ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ ಕೆಳದಿ ಹೆಸರು ಕೇಳಿದ ಕೂಡಲೇ ಥಟ್ ಅಂತ ನೆನಪಾಗುವುದು ಶಿಲ್ಪಕಲಾ ಸಿರಿವಂತಿಕೆಯ ರಾಮೇಶ್ವರ ದೇವಾಲಯ. ಜತೆಗೆ, ಇತಿಹಾಸ ಪುಟಗಳಲ್ಲಿರುವ ಕೆಳದಿ ಅರಸ ಶಿವಪ್ಪನಾಯಕ ಅವರ ಜನಪರ ಆಡಳಿತ. ಅದೇ ಜಾಗದಲ್ಲಿ, ಇಂಥ ಇನ್ನಷ್ಟು ಅಪರೂಪದ ಮಾಹಿತಿಗಳನ್ನು ಪರಿಚಯಿಸುವ ತಾಣವಿದೆ. ಅದೇ ‘ಕೆಳದಿ ವಸ್ತು ಸಂಗ್ರಹಾಲಯ ಮತ್ತು ಇತಿಹಾಸ ಸಂಶೋಧನಾ ಕೇಂದ್ರ’.
1978ರಲ್ಲಿ ಕೆಳದಿ ಪ್ರಾಚ್ಯವಸ್ತು ಮತ್ತು ಇತಿಹಾಸ ಸಂಶೋಧನಾ ಸಂಸ್ಥೆ ಹುಟ್ಟಿಕೊಂಡಿತು. ಸಾಗರದ ಹಿರಿಯ ಇತಿಹಾಸಕಾರ ಗುಂಡಾ ಜೋಯಿಸರ ಶ್ರಮದ ಫಲವಾಗಿ ಈ ಸಂಗ್ರಹಾಲಯ ಜನ್ಮತಾಳಿತು. ಇವರ ಪರಿಶ್ರಮದಿಂದಾಗಿ ಜತನವಾಗಿ ಸಂಗ್ರಹಿಸಿಟ್ಟಿದ್ದ ಕೆಳದಿ ಸಂಸ್ಥಾನ ಹಲವು ವಸ್ತುಗಳನ್ನು ಜೋಯಿಸರೇ ಈ ಸಂಸ್ಥೆಗೆ ನೀಡಿದರು. ಜತೆಗೆ ತಮ್ಮ ನಿವೇಶನ ನೀಡಿ, ವಸ್ತು ಸಂಗ್ರಹಾಲಯ ಕಟ್ಟಡಕ್ಕೆ ಅನುವುಮಾಡಿಕೊಟ್ಟರು. 1995ರಲ್ಲಿ ಕುವೆಂಪು ವಿಶ್ವವಿದ್ಯಾಲಯವು ಈ ಸಂಸ್ಥೆಗೆ ಸಂಶೋಧನಾ ಕೇಂದ್ರವಾಗಿ ಮಾನ್ಯತೆ ನೀಡಿದೆ.
ಮ್ಯೂಸಿಯಂನಲ್ಲಿ ಏನೇನಿದೆ?
ಗ್ರಾಮದ ವೀರಭದ್ರ ದೇವಾಲಯದ ಪಕ್ಕದಲ್ಲೇ ಈ ವಸ್ತು ಸಂಗ್ರಹಾಲಯವಿದೆ. ಕಟ್ಟಡದ ಎದುರಿಗೆ ಸಣ್ಣ ಕೈತೋಟವಿದೆ. ಕೆಲವು ಶಿಲ್ಪಗಳಿಗೆ ಒಳಗೆ ಸೇರಲು ಜಾಗವಿಲ್ಲದೇ, ಹೊರಗಡೆ ನೆಲೆ ನಿಂತಿವೆ. ಕೆಲವು ಶಿಲ್ಪಗಳು ಭಗ್ನಗೊಂಡಿವೆ. ಅವುಗಳನ್ನು ಜೋಡಿಸುವ ಕೆಲಸ ಪ್ರಗತಿಯಲ್ಲಿದೆ.
