ಅಮೆರಿಕದ ಒಬ್ಬ ರೈತ ಹುಡುಗಿ ಲಾರಾ ಇಂಗಲ್ಸ್ ವೈಲ್ಡರ್ (19ನೇ ಶತಮಾನ). ಮಕ್ಕಳಿಗಾಗಿ ಅವಳು ತನ್ನ ಆತ್ಮಕತೆಯನ್ನು ಒಂಬತ್ತು ಪುಸ್ತಕಗಳ Little House ಸರಣಿಯಲ್ಲಿ ಬರೆದಿದ್ದು, ಅವು ಅಂದಿನ ಅಮೆರಿಕ, ಅಲ್ಲಿನ ಪರಿಸರ, ಸಂಸ್ಕೃತಿಗಳ ಪರಿಚಯವನ್ನು ಮಕ್ಕಳು ಬೆರಗಾಗುವಂತೆ ಪರಿಚಯಿಸುತ್ತವೆ. ಈ ಸರಣಿ ಕನ್ನಡವೂ ಸೇರಿದಂತೆ ಜಗತ್ತಿನ 40ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದೆ.
ಈ ಸರಣಿಯ ಜನಪ್ರಿಯತೆಯನ್ನು ಕಂಡು ಕಳೆದ ಶತಮಾನದ ಅರವತ್ತರ ದಶಕದಲ್ಲಿ ಇದನ್ನು ಕನ್ನಡಕ್ಕೆ ಅನುವಾದಿಸಿದವರು ಮೈಸೂರಿನ ‘ಮಾನಸ ಗಂಗೋತ್ರಿ’ಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಎಸ್. ಅನಂತ ನಾರಾಯಣ. ಅವರು ಮೊದಲ ಏಳು ಪುಸ್ತಕಗಳನ್ನು ಪ್ರಕಟಿಸಿದರು. ಎಂಟನೇ ಪುಸ್ತಕವನ್ನು ಪ್ರಕಟಿಸುವ ಮುಂಚೆಯೇ ದುರದೃಷ್ಟವಶಾತ್ ತೀರಿಕೊಂಡರು. ನಂತರದ ದಿನಗಳಲ್ಲಿ ನನ್ನ ತಂದೆ ಪೂರ್ಣಚಂದ್ರ ತೇಜಸ್ವಿ ಹಾಗೂ ಶ್ರೀರಾಮ್ ಅವರು ಎಲ್ಲ ಪುಸ್ತಕಗಳನ್ನು ಮರು ಪ್ರಕಟಿಸಿದರು. ಒಂಬತ್ತನೇ ಪುಸ್ತಕವನ್ನು ನನ್ನ ತಂಗಿ ಕೆ.ಪಿ.ಈಶಾನ್ಯೆ ಅನುವಾದಿಸಿ ಪ್ರಕಟಿಸಿದಳು.
ನಾನು ಚಿಕ್ಕಂದಿನಿಂದಲೂ ಕನ್ನಡ ಪುಸ್ತಕಗಳನ್ನು ಯಥೇಚ್ಛವಾಗಿ ಓದುತ್ತಿದ್ದೆ. ಇಂಗ್ಲಿಷ್‌ನಿಂದ ಕನ್ನಡಕ್ಕೆ ಬಂದ ಹಲವು ಕ್ಲಾಸಿಕ್ ಕೃತಿಗಳು ನಮ್ಮ ಮನೆಯ ಸಂಗ್ರಹದಲ್ಲಿದ್ದವು. ನಾನುಅವೆಲ್ಲವುಗಳನ್ನೂ ಓದಿದ್ದೆ. ಪಾತಾಳದಲ್ಲಿ ಪಾಪಚ್ಚಿ, ಆಲಿವರ್ ಟ್ವಿಸ್ಟ್, ರಾಬಿನ್ಸನ್ ಕ್ರೂಸೊ, ರಾಬಿನ್ ಹುಡ್, ಕೆನಿಲ್ ವರ್ತ್, ಹಮ್ಮು ಮತ್ತು ಬಿಮ್ಮು, ಸಿಂದಾಬಾದ್ ನಾವಿಕ ಮುಂತಾದವುಗಳ ಮಧ್ಯೆ ಲಾರಾ ಇಂಗಲ್ಸ್ ವೈಲ್ಡರ್ ಪುಸ್ತಕಗಳೂ ಇದ್ದವು. ನನ್ನ ಹತ್ತನೇ ಹುಟ್ಟುಹಬ್ಬಕ್ಕೆ ನಮ್ಮಮ್ಮ ಲಾರಾ ಇಂಗಲ್ಸ್ ವೈಲ್ಡರ್ ಪುಸ್ತಕಗಳನ್ನು ಉಡುಗೊರೆಯಾಗಿ ಕೊಟ್ಟರು. ನನಗೂ ಮತ್ತು ನನ್ನ ತಂಗಿಗೂ ಖುಷಿಯೋ ಖುಷಿ! ಚಿಕ್ಕಂದಿನ ಭಾಗವಾಗಿ ಏನನ್ನಾದರೂ ವಿಪರೀತ ಆಸಕ್ತಿಯಿಂದ ಓದಿದ್ದರೆ ಅವು ಎಂದಿಗೂ ಮರೆತು ಹೋಗುವುದಿಲ್ಲವಂತೆ. ಈ ಪುಸ್ತಕಗಳು ನನ್ನ ಮತ್ತು ನನ್ನ ತಂಗಿಯ ಪಾಲಿಗೆ ಅಂತಹದೊಂದು ಸವಿನೆನಪಿನ ಪುಸ್ತಕಗಳು.
