ADVERTISEMENT

ಬದುಕು ಕಟ್ಟಿದ ಕತ್ತಾಳೆ!

ಚಳ್ಳಕೆರೆ ವೀರೇಶ್
Published 27 ಆಗಸ್ಟ್ 2018, 19:30 IST
Last Updated 27 ಆಗಸ್ಟ್ 2018, 19:30 IST
ಕುರುಡಿಹಳ್ಳಿ ಲಂಬಾಣಿ ಹಟ್ಟಿಯಲ್ಲಿ ಸಿದ್ದಗೊಂಡ ಕತ್ತಾಳೆ ನಾರಿನಿಂದ ಹಗ್ಗ ತಯಾರು ಮಾಡುತ್ತಿರುವ ಯಜಮಾನ.
ಕುರುಡಿಹಳ್ಳಿ ಲಂಬಾಣಿ ಹಟ್ಟಿಯಲ್ಲಿ ಸಿದ್ದಗೊಂಡ ಕತ್ತಾಳೆ ನಾರಿನಿಂದ ಹಗ್ಗ ತಯಾರು ಮಾಡುತ್ತಿರುವ ಯಜಮಾನ.   

ಚಳ್ಳಕೆರೆಯಿಂದ ಚಿತ್ರದುರ್ಗದ ಕಡೆ ಹೋಗುವಾಗ ಕುರುಡಿ ಲಂಬಾಣಿ ತಾಂಡ ದಾಟುವ ವೇಳೆ ಒಂದು ಬಗೆಯ ವಾಸನೆ ಮೂಗಿಗೆ ಅಡರುತ್ತದೆ. ವಾಸನೆ ಬರುವ ದಿಕ್ಕಿಗೆ ತಿರುಗಿದರೆ ದೂರದ ಬಯಲಿನಲ್ಲಿ ಹಗ್ಗದ ಮೇಲೆ ಹಸಿರು ಬಟ್ಟೆಗಳನ್ನು ಒಣಗಿ ಹಾಕಿದಂತಹ ದೃಶ್ಯ. ಹತ್ತಿರ ಹೋಗಿ ನೋಡಿದರೆ, ಅರೆ, ಅದು ಬಟ್ಟೆಗಳಲ್ಲ, ಕೂದಲಿನಷ್ಟು ತೆಳುವಾದ ಕತ್ತಾಳೆ ನಾರಿನ ಸಿಂಬಿಗಳು...!

ನೂರೈವತ್ತು ಕುಟುಂಬಗಳಿರುವ ಈ ತಾಂಡದಲ್ಲಿ 15 ಕುಟುಂಬಗಳು ಕತ್ತಾಳೆ ನಾರು ತಯಾರಿಕೆ ಉದ್ಯೋಗದಲ್ಲಿ ತೊಡಗಿಸಿಕೊಂಡಿವೆ. ಗ್ರಾಮದ ಆಸುಪಾಸಿನಲ್ಲಿ ನಾರು ತೆಗೆಯುವ ಆರು ಘಟಕಗಳಿವೆ. ಒಂದೊಂದು ಘಟಕ 20 ರಿಂದ 25 ಮಂದಿಗೆ ಉದ್ಯೋಗ ನೀಡಿದೆ.

ಮಳೆ ಕೊರತೆಯಿಂದ ಬೆಳೆ ಬೆಳೆಯಲಾಗದೇ ಸಂಕಷ್ಟದಲ್ಲಿರುವ ಸಣ್ಣ ಹಿಡುವಳಿದಾರ ಕೃಷಿ ಕುಟುಂಬಗಳಿಗೆ ಇದು ಆದಾಯ ನೀಡುವ ಉಪಕಸುಬಾಗಿದೆ.

