ಸಾಹಿತ್ಯ ಸಂಸ್ಕೃತಿಗಳಿಗೆ ಮೀಸಲಾದ ನಾಡಿನ ಪ್ರತಿಷ್ಠಿತ ಸಂಸ್ಥೆ ‘ಬಿಎಂಶ್ರೀ ಪ್ರತಿಷ್ಠಾನ’ ಸ್ಥಾಪನೆಗೊಂಡು ನಾಲ್ಕು ದಶಕಗಳನ್ನು ಪೂರೈಸಿದೆ. ಆ ನೆನಪಿನಲ್ಲಿ ಒಂದು ಮೆಲುಕು...
**
ಅದು 1980ರ ಮಾರ್ಚ್ ತಿಂಗಳ 10ನೇ ತಾರೀಖು. ತಮ್ಮನ್ನು ‘ಕುಟೀಚಕ’ ಎಂದು ವರ್ಣಿಸಿಕೊಂಡು ಯಾವುದೇ ಸಭೆ ಸಮಾರಂಭಗಳಿಗೆಂದು ಸಾಮಾನ್ಯವಾಗಿ ಎಂದೂ ಮೈಸೂರು ಬಿಟ್ಟು ಹೊರಗೆ ಹೊರಡದ ಕುವೆಂಪು ಅವರು ಅಂದು ಬಿಎಂಶ್ರೀ ಪ್ರತಿಷ್ಠಾನದ ಉದ್ಘಾಟನೆ ನೆರವೇರಿಸುವ ಸಲುವಾಗಿಯೇ ಬೆಂಗಳೂರಿಗೆ ಬಂದಿದ್ದರು. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಆವರಣದಲ್ಲಿ ಪ್ರತಿಷ್ಠಾನದ ಉದ್ಘಾಟನೆಯನ್ನೂ ವಿಧ್ಯುಕ್ತವಾಗಿ ಮಾಡಿದ್ದರು. ಹಾಗೆ ಕುವೆಂಪು ಅವರನ್ನು ಬೆಂಗಳೂರಿಗೆ ಕಟ್ಟಿಹಾಕಿ ಎಳೆತಂದದ್ದು ಬಿಎಂಶ್ರೀ ಪ್ರತಿಷ್ಠಾನದ ಸಂಸ್ಥಾಪಕ ಎಂ.ವಿ. ಸೀತಾರಾಮಯ್ಯನವರ ಪ್ರೀತಿಪೂರ್ವಕ ಒತ್ತಾಯ ಮತ್ತು ಅವರ ಗುರುಗಳಾದ ಬಿ.ಎಂ.ಶ್ರೀಯವರ ಮೇಲಿನ ಅಪಾರ ಗೌರವ.
‘ರೋಗಸಾಗರವನ್ನು ಈಜಿ ದಡ ಸೇರಿದ ಸಾಹಿತಿ’ ಎಂದು ಒಂದು ಲೇಖನ ವರ್ಣಿಸುವ ಹಾಗೆ ಅತ್ಯಂತ ನಾಜೂಕಿನ ಆರೋಗ್ಯ ಹೊಂದಿದ್ದ ಎಂ.ವಿ.ಸೀ. ತಮ್ಮ ದೃಢವಾದ ಸಂಕಲ್ಪ ಬಲ ಮತ್ತು ಕರ್ತೃತ್ವ ಶಕ್ತಿಯಿಂದ ಬಿ.ಎಂ.ಶ್ರೀ ಪ್ರತಿಷ್ಠಾನವನ್ನು ಹುಟ್ಟುಹಾಕಿದ್ದು 1979ರ ಮೇ ತಿಂಗಳ 6ರಂದು, ಅದೂ ತಮ್ಮ 70ನೆಯ ವಯಸ್ಸಿನಲ್ಲಿ. ಅದರ ಹಿಂದಿದ್ದ ಕಳಕಳಿ ಕನ್ನಡ ಸಂಶೋಧನೆ ಮತ್ತು ಪಾಂಡಿತ್ಯ ಸಂವರ್ಧನೆಗಾಗಿಯೇ ಮೀಸಲಾದ ಸಂಸ್ಥೆಯೊಂದನ್ನು ಕನ್ನಡ ನವೋದಯದ ಕಾರಣಪುರುಷರೆಂದೇ ಖ್ಯಾತರಾದ ಹಾಗೂ ತಮ್ಮ ಅಕ್ಕರೆಯ ಗುರುಗಳಾದ ಬಿ.ಎಂ.ಶ್ರೀ ಅವರ ಹೆಸರಿನಲ್ಲಿ ಸ್ಥಾಪಿಸಬೇಕೆಂಬುದು.
