ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರಿನಲ್ಲಿ ಅರಣ್ಯವಾಸಿಗಳು ಬದುಕು ಕಟ್ಟಿಕೊಳ್ಳುತ್ತಿರುವ ಬಗೆಯಲ್ಲಿ ಮಾನವೀಯ ಸೆಲೆಗಳು ಇಣುಕುತ್ತವೆ. ಅಂತಹ ಬಿಡಿಬಿಡಿ ಕಥನಗಳ ನುಡಿಚಿತ್ರವಿದು...
ಆ ದಿನ ಮಧ್ಯಾಹ್ನದ ಬಿರು ಬಿಸಿಲು... ಸಾಗುತ್ತಿದ್ದ ಜೀಪು ಡಾಂಬರು ರಸ್ತೆಯಿಂದ ಕಾಡಿನ ರಸ್ತೆಗೆ ಟರ್ನ್ ತೆಗೆದುಕೊಂಡಿತು. ಮುಗಿಲೆತ್ತರ ಮರಗಳ ದಟ್ಟ ಕಾನನದೊಳಗೆ ಬೆಳಕು ಕತ್ತಲನ್ನು ಸೀಳುತ್ತಾ ಮಂದವಾಗುತ್ತಿತ್ತು. ಪ್ರಾಣಿಯೊಂದನ್ನು ನುಂಗಿದ ಹೆಬ್ಬಾವು ಉಸಿರು ಹೊರಹಾಕುತ್ತಾ ತೆವಳುವಂತೆ ಜೀಪ್ ಸಾಗಿತ್ತು. ಅದು ರಸ್ತೆ ಅರ್ಥಾತ್ ದೊಡ್ಡ ಗಾತ್ರದ ಬೆಣಚು ಕಲ್ಲುಗಳ ಕೊರಕಲು ರಸ್ತೆ. ಜೀಪ್ ಏರುತ್ತಾ, ಇಳಿಯುತ್ತಾ ಗುರಿ ತಲುಪುವ ಹೊತ್ತಿಗೆ ಆರು ಕಿಲೋಮೀಟರ್ ರಸ್ತೆ, ಅರವತ್ತು ಕಿಲೋಮೀಟರ್ ಇದೆಯೇನೋ ಎಂಬಂತೆ ಭಾಸವಾಯಿತು.
‘ಈ ವರ್ಸ ಬರ್ಸ ಬಾರೀ ಕಮ್ಮಿ. ಬರ್ಸ ಇಜ್ಜಂದಿನೈದಾವ್ರ ರೋಡ್ ಎಡ್ಡೆ ಉಂಡು’(ಈ ವರ್ಷ ಮಳೆ ಭಾರಿ ಕಡಿಮೆ. ಹೀಗಾಗಿ ರಸ್ತೆ ಚೆನ್ನಾಗಿದೆ) ಎಂದ ಡ್ರೈವರ್ ಜೀಪ್ ಅನ್ನು ಮಲೆಕುಡಿಯುರ ಮನೆ ಅಂಗಳಕ್ಕೆ ಭರ್‍ರನೆ ತಂದು ನಿಲ್ಲಿಸಿದಾಗ, ಎದುರಿಗೆ ಕಂಡ ಸಹ್ಯಾದ್ರಿ ಸಾಲಿನ ಪಣೆಬೆಟ್ಟ ಮೇಲೆ ಮೋಡಗಳು ದಿಬ್ಬಣ ಹೊರಟ್ಟಿದ್ದವು.
ಇಲ್ಲಿಂದ ಕುತ್ಲೂರು ಕಥನ ಆರಂಭ...
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ವ್ಯಾಪ್ತಿಯ ಕುತ್ಲೂರು ಗ್ರಾಮ, ಪ್ರಕೃತಿ ಮಡಿಲಲ್ಲಿ ಇದೆ. ಸಣ್ಣದೊಂದು ಗುಡ್ಡ ಇಳಿದು ಲಿಂಗಪ್ಪ ಮಲೆಕುಡಿಯ ಅವರ ಮನೆ ಅಂಗಳಕ್ಕೆ ಕಾಲಿಟ್ಟಾಗ ಇಳಿಹೊತ್ತು. ಲಿಲ್ಲಿ ಹೂವುಗಳು ಸ್ವಾಗತ ಕೋರಿದರೆ, ಇಂಬಳಗಳು ದಾಳಿ ನಡೆಸಲು ಸನ್ನದ್ಧವಾಗಿದ್ದವು. ದೂರದಲ್ಲಿ ಹರಿಯುವ ಹೊಳೆಯ ಝಳ ಝಳ ನಾದ, ಗುಂಯ್ ಎನ್ನುವ ಶಬ್ದ ಬಿಟ್ಟರೆ ಉಳಿದೆಲ್ಲವೂ ನಿಶ್ಶಬ್ದ. ಮೊಬೈಲ್ ನೆಟ್‌ವರ್ಕ್ ಇಲ್ಲದ ಪ್ರಶಾಂತ ಪರಿಸರ.
