ಮೂರು ಸಾವಿರ ವರ್ಷಗಳ ಹಿಂದೆ ಬರೆದ, ದೂಳು ಮೆತ್ತಿಕೊಂಡ ಪುಸ್ತಕಗಳನ್ನು 21ನೆಯ ಶತಮಾನದ ಮಕ್ಕಳು ಏಕೆ ಓದಬೇಕು?ಅಷ್ಟು ಹಳೆಯ ಪುಸ್ತಕಗಳು ಇಂದಿನ ಮಕ್ಕಳಿಗೆ ಎಷ್ಟರಮಟ್ಟಿಗೆ ಪ್ರಸ್ತುತ? ಮಕ್ಕಳಿಗಾಗಿ ಪುಸ್ತಕಗಳನ್ನು ಬರೆದಿರುವ ನನಗೆ ಮತ್ತೆ ಮತ್ತೆ ಎದುರಾಗುವ ಪ್ರಶ್ನೆ ಇದು.
ಇಂತಹ ಪ್ರಶ್ನೆ ಎದುರಾದಾಗ ನಾನು ಮಾಡುವ ಮೊದಲ ಕೆಲಸ ಪ್ರಶ್ನೆಯನ್ನೇ ಸರಿಪಡಿಸುವುದು! ಮಕ್ಕಳು ಯಾವುದನ್ನು ಓದಬೇಕು ಎಂಬ ಪ್ರಶ್ನೆ ಬಂದಾಗ ‘ಇದರ ಓದು ಕಡ್ಡಾಯ’ ಎನ್ನುವುದು ಯಾವುದೂ ಇಲ್ಲ ಎಂಬುದು ನನ್ನ ನಂಬಿಕೆ. ಮಕ್ಕಳು ಖುಷಿಯಿಂದ ಓದಬಹುದಾದ ಹಲವು ಪುಸ್ತಕಗಳನ್ನು ನಾನು ಹೇಳಬಲ್ಲೆ. ಆದರೆ, ‘ಮಕ್ಕಳು ಇದನ್ನು ಓದಲೇಬೇಕು’ ಎಂಬ ಯಾವ ಪುಸ್ತಕವನ್ನೂ ನಾನು ಹೇಳಲಾರೆ. ಪ್ರತಿ ಓದುಗನೂ ಇನ್ನೊಬ್ಬನಿಗಿಂತ ಭಿನ್ನ. ಪ್ರತಿ ಓದುಗನಿಗೂ ತನ್ನದೇ ಆದ ಅನುಭವಲೋಕ, ಗ್ರಹಿಕೆ, ರುಚಿ ಇರುತ್ತದೆ. ಹಾಗಾಗಿಯೇ, ಎಲ್ಲರಿಗೂ ಒಂದೇ ಪುಸ್ತಕ ಇಷ್ಟವಾಗುವುದಿಲ್ಲ.
ಪಾಲಕರಾಗಿ, ಶಿಕ್ಷಕರಾಗಿ ನಾವು ಮಾಡಬೇಕಿರುವುದು ನಮಗೆ ಇಷ್ಟವಾಗುವ ಪುಸ್ತಕಗಳು ಮಾತ್ರವೇ ಅಲ್ಲದೆ ಮಕ್ಕಳ ಸುತ್ತ ಎಲ್ಲ ಬಗೆಯ ಪುಸ್ತಕಗಳನ್ನು ಇರಿಸುವುದು. ಅಲ್ಲದೆ, ನಾವು ಅವರಿಗೆ ಗ್ರಂಥಾಲಯದಿಂದ, ಪುಸ್ತಕದ ಅಂಗಡಿಗಳಿಂದ ತಮಗೆ ಬೇಕಿರುವ ಪುಸ್ತಕ ಆಯ್ಕೆ ಮಾಡಿಕೊಳ್ಳಲು ಬಿಡಬೇಕು. ಆಗ ಅವರಿಗೆ ತಮಗೆ ಬೇಕಿರುವುದು ಏನು, ಬೇಡದಿರುವುದು ಏನು ಎಂಬುದನ್ನು ತೀರ್ಮಾನಿಸಲು ಸಾಧ್ಯವಾಗುತ್ತದೆ. ‘ಮಕ್ಕಳಿಗೆ ಖುಷಿ ಆಗುತ್ತದೆ’ ಎಂದು ಹಿರಿಯರು ಭಾವಿಸಿದ ಪುಸ್ತಕಗಳನ್ನು ಮಕ್ಕಳು ಓದುವಂತೆ ಮಾಡಲು ಹಲವು ದಾರಿಗಳಿವೆ.
