ಈ ವರ್ಷ ಕರ್ನಾಟಕ ಮೂರು ವಿಷಯಗಳಲ್ಲಿ ಕುಖ್ಯಾತಿಯನ್ನು ಪಡೆದಿದೆ. ಮೊದಲನೆಯದು, ದೇಶದಲ್ಲೇ ಅತಿಹೆಚ್ಚು ‘ಫೇಕ್ ಸುದ್ದಿ’ಗಳನ್ನು ಕಳಿಸಿದ್ದು; ಎರಡನೆಯದು, ಹೆಚ್ಚಿನ ಪ್ರಮಾಣದ ರಾಷ್ಟ್ರದ್ರೋಹದ ಪ್ರಕರಣಗಳನ್ನು ದಾಖಲಿಸಿದ್ದು; ಮೂರನೆಯದು, ನಮ್ಮ ನೆಲ ‘ಮರ್ಯಾದೆಗೇಡು ಹತ್ಯೆ’ಗಳಿಗೂ ಸಾಕ್ಷಿಯಾಗಿದ್ದು.
ಒಂದು ಕಾಲದಲ್ಲಿ ಶಾಂತಿಯ ತೋಟವೆಂದೂ ಸಾಮಾಜಿಕ ನ್ಯಾಯದ ದೃಢ ಹೆಜ್ಜೆಗಳನ್ನಿಟ್ಟ ಮೊದಲಿಗ ರಾಜ್ಯವೆಂದೂ ಹೆಸರಾಗಿದ್ದ ನಮ್ಮ ನಾಡು, ಈ ರೀತಿ ಕುಖ್ಯಾತಿ ಗಳಿಸಿದ್ದನ್ನು ಗಮನಿಸಿ, ರಾಜ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಹೆಣಿಗೆಯನ್ನು ಹೇಗೆ ಛಿದ್ರಗೊಳಿಸಲಾಗಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು.
ನಮ್ಮ ಸಾರ್ವಜನಿಕ ಜೀವನದಲ್ಲಿ ತುಂಬಿದ್ದ ಸೌಮ್ಯ ದನಿಗಳಿಗೇನಾಯಿತು? ಮಾನವೀಯತೆಯ ಸೂಚಿ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿದ ಚರ್ಚೆ ಮತ್ತು ವ್ಯಾಖ್ಯೆಗಳಿಗೇನಾಯಿತು? ದೇಶ ವಿಭಜನೆಯಿಂದ ದಿಕ್ಕಾಪಾಲಾದವರಿಗೆ, ಟಿಬೆಟ್‌ನ ನಿರಾಶ್ರಿತರಿಗೆ ಆಶ್ರಯ ನೀಡಿದ ಭರವಸೆಯ ಭೂಮಿಗೇನಾಯಿತು? ದೇಶದ ಎತ್ತೆತ್ತಲ ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡಿದ ನೆಲಕ್ಕೆ ಏನಾಯಿತು? ಹಾಗಾದರೆ, ಬಹುಭಾಷೆ, ಸಂಸ್ಕೃತಿ, ಜೀವನ ವಿಧಾನವನ್ನು ಬೆಸೆದು ಬೆರೆಸಿದ್ದ ‘ಕರ್ನಾಟಕತ್ವ’ ಈಗ ನಮ್ಮನ್ನು ಒಂದಾಗಿಸುವ ಎಳೆಯಾಗಿ ಉಳಿದಿಲ್ಲವೇ? ಹಲವು ಸುದ್ದಿ ವಾಹಿನಿಗಳಲ್ಲಿ ಕಾಣುವ ದ್ವೇಷ ಮತ್ತು ಹಿಂಸೆ ಈ ‘ಕರ್ನಾಟಕತ್ವ’ವನ್ನು ಪಲ್ಲಟಗೊಳಿಸಿವೆಯೇ?
