ಪ್ರೀತಿಗೆ ಗಡಿ, ದೇಶ, ಧರ್ಮದ ಎಲ್ಲೆ ಇಲ್ಲ. ಯಾವ ಬಾಂಬು, ಬಂದೂಕುಗಳೂ ಪ್ರೀತಿಯನ್ನು ನಾಶ ಮಾಡಲಾರವು. ಅಂತಹ ಅನೇಕ ಪ್ರೇಮಕತೆಗಳು ಇತಿಹಾಸದಲ್ಲಿ ಅಜರಾಮರವಾಗಿ ಉಳಿದಿವೆ. ಕೆಲವು ಬರಹಗಾರರ ಆಲೋಚನೆಯಲ್ಲಿ ಮೂಡಿದರೆ, ಹಲವು ನೈಜ ಘಟನೆಗಳೂ ಗತಿಸಿ ಹೋಗಿವೆ. ಆ ಅಜರಾಮರ ಪ್ರೇಮಕತೆಯ ಮತ್ತೊಂದು ಅಭೂತಪೂರ್ವ ಅಧ್ಯಾಯ ಗಾಜಾದ್ದು.
ಸಿರಿಯಾ, ಗಾಜಾ ಎಂದರೆ ಸಾಕು ಅಮಾಯಕ ಜನರ ಮೇಲಿನ ಹಿಂಸೆ, ಕ್ರೌರ್ಯ, ರಕ್ತಪಾತವೇ ಕಣ್ಮುಂದೆ ಹಾದು ಹೋಗುತ್ತದೆ. ಗಾಜಾದ 22 ವರ್ಷ ವಯಸ್ಸಿನ ಫಾದಿ ಅಲ್-ಘಝಾಲ್ ಮತ್ತು ಸಿರಿಯನ್ ಪಟ್ಟಣದ ಖಾನ್ ಶೇಖೌನ್‌ನ 21 ವರ್ಷ ವಯಸ್ಸಿನ ಯಾರಾ ಅಲ್-ಝೌಬಿಯ ಪ್ರೇಮದ ಮೊಗ್ಗು ಹುಟ್ಟಿದ್ದು ಈ ಬೆಂಕಿಯ ಜ್ವಾಲೆಯಲ್ಲೇ. ಅವರಿಬ್ಬರ ಪ್ರೇಮಕತೆಯೂ ಒಂದು ಯುದ್ಧವೇ. ಅದು ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವ ಕ್ರೌರ್ಯ ದಾಳಿಗಳ ವಿರುದ್ಧದ ಯುದ್ಧ.
ಯಾರಾ ಮತ್ತು ಫಾದಿ ಸ್ನೇಹಿತರಾಗಿದ್ದು ಫೇಸ್‌ಬುಕ್ ಮೂಲಕ. ಸ್ನೇಹ ಕ್ರಮೇಣ ಪ್ರೀತಿಯಾಗಿ ಬೆಳೆದಿತ್ತು. ಮೊದಲ ಭೇಟಿಯಲ್ಲೇ ಫಾದಿಗೆ ಯಾರಾ ಸಂಗಾತಿಯಂತೆ ಕಂಡಳು. ಯುದ್ಧ ಭೂಮಿಯ ಆಪತ್ತಿನ ಬದುಕು ಸಾಗಿಸುತ್ತಿದ್ದ ಈ ಇಬ್ಬರೂ, ಸಿರಿಯಾದಲ್ಲಿ ಸಂಘರ್ಷಗಳು ಮತ್ತು ಯುದ್ಧದಂತಹ ವಿದ್ಯಮಾನಗಳ ನಡುವೆ ಪ್ರೀತಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುವುದು ಎಂತಹವರ ಮನವನ್ನೂ ಕಲಕುವಂತಿದೆ.
