ನಮ್ಮ ಮನೆಯಲ್ಲಿ ಕಾಳ ಎಂಬ ತಿಕ್ಕಲು ನಾಯಿಯಿದೆ. ಇವನನ್ನು ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಕರೆದೊಯ್ಯುವ ಜವಾಬ್ದಾರಿ ನನ್ನದು. ಬಸ್ಸೋ, ಲಾರಿಯನ್ನೋ ಕಂಡರೆ ಸಾಕು, ಉಕ್ಕುವ ಉತ್ಸಾಹದಿಂದ ಅದರ ಮೇಲೆ ಸೀದಾ ನುಗ್ಗಲು ನೋಡುವ ಈ ಕಾಳವೀರ ಪುಟ್ಟ ಮಕ್ಕಳನ್ನು, ನಾಯಿಮರಿಗಳನ್ನು ಕಂಡರೆ ಗಡಗಡ ನಡುಗುತ್ತಾನೆ! ನಮ್ಮ ನೆರೆಯವರು ಕಟ್ಟುತ್ತಿರುವ ಆರಂತಸ್ತಿನ ಕಟ್ಟಡಕ್ಕೆ ಇತ್ತೀಚೆಗೆ ನಾಯಿಮರಿಯೊಂದು ಬಂದು ಸೇರಿಕೊಂಡ ಮೇಲೆ ಇವನನ್ನು ವಾಕಿಂಗ್ ಕರೆದೊಯ್ಯುವ ಕಷ್ಟ ಅಷ್ಟಿಷ್ಟಲ್ಲ. ಕಾಳ ವ್ಯಾ ವ್ಯಾ ಎಂದರೂ ಈ ಮರಿಗೆ ಮಾತ್ರ ಇವನ ಮೇಲೆ ವಿಪರೀತ ವ್ಯಾಮೋಹ! ಕಾಲುಕಾಲಿಗೆ ಅದು ಬಳ್ಳಿಯಂತೆ ತೊಡರಿಕೊಳ್ಳುತ್ತಿದ್ದರೆ ಇವನು ಜಿಮ್ನ್ಯಾಸ್ಟಿಕ್ಸ್‌ನಲ್ಲಿ ಎಗರಿದಂತೆ ಎಗರುತ್ತಿರುತ್ತಾನೆ.
ಈ ಮರಿಯ ತಾಯಂದಿರಾದ ದೇವಕಿ, ಯಶೋದೆಯರು, ಈ ಮರಿಯ ಅಪ್ಪನಂತೆ ಕಾಣುವ ಒಂದು ಬಿಳಿನಾಯಿ, ಜೊತೆಗೆ ಮತ್ತಷ್ಟು ಬೀದಿನಾಯಿಗಳು ಈ ನೆಗೆದಾಟಕ್ಕೆ ಸೇರಿಕೊಳ್ಳುತ್ತವೆ. ಆಗಂತೂ ಸಂಗೀತ ಕಾರಂಜಿಯನ್ನು ನೋಡಿದ ದಿವ್ಯ ಅನುಭವ ಆಗುತ್ತಿರುತ್ತದೆ. ಯಾರೋ ನೆಗೆಯುತ್ತಾರೆ, ಯಾರೋ ಕೆಳಗಿಳಿಯುತ್ತಾರೆ. ಇದ್ದಕ್ಕಿದ್ದಂತೆ ಎಲ್ಲರೂ ಒಟ್ಟಿಗೆ ಮಲಗಿಬಿಡುತ್ತಾರೆ. ಹಿನ್ನೆಲೆಯಲ್ಲಿ ಹಾಡೊಂದಿಲ್ಲ ಎನ್ನುವುದನ್ನು ಬಿಟ್ಟರೆ ಇದು ಸಂಗೀತ(ವಿಲ್ಲದ) ಕಾರಂಜಿಯೇ ಸರಿ!
