ADVERTISEMENT

ಹಳ್ಳಿಯ ಹಾರುವ ಕನಸಿಗೆ ರೆಕ್ಕೆ ಕಟ್ಟಿ | ಪ್ರತೀ ಜಿಲ್ಲೆಗೂ ವಿಮಾನಯಾನದ ಆಸೆ

ಅಭಿಲಾಷ್ ಪಿ.ಎಸ್‌.
Published 10 ಜುಲೈ 2022, 3:01 IST
Last Updated 10 ಜುಲೈ 2022, 3:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಜ್ಯದ ಪ್ರತಿಯೊಂದು ಜಿಲ್ಲೆಯೂ ಈಗ ವಿಮಾನಯಾನದ ಕನಸನ್ನು ಕಾಣುತ್ತಿದೆ. ಹಳ್ಳಿಗೂ ದಿಲ್ಲಿಯ ಸಂಪರ್ಕ ಸಾಧ್ಯವಾಗಿ ಆರ್ಥಿಕಾಭಿವೃದ್ಧಿಗೆ ದಾರಿಯಾಗಬಹುದೇ ಎಂಬ ಬಯಕೆ ಆ ಕನಸಿನಲ್ಲಿ ಮೊಟ್ಟಿಯಿಟ್ಟಿದೆ. ಅಂತೂ ರಾಜ್ಯದ ಆಕಾಶವನ್ನು ಬ್ಯುಸಿಯಾಗಿಡಲು ಹಲವೆಡೆ ಈಗ ವಿಮಾನ ನಿಲ್ದಾಣಗಳಂತೂ ನಿರ್ಮಾಣವಾಗುತ್ತಿವೆ. ಹಾಗೆಯೇ ಅಲ್ಲಿನ ಕನ್ನಡದ ಬಳಕೆಯ ಹಲವು ಕುತೂಹಲದ ಪ್ರಶ್ನೆಗಳನ್ನು ಎತ್ತಿದೆ. ಹೌದು, ಏನಿದೆಲ್ಲದರ ಮಜಕೂರು?

‘ಸೂ ರಾರೈ ಪೋಟ್ರು’ – ಅದೊಂದು ಅದ್ಭುತ ದೃಶ್ಯಕಾವ್ಯ. ಡೆಕ್ಕನ್ ಏರ್‌ಲೈನ್ಸ್‌ನ ಕನಸನ್ನು ನನಸಾಗಿಸಿದ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಕಥೆಯನ್ನು ಆಧರಿಸಿದ ತಮಿಳು ಸಿನಿಮಾ ಇದು. ಈ ಬರಹ ಓದುತ್ತಿರುವ ಹಲವರು ಆ ಸಿನಿಮಾ ನೋಡಿರಬಹುದು. ಚಿತ್ರದ ಅಂತ್ಯದಲ್ಲಿ ಅಜ್ಜಿಯೊಬ್ಬಳು ವಿಮಾನದಿಂದ ಇಳಿಯುವಾಗ ಆಕಾಶವನ್ನೊಮ್ಮೆ ದಿಟ್ಟಿಸಿ ನೋಡುತ್ತಾಳೆ. ನೆರಿಗೆ ಕಟ್ಟಿದ ಆ ಮುಖದಲ್ಲಿ ಮುಗುಳ್ನಗು, ಕಣ್ಣಂಚಲ್ಲಿ ನೀರು... ಮೊದಲ ಬಾರಿ ಹಕ್ಕಿಯಂತೆ ಬಾನಲ್ಲಿ ಹಾರಾಡಿ ಆಕೆ ಅನುಭವಿಸಿದ ಆ ಅನುಭವದ ಸಾರ ಅವಳಿಗಷ್ಟೇ ಗೊತ್ತು. ಕೈಯಲ್ಲೇ ಆಕಾಶ ಹೊತ್ತು ತಂದ ಖುಷಿ ಅವಳದ್ದು.

