‘17 ವರ್ಷಗಳ ಹಿಂದೆ ಪೋಲಿಯೊ ಪೀಡಿತನಾಗಿದ್ದ ನಾನು ಜೀವನದಲ್ಲಿ ನಡೆಯೋದಕ್ಕೆ ಸಾಧ್ಯವಿಲ್ಲ ಎಂದುಕೊಂಡಿದ್ದೆ. ಆದರೆ, ಮಹಾವೀರ ಲಿಂಬ್ ಸೆಂಟರ್‌ನಲ್ಲಿ ಕ್ಯಾಲಿಪರ್ಸ್ ಅಳವಡಿಸಿಕೊಂಡ ಮೇಲೆ ನಡೆಯಲಾರಂಭಿಸಿದೆ. ಈಗ ಕಾಲೇಜಿನಲ್ಲಿ ಉಪನ್ಯಾಸಕನಾಗಿ ದ್ದೇನೆ. ಜನರ ತಾತ್ಸಾರಕ್ಕೆ ಒಳಗಾಗಿದ್ದವನು, ಅಂಥವರ ಎದುರೇ ಎದ್ದು ನಿಂತು ಬದುಕು ಕಟ್ಟಿಕೊಳ್ಳಲು ಈ ಕೇಂದ್ರ ನನಗೆ ‘ಊರುಗೋಲು’ ಆಯಿತು...’
ಧಾರವಾಡದ ಜೆಎಸ್‌ಎಸ್ ಕಾಲೇಜಿನ ಪ್ರೊ.ಶ್ರೀನಿವಾಸ ಅರಬಟ್ಟಿ, ಜೀವನದಲ್ಲಿ ತನ್ನೊಳಗಿದ್ದ ಬಹುದೊಡ್ಡ ಕೊರತೆ ನೀಗಿಸಿ
ಕೊಂಡಿದ್ದನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾ, ಮಹಾವೀರ ಲಿಂಬ್ ಸೆಂಟರ್‌ನ ಸೇವೆಯನ್ನು ಕೊಂಡಾಡಿದರು.
ಧಾರವಾಡದ ಮಹಾವೀರ ಲಿಂಬ್ ಸೆಂಟರ್, ಶ್ರೀನಿವಾಸರ ಹಾಗೆ ಕಾಲು ಕಳೆದುಕೊಂಡು ಓಡಾಡಲಾಗದೇ, ಜೀವನದಲ್ಲಿ ಸೋತು ಮನೆಯಲ್ಲಿ ಕುಳಿತಿದ್ದ ಅನೇಕರಿಗೆ ಊರುಗೋಲಾಗಿ, ಬದುಕು ಕಟ್ಟಿಕೊಳ್ಳಲು ನೆರವಾಗಿದೆ.
ಈ ಕೇಂದ್ರದಿಂದ ಅನುಕೂಲ ಪಡೆದ ಅನೇಕ ವಿದ್ಯಾರ್ಥಿಗಳು, ವಿದ್ಯಾಭ್ಯಾಸ ಮುಂದುವರಿಸಿ, ಉತ್ತಮ ಕೆಲಸ ಸಂಪಾದಿಸಿದ್ದಾರೆ. ‘ನನ್ನ ಮಗ ಒಂಬತ್ತು ವರ್ಷದವನಿದ್ದಾಗ, ಅಪಘಾತದಲ್ಲಿ ಕಾಲು ಕಳೆದುಕೊಂಡ. ನಡೆದಾಡಲು ಸಾಧ್ಯವಾಗದೇ ಮನೆಯಲ್ಲಿಯೇ ಕುಳಿತು
ಕೊಳ್ಳುವಂತಾಯಿತಲ್ಲ ಎಂದು ಕೊರಗಿದ್ದೆವು. ಈ ಕೇಂದ್ರಕ್ಕೆ ಬಂದು ಕೃತಕ ಕಾಲು ಅಳವಡಿಸಿಕೊಂಡ ಮೇಲೆ ಮಗ ಮತ್ತೆ ಓಡಾಡತೊಡಗಿದ್ದಾನೆ. ಈಗ ಕಾಲೇಜಿಗೆ ತಾನೇ ಬಸ್‌ನಲ್ಲಿ ಹೋಗಿ ಬರುತ್ತಾನೆ. ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮುಗಿಸಿದ್ದು, ಸಿಇಟಿಗೆ ಓದಿಕೊಳ್ಳುತ್ತಿದ್ದಾನೆ’ ಎಂದು ಹುಬ್ಬಳ್ಳಿಯ ನವನಗರದ ಮಹದೇವ ನೆನಪಿಸಿಕೊಳ್ಳುತ್ತಾರೆ.
