ADVERTISEMENT

ಬಾನುಲಿಯಲ್ಲಿ ವೇಣು ಧ್ವನಿ: ಲಾಕ್‌ಡೌನ್‌ – ಫೋನ್‌ ಇನ್‌

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 19:30 IST
Last Updated 22 ಜೂನ್ 2020, 19:30 IST
ಕೆಎಲ್‌ಇ ವೇಣುಧ್ವನಿ ಸಮುದಾಯ ಬಾನುಲಿ ಕೇಂದ್ರದಲ್ಲಿ ನಿರ್ದೇಶಕ ಸುನಿಲ್ ಜಲಾಲ್‌ಪುರೆ, ಕಾರ್ಯನಿರ್ವಾಹಕ ನಂದಗಾಂವ್ ಫೋನ್‌–ಇನ್‌ ಕಾರ್ಯಕ್ರಮ ನಡೆಸಿಕೊಡುತ್ತಿರುವ ದೃಶ್ಯ
ಕೆಎಲ್‌ಇ ವೇಣುಧ್ವನಿ ಸಮುದಾಯ ಬಾನುಲಿ ಕೇಂದ್ರದಲ್ಲಿ ನಿರ್ದೇಶಕ ಸುನಿಲ್ ಜಲಾಲ್‌ಪುರೆ, ಕಾರ್ಯನಿರ್ವಾಹಕ ನಂದಗಾಂವ್ ಫೋನ್‌–ಇನ್‌ ಕಾರ್ಯಕ್ರಮ ನಡೆಸಿಕೊಡುತ್ತಿರುವ ದೃಶ್ಯ   
""
""

ಬೆಳಗಾವಿಯ ‘ವೇಣುಧ್ವನಿ ಸಮುದಾಯ ಬಾನುಲಿ ಕೇಂದ್ರ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ಅನೇಕ ಕುಟುಂಬಗಳಿಗೆ ‘ಫೋನ್‌–ಇನ್’ ಕಾರ್ಯಕ್ರಮದ ಮೂಲಕ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಕೊರೊನಾ ನಂತರವೂ ಈ ಕಾರ್ಯಕ್ರಮ ಮುಂದುವರಿಸಲು ಆಸಕ್ತಿ ತೋರಿದೆ.

ಕಾಕತಿಯ ಸುಭಾಷ್ ಶಿಂಧೆಯವರಿಗೆ ಪಾರ್ಶ್ವವಾಯುವಿನಿಂದಾಗಿ ಎರಡೂ ಕಾಲುಗಳು ಸ್ವಾಧೀನವಿಲ್ಲ. ಇಂಥ ಪರಿಸ್ಥಿತಿಯಲ್ಲೂ ಪೀಠೋಪಕರಣ ತಯಾರಿಸಿಕೊಡುತ್ತಾ, ಜೀವನ ನಡೆಸುತ್ತಾರೆ. ಆದರೆ ಈ ಲಾಕ್‌ಡೌನ್‌ನಿಂದಾಗಿ ದಿಢೀರನೆ ಅವರ ಕೆಲಸವೇ ನಿಂತು ಹೋಯ್ತು. ದಿಕ್ಕೆ ತೋಚದಂತಾದಾಗ ಅವರಿಗೆ ‘ಕೆಎಲ್‌ಇ ವೇಣುಧ್ವನಿ ಸಮುದಾಯ ರೇಡಿಯೊ’ದ ಧ್ವನಿ ಕೇಳಿಸಿತು. ಆ ಕೇಂದ್ರಕ್ಕೆ ಒಂದೇ ಒಂದು ಕರೆ ಮಾಡಿ, ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ಮರುದಿನವೇ ಅವರಿಗೆ ಪೀಠೋಪಕರಣ ತಯಾರು ಮಾಡಿಕೊಡಲು ಆರ್ಡರ್‌ ಬಂತು. ಎರಡು ತಿಂಗಳ ಜೀವನ ನಡೆಸುವಷ್ಟು ಕೆಲಸ ಸಿಕ್ಕಿತು!