ಆ ಅಜ್ಜಿ ಕಥೆ ಬಿಡಿ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ನಮ್ಮ ತುಳಸಿ ಗೌಡ ಅವರು ಸಂದರ್ಶನವೊಂದರಲ್ಲಿ ವಿಮಾನ ಪ್ರಯಾಣದ ಅನುಭವನ್ನು ಹೀಗೆ ಬಿಚ್ಚಿಟ್ಟಿದ್ರು...‘ನಂಗೆ ಹೆದ್ರಿಕಿ ಆಗ್ಲಿಲ್ಲ. ದಿಲ್ಲಿಗೆ ಹೋಗುವಾಗ ವಿಮಾನ ಹತ್ತಿದ್ದು. ಬಾಳ ಚೊಲೊ ಅನ್ನಿಸ್ತು. ಮತ್ತೆ ಬೊಂಬಾಯಿಗೂ ವಿಮಾನ್‌‌ದಲ್ಲಿ ಹೋಗ್‌ ಬಂದೆ’. ಅವರ ಮುಖದಲ್ಲೂ ಅಂಥ ನಗುವೊಂದಿತ್ತು. ಪ್ರಶಸ್ತಿ ಜೊತೆಗೆ ಆಕಾಶ ಹೊತ್ತು ತಂದ ಖುಷಿಯಿತ್ತು.

ಹೀಗೆ ಬಾನಲ್ಲಿ ಹಾರಾಡುವ ಕನಸು ಯಾರಿಗಿಲ್ಲ ಹೇಳಿ. ಆಗಷ್ಟೇ ಚಂದಿರನನ್ನು ನೋಡುತ್ತಾ ತುತ್ತು ಉಣ್ಣುವ ಪುಟಾಣಿಯೂ ಆಕಾಶದೆತ್ತರದಲ್ಲಿ ಹಾರಾಡುವ ಉಕ್ಕಿನಹಕ್ಕಿಯನ್ನು ನೋಡಿ ಕೈಚಾಚಿ ಹಿಡಿಯಲು ಪ್ರಯತ್ನಿಸುತ್ತದೆ. ಸ್ವಚ್ಛಂದವಾಗಿ ಹಾರಾಡುವ ಈ ಹಕ್ಕಿಗಳು, ಹಲವರಲ್ಲಿ ಕನಸಿನ ರೆಕ್ಕೆಪುಕ್ಕ ಕಟ್ಟುತ್ತವೆ. ಸಮಯ ಉರುಳಿದಂತೆ, ತಂತ್ರಜ್ಞಾನ ಹಿಗ್ಗಿದಂತೆ ಯಾವ ಪ್ರದೇಶವೂ ಯಾರಿಗೂ ದೂರವಿಲ್ಲ. ಹಳ್ಳಿಯ ಜನರೂ ದಿಲ್ಲಿ ತಲುಪುವ ಸಮಯ ಬಂದಾಗಿದೆ. ಜಿಲ್ಲೆಗೊಂದರಂತೆ ವಿಮಾನ ನಿಲ್ದಾಣ ನಿರ್ಮಾಣವಾಗುವ ಸಮಯ ದೂರವೇನಿಲ್ಲ! ಈ ಕನಸಿಗೆ ರಾಜ್ಯದಲ್ಲೀಗ ವೇದಿಕೆ ಸಿದ್ಧವಾಗುತ್ತದೆ. ಸದ್ಯ, ನೀಲಾಕಾಶದಲ್ಲಿ ತೇಲಾಡುವ ಕನಸು ಕಾಣುವ ಹಕ್ಕು ವೈಟ್‌ಕಾಲರ್‌ನವರಿಗಷ್ಟೇ ಸೀಮಿತವಾಗಿಲ್ಲ.

