ಕನ್ನಡ, ಮರಾಠಿ ಭಾಷೆಗಳಾಚೆಗೊಂದು ಬದುಕಿದೆ. ಆ ಬದುಕು ಹಾಗೆ ಅರಳುತ್ತಲೇ ಸಾಗಿದೆ. ಪರಸ್ಪರ ತೊಡಕುಗಳಿಲ್ಲದೆ. ಇದಕ್ಕೆ ಎರಡೂ ಭಾಷಿಕರಲ್ಲಿರುವ ಗಟ್ಟಿ ಪರಂಪರೆಯೇ ಕಾರಣವಾಗಿದ್ದು, ಇಲ್ಲಿ ಅನಾವರಣಗೊಂಡಿದೆ.
ಬೆಳಗಾವಿ ಗಡಿ ತಂಟೆ ಎಂಬುದು ಬಿದ್ದು ಹೋದ, ರಾಜಕೀಯ ನೆಲೆಯಲ್ಲಿ ನಿದ್ದೆಗೆ ಜಾರಿದ್ದು ಅದು ಆಗಾಗ ಎದ್ದು ಕೂತು ಬಿಡುತ್ತದೆ. ಮತ್ತೆ ಮಲಗುತ್ತದೆ. ಭಾಷಾವಾರು ಪ್ರಾಂತಗಳು ರಚನೆಯಾಗಿ ಎಪ್ಪತ್ತು ವರ್ಷಗಳಾದವು. ಈ ಅವಧಿಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನದಿಗಳಲ್ಲಿ ಸಾಕಷ್ಟು ನೀರು ಹರಿದಿದೆ. ಕೆಲ ಭೂಭಾಗ ನಮಗೆ ದಕ್ಕಬೇಕಾದದ್ದು ದಕ್ಕಲಿಲ್ಲ. ಅವರಿಚ್ಛೆಯಂತೆ ಅವರಿಗೂ ಹಾಗೆಯೇ ಆದದ್ದು. ಮುಖ್ಯವಾಗಿ ಉತ್ತರದಲ್ಲಿ ಸೊಲ್ಲಾಪುರ, ಅಕ್ಕಲಕೋಟ, ಜತ್ತ ಪ್ರದೇಶ. ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ ಪರಿಸರ. ದಕ್ಷಿಣದಲ್ಲಿ ಕಾಸರಗೋಡು, ಹೊಸೂರು, ಕೃಷ್ಣಗಿರಿ-ಇವು ಕನ್ನಡ ನೆಲಕ್ಕೆ ಸೇರಬೇಕಾದ ಪ್ರದೇಶಗಳು. ಇತ್ತ ಮರಾಠಿ ಭಾಷಿಕರ ಹೋರಾಟದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬಯಸುವಂತೆ ‘ಬೀದರ್, ಭಾಲ್ಕಿ, ನಿಪ್ಪಾಣಿ, ಬೆಳಗಾವಿ, ಕಾರವಾರದವರೆಗೆ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು’ ಎನ್ನುವುದು. ಈ ಘೋಷಣೆಯನ್ನು ಕೂಗುತ್ತ ಬಂದಿದ್ದು ಅದೀಗ ಕ್ಷೀಣಗೊಂಡಿದೆ. ತಾರ್ಕಿಕವಾಗಿಯೂ ಸತ್ವಹೀನವಾಗಿದೆ. ಅದು ತನ್ನ ಹುರಿಯನ್ನು ಸಡಿಲುಗೊಳಿಸಿದೆ.