ಈ ಶಿಥಿಲದ ಉಗಮವನ್ನು ನಮ್ಮ ಚುನಾಯಿತ ಪ್ರತಿನಿಧಿಗಳು ಅಥವಾ ರಾಜಕಾರಣಿಗಳ ಮೇಲಷ್ಟೇ ಆರೋಪಿಸಿ ಸುಮ್ಮನಿದ್ದರೆ ಸಾಲದು. ಸಾಮಾಜಿಕ ಹೆಣಿಗೆ ಛಿದ್ರಗೊಳ್ಳಲು ಏನು ಕಾರಣ ಎಂಬುದನ್ನು ಅರಿಯಲು ನಮ್ಮ ಸುತ್ತ ನಡೆದಿರುವ ಎಲ್ಲ ಬೆಳವಣಿಗೆಗಳನ್ನು ವರ್ತಮಾನದ ಬೆಳಕಿನಲ್ಲಿ ಒಮ್ಮೆ ಜಿಜ್ಞಾಸೆಗೆ ಒಳಪಡಿಸಬೇಕು. ಕನ್ನಡದ ಹೆಮ್ಮೆ, ಕನ್ನಡದ ಶ್ರೇಷ್ಠತೆ ಬಗ್ಗೆ ಕಾಲಕಾಲಕ್ಕೆ ಅತಿರಂಜಕ ಮಾತುಗಳನ್ನು ಆಡುವುದು ಕಂಡು ಬರುವುದಾದರೂ ಧಾರ್ಮಿಕ ರಾಷ್ಟ್ರೀಯತೆ, ಜನಪ್ರಿಯ ಸರ್ವಾಧಿಕಾರ ಮತ್ತು ಧರ್ಮಗಳ ನಡುವಿನ ದ್ವೇಷಕ್ಕೆ ನಜರೊಪ್ಪಿಸುವುದು ನಮ್ಮ ನಾಡಿನಲ್ಲಿ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಆಗಿರುವ ಎರಡು ದಶಕಗಳ ಅಸಮಾನ ಅಭಿವೃದ್ಧಿಯು ಅಸಹಜ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಹಿತಾಸಕ್ತಿಗಳ ಮಥನಕ್ಕೆ ಸಾಕ್ಷಿಯಾಗಿದೆ.
ಗ್ರಾಹಕ ಸಂಸ್ಕೃತಿಯೇ ಪ್ರಧಾನವಾದ ಮತ್ತು ಮಾಧ್ಯಮ ನಿಯಂತ್ರಿತವಾದ ಸಮಾಜವು ಹಲವು ವರ್ಗಗಳ ಜೀವನ ಶೈಲಿಯನ್ನೇ ಬದಲಾಯಿಸಿದೆ. ಈ ಮಾರುಕಟ್ಟೆ ಆರ್ಥಿಕತೆಯ ಆಚೆಗಿರುವ ಎಷ್ಟೋ ಮಂದಿಗೆ ಸರ್ಕಾರ ನೀಡುವ ಕಲ್ಯಾಣ ಯೋಜನೆಗಳೇ ಅಂತಹ (ಯೋಜನೆಗಳ ಪ್ರಯೋಜನ ಪಡೆಯುವ) ಸಮಾಜದ ಚಲನೆಗೆ ಕಾರಣವಾಗಿವೆ. ಮಾರುಕಟ್ಟೆ ಸಮ್ಮೋಹನಕ್ಕೆ ಒಳಗಾದವರು ಮತ್ತು ರಾಜ್ಯ ಆಧಾರಿತ ಯೋಜನೆಗಳಿಗಾಗಿ ಕಾಯುವವರ ಗುರುತಿಸುವಿಕೆಯಲ್ಲೇ ಜಾತಿ ಆಧಾರಿತ ಸಮುದಾಯಗಳ ಹೊಸ ಗುರುತು ಮತ್ತು ಗಡಿಗಳನ್ನು ಸೃಷ್ಟಿಸುವ ಹುನ್ನಾರ ಅಡಗಿದೆ.