ಈಗ, ಬರಹದ ಆರಂಭದಲ್ಲಿದ್ದ ಪ್ರಶ್ನೆಯನ್ನು ಈ ರೀತಿ ಕೇಳಿಕೊಳ್ಳೋಣ: ‘ನಮ್ಮ ಮಕ್ಕಳು ನಮ್ಮ ಹಳೆಯ ಕೃತಿಗಳನ್ನು ಓದುವುದು ಒಳ್ಳೆಯದು ಎಂದು ನಾನೇಕೆ ಭಾವಿಸಿದ್ದೇನೆ?’ ಇದಕ್ಕೆ ಕೆಲವು ಕಾರಣಗಳು ಇಲ್ಲಿವೆ:
1) ಆ ಕೃತಿಗಳು ಧರ್ಮದ ಎಲ್ಲೆ ಮೀರಿದವು: ವೇದಗಳು, ಉಪನಿಷತ್ತುಗಳು ಮತ್ತು ಭಗವದ್ಗೀತೆಯಂತಹ ಕೃತಿಗಳು ವಿಶ್ವದಲ್ಲಿ ಅತ್ಯಂತ ವೈವಿಧ್ಯಮಯವಾದ ದೇಶದಲ್ಲಿ ಜನಿಸಿದವು. ಆದರೆ, ಅವು ರಚನೆಯಾದಗಿದ್ದು ಸಂಘಟಿತ ಧರ್ಮಗಳು ಅಸ್ತಿತ್ವಕ್ಕೆ ಬರುವ ನೂರಾರು ವರ್ಷಗಳ ಮೊದಲು. ಅವು ವೈಶ್ವಿಕ ಶಕ್ತಿಯ ಬಗ್ಗೆ ಅಥವಾ ವಿಶ್ವದ ಪ್ರಜ್ಞೆಯ ಬಗ್ಗೆ ಮಾತನಾಡುವಷ್ಟು ದೇವರ ಬಗ್ಗೆ ಮಾತನಾಡುವುದಿಲ್ಲ. ಅವು ಕೇಳಿಕೊಂಡ ಪ್ರಶ್ನೆಗಳು, ಉತ್ತರ ಹುಡುಕಲು ಹೊರಟ ಪ್ರಶ್ನೆಗಳು ಮನುಷ್ಯ ಸಂಕುಲವನ್ನು ಕಾಲದ ಆರಂಭದಿಂದಲೂ ಕಾಡಿದಂಥವು. ವಿಶ್ವ ಎಲ್ಲಿಂದ ಬಂತು, ನಾನು ನಿಜಕ್ಕೂ ಯಾರು, ನನ್ನ ಜೀವನದ ಉದ್ದೇಶವೇನು, ಸಂತೋಷದಿಂದ ತೃಪ್ತಿಯಿಂದ ಬದುಕಲು ಬೇಕಿರುವುದು ಏನು? ಇವೆಲ್ಲ ಅಲ್ಲಿರುವ ಪ್ರಶ್ನೆಗಳು.