ಸಿರಿಯಾ ಮುತ್ತಿಗೆ ಹಾಕಿದ ಗಾಜಾ ಪಟ್ಟಿಯಲ್ಲೇ ವಾಸಿಸುತ್ತಿದ್ದ ಫಾದಿ 2008, 2012 ಮತ್ತು 2014 ರಲ್ಲಿ ಗಾಜಾದಲ್ಲಿ ನಡೆದ ಮೂರು ಯುದ್ಧಗಳಲ್ಲೂ ಬದುಕುಳಿದಿದ್ದರು. ಯಾರಾ ವಾಸವಿದ್ದ ಪಟ್ಟಣದ ಮೇಲೆಯೂ ರಾಸಾಯನಿಕ ದಾಳಿ ನಡೆಯುತ್ತಿತ್ತು. ಈ ನರಕದಲ್ಲಿ ಬಾಂಬುಗಳ ಜಾಗದಲ್ಲಿ ಪ್ರೀತಿಯ ಮಳೆಗರೆಯಲು ಆತನ ಮನಸ್ಸು ಹಾತೊರೆಯುತ್ತಿತ್ತು. ಆಕೆಗೆ ಸುಂದರ ಬದುಕು ನೀಡುವ ಮಹದಾಸೆಯಿಂದ ಫಾದಿ ಮದುವೆಯಾಗಲು ನಿಶ್ಚಯಿಸಿದ.
ಫಾದಿಯ ಪ್ರೇಮ ನಿವೇದನೆಯಿಂದ ಯಾರಾಗೆ ಪರಮಾನಂದವಾಯಿತು. ಅವರ ಪೋಷಕರೂ ಮದುವೆಗೆ ಒಪ್ಪಿಗೆ ಸೂಚಿಸಿದರು. ಐದು ವರ್ಷಗಳಿಂದ ಪ್ರೀತಿಯ ಪಯಣದಲ್ಲಿ ಅವರು ಒಮ್ಮೆಯೂ ಭೇಟಿಯಾಗಿರಲಿಲ್ಲ. ಎಲ್ಲ ವಿಚಾರಗಳೂ ಫೇಸ್‌ಬುಕ್ ಮೂಲಕವೇ ನಡೆದಿದ್ದವು. ಮದುವೆ ನಿಶ್ಚಯವಾದ ಮೇಲೆ ತನ್ನ ಪ್ರೇಮಿ ಫಾದಿಯನ್ನು ಭೇಟಿಯಾಗಲು ಯಾರಾ ನಿರ್ಧರಿಸಿದರು.
ತನ್ನ ತವರಾದ ವಾಯವ್ಯ ಸಿರಿಯಾದಿಂದ ನಿರ್ಬಂಧಿತ ಗಾಜಾ ಪಟ್ಟಿಗೆ ಮದುವೆಯ ಸಾಮಾನಿನೊಂದಿಗೆ ಪ್ರಯಾಣ ಬೆಳೆಸಿದಳು. ಹಲವು ಮನವಿಗಳ ನಂತರ, ರಾಫಾ ಗಡಿ ದಾಟಿ, ಗಾಜಾ ಪಟ್ಟಿ ಪ್ರವೇಶಕ್ಕೆ ಅನುಮೋದನೆ ಸಿಕ್ಕಿತು. ಫಾದಿ– ಯಾರಾ ಪ್ರೇಮ ಕಥೆ ಕೇಳಿದವರೆಲ್ಲ ಈಕೆಯ ಬೆಂಬಲಕ್ಕೆ ನಿಂತರು. ಗಾಜಾಗೆ ಹೋಗಲು ನೆರವಾದರು. ಹಲವು ದಿನಗಳ ಸಂಕಷ್ಟಗಳನ್ನು ಹಾದು ಯಾರಾ ಸಿರಿಯಾ ಮೂಲಕ ಈಜಿಪ್ಟ್‌ಗೆ ತಲುಪಿ ಗಾಜಾದೆಡೆ ಹೆಜ್ಜೆ ಇಟ್ಟರು. ಪ್ರೀತಿ ಅರಸುತ್ತಾ ದಣಿವರಿಯದೆ ಪ್ರಯಾಣ ಬೆಳೆಸಿದರು.
ರಸ್ತೆಯುದ್ದಕ್ಕೂ ಯುದ್ಧಭೀತಿ, ಶೆಲ್ ದಾಳಿ, ಅಲ್ಲಲ್ಲಿ ಭದ್ರತಾ ತಪಾಸಣೆ ಎದುರಿಸುತ್ತಾ ಯಾರಾ ಗಡಿ ದಾಟಿದರು. ನವೆಂಬರ್ 8ರ ಮಧ್ಯರಾತ್ರಿ ಗಾಜಾ ನಗರಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಂತೆ, ಆಕೆಯ ಕಣ್ಣಾಲಿಗಳು ತುಂಬಿದವು. ನೋಟದಲ್ಲಿ ತುಂಬಿದ್ದ ಕನಸುಗಳು, ಫಾದಿಯನ್ನು ನೋಡುವ ಕಾತರ ಯಾರು ಬೇಕಾದರೂ ಊಹಿಸಬಹುದಿತ್ತು.
