ಚುಮುಚುಮು ಚಳಿಯ ನಡುವೆ ರಾಸುಗಳಿಗೆ ಬಿಸಿನೀರಿನ ಸ್ನಾನ, ಕೊಂಬು, ಹೆಗಲಿಗೆ ಎಣ್ಣೆಯ ಲೇಪನ, ಮೈತುಂಬ ಬಣ್ಣದ ಮಿಂಚು, ರೇಷ್ಮೆ ವಸ್ತ್ರದ ಹೊದಿಕೆ, ಕಾಲಿಗೆ ಗೆಜ್ಜೆ, ಕೊರಳಿಗೆ ಗಂಟೆ, ಹೂವಿನ ದಂಡೆ, ಹಣ್ಣುಗಳ ಹಾರ, ಕಿವಿಯ ಸುತ್ತಲೂ ಕುಚ್ಚು, ಕೊಂಬಿನ ತುದಿಗೆ ಬೆಳ್ಳಿಯ ಕಳಶ, ಹಣೆಗೆ ಬಾಸಿಂಗ, ಕಣ್ಣಿಗೆ ಕಾಡಿಗೆ...
ಸಂಕ್ರಾಂತಿ ಬಂತೆಂದರೆ ಮಂಡ್ಯ ಭಾಗದ ರೈತರು ತಮ್ಮ ಪ್ರೀತಿಯ ಬಸವನಿಗೆ ಶೃಂಗಾರ ಮಾಡುವುದರಲ್ಲೇ ಸುಖ ಕಾಣುತ್ತಾರೆ. ಬ್ಯೂಟಿ ಪಾರ್ಲರ್‌ನಲ್ಲಿ ವಧುವಿಗೆ ಮೇಕಪ್ ಮಾಡಿಸಿದಂತೆ ರೈತರು ತಮ್ಮ ರಾಸುಗಳಿಗೆ ಅಲಂಕಾರ ಮಾಡುತ್ತಾರೆ. ಕೊಂಚ ಬಣ್ಣ ಮಾಸಿದ ಎತ್ತುಗಳಿಗೆ ಪೌಡರ್ ಲೇಪಿಸಿ, ಪರಿಮಳಕ್ಕಾಗಿ ಸುಗಂಧ ದ್ರವ್ಯ ಸಿಂಪಡಿಸುವವರೂ ಇದ್ದಾರೆ.
ಏನೇ ಕಷ್ಟ ಇದ್ದರೂ ರೈತರು ಸಂಕ್ರಾಂತಿ ದಿನ ಎತ್ತುಗಳ ಮೈತೊಳೆದು, ಅಲಂಕಾರ ಮಾಡಿ, ಕಿಚ್ಚು ಹಾಯಿಸುವುದನ್ನು ಮರೆಯುವುದಿಲ್ಲ. ಕೆಲವರು ಕೊಂಬಿಗೆ ಚಿನ್ನದ ಕಳಶವನ್ನೇ ಹಾಕಿದರೆ ಹಲವರು ಹೂವು, ವಸ್ತ್ರಗಳಿಂದ ಶೃಂಗರಿಸುತ್ತಾರೆ.
ಹಬ್ಬಕ್ಕೆ ವಾರ ಇರುವಂತೆಯೇ ಮಂಡ್ಯದ ಪೇಟೆಬೀದಿಯಲ್ಲಿ ರೈತರೇ ತುಂಬಿ ತುಳುಕುತ್ತಾರೆ. ಎರಡು ದಿನ ಮೊದಲು ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುತ್ತದೆ. ಕಾಲಿಡುವುದಕ್ಕೂ ಜಾಗ ಸಿಗದಷ್ಟು ರೈತರು ಸೇರುತ್ತಾರೆ. ರಾಸುಗಳ ಅಲಂಕಾರಕ್ಕೆ ಬೇಕಾದ ಸಾಮಗ್ರಿ ಖರೀದಿಸಲು ಮುಗಿಬೀಳುತ್ತಾರೆ. ಪ್ರತಿ ಅಂಗಡಿಯಲ್ಲೂ ಹಗ್ಗ, ಮೂಗುದಾರ, ಬಣ್ಣದ ದಾರ, ಮಿಂಚು, ದಂಡೆ, ಗಂಟೆ ಮುಂತಾದ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ.
