ADVERTISEMENT

ಸ್ವಾಭಿಮಾನದ ಸೇತು

ನಾ.ಕಾರಂತ ಪೆರಾಜೆ
Published 3 ಜುಲೈ 2021, 19:30 IST
Last Updated 3 ಜುಲೈ 2021, 19:30 IST
ಹಳ್ಳದ ಸಣ್ಣ ಹರಿವು. ಚಿಣ್ಣರಿಗೆ ಖುಷಿ... ಆದರೆ, ಹಳ್ಳ ಉಕ್ಕಿ ಹರಿದಾಗ?
ಹಳ್ಳದ ಸಣ್ಣ ಹರಿವು. ಚಿಣ್ಣರಿಗೆ ಖುಷಿ... ಆದರೆ, ಹಳ್ಳ ಉಕ್ಕಿ ಹರಿದಾಗ?   

ಹಳ್ಳಿಯ ಸ್ವಾಭಿಮಾನದ ಸೇತುವೆ ಈ ‘ಗ್ರಾಮ ಸೇತು’! ಮನಸ್ಸುಗಳನ್ನು ಬೆಸೆದ ಸೇತು. ಸಮ್ಮನಸಿಗರನ್ನು ಒಂದು ಮಾಡಿದ ಸೇತು. ಊರವರ ಹದಿನೈದು ವರುಷಗಳ ಹರಕೆ. ಗ್ರಾಮದೊಳಗಿನ ಊರುಗಳು ಇನ್ನು ದ್ವೀಪವಾಗುವುದಿಲ್ಲ. ಮಳೆಗಾಲದಲ್ಲಿ ಮೌನಕ್ಕೆ ಜಾರುತ್ತಿದ್ದ ದಿನಮಾನಗಳು ಭೂತಕಾಲಕ್ಕೆ ಸೇರಿದುವು. ಮೊಗ್ರದಲ್ಲೀಗ ಮಂದಹಾಸದ ಮಂದಾನಿಲ.

ಅದು ಸುಳ್ಯ ತಾಲೂಕಿನ (ದ.ಕ.) ಗುತ್ತಿಗಾರು ಗ್ರಾಮದ – ಒಂದನೇ ವಾರ್ಡ್ - ಹಳ್ಳಿ ‘ಮೊಗ್ರ’. ಸರಕಾರಿ ಆಸ್ಪತ್ರೆ, ಶಾಲೆ, ಅಂಗನವಾಡಿ, ಭಜನಾ ಮಂದಿರ, ದೈವಸ್ಥಾನವಿರುವ ಊರು. ಇಲ್ಲಿನ ಶಾಲೆಯು ಮತದಾನದ ಕೇಂದ್ರ. ಸುತ್ತಲಿನ ಕಮಿಲ, ಏರಣಗುಡ್ಡೆ, ಮಲ್ಕಜೆ, ಬಳ್ಳಕ್ಕ ಊರುಗಳಿಂದ ಮೊಗ್ರ ಸೇರಲು ಬೇಸಿಗೆಯಲ್ಲಿ ಕಷ್ಟವಿಲ್ಲ. ಮಳೆಗಾಲದಲ್ಲಿ ಹಳ್ಳ ದಾಟುವುದು ತ್ರಾಸ. ಇಲ್ಲಿನದು ಸುಮಾರು ಸಾವಿರದ ಮುನ್ನೂರು ಜನಸಂಖ್ಯೆ.