ಇದೀಗ ಈ ಹೆಮ್ಮೆಯ ಸಾಹಿತ್ಯ ಸಂಸ್ಥೆ ನಾಲ್ಕು ದಶಕಗಳನ್ನು ಪೂರೈಸಿದೆ. 1990ರಲ್ಲಿ ತೀರಿಕೊಳ್ಳುವವರೆಗೂ ಈ ಸಂಸ್ಥೆಯನ್ನು ಬೆನ್ನಿಗೆ ಕಟ್ಟಿಕೊಂಡು ಎಂ.ವಿ.ಸೀ. ಅವರು ದುಡಿದ ರೀತಿ ಅನನ್ಯವಾದದ್ದು. ಎಲ್ಲಿಯೂ ಹೆಚ್ಚು ಓಡಾಡುವ ಸ್ಥಿತಿಯಲ್ಲಿಲ್ಲದಿದ್ದರೂ ಬೆಲ್ಲಕ್ಕೆ ಇರುವೆ ಮುತ್ತುವಂತೆ ಸುತ್ತ ಇರುತ್ತಿದ್ದ ತಮ್ಮ ಅಕ್ಕರೆಯ ಶಿಷ್ಯಂದಿರು ಮತ್ತು ಹಿರಿಯ ಕಿರಿಯ ಮಿತ್ರರ ಬಳಗವನ್ನು ಜೊತೆಗೂಡಿಸಿಕೊಂಡು ತಮ್ಮ ಮನೆಯನ್ನೇ ಕಚೇರಿ ಮಾಡಿಕೊಂಡು ಸ್ವಂತ ಪುಸ್ತಕಭಂಡಾರ ಮತ್ತು ವಿದ್ವನ್ಮಿತ್ರರು ಕೊಡುಗೆಯಾಗಿ ನೀಡಿದ ಪುಸ್ತಕಗಳನ್ನೇ ಪ್ರತಿಷ್ಠಾನದ ಪುಸ್ತಕ ಭಂಡಾರವಾಗಿಸಿ ಅದಕ್ಕೊಂದು ತಾತ್ಕಾಲಿಕ ನೆಲೆ ಕಲ್ಪಿಸಿಬಿಟ್ಟರು.
ಮಾಸ್ತಿಯವರು ಮಹಾಪೋಷಕರಾಗಿ, ಎಂ.ವಿ.ಸೀ. ವ್ಯವಸ್ಥಾಪಕರಾಗಿ, ನಂತರ ಅಧ್ಯಕ್ಷರಾಗಿ ಆರಂಭಗೊಂಡ ಈ ಸಂಸ್ಥೆಗೆ ಕಾರಂತ, ಕಣವಿ, ಜೀವಿ ಮೊದಲಾದ, ನಾಡಿನ ಪ್ರತಿಷ್ಠಿತ ಸಾಹಿತಿಗಳೆಲ್ಲರೂ ಕೈಜೋಡಿಸಿದ್ದಾರೆ. ಅಲ್ಲೇ ಹತ್ತು ವರ್ಷ ಪೂರೈಸಿ, ವಿದ್ವತ್ ಚರ್ಚೆ, ವಿಚಾರಗೋಷ್ಠಿಗಳನ್ನು ನಡೆಸುತ್ತ 1983ರಲ್ಲಿ ಅವರು ಆರಂಭಿಸಿದ ವಿದ್ವತ್ ಪತ್ರಿಕೆ ‘ಲೋಚನ’ ಈಗ 38 ವರ್ಷಗಳನ್ನು ಪೂರೈಸಿದೆ. ಸರ್ಕಾರದ ಉನ್ನತ ಅಧಿಕಾರಿಗಳಿಂದ ಹಿಡಿದು ಮಂತ್ರಿ ಮಾನ್ಯರವರೆಗೆ ಪತ್ರಗಳ ಮೂಲಕವೇ ವ್ಯವಹರಿಸುತ್ತ ಪ್ರತಿಷ್ಠಾನಕ್ಕೆ ಈಗಿರುವ ನಿವೇಶನವನ್ನು ಗುತ್ತಿಗೆಯ ಆಧಾರದ ಮೇಲೆ ದೊರಕಿಸಿಕೊಂಡರು. ಆನಂತರ ಮಾಸ್ತಿ ಮನೆ, ಗೋಖಲೆ ಸಂಸ್ಥೆಗಳ ಆಶ್ರಯದಲ್ಲಿದ್ದು 2000ದ ಫೆಬ್ರುವರಿಯಿಂದ ಸ್ವಂತ ಕಟ್ಟಡಕ್ಕೆ ವರ್ಗಾವಣೆಗೊಂಡು ಸರ್ಕಾರ, ಸಾರ್ವಜನಿಕರು ಮತ್ತು ಸಾಹಿತ್ಯಾಭಿಮಾನಿಗಳ ಕೊಡುಗೆಯಿಂದ ಇದೀಗ ಮೂರು ಅಂತಸ್ತುಗಳ ಭವ್ಯ ಭವನವಾಗಿ ತಲೆ ಎತ್ತಿ ನಿಂತಿದೆ.