ಈ ಕೃತಿಗಳಲ್ಲಿ ಗುರುತಿಸಬೇಕಾದ ಸೊಗಸು ಒಂದಿದೆ. ಅವು ಮೇಲಿನ ಪ್ರಶ್ನೆಗಳ ಬಗ್ಗೆ ಇದಮಿತ್ಥಂ ಎನ್ನುವ ಸಿದ್ಧಾಂತವನ್ನು ನೀಡುವುದಿಲ್ಲ. ‘ಇದೇ ಸತ್ಯ’ ಎಂದು ಹೇಳುವುದಿಲ್ಲ. ಅದರ ಬದಲು ಅವು, ‘ಸತ್ಯ ಹೀಗಿರಬಹುದು’ ಎಂದು ಹಲವು ಸಾಧ್ಯತೆಗಳನ್ನು ತೆರೆದಿಡುತ್ತವೆ. ನಂತರ, ತಾವು ನೀಡಿದ ಸಾಧ್ಯತೆಗಳನ್ನೇ ಅನುಮಾನದಿಂದ ನೋಡುತ್ತವೆ ಕೂಡ. ಎಲ್ಲವನ್ನೂ ತಿಳಿದಿರುವ ದೇವರ ಅಸ್ತಿತ್ವದ ಬಗ್ಗೆಯೂ ಪ್ರಶ್ನೆ ಹುಟ್ಟುಹಾಕುತ್ತವೆ. ಉದಾಹರಣೆಗೆ, ಋಗ್ವೇದದ ನಾಸದೀಯ ಸೂಕ್ತ ಹೀಗೆ ಹೇಳುತ್ತದೆ:
ಈ ಸೃಷ್ಟಿ ಎಲ್ಲಿಂದ ಬಂತು ಎಂಬುದು ಯಾರಿಗೆ ಗೊತ್ತು?
ಇದೆಲ್ಲ ಆಗಿದ್ದು ಹೀಗೆ ಎಂದು ಯಾರು ಹೇಳಬಲ್ಲರು?
ದೇವರು ಕೂಡ ಬಂದಿದ್ದು ತಡವಾಗಿ. ಇವನ್ನೆಲ್ಲ ಸೃಷ್ಟಿಸಿದವನಿಗೆ ಮಾತ್ರ ಅದು ಗೊತ್ತು.ಅವನಿಗೆ ಇದು ನಿಜವಾಗಿಯೂ ಗೊತ್ತಾ?
ಇದು ಮಕ್ಕಳೆಲ್ಲ ಕಲಿತುಕೊಳ್ಳಬೇಕಾದ ಬಹುದೊಡ್ಡ ಪಾಠ – ಯಾರೋ ಹೇಳಿದರು ಎಂದಮಾತ್ರಕ್ಕೆ ಅದನ್ನು ಕುರುಡಾಗಿ ನಂಬಬಾರದು. ಪ್ರತಿಯೊಂದನ್ನೂ ಪ್ರಶ್ನಿಸಬೇಕು, ಕುತೂಹಲ ಉಳಿಸಿಕೊಳ್ಳಬೇಕು. ಮನಸ್ಸನ್ನು ತೆರೆದು ಇಟ್ಟುಕೊಳ್ಳಬೇಕು. ಶಿಕ್ಷಕರು, ಗುರುಗಳು, ಪಾಲಕರು ಮತ್ತು ಸ್ನೇಹಿತರು ನೀಡುವ ಎಲ್ಲವನ್ನೂ ಮಾರ್ಗಸೂಚಿಯನ್ನಾಗಿ ಬಳಸಿಕೊಳ್ಳಬೇಕು. ಪಯಣ ಸಾಗಿದಂತೆ ನಿಮ್ಮದೇ ದಾರಿಯನ್ನು ನೀವು ಕಂಡುಕೊಳ್ಳಬೇಕು.
