ಹೆಜ್ಜೆ–ಹೆಜ್ಜೆಗೂ ಸಸ್ಯಗಳು ಇಲ್ಲಿ ನಸುನಗುತ್ತಾ ತಮ್ಮ ಪರಿಚಯ ಮಾಡಿಕೊಳ್ಳುತ್ತವೆ. ವೈವಿಧ್ಯಮಯ ಗುಲಾಬಿ ತಾಕುಗಳು, ಬಿದಿರಿನ ಮೆಳೆಗಳು, ಔಷಧೀಯ ಸಸ್ಯಗಳು, ಹಣ್ಣಿನಮರಗಳು, ಹೂಗಳು ಈ ಅಪರೂಪದ ಸಸ್ಯೋದ್ಯಾನದ ಒಡಲಿನಲ್ಲಿ ತುಂಬಿಕೊಂಡಿವೆ.
ಹಾಗಿದ್ದರೆ ತಡವೇಕೆ? ಮೈಸೂರಿನ ಲಿಂಗಾಂಬುಧಿ ಕೆರೆ ತಟಕ್ಕೆ ಬನ್ನಿ. ಅಲ್ಲಿ ಜೀವ ತಳೆದಿರುವ ‘ಸಸ್ಯೋದ್ಯಾನ’ವು ದಸರೆ ಸಂಭ್ರಮದಲ್ಲಿ ಕೈ ಬೀಸಿ ಕರೆಯುತ್ತಿದೆ. ಅಂದಹಾಗೆ, ಇದು ರಾಜ್ಯದ ಎರಡನೇ ಸಸ್ಯೋದ್ಯಾನ. ಮೊದಲನೆಯದ್ದು ಬೆಂಗಳೂರಿನ ಲಾಲ್‌ಬಾಗ್.
ಸಸ್ಯ ಜಗತ್ತಿನ ನಿಗೂಢ ಜಾಲ ಭೇದಿಸಲು ಪರಿಸರ ಪ್ರಿಯರು, ಸಸ್ಯ ವಿಜ್ಞಾನಿಗಳು, ವಿದ್ಯಾರ್ಥಿಗಳಿಗೆ ಈ ಉದ್ಯಾನ ಪರಿಕರವನ್ನೂ ಸಿದ್ಧ ಮಾಡಿಕೊಡುತ್ತದೆ. ಚಿಣ್ಣರು, ಹಿರಿಯರಿಗೆ ಚೇತೋಹಾರಿ ಅನುಭವ ನೀಡುವ ಹೂಗಳ ಲೋಕ, ಚಿಟ್ಟೆಗಳ ಪ್ರಪಂಚ, ‘ಟೊಪಿಯರಿ’ ಆಕೃತಿಗಳು ಇಲ್ಲಿ ಆಕರ್ಷಕವಾಗಿ ಮೈದೆರೆದಿವೆ. ಹದಿನೈದು ಎಕರೆಯಷ್ಟು ವಿಸ್ತಾರವಾಗಿ ಹರಡಿಕೊಂಡಿರುವ ಉದ್ಯಾನವು, ಅಳಿವಿನಂಚಿನ 350ಕ್ಕೂ ಹೆಚ್ಚು ಸಸ್ಯ ಪ್ರಭೇದಗಳಿಗೆ ರಕ್ಷಾ ಕವಚವಾಗಿದೆ.
ಮೃಗಾಲಯದಲ್ಲಿ ಪ್ರಾಣಿಗಳಿಗೆ ಗೋಡೆ ಹಾಕಿದಂತೆ ಇಲ್ಲಿ ಹಸಿರು ಗೋಡೆಗಳೆದ್ದಿವೆ. ಸೊಂಡಿಲೆತ್ತಿರುವ ಆನೆಗಳು, ಚಪ್ಪಾಳೆ ತಟ್ಟುವ ಮೊಲ, ಉಭಯ ಕುಶಲೋಪರಿ ವಿಚಾರಿಸುವ ಹಂಸಗಳು, ಓಡಲು ಸಿದ್ದವಾದ ಜಿಂಕೆಗಳು ಹಸಿರ ಬಟ್ಟೆಯನ್ನು ತೊಟ್ಟು ಸ್ವಾಗತಿಸುತ್ತಿವೆ.