ADVERTISEMENT

ಕತ್ತಾಳೆಯಿಂದ ನಾರು
ಹೊಲದ ಬದುಗಳಲ್ಲಿ ಬೇಲಿಯಾಗಿ, ಪಾಳು ಭೂಮಿಯಲ್ಲಿ ಬೆಳೆದಿರುವ ಕತ್ತಾಳೆ ಪಟ್ಟೆಗಳನ್ನು ಕಾರ್ಮಿಕರು ಕಟಾವು ಮಾಡಿಕೊಂಡು ಬರುತ್ತಾರೆ. ಕತ್ತರಿಸಿ ತಂದ ಪಟ್ಟೆಗಳನ್ನು ಸಮ ಪ್ರಮಾಣದಲ್ಲಿ ಕತ್ತರಿಸಿ, ಯಂತ್ರಕ್ಕೆ ಕೊಡುತ್ತಾರೆ. ಆ ಯಂತ್ರ ಪಟ್ಟೆಯನ್ನು ಸೀಳುತ್ತಾ ತೆಳುವಾದ ನಾರನ್ನು ಹೊರ ಹಾಕುತ್ತದೆ. ಅದನ್ನು ಮೂರ್ನಾಲ್ಕು ದಿನಗಳ ಕಾಲ ಬಿಸಿಲಲ್ಲಿ ಒಣಗಲು ಹಾಕುತ್ತಾರೆ. ನಂತರ‌ ದಾರವನ್ನು ಪೆಂಡಿ ಕಟ್ಟಿಡುತ್ತಾರೆ. ‍ಒಂದು ಘಟಕದಿಂದ ನಿತ್ಯ 100 ರಿಂದ 150 ಕೆ.ಜಿ ತೂಕದಷ್ಟು ನಾರು ಉತ್ಪಾದನೆಯಾಗುತ್ತದೆ ಎನ್ನುತ್ತಾರೆ ಘಟಕದ ಮಾಲೀಕ ರಾಜೇಶ್.

ಒಂದು ಕೆಜಿ ಪೆಂಡಿಗೆ ₹20 ರಿಂದ ₹25 ಬೆಲೆ. ಕೋಲ್ಕತ್ತಾ, ಮಹರಾಷ್ಟ್ರ ಭಾಗದವರು ಇಲ್ಲಿಗೇ ಬಂದು ನಾರನ್ನು ಖರೀದಿಸುತ್ತಾರೆ. ಹದಿನೈದು ದಿನಕ್ಕೊಮ್ಮೆ ಇಲ್ಲಿಂದ 5 ರಿಂದ 6 ಟನ್ನಿಷ್ಟು ನಾರು ಕೋಲ್ಕತ್ತಾಗೆ ರವಾನೆಯಾಗುತ್ತದಂತೆ. ಜತೆಗೆ, ಸ್ಥಳೀಯರು ಹಗ್ಗ, ನಿಲುವು(ವಸ್ತುಗಳನ್ನಿಟ್ಟು ತೂಗು ಹಾಕುವ ಪರಿಕರ), ಕರುಗಳಿಗೆ ಕಣ್ಣಿ, ಎತ್ತುಗಳಿಗೆ ಮೂಗುದಾರದಂತಹ ಪರಿಕರಗಳನ್ನು ತಯಾರಿಸಿಕೊಡಲು ಕೇಳುತ್ತಾರೆ. ‘ಇಂಥವನ್ನು ಘಟಕದಲ್ಲಿ ತಯಾರಿಸುವುದಿಲ್ಲ. ಬೇಡಿಕೆ ಬಂದರೆ ಘಟಕದ ಮಾಲೀಕರೇ ಮನೆಯಲ್ಲಿ ತಯಾರಿಸಿಕೊಡುತ್ತಾರೆ’ ಎಂದು ಕೂಲಿ ಕಾರ್ಮಿಕ ನಂಜಯ್ಯ ಹೇಳುತ್ತಾರೆ.