2) ಸಂತಸದ ಬದುಕಿಗೆ ಅವು ದಾರಿದೀಪ: ಹಿಂದಿನ ಕಾಲದ ಈ ಕೃತಿಗಳು ‘ನಾವು ಪವಿತ್ರ’ ಎಂದು ಹೇಳಿಕೊಂಡಿಲ್ಲ. ಆದರೆ ಅವು ಪವಿತ್ರ ಎಂದು ಪರಿಗಣಿಸಲಾಗಿದೆ. ಏಕೆಂದರೆ ಅವುಗಳಲ್ಲಿ ಸುಂದರ, ಖುಷಿಯ ಬದುಕನ್ನು ಸಾಗಿಸಲಿಕ್ಕೆ ಬೇಕಿರುವ ಸೂತ್ರಗಳು ಅಡಕವಾಗಿವೆ. ಉಪನಿಷತ್ತುಗಳು ಮತ್ತು ಗೀತೆಯಲ್ಲಿ ಇರುವ ಅಂತಹ ಪ್ರಮುಖ ಪಾಠಗಳು:
ವ್ಯಕ್ತಿಯೊಬ್ಬನಿಗೆ ಬದುಕಲು ಅವಕಾಶ ಮಾಡಿಕೊಟ್ಟಿರುವ ಹಾಗೂ ವಿಶ್ವದ ಸೌಂದರ್ಯವನ್ನು ಅನುಭವಿಸಲು ಅವಕಾಶ ಕಲ್ಪಿಸಿರುವ ಶಕ್ತಿಯೇ, ಇತರೆಲ್ಲರನ್ನೂ ಪೊರೆಯುತ್ತಿದೆ. ಇದನ್ನು ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಮೇಲ್ಮಟ್ಟದಲ್ಲಿ ಏನೇ ವ್ಯತ್ಯಾಸಗಳಿದ್ದರೂ ಪಕ್ಷಿಗಳು, ಸಸ್ಯ ಸಂಕುಲ, ಮನುಷ್ಯ, ಗಂಡು–ಹೆಣ್ಣು, ನದಿ, ಪರ್ವತ ಎಲ್ಲವೂ ಸಮಾನ. ಸಮಾನತೆಯ ಈ ಪಾಠವನ್ನು ಎಳೆಯ ವಯಸ್ಸಿನಲ್ಲಿ ಕಲಿತುಕೊಳ್ಳಬೇಕಿರುವುದು ಬಹುಮುಖ್ಯ. ಭಿನ್ನತೆಗಳನ್ನು ಗುರುತಿಸಿ, ಅವುಗಳ ಆಧಾರದಲ್ಲಿ ಮನುಷ್ಯರನ್ನು ವಿಭಜಿಸುವ ಬದಲು ಅವರೆಲ್ಲರಲ್ಲಿ ಇರುವ ಸಮಾನತೆಯನ್ನು ಗುರುತಿಸುವುದು ಬಹುಸಂಸ್ಕೃತಿಯ ಈ ದೇಶದಲ್ಲಿ ಬಹುಮುಖ್ಯ.
ನಮ್ಮ ಪಾಲಿನ ಜವಾಬ್ದಾರಿಗಳನ್ನು, ನಾವು ಇನ್ನೊಬ್ಬರಿಗೆ ಮಾಡಬೇಕಿರುವ ಕೆಲಸಗಳನ್ನು ಮಾಡಲು ಇವು ಮಾರ್ಗದರ್ಶಕಗಳು. ಸೂರ್ಯ ಪ್ರತಿದಿನ ಉದಯಿಸುತ್ತಾನೆ, ನದಿ ಯಾವತ್ತಿಗೂ ಹರಿಯುತ್ತಿರುತ್ತದೆ, ಗಾಳಿ ಬೀಸುತ್ತದೆ... ಏಕೆಂದರೆ, ಇವೆಲ್ಲ ಅವುಗಳ ಜವಾಬ್ದಾರಿಗಳು. ಹೀಗಿರುವಾಗ ನಮಗೆ ನಮ್ಮ ಕೆಲಸ ಮಾಡದಿರಲು ಕಾರಣಗಳೇನಿವೆ?!
