‘ನದಿ ಮೂಲ ಋಷಿ ಮೂಲ’ ಹುಡುಕೋ ಕೆಲಸ ಮಾಡಬಾರದು ಅಂತಾರೆ.. ಹಾಗೆಯೇ ಸೃಷ್ಟಿಯ ರಹಸ್ಯಮಯ ವಿಷಯಗಳಲ್ಲಿ, ಹೆಣ್ಣಿನ ಮನಸ್ಸನ್ನೂ, ಹತಾಶೆಯಿಂದಲೋ, ತಮಾಷೆಯಿಂದಲೋ ಸೇರಿಸಿದ ಮಹನೀಯರೂ ಇದ್ದಾರೆ. ವಿಶ್ವದಲ್ಲಿ ಏನನ್ನಾದರೂ ಅರಿತುಕೊಳ್ಳಬಹುದು.. ಈ ಮಹಿಳೆಯರ ಮನಸ್ಸಲ್ಲಪ್ಪಾ.. ಅಂತ ಕೈ ಚೆಲ್ಲಿದ ಮಹಾನುಭಾವರೂ ಇದ್ದಾರೆ! ಇದೆಲ್ಲ ಚೋದ್ಯ ಎನಿಸಿದರೂ, ಇದರಲ್ಲಿ ಸತ್ಯ ಎಷ್ಟಿದೆ? ಮಾನಿನಿಯರ ಮನಸ್ಸಿನ ಬಗ್ಗೆ, ನಾನೂ ಒಬ್ಬ ಮಹಿಳೆಯಾಗಿ, ಮನೋಶಾಸ್ತ್ರಜ್ಞೆಯಾಗಿ, ಯಾಕೆ ಸ್ವಲ್ಪ ವಿಷಯಗಳನ್ನು ವಿವರಿಸಬಾರದು ಎಂದುಕೊಂಡು, ಈ ಒಂದು ಪ್ರಯತ್ನವನ್ನೂ ಮಾಡಿದ್ದೇನೆ. ಮಾನಿನಿಯರ ಮನಸ್ಸಿನೊಳಗೊಂದು ಇಣುಕುನೋಟ ಹೀಗಿದೆ ನೋಡಿ.
ನಮ್ಮೀ ಸಮಾಜ ಮಹಿಳೆಯರ ಬಗ್ಗೆ ಸ್ವಲ್ಪ ಜಾಸ್ತಿಯೇ ನಿರೀಕ್ಷೆ ಇಟ್ಟುಕೊಂಡಿದೆ ಅಂದರೆ ತಪ್ಪಾಗಲಾರದು. ಸಶಕ್ತ ಮಹಿಳೆಯೊಬ್ಬಳು ಗಂಡಸಿಗೆ ಸರಿಸಮನಾಗಿ ಯೋಚಿಸಬೇಕು, ವಿನಮ್ರತೆ–ವಿಧೇಯತೆಯಿಂದ ನಡೆದುಕೊಳ್ಳಬೇಕು, ಕಿಶೋರಿಯ ಹಾಗೆ ಸದಾ ನಲಿಯುತ್ತಿರಬೇಕು ಹಾಗೇ ಕತ್ತೆ ಹಾಗೆ ಮೈ ಬಗ್ಗಿಸಿ ದುಡಿಯುತ್ತಿರಲೂ ಬೇಕು! ಇಷ್ಟೆಲ್ಲಾ ಬೆಟ್ಟದಂಥಾ ನಿರೀಕ್ಷೆಗಳಡಿಯಲ್ಲಿ ಅವಳ ಸುಕೋಮಲ ಮನ ಅರಳುವುದಾದರೂ ಎಂತು? ಮಾನಸಿಕ ಆರೋಗ್ಯವನ್ನು ತುಲನೆ ಮಾಡಿಕೊಂಡಾಗ, ಅದರಲ್ಲೂ ಲಿಂಗ ಬೇಧಗಳಿರುವುದು ಸಂಶೋಧನೆಗಳಿಂದ ಕಂಡು ಬಂದಿದೆ.