ಮಂಡ್ಯ ಮಾತ್ರವಲ್ಲದೆ ಹಳೇ ಮೈಸೂರು ಭಾಗದಲ್ಲಿ ಸಂಕ್ರಾಂತಿಯನ್ನು ರಾಸುಗಳ ಜೊತೆಯಲ್ಲೇ ಆಚರಿಸುತ್ತಾರೆ. ಹಬ್ಬದ ದಿನ ರಾಸುಗಳಿಗೆ ಹಾಕುವ ಒಂದೊಂದು ದಾರವೂ ಹೊಸದೇ ಆಗಿರುತ್ತದೆ. ವರ್ಷಪೂರ್ತಿ ದುಡಿದು ದಣಿದ ಬಸವನಿಗೆ ಅದೊಂದು ದಿನ ಮರೆಯದೇ ಸೇವೆ ಮಾಡುತ್ತಾರೆ. ಸಿಹಿ ತಿಂಡಿ, ಬೆಣ್ಣೆ, ತುಪ್ಪ ತಿನ್ನಿಸಿ ಸಂಭ್ರಮಿಸುತ್ತಾರೆ. ಕೆಲ ರೈತರು ಜೋಡೆತ್ತುಗಳಿಗಾಗಿ ಮಂಟಪ ನಿರ್ಮಿಸಿ, ಜಗಮಗಿಸುವ ದೀಪಾಲಂಕಾರ ಮಾಡಿಸುತ್ತಾರೆ, ಬ್ಯಾಂಡ್ ಸೆಟ್‌ನೊಂದಿಗೆ ಮೆರವಣಿಗೆ ಮಾಡುತ್ತಾರೆ.
‘ಸುಗ್ಗಿಯಲ್ಲಿ ಧಾನ್ಯದ ರಾಶಿಯನ್ನು ಮನೆ ತುಂಬಿಸಿಕೊಳ್ಳುವ ರೈತರು ತಮ್ಮ ಜಾನುವಾರುಗಳನ್ನು ಪೂಜಿಸುತ್ತಾರೆ. ರಾಸುಗಳಿಗೆ ಮೊದಲ ನೈವೇದ್ಯ ಅರ್ಪಿಸಿ ನಂತರ ತಾವು ಹಬ್ಬದೂಟ ಸೇವಿಸುತ್ತಾರೆ. ವರ್ಷದ ಕೇಡು ಕಳೆಯಲಿ, ರೋಗ–ರುಜಿನಗಳು ಬಾರದಿರಲಿ ಎಂಬ ಉದ್ದೇಶದಿಂದ ಕಿಚ್ಚು ಹಾಯಿಸುತ್ತಾರೆ’–ಪ್ರಗತಿಪರ ರೈತ ಹನಿಯಂಬಾಡಿ ಸೋಮಶೇಖರ್ ಇದರ ಉದ್ದೇಶವನ್ನು ಹಂಚಿಕೊಂಡಿದ್ದು ಹೀಗೆ.
ಅಂಬಾ ಎಂದೊಡನೆ: ಮಂಡ್ಯ, ಗಾಂಧಿನಗರದ ‘ಎತ್ತಿನ ಶಿವಪ್ಪ’ ಬೆಳಿಗ್ಗೆ ಹಾಸಿಗೆಯಿಂದ ಮೇಲೇಳಲು ತಮ್ಮ ಕೊಟ್ಟಿಗೆಯಲ್ಲಿ ‘ಅಂಬಾ ’ ಶಬ್ದ ಕೇಳಬೇಕು. ಎದ್ದಕೂಡಲೇ ರಾಸುಗಳ ಮುಖದರ್ಶನ ಮಾಡಿ, ಕೊರಳು ಸವರಿದಾಗಲೇ ಅಂದಿನ ದಿನ ಆರಂಭವಾಗುತ್ತದೆ. ಎತ್ತು ಸಾಕಣೆಯಲ್ಲಿ ಹೆಸರುವಾಸಿಯಾಗಿರುವ ಇವರು 2011ರ ಅಖಿಲ ಭಾರತ ಸಾಕು ಪ್ರಾಣಿಗಳ ಪ್ರದರ್ಶನದಲ್ಲಿ ಬಹುಮಾನ ಪಡೆದಿದ್ದಾರೆ.
ರಾಸು ಸಾಕಾಣಿಕೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಕಲ್ಲಹಳ್ಳಿಯ ಪಟೇಲ್ ಶಿವರುದ್ರೇಗೌಡರು ವಿಶೇಷ ಕೊಟ್ಟಿಗೆ ರೂಪಿಸಿದ್ದಾರೆ. ಅಲ್ಲಿ ಫ್ಯಾನ್, ಸೊಳ್ಳೆ ಪರದೆ, ಹೊದಿಕೆ ವ್ಯವಸ್ಥೆ ಮಾಡಿದ್ದಾರೆ.
