ADVERTISEMENT

ಜೀವನೋತ್ಸಾಹದ ಚಿಲುಮೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 19:30 IST
Last Updated 1 ಆಗಸ್ಟ್ 2020, 19:30 IST
ಪದವಿ ಪಡೆದ ಖುಷಿಯಲ್ಲಿ ಕುಟುಂಬದ ಸದಸ್ಯರ ಜತೆ...
ಪದವಿ ಪಡೆದ ಖುಷಿಯಲ್ಲಿ ಕುಟುಂಬದ ಸದಸ್ಯರ ಜತೆ...   

ಚಿತ್ರದಲ್ಲಿರುವ ತಾತನನ್ನು ಒಮ್ಮೆ ನೋಡಿ. ಇವರ ಹೆಸರು ಗುಸೆಪ್ಪೆ ಪೆಟರ್ನೊ ಎಂದು. ಇಟಲಿ ದೇಶದ ಪ್ರಜೆ. ವಯಸ್ಸು ಈಗ ಕೇವಲ 96! ಇಲ್ಲಿ ‘ಕೇವಲ’ ಎಂಬ ವಿಶೇಷಣ ಏಕಪ್ಪ ಅಂದ್ರೆ, ಇಟಲಿಯ ವಿಶ್ವವಿದ್ಯಾಲಯದಿಂದ ಈಗಷ್ಟೇ ಅವರು ಪದವಿ ಪೂರೈಸಿದ್ದಾರೆ. ಬಾಲ್ಯದಲ್ಲಿ ಬಡತನವನ್ನೂ ಹಲವು ಯುದ್ಧಗಳನ್ನೂ ಕಂಡಿರುವ ಈ ಹಿರಿಯ ಜೀವ ಈಗ ಕೋವಿಡ್‌ನ ಬಿಕ್ಕಟ್ಟಿಗೂ ಸಾಕ್ಷಿ. ಗುಸೆಪ್ಪೆ ಅವರ ಸುದೀರ್ಘ ಜೀವನ ಯಾತ್ರೆಯಲ್ಲಿ ಸಾಮಾಜಿಕ, ರಾಜಕೀಯ ಸ್ಥಿತ್ಯಂತರಗಳು ಏನೇ ಘಟಿಸಿರಲಿ, ಅವರಿಗೆ ಮಾತ್ರ ನಿರಂತರ ಓದಿನ ಹಸಿವು. ರೈಲ್ವೆ ಇಲಾಖೆಯ ಈ ನಿವೃತ್ತ ನೌಕರನಿಗೆ ಇತಿಹಾಸ ಹಾಗೂ ತತ್ವಶಾಸ್ತ್ರದಲ್ಲಿ ಪದವಿ ಪಡೆಯುವ ಬಯಕೆ ಉಂಟಾಯಿತು.

‘ಈಗಾಗಲೇ 90ರ ಗಡಿ ದಾಟಿರುವ ನನಗೆ ಮೂರು ವರ್ಷಗಳ ಪದವಿಯನ್ನು ಪೂರ್ಣಗೊಳಿಸಲು ಸಾಧ್ಯವೇ’ ಎಂದು ಈ ಅಜ್ಜ, ತಲೆ ಕೆರೆದುಕೊಂಡು ಯೋಚಿಸಿದರು. ಈಗ ಪದವಿಗೆ ಪ್ರವೇಶ ಪಡೆಯದಿದ್ದರೆ ಇನ್ನೆಂದೂ ಸಾಧ್ಯವಿಲ್ಲ ಎಂದು ತೀರ್ಮಾನಿಸಿ, ಸೀದಾ ಪಲೆರ್ಮೊ ವಿಶ್ವವಿದ್ಯಾಲಯಕ್ಕೆ ಹೋಗಿ ಹೆಸರು ನೋಂದಾಯಿಸಿಯೇಬಿಟ್ಟರು.

‘ನನಗೆ ಪುಸ್ತಕಗಳೆಂದರೆ ತುಂಬಾ ಪ್ರೀತಿ. ಆದರೆ, ಯುವಕನಾಗಿದ್ದಾಗ ಪದವಿ ಪಡೆಯುವ ಆಸೆ ಈಡೇರಿರಲಿಲ್ಲ. ಒಂದಲ್ಲ ಒಂದು ದಿನ ಪದವಿ ಅಧ್ಯಯನದ ಅವಕಾಶ ಕೂಡಿಬರುತ್ತದೆ ಎಂಬ ನಿರೀಕ್ಷೆ ಮೊದಲಿನಿಂದಲೂ ಇತ್ತು. ಬರೀ ವಯಸ್ಸಾಗಿದೆ, ಶಿಕ್ಷಣ ಎಲ್ಲಿದೆ ಎಂಬ ಕೊರಗು ಈಗ ನೀಗಿದೆ’ ಎಂದು ಖುಷಿಯಿಂದ ಪ್ರತಿಕ್ರಿಯಿಸುತ್ತಾರೆ ಈ ತಾತ.

ADVERTISEMENT

ಪಲೆರ್ಮೊ ವಿಶ್ವವಿದ್ಯಾಲಯವು ತನ್ನ ಅತ್ಯಂತ ಹಿರಿಯ ವಿದ್ಯಾರ್ಥಿಗೆ ತಕ್ಕ ಗೌರವವನ್ನೇ ನೀಡಿದೆ. ಘಟಿಕೋತ್ಸವ ಆರಂಭವಾದೊಡನೆ ಮೊದಲ ಪದವಿಯನ್ನು ಈ ಅಜ್ಜನಿಗೆ ಪ್ರದಾನ ಮಾಡಿದೆ. ಗುಸೆಪ್ಪೆ ಅವರು ಈಗ ಇಟಲಿಯ ಅತ್ಯಂತ ಹಿರಿಯ ವಯಸ್ಸಿನ ಪದವಿ ವಿದ್ಯಾರ್ಥಿ ಎಂಬ ದಾಖಲೆಯನ್ನೂ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.