ಬೆಳಗಾವಿಯ ಜವಾಹರಲಾಲ್‌ ನೆಹರೂ ವೈದ್ಯಕೀಯ ಕಾಲೇಜು ಆವರಣದಲ್ಲಿರುವ ‘ಕೆಎಲ್‌ಇ ವೇಣು ಧ್ವನಿ’ ಎಂಬ ಸಮುದಾಯ ಬಾನುಲಿ ಕೇಂದ್ರ, ಎರಡೂವರೆ ತಿಂಗಳ ಲಾಕ್‌ಡೌನ್ ಅವಧಿಯಲ್ಲಿಸುಭಾಷ್ ಶಿಂಧೆಯಂತೆ ಸಂಕಷ್ಟದಲ್ಲಿದ್ದ ಹಲವಾರು ಮಂದಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಿದೆ.

ADVERTISEMENT
ದಾನಿಯೊಬ್ಬರು ಕೊಟ್ಟ ಜೋಳದ ಹಿಟ್ಟಿನಿಂದ ರೊಟ್ಟಿ ತಯಾರಿಸಿ, ಮಾರಾಟಕ್ಕೆ ಸಜ್ಜುಗೊಳಿಸುತ್ತಿರುವ ಗೋಕಾಕ್‌ನ ಮಲ್ಲಮ್ಮರಡ್ಡಿಯ ರೂಪಾ ದೊಡ್ಡಮನಿ

ಕೆಎಲ್‍ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್‌ ವತಿಯಿಂದ 2015 ರಲ್ಲಿ ‘ವೇಣುಧ್ವನಿ ಬಾನುಲಿ ಕೇಂದ್ರ’ ಆರಂಭವಾಯಿತು. ಈ ಕೇಂದ್ರದ ಕಾರ್ಯಕ್ರಮಗಳು ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಸುಮಾರು 25 ಕಿಲೋಮೀಟರ್ ವ್ಯಾಪ್ತಿಯ ಪ್ರದೇಶಕ್ಕೆ ತಲುಪುತ್ತದೆ. ಈ ಕೇಂದ್ರದ ‘ಧ್ವನಿ’ ಕೇಳಲು 2.5 ಲಕ್ಷ ಕೇಳುಗರಿದ್ದಾರೆ.

ಮೊನ್ನೆ ಲಾಕ್‌ಡೌನ್‌ ಅವಧಿಯಲ್ಲಿ ಬೆಳಗಾವಿ ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ಅನೇಕ ಜನರು ಸಂಕಷ್ಟದಲ್ಲಿದ್ದದನ್ನು ಗಮನಿಸಿದ ಬಾನುಲಿ ಕೇಂದ್ರದ ನಿರ್ದೇಶಕ ಸುನೀಲ್‌ ಜಲಾಲ್‌ಪುರೆ ಮತ್ತು ಸಿಬ್ಬಂದಿ, ‘ನಮ್ಮ ಕೇಂದ್ರದಿಂದ ಈ ಜನರಿಗೆ ನೆರವಾಗುವಂತಹ ಯಾವುದಾದರೂ ಕಾರ್ಯಕ್ರಮ ರೂಪಿಸಬೇಕು’ ಎಂದು ಯೋಚಿಸಿದರು. ಆಗ ಹೊರ ಹೊಮ್ಮಿದ್ದೇ ‘ಕಾಲ್‌ ಅಂಡ್‌ ಸಾಲ್ವ್‌’ (ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ) ಎಂಬ ‘ಫೋನ್‌–ಇನ್‌’ ಕಾರ್ಯಕ್ರಮದ ಪ್ರಸಾರ.

