ನಾನು ಬಯಲುಸೀಮೆಯ ಚಿತ್ರದುರ್ಗದವನು. ಮೋಡಗಳನ್ನು ಕಂಡಷ್ಟೆ ಗೊತ್ತಿದ್ದವನಿಗೆ ಮಳೆಯ ಮೋಹಕತೆ ಅರಿವಿಗೆ ಬಂದಿದ್ದು ಮಂಗಳೂರಿಗೆ ‘ಪ್ರಜಾವಾಣಿ’ ಛಾಯಾಗ್ರಾಹಕನಾಗಿ ಬಂದಾಗಲೇ. ಅವಾಗಿನಿಂದ ಹಚ್ಚ ಹಸಿರು, ದಟ್ಟ ಕಾನನದ ನಡುವೆ ಧೋ ಎಂದು ಸುರಿಯುವ ಮಳೆಯನ್ನು, ಆಷಾಢದ ಗಾಳಿಗೆ ತೊಯ್ದಾಡುವ ಗಿಡಮರಗಳನ್ನು ಕಂಡಾಗಲೆಲ್ಲ ಮನಸ್ಸಿಗೇನೋ ಒಂದು ಥರ ಪುಳಕ.
ಮುಂಗಾರು ಆಗಮನದ ಮುನ್ಸೂಚನೆ ಸಿಗುತ್ತಿದ್ದಂತೆಯೇ ನನ್ನ ಕ್ಯಾಮೆರಾದ ಕಣ್ಣುಗಳು ತೀಕ್ಷ್ಣಗೊಂಡವು. ಸುರಿಯುವ ಸೋನೆ ಮಳೆ, ತುಷಾರ ಮಳೆ, ಧೋ ಎನ್ನುವ ಧಾರಾಕಾರ ಮಳೆ ಹೀಗೆ ಹನಿಯನ್ನೇ ಕಾಣದವನಿಗೆ ಮಳೆಯ ಹಲವು ವೈವಿಧ್ಯಗಳು ಅರಿವಿಗೆ ಬಂತು. ಜತೆಗಾರ ಕ್ಯಾಮೆರಾವನ್ನು ಬೆನ್ನಿಗೆ ಹೇರಿಕೊಂಡು ಬೈಕ್‌ನಲ್ಲಿ ಮಳೆ ಬಿಡಿಸಬಹುದಾದ ಚಿತ್ತಾರಗಳನ್ನು ಕಣ್ತುಂಬಿಕೊಳ್ಳಲು ನಗರ, ಪಟ್ಟಣ, ಹಳ್ಳಿ, ಗಿರಿಧಾಮಗಳತ್ತ ಮುಖ ಮಾಡಿದೆ.
ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ವರಂಗ ಎಂಬ ಹಳ್ಳಿಯಲ್ಲಿ ಇಡೀ ದಿನ ಕಳೆದೆ. ಅದರ ಸೊಗಸನ್ನು ಪದಗಳಲ್ಲಿ ಹಿಡಿದಿಡುವುದು ತುಸು ಕಷ್ಟ. ಕೃಷಿಕ ಮಹಿಳೆಯರು ಪಾಡ್ದಾನ ಹಾಡುತ್ತಾ ನಾಟಿ ಮಾಡುವುದು, ತುಂಬಿದ ನೀರಿನಲ್ಲಿ ಆಡುತ್ತಾ ಆಡುತ್ತಾ ಮಕ್ಕಳಲ್ಲಿದ್ದ ಉತ್ಸಾಹ ಮಳೆಗೂ, ಮಳೆಯಲ್ಲಿದ್ದ ಉತ್ಸಾಹ ಮಕ್ಕಳಲ್ಲೂ ಕಂಡು ಬೆರಗಾದೆ. ಇಂಥ ಹಲವು ಚಿತ್ರಗಳಿಗೆ ಸಾಕ್ಷಿಯಾದೆ.
ಚಿಕ್ಕಮಗಳೂರು ಜಿಲ್ಲೆಯ ಕ್ಯಾತನಮಕ್ಕಿ ಬೆಟ್ಟಕ್ಕೆ ಹೋಗುವ ಹಾದಿಯಲ್ಲಿ ನಿಜವಾದ ಮುಂಗಾರು ಮಳೆಯ ಅಬ್ಬರವನ್ನು ಅನುಭವಿಸಿ ಬೆಚ್ಚಿಬಿದ್ದೆ. ಬೈಕ್‌ನಲ್ಲಿ ಹೋಗುವಾಗ ಮುಂದೆ ಏನಿದೆ ಎನ್ನುವುದೇ ಕಾಣದಷ್ಟು ಮಳೆ ತೀವ್ರವಾಗಿತ್ತು. ಕುದುರೆಮುಖ, ಆಗುಂಬೆ ಘಾಟಿಯಲ್ಲೂ ಇದೇ ರೀತಿಯ ಮಳೆಯ ನರ್ತನ ಕಂಡೆ.
ಮುಂಜಾನೆ ಸೋನೆ ಮಳೆಯಲ್ಲೇ ಮಂಗಳೂರಿನ ಬಂದರಿನಲ್ಲಿರುವ ಮೀನು ಮಾರುಕಟ್ಟೆಗೆ ಹೋದೆ. ಅಲ್ಲಿ ಕಲಾವಿದನೊಬ್ಬ ತುಂಬಾ ಆಸ್ಥೆ ವಹಿಸಿ, ಬಣ್ಣಗಳನ್ನು ಎರಚಿದಂಥ ನೋಟ. ಸೋನೆ ಮಳೆ, ಸುಯ್ಯನೆ ಬೀಸುವ ಗಾಳಿ ವ್ಯವಹಾರದ ಬದುಕಿಗೆ ಅದಮ್ಯ ಉತ್ಸಾಹವೊಂದನ್ನು ತಂದಿತ್ತು.
ಕೆಲವು ಮೀನುಗಳ ಪರಿಚಯವಿದ್ದನಿಗೆ ಬಗೆ ಬಗೆಯ ನಾನಾ ಮೀನಿನ ರಾಶಿಗಳನ್ನು ಕಂಡೆ. ಹಳ್ಳಿಯ ಬಯಲು, ದಟ್ಟ ಕಾನನ, ಸೆಳೆಯುವ ದಿಗಂತ, ಕಡಲಿನ ಅನಂತತೆ, ಪಿಸುಗುಡುವ ಗಿರಿಶೃಂಗಗಳು.
ಮುಂಗಾರು ಒಂದು, ನೋಟ ಹತ್ತಾರು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.