ನಿಮ್ಮ ಪಾಲಿನ ಕೆಲಸವನ್ನು ನಿಮಗೆ ಸಾಧ್ಯವಾದಷ್ಟು ಚೆನ್ನಾಗಿ ಮಾಡಿ. ಆದರೆ, ಆ ಕೆಲಸ ಮಾಡಿದ್ದಕ್ಕೆ ಪ್ರತಿಯಾಗಿ ಯಾವ ನಿರೀಕ್ಷೆಗಳನ್ನೂ ಇಟ್ಟುಕೊಳ್ಳಬೇಡಿ. ನಿಮ್ಮ ಕ್ರಿಯೆಗೆ ಸಿಗುವ ಪ್ರತಿಫಲದ ಮೇಲೆ ನಿಮಗೆ ಯಾವ ನಿಯಂತ್ರಣವೂ ಇಲ್ಲ ಎಂಬುದನ್ನು ಒಪ್ಪಿಕೊಳ್ಳಿ; ವಾಸ್ತವದಲ್ಲಿ, ನಿಮಗೆ ನಿಯಂತ್ರಣ ಇರುವುದು ನಿಮ್ಮ ಪ್ರಯತ್ನದ ಮೇಲೆ ಮಾತ್ರ. ಹಾಗಾಗಿ, ನಿಮ್ಮ ಪ್ರಯತ್ನದ ಮೇಲೆ ಪೂರ್ತಿ ಗಮನ ಕೊಡಿ. ನೀವು ತಲುಪುತ್ತೀರಿ ಎಂಬ ಖಚಿತತೆ ಇಲ್ಲದ ಗಮ್ಯದ ಮೇಲೆ ಗಮನ ನೀಡುವುದಕ್ಕಿಂತ ಪ್ರಯಾಣದ ಸುಖ ಅನುಭವಿಸಿ. ಆಗ ನಿಮಗೆ ಖುಷಿ ಸಿಗುತ್ತದೆ.
ಅವು ಅತ್ಯಂತ ಗಟ್ಟಿಯಾದ ಕೆಲವು ಮಾತುಗಳನ್ನೂ ಒಳಗೊಂಡಿವೆ. ಅವುಗಳಲ್ಲಿ ಮುಖ್ಯವಾಗಿದ್ದು: ನೀವು ಅಮುಖ್ಯರಲ್ಲ. ನೀವು ಹೆಚ್ಚು ಮುಖ್ಯರು, ನೀವು ಅಂದುಕೊಂಡಿರುವುದಕ್ಕಿಂತ ಹೆಚ್ಚು ಶಕ್ತಿಶಾಲಿ ನೀವು. ನಂಬಿದರೆ ನಂಬಿ, ಬಿಟ್ಟರೆ ಬಿಡಿ; ನೀವು ದೇವರಿಗೆ ಸಮಾನ. ತತ್ ತ್ವಮ್ ಅಸಿ. ಅಹಂ ಬ್ರಹ್ಮಾಸ್ಮಿ. ಹಾಗಾಗಿ, ಕೇವಲ ಮನುಷ್ಯನಾಗಿ ಉಳಿದುಬಿಡಬೇಡಿ. ನಿಮ್ಮಲ್ಲೇ ಇರುವ ಸಾಧನೆ, ಪ್ರೀತಿಯ, ಸಂತೋಷದ ಶಕ್ತಿಯನ್ನು ಕಂಡುಕೊಳ್ಳಿ.
ಇಂತಹ ಮಾತುಗಳನ್ನು ಕೇಳಿಸಿಕೊಳ್ಳುತ್ತ ಬೆಳೆದಾಗ, ಮಗು ಎಷ್ಟು ಆತ್ಮವಿಶ್ವಾಸ ಹೊಂದಬಲ್ಲದು, ಆ ಮಗುವಿಗೆ ಭವಿಷ್ಯದ ಬಗ್ಗೆ ಎಷ್ಟು ನಂಬಿಕೆ ಮೂಡಬಲ್ಲದು? ಆಲೋಚಿಸಿ.