ಮಹಾರಾಣಿ ಕೃಷ್ಣವಿಲಾಸ ಲಿಂಗರಾಜಮ್ಮಣ್ಣಿ ಸವಿನೆನಪಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ 1828ರಲ್ಲಿ 250 ಎಕರೆ ವಿಸ್ತೀರ್ಣದ ಲಿಂಗಾಂಬುಧಿ ಕೆರೆಯನ್ನು ಕಟ್ಟಿಸಿದರು. 150 ಎಕರೆಯಲ್ಲಿ ಜಲರಾಶಿಯಿದ್ದರೆ, 100 ಎಕರೆಯಲ್ಲಿ ಮೀಸಲು ಅರಣ್ಯ ಹಬ್ಬಿದೆ. ₹ 5.6 ಕೋಟಿ ವೆಚ್ಚದಲ್ಲಿ ತೋಟಗಾರಿಕಾ ಇಲಾಖೆ ಸಸ್ಯೋದ್ಯಾನವನ್ನು ಅಭಿವೃದ್ಧಿ ಪಡಿಸಿದೆ.
ಸಸ್ಯಗಳ ಸಂರಕ್ಷಣೆ, ಪರಿಚಯ ಮಾಡಿಕೊಡುವುದಲ್ಲದೇ ಪರಿಸರ ಸಂರಕ್ಷಣೆಯ ಪಾಠವನ್ನೂ ಉದ್ಯಾನ ಹೇಳುತ್ತದೆ. ಪ್ರತಿ ಸಸ್ಯದ ಪ್ರಭೇದ, ಅವು ಬೆಳೆಯುವ ಸ್ಥಳ, ವಾತಾವರಣದ ಮಾಹಿತಿಯೂ ಇರುವುದು ವಿಶೇಷ. ಇದೀಗ ಪ್ರತಿ ಗಿಡಗಳ ಪರಿಚಯಕ್ಕೂ ಕ್ಯೂಆರ್ ಕೋಡ್ ಜೋಡಿಸಲು ಸಿದ್ಧತೆಯೂ ನಡೆದಿದೆ. ಲಾಲ್‌ಬಾಗ್‌ನಂತೆಯೇ ಇಲ್ಲಿಯೂ ಪ್ರವೇಶಕ್ಕೆ ಟಿಕೆಟ್ ದರ ನಿಗದಿಗೊಳಿಸುವ ಪ್ರಯತ್ನವೂ ನಡೆದಿದೆ. ಬೆಳಿಗ್ಗೆ 9.30ರಿಂದ ಸಂಜೆ 6ರವರೆಗೆ ತೆರೆದಿರುತ್ತದೆ.
ಉದ್ಯಾನವು ದೇಸಿ ಹಾಗೂ ವಿದೇಶಿಯ ಸಸ್ಯಗಳ ಸಮ್ಮಿಲನ. ನಗರ ಹಾಗೂ ಹಳ್ಳಿಗಾಡಿನಲ್ಲೂ ಅಪರೂಪವಾಗುತ್ತಿರುವ ಬಾಗೆ, ಅಂಕೋಲೆ, ಸೀಗೆ, ಅಂಟುವಾಳ ಮರಗಳೂ ಇಲ್ಲಿವೆ. ಹದಿನೈದು ವಿಭಾಗಗಳಲ್ಲಿ ಹರಡಿಕೊಡಿರುವ ಉದ್ಯಾನದಲ್ಲಿ ಗುಲಾಬಿ ತಾಕು, ಔಷಧೀಯ ಸಸ್ಯಗಳು, ಸುವಾಸನೆ ಭರಿತ ಹೂ ಗಿಡಗಳು, ಟೊಪಿಯರಿ, ಚಿಟ್ಟೆ, ಬಿದಿರು, ಕಲ್ಲುಗಳ ಉದ್ಯಾನ, ಸಣ್ಣ ಹಣ್ಣುಗಳ ತೋಪು, ಜಲಸಸ್ಯಗಳ ಎರಡು ಕೊಳಗಳೂ ಇವೆ.
ಜಾಗತಿಕ ತಾಪಮಾನ ಏರಿಕೆ, ಕೀಟಭಾದೆ, ಕಾಯಿಲೆ, ವಿದೇಶಿ ಸಸ್ಯಗಳ ದಾಳಿಯಿಂದ ಅಳಿವಿನಂಚಿಗೆ ಬಂದಿರುವ ಔಷಧೀಯ ಗುಣವಿರುವ ಹತ್ತಾರು ಜಾತಿಯ ಗಿಡ–ಮರಗಳಿವೆ. ದಾಲ್ಚಿನ್ನಿ, ಅಂಜೂರ ಹಾಗೂ ಅರ್ಜುನ ಮರಗಳ ಜೊತೆ ಕೆರೆಯ ಒಡಲಿನಲ್ಲೇ ಮೊದಲೇ ಇದ್ದ ರಕ್ತಚಂದನ, ಬೇಲ, ಬೇವು, ಬನ್ನಿ, ಶ್ರೀಗಂಧ ಅವುಗಳನ್ನು ಉಳಿಸಿಕೊಳ್ಳಲಾಗಿದೆ. ಅಂಥ ಮೂವತ್ತು ಪ್ರಭೇದದ ಮರಗಳಿವೆ.