ಹೆಚ್ಚು ಮಳೆ ಬೀಳುವ ಪ್ರದೇಶವಾದ್ದರಿಂದ ಹಳ್ಳವು ತುಂಬಿ ಹರಿಯುತ್ತಿದೆ. ದಾಟಲು ಕಷ್ಟ. ವಾಹನ ಚಲಾಯಿಸಲು ಅಸಾಧ್ಯ. ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳು, ಶಾಲಾ ವಿದ್ಯಾರ್ಥಿಗಳು, ಶ್ರಮಿಕರ ಪಾಡು ವಿಷಾದಗಳ ಗೂಡು. ಪ್ರತಿವರುಷವೂ ಪಂಚಾಯತ್ ನಿರ್ಮಿಸುವ ಅಡಿಕೆ ಮರದ ಸಂಕ ಯಾ ಪಾಲದಲ್ಲಿ (ಕಿರು ಸೇತುವೆಯ ತರಹ, ಇದು ಅಲ್ಪಾಯುಷಿ) ಉಸಿರು ಬಿಗಿ ಹಿಡಿದು ದಾಟಬೇಕಿತ್ತು. ದಾಟುವಾಗ ಸಮತೋಲನ ತಪ್ಪಿದರೆ ಕಣ್ಣೀರಿನ ದುರಂತ. ಬೆಳಿಗ್ಗೆ ಸಲೀಸಾಗಿ ದಾಟಲು ಮೊಣಕಾಲಿನ ತನಕ ನೀರಿದ್ದರೆ, ಬಳಿಕ ಮಳೆ ಬಂದು ನೀರು ಏರಿದಾಗ ಸಂಜೆ ಆಚೆ ದಡದವರು ಆಚೆ, ಈಚೆ ದಡದವರು ಈಚೆ! ತ್ರಿಶಂಕು ಸ್ಥಿತಿ.

ADVERTISEMENT

ಶಾಶ್ವತವಾದ ಸೇತುವೆಯ ನಿರ್ಮಾಣಕ್ಕೆ ಊರವರು ಮನವಿಯ ಮೇಲೆ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತಾ ಬಂದರು. ಜತೆಗೆ ಚುನಾವಣೆಗಳು ಬಂದಾಗ ಅರಳಿದ ಮುಖಗಳಿಂದ ತುಂಬು ಆಶ್ವಾಸನೆಗಳ ಭರಪೂರ. ಅದೂ ನಿರಂತರ ಹದಿನೈದು ವರುಷ. ರಾಜ್ಯ ಅಲ್ಲ, ದೇಶದ ಪ್ರಧಾನಿ ಕಾರ್ಯಾಲಯದವರೆಗೂ ಊರಿನ ಸಮಸ್ಯೆ ಚಿತ್ರಿತ ವಿಡಿಯೋ ತಲಪಿತು. ಅಲ್ಲಿಂದ ಸಂಬಂಧಪಟ್ಟ ಇಲಾಖೆಗೆ ‘ಸಮಸ್ಯೆ ಪರಿಹರಿಸಲು’ ಹಿಮ್ಮಾಹಿತಿ ಬಂದಿತ್ತು. ಎಷ್ಟು ವೇಗದಲ್ಲಿ ಹಿಮ್ಮಾಹಿತಿ ಬಂದಿತ್ತೋ ಅಷ್ಟೇ ವೇಗದಲ್ಲದು ಕಡತದೊಳಗೆ ಮಲಗಿತು ಕೂಡಾ! ಅಲ್ಲದೆ ನವಮಾಧ್ಯಮಗಳಲ್ಲಿ ಸಮಸ್ಯೆಯನ್ನು ತಿಳಿಸುವ ಯತ್ನ ಮಾಡಲಾಯಿತು. ಎಲ್ಲವೂ ಗೋರ್ಕಲ್ಲ ಮೇಲಿನ ನೀರಾದಾಗ ಮಳೆಗಾಲ ಬೆನ್ನಟ್ಟುತ್ತಾ ಬಂತು. ಈ ವರುಷವೂ ಅಡಿಕೆ ಮರದ ಸಂಕವೇ ಗತಿ!

