ಅಕ್ಟೋಬರ್ 23 ರಿಂದ 25 ರವರೆಗೆ ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ ನಡೆಯಲಿದೆ. ಈ ಸಂಸ್ಥಾನದಲ್ಲಿ ರಥಗಳೂ ಇದ್ದವು ಎನ್ನವುದನ್ನು ಜಾನಪದ ವಿದ್ವಾಂಸರು, ಸಂಶೋಧಕರು ದಾಖಲೆ ಸಹಿತ ಅನಾವರಣಗೊಲಿಸಿದ್ದಾರೆ.
ಆಂಗ್ಲೋ–ಕಿತ್ತೂರು ಯುದ್ಧದಲ್ಲಿ ರಾಣಿ ಚನ್ನಮ್ಮ ದಾಖಲಿಸಿದ ದಿಗ್ವಿಜಯಕ್ಕೆ ಈಗ ಇನ್ನೂರು ವಸಂತಗಳು. ಇಡೀ ದೇಶವನ್ನು ಆಕ್ರಮಿಸಿಕೊಳ್ಳಲು ದಂಡಯಾತ್ರೆಗೆ ನಿಂತಿದ್ದ ಈಸ್ಟ್ ಇಂಡಿಯಾ ಕಂಪನಿ ಸೈನ್ಯವನ್ನು ಅಟ್ಟಾಡಿಸಿ, ದಿಕ್ಕೆಟ್ಟು ಓಡುವಂತೆ ಮಾಡಿದ ಕಿತ್ತೂರು ಕಲಿತನ ಇತಿಹಾಸದ ಪುಟಗಳಲ್ಲಿದೆ. ಎರಡು ಶತಮಾನಗಳ ಬಳಿಕವೂ ಆ ವಿಜಯದ ರೋಚಕತೆ, ರೋಮಾಂಚನ ಕಡಿಮೆಯಾಗಿಲ್ಲ. ಇಷ್ಟೇ ಭಾವುಕ ಕಂಪನಗಳನ್ನು ಆ ಯುದ್ಧ ಇನ್ನೂರು ವರ್ಷಗಳ ಹಿಂದೆಯೂ ಹುಟ್ಟಿಸಿತ್ತು ಎಂಬುದನ್ನು ಜನಪದರು ಪದ ಕಟ್ಟಿ ಹಾಡಿದ್ದಾರೆ.
ಕಿತ್ತೂರು ದೇಸಗತಿಯ ಇತಿಹಾಸ ಹೆಚ್ಚಾಗಿ ದಾಖಲಾಗಿರುವುದು ಜನಕಥನಗಳಲ್ಲೇ. ಇಂಥದ್ದೇ ಒಂದು ಜನಕಥನ ಈಗ ರಾಣಿ ಚನ್ನಮ್ಮ ರಥದಲ್ಲಿ ಸಂಚರಿಸುತ್ತಿದ್ದಳು ಎಂಬುದನ್ನು ದಾಖಲಿಸಿದೆ. ಚನ್ನಮ್ಮನ ಬಳಿ ರಥವೂ ಇತ್ತು, ರಥದಲ್ಲಿ ಸಂಚಾರ ಕೂಡ ಮಾಡುತ್ತಿದ್ದಳು ಎಂಬ ಅಭಿಪ್ರಾಯವನ್ನು ಜಾನಪದ ವಿದ್ವಾಂಸ, ಸಂಶೋಧಕ ಪ್ರೊ.ಸಿ.ಕೆ.ನಾವಲಗಿ ದಾಖಲಿಸಿದ್ದಾರೆ.
ಗಂಡುಗಚ್ಚೆ ಹಾಕಿ, ಕುದುರೆ ಮೇಲೆ ಕುಳಿತು, ಎಡಗೈಯಲ್ಲಿ ಲಗಾಮು, ಬಲಗೈಯಲ್ಲಿ ಖಡ್ಗ ಎತ್ತಿಹಿಡಿದ ಪ್ರತಿಮೆಯನ್ನೇ ನಾವು ರಾಣಿ ಚನ್ನಮ್ಮನ ರೂಪ ಎಂದು ಒಪ್ಪಿಕೊಂಡಿದ್ದೇವೆ. ಇದುವರೆಗೂ ಚನ್ನಮ್ಮನನ್ನು ಕಾಣುವುದು, ನೆನೆಸಿಕೊಳ್ಳುವುದು, ಪೂಜಿಸುವುದು ಇದೇ ರೂಪದಲ್ಲಿ. ಆದರೆ, ಚನ್ನಮ್ಮ ರಥದಲ್ಲೂ ಸಂಚಾರ ಮಾಡಿದ್ದಳು ಎನ್ನುವ ಅಂಶ ಇತಿಹಾಸಕ್ಕೆ ಹೊಸ ಬೆಳಕು ನೀಡುವಂಥದ್ದು.