ಇಲ್ಲಿ ಬೇಡಿಕೆಗೆ ಅನುಗುಣವಾಗಿ ನಾರು ತೆಗೆಯುತ್ತಾರೆ. ವರ್ಷದಲ್ಲಿ ಎಂಟು ತಿಂಗಳು ನಾರು ಉತ್ಪಾದನೆಯಾಗುತ್ತದೆ. ಹಾಗಾಗಿ ಕೆಲಸ ನಿರಂತರವಾಗಿ ನಡೆಯುತ್ತಿರುತ್ತದೆ. ಘಟಕಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಕೆಲಸಕ್ಕೆ ತಕ್ಕಂತೆ ₹250 ರಿಂದ ₹ 500 ರೂಪಾಯಿವರೆಗೂ ಕೂಲಿ ನೀಡುತ್ತಾರೆ. ಒಂದು ಟ್ರ್ಯಾಕ್ಟರ್‌ ಲೋಡ್ ಕತ್ತಾಳೆ ತಂದು, ನಾರು ಮಾಡುವಷ್ಟರಲ್ಲಿ ಸುಮಾರು 8 ರಿಂದ 10 ಸಾವಿರ ರೂಪಾಯಿ ಖರ್ಚಾಗುತ್ತದೆ. ದೂರದ ಊರುಗಳಿಂದ ತರುವುದಕ್ಕೆ ಹಣ ಹೆಚ್ಚು ಬೇಕಾಗುತ್ತದೆ ಎನ್ನುತ್ತಾರೆ ಘಟಕವೊಂದರ ಮಾಲೀಕ ರಾಜಾನಾಯ್ಕ.

ಯಂತ್ರದಿಂದ ಕತ್ತಾಳೆ ನಾರು ತೆಗೆಯುತ್ತಿರುವುದು

ಕಚ್ಚಾವಸ್ತು ಸಂಗ್ರಹಿಸುವ ಸವಾಲು
ಕತ್ತಾಳೆ ಕೆಲವೊಮ್ಮೆ ಉಚಿತವಾಗಿ ಸಿಗುತ್ತದೆ. ಹೊಲದಲ್ಲಿ ಬೇಲಿಯಾಗಿ ಬೆಳೆಸಿರುವವರು ಹಣಕೊಟ್ಟು ಕೊಂಡು ಹೋಗಿ ಎನ್ನುತ್ತಾರೆ. ಚಿತ್ರದುರ್ಗ, ಬಳ್ಳಾರಿ, ಚಳ್ಳಕೆರೆ, ಹಿರಿಯೂರು, ಐಮಂಗಲ, ನಾಯಕನಹಟ್ಟಿ, ಸಾಣೀಕೆರೆ, ಕಲಮರಹಳ್ಳಿ, ಹಿರಿಯೂರು ಸುತ್ತಮುತ್ತಲ ಗ್ರಾಮಗಳ ಹೊಲಗಳ ಬದುವಿನಿಂದ ಕತ್ತಾಳೆ ಪಟ್ಟೆಗಳನ್ನು ಕೊಯ್ದು ತರುತ್ತಾರೆ ಕಾರ್ಮಿಕರು.

‘ಕೊಯ್ಕೊಳ್ಳೋಕೆ ದುಡ್ಡು ಕೇಳ್ದಿದ್ದರೂ, ಕೊಯ್ಯುವುದಕ್ಕೆ, ಟ್ರ್ಯಾಕ್ಟರ್‌ಗೆ ತುಂಬುವುದಕ್ಕೆ ಕೂಲಿ, ಟ್ರ್ಯಾಕ್ಟರ್‌ ಬಾಡಿಗೆ ಎಲ್ಲ ಸೇರಿ ಒಂದು ಲೋಡ್‌ಗೆ ₹700 ರಿಂದ ₹1200ವರೆಗೂ ಹಣಕೊಟ್ಟು ಕಾಯಬೇಕು. ಇದರ ನಡುವೆ ನಿತ್ಯ ಒಂದು ಟ್ರ್ಯಾಕ್ಟರ್ ಲೋಡ್ ಕತ್ತಾಳೆ ತಂದು ನಾರು ತೆಗೆಯುತ್ತೇವೆ’ ಎಂದು ಕಚ್ಚಾವಸ್ತುವನ್ನು ಹೊಂದಿಸಲು ಇರುವ ಸಮಸ್ಯೆಯನ್ನು ನಾರು ತೆಗೆಯುವ ಮೀಟ್ಯಾನಾಯ್ಕ ತೆರೆದಿಡುತ್ತಾರೆ.