ADVERTISEMENT

ರಾಜ್ಯದಲ್ಲಿ ಪ್ರಸ್ತುತ ಏಳು ವಿಮಾನ ನಿಲ್ದಾಣಗಳಿವೆ. ಇವುಗಳ ಜೊತೆಗೆ ಭವಿಷ್ಯದಲ್ಲಿ ಶಿವಮೊಗ್ಗ, ಹಾಸನ, ವಿಜಯಪುರ, ರಾಯಚೂರು, ದಾವಣಗೆರೆ, ಕೊಪ್ಪಳ, ಬಳ್ಳಾರಿ ಹಾಗೂ ಕಾರವಾರದ ನೆಲದಲ್ಲೂ ಲೋಹದ ಹಕ್ಕಿಗಳು ಕಾಣಿಸಿಕೊಳ್ಳಲಿವೆ. ಇವುಗಳ ಜೊತೆಗೆ ಕುಶಾಲನಗರ, ಚಿಕ್ಕಮಗಳೂರು ಹಾಗೂ ಹಂಪಿಯಲ್ಲಿ ಹೆಲಿಪೋರ್ಟ್‌ಗಳು ಕಾರ್ಯಾರಂಭಿಸಲಿವೆ. ಇವೆಲ್ಲ ಸೇರಿದರೆ ಭವಿಷ್ಯದಲ್ಲಿ ರಾಜ್ಯದ ಅರ್ಧದಷ್ಟು ಜಿಲ್ಲೆಗಳ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸದೃಢಗೊಳ್ಳಲಿದೆ. ಸದ್ಯ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇಶದ 76 ಪ್ರದೇಶಗಳಿಗೆ ನೇರ ವಿಮಾನ ಸಂಪರ್ಕವಿದೆ. 2021ರಲ್ಲಿ ಈ ಸಂಖ್ಯೆ 54 ಆಗಿತ್ತು. ಈ ನಿಲ್ದಾಣದಿಂದ ಇಲ್ಲಿಯವರೆಗೂ 25 ಕೋಟಿ ಜನರು ಲೋಹದ ಹಕ್ಕಿಯೇರಿದ್ದಾರೆ. ದೇಶದ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ತ್ವರಿತವಾಗಿ ವಿಮಾನ ನಿಲ್ದಾಣಗಳು ನಿರ್ಮಾಣವಾಗುತ್ತಿರುವುದು, ವಾಯುಯಾನಕ್ಕೆ ಜನರು ಮತ್ತಷ್ಟು ಆಕರ್ಷಿತರಾಗಲು ಕಾರಣ. ವಿಮಾನ ನಿಲ್ದಾಣಗಳು ಜನರ ಓಡಾಟಕ್ಕಷ್ಟೇ ಸೀಮಿತವಾಗಿಲ್ಲ. ಅವುಗಳ ಅಸ್ತಿತ್ವದ ಪರಿಣಾಮ ಹಲವು. ಸಣ್ಣದೊಂದು ಉದಾಹರಣೆ ನೋಡಿ.

‘Love is in the air...’ ಅಂತಾರೆ. ಇದು ನಿಜ! ಯಾಕೆ ಅಂತೀರಾ? ಇಲ್ಲಿ ಕೇಳಿ. 5.15 ಲಕ್ಷ ಕೆ.ಜಿ.– ಇದು ಕಳೆದ ಫೆಬ್ರುವರಿಯಲ್ಲಿ ಪ್ರೇಮಿಗಳ ದಿನಕ್ಕಾಗಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಾನೆತ್ತರಕ್ಕೆ ಹಾರಿ ಗರ್ಲ್‌ಫ್ರೆಂಡ್ಸ್‌, ಹಾಲಿ–ಭಾವಿ ಪತ್ನಿಯರ ಮುಡಿಗೇರಿದ ಗುಲಾಬಿಗಳ ತೂಕ. ‘ಹೆಂಡ್ತಿ’ ತಲೆ ಮೇಲೆ ತೂಕ ಹೆಚ್ಚಾಯ್ತೆ?! ಸಂಖ್ಯೆಯಲ್ಲಿ ಹೇಳ್ತೀನಿ ಕೇಳಿ. ಬೆಂಗಳೂರಿನ ನೆಲದಿಂದ ದೇಶದ ವಿವಿಧ ರಾಜ್ಯಗಳಿಗೆ ಹಾರಿದ್ದು 65 ಲಕ್ಷ ಗುಲಾಬಿಗಳು. ವೀಸಾ ಇಲ್ಲದೇ ವಿದೇಶಕ್ಕೆ ಟ್ರಿಪ್‌ ಮಾಡಿದ್ದು 73 ಲಕ್ಷ ಗುಲಾಬಿಗಳು. ಒಂದೊಂದು ಗುಲಾಬಿಯೂ ಮಾರಾಟವಾಗಿದ್ದು ₹35ರಿಂದ ₹40ಕ್ಕೆ! ವಿಶ್ವದೆಲ್ಲೆಡೆ ಹೃದಯದ ಬಂಧನಕ್ಕೆ ಬೆಂಗಳೂರು ಸುತ್ತಮುತ್ತಲಿನ ಮೂರ್ನಾಲ್ಕು ಜಿಲ್ಲೆಗಳ ರೈತರ ಗಟ್ಟಿಮೇಳ. ಆದರೆ ರೈತರ ಶ್ರಮಕ್ಕೆ ಸಿಕ್ಕ ಮೊತ್ತವೆಷ್ಟು ಎನ್ನುವುದು ಅಷ್ಟೇ ನಿಗೂಢ!

