂ ಬೆದರಿಕೆಗಳೇ. ಕತೆಯ ಗಟ್ಟಿತನ ಯಾರ ಗಮನಕ್ಕೂ ಬರಲೇ ಇಲ್ಲ. ಪರಂಪರಾಗತ ಶೈಲಿಗೆ ಒಗ್ಗಿಕೊಂಡ ನಮ್ಮ ಜನ ಸಿಡಿದೆದ್ದರು. ಬಯ್ದರು. ಕಾರಣ ಇಷ್ಟೆ! ವಿವೇಕಾನಂದರ ಪ್ರತಿಮೆಯನ್ನು ಮಗುವಿನ ನುಣ್ಣನೆಯ ಪಿರ‍್ರೆಗೆ ಹೋಲಿಸಿದ್ದೆ. ಜೊತೆಗೆ ಪ್ರಬುದ್ಧಾನಂದ ಎಂಬ ಸನ್ಯಾಸಿಯನ್ನು ಅಪ್ರಬುದ್ಧನೆಂದು ಕರೆದಿದ್ದೆ. ಇದು ಎಲ್ಲರನ್ನೂ ಕೆರಳಿಸಿತು. ಸಂಘದ ನಾಯಕರಂತೂ ಕುಪಿತರಾದರು. ನನ್ನ ವಿಚಾರಣೆಯೂ ಆಯಿತು. ಸಾಹಿತ್ಯದ ಗಂಧ ಗೊತ್ತಿರದ ಜನ ಲೇವಡಿ ಮಾಡಿದರು. ಅವ್ಯಕ್ತವಾಗಿ ‘ಶ್ರೀಕಾಂತ’ ಮರೆಯತೊಡಗಿದ... ಈ ಘಟನೆ ನನ್ನನ್ನು ಸಾಹಿತ್ಯ ವಲಯದಿಂದ ದೂರ ಮಾಡಿತು. ಭಾಷಣ, ಸಂಘಟನೆ, ದೇಶಭಕ್ತಿ, ಉನ್ಮಾದ ಹೆಚ್ಚಾಯಿತು... ಹೃದಯದ ಅಂತಃಸ್ಥಲದಲ್ಲಿ ಸಾಹಿತ್ಯ ವಿರಾಜಮಾನವಾಗಿದ್ದರೂ ಹೊರ ಜಗತ್ತಿಗೆ ಪ್ರಕಟವಾಗಲಿಲ್ಲ.”
ಐಡಿಯಾಲಜಿಯ ಮೇಲೆ ಭದ್ರವಾಗಿ ನಿಂತ ಯಾವ ಪ್ರಭುತ್ವವೂ ತನ್ನ ಕಥನಗಳನ್ನು ಒಪ್ಪಿಕೊಳ್ಳದ ಲೇಖಕರನ್ನು ಪುರಸ್ಕರಿಸುವುದಿಲ್ಲ. ಇದಕ್ಕೆ ಆರ್‌ಎಸ್‌ಎಸ್ ಕೂಡ ಹೊರತಲ್ಲ ಎಂದು ದೃಢಪಡುತ್ತದೆ ಶ್ರೀಕಾಂತರ ಮೇಲಿನ ಮಾತುಗಳಿಂದ. ಸೋವಿಯೆಟ್ ಯೂನಿಯನ್ ಅಸ್ತಿತ್ವದಲ್ಲಿದ್ದ ಕಾಲದಲ್ಲಿ ರಷ್ಯದ ಹಾಗೂ ಪೂರ್ವ ಯೂರೋಪಿಯನ್ ದೇಶಗಳ ಅದೆಷ್ಟು ಮಂದಿ ಲೇಖಕರು ಒಂದೋ, ಪ್ರಭುತ್ವದ ದಬ್ಬಾಳಿಕೆಗೆ ಗುರಿಯಾಗಿ ಜೈಲು ಸೇರಬೇಕಾಯಿತು ಅಥವಾ ದೇಶ ಬಿಟ್ಟು ಹೋಗಬೇಕಾಯಿತು. ವಿಪರ್ಯಾಸವೆಂದರೆ ಅವರಲ್ಲಿ ಬಹುಮಂದಿ ಅತ್ಯುತ್ತಮ ಲೇಖಕರಾಗಿದ್ದದ್ದು.