‘ಪಂಚಾಯತ್ ಯಾಕೆ, ಊರವರೇ ಸೇರಿ ತಾತ್ಕಾಲಿಕ ಕಬ್ಬಿಣದ ಸೇತುವೆ ಮಾಡಿದರೆ ಹೇಗೆ?’, ಗ್ರಾಮದ ಮಧ್ಯೆಯೇ ಗ್ರಾಮಸ್ಥರಿಂದ ಕೇಳಿ ಬಂದ ದನಿ. ಅದೂ ಯುವ ದನಿ. ಹೇಳಿದಷ್ಟು ಸುಲಭವಾಗಿರಲಿಲ್ಲ. ಜವಾಬ್ದಾರಿ ಹೊರುವ ಹೆಗಲುಗಳು, ಲಕ್ಷ ಮೀರುವ ಆರ್ಥಿಕತೆ ಮತ್ತು ಎಲ್ಲವನ್ನೂ ಸಮಚಿತ್ತದಲ್ಲಿ ಗ್ರಹಿಸುವ ನಾಯಕತ್ವ ಬೇಕಾಗಿತ್ತು. ಮುಖ್ಯವಾಗಿ ಕೊರೊನಾ ಸಂಕಟಗಳಿಂದ ಮುದುಡಿದ್ದ ಹಳ್ಳಿ ಮನಸ್ಸುಗಳಿಗೆ ಚೇತನ ತುಂಬುವ ಕೆಲಸವೂ ಜತೆಜತೆಯಲ್ಲಿ ಆಗಬೇಕಿತ್ತು.

ಆಗಲೇ ನಾಲ್ಕು ಪಂಚಾಯತ್ ಸದಸ್ಯರನ್ನು ಹೊಂದಿದ್ದ ‘ಗ್ರಾಮ ಭಾರತ’ ಎನ್ನುವ ಪಕ್ಷೇತರ ತಂಡದ ರೂವಾರಿ ಮಹೇಶ್ ಪುಚ್ಚಪ್ಪಾಡಿಯವರ ಕಿವಿ ಅರಳಿತು. ಯುವ ತಂತ್ರಜ್ಞ ಪತಂಜಲಿ ಭಾರದ್ವಾಜ್ ಇವರ ಭೇಟಿ, ಮಾತುಕತೆ. ಇವರು ತೂಗುಸೇತುವೆಯ ಸರದಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜರ ಚಿರಂಜೀವಿ. ಸುಮಾರು ಒಂದೂವರೆ ಲಕ್ಷ ರೂಪಾಯಿಯ ನೀಲನಕ್ಷೆ ಸಿದ್ಧವಾಯಿತು. ಇನ್ನು ಹಣ ಕ್ರೋಢೀಕರಣ. ಅಬ್ಬಬ್ಬಾ ಅಂದರೆ ಊರಿಂದ ಅರ್ಧಾಂಶದಷ್ಟು ಭರಿಸಬಹುದು. ಮಿಕ್ಕುಳಿದ ಮೊತ್ತ?