3) ಅವು ಈ ನೆಲದ ಕಾವ್ಯಗಳು: ಶತಮಾನಗಳಿಂದಲೂ ತುಂಡಾಗದ ಪರಂಪರೆಯನ್ನು ಹೊಂದಿದ ಹೆಮ್ಮೆ ಭಾರತಕ್ಕಿದೆ. ವೇದಗಳು ಮತ್ತು ಉಪನಿಷತ್ತುಗಳನ್ನು ರಚಿಸಿದ ಋಷಿಗಳು ನಂಬಿದ ಅವೇ ಮಂತ್ರಗಳನ್ನು, ಅವೇ ಆಚರಣೆಗಳನ್ನು, ಅವೇ ಪರಿಕಲ್ಪನೆಗಳನ್ನು ಹೇಳುತ್ತಿದ್ದೇವೆ, ಪಾಲಿಸುತ್ತಿದ್ದೇವೆ ಮತ್ತು ನಂಬುತ್ತಿದ್ದೇವೆ. ಈ ಕೃತಿಗಳನ್ನು ಓದಿಕೊಳ್ಳುವುದರಿಂದ ನಾವು ಯಾರು, ನಾವು ನಂಬಿರುವ ಸಂಗತಿಗಳನ್ನು ಏಕೆ ನಂಬಿಕೊಂಡು ಬಂದಿದ್ದೇವೆ, ನಾವೇಕೆ ಹೀಗೆ ವರ್ತಿಸುತ್ತೇವೆ ಎಂಬುದು ಗೊತ್ತಾಗುತ್ತದೆ.
ಜಗತ್ತನ್ನು ಪ್ರೀತಿಸುವ ಬಗ್ಗೆ, ಇಲ್ಲಿರುವ ಎಲ್ಲರನ್ನೂ ಪ್ರೀತಿಯಿಂದ ಕಾಣುವ ಬಗ್ಗೆ ಮಾತನಾಡುತ್ತೇವೆ. ವಿಭಜನಕಾರಿ ಶಕ್ತಿಗಳು ಹೆಚ್ಚಿರುವ ಈ ಹೊತ್ತಿನಲ್ಲಿ ನಮ್ಮ ಮನೆಯ ಮಕ್ಕಳು ಉದಾರ ಮನಸ್ಸಿನವರಾಗಿರಲಿ, ನ್ಯಾಯವಂತರಾಗಿರಲಿ, ಭಿನ್ನತೆಗಳನ್ನು ಒಪ್ಪಿಕೊಳ್ಳಲಿ ಎಂದು ಬಯಸುತ್ತೇವೆ. ಆದರೆ, ಇವನ್ನೆಲ್ಲ ಹೇಳುವುದು ಬಹಳ ಸುಲಭ. ‘ಎಲ್ಲರನ್ನೂ ಪ್ರೀತಿಸುವ’ ಮೌಲ್ಯವನ್ನು ಮೈಗೂಡಿಸಿಕೊಳ್ಳಬೇಕು ಎಂದಾದರೆ ನಾವು ಪುಟ್ಟ ಪುಟ್ಟ ಹೆಜ್ಜೆಗಳೊಂದಿಗೆ ಕೆಲಸ ಆರಂಭಿಸಬೇಕಾಗುತ್ತದೆ. ಇದರಲ್ಲಿ ಮೊದಲ ಹೆಜ್ಜೆಯೆಂದರೆ, ನಮ್ಮನ್ನು ನಾವು ಪ್ರೀತಿಸಿಕೊಳ್ಳುವುದು, ನಮ್ಮನ್ನು ನಾವು ಇರುವಂತೆ ಒಪ್ಪಿಕೊಳ್ಳುವುದು, ನಮ್ಮನ್ನು ನಾವು ಗೌರವಿಸುವುದು, ನಮ್ಮ ಆತ್ಮಸಾಕ್ಷಿಗೆ ಪ್ರಾಮಾಣಿಕರಾಗಿ ನಡೆದುಕೊಳ್ಳುವುದು. ನಮ್ಮನ್ನು ಪ್ರೀತಿಸಿಕೊಳ್ಳುವುದಕ್ಕೆ ಇರುವ ಮೊದಲ ಹೆಜ್ಜೆ ನಮ್ಮನ್ನು ನಾವು ಅರಿಯುವುದು.
