ನಾನು ಕಾಶ್ಮೀರದಿಂದ ವಲಸೆ ಬಂದು ದೆಹಲಿಯಲ್ಲಿ ನೆಲೆಸಿದವಳು. ವಲಸೆ ಬಂದಿದ್ದು ಮೂವತ್ತು ವರ್ಷಗಳ ಹಿಂದೆ. 2006ರ ನಂತರವಷ್ಟೇ ನಾನು ಕಾಶ್ಮೀರಕ್ಕೆ ಆಗಾಗ ಭೇಟಿ ನೀಡಲು ಆರಂಭಿಸಿದೆ. ಆ ಸಂದರ್ಭದಲ್ಲಿ ಅಲ್ಲಿ ಪರಿಸ್ಥಿತಿ ತುಸು ಸಹಜವಾಗಿತ್ತು. ಅಲ್ಲಿನ ಜನ ತಮ್ಮ ಸ್ವಾತಂತ್ರ್ಯವನ್ನು ಒಂಚೂರು ಮರಳಿ ಪಡೆದುಕೊಂಡಿದ್ದರು. ತಮ್ಮ ದೈನಂದಿನ ಚಟುವಟಿಕೆಗಳನ್ನು ಮುಕ್ತವಾಗಿ ನಡೆಸಲು ಅವರಿಗೆ ಸಾಧ್ಯವಾಗಿತ್ತು.
ಇದನ್ನೂ ಓದಿ:ಕಾಶ್ಮೀರ: ಸ್ವರ್ಗವೇನೋ ನಿಜ...
ಭಾರತ ಹಲವೆಡೆ ನನಗೆ ಬಹಳ ಒಳ್ಳೆಯ ಸ್ನೇಹಿತರಿದ್ದಾರೆ. ಅವರ ಜೊತೆ ಇದ್ದಾಗ ನನಗೆ ಯಾವ ಸಂದರ್ಭದಲ್ಲೂ ‘ನಾನು ಹೊರಗಿನವಳು’ ಎನ್ನುವ ಭಾವನೆ ಮೂಡಲಿಲ್ಲ. ಆದರೆ, ನಾನು ‘ಈಕೆ ಕಾಶ್ಮೀರಿ ಮುಸ್ಲಿಂ’ ಎಂದು ಕೆಲವು ಸಂದರ್ಭಗಳಲ್ಲಿ ಕರೆಸಿಕೊಂಡಿದ್ದಿದೆ. ‘ಈಕೆ ಕಾಶ್ಮೀರಿ’ ಎಂದು ಬೇರೆಯವರು ಕರೆಯುವುದು ಒಂದು ರೀತಿಯಲ್ಲಿ ನನಗೆ ಹಣೆಪಟ್ಟಿ ಅಂಟಿಸಿದಂತೆ. ಅದು ಸಹಜವಾದ ಸಂಬೋಧನೆ ಆಗಿರುತ್ತಿರಲಿಲ್ಲ. ನನ್ನನ್ನು ಯಾರಾದರೂ ಹಾಗೆ ಕರೆದಾಗ ನಾನು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಏಕೆಂದರೆ, ಕಾಶ್ಮೀರಿ ಆಗಿದ್ದ ಕಾರಣಕ್ಕೇ ನನಗೆ ಸಿಕ್ಕಿದ ಗೌರವವು, ಹೀಗೆ ಕರೆಸಿಕೊಂಡಿದ್ದಕ್ಕಿಂತ ಹೆಚ್ಚಿನ ತೂಕದ್ದು.
ನಾನು ಒಂಟಿಯಾಗಿ ಪ್ರಯಾಣ ಮಾಡುವ ವ್ಯಕ್ತಿ. ದೇಶದ ಉದ್ದಗಲವನ್ನು ಒಂಟಿಯಾಗಿ ಪ್ರಯಾಣಿಸಿದ್ದೇನೆ. ನಾನು ಹೋದಲ್ಲೆಲ್ಲ ನನಗೆ ದಕ್ಕಿದ ಪ್ರೀತಿಗೆ ಎಣೆ ಖಂಡಿತ ಇಲ್ಲ. ಆದರೆ, ಕಳೆದ ಐದು ವರ್ಷಗಳ ಅವಧಿಯಲ್ಲಿ ಪರಿಸ್ಥಿತಿ ಬದಲಾಗಿದೆ. ಕಳೆದ ಬಾರಿ ಈಶಾನ್ಯ ರಾಜ್ಯಗಳ ಕಡೆ ಪ್ರವಾಸ ಹೋಗಿದ್ದೆ. ಅಲ್ಲಿನ ರಾಜ್ಯಗಳಿಗೂ ವಿಶೇಷ ಸ್ಥಾನಮಾನ ಇದೆ. ಅಲ್ಲಿ ನನಗೆ ನನ್ನ ಕಾಶ್ಮೀರ ರಾಜ್ಯದಲ್ಲಿ ಇದ್ದಂತಹ ಅನುಭವವೇ ಆಯಿತು. ಅಲ್ಲಿನ ಯಾರೂ ನಾನು ಕಾಶ್ಮೀರಿ ಮುಸ್ಲಿಂ ಎಂಬ ಕಾರಣಕ್ಕೆ ನನ್ನ ಬಗ್ಗೆ ಪೂರ್ವಗ್ರಹ ಬೆಳೆಸಿಕೊಳ್ಳಲಿಲ್ಲ.
ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದಾಗಬೇಕು ಎಂಬುದು ಪ್ರತಿ ಭಾರತೀಯನ ಬಯಕೆಯಾಗಿತ್ತು. ಈಗ ಅದು ಈಡೇರಿದೆ. ಆದರೆ ಇದು, ಕಾಶ್ಮೀರಿಗಳ ಪಾಲಿಗೆ ಬಲವಾದ ಏಟಲ್ಲವೇ? ಅವರು ಭಾರತವನ್ನು ನಂಬಿದ್ದರು. ಈಗ ಅವರ ನಂಬಿಕೆಯನ್ನು ಕಳೆದುಕೊಂಡಂತೆ ಆಗಿದೆ.
ಕಾಶ್ಮೀರವನ್ನು ದೇಶದ ಜೊತೆ ಒಂದಾಗಿಸಲು ಇದು ಅಗತ್ಯವಿತ್ತು ಎಂದು ಸರ್ಕಾರ ಹೇಳುತ್ತದೆ. ಆದರೆ, ನಮ್ಮದೇ ಜನರನ್ನಾದರೂ ಸರ್ವಾಧಿಕಾರದ ಮೂಲಕ ಒಂದು ಮಾಡಲು ಸಾಧ್ಯವೇ? ಕೇಂದ್ರದ ತೀರ್ಮಾನಕ್ಕೆ ಕಾಶ್ಮೀರಿಗಳು ಈಗ ತಲೆಬಾಗಬಹುದು. ಏಕೆಂದರೆ ಸಾಯಲು ಯಾರಿಗೂ ಇಷ್ಟವಿಲ್ಲ. ಆದರೆ, ಮುಂದೇನಾಗುತ್ತದೆ ಎಂಬುದು ಗೊತ್ತಿಲ್ಲ. ಕಾಶ್ಮೀರ ವಿಚಾರ ಬಹಳ ಸಂಕೀರ್ಣ. ಕಾಶ್ಮೀರಿಗಳ ಭಾವನೆಗಳಿಗೆ ವಿರುದ್ಧವಾಗಿ ಹೋಗುವ ಬದಲು ಈ ವಿಚಾರವನ್ನು ಇನ್ನಷ್ಟು ದಯೆ, ಪ್ರೀತಿಯಿಂದ ನಿಭಾಯಿಸಬಹುದಿತ್ತು.
ನಾನು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ವ್ಯಾಸಂಗ ಮಾಡಿದ್ದೇನೆ. ಅಲ್ಲಿ ಪ್ರತಿಯೊಬ್ಬರೂ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದರು. ದಕ್ಷಿಣ ಭಾರತದಲ್ಲಿ, ಉತ್ತರ ಭಾರತದವರ ಬಗ್ಗೆ ಒಂದು ಬಗೆಯ ಅನಾದರ ಇದೆ. ಆದರೆ ನನಗೆ ಯಾವತ್ತೂ ಅಂತಹ ಅನುಭವ ಆಗಲಿಲ್ಲ.
ಆದರೆ, ‘ಕಾಶ್ಮೀರಿ ಮುಸ್ಲಿಂ’ ಆಗಿರುವುದು ಸಮಸ್ಯಾತ್ಮಕ ಎಂಬುದು ಐದು ವರ್ಷಗಳ ಈಚಿನ ಅವಧಿಯಲ್ಲಿ ನನ್ನ ಅನುಭವಕ್ಕೂ ಬಂದಿದೆ. ಕಾಲೇಜಿನಲ್ಲಿ ಇದ್ದಾಗ ಸ್ನೇಹಿತರ ಜೊತೆ ಕಾಶ್ಮೀರ ವಿಚಾರವಾಗಿ ಜಗಳವಾಡಿದ್ದೂ ಇದೆ. ಆದರೆ, ಅವು ಸ್ನೇಹಿತರ ನಡುವಿನ ಕೋಳಿ ಜಗಳಗಳು!
ನಾನು ಬೆಂಗಳೂರಿನಲ್ಲಿ ಕೂಡ ಒಂದಿಷ್ಟು ಸಮಯ ಕಳೆದಿದ್ದೇನೆ. ಇಲ್ಲಿ ನನಗೆ ಅನ್ಯಭಾವ ಯಾವತ್ತೂ ಕಾಡಲಿಲ್ಲ. ನನ್ನ ಅನುಭವದಲ್ಲಿ ಹೇಳುವುದಾದರೆ, ಕಾಶ್ಮೀರಿಗಳು ದಕ್ಷಿಣ ಭಾರತದಲ್ಲಿ ತೊಂದರೆ ಅನುಭವಿಸಿಲ್ಲ.
ಆದರೆ, ನಾನು ನಿಜವಾಗಿಯೂ ಅಭದ್ರತೆಯ ಭಾವನೆ ಎದುರಿಸಿದ್ದು ಉತ್ತರ ಭಾರತದಲ್ಲಿ. ನಾನು ಈಗ ಯಾರಲ್ಲಿಯೂ ‘ನಾನು ಕಾಶ್ಮೀರಿ’ ಎಂದು ಹೇಳಿಕೊಳ್ಳುತ್ತಿಲ್ಲ. ‘ನಾನು ದೆಹಲಿಯವಳು’ ಎಂದು ಹೇಳಲು ಆರಂಭಿಸಿದ್ದೇನೆ!
- ನಿರೂಪಣೆ: ವಿಜಯ್ ಜೋಷಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.