ಸಮಾಜದ ಛಿದ್ರೀಕರಣ ಮತ್ತು ದಿಕ್ಕೆಟ್ಟ ಸ್ಥಿತಿಯು ವಿವಿಧ ಗುಂಪುಗಳ ಮಧ್ಯೆ ಒಮ್ಮತವು ಮಾಯವಾಗಿರುವುದರಲ್ಲಿ ಎದ್ದು ಕಾಣುತ್ತಿದೆ. ಗ್ರಾಮೀಣ ಮತ್ತು ಕೃಷಿ ಸಮಾಜದ ವ್ಯತ್ಯಾಸಗಳನ್ನು ಸರಿಗಟ್ಟುವಂತೆ ರೈತರ ಹತ್ತು ಹಲವು ಗುಂಪುಗಳು ಸೃಷ್ಟಿಯಾಗಿವೆ. ಹೆಚ್ಚಿನ ರೈತ ನಾಯಕರು ಸಾಲ ಮನ್ನಾ, ಸಬ್ಸಿಡಿ, ಉಚಿತ ವಿದ್ಯುತ್‍ಗಳಿಂದಾಚೆಗೆ ಯೋಚಿಸಲು ಅಶಕ್ತರಾಗಿದ್ದಾರೆ.
ಹವಾಮಾನ ಬದಲಾವಣೆ ತಂದಿರುವ ತುರ್ತು ಬಿಕ್ಕಟ್ಟು, ಒಟ್ಟಾರೆ ಅಧೋಗತಿ ಹಾದಿ ಹಿಡಿದಿರುವ ಪ್ರಜಾಸತ್ತಾತ್ಮಕ ಪ್ರಕ್ರಿಯೆ, ಪರ್ಯಾಯ ಅಭಿವೃದ್ಧಿ ಮಾದರಿಗಳ ಅಗತ್ಯಗಳು ಇಂದಿನ ಚರ್ಚೆಯ ಮುಖ್ಯ ವಿಷಯಗಳು. ಆದರೆ, ರೈತ ನೇತಾರರು ಯಾರೂ ಈ ಬಗ್ಗೆ ಚರ್ಚಿಸುತ್ತಿಲ್ಲ; ಅದನ್ನಿಟ್ಟುಕೊಂಡು ಸಂವಾದವನ್ನೂ ನಡೆಸುತ್ತಿಲ್ಲ. ರಾಜ್ಯದ ವಿಸ್ತಾರ ಭೂಭಾಗಗಳು ಕಾಲಕಾಲಕ್ಕೆ ಹವಾಮಾನ ವೈಪರೀತ್ಯದಿಂದ ಸಮಸ್ಯೆಗೆ ಸಿಲುಕುತ್ತಿವೆ. ಇಂತಹ ಗಂಭೀರ ಸಮಸ್ಯೆಯನ್ನು ಪರಿಹಾರ ಮತ್ತು ಪುನರ್ವಸತಿಯ ಹಕ್ಕೊತ್ತಾಯದ ಮಟ್ಟಕ್ಕೆ ಇಳಿಸಲಾಗಿದ್ದು, ಅದರ ಮೂಲವನ್ನು ಕಿತ್ತು ಹಾಕಲು ಯಾವ ಪ್ರಯತ್ನವೂ ಕಾಣುತ್ತಿಲ್ಲ. ಕಾರ್ಮಿಕ ಸಂಘಟನೆಗಳು ವ್ಯಸ್ತ ಸ್ಥಿತಿಯಲ್ಲಿವೆ. ಹೊಸ ಕಾರ್ಮಿಕ ವರ್ಗದ ಹಿತಾಸಕ್ತಿಗಳು ಅವುಗಳಿಗೆ ಅರ್ಥವೇ ಆಗುತ್ತಿಲ್ಲ. ದಲಿತರು ಒಂದು ಕಾಲದಲ್ಲಿ ಈ ರಾಜ್ಯದ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವೇದಿಕೆಗಳಲ್ಲಿ ಪ್ರಮುಖರಾಗಿದ್ದರು. ಆದರೆ, ಈಗ ಹತ್ತು ಹಲವರ ನಾಯಕತ್ವ; ವೈವಿಧ್ಯಮಯ ರಾಜಕೀಯ ಸ್ಥಾನಮಾನಗಳ ಮೂಲಕ ಅವರ ಕಟ್ಟೂ ಛಿದ್ರವಾಗಿದೆ.
ಶಿಕ್ಷಣಮಟ್ಟದ ಅಧಃಪತನ ಮತ್ತು ನಮ್ಮ ವಿಶ್ವವಿದ್ಯಾಲಯಗಳ ಸಾವು ವಿದ್ಯಾರ್ಥಿಗಳ ಪ್ರತಿರೋಧಕ್ಕೆ ಕಾರಣವಾಗಬೇಕಿತ್ತು. ಆದರೆ ಬಹುತೇಕ ಸಂಘಟನೆಗಳು ಮೌನವಾಗಿವೆ. ಅವರ ಹತಾಶೆಗಳೆಲ್ಲಾ ಶಿಕ್ಷಿತ ನಿರುದ್ಯೋಗಿ ಯುವಕರಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗಳಲ್ಲಿ ಪ್ರತಿಫಲನಗೊಳ್ಳುತ್ತಿವೆ. ಜಾತಿ ಸಂಘಟನೆಗಳು ಪರಿಹಾರಾತ್ಮಕ ಹಕ್ಕುಗಳ ಒತ್ತಡ ಗುಂಪುಗಳಾಗುವ ಬದಲು ರಾಜ್ಯದ ಅನುದಾನ ಮತ್ತು ವಿಶೇಷ ಸವಲತ್ತುಗಳನ್ನು ಬೇಡುವ ಸ್ಪರ್ಧಾತ್ಮಕ ಕ್ಲಬ್ಬುಗಳಾಗಿವೆ.
ಬಹುಮುಖ್ಯ ವರ್ಗಗಳು ಮತ್ತು ಹಿತಾಸಕ್ತಿ ಗುಂಪುಗಳು ಎಲ್ಲೆಡೆ ಛಿದ್ರವಾಗಿರುವ ಕಾರಣ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಪ್ರಕ್ರಿಯೆಗಳಿಗಾಗಿ ಜನರು ಒತ್ತಾಯಿಸುವ ಸಾಧ್ಯತೆಯೇ ಮಸುಕಾಗಿದೆ. ನಾವೀಗ ಸಂಸ್ಥೆಗಳ ಕೇಸರೀಕರಣ, ಧರ್ಮಾಂಧತೆಯ ಸಾಂಸ್ಕೃತಿಕ ಅನುಮೋದನೆ ಹಾಗೂ ಹಿಂಸೆಯನ್ನು ಒಪ್ಪುವ ಮನಃಸ್ಥಿತಿಯನ್ನು ನೋಡುತ್ತಿದ್ದೇವೆ. ತಮ್ಮದೇ ಸಂಕುಚಿತ ಹಿತಾಸಕ್ತಿಗಳಲ್ಲಿ ಬಂದಿಯಾಗಿರುವ ಹಲವಾರು ಸಂಘಟನೆಗಳು ರಾಜಕೀಯ ಉತ್ತರದಾಯಿತ್ವ, ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಹಂಚಿಕೆಯ ಹಕ್ಕುಗಳನ್ನು ಸಾಮಾನ್ಯ ಕಾರಣವಾಗಿ ಮುಂದಿಡಲು ಅಸಮರ್ಥವಾಗಿವೆ.