22 ವರ್ಷಗಳ ಸೇವಾ ಕಾರ್ಯ
ಹುಬ್ಬಳ್ಳಿಯ ಆಲ್ ಇಂಡಿಯಾ ಜೈನ್ ಯೂತ್ ಫೆಡರೇಷನ್‌ನ ಮಹಾವೀರ್ ಲಿಂಬ್ ಸೆಂಟರ್ 22 ವರ್ಷಗಳಿಂದ ಇಂಥದ್ದೊಂದು ಸೇವೆಯಲ್ಲಿ ತೊಡಗಿಕೊಂಡಿದೆ. ಈ ಕೇಂದ್ರ ಆರಂಭವಾಗಲು ಒಂದು ಕಾರಣವಿದೆ. ಮೊದಲು ಧಾರವಾಡದಲ್ಲಿ ನೇತ್ರತಪಾಸಣೆ ಶಿಬಿರಗಳು ಮಾತ್ರ ನಡೆಯುತ್ತಿದ್ದವು. ಕೃತಕ ಕಾಲು ಜೋಡಣೆಗೆ ರಾಜಸ್ಥಾನದ ಜೈಪುರಕ್ಕೆ ಹೋಗಬೇಕಿತ್ತು. ಸಮೀಪದ ನಗರಗಳಲ್ಲಿ
ವಿಮಾನ ಸೌಲಭ್ಯವಿಲ್ಲದ ಕಾಲವದು. ನಾಲ್ಕು ರೈಲು ಬದಲಿಸಿ ಹೋಗಬೇಕಿತ್ತು. ಇಲ್ಲಿನ ಜನರಿಗೆ ಭಾಷೆ ಸಮಸ್ಯೆ. ಜತೆಗೆ ಆರ್ಥಿಕ ಹೊರೆ. ಇದನ್ನೆಲ್ಲ ‘ಭರಿಸಲಾಗದವರು’, ಕೃತಕ ಕಾಲು ಬೇಡ, ಏನೂ ಬೇಡ ಎಂದು ಸುಮ್ಮನಾಗಿ ಬಿಡುತ್ತಿದ್ದರು.
‘ಅಂಗವಿಕಲರು ಪಡುತ್ತಿದ್ದ ಪಜೀತಿಯನ್ನು ಗಮನಿಸಿದ ಮೇಲೆ ಇಲ್ಲಿನ ಆಲ್ ಇಂಡಿಯಾ ಜೈನ್ ಯೂತ್ ಫೆಡರೇಷನ್ ಸಹಯೋಗದೊಂದಿಗೆ 1992ರಲ್ಲಿ ಮೊದಲ ಬಾರಿಗೆ ಕೃತಕ ಕಾಲು ಜೋಡಣಾ ಶಿಬಿರ ಏರ್ಪಡಿಸಿದೆವು’ ಎಂದು ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಮಹಾವೀರ್ ಲಿಂಬ್ ಸೆಂಟರ್ ಅಧ್ಯಕ್ಷ ಮಹೇಂದ್ರ ಸಿಂಘಿ.