ಊರವರ ಆಶ್ವಾಸನೆಗಳು ಬಾಯಿಮಾತಿನಲ್ಲಷ್ಟೇ ನಿಲ್ಲಲಿಲ್ಲ. ನಿಧಾನಕ್ಕೆ ಬೊಗಸೆಗೆ ಹರಿದು ಬರಲು ಆರಂಭವಾಯಿತು. ಐನೂರು ರೂಪಾಯಿಯಿಂದ ಐದು, ಹತ್ತು ಸಾವಿರದ ತನಕ! ಗ್ರಾಮಾಭಿವೃದ್ಧಿಯ ಒಂದು ಎಸಳಾದ ಸೇತುವೆ ನಿರ್ಮಾಣದ ಆಶಯವನ್ನು ಫೇಸ್ ಬುಕ್ಕಿನಲ್ಲಿ ಹರಿಯಬಿಟ್ಟ ಮಹೇಶ್ ಹೇಳುತ್ತಾರೆ, ‘ಊರಿನ ಗಣ್ಯರಲ್ಲದೆ ಮಂಗಳೂರಿನ ಬ್ರಿವೆರಾ ಟೆಕ್ನಾಲಜೀಸ್ ಪ್ರೈವೇಟ್ ಲಿ., ಮಯೋರಾ ಐಟಿ ಸರ್ವಿಸ್ ಅಂಡ್ ಕನ್ಸಲ್ಟಿಂಗ್ ಪ್ರೈ ಲಿ., ರೈಟ್ ಟು ಲೀವ್, ಕೆನಡಾದಿಂದ ಸೂರಜ್ ಮುತ್ಲಾಜೆ, ಫಾ. ಆದರ್ಶ ಜೋಸೆಫ್, ಗುತ್ತಿಗಾರಿನ ಆಶಾಭಾರತಿ ಎಸೋಸಿಯೇಟ್ಸ್, ಸುಳ್ಯದ ಚಂದ್ರಶೇಖರ ದಾಮ್ಲೆ, ಮುಳಿಯ ಜ್ಯುವೆಲ್ಸ್, ಯಶ್ಚಿತ್ ಕಾಳಮ್ಮನೆ, ಎಚ್.ವಿ.ನೀಲಾವತಿ ಕತ್ಲಡ್ಕ, ಪುಚ್ಚಪ್ಪಾಡಿಯ ಹರಿಸುಬ್ರಹ್ಮಣ್ಯ ಪಿ.ವಿ., ರಘುರಾಮ ಎಂ. ಇವರೆಲ್ಲಾ ಸೇತುವೆಗೆ ಬೆನ್ನು ನೀಡಿದ ಮಹನೀಯರು. ಸಮಸ್ಯೆಯು ಹತ್ತಿಯಂತೆ ಹಗುರವಾಯಿತು’.

ತಂತ್ರಜ್ಞರಿಂದ ಜೂನ್ 5ಕ್ಕೆ ನೀಲನಕ್ಷೆ ಸಿದ್ಧವಾಗಿತ್ತು. ಜೂನ್ 12ಕ್ಕೆ ಶ್ರೀಕಾರ. ಜೂನ್ 24ಕ್ಕೆ ಸೇತುವೆ ಪೂರ್ಣ. 30ಕ್ಕೆ ಗೂಗಲ್‍ಮೀಟ್ ಮೂಲಕ ಶುಭಚಾಲನೆಗೊಂಡು ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತ! ಒಂದೆರಡು ವಾಕ್ಯದಲ್ಲಿ ಹೇಳಿ ಮುಗಿಸುವ ಸೇತು ಬಂಧದ ಹಿಂದೆ ಹಣಕ್ಕಿಂತಲೂ ಶ್ರಮ, ಊರವರ ಪ್ರೀತಿ, ಯುವಕರ ಹುಮ್ಮಸ್ಸುಗಳ ಆಧಿಕ್ಯ ಕಣ್ಣಿಗೆ ಕಾಣಿಸದು. ಊರಿನ ಹಿರಿಯರು, ಕಿರಿಯರು, ಧಾರ್ಮಿಕ ಮುಖಂಡರು, ವಿದ್ಯಾರ್ಥಿಗಳು ಶ್ರಮದಾನಕ್ಕೆ ಟೊಂಕ ಕಟ್ಟಿದರು. ‘ಇದು ನಮ್ಮ ಸೇತುವೆ’ ಎನ್ನುವ ಆಭಿಮಾನದ ಹೊನಲು ಸಂಚಲನ ಮೂಡಿಸಿತು.