ಕಟ್ಟಡದ ಒಳಗೆ ಹೊಕ್ಕರೆ ಒಂದು ದೊಡ್ಡ ಹಾಲ್. ಹಾಲ್‌ನ ಎಡಭಾಗದಲ್ಲಿ ದೊಡ್ಡ ಪರದೆಯಲ್ಲಿ ಕೆಳದಿ ಸಂಸ್ಥಾನದ ವಂಶವೃಕ್ಷ. ಇಲ್ಲಿಂದ ಕೆಳದಿ ಅರಸರ ಲೋಕ ತೆರೆದುಕೊಳ್ಳುತ್ತದೆ. ಪಡಸಾಲೆಯಲ್ಲಿ ಜಿಲ್ಲೆ ಹಾಗೂ ಜಿಲ್ಲೆಯ ಸುತ್ತಮುತ್ತಾ ಸಂಗ್ರಹವಾದ ಬುದ್ಧ, ತೀರ್ಥಂಕರರ, ಗ್ರಾಮದೇವಿಗಳ ವಿಗ್ರಹಗಳನ್ನು ಜೋಡಿಸಲಾಗಿದೆ. ಅಷ್ಟೊಂದು ಸೂಕ್ಷ್ಮ ಕೆತ್ತನೆಯ ಶಿಲ್ಪಗಳಲ್ಲ ಇವು. ಪದ್ಮದಲ್ಲಿ ಕುಳಿತ ತೀರ್ಥಂಕರ, ಧ್ಯಾನಸ್ಥ ಬುದ್ಧ. 18ನೇ ಶತಮಾನದ ಕಾಲಭೈರವ ಶಿಲ್ಪ ಕೂಡ ಇಲ್ಲಿದೆ.
ವಿವಿಧ ಭಾಷೆಗಳ ಹಸ್ತಪ್ರತಿಗಳು
ಕನ್ನಡ, ತೆಲುಗು, ಸಂಸ್ಕೃತ, ತಮಿಳು, ತಿಗಳಾರಿ ಭಾಷೆಗಳ ಸುಮಾರು ಸಾವಿರಕ್ಕೂ ಅಧಿಕ ಹಸ್ತಪ್ರತಿಗಳಿವೆ. ಸಂಸ್ಕೃತದ ಜಯದೇವ ಕವಿಯ ‘ಗೀತ ಗೋವಿಂದ’ ಕೃತಿಯ ಟಿಪ್ಪಣಿ ರೂಪವಾಗಿ ‘ಸಂದೇಹ ಭೇದಿಕಾ’ ಗ್ರಂಥ, ಸಂಸ್ಕೃತ ವ್ಯಾಕರಣಕ್ಕೆ ಸಂಬಂಧಿಸಿದ ಭಟ್ಟೋಜಿ ದೀಕ್ಷಿತರ ಸಿದ್ಧಾಂತ ಕೌಮುದಿ, ಸಂಗೀತ ಶಾಸ್ತ್ರದ ‘ಸಂಗೀತ ಚೂಡಾಮಣಿ’ ಇಲ್ಲಿವೆ.
ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ರಾಮಾಯಣ, ಮಹಾಭಾರತ, ಜೈಮಿನಿ ಭಾರತ, ಕುಮಾರವ್ಯಾಸ ಭಾರತ, ದಾಸ ಸಾಹಿತ್ಯ, ತುರಂಗ ಭಾರತ ಕುರಿತ ಹಸ್ತಪ್ರತಿಗಳಿವೆ. ಅಪರೂಪದ ಕಳಲೆ ನಂಜರೂಪ ಕವಿಯ ಬದಿರಾಚಲ ಮಹಾತ್ಮೆ ಸೇರಿದಂತೆ ಇನ್ನು ಅನೇಕ ಹಸ್ತಪ್ರತಿಗಳಿವೆ. ಸರ್ ಎಂ. ವಿಶ್ವೇಶ್ವರಯ್ಯ, ರಾಜಗೋಪಾಲಾಚಾರ್ಯ, ಸರ್ ಮಿರ್ಜಾ ಇಸ್ಮಾಯಿಲ್, ಜಯಚಾಮರಾಜೇಂದ್ರ ಒಡೆಯರ್ ಅವರ ಬರವಣಿಗೆಯ ಪತ್ರಗಳು ಇಲ್ಲಿನ ಆಕರ್ಷಣೆ.