ಮಹಿಳೆಯರಲ್ಲಿ ಅಧಿಕ ಪ್ರಮಾಣದಲ್ಲಿ ಕಂಡು ಬರುವ ಕೆಲವು ಮಾನಸಿಕ ಕಾಯಿಲೆಗಳು ಇವೆ. ಇದರಲ್ಲಿ ಮುಖ್ಯವಾಗಿ ಖಿನ್ನತೆ (ಶೇ 12, ಗಂಡಸರಿಗಿಂತ ಎರಡು ಪಟ್ಟು ಜಾಸ್ತಿ), ಆತಂಕ ಮನೋಬೇನೆ (ಗಾಬರಿ ಕಾಯಿಲೆ, ಭಯ ಇತ್ಯಾದಿ), ಆಘಾತದ ನಂತರದ ಆತಂಕ ಒತ್ತಡದ ಮನೋಬೇನೆ (ಶೇ 82 ಲೈಂಗಿಕ ದೌರ್ಜನ್ಯಕ್ಕೆ ಮಹಿಳೆಯರು ಬಲಿಯಾಗುತ್ತಿದ್ದಾರೆ), ಆತ್ಮಹತ್ಯಾ ಪ್ರಯತ್ನಗಳು (ಎರಡು ಮೂರು ಪಟ್ಟು ಜಾಸ್ತಿ), ತಿನ್ನುವ ಅಭ್ಯಾಸದ ಕಾಯಿಲೆಗಳು ಇತ್ಯಾದಿ, ಹೆಣ್ಣು ಕುಲವನ್ನು ಜಾಸ್ತಿಯಾಗಿ ಬಾಧಿಸುತ್ತವೆ. ಇದಲ್ಲದೆ, ಹಲವಾರು ಮಾನಸಿಕ ಕಾಯಿಲೆಗಳ ಸ್ವರೂಪ ಮಹಿಳೆಯರಲ್ಲಿ ವಿಭಿನ್ನವಾಗಿ ತೋರಬಹುದಾದ ಸಂಭವವೂ ಇದೆ. ಮಹಿಳೆಯರು ಚಿಕಿತ್ಸೆಯನ್ನು ಅರಸುವ ಹಾಗೂ ಅವರಿಗೆ ಚಿಕಿತ್ಸೆ ಲಭ್ಯವಾಗುವುದರಲ್ಲೂ ಸಾಕಷ್ಟು ವ್ಯತ್ಯಯಗಳು ಕಂಡು ಬಂದಿವೆ.
ಈ ಬೇಧಕ್ಕೆ ಕಾರಣವೇನು? ಮನೋರೋಗಗಳಲ್ಲಿನ ಲಿಂಗ ಬೇಧಗಳಿಗಿರುವ ಕಾರಣಗಳನ್ನು ಹೀಗೆ ವಿಭಜಿಸಬಹುದು.
1) ಜೈವಿಕ ಪ್ರಭಾವಗಳು: ಹೆಣ್ಣು ದೇಹದಲ್ಲಿನ ಹಾರ್ಮೋನ್ ಆದ ಈಸ್ಟ್ರೋಜನ್‍ನ ಪ್ರಭಾವ, ಸೆರೋಟೋನಿನ್ ಎಂಬ ನರರಸಾಯನಿಕದ ಕ್ಷೀಣಿಸಿದ ನಿರ್ವಹಣೆ ಹಾಗೂ ಹೆಣ್ಣು ಸಹಜವಾಗೇ ನಿರ್ವಹಿಸಬೇಕಾಗಿ ಬರುವ ದೈಹಿಕ ಬದಲಾವಣೆಗಳು.. ಋತುಮತಿಯಾದಾಗ, ಗರ್ಭಿಣಿ
ಯಾದಾಗ, ಬಾಣಂತಿಯಾದಾಗ, ಋತುಬಂಧವಾದಾಗ.. ಇತ್ಯಾದಿ. ಇವೆಲ್ಲವೂ ಅವಳ ಮಾನಸಿಕ ಆರೋಗ್ಯದ ಮೇಲೆ ವಿಶಿಷ್ಟ ಪ್ರಭಾವ ಬೀರುತ್ತಲೇ ಬರುತ್ತದೆ.