ಆರಂಭದ ಶಿಬಿರದಲ್ಲಿ 200 ಜನರಿಗೆ ಕೃತಕ ಕಾಲು ಜೋಡಣೆಯ ಗುರಿ ಇತ್ತು. ಆದರೆ, ಅರ್ಜಿಗಳು ಬಂದಿದ್ದು ಸಾವಿರಕ್ಕೂ ಹೆಚ್ಚು. ಕೊನೆಗೆ ಹಣ ಹೊಂದಿಸಿ 410 ಜನರಿಗೆ ನೀಡಲಾಯಿತು. 1995ರಲ್ಲಿ ಬೆಳಗಾವಿ ತಾಲ್ಲೂಕಿನ ಸವದತ್ತಿಯಲ್ಲಿ ಇಂಥದ್ದೇ ಶಿಬಿರ ಆರಂಭಿಸಿದಾಗ, ಉತ್ತಮ ಸ್ಪಂದನೆ ಸಿಕ್ಕಿದೆ. ಬಹಳಷ್ಟು ಜನರಿಗೆ ಇದರ ಅವಶ್ಯಕತೆ ಇದೆ ಎನಿಸಿದ್ದರಿಂದ, ಸಂಖ್ಯೆ ಹೆಚ್ಚಾಯಿತು. ಹೀಗಾಗಿ ಲಿಂಬ್ ಸೆಂಟರ್ ತೆರೆಯಲು ಜಾಗ ಹುಡುಕಲು ಆರಂಭಿಸಿದರು. ಆದರೆ ಜಾಗ ಸಿಗಲಿಲ್ಲ. ಒಮ್ಮೆ ಕಾರ್ಯಕ್ರಮವೊಂದರಲ್ಲಿ ವಿಷಯ ತಿಳಿದ ಅಂದಿನ ಕಿಮ್ಸ್ ನಿರ್ದೇಶಕರಾಗಿದ್ದ ಡಾ.ಸ.ಜ. ನಾಗಲೋಟಿಮಠ ಅವರು, ‘ಕಿಮ್ಸ್ ಆವರಣದಲ್ಲೇ ನಿಮ್ಮ ಕೇಂದ್ರವನ್ನು ಆರಂಭಿಸಬಹುದು’ ಎಂದು ಜಾಗ ನೀಡಿದರು. ಪರಿಣಾಮ 1997 ರಲ್ಲಿ ಮಹಾವೀರ ಲಿಂಬ್ ಸೆಂಟರ್ ಆರಂಭವಾಯಿತು.
ದಾನಿಗಳ ನೆರವಿನಿಂದ ಸಂಸ್ಥೆ
ಈ 22 ವರ್ಷಗಳಲ್ಲಿ ಕೇಂದ್ರದಿಂದ 35,000 ಜನರಿಗೆ ಕೃತಕ ಕಾಲುಗಳನ್ನು ಜೋಡಿಸಲಾಗಿದೆ. ಕೆಲವರಿಗೆ ಕೈ ಜೋಡಣೆ ಮಾಡಲಾಗಿದೆ. 163 ಕ್ಯಾಂಪ್‌ಗಳನ್ನು ಆಯೋಜಿಸಲಾಗಿದೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಶಿಬಿರಗಳನ್ನು ಆಯೋಜಿಸಲಾಗಿದೆ. ಮಾತ್ರವಲ್ಲ, ಪಕ್ಕದ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ, ಚೆನ್ನೈ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯದ ವಿವಿಧೆಡೆ ಶಿಬಿರ ನಡೆಸಲಾಗಿದೆ. ಈಗ ಪ್ರತಿ ವರ್ಷ 450 ರಿಂದ 500 ಜನರಿಗೆ ಕೃತಕ ಕಾಲು ಜೋಡಣೆ ಮಾಡಲಾಗುತ್ತದೆ.
ದಾನಿಗಳ ನೆರವಿನಿಂದ ಸಂಸ್ಥೆ ನಡೆಸಲಾಗುತ್ತಿದೆ. ಸಂಸ್ಥೆಯ ಸೇವೆಯ ಬಗ್ಗೆ ಆಸಕ್ತಿ ಉಳ್ಳವರು ಕೇಂದ್ರಕ್ಕೆ ₹ 11,111 ಪಾವತಿಸಿ ಆಜೀವ ವಂತಿಕೆ ನೀಡುವ ಸದಸ್ಯರಾಗಿ ನೋಂದಣಿಯಾಗಬಹುದು. ಹಾಗೆ ಹಣ ನೀಡಿದವರ ತಂದೆ–ತಾಯಿಯ ಹೆಸರಿನಲ್ಲಿ ಪ್ರತಿ ವರ್ಷ ಒಬ್ಬರಿಗೆ ಕೃತಕ ಕಾಲು ಜೋಡಣೆ ಮಾಡಲಾಗುತ್ತದೆ. ಕೆಲವರು, ಜನ್ಮದಿನ, ಮದುವೆ ವಾರ್ಷಿಕೋತ್ಸವ ಮತ್ತಿತರ ಶುಭ ಸಂದರ್ಭದ ನೆನಪಿಗಾಗಿ ದಾನ ನೀಡುತ್ತಾರೆ. ₹1,500 ಹಣ ಪಾವತಿಸಿದರೆ ಅವರ ಹೆಸರಿನಲ್ಲಿ ಒಂದು ಕೃತಕ ಕಾಲು ಜೋಡಣೆ ಮಾಡಲಾಗುವುದು.