ನವೆಂಬರ್ ಒಂದರ ಕರ್ನಾಟಕ ರಾಜ್ಯೋತ್ಸವದಲ್ಲಿ ಎಲ್ಲ ಭಾಷಿಕರು, ಸಕಲ ಜಾತಿ, ಧರ್ಮ, ಕುಲಾದಿಗಳ ಲಕ್ಷ ಲಕ್ಷ ಸಮೂಹವು ಕನ್ನಡಮಯವಾಗುತ್ತದೆ. ನದಿಯು ಸಾಗರಕ್ಕೆ ರಭಸದಿಂದ ಸೇರಿದಂತೆ ಸಂತೋಷದಿಂದ ಸಕಲರು ಸೇರುತ್ತಾರೆ. ಸ್ವಾರ್ಥಕ್ಕೆ ಬಳಕೆಯಾಗುವ ಎಂಇಎಸ್ ಮಾತ್ರ ಕರಾಳ ದಿನಕ್ಕೆ ಆತುಕೊಂಡಿದೆ. ಅದು ತನ್ನ ಕಪ್ಪುಬಣ್ಣವನ್ನು ಮತ್ತಷ್ಟು ಕಳೆದುಕೊಂಡು ಬಿಳಿಚಿದೆ. ಇತ್ತ ಕಪ್ಪು ಅಲ್ಲದ, ಬಿಳಿಯೂ ಅಲ್ಲದ ಬೂದು ವರ್ಣದಲ್ಲಿ ಸಂತೃಪ್ತಗೊಂಡಿದೆ. ಚುನಾವಣೆಗಳು, ವಿಧಾನಸಭೆಯ ಚಳಿಗಾಲ ಅಧಿವೇಶನ ಮತ್ತು ರಾಜ್ಯೋತ್ಸವ ಸಂದರ್ಭದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವವರಿಗೆ ಕರಾಳತೆ ಜ್ಞಾಪಕಕ್ಕೆ ಬರುತ್ತದೆ. ಆದರೆ ಅವರಿಗೂ ತುಂಬಾ ಚೆನ್ನಾಗಿಗೊತ್ತು. ಯಥಾಸ್ಥಿತಿಯೇ ವಾಸ್ತವವೆಂಬುದು. ಗಡಿ ತಂಟೆ ಸುಪ್ರೀಂಕೋರ್ಟಿನಲ್ಲಿದೆ ಎಂಬ ತೇಲು ಹೇಳಿಕೆ ನೀಡುತ್ತಲೇ ‘ಗಡಿ ತಂಟೆ ಜೀವಂತ’ ಎಂಬ ಭ್ರಮೆ ಹುಟ್ಟಿಸುವ ಹುಸಿ ಯತ್ನವನ್ನು ಅವರು ನಡೆಸುತ್ತಲೇ ಬಂದಿರುವರು. ಇದನ್ನು ಎರಡೂ ರಾಜ್ಯಗಳ ಕನ್ನಡಿಗರು, ಮರಾಠಿಗರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಏನೇ ಮಾಡಿದರೂ ಕಾಸರಗೋಡು, ಸೊಲ್ಲಾಪುರ, ಜತ್ತ, ಅಕ್ಕಲಕೋಟಗಳ ಭೂಭಾಗ ನಮಗೆ ಸೇರುವುದಿಲ್ಲ. ಹಾಗೆಯೇ ಬೀದರ್, ಭಾಲ್ಕಿ, ನಿಪ್ಪಾಣಿ, ಬೆಳಗಾವಿ ಕಾರವಾರದ ನೆಲದ ಒಂದಿಂಚೂ ಅವರಿಗೆ ದೊರೆಯುವುದಿಲ್ಲ. ಈ ಸತ್ಯವನ್ನು ಭಾಷಿಕ ಚಳವಳಿಗಾರರು ಅರಿತಿದ್ದಾರೆ. ಈ ವಾಸ್ತವತೆಯನ್ನು ಅರಿತು ಸರ್ಕಾರಗಳು ಭಾಷಿಕ ಅಸ್ಮಿತೆಯನ್ನು ಬಿತ್ತಲು ಬೆಳೆಯಲು; ಆ ನೆಲೆಯಲ್ಲಿ ಸದೃಢ ಕಾರ್ಯಸೂಚಿಗಳನ್ನು ಸಿದ್ಧಗೊಳಿಸಬೇಕು.
ಗಡಿನೆಲದ ಹಕಿಕತ್ತು...