ಇಲ್ಲದಿದ್ದರೆ, ವೈಯಕ್ತಿಕ ಮತ್ತು ಸಾರ್ವಜನಿಕ ಬದುಕಲ್ಲಿ ಹಿಂಸಾಚಾರದ ದಾಖಲೆ, ಅಕ್ರಮ ಸಂಪತ್ತು ಗಳಿಕೆ, ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದ್ವೇಷಭಾಷಣ, ಶಾಸಕನಾಗಲು ಇರುವ ನಾಗರಿಕ ನಡವಳಿಕೆಯ ಗೈರು, ಪಕ್ಷದ್ರೋಹ ಬಗೆದು ಪಕ್ಷಾಂತರ ಮಾಡಿದ ಹಿನ್ನೆಲೆ ಇದ್ದರೂ ಮತ್ತೆ ಗೆದ್ದು ಬರಲು ಹೇಗೆ ಸಾಧ್ಯ? ಏನಕೇನ ಸಂಪತ್ತು ಗಳಿಸುವುದು ಇಂದು ಸಾಮಾಜಿಕವಾಗಿ ಒಪ್ಪಿತವಾಗಿದೆಯಷ್ಟೇ ಅಲ್ಲ, ಅದಕ್ಕೆ ಮಾನ್ಯತೆಯೂ ಇದ್ದು, ಅನುಕರಣಯೋಗ್ಯ ಅನ್ನುವಂತಾಗಿದೆ. ಬಂಡವಾಳ ಹೂಡಿಕೆ ಮತ್ತು ರಾಜಕೀಯ ಲಾಭ ಗಳಿಕೆ ರಾಜಕೀಯ ವರ್ಗದ ಪ್ರಮುಖ ಧ್ಯೇಯವಾಗಿದೆ. ಇದಕ್ಕೆ ಸಾಮಾಜಿಕ ನ್ಯಾಯ, ಪರಿಸರ ಸುಸ್ಥಿರತೆ ಹಾಗೂ ಆರ್ಥಿಕ ಸಮಹಂಚಿಕೆಯ ಲವಲೇಶದ ನಿಗಾ ಕೂಡಾ ಇಲ್ಲ. ಒಂದಷ್ಟು ವರ್ಗಗಳಿಗೆ ತಾವು ಇಷ್ಟು ವರ್ಷ ಅನುಭವಿಸಿಕೊಂಡು ಬಂದ ಸವಲತ್ತುಗಳನ್ನು ಹೇಗಾದರೂ ಉಳಿಸಿಕೊಳ್ಳುವ ತುರ್ತು. ಉಳಿದವರಿಗೆ ಇದನ್ನು ಪ್ರಶ್ನಿಸಿ, ತಾವೂ ಇಂಥಾ ಸವಲತ್ತುಗಳನ್ನು ಪಡೆಯುವ ಆಸೆ.
ಜಾತಿ, ವರ್ಗ ಮತ್ತು ಧರ್ಮಗಳ ಹೊಸ ಗಡಿರೇಖೆಗಳು ಈಗ ಸ್ಫೋಟಗೊಳ್ಳುತ್ತಿವೆ. ಪ್ರಜಾಸತ್ತಾತ್ಮಕ ತಂತ್ರಜ್ಞಾನವಾಗಬಹುದಾದ ಸಾಮಾಜಿಕ ಮಾಧ್ಯಮಗಳೂ ಅನ್ಯ ಎದುರಾಳಿ ಪಕ್ಷಗಳ ಬಗ್ಗೆ, ನಾಯಕರ ಬಗ್ಗೆ, ಜನರ ಬಗ್ಗೆ ಸುಳ್ಳು ಮಾಹಿತಿ ಹಾಗೂ ದ್ವೇಷ ಹರಡುವುದಕ್ಕೆ ಬಳಕೆಯಾಗುತ್ತಿವೆ. ಸಾಮಾಜಿಕ ಸ್ತರದಲ್ಲಿ ತೀವ್ರ ಜಾತಿ ವೈಷಮ್ಯ, ಜಾತಿ ಹೆಮ್ಮೆ ಹಾಗೂ ತಮ್ಮ ಗಡಿ ಗುರುತು ಉಳಿಸಿಕೊಳ್ಳುವುದು ದೊಡ್ಡ ಪ್ರಮಾಣದಲ್ಲಿ ಮನಸ್ಸಿನ ಆಳಕ್ಕಿಳಿದಿದೆ. ಅಂತರ್ಜಾತಿ ಅಥವಾ ಅಂತರ್‌ಧರ್ಮೀಯ ವಿವಾಹಗಳು ಹಿಂಸಾತ್ಮಕ ದುರಂತದಲ್ಲಿ ಅಂತ್ಯಗೊಳ್ಳುತ್ತಿವೆ. ಇಂಥವು ಅಪರಾಧವೆಂದು ಕಾನೂನು ಪ್ರಕ್ರಿಯೆ ಮೂಲಕ ಗುರುತಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಅಮಾನುಷ ಕೃತ್ಯಗಳಿಗೆ ಮುಂದಾಗುವವರಲ್ಲಿ ಧೈರ್ಯ ತುಂಬಿದೆ.