ಇವತ್ತು ಬೆಳಗ್ಗೆಯೆದ್ದು ವಾಕಿಂಗ್ ಹೊರಟಾಗ ಇಂಥದೇ ಅನುಭವವಾದರೂ ನೆನಪಿಗೆ ಬಂದದ್ದು ಮಾತ್ರ ಹರಿಹರ ಕವಿಯ ಕುಂಬರ ಗುಂಡಯ್ಯನ ರಗಳೆ! ತನ್ನ ಮಡಕೆಯನ್ನು ಬಾರಿಸಿಕೊಂಡು ಮನಸ್ಸಿಗೆ ಬಂದ ಹಾಗೆ ಕುಣಿಯುತ್ತಿದ್ದ ಕುಂಬರ ಗುಂಡಯ್ಯನ ಮುಗ್ಧ ಭಕ್ತಿಯನ್ನು ಮೆಚ್ಚಿ ಅವನ ಮನೆಯ ಬಾಗಿಲಿಗೇ ಬಂದ ಶಿವ, ಆ ಶಿವಭಕ್ತನ ಕುಣಿತದೊಂದಿಗೆ ಸೇರಿಕೊಳ್ಳುತ್ತಾನೆ. ಇದನ್ನು ಕಂಡ ಗಣಸಮೂಹ ಇವರೊಂದಿಗೆ ಕುಣಿಯಲು ತೊಡಗುತ್ತದೆ. ಒಟ್ಟಿನಲ್ಲಿ ಸರ್ವ ಸ್ಥಾವರವು ಮಡಕೆಯ ಶಬ್ದಕ್ಕೆ ಜಂಗಮವಾಡುತ್ತವೆ! ನಮ್ಮ ಕರಿಕಾಳೇಶ್ವರ ಅಂಗಳಕ್ಕೆ ಚೆಂಡು ಉರುಳಿಸಿಕೊಂಡು ಕಾಲಿಟ್ಟ ತಕ್ಷಣ ಬೀದಿಯ ಅಷ್ಟೂ ನಾಯಿಗಳು ಜಂಗಮವಾಡಲು ತೊಡಗುತ್ತವೆ. ಬಾಗಿಲಿಂದಾಚೆ ಕಾಲಿಟ್ಟರೆ ಈ ಹುಚ್ಚು ಕುಣಿತಕ್ಕೆ ಸಿಕ್ಕಿ ಚಿಂದಿ ಚಿತ್ರಾನ್ನವಾಗುವುದು ಮಾತ್ರ ನಾನು!
ಅದಿರಲಿ, ಸುಂದರವಾದ ಹೂಬುಟ್ಟಿಯನ್ನು ಹೊತ್ತು ಬೆಳ್ಳಿಮೋಡ ಚಿತ್ರದ ಕಲ್ಪನಾಳಂತೆ ಜಡೆಯನ್ನು ವಾಲಾಡಿಸಿಕೊಂಡು, ಹಾಡನ್ನು ಗುನುಗುತ್ತ, ಕಾಂಪೌಂಡಿನಾಚೆಗೂ ಕತ್ತನ್ನು ಚಾಚಿಕೊಂಡಿರುವ ಗಿಡ, ಮರ, ಬಳ್ಳಿಗಳಿಂದ ತಮ್ಮದೇ ಮನೆಯ ಹೂಗಳನ್ನು ಬಿಡಿಸಿಕೊಳ್ಳುತ್ತಿದ್ದೇನೆ ಎನ್ನುವಂಥ ಆತ್ಮವಿಶ್ವಾಸದ ಹೂಗಳ್ಳಿಯನ್ನು ನೀವು ನೋಡಿದ್ದೀರಾ? ನಾನು ನೋಡಿದ್ದೇನೆ. ಅವಳ ಕಣ್ಣುಗಳನ್ನು ದಿಟ್ಟಿಸಿದಾಗ ನಾನೇ ಕಳ್ಳಿಯೇನೋ ಎಂಬಂತೆ ಚಡಪಡಿಸಿದ್ದೇನೆ. ಕಾಳನನ್ನು ವಾಕಿಂಗ್ ಕರೆದೊಯ್ಯುವಾಗ ಆಗುವ ವಿಶಿಷ್ಟ ಅನುಭವಗಳಲ್ಲಿ ಇದೂ ಒಂದು! ಈ ಕಳ್ಳಿ ಹೂವುಗಳನ್ನು ಕೀಳುವ ಕಲೆಗೆ ಮನಸೋತಿದ್ದೇನೆ. ಹೂಗಳನ್ನು ಕೀಳಲು ಬಹುಶಃ ಹೂವಿನಂಥ ಮನಸ್ಸೇ ಬೇಕು ಎಂದು ನಂಬಿದವಳು ನಾನು! ಎಷ್ಟೋ ಜನ ಹೂ ಕೀಳಲು ಹೋಗಿ ಎಲೆಯನ್ನು ತರಚುತ್ತಾರೆ, ಹೂಗಳ ದಳವೇ ಉದುರಿಹೋಗಿರುತ್ತದೆ. ಗಿಡಕ್ಕೆ ನೋವಾಗದಂತೆ, ಹೂ ಮುರಿದು ಹೋಗದಂತೆ ಬಿಡಿಸಿಕೊಳ್ಳುವುದು ಅಷ್ಟು ಸುಲಭದ ವಿಷಯವಲ್ಲ. ಅದಕ್ಕೆ ಹೂವಿನಂಥ ಬೆರಳುಗಳೇ ಬೇಕೇನೋ?