‘ಫೋನ್‌ – ಇನ್ ಕಾರ್ಯಕ್ರಮವನ್ನೇನೋ ಮಾಡುತ್ತೇವೆ. ಜನರು ಕಷ್ಟಗಳನ್ನೂ ಹೇಳಿಕೊಳ್ಳುತ್ತಾರೆ. ಆದರೆ, ಅದನ್ನು ಪರಿಹರಿಸಲು ದಾನಿಗಳು ಬೇಕು.ಹೀಗೊಂದು ಪ್ರಶ್ನೆ ಎದುರಾಯಿತು. ಆಗ ಬಾನುಲಿ ಸಿಬ್ಬಂದಿ,ಬೆಳಗಾವಿ ಭಾಗದಲ್ಲಿ 1400 ದಾನಿಗಳೊಂದಿಗೆ ಸಂಪರ್ಕದಲ್ಲಿದ್ದ ವ್ಯಕ್ತಿತ್ವ ವಿಕಸನ ವಾಗ್ಮಿ ಮತ್ತು ಸಂಪನ್ಮೂಲ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿ, ಕಾರ್ಯಕ್ರಮದ ವಿಚಾರ ಹಂಚಿ ಕೊಂಡರು. ಸಂಕಷ್ಟದಲ್ಲಿರುವವರಿಗೆ ನೆರವು ನೀಡಲು ಮನವಿ ಮಾಡಿದರು. ಅದಕ್ಕೆ ಅವರು ಪ್ರೀತಿಯಿಂದ ಒಪ್ಪಿಕೊಂಡರು. ‘ಈ ಎಲ್ಲ ಬೆಳವಣಿಗೆ ನಂತರ, ಕಾರ್ಯಕ್ರಮ ಆರಂಭಕ್ಕೆ ತಯಾರಾದೆವು’ ಎನ್ನುತ್ತಾ ಕಾರ್ಯಕ್ರಮದ ಹಿಂದಿನ ಚಟುವಟಿಕೆಗಳನ್ನು ಹಂಚಿಕೊಂಡರು ಸುನೀಲ್ ಜಲಾಲ್‌ಪುರೆ.

ಅಗತ್ಯ ಕುಟುಂಬಕ್ಕೆ ಆಹಾರ ಪೂರೈಕೆಗೆ ಕೇಂದ್ರದ ನೆರವು

ಕಾರ್ಯಕ್ರಮದ ವ್ಯಾಪಕ ಪ್ರಚಾರ

ಕಾರ್ಯಕ್ರಮ ಆರಂಭಿಸುವ ಮುನ್ನ ಬಾನುಲಿ ಕೇಂದ್ರದವರು ಈ ಬಗ್ಗೆ ವ್ಯಾಪಕ ಪ್ರಚಾರ ಮಾಡಿದರು. ಇದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡರು. ದಿನಪತ್ರಿಕೆಗಳಲ್ಲೂ ಈ ವಿವರಗಳನ್ನು ಪ್ರಕಟಿಸಿದರು.ಬಾನುಲಿ ಕೇಂದ್ರದ ಮೂಲಕ ಸತತವಾಗಿ ಪ್ರಸಾರ ಮಾಡಿದರು. ಮೇ 27ಕ್ಕೆ ‘ಫೋನ್‌–ಇನ್‌ ಕಾರ್ಯಕ್ರಮ ಅಧಿಕೃತವಾಗಿ ಆರಂಭವಾಯಿತು.ಕನ್ನಡ ಹಾಗೂ ಮರಾಠಿ ಭಾಷೆಗಳಲ್ಲಿ ಬಿತ್ತರವಾಗುತ್ತಿದ್ದ 30 ನಿಮಿಷಗಳ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ಬರತೊಡಗಿತು. ನಿತ್ಯ ಸುಮಾರು 40ಕ್ಕಿಂತಲೂ ಹೆಚ್ಚು ಕರೆಗಳು ಬರತೊಡಗಿದವು. ‘ಸಮಯದ ಅಭಾವದಿಂದಾಗಿ ಕೇವಲ ಹತ್ತು ಕರೆಗಳನ್ನು ಮಾತ್ರ ಸ್ವೀಕರಿಸಲು ನಮಗೆ ಸಾಧ್ಯವಾಗುತ್ತಿತ್ತು’ ಎನ್ನುತ್ತಾರೆ ಬಾನುಲಿ ಕೇಂದ್ರದ ಕಾರ್ಯನಿರ್ವಾಹಕ ನಂದಗಾಂವ್.