ದೂರದಲ್ಲಿ ಕುಳಿತು ಗಡಿಯ ಆಚೆ ಈಚೆಯ ನೀತಿಗಳನ್ನು ಗಿಳಿ ಪಾಠ ಮಾಡುವುದರಿಂದ ಏನೂ ಪ್ರಯೋಜನ ಆಗುವುದಿಲ್ಲ. ಖರೇ ಅರ್ಥದಲ್ಲಿ ಗಡಿನೆಲದ ಹಕಿಕತ್ತನ್ನು ಸ್ಥಳೀಯರೇ ಬಲ್ಲವರು. ಅವರನ್ನು ಒಳಗೊಳ್ಳಬೇಕು. ನಾವುಗಳು- ಅಂದರೆ ಕರ್ನಾಟಕ, ಮಹಾರಾಷ್ಟ್ರಗಳ ಸಾಹಿತಿಗಳು, ಕಲಾವಿದರು, ಹೋರಾಟಗಾರರು, ಬುದ್ಧಿಜೀವಿಗಳು ಉಭಯ ರಾಜ್ಯಗಳ ಮಾನವ ಬದುಕನ್ನು ಅಂದಗೊಳಿಸಬೇಕಿದೆ. ಅದಕ್ಕಾಗಿ ಆಡಳಿತ ವ್ಯವಸ್ಥೆಗೆ ಸಲಹೆ ಸೂಚನೆ ನೀಡಬೇಕು. ಯೋಜನೆಗಳ ಬಗ್ಗೆ ಚಿಂತನ-ಮಂಥನ ನಡೆಸಿ ಸರ್ಕಾರಗಳಿಗೆ ಸೂಚಿಸಬೇಕು. ಆಳುವ ವ್ಯವಸ್ಥೆ ತಪ್ಪು ಎಸಗದಂತೆ ಕಾವಲು ಕಾಯಬೇಕು. ಅಗತ್ಯ ಬಿದ್ದರೆ ಸರ್ಕಾರಗಳ ಕಿವಿ ಹಿಂಡಲೂ ಹಿಂಜರಿಯಬಾರದು.
ನಾನಿರುವ ಗಡಿ ಪ್ರದೇಶದಲ್ಲಿ ಎರಡು ಭಾಷಿಕ ಜನರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಎರಡೂ ಭಾಷಿಕರು ಅನ್ಯೋನ್ಯತೆಯನ್ನು ಗೌರವಿಸಿ ಕಾಪಾಡಿಕೊಂಡು ತಲೆ ತಲಾಂತರದಿಂದ ಬದುಕುತ್ತ ಬಂದಿದ್ದಾರೆ. ಇವೆರಡೂ ಭಾಷಾ ಸಮುದಾಯಗಳಿಗೆ ಹಸಿವು ಮತ್ತು ಬದುಕು ಪ್ರಧಾನ. ನಂತರ ಭಾಷೆ. ಅದೂ ಸಹ ಪರಸ್ಪರ ಗೌರವದ್ದಾಗಿದೆ. ರಾಜಕಾರಣಿಗಳು ಮತ್ತು ಅವಕಾಶವಾದಿಗಳು ಸ್ವಲಾಭಕ್ಕೆ ಜನರ ಮಧ್ಯೆ ದ್ವೇಷದ ಬೆಂಕಿ ಹಚ್ಚುತ್ತಾರೆ. ಗಡಿ ತಂಟೆಯ ಹೆಸರಲ್ಲಿ ಬಿರುಕು ಸೃಷ್ಟಿಸುತ್ತಾರೆ. ಆ ವಿಷಯ ತಂದು ಅವರ ಭಾವನೆಗಳ ಸಂಗಡ ಚೆಲ್ಲಾಟವಾಡಿ ಅವರನ್ನು ಪ್ರಚೋದನೆಗೆ ಈಡು ಮಾಡುತ್ತಾರೆ. ಪರಸ್ಪರ ಭಾಷಿಕದ್ವಯರಿಗೆ ಮದ್ದನ್ನು ಹಾಕುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಹಳ್ಳಿಗಳಲ್ಲಿ ಹೇಳುತ್ತಿದ್ದರಲ್ಲ-‘ಮದ್ದು ಹಾಕತಾರಪ್ಪ ಜಾಗೃತೆ’ ಎಂಬಂತೆ. ಈ ಕುರಿತು ಕನ್ನಡ, ಮರಾಠಿ ಭಾಷಿಕರು ಮದ್ದು ಹಾಕುವವರ ಬಗ್ಗೆ ಎಚ್ಚರಗೊಂಡಿರುವರು. ಅದಕ್ಕೆ ವರ್ತಮಾನದಲ್ಲಿ ಈ ಅವಕಾಶವಾದಿಗಳನ್ನು, ಭಾಷೆ ಇಟ್ಟುಕೊಂಡು ರಾಜಕೀಯ ತಂಟೆ, ದ್ವೇಷ ಮಾಡುವವರನ್ನು ದೂರ ತಳ್ಳಿದ್ದಾರೆ.
ಕರುಳಬಳ್ಳಿ ಸಂಬಂಧ...
