ADVERTISEMENT

ಕುವೆಂಪು ಪದ ಸೃಷ್ಟಿ: ಲೌಹವರ್ಷ

ಜಿ.ಕೃಷ್ಣಪ್ಪ
Published 29 ಜೂನ್ 2024, 23:30 IST
Last Updated 29 ಜೂನ್ 2024, 23:30 IST
<div class="paragraphs"><p>ಕುವೆಂಪು</p></div>

ಕುವೆಂಪು

   

ಲೌಹವರ್ಷ

ಲೌಹ (ಗು). 1. ಲೋಹದಿಂದ ಮಾಡಿದ; ಲೋಹ ಸಂಬಂಧವಾದ 2. ಕಬ್ಬಿಣದ (ಸಂ).

ADVERTISEMENT

ಹೆಸರೊಲ್ಲದ ಓರ್ವ ಭಾರತೀಯ ದಳಪತಿಯ ಸಾಹಸ ಕುರಿತು ಕುವೆಂಪು ರಚಿಸಿರುವ ಕವನ ‘ಎತ್ತು ಆರತಿ, ಓ ಭಾರತಿ!’ ಅವನು ತನ್ನ ಮೆಷಿನ್‍ಗನ್‍ನಿಂದ ಚೀಣಿ ಸೈನಿಕರನ್ನು ಹೊಡೆದು ಉರುಳಿಸುತ್ತಿರುವ ವೀರಚಿತ್ರಣವನ್ನು ನೀಡುವಾಗ ಕುವೆಂಪು ಅವರು ‘ಲೌಹವರ್ಷ’ ಪದ ಪ್ರಯೋಗಿಸಿದ್ದಾರೆ.

ಮೆಷಿನ್‍ಗನ್ನು ಲೋಹದಿಂದ ಮಾಡಿದ ಗುಂಡುಗಳ ಮಳೆ ಸುರಿಸಿತು ಎಂಬುದನ್ನು ಕವಿ ‘ಲೌಹವರ್ಷ’ ಎಂದು ಬಣ್ಣಿಸಿ, ಅದರ ನಿರಂತರ ಪ್ರವಾಹದ ಅರಿವನ್ನುಂಟು ಮಾಡಿದ್ದಾರೆ.

‘ಕುದಿವ ನನ್ನ ಮೆಷಿನ್‍ಗನ್ನ

ಲೌಹವರ್ಷ ಕರೆಯಿತು

ಕೆಂಪು ಚೀಣದೊಡಲ ಕೋಡಿ

ಒಡೆದು ಹೆಪ್ಪುಗಟ್ಟಿತು;

ಹಳದಿ ಜನರ ಹೆಣದ ಬಣಬೆ

ಸುತ್ತ ಕೋಂಟೆ ಬಿದ್ದಿತು!’ (ಎತ್ತು ಆರತಿ, ಓ ಭಾರತಿ!- ಪ್ರೇತ-ಕ್ಯೂ)

ಗಿರಿನಿತಂಬ

ಗಿರಿನಿತಂಬ (ನಾ), ಬೆಟ್ಟದ ಮಗ್ಗುಲು, -ತಪ್ಪಲು; ಪರ್ವತದ ಇಳಕಲು ಪ್ರದೇಶ.

(ಗಿರಿ + ನಿತಂಬ)

ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋದ ನಂತರ ನಿರ್ಜನ ಕಾಡಿನಲ್ಲಿ ರಾಮಲಕ್ಷ್ಮಣರು ಸೀತೆಯನ್ನು ಹುಡುಕಿದರು. ಅಷ್ಟು ಹೊತ್ತಿಗೆ ಸಂಜೆಯು ಕೆಂಪು ಓಕುಳಿಯನ್ನು ಎರಚಿತು. ಆಗ ಸ್ವಲ್ಪ ದೂರದ ಪರ್ವತದ ಇಳಕಲಿನಂತಹ ಎತ್ತರದಲ್ಲಿ ವೈಡೂರ್ಯ ಸಮ ಹುಲ್ಲಿನ ಮೇಲೆ ವಜ್ರಗಳನ್ನು ಹರಡಿದ್ದಾರೊ ಎಂಬಂತೆ ಸೂರ್ಯನ ಕಾಂತಿಯಲ್ಲಿ ಮಣಿಗಳು ಮಿನುಗುತ್ತಿದ್ದವು. ಹೋಗಿ ನೋಡಲು ಅವು ಜಟಾಯುವಿನ ನಖಾಘಾತಕ್ಕೆ ಚೆಲ್ಲಿದ ರಾವಣನ ವಿಮಾನದ ಅಲಂಕೃತ ಮಣಿಗಳಾಗಿದ್ದವು. ಅದು ಅವರಿಗೆ ಲಲನೆ ಸೀತೆಯ ನೆಲೆಗೆ ಮೊದಲ ಸಾಕ್ಷಿಯಾಯಿತು.

ಕುವೆಂಪು ಅವರು ಬೆಟ್ಟದ ತಪ್ಪಲನ್ನು ‘ಗಿರಿನಿತಂಬ’ ಎಂಬ ಪದದಿಂದ ಸೂಚಿಸಿದ್ದಾರೆ.

ಅನತಿ ದೂರದ ಗಿರಿನಿತಂಬ ಸದೃಶದೊಂದೆಳ್ತರದಿ,

ವೈಡೂರ್ಯ ಸಮ ಶಾದ್ವಲದ ಮೇಲೆ, ಪರಪಿದರೊ

ವಜ್ರಗಳನೆನೆ ತಪನ ಕೋಟೀರ ಕಾಂತಿಯೊಳ್

ಕಿಡಿಕಿಡಿ ಪೊಳೆದುದೇನೊ ಕೌತುಕಂ! ( 2.2 : 757-761)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.