ಭಾನುವಾರ ಹೊರತುಪಡಿಸಿ ನಿತ್ಯ ಬಿತ್ತರಗೊಳ್ಳುತ್ತಿದ್ದ ಈ ಕಾರ್ಯಕ್ರಮ ಮೂರು ವಾರಗಳಲ್ಲಿ ಸುಮಾರು 150ಕ್ಕೂ ಹೆಚ್ಚೂ ಕುಟುಂಬಗಳನ್ನು ಕನಿಷ್ಠ ಎರಡು ತಿಂಗಳು ಆರ್ಥಿಕ ಮುಗ್ಗಟ್ಟಿನಿಂದ ಪಾರು ಮಾಡಿತು. ಸಂಕಷ್ಟದಲ್ಲಿದ್ದವರಿಂದ ಸಮಸ್ಯೆ ಕೇಳಿ ಪರಿಹಾರ ನೀಡುವಂತಹ ಈ ಕಾರ್ಯಕ್ರಮ ಎಲ್ಲರ ಗಮನಸೆಳೆಯತೊಡಗಿತು. ‘ಈ ನಡುವೆ ಕಾರ್ಯಕ್ರಮವನ್ನು ದುರುಪಯೋಗ ಮಾಡಿಕೊಳ್ಳುವ ಪ್ರಯತ್ನಗಳಾದವು. ಅಂಥವುಗಳನ್ನೆಲ್ಲ ನಿರ್ಲಕ್ಷ್ಯಿಸಿದೆವು. ದಾನಿಗಳು ತಮ್ಮ ಹೆಸರನ್ನು ಹೇಳದಂತೆ ವಿನಂತಿಸಿಕೊಂಡಿದ್ದರಿಂದ, ಅವರ ಹೆಸರುಗಳನ್ನು ಬಹಿರಂಗಪಡಿಸಿಲ್ಲ’ ಎನ್ನುತ್ತಾರೆ ಜಲಾಲ್‍ಪುರೆ.

‘ಫೋನ್‌–ಇನ್‌’ ಪರಿಣಾಮಗಳು

ಬಾನುಲಿ ಕೇಂದ್ರದ ‘ಫೋನ್ ಇನ್‌’ ಕಾರ್ಯಕ್ರಮ ಅನೇಕರ ಬದುಕಿನಲ್ಲಿ ಬೆಳಕು ಮೂಡಿಸಿತು. ಬೆಳಗಾವಿಯ ವಡಗಾಂವ್‌ನ ವಿಠಲ್‌ ದೇವಾಂಗಮಠ, 500 ಸೀರೆಗಳನ್ನು ನೇಯ್ದು ಮಾರಾಟ ಮಾಡಲಾಗದೇ ಸಂಕಷ್ಟಪಡುತ್ತಿದ್ದರು. ವಿಠಲ್ ಅವರ ಸಂಕಷ್ಟಕ್ಕೆ ಸ್ಪಂದಿಸಿದ ಕೇಂದ್ರ, ಅವರು ನೇಯ್ದ ಅಷ್ಟೂ ಸೀರೆಗಳನ್ನು ₹1.60 ಲಕ್ಷ ಮೊತ್ತಕ್ಕೆ ಖರೀದಿಸಿ, ಬಡವರಿಗೆ ಉಚಿತವಾಗಿ ಹಂಚುವಂತೆ ಮಾಡಿತು.

ಕಟ್ಟಡದಿಂದ ಬಿದ್ದು ಏನೂ ಮಾಡದ ಸ್ಥಿತಿಯಲ್ಲಿದ್ದ ಕಟ್ಟಡ ಕಾರ್ಮಿಕ ಬೀಬಿ ಗೋಡ್ಯಾಕರ್ ಅವರಿಗೆ ತಿಂಗಳಿಗಾಗುವಷ್ಟು ದಿನಸಿ ಜತೆಗೆ ಔಷಧವನ್ನು ತಲುಪುವಂತೆ ಮಾಡಿತ್ತು. ಮುಂದೆ ಕಟ್ಟಡ ನಿರ್ಮಾಣ ಕೆಲಸ ಮಾಡಲಾಗದ ಅವರಿಗೆ, ಪೇಪರ್‌ ಕವರ್‌ಗಳನ್ನು ತಯಾರಿಸುವ ಕೆಲಸವನ್ನು ಕೊಡಿಸಿದೆ. ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿದ್ದ ಬೆಳಗಾವಿಯ ಶಿವಾಜಿನಗರದ ಭವಾನಿಯವರಿಗೆ ಸೂಪರ್ ಮಾರ್ಕೆಟ್‍ನಲ್ಲಿ ಉದ್ಯೋಗ ಕೊಡಿಸಿದೆ ಬಾನುಲಿ ಕಾರ್ಯಕ್ರಮ.