ತುಂಬೆ, ಕರ್ಣಕುಂಡಲ ಮತ್ತು ಕನಕಾಂಬರವನ್ನು ಕೀಳುವುದಕ್ಕೆ ಸ್ವಲ್ಪ ತಾಳ್ಮೆ ಬೇಕು. ಗೊರಟೆಯನ್ನು ಬಿಡಿಸಿಕೊಳ್ಳುವಾಗ ಸಣ್ಣದಾಗಿ ಮುಳ್ಳು ಚುಚ್ಚಬಹುದು. ಮಲ್ಲಿಗೆಯನ್ನು ಕೀಳಬೇಕೆಂದರೆ ಹಬ್ಬಿಸಿರುವ ಕೊಂಡಮಾವಿನ ಮರ ಹತ್ತಬೇಕಾಗಬಹುದು ಅಥವಾ ಸಣ್ಣದೊಂದು ಏಣಿಯನ್ನಾದರೂ ಉಪಯೋಗಿಸಬೇಕು. ಸಂಪಿಗೆಗಂತೂ ಕೊಕ್ಕೆಯೇ ಬೇಕು, ಪಾರಿಜಾತವನ್ನು ಕಿತ್ತುಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಆದ್ದರಿಂದ ಅದು ನೆಲದ ಮೇಲೆ ಬಿದ್ದರೂ ದೇವರಿಗೆ ಅರ್ಪಿಸಬಹುದು ಎಂಬ ಜಾಣ ಒಪ್ಪಂದ ಮಾಡಿಕೊಂಡಿದ್ದೇವೆ. ಕಣಗಿಲೆ ಕೀಳಲು ಹೋದರೆ ಹೂವಿನ ಜೊತೆ ಮೊಗ್ಗುಗಳು ಮುರಿಯುವ ಅಪಾಯವಿರುತ್ತದೆ. ದಾಸವಾಳಕ್ಕಾಗಿ ಕೊಂಬೆ ಬಗ್ಗಿಸಬಹುದು. ಆದರೆ ಕೆಲವೊಮ್ಮೆ ನಮ್ಮ ಉತ್ಸಾಹದ ಭರದಲ್ಲಿ ಕೊಂಬೆ ಮುರಿಯುವ ಆತಂಕ ಇದ್ದೇ ಇರುತ್ತದೆ. ಈ ಕಳ್ಳಿ ಯಾವ ಆತಂಕವೂ ಇಲ್ಲದೆ, ಎಷ್ಟು ಶಾಂತಚಿತ್ತಳಾಗಿ ಬೇರೆಯವರ ಮನೆಯ ಹೂಗಳನ್ನು ಬಿಡಿಸಿಕೊಳ್ಳುತ್ತಾಳೆ ಎಂಬುದನ್ನು ಅವಳ ಬುಟ್ಟಿಯಲ್ಲಿ ನಳನಳಿಸುವ ಹೂವುಗಳೇ ಸಾರುತ್ತವೆ.
ಅಲ್ಲೊಬ್ಬ ಮೈಮರೆತು ಹಾಡಿಕೊಂಡು ನಡೆಯುತ್ತಿದ್ದಾನೆ. ಸ್ವಲ್ಪ ಕಿವಿಗೊಟ್ಟು ಕೇಳಿದರೆ ಅವನು ಸಂಗೀತದಲ್ಲಿ ಕಲಿತ ಆರಂಭದ ಪಾಠಗಳನ್ನು ನೆನಪಿಸಿಕೊಳ್ಳುತ್ತಿದ್ದಾನೆ ಎಂದು ತಿಳಿದುಬಿಡುತ್ತದೆ. ಪಾಪ ಅವನೇನು ಮಾಡಬಹುದು? ರಾತ್ರಿ ವಾಹನಗಳ ಚಕ್ರಕ್ಕೆ ಸಿಕ್ಕಿರುವ ಇಲಿ, ಬೆಕ್ಕು, ನಾಯಿಗಳ ಶವಗಳು ರಸ್ತೆಯ ಮೇಲಿನ್ನು ಬಿದ್ದಿವೆ. ಸರಿಸಗ ಸಮಗರಿ ಸಸರಿರಿ ಗಗಮಮ ಎಂದು, ಎಂದೋ ಕಲಿತ ದಾಟುವರಸೆಯನ್ನು ಹೇಳಿಕೊಂಡು ದಾರಿಯಲ್ಲಿರುವ ಕೊಳಕು, ಕಸಕಡ್ಡಿಗಳನ್ನು ದಾಟುತ್ತಿದ್ದಾನೆ! ಅವನನ್ನು ನೋಡುತ್ತಾ ನಾನು ಯಾವುದೋ ನಾಯಿಯ ಕಕ್ಕವನ್ನು ತುಳಿದೇಬಿಡುತ್ತಿದ್ದೆ. ಸದ್ಯ, ಆರೆಂಟು ವರ್ಷಗಳ ಕಾಲ ಕಲಿತ ವೀಣೆ ಸಮಯಕ್ಕೆ ಸರಿಯಾಗಿ ಕೈಹಿಡಿಯಿತು. ರಿಗರಿಮ ರಿಪಮಗ ರಿರಿಗಗ ಮಮಪಪ ಎಂದು ದಾಟುವರಸೆಯನ್ನು ಮುಂದುವರಿಸಿದೆ!