ಏನಿಲ್ಲವೆಂದರೂ ನೂರು ಅರುವತ್ತು ಮಾನವ ದಿವಸಗಳ ಶ್ರಮದ ದಾನವು ಸೇತುವೆಯ ಅಡಿಪಾಯದಲ್ಲಿದೆ. ಸಿಮೆಂಟಿನ ಕಾಂಕ್ರಿಟ್ ಕೆಲಸ, ಪಿಲ್ಲರಿನ ಅಡಿಪಾಯದ ರಚನೆ, ಸಂಪರ್ಕಿಸುವ ಸೇತುವೆ ನಿರ್ಮಾಣ, ತಂತ್ರಜ್ಞರೊಂದಿಗಿನ ಕೆಲಸಗಳು. ಆಯಾಯ ಕೆಲಸಗಳಲ್ಲಿ ಹಿಡಿತವಿರುವ ಜ್ಞಾನಿಗಳು ಮುಂದಾಳತ್ವ ವಹಿಸಿದ್ದರು. ಈ ಶ್ರಮ ಬೇಡುವ ಕೆಲಸಗಳೆಲ್ಲಾ ನಗದಾದರೆ ಲಕ್ಷ ರೂಪಾಯಿಗೂ ಮೀರಬಹುದು. ಸೇತುವಿನ ಉದ್ದ 20 ಮೀಟರ್, ಅಗಲ 1.2 ಮೀಟರ್.

‘ತಂತಮ್ಮ ಮಕ್ಕಳು ಹಳ್ಳ ದಾಟಿ ಆಚೆ ದಡ ಸೇರುವ ಮತ್ತು ಸಂಜೆ ಈಚೆ ತಲಪುವಾಗಲೆಲ್ಲಾ ಹೆತ್ತವರು ಕಾವಲು ಬೇಕಾಗಿತ್ತು. ಬಹುತೇಕ ಮಂದಿ ಕೂಲಿ ಕೆಲಸವನ್ನು ಅವಲಂಬಿಸಿರುವುದರಿಂದ ಮಗುವಿನ ತಂದೆ ಅಥವಾ ತಾಯಿ ಕೂಲಿ ಕೆಲಸಗಳಿಗೆ ರಜೆ ಮಾಡಬೇಕಾಗುತ್ತಿತ್ತು. ಇದರಿಂದಾಗಿ ಗಳಿಕೆಯಲ್ಲಿ ನಷ್ಟವಾಗುತ್ತಿತ್ತು. ಇನ್ನು ದ್ವಿಚಕ್ರಿಗಳ ಪಾಡು. ಹಳ್ಳದಲ್ಲಿ ದಾಟುವಾಗ ಸ್ಕೂಟರ್, ಬೈಕ್ ಆಫ್ ಆಗುವುದು; ಅದರ ಬಿಡಿ ಭಾಗಗಳು ಹಾಳಾಗುವುದು ಮಾಮೂಲಿ. ಒಂದು ಮಳೆ ಋತುವಿನಲ್ಲಿ ಕನಿಷ್ಠ ನಾಲ್ಕೈದು ಸಾವಿರ ರೂಪಾಯಿ ದುರಸ್ಥಿಗಾಗಿ ವ್ಯಯವಾಗುತ್ತಿತ್ತು. ಇನ್ನು ಆ ಭಯವಿಲ್ಲ.” ಎನ್ನುವ ಖುಷಿಯನ್ನು ಹಂಚಿಕೊಂಡರು ಸ್ಥಳೀಯ ಬಾಬು ಕಮಿಲ.

‘ಸೇತುವೆಗೆ ಕಬ್ಬಿಣದ ಚೌಕಟ್ಟುಗಳನ್ನು ಮಾತ್ರ ಬಳಸುವುದು ಆರಂಭದ ಯೋಜನೆಯಾಗಿತ್ತು. ಮಿಕ್ಕುಳಿದಂತೆ ಅಡಿಕೆ ಮರದ ಸಲಕೆಗಳ ಹಾಸು. ಹಣಕಾಸು ಹಗುರವಾದಾಗ ಸಲಕೆಯನ್ನು ಕೈಬಿಟ್ಟು ವಾಟರ್‍ಫ್ರೂಫ್ ಶೀಟನ್ನು ಹಾಸಿದೆವು. ಇದರಲ್ಲಿ ಪಾದಚಾರಿಗಳಲ್ಲದೆ, ದ್ವಿಚಕ್ರ ವಾಹನವನ್ನೂ ಚಲಾಯಿಸಬಹುದು’, ಸೇತುವಿನ ಕ್ಷಮತೆಯನ್ನು ಮಹೇಶ್ ಹೇಳುತ್ತಾ, ‘ಹಳ್ಳಿಯ ಅಭಿವೃದ್ಧಿಯು ಹಳ್ಳಿಯಿಂದಲೇ ಸಾಧ್ಯ ಎಂಬುದು ಮನದಟ್ಟಾಗಿದೆ. ಮುಖ್ಯವಾಗಿ ಊರಿನ ಯುವಕರ ಇಚ್ಛಾಶಕ್ತಿಯನ್ನು ನೋಡಿ ದಂಗಾದೆ’. ಎಂದು ಯುವ ಮನಸ್ಸುಗಳನ್ನು ಶ್ಲಾಘಿಸುತ್ತಾರೆ.