ಇದು ಈ ಸಂಸ್ಥೆಯ ಭೌತಿಕ ನೆಲೆಯ ಕಥೆಯಾದರೆ ಅದರ ಆತ್ಮಿಕ ನೆಲೆಯಾದ ಸಾಹಿತ್ಯಕ ಚಟುವಟಿಕೆಯ ಕಥೆ ನಿಜಕ್ಕೂ ಅಚ್ಚರಿ ಹುಟ್ಟಿಸುವಂಥದ್ದು. ಸಂಸ್ಥೆಯಲ್ಲಿ ಸಂಶೋಧನೆಗೆ ಮೊದಲ ಮಣೆ ಇರಬೇಕೆಂದು ಎಂ.ವಿ.ಸೀ ನಿಶ್ಚಯಿಸಿದರು. ಸ್ವತಃ ಕವಿರಾಜಮಾರ್ಗವನ್ನು ಅತ್ಯಂತ ಶಾಸ್ತ್ರೀಯವಾಗಿ ಸಂಪಾದಿಸಿದ ಅವರಿಗೆ ಗ್ರಂಥ ಸಂಪಾದನೆ ಮತ್ತು ಹಸ್ತಪ್ರತಿಶಾಸ್ತ್ರದ ಮೇಲೆ ಎಲ್ಲಿಲ್ಲದ ಅಕ್ಕರೆ. ಅದಕ್ಕಾಗಿ ಪ್ರತಿಷ್ಠಾನದಲ್ಲಿ ಒಂದು ಹಸ್ತಪ್ರತಿಗಳ ಒಂದು ಭಂಡಾರವನ್ನು ಸಜ್ಜುಗೊಳಿಸಿದರು. ಅವರ ಬಳಿಯಿದ್ದ ಪ್ರಾಚೀನ ಗ್ರಂಥಗಳ ಹಸ್ತಪ್ರತಿಗಳ ಜೊತೆಗೆ ಅವರಿವರು ಕೊಡುಗೆಯಾಗಿ ನೀಡಿದವೂ ಸೇರಿ ಒಂದು ಸಾವಿರ ಹಸ್ತಪ್ರತಿಗಳನ್ನು ಒಳಗೊಂಡಿದ್ದು ಅವುಗಳ ರಕ್ಷಣೆ ಮತ್ತು ಡಿಜಿಟಲೀಕರಣದ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ರಾಷ್ಟ್ರೀಯ ಹಸ್ತಪ್ರತಿ ಮಿಷನ್‌ನಿಂದ ಮಾನ್ಯತೆ ಪಡೆದಿರುವ ಮತ್ತು ನಾಡಿನಾದ್ಯಂತ ಹೆಸರಾಗಿರುವ ಹಸ್ತಪ್ರತಿ ಭಂಡಾರ ಇದಾಗಿದೆ. 1981ರಲ್ಲಿಯೇ ಎಂ.ವಿ.ಸೀ. ನಾಡಿನ ಖ್ಯಾತ ವಿದ್ವಾಂಸರನ್ನೆಲ್ಲ ಆಹ್ವಾನಿಸಿ ಹಸ್ತಪ್ರತಿಶಾಸ್ತ್ರ ಕುರಿತ ಎರಡು ದಿನಗಳ ವಿಚಾರಸಂಕಿರಣವನ್ನು ಪ್ರತಿಷ್ಠಾನದಲ್ಲಿ ಆಯೋಜಿಸಿ ಅದರಲ್ಲಿ ಮಂಡಿತವಾದ ಪ್ರಬಂಧಗಳನ್ನೆಲ್ಲ ಒಳಗೊಂಡ ‘ಹಸ್ತಪ್ರತಿಶಾಸ್ತ್ರ’ ಎಂಬ ಗ್ರಂಥವನ್ನೂ ಹೊರತಂದರು.