ಇಷ್ಟೇ ಅಲ್ಲ, ಕಾಕತಿ ಗ್ರಾಮದ ಆರುಷಿಯವರಿಗೆ ಮಾಸ್ಕ್ ಹೊಲಿಯುವ ಕೆಲಸ ಕೊಡಿಸಿದ್ದು, ಎರಡು ತಿಂಗಳಿಗಾಗುವಷ್ಟು ರೊಟ್ಟಿ ತಯಾರಿಸಿ ಮಾರಾಟ ಮಾಡಲು ರೂಪಾ ದೊಡ್ಡಮನಿಯವರಿಗೆ ಜೋಳ ಮತ್ತು ಸಜ್ಜೆಹಿಟ್ಟನ್ನು ವಿತರಿಸಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿದ್ದ ನಾಗರಾಜ ಗಡಿವಡ್ಡರ ಅವರಿಗೆ ₹10ಸಾವಿರ ಮೌಲ್ಯದ ಪುಸ್ತಕ ಕೊಡಿಸಿದ್ದು, ಹಿರಿಯಜೀವ ಸೋಮರಾಜ್ ಅವರಿಗೆ ನಿತ್ಯದ ಔಷಧಕ್ಕಾಗಿ ₹7ಸಾವಿರ ಮೌಲ್ಯದ ಔಷಧ ವಿತರಿಸಿದ್ದು.. ಇವೆಲ್ಲ ‘ಫೋನ್-ಇನ್’ ಕಾರ್ಯಕ್ರಮದ ಒಂದಷ್ಟು ಝಲಕ್‍ಗಳಷ್ಟೆ.

ಕಾರ್ಯಕ್ರಮದ ಯಶಸ್ಸನ್ನು ಗಮನಿಸಿದ ವೇಣುಧ್ವನಿ ಸಮುದಾಯ ಬಾನುಲಿ ಕೇಂದ್ರ, ಕೊರೊನಾ ನಂತರದ ದಿನಗಳಲ್ಲೂ, ಈ ಸೇವೆ ಮುಂದುವರಿಸಲು ನಿರ್ಧರಿಸಿದೆ. ‘ನಿತ್ಯದ ಬದಲಾಗಿ ವಾರದಲ್ಲಿ ಎರಡು ದಿನ ಪ್ರಸಾರ ಮಾಡುವ ಯೋಚನೆ ಇದೆ’ ಎನ್ನುತ್ತಾರೆ ನಂದಗಾಂವ್. ಕಾರ್ಯಕ್ರಮದ ಹೆಚ್ಚಿನ ಮಾಹಿತಿಗೆ ಬಾನುಲಿಯ ಸಂಪರ್ಕ:9019904904.

ಸ್ವಯಂ ಸೇವಕರ ನೆರವು

ಬಾನುಲಿ ಕಾರ್ಯಕ್ರಮದ ಮೂಲಕ ಸಂಕಟದಲ್ಲಿದ್ದವರನ್ನು ತಲುಪುವುದರ ಜತೆಗೆ, ಅವರಿಗೆ ತಕ್ಷಣವೇ ಪರಿಹಾರ ತಲುಪುವಂತೆಯೂ ಮಾಡಬೇಕಿತ್ತು. ಈ ನಡುವೆ, ಕಾರ್ಯಕ್ರಮ ದುರುಪಯೋಗವಾಗದಂತೆ ಎಚ್ಚರವಹಿಸಬೇಕಿತ್ತು. ಇವೆಲ್ಲ ಚಟುವಟಿಕೆಗಳಿಗಾಗಿ ಸ್ವಯಂಸೇವಕರ ತಂಡವೊಂದನ್ನು ರಚಿಸಲಾಯಿತು. ಸ್ವಯಂ ಸೇವಕರ ಪರಿಶ್ರಮದಿಂದಾಗಿ, ಎಲ್ಲ ಕೆಲಸಗಳೂ ಸಕಾಲದಲ್ಲಿ ನಡೆದವು ಎನ್ನುತ್ತಾರೆ ಬಾನುಲಿ ಕೇಂದ್ರದ ಸಿಬ್ಬಂದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.