ಆರತಕ್ಷತೆ ಬಿಟ್ಟು, ಕಾಲು ಜೋಡಣೆ
ಲಿಂಬ್ ಸೆಂಟರ್ ಅಧ್ಯಕ್ಷ ವೀರೇಂದ್ರ ಜೈನ್, ತಮ್ಮ ಮಕ್ಕಳ ಮದುವೆ ಆರತಕ್ಷತೆ ಕಾರ್ಯಕ್ರಮ ಮಾಡಲಿಲ್ಲ. ಬದಲಿಗೆ ಅದೇ ಹಣದಲ್ಲಿ 51 ಮಂದಿಗೆ ಕೃತಕ ಕಾಲು ಜೋಡಣೆಗೆ ನೆರವಾದರು. ಹೀಗೆಯೇ ದಾನಿಗಳು ಕೇಂದ್ರದ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ. ‘ಕೇಂದ್ರಕ್ಕೆ ಆರ್ಥಿಕ ತೊಂದರೆಯಾದರೆ ಸಂಸ್ಥೆಯ ಪದಾಧಿಕಾರಿಗಳೇ ಆ ಹಣವನ್ನು ಭರಿಸುತ್ತೇವೆ’ ಎಂದು ಸಿಂಘಿ ಹೇಳುತ್ತಾರೆ.
ಒಮ್ಮೆ ಕೃತಕ ಕಾಲು ಅಳವಡಿಸಿದರೆ ಎರಡು, ಮೂರು ವರ್ಷ ಬರುತ್ತದೆ. ಸಣ್ಣ ಪುಟ್ಟ ತೊಂದರೆಗಳನ್ನು ಕೃತಕ ಕಾಲುಗಳ ದುರಸ್ತಿ ಮೂಲಕ ಸರಿಪಡಿಸುತ್ತಾರೆ. ಸಂಸ್ಥೆಯಲ್ಲಿ ಎಂಟು ಜನರು ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ನಾಲ್ವರು ಅಂಗವಿಕಲರಾಗಿದ್ದಾರೆ. ಅವರಿಗೆ ಕೃತಕ ಕಾಲುಗಳ ಜೋಡಿಸಲಾಗಿದ್ದು, ಎಲ್ಲರಂತೆ ಮನೆಯ ಹಾಗೂ ಕಚೇರಿಯ ಕೆಲಸ ನಿರ್ವಹಿಸುತ್ತಿದ್ದಾರೆ.
ರೈಲ್ವೆ ಕ್ರಾಸಿಂಗ್‌ನಲ್ಲಿ ಹಳಿಗೆ ಸಿಲುಕಿ ಕಾಲು ಕಳೆದುಕೊಂಡ ಸುದರ್ಶನ ಸಹ ಕೆಲಸ ಮಾಡುತ್ತಿದ್ದಾರೆ. ‘ಕೃತಕ ಕಾಲು ಅಳವಡಿಸಿಕೊಳ್ಳಲು ಇಲ್ಲಿಗೆ ಬಂದಿದ್ದೆ. ಸಂಸ್ಥೆಯವರು ಮಾಡುತ್ತಿರುವ ಸಾಮಾಜಿಕ ಕಾರ್ಯ ನೋಡಿದಾಗ ನಾನೂ ಈ ಕಾರ್ಯಕ್ಕೆ ಕೈಜೋಡಿಸಬೇಕಲ್ಲ ಎನಿಸಿತು. ಇಲ್ಲಿಯೇ ಕೆಲಸಕ್ಕೆ ಸೇರಿಕೊಂಡು, ಸಂಸ್ಥೆಯ ಕೆಲಸಕ್ಕೆ ಕೈಜೋಡಿಸಿದ್ದೇನೆ’ ಎನ್ನುತ್ತಾರೆ ಸುದರ್ಶನ.