ತಾವಿದ್ದ ಪಕ್ಷದಲ್ಲಿ ತಮ್ಮನ್ನು ಗುರುತಿಸಲು, ಇನ್ನಷ್ಟು ಎತ್ತರಕ್ಕೆ ಬೆಳೆಯಲು ಈ ಚುನಾಯಿತ ಪ್ರತಿನಿಧಿಗಳು ಹಿಂದೂ ಯಜಮಾನಿಕೆ, ಸಾಂಸ್ಕೃತಿಕ ಏಕರೂಪತೆ ಮತ್ತು ಸರ್ವಾಧಿಕಾರಿ ಛಾಯೆಯ ನಾಯಕತ್ವವನ್ನು ಅನುಮೋದಿಸಲು ಸ್ಪರ್ಧೆಗಿಳಿದಿದ್ದಾರೆ. ತಮ್ಮ ನಿಲುವಿಗೆ ವಿರುದ್ಧವಾದ ಎಲ್ಲಾ ಟೀಕೆ ಮತ್ತು ನಿಲುವುಗಳನ್ನು ರಾಷ್ಟ್ರ ವಿರೋಧಿ ಎಂಬ ಕಾನೂನಿನ ಮೂಲಕ ಹತ್ತಿಕ್ಕಲಾಗುತ್ತಿದೆ. ಯಾವುದೇ ಹೂರಣವಿಲ್ಲದೇ ಹಲವಾರು ಮಂದಿ ಮೇಲೆ ರಾಷ್ಟ್ರದ್ರೋಹದ ಮೊಕದ್ದಮೆ ಹೂಡಿರುವುದು ಕರ್ನಾಟಕದಲ್ಲಿ ಈಗ ಎಂಥಾ ದೋಷಪೂರಿತ ವ್ಯವಸ್ಥೆಯಿದೆ ಎಂಬುದರ ಸೂಚಿ.
ಈ ಆಂತರಿಕ ಮಥನ ಮತ್ತು ಬೆಳೆಯುತ್ತಿರುವ ಹಿಂಸೆಯ ಮಧ್ಯೆ ಕರ್ನಾಟಕವು ಹಿಂದುತ್ವ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿ ಸ್ಥಾಪಿತವಾಗುತ್ತಿದೆ. ಒಂದು ಕಾಲದಲ್ಲಿ ಪ್ರಗತಿಪರ ಭೂಸುಧಾರಣಾ ನೀತಿಗಳನ್ನು ಆರಂಭಿಸಿದ ರಾಜ್ಯ ಈಗ ಕೇಂದ್ರದ ಮೂರು ಹೊಸ ಕೃಷಿ ಕಾಯ್ದೆಗಳಿಗೆ ತಲೆ ಬಾಗಿದ್ದಷ್ಟೇ ಅಲ್ಲ, ಪ್ರಗತಿಪರವಾಗಿದ್ದ ಭೂಸುಧಾರಣಾ ಕಾಯ್ದೆ 1961 ಹಾಗೂ 1974ರ ತಿದ್ದುಪಡಿಯನ್ನು ಸಂಪೂರ್ಣ ನಿರರ್ಥಕಗೊಳಿಸುವ ತಿದ್ದುಪಡಿ ತಂದಿದೆ. ಈ ಹೆಜ್ಜೆ ಸಣ್ಣ, ಅತಿ ಸಣ್ಣ ರೈತರ ಮೇಲಿನ ಗದಾಪ್ರಹಾರವಾಗಿದ್ದು ಊಹಾತೀತ ಭೂ ಆರ್ಥಿಕತೆಗೆ ದಾರಿ ಮಾಡಿಕೊಡಲಿದೆ.