ತನ್ನ ನೈರಂತರ್ಯವನ್ನು ಕಾಪಾಡಿಕೊಂಡು ಬಂದಿರುವ ವಿದ್ವತ್ ಪತ್ರಿಕೆ ಲೋಚನಕ್ಕೆ ನಾಡಿನ ಹೆಮ್ಮೆಯ ಮತ್ತು ವಿಖ್ಯಾತ ವಿದ್ವಾಂಸರೆಲ್ಲರೂ ಲೇಖನಗಳನ್ನು ಬರೆದಿದ್ದಾರೆ. ಜಿ. ವೆಂಕಟಸುಬ್ಬಯ್ಯ, ಶ್ರೀನಿವಾಸರಾವ್ ಕೊರಟಿ, ಟಿ. ಕೇಶವ ಭಟ್ಟ ಮೊದಲಾದ ವಿದ್ವನ್ಮಣಿಗಳು ಇದರ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದರ ಜೊತೆಗೆ ಪ್ರತಿಷ್ಠಾನದ ಚಟುವಟಿಕೆಗಳಿಗೆ ಮೀಸಲಾದ ‘ಹೊಂಗನಸು’ ವಾರ್ತಾಪತ್ರ ಕೂಡ ಉಲ್ಲೇಖಾರ್ಹವಾದದ್ದು.
ಸ್ಥಾಪಕ ಅಧ್ಯಕ್ಷರ ಕಾಲದಿಂದಲೇ ಅರಂಭವಾದ ವಿದ್ವತ್ ಗ್ರಂಥಗಳ ಪ್ರಕಟಣೆ ಇದುವರೆಗೂ ಮುಂದುವರಿದಿದೆ. ಇದುವರೆಗೆ 188 ಗ್ರಂಥಗಳನ್ನು ಪ್ರಕಟಿಸಿದೆ. ಹಾಗೆ ಪ್ರಕಟಿಸಿದ ಗ್ರಂಥಗಳಲ್ಲಿ ‘ಹಸ್ತಪ್ರತಿಶಾಸ್ತ್ರ’, ಫ. ಗು. ಹಳಕಟ್ಟಿಯವರ ಬಗೆಗಿನ ಗೌರವ ಗ್ರಂಥ ‘ಮಣಿಹ’ ಶಬ್ದಮಣಿ ದರ್ಪಣ ಮತ್ತು ಭಟ್ಟಾಕಳಂಕನ ಶಬ್ದಾನುಶಾಸನ –ಒಂದು ಅಧ್ಯಯನ, ಶ್ರೀನಿಧಿ, ಶ್ರೀಗಂಧ, ಶಂಕರಾಚಾರ್ಯರ ಸೌಂದರ್ಯ ಲಹರಿ, ತಿಮ್ಮಪ್ಪ ದಾಸರ ಕೀರ್ತನೆಗಳು, ಅರ್ಚನ ಮೊದಲಾದವು ಸೇರಿವೆ. ಸಾಹಿತ್ಯ ಉಪನ್ಯಾಸಗಳು ಮತ್ತು ವಿಚಾರ ಸಂಕಿರಣಗಳ ಹೊನಲನ್ನೂ ಹರಿಸುತ್ತಿದೆ.
ಪ್ರತಿಷ್ಠಾನದಲ್ಲಿ ಹಲವು ಉನ್ನತ ಸಾಹಿತ್ಯ ಪ್ರಶಸ್ತಿಗಳಿವೆ. ಬಿ.ಎಂ.ಶ್ರೀಯವರ ಮೊಮ್ಮಗಳೂ ಪ್ರಸಿದ್ಧ ಬರಹಗಾರ ಶಾ. ಬಾಲೂರಾಯರ ಧರ್ಮಪತ್ನಿಯೂ ಆದ ಕಮಲಿನಿ ಅವರು ತಮ್ಮ ತಾತನ ಹೆಸರಿನಲ್ಲಿ, ಕನ್ನಡದಲ್ಲಿ ಮಹತ್ವದ ಸಾಧನೆ ಮಾಡಿದ ಸಾಹಿತಿಗಳಿಗೆ ನೀಡಲು ಸ್ಥಾಪಿಸಿರುವ ಒಂದು ಲಕ್ಷ ರೂಪಾಯಿ ಬಹುಮಾನದ ‘ಶ್ರೀಸಾಹಿತ್ಯ ಪ್ರಶಸ್ತಿ’ ಸೇರಿದಂತೆ ಪ್ರತಿಷ್ಠಾನ ಕೊಡಮಾಡುವ ಪ್ರಶಸ್ತಿಗಳಿಗೆ ಬೆಲೆಕಟ್ಟಲಾಗದ ಮೌಲ್ಯವಿದೆ.