ಪುರಾತನ ಆಭರಣಗಳು
ಆ ಕಾಲದ ಮಹಿಳೆಯರು ಧರಿಸುತ್ತಿದ್ದ ವಿವಿಧ ಆಭರಣಗಳು, ಅಡುಗೆ ಸಾಮಗ್ರಿಗಳು, ಯುದ್ಧ ಕಾಲದಲ್ಲಿ ಸೈನಿಕರು ಧರಿಸುತ್ತಿದ್ದ ದಿರಿಸು ಹೀಗೆ ಹಲವಾರು ವಸ್ತುಗಳನ್ನು ನೋಡಬಹುದಾಗಿದೆ. ಐದು ಅಡಿ ಎತ್ತರದ ಮರದ ಕಡಗೋಲು, ಅಳತೆ ಸಾಮಗ್ರಿಗಳು, ಆ ಕಾಲದಲ್ಲಿ ಬಳಸುತ್ತಿದ್ದ ನಾಣ್ಯಗಳು, ಬಾಚಣಿಕೆ, ಚಾಮರ, ಸೂಕ್ಷ್ಮ ಕೆತ್ತನೆಯ ಕಾಶೀ ತಂಬಿಗೆಗಳಿವೆ. ಯುದ್ಧದಲ್ಲಿ ಬಳಸುತ್ತಿದ್ದ ಫಿರಂಗಿ ಗುಂಡು, ಕತ್ತಿಗಳನ್ನು ಗಮನಿಸಬಹುದು. ಹೀಗೆ ನೋಡುವ ಪಯಣದುದ್ದಕ್ಕೂ ಕೌತುಕ, ಊರಿನವರೇ ಆದರೆ ಹೆಮ್ಮೆ ಎರಡೂ ನಮ್ಮನ್ನು ಹಿಂಬಾಲಿಸುತ್ತವೆ.
ಶಿಬಿರ, ವಿಚಾರ ಸಂಕಿರಣ
ಸಂಗ್ರಹಾಲಯದಲ್ಲಿ ವರ್ಷಕ್ಕೆ ಮೂರು ನಾಲ್ಕು ಬಾರಿ ತಾಳೆಗರಿ ಲಿಪಿ ಕಲಿಸುವ ಶಿಬಿರ ಸೇರಿದಂತೆ ಇತಿಹಾಸ ಕುರಿತು ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗುತ್ತದೆ. ಉತ್ತಮ ಗ್ರಂಥಾಯಲವಿದೆ. ಪಿಎಚ್.ಡಿ, ಬಿ.ಎಡ್, ಇತಿಹಾಸ ಕುರಿತ ಅಧ್ಯಯನ ನಡೆಸುವವರಿಗೆ ಸಂಗ್ರಹಾಲಯ ಸದಾ ತೆರೆದಿರುತ್ತದೆ. ಈ ಸಂಗ್ರಹಾಲಯ ಇತಿಹಾಸದ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದೆ.
ಇಡೀ ವಸ್ತು ಸಂಗ್ರಹಾಲಯವನ್ನು ನೋಡಿಬಂದ ಮೇಲೆ ನಾವು ಕೆಳದಿ ಅರಸರನ್ನು ಮರೆತಿದ್ದೇವೆ. ಅಂತೆಯೇ ಅವರ ಕೊಡುಗೆಗಳು. ಅಲ್ಲಿನ ಸಿಬ್ಬಂದಿ ಬಹಳ ಅಧ್ಯಯನಶೀಲರಾಗಿದ್ದಾರೆ. ಆಳವಾದ ಇತಿಹಾಸ ಜ್ಞಾನವಿರುವ ಅವರು ಒಂದೊಂದನ್ನು ವಿವರಿಸುತ್ತಾ ಸಾಗುತ್ತಿದ್ದರೆ ಕೆಳದಿ ಸಂಸ್ಥಾನದ ಒಟ್ಟು ಚಿತ್ರಣ ನಮ್ಮ ಪಾಲಿನದು.
ರಾಣಿ ವಿಕ್ಟೋರಿಯಾ ಹೃದಯದಲ್ಲಿ ಭಾರತ!