ಸಂಸ್ಕೃತಿ, ಪರಂಪರೆ ಹಾಗೂ ದೇಶದ ವಿಚಾರದಲ್ಲಿ ಕೂಡ ಇವೇ ವಿಚಾರಗಳು ಮುಖ್ಯವಾಗುತ್ತವೆ. ನಿಮ್ಮ ವ್ಯಕ್ತಿತ್ವವನ್ನು ನೀವು ಗೌರವಿಸದಿದ್ದರೆ, ಇನ್ನೊಬ್ಬರ ವ್ಯಕ್ತಿತ್ವವನ್ನು ಗೌರವಿಸಲು ನಿಮ್ಮಿಂದ ಆಗದು. ನಮ್ಮ ಪುರಾತನ ಕೃತಿಗಳನ್ನು ಮಕ್ಕಳು ಏಕೆ ಓದಬೇಕು ಎಂಬುದಕ್ಕೆ ಇದೂ ಒಂದು ಪ್ರಮುಖ ಕಾರಣ ಎಂದು ನಾನು ನಂಬಿದ್ದೇನೆ. ಅವು ನಮ್ಮ ಬಗೆಗಿನ ಜ್ಞಾನವನ್ನು ಹುದುಗಿಸಿಕೊಂಡಿವೆ.
ಉಪನಿಷತ್ತುಗಳು ಹೇಳುವ ಒಂದು ಮಹಾವಾಕ್ಯ ಹೀಗಿದೆ: ಪ್ರಜ್ಞಾನಂ ಬ್ರಹ್ಮ. ಅಂದರೆ, ಜ್ಞಾನವೇ ದೇವರು. ಮಕ್ಕಳು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಬಹುದೊಡ್ಡ ಮೌಲ್ಯ ಇದು. ಜ್ಞಾನ ಮಾತ್ರವೇ ದೇವರು. ಹಾಗಾಗಿ ನಾವು ರಾಜಕೀಯ, ವಿಜ್ಞಾನ, ಸಂಸ್ಕೃತಿ, ಧರ್ಮ, ಹೊಸ ಆಲೋಚನೆಗಳು, ಅಭಿಪ್ರಾಯಗಳ ಬಗ್ಗೆ ನಿರಂತರವಾಗಿ ತಿಳಿದುಕೊಳ್ಳುತ್ತಿರಬೇಕು. ನೀವು ಇನ್ನು ಹೊಸ ಜ್ಞಾನ ಸ್ವೀಕರಿಸಲು ಸಾಧ್ಯವಾಗದ ಸ್ಥಿತಿ ತಲುಪಿದ್ದೀರಿ ಎಂದಾದರೆ, ಅದನ್ನು ಇನ್ನೊಬ್ಬರಿಗೆ ಹಂಚಿ. ಆಗ ಇನ್ನಷ್ಟು ಜ್ಞಾನವನ್ನು ಸ್ವೀಕರಿಸಲು ನೀವು ಸಿದ್ಧರಾಗುತ್ತೀರಿ.
(ಲೇಖಕಿ ಮಕ್ಕಳಿಗಾಗಿ ಪುಸ್ತಕಗಳನ್ನು ಬರೆದಿದ್ದಾರೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.