ಹಬ್ಬದ ದಿನ ಮಂಡ್ಯದ ಹೊಸಹಳ್ಳಿ ವೃತ್ತ, ಸರ್ ಎಂ.ವಿ. ಕ್ರೀಡಾಂಗಣದಲ್ಲಿ ಸಾವಿರಾರು ರಾಸುಗಳಿಂದ ಸಾಮೂಹಿಕವಾಗಿ ಕಿಚ್ಚು ಹಾಯಿಸುತ್ತಾರೆ. ಜೊತೆಗೆ ಮಂಡ್ಯ– ಮೈಸೂರು ಗಡಿಯಲ್ಲಿರುವ ಸಿದ್ದಲಿಂಗಪುರ ಕಿಚ್ಚು ಹಾಯಿಸುವುದಕ್ಕಾಗಿಯೇ ಪ್ರಸಿದ್ಧಿ ಪಡೆದಿದೆ.
ಹಳ್ಳಿಕಾರ್ ಆಂದೋಲನ
ಹಳ್ಳಿಕಾರ್ ತಳಿ ಉಳಿವಿಗಾಗಿ ರಾಜ್ಯದಾದ್ಯಂತ ನಡೆಯುತ್ತಿರುವ ಆಂದೋಲನಕ್ಕೆ ಮಂಡ್ಯ ಜಿಲ್ಲೆಯಲ್ಲಿ ದೊಡ್ಡ ಶಕ್ತಿ ಇದೆ. ಇಲ್ಲಿ ಹಳ್ಳಿಕಾರ್ ರಾಸು ಸಾಕುವ ರೈತರ ಸಂಖ್ಯೆ ಸಾಕಷ್ಟಿದೆ. ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ಕೃಷಿ ಕಾರ್ಮಿಕರು, ರಾಸಾಯನಿಕ ಮುಕ್ತ ಎಣ್ಣೆ ತಯಾರಿಸುವ ಗಾಣಗಳ ಮಾಲೀಕರು ಹಳ್ಳಿಕಾರ್ ರಾಸುಗಳನ್ನೇ ಬಳಸುತ್ತಾರೆ. ಅವರೆಲ್ಲರೂ ಸಂಕ್ರಾಂತಿ ಹಬ್ಬದಲ್ಲಿ ರಾಸುಗಳನ್ನು ಆರಾಧಿಸುತ್ತಾರೆ.
ಬಾಡಿಗೆ ರಾಸು: ಬದಲಾದ ಕಾಲಘಟ್ಟದಲ್ಲಿ ಹಳ್ಳಿಗಳು ನಗರ, ಪಟ್ಟಣಗಳ ಜೊತೆ ಬೆಸೆದುಕೊಂಡಿವೆ. ಕೃಷಿ ಜಮೀನು ಲೇಔಟ್‌ಗಳಾಗಿ ಬದಲಾಗಿದ್ದು, ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಸು ಸಾಕಣೆಯನ್ನು ಕೈಬಿಟ್ಟಿದ್ದಾರೆ. ಆದರೂ ಸಂಕ್ರಾಂತಿ ಹಬ್ಬದ ದಿನ ಸಾಂಕೇತಿಕವಾಗಿ ರಾಸುಗಳನ್ನು ಬಾಡಿಗೆ ತಂದು ಪೂಜಿಸುತ್ತಾರೆ, ಕಿಚ್ಚು ಹಾಯಿಸುತ್ತಾರೆ. ಕೆಲ ಹಳ್ಳಿಗಳಲ್ಲಿ ದೇವರಿಗೆ ಅರ್ಪಿಸಿರುವ ಗೂಳಿಗಳನ್ನು ಹಿಡಿದು, ಪಳಗಿಸಿ ಅವುಗಳಿಗೆ ಅಲಂಕಾರ ಮಾಡಿ ಪೂಜಿಸುತ್ತಾರೆ.
‘ಹಿಂದಿನಿಂದ ನಡೆದುಕೊಂಡ ಬಂದ ಸಂಪ್ರದಾಯವನ್ನು ನಿಲ್ಲಿಸಬಾರದು ಎಂಬ ಕಾರಣಕ್ಕೆ ರಾಸುಗಳನ್ನು ಬಾಡಿಗೆ ತಂದು ಹಬ್ಬ ಆಚರಿಸಿ ವಾಪಸ್ ಕಳುಹಿಸುತ್ತೇವೆ’ ಎಂದು ಮಂಡ್ಯ, ಹೊಸಹಳ್ಳಿಯ ಶಿವರಾಮೇಗೌಡರು ಇವತ್ತಿನ ಸ್ಥಿತಿಯನ್ನು ಬಿಚ್ಚಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.