ದೇಶದಲ್ಲಿ ಅತಿ ಹೆಚ್ಚು ಗುಲಾಬಿ ರಫ್ತಾಗುತ್ತಿರುವ ನಗರ ಬೆಂಗಳೂರು.

ದೇವನಹಳ್ಳಿಯ ವಿಮಾನ ನಿಲ್ದಾಣ ಇದಕ್ಕೆ ವೇದಿಕೆ. ವರ್ಷದಿಂದ ವರ್ಷಕ್ಕೆ ಇಲ್ಲಿಂದ ರಫ್ತಾಗುತ್ತಿರುವ ಗುಲಾಬಿಗಳ ಪ್ರಮಾಣ ಹೆಚ್ಚಾಗುತ್ತಿದೆ. ಬೆಂಗಳೂರಿನಿಂದ ಲಂಡನ್‌ಗೂ ನೇರವಾಗಿ ಲಗ್ಗೆ ಇಡುವ ಸಾಮರ್ಥ್ಯ ಚಿಕ್ಕಬಳ್ಳಾಪುರದ ಗುಲಾಬಿಗಳಿಗಿದೆ! ಮುಂದೆ ಕೊಪ್ಪಳದ ಭಾಗ್ಯನಗರ ಸೀರೆ, ಪಿಂಕ್‌ ಗ್ರಾನೈಟ್‌, ದಾವಣಗೆರೆಯ ಜವಳಿ, ಶಿವಮೊಗ್ಗದ ಅಡಿಕೆ–ಕಾಳುಮೆಣಸು ವಿಮಾನವೇರಿ ವಿದೇಶ ಸೇರುವ ದಿನಗಳೇನೂ ದೂರವಿಲ್ಲ.

‘ಕೊಪ್ಪಳದಲ್ಲಿ ದೇಶದ ಮೊದಲ ಆಟಿಕೆಗಳ ಉತ್ಪಾದನಾ ಕ್ಲಸ್ಟರ್‌ನಿರ್ಮಾಣವಾಗಲಿದೆ. ಇದರ ರಫ್ತಿಗೆ ವಿಮಾನ ನಿಲ್ದಾಣ ಪೂರಕ. ಮಧ್ಯ ಕರ್ನಾಟಕದಲ್ಲಿ ಹಲವು ವರ್ಷಗಳ ಹಿಂದೆಯೇ ವಿಮಾನ ನಿಲ್ದಾಣ ಆರಂಭವಾಗಿದ್ದರೆ ಈ ಭಾಗದ ದಿಕ್ಕೇ ಬದಲಾಗುತ್ತಿತ್ತು. ರಾಜ್ಯದ ಎಲ್ಲೆಡೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೇವೆ’ ಎನ್ನುತ್ತಾರೆ ಮೂಲಸೌಕರ್ಯ ಅಭಿವೃದ್ದಿ ಸಚಿವ ವಿ.ಸೋಮಣ್ಣ.