ದೊಡ್ಡ ಕಾಡಿನ ಪುಟ್ಟ ಮನೆಯಲ್ಲಿ ಬೆಳೆಯುವ ಲಾರಾ, ಆಕೆಯೊಂದಿಗೆ ಆಟವಾಡುವ ಅಕ್ಕ ಮೇರಿ. ಬೇಟೆಯಲ್ಲಿ ಎತ್ತಿದ ಕೈಯ್ಯಾದ ತಂದೆ ‘ಪಾ’… ಹೀಗೆ ಮೊದಲಾಗುವ ಈ ಸರಣಿಯಲ್ಲಿ ತನ್ನ ಗಂಭೀರ ಸ್ವಭಾವದಿಂದ ಎಲ್ಲರ ಮನಗೆಲ್ಲುವ ಅಕ್ಕ ಮೇರಿ, ಯಾವಾಗಲೂ ಚೇಷ್ಟೆ
ಮಾಡಿ ತಾಯಿಯ ಕೈಯಲ್ಲಿ ಬೈಯಿಸಿಕೊಳ್ಳುತ್ತ, ತನ್ನ ಇಚ್ಛೆಯಂತೆ ಬದುಕಲು ಬಯಸುವ ಲಾರಾ ಮತ್ತು ಅವರ ಒಡನಾಟದ ಕುತೂಹಲದ ಕತೆಯಿದೆ.
ಅವರಿದ್ದ ಹಿಮ ಬೀಳುವ ಪ್ರದೇಶದಿಂದ ಕೆಲ ವರ್ಷಗಳ ನಂತರ ರೆಡ್ ಇಂಡಿಯನ್ ಪ್ರದೇಶಕ್ಕೆ ವಲಸೆ ಹೋಗುವ ಅವರು ಅಲ್ಲಿ ಮಾಡುವ ಸಾಲು ಸಾಲು ಸಾಹಸಗಳ ಕತೆಗಳು ಮಕ್ಕಳನ್ನು ಮಂತ್ರಮುಗ್ಧಗೊಳಿಸುತ್ತವೆ. ಹಿಮಕಟ್ಟಿದ ಮಹಾನದಿ ಮಿಸ್ಸಿಸಿಪ್ಪಿಯನ್ನು ದಾಟುವಾಗ ಪೇಚಾಟಕ್ಕೆ ಸಿಲುಕುವ ಕುದುರೆ ಬಂಡಿಯನ್ನು ದಾಟಿಸುವ ಸಾಹಸ, ಆ ಕಾಲದ ಕ್ರಿಸ್ಮಸ್ ಹಬ್ಬ ತರುತ್ತಿದ್ದ ಸಂಭ್ರಮ, ಜ್ವರದಿಂದ ಮೇರಿಗೆ ಕುರುಡುತನ ಆವರಿಸಿದಾಗ ಆಗುವ ನೋವು, ಮಿಡತೆಗಳ ದಾಳಿಯಲ್ಲಿ ವರ್ಷದ ಫಸಲೆಲ್ಲ ನಾಶವಾದಾಗ ಆದ ಹತಾಶೆ, ಸೌತ್ ಡಕೋಟಾ ಪಟ್ಟಣದಲ್ಲಿದ್ದಾಗ ಊಟಕ್ಕೂ ಗತಿಯಿಲ್ಲದೇ ಚಳಿಯಲ್ಲಿ ಸಿಲುಕಿ ಎದುರಿಸುವ ಕಷ್ಟ, ಹೀಗೆ ಲಾರಾಳ ಬಾಲ್ಯದ ಪಯಣದ ವಿವರಗಳು ಮಕ್ಕಳನ್ನು ಬಿಟ್ಟೂಬಿಡದೆ ಓದಿಸಿಕೊಂಡು ಹೋಗುತ್ತವೆ. ಮುಂದೆ ಲಾರಾ ಅಧ್ಯಾಪಕಿಯಾಗುತ್ತಾಳೆ. ಅಲ್ಮಾಜೋನನ್ನು ಪ್ರೀತಿಸಿ ಮದುವೆಯಾಗುತ್ತಾಳೆ.