‘ಕಾನಡಾ ವಿಠ್ಠಲೂ ಕರುನಾಟಕೂ’ ಎಂದು ಮರಾಠಿ ಸಂತರು ಹಾಡಿ ಹೊಗಳಿದ ಕನ್ನಡದ ವಿಠ್ಠಲನನ್ನು ಎರಡೂ ಭಾಷಿಕರು ಭಕ್ತಿಯಿಂದ ಪೂಜಿಸುವುದಿಲ್ಲವೇ? ಸಾಮಾನ್ಯ ಕನ್ನಡಿಗನಿಗೆ ಪಂಢರಪುರದ ವಿಠ್ಠಲ ಕರ್ನಾಟಕದವನೇ! ವಿಠ್ಠಲನ ‘ವಾರಕರಿ’ ಸಂಪ್ರದಾಯದ ಭಕ್ತರ ಕರುಳಬಳ್ಳಿ ಸಂಬಂಧ ಮಹಾರಾಷ್ಟ್ರದಿಂದ ಕರ್ನಾಟಕ, ಆಂಧ್ರಪ್ರದೇಶಕ್ಕೂ ಹಬ್ಬಿದೆ. ಕರ್ನಾಟಕಾಂಧ್ರ ಮಹಾರಾಷ್ಟ್ರ ನಾಗರಿಕ ಬದುಕಲ್ಲಿ ಅನೇಕ ಸಾಮ್ಯತೆಗಳಿವೆ. ಇದನ್ನು ಎರಡೂ ಕಡೆಯ ವಿದ್ವಾಂಸರು ಹೇಳುತ್ತ ಬಂದಿದ್ದಾರೆ. ಇತ್ತೀಚೆಗೆ ಮರಾಠಿ ಭಾಷೆಗೂ ಶಾಸ್ತ್ರೀಯ ಸ್ಥಾನಮಾನ ಲಭಿಸಿದೆ. ಈ ಸಮಿತಿಯ ವಿದ್ವಾಂಸ ಹರಿ ನರಕೆ ಒಮ್ಮೆ ಬೆಳಗಾವಿಯಲ್ಲಿ ಮಾತನಾಡುತ್ತ- ‘ಮರಾಠಿ ಭಾಷೆಯು ಕನ್ನಡ, ತೆಲುಗು, ತಮಿಳಿಗೆ ಋಣಿಯಾಗಿರಬೇಕು. ಕಾರಣ, ಇವುಗಳಿಂದ ಸಾಕಷ್ಟು ಮರಾಠಿ ಪಡೆದಿದೆ’ ಅಂದಿದ್ದರು.
ರೈತರ ರಾಜ, ಮಹಿಳೆಯರನ್ನು ಅಪಾರವಾಗಿ ಗೌರವಿಸಿದ ಶಿವಾಜಿ ಮಹಾರಾಜರನ್ನು ಕನ್ನಡಿಗರೂ ಗೌರವ ನೀಡಿ ಅವರ ಕೊಡುಗೆಯನ್ನು ನೆನೆಯುತ್ತಾರೆ. ಇಂದು ಮಹಾರಾಷ್ಟ್ರದಲ್ಲಿರುವ ಮಂಗಳವೇಡೆ 12 ಶತಮಾನದಲ್ಲಿ ಬಸವಣ್ಣ ನಡೆದಾಡುವ ನೆಲವಾಗಿತ್ತು. ಮರಾಠಿಗರ ಆರಾಧ್ಯ ದೈವ ಸಂತ ಜ್ಞಾನೇಶ್ವರರಿಗೆ ಕನ್ನಡ ಭಾಷೆ ಗೊತ್ತಿತ್ತು. ಅವರ ಓವಿಗಳ ಮೇಲೆ ಕನ್ನಡ ಭಾಷೆಯ ಪ್ರಭಾವವಿದೆ ಎಂಬುದನ್ನು ವಿದ್ವಾಂಸ ರಂಶಾ ಲೋಕಾಪುರ ತಮ್ಮ ‘ಹಳಗನ್ನಡ ಮತ್ತು ಮರಾಠಿ’ ಎಂಬ ಭಾಷಾ ಶಾಸ್ತ್ರ ಕೃತಿಯಲ್ಲಿ ದಾಖಲಿಸಿದ್ದಾರೆ. ಸಂತ ತುಕಾರಾಮನಿಗೆ ಕನ್ನಡ ಗೊತ್ತಿತ್ತು ಎನ್ನಲು ಅವನ ಅಭಂಗವೊಂದೇ ಸಾಕು. ತೆಲುಗಿನ ಭಾಗವತ ಪರಂಪರೆಯ ಕೃಷ್ಣ ಪಾರಿಜಾತ ಕಾವ್ಯದ ಹೊಳವು ರಾಯಚೂರಿನ ಅಪರಾಳ ತಮ್ಮಣ್ಣನಿಂದ ಬೆಳಗಾವಿಯ ಕುಲಗೋಡ ತಮ್ಮಣ್ಣನ ತನಕ ಹರಿದು ಬಂದು, ಅವನ ಕೈಯಲ್ಲಿ ಶ್ರೀ ಕೃಷ್ಣ ಪಾರಿಜಾತ ಸಣ್ಣಾಟವಾಗಿ ಮರಾಠಿ ತಮಾಶಾದ ಗೊಲ್ಲತಿ ಪ್ರಕರಣವನ್ನು ತನ್ನೊಡಲೊಳಗೆ ಗರ್ಭೀಕರಣಗೊಳಿಸಿತು. ಇಂಥ ಭ್ರಾತೃತ್ವದ ಪರಂಪರೆಯು ಅಷ್ಟು ಸುಲಭವಾಗಿ ಬಿರುಕು ಬಿಡುವುದಲ್ಲ!
ಗ್ರಾಮ ಸಂರಚನೆಯ ಪರಂಪರೆ ವಿಶಿಷ್ಟ! ಗಡಿಯಲ್ಲಿ ಒಂದು ಹಳ್ಳಿ ಮರಾಠಿ ಭಾಷೆಯ ದಟ್ಟ ಪ್ರಭಾವ ಹೊಂದಿದ್ದರೆ, ಪಕ್ಕದ ಊರು ಅಚ್ಚಗನ್ನಡದ್ದು. ಇನ್ನೊಂದು ಎರಡನ್ನು ಸಮಬಲದಲ್ಲಿ ಹೊಂದಿರುವಂಥದ್ದು. ಹೀಗೆ ಕನ್ನಡ-ಮರಾಠಿ ಜನ ಸಮುದಾಯಗಳಲ್ಲಿ ಗಟ್ಟಿ ನೆಲೆಗೊಂಡ ಒಂದು ಪರಂಪರೆಯೇ ಇದೆ. ಇದು ಮಹಾಜನ ವರದಿಯ ಅಧ್ಯಯನಕ್ಕೆ ಪೂರಕ ವಸ್ತುಸ್ಥಿತಿಯ ಕಟುಸತ್ಯವು ಆಗಿರಲೂ ಸಾಕು.
ಬೆಳಗಾವಿಯನ್ನು ಎರಡನೆಯ ರಾಜಧಾನಿಯೆಂದು ಕರೆದು ಒಂದು ಭವ್ಯ, ಎತ್ತರದ ವಿಧಾನಸೌಧ ಕಟ್ಟಿದರೆ ಸಾಲದು. ಅಷ್ಟೇ ಭವ್ಯ, ದಿವ್ಯ ಎತ್ತರದ ಸವಾಲುಗಳು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಆದ್ಯತೆ ಆಗಬೇಕು. ಸಮಕಾಲೀನದಲ್ಲಿ ಅಲ್ಲಲ್ಲಿ ಚದುರಿದ ಭಾಷಿಕ ಜನರಿಗೆ ಭಾಷೆ, ಶಿಕ್ಷಣ, ಲಲಿತ ಕಲೆ, ಸಾಹಿತ್ಯ, ನೀರು, ರಸ್ತೆ, ಗ್ರಂಥಾಲಯ-ಮುಂತಾದ ಮೂಲಸೌಲಭ್ಯಗಳನ್ನು ಒದಗಿಸುವ ಹೊಣೆಗಾರಿಕೆಯನ್ನು ಆಯಾ ರಾಜ್ಯಗಳ ಸರ್ಕಾರಗಳು ಹೊತ್ತುಕೊಳ್ಳುತ್ತಿರುವುದರ ಕುರಿತು ನಿರಂತರ ಕಣ್ಣಿಡುವುದು ಮುಖ್ಯ. ಕಡೆಗಣನೆಯ ಶಾಪ ವಿಮುಕ್ತಿಯ ಬಗ್ಗೆ ಸರ್ಕಾರ ಯೋಚಿಸಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.