ಅಲ್ಲೇ ಮನೆ ಜಗುಲಿ ಮೇಲೆ ಲಿಂಗಪ್ಪ ಮಲೆಕುಡಿಯ ಎಲೆ ಅಡಿಕೆ ಜಗಿಯುತ್ತಾ ಕುಳಿತಿದ್ದರು. ಅಂಗಳದಲ್ಲಿ ಒಣಗಿಸಲು ಹಾಕಿದ್ದ ಅಡಿಕೆ ಒಟ್ಟುಗೂಡಿಸಲು ಅಣಿಯಾಗುತ್ತಿದ್ದರು. ಅವರ ಪತಿ ಹೊನ್ನಮ್ಮ ಅತಿಥಿಗಳನ್ನು ಬರಮಾಡಿಕೊಳ್ಳಲು ತಯಾರು ಮಾಡುತ್ತಿದ್ದ ಪದಾರ್ಥದ ಘಮಲು ಅಂಗಳದವರೆಗೂ ಹರಡಿತ್ತು. ಮಗ ಪುರುಷೋತ್ತಮ ಅಂದು ಬಲಿಪಾಡ್ಯಮಿ ದಿನದ ಸಂಜೆ ಪೂಜೆಗೆ ಕಾಡಿನ ಹೂವುಗಳನ್ನು ತಂದು ಪೋಣಿಸಿ ದೀಪ ಬೆಳಗಲು ತಯಾರಿ ನಡೆಸಿದ್ದ.
ಸಮಸ್ಯೆಗಳಿಗೆ ಕಿವಿಗೊಟ್ಟಾಗ...
ಕುತ್ಲೂರಿನ ಮಲೆಕುಡಿಯರು ಜೀವನ ನಿರ್ವಹಣೆಗಾಗಿ ಕಾಡುತ್ಪತ್ತಿಗಳಾದ ಜೇನುತುಪ್ಪ, ಮಂತುಹುಳಿ, ರಾಮಪತ್ರೆ, ಗೇರುಬೀಜ, ದಾಲ್ಚಿನ್ನಿ, ಕಾಳುಮೆಣಸು ಮಾರಿ, ಬಂದ ಹಣದಿಂದ ತಮ್ಮ ದೈನಂದಿನ ಬೇಡಿಕೆಗಳನ್ನು ಪೂರೈಸಿಕೊಳ್ಳುತ್ತಾ ತಮ್ಮ ಪಾಡಿಗೆ ಜೀವನ ಸಾಗಿಸುವ ಸ್ವಾಭಿಮಾನಿಗಳು. ತಮಗೆ ಇರುವ ಹತ್ತೋ– ಹದಿನೈದೋ ಗುಂಟೆ ಜಾಗದಲ್ಲಿ ಅಡಿಕೆ ಬೆಳೆದು ಜೀವನ ಕಟ್ಟಿಕೊಂಡಿರುವ ಬಡ ಶ್ರಮಜೀವಿಗಳು. ಕೆಲವರು ಮಂಗಳೂರು ಹೆಂಚು ಬಳಸಿ ಒಪ್ಪವಾದ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ತಮಗೆ ಲಭ್ಯವಿರುವ ಸಂಪನ್ಮೂಲಗಳಲ್ಲೇ ನಿರ್ಮಿಸಿರುವ ಶೌಚಾಲಯ, ಸ್ನಾನದ ಮನೆ ಇತ್ಯಾದಿಯೂ ಇದೆ.
ಸೋಲಾರ್ ದೀಪವಿದೆ. ಸಿಗ್ನಲ್ ಸಿಕ್ಕರೆ ರೇಡಿಯೊ ಕೂಡ ಉಲಿಯುತ್ತದೆ. ಇಲ್ಲಿನ ಪ್ರಾಕೃತಿಕ ಸಿಹಿ ನೀರಿನ ಒರತೆಗಳು ದಾಹ ತಣಿಸುತ್ತವೆ.