ಇಲ್ಲಿವೆ ರಥದ ಅವಶೇಷ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲಹಳ್ಳಿಯ ಭುಜಬಲ ಹನಮಗೊಂಡ ಅವರ ಮನೆ ಪಕ್ಕದ ಖಾಲಿಜಾಗದಲ್ಲಿ ಈ ರಥದ ಎರಡು ಚಕ್ರಗಳು ಸಿಕ್ಕಿವೆ. ಹನಮಗೊಂಡ ಮನೆತನದವರು ತಲೆತಲಾಂತರಗಳಿಂದ ಈ ಚಕ್ರಗಳನ್ನು ‘ಚನ್ನಮ್ಮನ ರಥ’ ಎಂದೇ ಪೂಜಿಸುತ್ತ ಬಂದಿದ್ದಾರೆ. ಇದೇ ಜಾಗದಲ್ಲಿ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಕಾರಹುಣ್ಣಿಮೆಯ ಕರಿಹರಿಯುವ ದಿನದಂದು ಎತ್ತುಗಳ ಪೂಜೆ ಮಾಡುತ್ತ ಬಂದಿದ್ದಾರೆ. ಈಗಲೂ ಅದೇ ಪದ್ಧತಿ ಮುಂದುವರಿದಿದೆ.
ಇದು ಚನ್ನಮ್ಮನದ್ದೇ ರಥ ಎಂಬ ಸಂಗತಿಯನ್ನು ಊರ ಹಿರಿಯರು ಬಾಯಿಯಿಂದ ಬಾಯಿಗೆ ದಾಟಿಸುತ್ತ ಬಂದಿದ್ದಾರೆ. ಗ್ರಾಮಸ್ಥ ಶ್ರೀಶೈಲ ಬಸಪ್ಪ ಸಾವಂತ ಇವುಗಳ ಕುರಿತು ಸಂಶೋಧಕರ ಗಮನ ಸೆಳೆದರು. ಸಾಹಿತಿ, ವಕೀಲರೂ ಆದ ಜಮಖಂಡಿಯ ತಾತಾಸಾಹೇಬ ಬಾಂಗಿ ಪರಿಶೀಲಿಸಿ ಖಾತ್ರಿ ಮಾಡಿಕೊಂಡರು. ಪ್ರೊ.ನಾವಲಗಿ ಅದನ್ನು ಕೆದಕಿ, ಜನಕಥನದ ಸನ್ನಿವೇಶಗಳಲ್ಲಿ ಇದರ ಮಾತು ಇದೆಯೇ ಎಂದು ತಡಕಾಡಿದರು. ತಾರ್ಕಿಕ ಅಂತ್ಯಕ್ಕೆ ತಂದು ನಿಲ್ಲಿಸಿದರು.
ದಶಕಗಳ ಹಿಂದೆ ಈ ಚಕ್ರಗಳು ಪೂರ್ಣಪ್ರಮಾಣದಲ್ಲಿದ್ದವು. ಕಾಲ ಕಳೆದಂತೆ ಶಿಥಿಲಗೊಂಡಿವೆ. ಚಕ್ರದ ಮಧ್ಯಭಾಗ ಅಚ್ಚ ಹಾಕುವ ಗಡ್ಡಿಯು ಕಬ್ಬಿಣ ಮತ್ತು ಮರದಿಂದ ತಯಾರಾಗಿದೆ. ಅದರ ಸುತ್ತಲೂ ವೃತ್ತಾಕಾರದ ಕಟ್ಟಿಗೆಯ ಹಲಗೆ ಇದೆ. ಅದರ ಸುತ್ತಲಿನ ಅಂಚಿಗೆ ಎರಡು ಇಂಚು ದಪ್ಪನಾದ ಕಬ್ಬಿಣದ ಬಳೆ ಆಕಾರದ ಹಳಿ ಹಾಕಲಾಗಿದೆ.
ಜಮಖಂಡಿಯಲ್ಲೇ ಏಕೆ?