ರೈತರ ಹಕ್ಕಿನ ಬದಲು ಸುಗಮ ವ್ಯವಹಾರ ನೀತಿಗೆ ಮಣೆಹಾಕಿ, ನಮ್ಮ ರಾಜ್ಯವು ರೈತರ ನಾಗರಿಕ ಹಕ್ಕುಗಳನ್ನೇ ಅಳಿಸಿಹಾಕಿದೆ. ಈ ಚುನಾಯಿತ ಪ್ರತಿನಿಧಿಗಳನ್ನು ನ್ಯಾಯಯುತ ಹಕ್ಕೊತ್ತಾಯಕ್ಕೆ ಉತ್ತರದಾಯಿಗಳಾಗಿಸುವ ಮತದಾರರ ವೈಫಲ್ಯವೇ ಈ ಮಂದಿ ಉತ್ತರದಾಯಿತ್ವದಿಂದ ಜಾರಿಕೊಂಡು ಸವಲತ್ತುಹೀನ ಮಂದಿಯ ಹಿತಾಸಕ್ತಿಗಳನ್ನು ಎತ್ತಿ ಹಿಡಿಯದಿರಲು ಕಾರಣ. ಇದು ರಾಜ್ಯದ ವಿವಿಧ ಗುಂಪುಗಳ ಮಧ್ಯೆ, ದುಡಿಯುವ ವರ್ಗ ಮತ್ತು ಸರ್ಕಾರದ ಮಧ್ಯೆ ಬೆಳೆದಿರುವ ಆಳ ಬಿರುಕಗಳನ್ನು ಪ್ರತಿಫಲಿಸುತ್ತಿದೆ. ಸಂಯುಕ್ತ ರಾಜ್ಯ ವ್ಯವಸ್ಥೆ (ಫೆಡರಲ್) ರಚನೆಗೆ ಸತತವಾಗಿ ಆಗುತ್ತಿರುವ ಘಾತವು ರಾಜಕೀಯ ಇಚ್ಛಾಶಕ್ತಿಯ ಅಭಾವ ಅಥವಾ ಅವಕಾಶವಾದಿತನದ ಸೂಚನೆಯಷ್ಟೇ ಅಲ್ಲ, ಇದು ಜನರು ತಮಗಾಗಿ ಸೆಟೆದು ನಿಲ್ಲುವಲ್ಲಿ ಸೋತಿರುವುದರ ಸಂಕೇತ ಕೂಡಾ.
ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಯ ಸೂಜಿಗಲ್ಲಿಗೆ ಆಕರ್ಷಿತವಾದ ರಾಜ್ಯವೆಂಬ ಎಂಬ ಮಾತು ಹಳೆಯದಾಯಿತು. ಈಗ ಕರ್ನಾಟಕವು ಪೂರ್ಣಪ್ರಮಾಣದ ‘ಹಿಂದುತ್ವ’ ನೆಲೆಯೂರಿದ ರಾಜ್ಯ ಎನಿಸಿಕೊಳ್ಳುವತ್ತ ಹೆಜ್ಜೆ ಹಾಕುತ್ತಿದೆ. ಈ ಪ್ರಕ್ರಿಯೆಯಲ್ಲಿ ನಮ್ಮ ಪ್ರಾದೇಶಿಕ ಹೆಮ್ಮೆ ಮತ್ತು ಸ್ಥಾನವಷ್ಟೇ ನಷ್ಟವಾಗುವುದಲ್ಲ; ಪ್ರಜಾಸತ್ತಾತ್ಮಕ ಭಾರತದ ಸಾವಿಗೆ ಅನುವು ಮಾಡಿಕೊಟ್ಟ ರಾಜ್ಯದವರೆಂದೂ ನಾವು ಗುರುತಿಸಲ್ಪಡಬಹುದು. ಈ ವಾಸ್ತವವನ್ನು ಅರ್ಥ ಮಾಡಿಕೊಂಡು ಘನತೆ, ವೈವಿಧ್ಯ ಮತ್ತು ಪ್ರಜಾಸತ್ತೆ ಅರಳುವಂತೆ ಮಾಡುವ ಈ ರಾಜ್ಯದ ಪರಂಪರೆಯನ್ನು ಉಳಿಸಿಕೊಳ್ಳುತ್ತೇವೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.