ಇಷ್ಟೆಲ್ಲ ಖರ್ಚು–ವೆಚ್ಚ–ಮಾರುಕಟ್ಟೆ ನಡುವೆ ಕತ್ತಾಳೆ ಎಂಬ ಪಟ್ಟೆ ಮುಳ್ಳಿನ ಸಸ್ಯ ಮಳೆಯಿಲ್ಲದೇ ನಿರುದ್ಯೋಗಿಗಳಾಗಿದ್ದ ಸಣ್ಣ ರೈತರಿಗೆ ಉದ್ಯೋಗ ನೀಡಿದೆ. ಇದೇ ಕಚ್ಚಾವಸ್ತುವನ್ನು ಮೌಲ್ಯವರ್ದಿಸಿ ಕೃಷಿ ಉಪಕರಣಗಳು, ಬ್ಯಾಗು ಸೇರಿದಂತೆ ಹಲವು ಉತ್ಪನ್ನಗಳನ್ನು ತಯಾರಿಸಲು ಅವಕಾಶವಿದೆ. ಅನೇಕ ಬಾರಿ ಇಲ್ಲಿನ ಮೇಳಗಳಲ್ಲಿ ಆ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿರುತ್ತಾರೆ.

ಹಾಗಾಗಿ ಇಂಥ ಉತ್ಪನ್ನಗಳನ್ನು ತಯಾರಿಸುವ ಸಣ್ಣ ಕೈಗಾರಿಕೆಯೊಂದು ಇಲ್ಲೇ ಸ್ಥಾಪನೆಯಾದರೆ, ಬರದಿಂದಾಗಿ ಕೃಷಿಯಲ್ಲಿ ನಷ್ಟ ಅನುಭವಿಸುತ್ತಿರುವ ಈ ಭಾಗದ ಹಳ್ಳಿಯವರಿಗೆ ಪರ್ಯಾಯ ಉದ್ಯೋಗ ದೊರೆತಂತಾಗುತ್ತದೆ. ಕತ್ತಾಳೆ ನಾರು ತಯಾರಿಕೆ ಕುರಿತು ಮಾಹಿತಿಗಾಗಿ 7022117952 ಗೆ ಸಂಪರ್ಕಿಸಬಹುದು.

ಬೆಳೆಗಳಿಗೆ ಔಷಧ
ನಾರು ತೆಗೆದ ನಂತರ ಉಳಿಯುವ ಸಿಪ್ಪೆ ಉತ್ತಮ ಗೊಬ್ಬರ. ನಾರು ತೆಗೆಯುವಾಗ ಹೊರ ಹೊಮ್ಮುವ ರಸ ಬೆಳೆಗಳಿಗೆ ತಗಲುವ ರೋಗಕ್ಕೆ ಔಷಧವಾಗುತ್ತದೆ. ಈ ಗಿಡಕ್ಕೆ ಔಷಧೀಯ ಗುಣವಿರುವ ಕಾರಣಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ರಸವನ್ನು ದ್ರಾಕ್ಷಿ, ಬಾಳೆ, ಕಿತ್ತಾಳೆ, ದಾಳಿಂಬೆ ಸಸಿಗಳಿಗೆ ತಗಲುವ ರೋಗ ನಿಯಂತ್ರಣಕ್ಕಾಗಿ ಬಳಸುತ್ತಾರೆ. ರೋಗ ನಿಯಂತ್ರಣದ ಜತೆಗೆ, ಉತ್ತಮ ಇಳುವರಿ ಬರುತ್ತದೆ ಎಂಬ ಕಾರಣಕ್ಕೆ ಕೆಲ ರೈತರು ಇದನ್ನು ಖರೀದಿಸುತ್ತಾರೆ ಎಂದು ರಾಜೇಶ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.