ಎದೆಯಗ್ಗಿ (ನಾ). ಎದೆಯ ಅಗ್ನಿ - ಸಂತಾಪ.
(ಎದೆ+ಅಗ್ಗಿ)
ದಶರಥ ಮಹಾರಾಜನು ಒಮ್ಮೆ ತನ್ನ ಅರಮನೆಯ ಸಂಪದ್ಭರಿತ ತೋಟದಲ್ಲಿ ತಿರುಗಾಡುತ್ತಿದ್ದನು. ಅಲ್ಲಿ ಒಂದು ತಾಯಿ ಗುಬ್ಬಚ್ಚಿ ಬಾಯಿ ತೆರೆದ ಮರಿಗೆ ಗುಟುಕು ಕೊಡುತ್ತಿದ್ದುದನ್ನು ನೋಡಿದನು. ಮಕ್ಕಳನ್ನು ಪಡೆದ ಹಕ್ಕಿಯ ಸಿರಿತನವು ಚಕ್ರವರ್ತಿಗೆ ತನ್ನ ಬಡತನವನ್ನು ಮೂದಲಿಸಿದಂತಾಯಿತು. ಉದ್ಯಾನದಿಂದ ಹಿಂತಿರುಗಿ, ಗುರು ವಾಮದೇವ, ವಸಿಷ್ಠ, ಸಚಿವರನ್ನು ಕರೆಸಿ,
ಓ ವಂದ್ಯರಿರ;
ತವಿಸಿಮೆನ್ನೆದೆಯಗ್ಗಿಯಂ, ಬರಿಸೆ ಸುಗ್ಗಿಯಂ’
ಎಂದು ಹೇಳಿದನು.
ಕುವೆಂಪು ಅವರು ಈ ಮಾತಿನಲ್ಲಿ ದಶರಥನ ಎದೆಯಲ್ಲಿ ಬೆಂಕಿಯಂತೆ ಆವರಿಸಿ ಪುತ್ರಾಪೇಕ್ಷೆಯುಂಟಾದುದನ್ನು ಅಭಿವ್ಯಕ್ತಿಸಲು ‘ಎದೆಯಗ್ಗಿ’ ಪದ ಪ್ರಯೋಗಿಸಿದ್ದಾರೆ.
ತೊಳ್ತುಗೆಯ್ಮೆ (ನಾ). ತೊತ್ತಿನ ಕೆಲಸ; ಸೇವೆ; ಊಳಿಗ
[ತೊಳು, (<ತೊಮ್ತಿ) + ಗೆಯ್ಮೆ (ಕೈಮೆ)]
ಮಂಥರೆಯ ತೊತ್ತಿನ ಕೆಲಸದ ಹೆಮ್ಮೆಯಲ್ಲಿ ಒಳ್ಳೆಯದನ್ನು ಮಾಡುವೆನೆಂದು ರಾಮನನ್ನು ಕಾಡಿಗೆ ಕಳಿಸುವ ಕೆಲಸ ಮಾಡಿದಳು. ಅವಳಲ್ಲಿ ಕೈಕೆ ಮತ್ತು ಭರತರಲ್ಲಿಯ ಮುಗ್ಧ ಸೇವಾನುರಾಗ, ಊಳಿಗ ಭಕ್ತಿಯಲ್ಲಿ ಬೇರೆಯವರಿಗಾಗಿ ಮಾಡುವ ಶುದ್ಧ ಕಾಯಕವಿದೆ. ಅದರಲ್ಲಿ ಸ್ವಾರ್ಥದೋಷವನ್ನು ಕಾಣುವರಾರು ಎಂದು ಕವಿ ಪ್ರಶ್ನಿಸಿದ್ದಾರೆ.
ತಾನು ಹುಟ್ಟಿದಾಗಿನಿಂದ ಇನ್ನೊಬ್ಬರ ಚೆಲುವಿನಲ್ಲಿ ತನ್ನ ಚೆಲುವನ್ನು ಕಂಡು ಪ್ರೀತಿಸಿದಳು. ಇನ್ನೊಬ್ಬರ ಸೊಬಗಿನಲ್ಲಿ ತನ್ನ ಸೊಬಗನ್ನು ಕಂಡು ಉಂಡಳು. ತನ್ನ ಜೀವಭಾವದ ಶಿಶು ಭರತನ ಮೋಹ, ಪ್ರೀತಿ, ವಾತ್ಸಲ್ಯದಲ್ಲಿ ಒಂದಾಗಿ ತೊತ್ತಿನ ಕೆಲಸವನ್ನು ಚೆನ್ನಾಗಿ ನಿರ್ವಹಿಸಿದಳು. ಅದನ್ನು ಅಭಿವ್ಯಕ್ತಿಸಲು ಕುವೆಂಪು ಅವರು ‘ತೊಳ್ತುಗೆಯ್ಮೆ’ ಪದ ರಚಿಸಿ, ಅವಳ ಸೇವಾತತ್ಪರತೆ ಪ್ರಕಟಪಡಿಸಿದ್ದಾರೆ.
ದಾಸಿ
ನೆಚ್ಚಿನೊಡತಿಗೆ ಮತ್ತೆ ಮೆಚ್ಚಿನಾಕೆಯ ಶಿಶುಗೆ
ತೊಳ್ತುಗೆಯ್ಮೆಯ ಪೆರ್ಮೆಗೊಳ್ಪನೆಸಗುವೆನೆಂದು
ಕಜ್ಜಮಂ ಕೈಕೊಂಡೊಡೇಂ ಸ್ವಾರ್ಥದೋಷಮಂ
ಕಾಣ್ಬರಾರಾಕೆಯ ಪರಾರ್ಥತೆಯ ಶುದ್ಧಿಯಲಿ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.