ಸಾಗರದ ಕವಿ ಲಿಂಗಣ್ಣಯ್ಯ ಅವರು 1918ರಲ್ಲಿ ರಾಣಿ ವಿಕ್ಟೋರಿಯಾ ಚಿತ್ರ ರಚಿಸಿದ್ದಾರೆ. ಆ ಚಿತ್ರದಲ್ಲಿ ಸೂರ್ಯಮುಳುಗದ ಸಾಮ್ರಾಜ್ಯವನ್ನು ಬಹಳ ಅಂದವಾಗಿ ಮೂಡಿಸಿದ್ದಾರೆ. ಇಂಗ್ಲೆಂಡ್ ಸಾಮ್ರಾಜ್ಯದ ಎಲ್ಲಾ ರಾಷ್ಟ್ರಗಳೂ ಆ ಚಿತ್ರದಲ್ಲಿದೆ. ರಾಣಿಯ ಹೃದಯ ಭಾಗದಲ್ಲಿ ಭಾರತವನ್ನು ಬಿಡಿಸಲಾಗಿದೆ. ಇದು ಆ ಚಿತ್ರದ ವಿಶೇಷ.
ಚಿತ್ರದಲ್ಲಿದೆ ಗೀತೆ: ಶ್ರೀಕೃಷ್ಣ ಅರ್ಜುನನಿಗೆ ಭಗವದ್ಗೀತೆ ಹೇಳುತ್ತಿರುವ ಚಿತ್ರ. ಚಿತ್ರವನ್ನು ಸ್ವಲ್ಪ ಗಮನವಿಟ್ಟು ನೋಡಿದರೆ, ಅದರ ಮೇಲೆ ಗೀತೆ ರಚನೆಯಾಗಿರುವುದು ಕಾಣುತ್ತದೆ. ಅದು ಸಂಸ್ಕೃತದಲ್ಲಿದೆ. ಈ ಚಿತ್ರ ಬಿಡಿಸಲು ಕಲಾವಿದರು ಸುಮಾರು ಎರಡು ವರ್ಷ ತೆಗೆದುಕೊಂಡಿದ್ದಾರೆ. ಜತೆಗೆ, ವಿಕಾಸಸೌಧದ ಗ್ರಂಥಾಲಯದ ಪ್ರಾರಂಭದಲ್ಲೂ ಈ ಚಿತ್ರವನ್ನು ಕಾಣಬಹುದಾಗಿದೆ.
ಮೂಲ ಸೌಕರ್ಯದ ಕೊರತೆ
ಇಂಥ ಅಪರೂಪದ ಸಂಗ್ರಹಾಲಯಕ್ಕೆ ಮೂಲ ಸೌಕರ್ಯದ ಕೊರತೆ ಕಾಡುತ್ತಿದೆ. ಸರಿಯಾದ ಕಟ್ಟಡವಿಲ್ಲ. ಮತ್ತಷ್ಟು ಸಲಕರಣೆಗಳು ಬೇಕಾಗಿವೆ. ಹಳೆಯ ಕಾಲದ ನಾಣ್ಯಗಳು, ಆಭರಣಗಳು, ಪಾತ್ರೆಗಳನ್ನು ದೊಡ್ಡ ದೊಡ್ಡ ಬಾಕ್ಸ್‌ಗಳಲ್ಲಿ ಇಡಲಾಗಿದೆ. ಪ್ರವಾಸಿಗರು ಅವುಗಳ ಮೇಲಿನ ಸೂಕ್ಷ್ಮ ಕೆತ್ತನೆಗಳನ್ನ ಗಮನಿಸಲು ಸರಿಯಾದ ವಿದ್ಯುತ್ ವ್ಯವಸ್ಥೆ ಇಲ್ಲ. ಪ್ರವಾಸೋದ್ಯಮ ಉತ್ತೇಜನಕ್ಕಾಗಿ ವೆಬ್‌ಸೈಟ್ ಕೂಡ ಇದೆ. ಆದರೆ, ಅದೂ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ ಎನ್ನುತ್ತಾರೆಸಂಗ್ರಹಾಲಯದ ಸಹಾಯಕ ಕ್ಯುರೇಟರ್ ಜಿ.ವಿ.ಕಲ್ಲಾಪುರ.
