ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಕಾವೇರೀನದಿಯ ದಡದಲ್ಲಿರುವ ಒಂದು ಗ್ರಾಮ ಕಪ್ಪಡಿ.ಮಂಟೇಸ್ವಾಮಿ ಶಿಷ್ಯರಾದ ರಾಚಪ್ಪಾಜಿ ಹಾಗೂ ಚನ್ನಮ್ಮಾಜಿಯ ಗದ್ದುಗೆಗಳು ಅಲ್ಲಿವೆ.ಅವರ ನೆನಪಿಗಾಗಿ ನಡೆಯುವ ಜಾತ್ರೆಯು ಈ ಬಾರಿ ಮಾರ್ಚ್ 4ರ ಶಿವರಾತ್ರಿಯ ದಿನ ಪ್ರಾರಂಭವಾಗಲಿದೆ. ಚಾಂದ್ರಮಾನ ಯುಗಾದಿಯ ದಿನ 'ಮಾದಲಿ ಸೇವೆ'ಯೊಂದಿಗೆ ಒಂದು ತಿಂಗಳ ಜಾತ್ರೆಯ ಆಚರಣೆಯ ವೈಭವಕ್ಕೆ ತೆರೆ ಬೀಳಲಿದೆ.
ಪರಂಪರೆಯಂತೆ ಮಳವಳ್ಳಿ ಮತ್ತು ಬೊಪ್ಪೆಗೌಡನಪುರದ ಅರಸು ಮನೆತನದವರು ಪ್ರತಿವರ್ಷ ಒಬ್ಬರು ಜಾತ್ರೆ ಸಮಯದಲ್ಲಿ ಪೂಜೆ ನೆರವೇರಿಸುತ್ತಾರೆ.ಜಾತ್ರೆ ಸಮಯದಲ್ಲಿ ಒಂದೊಂದು ದಿನ ಒಂದೊಂದು ಗ್ರಾಮದ ಜನರು ದೇವರಿಗೆ ಹರಕೆ ಒಪ್ಪಿಸಿ ಪೂಜೆ ಸಲ್ಲಿಸುವುದು ವಾಡಿಕೆ.
ಇಸ್ಲಾಂ ವಾಸ್ತುಶೈಲಿಯಲ್ಲಿ ರಾಜಾಪ್ಪಜಿ ಹಾಗೂ ಚೆನ್ನಾಜಮ್ಮ ಅವರ ಗದ್ದಿಗೆಗಳಿವೆ. ಗುರುಗಳು ಉರಿ ಗದ್ದುಗೆಯಲ್ಲಿ ಕುಳಿತಾಗ ಭಕ್ತರು ಇಲ್ಲಿ ಕಾಯಿಯನ್ನು ಒಡೆಯುವುದಿಲ್ಲ. ಹಣ್ಣಿನ ಚಿಪ್ಪು ಮುರಿಯುವುದಿಲ್ಲ. ಉಂಡೆಕಾಯಿಯನ್ನು ಕಾಣಿಕೆಯಾಗಿ ನೀಡುತ್ತಾರೆ.
ಧರೆಗೆ ದೊಡ್ಡವರೆಂದು ಹೆಸರಾದ ರಾಚಪ್ಪಾಜಿ ಚೆನ್ನಮ್ಮಾಜಿ, ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದವರು. ಅವರು ಮೈಸೂರು ಅರಸರಿಂದ ಪೂಜೆ ಸ್ವೀಕರಿಸಿ ಎಡತೊರೆ, ಚಂದಗಾಲು ಮಾರ್ಗವಾಗಿ ಬಂದು ದಟ್ಟ ಕಾಡಿನಿಂದ ಆವೃತವಾಗಿದ್ದ ಕಪ್ಪಡಿಯಲ್ಲಿ ನೆಲೆಸಿದರು ಎಂಬ ಪ್ರತೀತಿ ಇದೆ.
ರಾಚಪ್ಪಾಜಿ ನೀಲಗಾರರ ನೆಚ್ಚಿನ ಗುರು. ಮಂಟೇಸ್ವಾಮಿ ಬೋಪ್ಪಣಪುರದ ಪಾತಾಳಲೋಕದಲ್ಲಿ ಪವಡಿಸಿದ ನಂತರ ಅವರ ಸೂಚನೆ ಮೇರೆಗೆ ರಾಜಾಪ್ಪಜಿ, ದೊಡಮ್ಮತಾಯಿ ಹಾಗೂ ತಂಗಿ ಚನ್ನಾಜಮ್ಮ ಅವರು ಆಗಿನ ಎಡತೊರೆಯ ಕಾವೇರೀತೀರದ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ಆದರೆ, ಪತಿಯ ಜೊತೆ ನಿಲ್ಲಲ್ಲು ಒಪ್ಪದ ದೊಡಮ್ಮತಾಯಿ ತನ್ನ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳಲು ಮುತ್ತನಹಳ್ಳಿಯಲ್ಲಿ ನೆಲೆ ನಿಲ್ಲುತ್ತಾರೆ. ದೊಡ್ಡಮ್ಮತಾಯಿ ಅವರ ಬಯಕೆಯಂತೆ ಅವರನ್ನು ಅಲ್ಲಿಯೇ ಬಿಟ್ಟು ರಾಜಾಪ್ಪಜಿ ಹಾಗೂ ಚೆನ್ನಾಜಮ್ಮ ಕಪ್ಪಡಿಯಲ್ಲಿ ನೆಲೆ ನಿಂತು ಐಕ್ಯರಾಗುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.