ಹಂಪಿ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಅಧ್ಯಯನ ಕೇಂದ್ರ ಇದಾಗಿದ್ದು, ಪಿಎಚ್.ಡಿ. ಅಭ್ಯರ್ಥಿಗಳಿಗೆ ಮಾರ್ಗದರ್ಶನದ ಜೊತೆಗೆ ಹಳಗನ್ನಡ ಮತ್ತು ಶಾಸನ ಅಧ್ಯಯನ ತರಗತಿಗಳನ್ನು ನಡೆಸಿಕೊಂಡು ಬರುತ್ತಿದೆ. ಇದುವರೆಗೆ ಪ್ರತಿಷ್ಠಾನದಿಂದ 117 ಜನ ಎಂ.ಫಿಲ್ ಮತ್ತು 18 ಜನ ಪಿಎಚ್.ಡಿ ಪದವಿ ಪಡೆದಿದ್ದಾರೆ. ಕೀರ್ತಿಶೇಷರಾದ ನಿಟ್ಟೂರು ಶ್ರೀನಿವಾಸರಾವ್, ಜಿ. ನಾರಾಯಣ ಅವರು ಗೌರವಾಧ್ಯಕ್ಷರಾಗಿದ್ದ ಈ ಸಂಸ್ಥೆ, ಈಗ ಪ್ರೊ. ಎಂ.ಎಚ್. ಕೃಷ್ಣಯ್ಯನವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ.
ಬೆಂಗಳೂರು ಮಹಾನಗರ ಪಾಲಿಕೆ ನಾಮಮಾತ್ರ ಗುತ್ತಿಗೆ ಆಧಾರದ ಮೇಲೆ ನೀಡಿರುವ ನಿವೇಶನದಲ್ಲಿ ನೆಲೆ ನಿಂತು ಇಷ್ಟೆಲ್ಲ ಸಾಹಿತ್ಯ ದಾಸೋಹ ನಡೆಸುತ್ತ ಬಂದಿರುವ ಈ ಹೆಮ್ಮೆಯ ಸಾಹಿತ್ಯ ಸಂಸ್ಥೆಯ ಅಸ್ತಿತ್ವವೇ ಇದೀಗ ಅಲುಗಾಡತೊಡಗಿದೆ. ಕಾರಣ ಗುತ್ತಿಗೆ ಅವಧಿ ಮುಗಿದು ಹತ್ತು ವರ್ಷಗಳೇ ಕಳೆದಿದ್ದು ಗುತ್ತಿಗೆ ನವೀಕರಿಸಬೇಕೆಂದು ಮನವಿ ಮಾಡಿದರೂ ಇನ್ನೂ ನವೀಕರಣ ಆಗಿಲ್ಲ.
ನುಡಿಯಾರಾಧಕರೆಲ್ಲರ ಸಾಹಿತ್ಯ ಪ್ರೀತಿಗೆ ಸಾಕ್ಷಿಪ್ರಜ್ಞೆಯಂತಿರುವ ಈ ಸಂಸ್ಥೆಯನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ನಾಡಿನ ನುಡಿಪ್ರೇಮಿಗಳದಾಗಿದೆ. ಸಾಹಿತ್ಯ ಪ್ರೇಮಿಗಳ ಉದಾರ ದೇಣಿಗೆಯಿಂದಲೇ ಅರ್ಧ ಶತಮಾನದತ್ತ ಭರದಿಂದ ಸಾಗಿರುವ ಈ ಸಂಸ್ಥೆ ನಿರಂತರವಾಗಿ ವರ್ಧಿಸುತ್ತ ಸಾಹಿತ್ಯ ಕೈಂಕರ್ಯ ನಡೆಸುತ್ತ ಸಾಗಲೆಂಬುದೇ ಈ ಸಂದರ್ಭದಲ್ಲಿ ಎಲ್ಲ ಕನ್ನಡಿಗರ ಬಯಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.