ಕೃಷಿ ಉತ್ಪನ್ನಗಳ ರಫ್ತು, ಉದ್ಯೋಗ ಸೃಷ್ಟಿ, ಶಿಕ್ಷಣ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಮಾನ ನಿಲ್ದಾಣಗಳು ಸಹಕಾರಿ. ಕಾರವಾರದಲ್ಲಿ ನಿರ್ಮಾಣವಾಗಲಿರುವ ವಿಮಾನ ನಿಲ್ದಾಣ, ದೇಶದ ರಕ್ಷಣೆಯ ಜೊತೆಗೆ ಜನರ ವಾಯುಯಾನಕ್ಕೂ ಪೂರಕ. ವಿದೇಶಿ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವ ಪ್ರವಾಸಿ ತಾಣ ಹಂಪಿ. ಇಲ್ಲಿಗೆ ಪ್ರತಿವರ್ಷ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆಯೇ 80 ಸಾವಿರದಷ್ಟಿದೆ. ಇಲ್ಲಿ, ಶೀಘ್ರದಲ್ಲೇ ಹೆಲಿಪೋರ್ಟ್‌ನಿಂದ ಇಳಿದ ವಿದೇಶಿ ಪ್ರವಾಸಿಗರು ‘ಹೆಲೋ ಹಂಪಿ’ ಎನ್ನಲಿದ್ದಾರೆ. ಬಾದಾಮಿ, ಪಟ್ಟದಕಲ್ಲು ತಲುಪಲು ಮೂರ್ನಾಲ್ಕು ವಿಮಾನ ನಿಲ್ದಾಣಗಳೂ ಆಯ್ಕೆಗೆ ಸಿಗಲಿವೆ! ಚಿಕ್ಕಮಗಳೂರಿನ ಕಾಫಿ ಘಮವನ್ನು ಮತ್ತಷ್ಟು ಜನರು ಆಘ್ರಾಣಿಸಲಿದ್ದಾರೆ.