ಸಂಗ್ರಹವಾದ ಪ್ರತಿ ಪೈಸೆಗೂ ಲೆಕ್ಕವಿದೆ. ಊರಿನ ಹಿರಿಯರೊಬ್ಬರನ್ನು ಸೇರಿಸಿಕೊಂಡು ಬ್ಯಾಂಕ್ ಖಾತೆ ತೆರೆದಿದ್ದಾರೆ. ಯಾರೆಲ್ಲಾ ಹಣ ನೀಡಿದ್ದಾರೆಂದು ಸೇತುವೆ ಪಕ್ಕದಲ್ಲಿ ಪ್ಲೆಕ್ಸ್‌ ಹಾಕಿದ್ದಾರೆ. ಖರ್ಚಾದ ಲೆಕ್ಕಗಳೆಲ್ಲವೂ ಪಾರದರ್ಶಕ. ಅದನ್ನು ಜಾಲತಾಣದಲ್ಲೂ ಮಹೇಶ್ ಅಂಟಿಸಲಿದ್ದಾರೆ. ಸೇತುವೆಗೆ ಹೇಳುವಂತಹ ನಿರ್ವಹಣೆಯಿಲ್ಲ. ಇಲ್ಲಿನ ಪ್ರೇರಣೆಯಿಂದ ಸನಿಹದ ಕಿನ್ನಿಕುಮೇರಿ ಹಳ್ಳಕ್ಕೂ ಸೇತುಭಾಗ್ಯ ಬರಲಿದೆ. ಜನರ ಚಿತ್ತವೀಗ ಮೊಗ್ರದತ್ತ.

ಸೇತುವೆ ಕೆಲಸಗಳು ಪೂರ್ತಿಯಾಗಿ ಎಲ್ಲರೂ ಸಂತಸದಲ್ಲಿರುವಾಗ ತಂತ್ರಜ್ಞ ಪತಂಜಲಿ ಭಾರದ್ವಾಜ್ ಕಿವಿ ಮಾತು ಹೇಳಿದರು. ‘ಈ ಸೇತುವೆ ನಿಮ್ಮದೇ. ಅರೆ ಶಾಶ್ವತ ಸೇತುವಾದ್ದರಿಂದ ಕ್ಷಮತೆಗೂ ಮಿತಿಯಿದೆ. ಹಾಗಾಗಿ ಏಕಕಾಲಕ್ಕೆ ಹಿಂದೆ-ಮುಂದೆ ಚದುರಿದಂತೆ ಏಕಕಾಲಕ್ಕೆ ನಾಲ್ಕೈದು ಮಂದಿ ದಾಟಬಹುದು. ದ್ವಿಚಕ್ರದಲ್ಲಾದರೆ ಡಬ್ಬಲ್‍ರೈಡ್ ಬೇಡ. ಈ ಎಚ್ಚರವು ಎಲ್ಲರಲ್ಲೂ ಇದ್ದರೆ ನಿರ್ವಹಣೆ ಬೇಕಾಗದು’.