ಬಿದಿರಿನ ವಿಭಾಗದಲ್ಲಿ ಬುದ್ಧ ಬಿದಿರು, ಕೊಡೆ ಬಿದಿರು, ಗ್ವಾಡುವಾ, ಜಪಾನಿನ ಬಾಣ ಬಿದಿರು, ಕರಿ ಬಿದಿರು ಸೇರಿದಂತೆ ಹದಿನೇಳು ವಿವಿಧ ತಳಿಗಳಿವೆ. ಗುಲಾಬಿ ತಾಕಿನಲ್ಲಿ ಎಂಬತ್ತಕ್ಕೂ ಹೆಚ್ಚು ಜಾತಿಯ ಗುಲಾಬಿಗಳಿವೆ. ನಂಜನಗೂಡು ರಸಬಾಳೆ, ಮೈಸೂರು ವೀಳ್ಯೆದೆಲೆ, ಮಲ್ಲಿಗೆ ಸೇರಿದಂತೆ ಮೈಸೂರಿನ ವಿಶೇಷಗಳೂ ಇವೆ.
ಹಣ್ಣು ನೀಡುವ ಅತ್ತಿಮರ, ಆಫ್ರಿಕಾ ಲೋಕಸ್ಟ್ ಬೀನ್, ಕೃಷ್ಣ ಅಂಜೂರ, ಮೈಸೂರು ಅಂಜೂರ, ಮರಸೇಬು, ಅರಳಿ, ಅಶ್ವತ್ಥ, ಆಲ, ಹಲಸು, ಛತ್ರಿ, ನಲ್ಲಿ, ನೇರಳೆ ಮರಗಳಿವೆ. ಬೂದು ಮಂಗಟ್ಟೆ ಸೇರಿದಂತೆ ನೂರಾರು ಪಕ್ಷಿಗಳು ಹಣ್ಣನ್ನು ಅರಸಿ ಬರುತ್ತವೆ. ಚಿಟ್ಟೆಗಳನ್ನು ಆಕರ್ಷಿಸುವ ಹದಿನಾಲ್ಕು ಹೂ ಸಸ್ಯಗಳನ್ನು ಬೆಳೆಸಲಾಗಿದೆ. ನೂರೈವತ್ತು ಅಡಿ ಉದ್ದದ ಸಸ್ಯ ಚಾವಣಿ (ಪರ್ಗೊಲಾ) ನಿರ್ಮಾಣ ಮಾಡಲಾಗಿದ್ದು, ಹೂ ನೆರಳಿನಲ್ಲಿ ಹೆಜ್ಜೆ ಹಾಕಲು ಲಿಂಗಾಂಬುಧಿ ಕೆರೆಯ ವಾಯುವಿಹಾರಿಗಳೂ ಇಲ್ಲಿಗೆ ಬರುತ್ತಾರೆ. ರಾಶಿ ವನ, ನಕ್ಷತ್ರ ವನವನ್ನೂ ನಿರ್ಮಿಸಲಾಗಿದೆ. ಕೆರೆಯಲ್ಲಿ ಹೊಸ ಪಕ್ಷಿ ವೀಕ್ಷಣಾ ಗೋಪುರವೂ ಇದೆ.
ಕುಟುಂಬದೊಂದಿಗೆ ಮೈಸೂರಿಗೆ ಪ್ರವಾಸ ಬರುವವರ ಫೇವರಿಟ್ ಸ್ಥಳಗಳ ಪಟ್ಟಿಯಲ್ಲಿ ಲಿಂಗಾಂಬುಧಿ ಉದ್ಯಾನವೂ ಇದೆ. ನೀವು ಕೂಡ ಯಾವ ಅನುಮಾನವೂ ಇಲ್ಲದೆ ಇದನ್ನು ನಿಮ್ಮ ಪಟ್ಟಿಗೂ ಸೇರಿಸಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.