ಅಯ್ಯೋ ಇರಿ, ಇಲ್ಲೇನೋ ಒಂದು ಗಲಾಟೆ ನಡೆಯುತ್ತಿದೆ. ಈ ಚಳಿಯ ಬೆಳಗುಗಳಲ್ಲಿ ಬಿಸಿ ಬಿಸಿಯ ಮಾತು ಯಾರಿಗೆ ಬೇಡ? ಯಾರೋ ಒಬ್ಬ ಮಹಡಿಯಿಂದ ಕೆಳಗಿಳಿದು, ಕಸವನ್ನು ತುಂಬಿ ಬೀದಿಯಲ್ಲಿ ಬಿಸಾಕಿದ ಪ್ಲಾಸ್ಟಿಕ್ ಪೊಟ್ಟಣವನ್ನು ಎತ್ತಿಕೊಂಡು ಕೆಳಗಿನ ಮನೆಯವರ ಬಾಗಿಲು ತಟ್ಟಿದ. ಅವರು ತೆಗೆದ ತಕ್ಷಣ, ನಾಚಿಕೆ ಆಗೋದಿಲ್ವಾ? ರಾತ್ರಿ ಎಲ್ಲರೂ ಮಲಗಿದ ಮೇಲೆ ಬೀದಿಗೆ ತಂದು ಕಸ ಎಸೆಯುತ್ತೀರಲ್ಲ? ಸಿವಿಕ್ ಸೆನ್ಸ್ ಇಲ್ವಾ? ಎಂದು ರೇಗಿದ. ಬಹಳ ಖುಷಿಯಿಂದ ಮುಂದೇನು ನಡೆಯುವುದೋ ಎಂದು ನೋಡುತ್ತಾ ನಿಂತೆ. ಕೆಳಗಿನ ಮನೆಯ ಹೆಂಗಸು, ‘ನಾನು ಕಸ ಎಸೆದಿದ್ದನ್ನು ನೀನು ನೋಡಿದ್ದೀಯಾ? ಬಾಯಿ ಮುಚ್ಚಿಕೊಂಡು ಹೋಗು’ ಎಂದು ಕಿರುಚಲು ಆರಂಭಿಸಿದಳು. ಅವನು ಮೊಬೈಲ್ ತೆಗೆದವನೇ ‘ನೋಡಿ, ನಿನ್ನೆ ರಾತ್ರಿ ನೀವು ಕಸ ಎಸೆದು ಹೋಗಿದ್ದನ್ನು ವಿಡಿಯೋ ಮಾಡಿಕೊಂಡಿದ್ದೀನಿ’ ಎಂದು ತೋರಿಸಿದ. ಅವಳ ಮಾತೇ ನಿಂತುಹೋಯಿತು. ಇವರ ಜಗಳವನ್ನು ನೋಡಲು ನಿಂತ ನನ್ನ ವಿಡಿಯೋವನ್ನು ಯಾರಾದರೂ ಮಾಡಿ, ಸಾಕ್ಷಿಗೆ ಕರೆದರೆ ಎಂದು ಆತಂಕವಾಗಿ ಜಾಗ ಖಾಲಿ ಮಾಡಿದೆ.
ಕಾಳನನ್ನು ಬೀದಿಯಲ್ಲಿ ಕರೆದೊಯ್ಯುವಾಗ ನೋಡುವ ದೃಶ್ಯಗಳು ಒಂದೇ ಎರಡೇ! ಈ ಅನುಭವಕ್ಕೆ ಮಿಗಿಲಾದುದು ಯಾವುದಿದೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.