ಕಿತ್ತೂರು ಸಂಸ್ಥಾನದ ಸಮೃದ್ಧ ಸಂಪತ್ತಿನ ಮೇಲೆ ಪಟವರ್ಧನ ರಾಜರಿಗೆ ತುಂಬ ವ್ಯಾಮೋಹವಿತ್ತು. ಈಗ ಕಲಹಳ್ಳಿಯಲ್ಲಿ ಸಿಕ್ಕಿರುವ ರಥದ ಗಾಲಿಗಳು ಜಮಖಂಡಿಯ ಪಟವರ್ಧನ ಸಂಸ್ಥಾನದ ದೊರೆಗಳ ಸಂಚಿನಿಂದಾಗಿ ಅಲ್ಲಿಗೆ ಒಯ್ದಿರುವ ಸಾಧ್ಯತೆ ಇದೆ. ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಹಲವಾರು ದಾಖಲೆಗಳು, ಅವಶೇಷಗಳು ಜಮಖಂಡಿ ಸುತ್ತಲಿನ ಪ್ರದೇಶದಲ್ಲಿ ಕಂಡುಬರುತ್ತವೆ. ಕಿತ್ತೂರು ಸಂಸ್ಥಾನದ ಪಲ್ಲಕ್ಕಿಯೊಂದು ಜಮಖಂಡಿ ಪಟವರ್ಧನ ಸಂಸ್ಥಾನದ ಅರಸರ ಬಳಿ ಇತ್ತು. ಲಿಲಾವ್ ನಡೆದ ಸಂದರ್ಭದಲ್ಲಿ ಆಗಿನ ನಿಡಸೋಸಿ ಮಠದ ಸ್ವಾಮೀಜಿ ಖರೀದಿಸಿದ್ದರು. ಈಗಲೂ ಆ ಪಲ್ಲಕ್ಕಿ ನಿಡಸೋಸಿ ಮಠದಲ್ಲಿದೆ ಎಂಬುದನ್ನು ಸಂಶೋಧಕರಾದ ಸುಭಾಷ ಹಿರೇಮಠ ಹಾಗೂ ರು.ಮ.ಷಡಕ್ಷರಯ್ಯ ಖಚಿತಪಡಿಸುತ್ತಾರೆ.
ಕಿತ್ತೂರು ಸಂಸ್ಥಾನದಲ್ಲಿ ಸಿಂಹಾಸನ, ಪಲ್ಲಕ್ಕಿಗಳು ಇದ್ದ ಬಗ್ಗೆ ಬ್ರಿಟಿಷ್ ಅಧಿಕಾರಿಗಳು ನಡೆಸಿದ ಪತ್ರ ವ್ಯವಹಾರಗಳಲ್ಲಿ ದಾಖಲೆ ಸಿಕ್ಕಿವೆ. ಅಂಥದ್ದೇ ದಾಖಲೆಗಳು ರಥದ ಬಗ್ಗೆಯೂ ಇರುವ ಸಾಧ್ಯತೆ ಇದೆ. ಆ ಬಗ್ಗೆ ಸಂಶೋಧನೆ ನಡೆಯಬೇಕಿದೆ. ಈ ಸಂಸ್ಥಾನಕ್ಕೆ ಸಂಬಂಧಿಸಿದ ಅಪಾರ ಪ್ರಮಾಣದ ದಾಖಲೆಗಳು, ಪತ್ರಗಳು ಲಂಡನ್ನಿನಲ್ಲಿ, ಮುಂಬೈ ಹಾಗೂ ಪುಣೆಯ ಪತ್ರಾಗಾರದಲ್ಲಿ ಉಳಿದುಕೊಂಡಿವೆ. ಅವುಗಳನ್ನು ಮರಳಿ ತಂದು ಶೋಧಿಸಬೇಕಿದೆ. ದೇವಗಾವಿಯ ಶಾಸನದಲ್ಲಿ ಕಿತ್ತೂರಿನ ರಾಜಬೀದಿಯ ಉಲ್ಲೇಖವಿದೆ. ಲಾವಣಿಗಳಲ್ಲೂ ರಾಜಬೀದಿಯ ಸ್ತುತಿ ಸಾಲುಗಳಿವೆ. ಹಾಗಾಗಿ, ಶೋಧ ಜಿಜ್ಞಾಸೆಯಿಂದ ಹೊರಬಂದು ಮೌಖಿಕ ಆಕರಗಳ ನೆಲೆಯಲ್ಲೇ ಇದನ್ನು ಖಾತ್ರಿಪಡಿಸಬಹುದು’ ಎಂಬುದು ನಾವಲಗಿ ಅವರ ವಿವರಣೆ.