ಎಸ್. ಅನಂತ ನಾರಾಯಣ ಅವರು ತುಂಬಾ ಸರಳವಾಗಿ ಮತ್ತು ಆಸಕ್ತಿದಾಯಕವಾಗಿ ಅನುವಾದಿಸಿದ್ದಾರೆ. ನನ್ನ ಜೀವನಕ್ಕೆ ಈ ಪುಸ್ತಕಗಳು ಬಹಳ ಹತ್ತಿರವಾದವು. ನಾವೂ ಕಾಡಿನಲ್ಲಿ ಬೆಳೆದವರು. ನಮ್ಮೊಡನೆಯೂ ಲಾರಾಳ ಪ್ರೀತಿಯ ನಾಯಿ ‘ಜಾಕ್’ನಂತೆ ‘ಕಿವಿ’, ‘ಜೂಲಿ’, ‘ಮಿಟ್ಟಿ’, ‘ಜಾಕಿ’, ‘ಜೀನಿ’ ನಾಯಿಗಳಿದ್ದವು. ನಮ್ಮ ತಂದೆಯೂ ‘ಪಾ’ನಂತೆ ಬೇಟೆಯಾಡುತ್ತಿದ್ದರು. ನಾವೂ ಹಳ್ಳಗಳಲ್ಲಿ ಮೀನು, ಏಡಿಗಳನ್ನು ಹಿಡಿದುಕೊಂಡು ತೋಟದಲ್ಲಿ ನಮ್ಮ ಪಾಡಿಗೆ ನಾವು ತಿರುಗುತ್ತಿದ್ದೆವು. ನಾವೂ ಅವಳಂತೆ ಪೇಟೆಯಲ್ಲಿ ಶಾಲೆಗೆ ಹೋಗಿ ಹಿಂದಿರುಗುತ್ತಿದ್ದೆವು.
ನಾನು ಪ್ರತೀ ಬೇಸಿಗೆ ರಜೆಯಲ್ಲೂ ಈ ಕೃತಿಗಳನ್ನು ಓದುತ್ತಿದ್ದೆ. ಹೀಗೆ ಆರೇಳು ಬಾರಿ ಈ ಸರಣಿಯನ್ನು ಓದಿದ್ದೇನೆ. ನನಗೆ ಬೇರೆ ದೇಶಗಳನ್ನು ಸುತ್ತಿ ಹೊರ ಪ್ರಪಂಚವನ್ನು ನೋಡುವ ಆಸೆ ಹುಟ್ಟಿಸಿದ ಮೊದಲ ಪುಸ್ತಕಗಳು ಇವು. ಈಗಿನ ಮಕ್ಕಳು, ಯುವಕ, ಯುವತಿಯರು ಈ ಸರಣಿಯನ್ನು ಓದಿ ನಮ್ಮಂತೆಯೇ ಆನಂದಿಸಬಹುದು, ಅಮೆರಿಕದಲ್ಲಿ ರೈತರ ಜೀವನ ಹಿಂದೆ ಹೇಗಿತ್ತು ಎಂದು ತಿಳಿಯಬಹುದು. ನಾವು ಪರ್ಯಟನೆ ಮಾಡಲಾಗದಿದ್ದರೂ ಪುಸ್ತಕಗಳನ್ನು ಓದಿ ಪ್ರಪಂಚವನ್ನು ತಿಳಿಯಬಹುದು.
ಮೈಲ್ಯಾಂಗ್ ಬುಕ್ಸ್ ಈಗ ಲಾರಾ ಇಂಗಲ್ಸ್ ವೈಲ್ಡರ್ ಮಕ್ಕಳ ಸರಣಿಯ ಎಲ್ಲ ಒಂಬತ್ತು ಪುಸ್ತಕಗಳನ್ನು ಇ ಬುಕ್ಸ್ ರೂಪದಲ್ಲಿ ಮೈಲ್ಯಾಂಗ್ ಆ್ಯಪ್ (MyLang) ಮೂಲಕ ಕನ್ನಡದಲ್ಲಿ ಬಿಡುಗಡೆ ಆಗುತ್ತಿದೆ. ಮಕ್ಕಳಲ್ಲಿ ಓದುವ ಆಸಕ್ತಿ, ಪ್ರಪಂಚದ ಬೇರೆ ಸಂಸ್ಕೃತಿಗಳ ಬಗ್ಗೆ ಕಲಿಯುವ ಮನಸ್ಸು ಹುಟ್ಟು ಹಾಕುವಲ್ಲಿ ಈ ಸರಣಿ ಉಪಯುಕ್ತ. ಕನ್ನಡದ ಮಕ್ಕಳು ಇದನ್ನು ಓದುವ ಹಾಗಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.