‘ರಾಜ್ಯದ ಅರ್ಧದಷ್ಟು ಜಿಲ್ಲೆಗಳಿಗೆ ವಾಯುಯಾನದ ಸಂಪರ್ಕ ದೊರೆಯಲಿದೆ. ದೇಶದ ಬೇರೆ ಯಾವ ರಾಜ್ಯಗಳಲ್ಲೂ ಈ ರೀತಿಯ ಸಂಪರ್ಕವಿಲ್ಲ’ ಎನ್ನುವುದುಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ(ಕೆಎಸ್‌ಐಐಡಿಸಿ) ಅಧ್ಯಕ್ಷ ಶೈಲೇಂದ್ರ ಕೆ.ಬೆಲ್ದಾಳೆ ಮಾತು. ‌‘ಭವಿಷ್ಯದಲ್ಲಿ ಓಡಾಟಕ್ಕೆ ವಾಯುಯಾನವೇ ಮೊದಲ ಆದ್ಯತೆ ಪಡೆಯಲಿದೆ. ಇದಕ್ಕಾಗಿ ನಾವು ಮೂಲಸೌಕರ್ಯಗಳನ್ನು ಸಿದ್ಧಪಡಿಸಿಡಬೇಕಲ್ಲವೇ? ಆ ಪ್ರಯತ್ನಗಳು ಈಗ ನಡೆದಿವೆ. ಬೇಡಿಕೆ ಇದ್ದಲ್ಲಿ ಏರ್‌ಲೈನ್‌ ಕಂಪನಿಗಳು ಖಂಡಿತಾ ಬರಲಿವೆ. ಕೈಗಾರಿಕೆಗಳೂ ಇಂಥ ಪ್ರದೇಶಗಳಲ್ಲಿ ಅಭಿವೃದ್ಧಿಯಾಗಲಿವೆ’ ಎನ್ನುತ್ತಾರೆ ಕೆಎಸ್‌ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್‌.ರವಿ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಪ್ರಕಾರ, ಕರ್ನಾಟಕದಲ್ಲಿ, ಲಘು ವಿಮಾನಗಳು ಇಳಿಯುವ ಸಾಮರ್ಥ್ಯ ಹೊಂದಿರುವ ಹತ್ತಕ್ಕೂ ಅಧಿಕ ಬಳಕೆಯಾಗದ ಏರ್‌ಸ್ಟ್ರಿಪ್‌ಗಳಿವೆ. ಹಲವು ನಿಷ್ಪ್ರಯೋಜಕ ಸ್ಥಿತಿ ತಲುಪಿವೆ. ಇವುಗಳಿಗೆಲ್ಲ ಕಾಯಕಲ್ಪ ಸಿಕ್ಕರೆ ಕರ್ನಾಟಕದ ವಾಯುಯಾನದಲ್ಲಿ ಹೊಸ ಅಧ್ಯಾಯವೇ ಸೃಷ್ಟಿಯಾಗಲಿದೆ. ಆದರೆ, ಸದ್ಯಕ್ಕೆ ಇದು ‘ಗಗನಕುಸುಮ’. ಹೊಸದಾಗಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಏರ್‌ಲೈನ್ಸ್‌ಗಳು ಹಿಂದೇಟು ಹಾಕುತ್ತಿವೆ. ಉಡಾನ್‌ ಯೋಜನೆಯಡಿ ಸರ್ಕಾರ ಹಲವು ಹೊಸ ವಿಮಾನ ನಿಲ್ದಾಣಗಳಿಗೆ ಪ್ರಾದೇಶಿಕ ಸಂಪರ್ಕ ಯೋಜನೆಯಡಿ (ಆರ್‌ಸಿಎಸ್‌) ಬಿಡ್ಡಿಂಗ್‌ ಕರೆದಿದ್ದರೂ, ಯಾವುದೇ ಏರ್‌ಲೈನ್ಸ್‌ಗಳು ಈ ನಿಲ್ದಾಣಗಳನ್ನು ಆಯ್ದುಕೊಂಡಿಲ್ಲ. ಆರ್‌ಸಿಎಸ್‌ನಡಿ ಸರ್ಕಾರ ಎಷ್ಟೇ ಪ್ರೋತ್ಸಾಹ ನೀಡಿದರೂ ಏರ್‌ಲೈನ್ಸ್‌ಗಳು ಕೊನೆಯಲ್ಲಿ ಲಾಭ ನಷ್ಟದ ಲೆಕ್ಕಾಚಾರದಲ್ಲೇ ತೊಡಗಿರುವುದು ಇದಕ್ಕೆ ಕಾರಣ. ಮುಂದೆ ಈ ನಿಲ್ದಾಣಗಳಿಗೆ ಬೇಡಿಕೆ ಬರಬಹುದು, ಲೋಹದ ಹಕ್ಕಿಗಳೂ ಇಳಿಯಬಹುದು. ಕೆಲ ವರ್ಷದ ಹಿಂದಿನ ಸ್ಥಿತಿಗೆ ಹೋಲಿಸಿದರೆ ಸದ್ಯದ ಪರಿಸ್ಥಿತಿಯಲ್ಲಿ ಅಂಬರದಲ್ಲಿ ಹಾರುವ ಕನಸಿಗೆಸುಲಭವಾಗಿ ರೆಕ್ಕೆ ಮೂಡದು ಎಂಬಂತಾಗಿದೆ. ವೈಟ್‌ಪೆಟ್ರೋಲ್‌ ದರ ‘ಗಗನ’ಕ್ಕೇರಿರುವುದು ಟಿಕೆಟ್‌ ದರವೂ ವೈಟ್‌ಕಾಲರ್‌ನವರಿಗಷ್ಟೇ ಭರಿಸಲು ಸಾಧ್ಯವೆಂಬಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.