ನರಗುಂದ ಬಂಡಾಯ, ಹಲಗಲಿ ಬೇಡರ ಕದನ ಇತ್ಯಾದಿ ಘಟನೆಗಳಲ್ಲಿ ಬ್ರಿಟಿಷರು ನಿಶಸ್ತ್ರೀಕರಣ ಕಾಯ್ದೆ ಜಾರಿಗೆ ತಂದು, ನಮ್ಮವರಲ್ಲಿದ್ದ ಶಸ್ತ್ರ–ಅಸ್ತ್ರಗಳನ್ನು ರಥದಲ್ಲಿ ಹೇರಿಕೊಂಡು ಹೋದರು ಎನ್ನುವ ಉಲ್ಲೇಖಗಳಿವೆ. ಆ ಕಾಲದಲ್ಲಿ ನಮ್ಮಲ್ಲಿ ರಥಗಳ ಬಳಕೆ ಇತ್ತು ಎಂಬುದನ್ನು ಈ ಸಾಲು ದೃಢಪಡಿಸುತ್ತದೆ. ಕಿತ್ತೂರು ಸಂಸ್ಥಾನದಲ್ಲಿ ಪಲ್ಲಕ್ಕಿ, ಮೇನೆ, ರಥ ಇರಲೇಬೇಕು. ಕಿತ್ತೂರು ರಾಜಸೀಮೆಯು ಗೋವೆಯವರೆಗೂ ಹರಡಿತ್ತು. ಹಲಸಿ, ನಂದಘಡ, ಖಾನಾಪುರ, ಬೆಳಗಾವಿ, ಸಂಪಗಾವಿ, ಕಾಕತಿ ಮುಂತಾದ ಪ್ರದೇಶಗಳಿಗೆ ಹೋಗಿ ಬರಲು ರಾಜ–ರಾಣಿಯರು ರಥವನ್ನು ಬಳಸಿದ್ದಾರೆ. ಆಂಗ್ಲೋ–ಕಿತ್ತೂರು ಯುದ್ಧದಲ್ಲೂ ರಥ ಬಳಸಿರುವ ಸಾಧ್ಯತೆ ಇದೆ. ಈ ಬಗ್ಗೆ ಸಂಶೋಧನೆಗೆ ಮುಂದಾಗಬೇಕಿದೆ’ ಎಂಬುದನ್ನು ಅವರು ತಲಸ್ಪರ್ಶಿ ಅಧ್ಯಯನದಲ್ಲಿ ತಿಳಿಸಿದ್ದಾರೆ.
‘ಈ ಚಕ್ರಗಳು ಆ ಕಾಲದ ಜನ ಸಂಚಾರಕ್ಕೆ ಬಳಸುತ್ತಿದ್ದ ಕುದುರೆಗಾಡಿಯ ಗಾಲಿಗಳು ಆಗಿರಬಹುದೇ’ ಎಂಬ ಸಂದೇಹವೂ ಸಂಶೋಧಕರನ್ನು ಕಾಡಿದೆ.
‘ಟಾಂಗಾದ ಗಾಲಿಗಳ ಆಕಾರ ಚಿಕ್ಕದು ಮತ್ತು ಬಹುಭಾಗ ಕಟ್ಟಿಗೆಯಿಂದ ಮಾಡಲಾಗಿರುತ್ತದೆ. ಕಲಹಳ್ಳಿಯಲ್ಲಿ ಸಿಕ್ಕ ಚಕ್ರಗಳು ಮೆಟಲ್‌ನಿಂದ ಮಾಡಲಾಗಿವೆ. ಗಾತ್ರದಲ್ಲೂ ದೊಡ್ಡದಿವೆ. ಇವುಗಳನ್ನು ರಥದ ಚಕ್ರಗಳೇ ಎಂದು ಸ್ಪಷ್ಟವಾಗಿ ಗುರುತಿಸಲು ಸಾಧ್ಯ’ ಎನ್ನುತ್ತಾರೆ ಪ್ರೊ.ನಾವಲಗಿ.
ಕಿತ್ತೂರು ಸಂಸ್ಥಾನದ ಅವಶೇಷಗಳು, ಸಂಪತ್ತು ನಮ್ಮ ಸುತ್ತಲಿನ ಪ್ರದೇಶದಲ್ಲೇ ಅವಿತಿವೆ. ಅವುಗಳನ್ನು ಶೋಧಿಸಿ ವಸ್ತುಸಂಗ್ರಹಾಲಯಕ್ಕೆ ಸೇರಿಸಬೇಕು ಎಂಬುದು ನಾಡಾಭಿಮಾನಿಗಳ ಹಂಬಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.