ಎಲ್ಲರಂತೆ ಬದುಕಬಹುದು
ಕೃತಕ ಕಾಲು ಜೋಡಣೆಯ ನಂತರ ಉಳಿದವರಂತೆ ಎಲ್ಲ ಕೆಲಸಗಳನ್ನು ಸರಾಗವಾಗಿ ಮಾಡಬಹುದಾಗಿದೆ. ಈ ಕೇಂದ್ರದಲ್ಲಿ ಕೃತಕ ಕಾಲು – ಕೈ ಜೋಡಿಸಿಕೊಂಡವರು, ಲಾರಿ ಸೇರಿದಂತೆ ವಿವಿಧ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಕ್ರಿಕೆಟ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಸಾಧನೆ ಮಾಡಿದ್ದಾರೆ. ಇದು ನಮಗೆಲ್ಲರಿಗೂ ಸಂತಸ ತಂದಿದೆ ಎನ್ನುತ್ತಾರೆ ಸೆಂಟರ್ ತಾಂತ್ರಿಕ ಸಿಬ್ಬಂದಿ ಎಂ.ಎಚ್. ನಾಯ್ಕರ್.
ಸಂಸ್ಥೆಯ ಸೇವಾ ಕಾರ್ಯವನ್ನು ಗುರುತಿಸಿ ರಾಜ್ಯ ಸರ್ಕಾರ 2015ರಲ್ಲಿ ಉತ್ತಮ ಸ್ವಯಂ ಸೇವಾ ಸಂಸ್ಥೆ, 2017ರಲ್ಲಿ ಪ್ರೊ.ನ. ವಜ್ರಕುಮಾರ್ ಅಭಿನಂದನ ಪ್ರಶಸ್ತಿ ಹಾಗೂ 51,000 ನಗದು ಲಭಿಸಿದೆ. ಇದಲ್ಲದೇ ಹಲವು ಪ್ರಶಸ್ತಿಗಳಿಗೆ ಸಂಸ್ಥೆ ಭಾಜನವಾಗಿದೆ. ಲಿಂಬ್ ಸೆಂಟರ್ ಸಂಪರ್ಕ ಸಂಖ್ಯೆ: 0836 – 2216363
ಕೃತಕ ಕಾಲುಗಳು ಇಲ್ಲಿಯೇ ಲಭ್ಯ
ಕೃತಕ ಕಾಲುಗಳನ್ನು ಜೈಪುರದಿಂದ ತರಿಸುವುದಿಲ್ಲ. ಜೈಪುರದಿಂದ ಪಾದ, ಜೋಧಪುರದಿಂದ ಪ್ಲಾಸ್ಟರ್ ಆಫ್ ಪ್ಯಾರೀಸ್, ಮಹಾರಾಷ್ಟ್ರದ ಅಕೊಲಾದಿಂದ ಪೈಪ್, ಚೆನ್ನೈ ಮುಂತಾದ ಕಡೆಗಳಿಂದ ವಿವಿಧ ಸಾಮಗ್ರಿಗಳನ್ನು ತರಿಸುತ್ತಾರೆ. ಅವುಗಳನ್ನೆಲ್ಲ ಸೇರಿಸಿ ರೋಗಿಗಳ ಅವಶ್ಯಕತೆಗೆ ತಕ್ಕಂತೆ ಇಲ್ಲಿಯೇ ಕೃತಕ ಕಾಲುಗಳನ್ನು ಉತ್ಪಾದಿಸಲಾಗುತ್ತಿದೆ. ಇದಕ್ಕಾಗಿ ಸಿಬ್ಬಂದಿಗೆ ಜೈಪುರದಲ್ಲಿ ತರಬೇತಿ ಕೊಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.