2) ಸಾಮಾಜಿಕ -ಸಾಂಸ್ಕೃತಿಕ ಪ್ರಭಾವ: ಸಮಾಜದಲ್ಲಿನ ಆರ್ಥಿಕ ಅಸಮಾನತೆ, ಹೆಣ್ಣಿನ ಪರವಾಲಂಬಿ ಪರಿಸ್ಥಿತಿ, ಸಮಾಜದಲ್ಲಿನ ಹಿರಿಯರನ್ನು, ಮಕ್ಕಳನ್ನು ನೋಡಿಕೊಳ್ಳಬೇಕಾಗಿ ಬರುವ ನಿರೀಕ್ಷೆಯ ಭಾರ, ಮನೆಯ ಹೊರಗೂ– ಒಳಗೂ ದುಡಿಯಬೇಕಾಗಿ ಬರುವ ಅನಿವಾರ್ಯತೆ, ಸಮಾಜದಲ್ಲಿನ ಪುರುಷ ಪ್ರಧಾನ ಧೋರಣೆ ಎಲ್ಲಾ ರೀತಿಯ ದೌರ್ಜನ್ಯಕ್ಕೆ ಒಳಗಾಗುವ ಸಾಧ್ಯತೆ... ಇವೆಲ್ಲವೂ ಎಲ್ಲಾ ಸ್ಥರಗಳಲ್ಲಿರುವ ಮಹಿಳೆಯರನ್ನು ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತಲೇ ಬರುತ್ತದೆ.
3) ಸ್ವಭಾವದ ಪ್ರಭಾವ: ಮಹಿಳೆಯರದೇ ಮುಚ್ಚಿಟ್ಟುಕೊಳ್ಳುವ ಸ್ವಭಾವ, ತನ್ನತನವನ್ನು ನಿರ್ಲಕ್ಷಿಸಿ ಬೇರೆಯವರಿಗೆ ತೇಯ್ಯುವ ಮನೋಭಾವ, ತನ್ನಿಂದ ಬೇರೆಯವರಿಗೆ ತೊಂದರೆಯಾದೀತು ಎಂಬ ಸಂಕೋಚ, ತಪ್ಪಿತಸ್ಥ ಮನೋಭಾವ, ಜೊತೆಗೆ ಪುರುಷ ಪ್ರಧಾನ ಸಮಾಜದಲ್ಲಿ ಪುರುಷರಿಗೆ ತಾವೇ ಮಣೆ ಹಾಕಿ, ಅವರಿಗೆ ವಿಧೇಯರಾಗಿದ್ದು, ಎಲ್ಲರನ್ನೂ ಮೆಚ್ಚಿಸಲು ಅನುವಾಗುವಸ್ವಭಾವ... ಇವೆಲ್ಲವೂ ಅವರಲ್ಲಿನ ರೋಗ ಪತ್ತೆಗೆ,ಚಿಕಿತ್ಸೆಗೆ ಅಡ್ಡಿಯಾಗಿ ಪರಿಣಮಿಸುತ್ತದೆ.
ಈ ಎಲ್ಲಾ ವಿಷಯಗಳನ್ನು ಗಂಡಸರು, ಹೆಂಗಸರು ಎಂಬ ಬೇಧವಿಲ್ಲದೆ ಎಲ್ಲರೂ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಸೃಷ್ಟಿಗಿರುವ ವಿಶಿಷ್ಟ ಶಕ್ತಿ ಸ್ತ್ರೀಯಾದವಳಿಗೆ ಇದೆ. ಜೀವ ಹೆರುವ, ಹೊರುವ, ಪೋಷಿಸುವ, ತಿದ್ದುವ, ಪ್ರಭಾವಿಸುವ ಶಕ್ತಿ ಮಹಿಳೆಯರಿಗಲ್ಲದೆ ಯಾರಿಗೆ ಇರಲು ಸಾಧ್ಯ? ಈ ಶಕ್ತಿಯನ್ನು ಅರಿತು, ಅದನ್ನು ಸಲಹಲು ಬೇಕಾದ ಮನೋಬಲವನ್ನು ಇನ್ನಷ್ಟು ಸಬಲೀಕರಣಗೊಳಿಸುವಲ್ಲಿ, ಹೆಣ್ಣು–ಗಂಡು ಎಂಬ ಬೇಧವಿಲ್ಲದೆ, ಎಲ್ಲರೂ ಪರಿಶ್ರಮಿಸಿದಾಗಲೇ, ಈ ಲಿಂಗಬೇಧದ ಭಾರ, ಮನೋ ಆರೋಗ್ಯದ ಮೇಲೆ ಕಡಿಮೆಯಾಗಲು ಸಾಧ್ಯವಾಗುವುದಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.