ಶ್ರೀಕಾಂತರಿಗೆ ಯಾವುದೇ ಸಿದ್ಧಾಂತದ ವ್ಯಕ್ತಿಯೊಡನೆಯೂ ಗೆಳೆತನ ಸಾಧ್ಯವಿತ್ತು. ಕುವೆಂಪು ಅವರ ಗುರುಸಮಾನರು. ಅಡಿಗ, ತರಾಸು, ಕೆ. ನರಸಿಂಹಮೂರ್ತಿ, ಅನಂತಮೂರ್ತಿ, ಜಿ. ಎಚ್. ನಾಯಕ, ಗಿರಿ, ಕೃಷ್ಣ ಆಲನಹಳ್ಳಿ, ಕೆ. ನ. ಶಿವತೀರ್ಥನ್, ಹೀಗೆ ಅನೇಕ ಲೇಖಕರ ಜೊತೆ ಆತ್ಮೀಯತೆಯಿತ್ತು, ಸ್ನೇಹವಿತ್ತು. ಸ್ನೇಹಕ್ಕೆ ವಯಸ್ಸಿನ ತಾರತಮ್ಯವೇನೂ ಇಲ್ಲ. ಇಬ್ಬರ ನಡುವೆ ನಿಜವಾದ ಸ್ನೇಹ ಮೊಳೆಯಬೇಕಾದರೆ ಇಬ್ಬರಿಗೂ ಸಮಾನ ಆಸಕ್ತಿ ಇರಬೇಕು. ಹಾಗಿಲ್ಲದೆ ಆಸಕ್ತಿಗಳು ಬೇರೆ ಬೇರೆಯಾಗಿದ್ದರೆ ಒಟ್ಟಿಗೆ ಸಂತೋಷಪಡಬಹುದಾದ್ದು ಏನೂ ಇರುವುದಿಲ್ಲ. ಆಗ ಒಟ್ಟಿಗೆ ಕಳೆದ ಕಾಲ ಕೂಡ ಬಹುಬೇಗ ಮರೆವಿಗೆ ಜಾರುತ್ತದೆ. ಇಬ್ಬರ ನಡುವೆ ಸ್ನೇಹ ಮೊಳೆಯಬೇಕಾದರೆ ಬಹುಶಃ ಇಬ್ಬರೂ ಒಂದಲ್ಲ ಒಂದು ಕಾಲದಲ್ಲಿ ಸುಖವನ್ನೋ ಸಂಕಷ್ಟವನ್ನೋ ಯಾತನೆಯನ್ನೋ ಅನುಭವಿಸಿರಬೇಕು. ಅಂಥ ಗುಣವಿದ್ದವರು ಕೆಲವರಾದರೂ ನಮ್ಮ ಸಂಪರ್ಕಕ್ಕೆ ಬರುವಂತಾದರೆ ಅದು ನಮ್ಮ ಅದೃಷ್ಟ.ಮೈಸೂರಿನ ಬನುಮಯ್ಯ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದ, ಅನೇಕ ದಶಕಗಳಿಂದ ಬುದ್ಧಿಮಾಂದ್ಯ ಮಕ್ಕಳಿಗಾಗಿ ಮೈತ್ರಿ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದ ಶ್ರೀಕಾಂತ ನನ್ನ ಮಟ್ಟಿಗೆ ಅತ್ಯುತ್ತಮ ಕತೆಗಾರರಷ್ಟೇ ಆಗಿರಲಿಲ್ಲ, ಸ್ನೇಹಕ್ಕಾಗಿ ಸ್ನೇಹವೇ ಆಗಿದ್ದವರು ಕೂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.