ಒಂದೆಡೆ ರಾಜಕೀಯ ವ್ಯವಸ್ಥೆ, ಮತ್ತೊಂದೆಡೆ ಜನರನ್ನು ಸಂಘಟಿಸುವ ಯತ್ನ. ಇವುಗಳ ಮಧ್ಯೆ ತಲೆ ಎತ್ತುವ ಕಣ್ಣಿಗೆ ಕಾಣದ ‘ಹಳ್ಳಿ ರಾಜಕೀಯ’ಗಳನ್ನು ಎದುರಿಸುವುದು ಸವಾಲಿನ ಕೆಲಸ. ಇವೆಲ್ಲವನ್ನೂ ಮೀರಿ ನಿಂತ ಮಹೇಶ್ ನೇತೃತ್ವದ ತಂಡವು ಹಳ್ಳಿಗರ ಮೊಗದಲ್ಲಿ ಮುಗುಳ್ನಗೆಯನ್ನು ತಂದಿರುವುದು ನಿಜಾರ್ಥದ ಗ್ರಾಮಾಭಿವೃದ್ಧಿ. ನಿರ್ಮಾಣವಾದ ಸೇತುವೆ ಚಿಕ್ಕದಾಗಿರಬಹುದು. ಅದು ಕಟ್ಟಿಕೊಟ್ಟ ಸ್ವಾಭಿಮಾನ ಮಾತ್ರ ದೊಡ್ಡದು.

***

ಸ್ವಾವಲಂಬನೆಯ ಮಾದರಿ

‘ನಮ್ಮ ದೇಶದಲ್ಲಿ ಸುಭದ್ರವಾದ ಸಂಪರ್ಕ ಸೇತುಗಳಿಲ್ಲದೆ ಹಳ್ಳಿಗಳು ದ್ವೀಪಗಳಾಗುತ್ತಿರುವ ವಿದ್ಯಮಾನ ಇಂದೂ ಕಾಣಸಿಗುತ್ತದೆ. ನೇತ್ರಾವತಿ ತಿರುವಿಗೆಂದು ಸಾವಿರ ಕೋಟಿಗಳಲ್ಲಿ ಸರಕಾರವು ಹಣ ಹಾಕುತ್ತಿರುವುದನ್ನು ಕಾಣುತ್ತೇವೆ. ಆ ಯೋಜನೆಗಳಲ್ಲಿ ನ್ಯೂನತೆಗಳಿದ್ದು ಹಾಕಿದ ಹಣವು ವ್ಯರ್ಥವಾಗುತ್ತಿದೆ. ಆದರೆ ಒಂದು ಲಕ್ಷ ರೂಪಾಯಿಯ ಒಳಗೆ ನಿರ್ಮಿಸಬಹುದಾದ ನೂರಾರು ಕಿರು ಸೇತುವೆಗಳಿಗೆ ಹಣ ಮಂಜೂರಾಗದೆ ಜನ ಪರದಾಡುತ್ತಲೇ ಇರಬೇಕಾಗುತ್ತದೆ. ನಾನು ಬಾಲ್ಯದಲ್ಲೇ ಇಂತಹ ಪರದಾಟವನ್ನು ಕಂಡವನು. ಅದಕ್ಕೆ ಅಂತ್ಯ ಹಾಡಲು ಊರವರೇ ಮುಂದೆ ಬಂದುದು ಅಭಿನಂದನೀಯ. ಮೊಗ್ರ ಗ್ರಾಮದ ಜನರು ಈಗಾಗಲೇ ಅನೇಕ ಅಭಿವೃದ್ಧಿ ಕೆಲಸಗಳಲ್ಲಿ ಸ್ವಾವಲಂಬನೆಯ ಮಾದರಿಗಳನ್ನು ತೋರಿದ್ದಾರೆ. ಹಾಗಾಗಿ ಅವರ ಪ್ರಸ್ತುತ ಸೇತುವೆಯನ್ನು ಕಟ್ಟುವ ಪ್ರಯತ್ನ ಇತರರಿಗೂ ಅರ್ಥಪೂರ್ಣ ಮಾದರಿ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.