ಈ ಐದು ವರ್ಷಗಳಲ್ಲಿ ಫಾದಿ, ಮಿಠಾಯಿ ಅಂಗಡಿಯಲ್ಲಿ ಕೆಲಸ ಮಾಡಿ ಗಾಜಾ ನಗರದಲ್ಲಿ ‘ಅಲ್ ರಹಮಾ’ ಎಂಬ ಅಪಾರ್ಟ್‌ಮೆಂಟ್ ಖರೀದಿಸಿದ್ದ. ಅಲ್ಲಿಯೇ ಯಾರಾ ಮತ್ತು ಫಾದಿಯ ಭೇಟಿಯಾಯಿತು. ಅವರಿಬ್ಬರ ಪಾಲಿಗೆ ಅದು ಮರುಜನ್ಮವೇ ಆಗಿತ್ತು.
ತಮ್ಮದು ಐದು ವರ್ಷಗಳ ಫೇಸ್‌ಬುಕ್ ಪ್ರೇಮವಾದರೂ, ಫಾದಿ ಭವಿಷ್ಯದ ಬದುಕಿನ ಬಗ್ಗೆ ಸಾಕಷ್ಟು ಯೋಚನೆ, ಯೋಜನೆ ಹಾಕಿಕೊಂಡಿದ್ದ. ಫಾದಿಯ ಜನ್ಮ ದಿನವೂ ಆದ ನವೆಂಬರ್ 18ರಂದು ವಿವಾಹ ನಿಶ್ಚಯವೂ ಆಯಿತು.
ಮದುವೆ ಇನ್ನು ಆರು ದಿನಗಳಿವೆ ಎನ್ನುವಾಗ, ಹೊಸ ಜೀವನದ ಸಂಭ್ರಮದ ಕನಸು ಕಾಣುತ್ತಿದ್ದ ಅವರ ಜೀವನದಲ್ಲಿ ಮತ್ತೊಂದು ದುರಂತ ಘಟಿಸಿತು. ಇಸ್ರೇಲ್ ಪಡೆಗಳು ಗಾಜಾ ಪಟ್ಟಿ ಸುತ್ತ ವಾಯುದಾಳಿ ಮಾಡಲಿವೆ ಎಂಬ ಸಂದೇಶ ಕೇಳಿ ತಲ್ಲಣಿಸಿ ಹೋದರು. ಪ್ರೇಮದ ಹೂವು ಸೊಂಪಾಗಿ ಬೆಳೆಯುವ ಮುನ್ನವೇ ಇಸ್ರೇಲ್ ದಾಳಿಗೆ ಬಲಿಯಾಗಲು ಬಿಡಲು ಅವರು ಸಿದ್ಧವಿರಲಿಲ್ಲ. ಫಾದಿ ತಕ್ಷಣ ಯಾರಾಳೊಂದಿಗೆ ತನ್ನ ಚಿಕ್ಕಮ್ಮಳ ಮನೆ ಸೇರಿದ.
ಅಂತೂ ಒಂಬತ್ತು ಬೃಹತ್ ಕಟ್ಟಡಗಳ ಸಾಲಿನಲ್ಲಿದ್ದ ಅವರಿಬ್ಬರ ಪ್ರೇಮ ಮಂದಿರ ಅಲ್ ರಹಮಾ ಕಟ್ಟಡವೂ ವಾಯುದಾಳಿಗೆ ಕ್ಷಣದಲ್ಲಿ ನುಚ್ಚು ನೂರಾಯಿತು. ಮಲಗುವ ಕೋಣೆಯ ಕುಸಿದ ಗೋಡೆ ಮೇಲೆ ನೇತಾಡುತ್ತಿದ್ದ ಆಕೆಯ ಮದುವೆಯ ಉಡುಪು ದುರಂತ ಕತೆ ಹೇಳುತ್ತಿತ್ತು. ಅವರಿಬ್ಬರ ಕಣ್ಣುಗಳಲ್ಲಿ ನೋವಿನ ಅಲೆ. ಇಷ್ಟೆಲ್ಲಾ ಕಳೆದುಕೊಂಡರೂ ಅವರಿಬ್ಬರಿಗೆ ಬಲ ನೀಡಿ, ಹೊಸ ಹಾದಿಗೆ ಪ್ರೇರೇಪಿಸಿದ್ದು ಪ್ರೀತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.