ಒಂದು ಕಾಲದಲ್ಲಿ ಜನರು ಬೇಡವಾದ ದೇವರ ಮೂರ್ತಿಗಳನ್ನು ಜಲಸಮಾಧಿ ಮಾಡುತ್ತಿದ್ದರು. ಈಗ ಜನರಲ್ಲಿ ಅರಿವು ಮೂಡುತ್ತಿದೆ. ದೇವರ ಮೂರ್ತಿಗಳನ್ನು ಸಾಂಕೇತಿಕವಾಗಿ ನೀರಿನಲ್ಲಿ ಮುಳುಗಿಸಿ, ಇಲ್ಲಿಗೆ ತಂದು ಕೊಡುತ್ತಿದ್ದಾರೆ. ಅಂಥ ಮೂರ್ತಿಗಳನ್ನು ರಕ್ಷಿಸಲು ಜಾಗ ಬೇಕು. ಹೇಳುತ್ತಾ ಹೋದರೆ ಇನ್ನೂ ಹಲವು ಸಮಸ್ಯೆಗಳಿವೆ’ ಎನ್ನುತ್ತಾರೆ.
‘ಕೆಳದಿ ಅರಸರನ್ನು, ಅವರ ಕೊಡುಗೆಗಳನ್ನು ಬಹುಪಾಲು ಮರೆತಿದ್ದೇವೆ. ಹೀಗಾಗಿ ಈ ಸಂಗ್ರಹಾಲಯವೂ ನಿರ್ಲಕ್ಷಕ್ಕೆ ಒಳಗಾಗುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.
ಅನುದಾನ ಇಲ್ಲ; ವೇತನವೂ ಇಲ್ಲ
2005ರಲ್ಲಿ ಕುವೆಂಪು ವಿಶ್ವವಿದ್ಯಾಲಯ ಹಾಗೂ ಸರ್ಕಾರದ ನಡುವಿನ ಒಪ್ಪಂದದಂತೆ, 10 ವರ್ಷಗಳ ಕಾಲ ಸರ್ಕಾರ ಸಂಗ್ರಹಾಲಯಕ್ಕೆ ಅನುದಾನ ನೀಡಬೇಕು. ನಂತರ ಸಂಗ್ರಹಾಲಯವು ವಿಶ್ವವಿದ್ಯಾಲಯದಲ್ಲಿ ವಿಲೀನವಾಗುತ್ತದೆ. ಈ ಅವಧಿ ಮುಗಿದ ನಂತರ ಸಂಗ್ರಹಾಲಯದ ಅಭಿವೃದ್ಧಿ ಗಮನಿಸಿ ಅನುದಾನ ಬಿಡುಗಡೆ ಮಾಡುವುದಾಗಿ ಸರ್ಕಾರ ಹೇಳಿತ್ತು.
ಸರ್ಕಾರ 5 ವರ್ಷಗಳವರೆಗೆ ಅನುದಾನ ನೀಡಿತ್ತು. ಈಗ ನಿಲ್ಲಿಸಿದೆ. ಅಲ್ಲಿಂದ ಜುಲೈ 2018ರವರೆಗೂ ವಿಶ್ವವಿದ್ಯಾಲಯವೇ ಸಂಗ್ರಹಾಲಯವನ್ನು ನೋಡಿಕೊಂಡಿದೆ. ಜುಲೈ ನಂತರ ‘ಸರ್ಕಾರದಿಂದ ನಮಗೆ ಯಾವುದೇ ಅನುದಾನ ಇಲ್ಲ’ ಎಂದು ಕಾರಣ ನೀಡಿ ವಿಶ್ವವಿದ್ಯಾಲಯ ನಮಗೆ ಅನುದಾನ ನಿಲ್ಲಿಸಿತು. ಅಷ್ಟೇ ಅಲ್ಲ, ‘ನಮಗೆ ಸಂಗ್ರಹಾಲಯ ನೋಡಿಕೊಳ್ಳಲು ಸಾಧ್ಯವಿಲ್ಲ. ಅದನ್ನು ನೀವು ವಾಪಸ್ ತೆಗೆದುಕೊಳ್ಳಿ’ ಎಂದು ಸರ್ಕಾರಕ್ಕೆ ಪತ್ರ ಬರೆದಿದೆ. ಹಾಗಾಗಿ ಈ ವರ್ಷದ ಜುಲೈನಿಂದ ನಮಗೆ ಯಾರಿಗೂ ಸಂಬಳ ಇಲ್ಲ’ ಎನ್ನುತ್ತಾರೆ ಸಂಗ್ರಹಾಲಯದ ಕ್ಯುರೇಟರ್ ವೆಂಕಟೇಶ್ ಜೋಯಿಸ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.