ನಮ್ಮೂರಿನ ರಸ್ತೆಗಳು ಮಳೆಗಾಲದಲ್ಲಿ ಹಾಳಾಗಿ ಸಂಚರಿಸಲು ಕಷ್ಟವಾಗುತ್ತದೆ. ಆರು ತಿಂಗಳು ರಸ್ತೆ ಸರಿ ಇದ್ದರೆ ಇನ್ನು ಆರು ತಿಂಗಳು ಸಂಚಾರವೇ ದುಸ್ತರ. ವಿದ್ಯುತ್‌ಗಾಗಿ ಬಹುವರ್ಷಗಳ ಬೇಡಿಕೆ ಇದೆ. ಕೆಲವರು ಜಲವಿದ್ಯುತ್ ಘಟಕ ಮಾಡಿಕೊಂಡಿದ್ದಾರೆ. ಇಲ್ಲಿನ ಕುರಿಯಾಡಿ ಅಂಗನವಾಡಿಗೆ ಮಕ್ಕಳು ಹೋಗಬೇಕೆಂದರೆ ಎರಡು ನದಿ ದಾಟಬೇಕಾಗುತ್ತದೆ. ಈ ನದಿಗೆ ಸೇತುವೆ ನಿರ್ಮಿಸಿದರೆ ಮಕ್ಕಳು ಮಳೆಗಾಲದಲ್ಲೂ ಅಂಗನವಾಡಿಗೆ ಹೋಗಿ ಬರಲು ಅನುಕೂಲವಾಗುತ್ತದೆ.ಪೂವಪ್ಪ ಮಲೆಕುಡಿಯ, ಅಂಜರೊಟ್ಟು ಮನೆ ಕುತ್ಲೂರು
ಸರ್ಕಾರ ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆ ಜಾರಿ ಮಾಡುವುದಕ್ಕಾಗಿ ಪರಂಪರಾಗತವಾಗಿ ಕಾಡಿನಲ್ಲಿ ವಾಸವಿದ್ದ ಮಲೆಕುಡಿಯರನ್ನು ಒಕ್ಕಲೆಬ್ಬಿಸುವ ಯೋಜನೆ ರೂಪಿಸಿತ್ತು. ನಕ್ಸಲ್ ನಿಗ್ರಹ ಪಡೆಯು ಕುತ್ಲೂರು ಹಾಗೂ ರಾಷ್ಟ್ರೀಯ ಉದ್ಯಾನ ಪ್ರದೇಶದ ಜನರು ಒಕ್ಕಲೆದ್ದು ಹೋಗಲು ಒತ್ತಡ, ₹10 ಲಕ್ಷ ಪ್ಯಾಕೇಜ್ ಆಮಿಷವೊಡ್ಡಿತ್ತು. ಹಲವು ಸಂಘಟನೆಗಳ ಪ್ರವೇಶದೊಂದಿಗೆ ಈ ಜನರು ಮುಖ್ಯವಾಹಿನಿಗೆ ತೆರೆದುಕೊಂಡಿದ್ದಾರೆ. ಹಕ್ಕುಗಳಿಗಾಗಿ ಸಂವಿಧಾನಾತ್ಮಕ ಹಾದಿಯಲ್ಲಿ ಸಾಗಿದ್ದಾರೆ.
ಕುತ್ಲೂರಿನ ಮಲೆಕುಡಿಯರು ಈಗ ಪೊಲೀಸ್ ದೌರ್ಜನ್ಯದಿಂದ ಮುಕ್ತರು. ಪೊಲೀಸ್ ಮತ್ತು ಅರಣ್ಯ ಇಲಾಖೆ ನಕ್ಸಲ್ ವಿಚಾರಣೆ ನೆಪದಲ್ಲಿ ರಾತ್ರೋರಾತ್ರಿ ಮನೆಗಳಿಗೆ ನುಗ್ಗುತ್ತಿಲ್ಲ. ನಕ್ಸಲ್ ಕೂಬಿಂಗ್ ನಡೆದರೂ ಯಾವ ಮಲೆಕುಡಿಯರ ಮೇಲೆ ಹಲ್ಲೆ ಮಾಡುವುದಾಗದಲಿ, ಸಾಕ್ಷ್ಯವಿಲ್ಲದೆ ವಿಚಾರಣೆ ನಡೆಸುತ್ತಿಲ್ಲ. ಇವರ ಪ್ರಶ್ನಿಸುವ ಮನೋಭಾವಕ್ಕೆ ಸಂವಿಧಾನ ಊರುಗೋಲಾಗಿ ನಿಂತಿದೆ.
ಕುತ್ಲೂರು ಕಥನವಾಗಿ ಸಿನಿಮಾ
ತಮ್ಮ ಜನರ ಹಕ್ಕುಗಳಿಗಾಗಿ ಮೊದಲು ಧ್ವನಿ ಎತ್ತಿದ್ದು ಈ ಸಮುದಾಯದ ಮೊದಲ ಶಿಕ್ಷಿತ ಯುವಕ ವಿಠಲ. ನಕ್ಸಲ್ ಎಂದು ಆರೋಪಿತನಾಗಿ ಸತತ 10 ವರ್ಷ ದೇಶದ್ರೋಹ ಕೇಸಿನಲ್ಲಿ ಕೋರ್ಟ್‌ಗೆ ಅಲೆದಾಡಿ, ಕೊನೆಗೂ ನಿರ್ದೋಷಿಯಾಗಿದ್ದಾರೆ. ಕೈಕೋಳದಲ್ಲೇ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ಬರೆದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರು. ಜನಪರ ಸಂಘಟನೆಗಳು, ಹೋರಾಟಗಾರರು, ವಕೀಲರು ಬೆಂಬಲಕ್ಕೆ ನಿಂತಿದ್ದರು. ಈ ಹೋರಾಟವೇ ‘ಕುತ್ಲೂರು ಕಥನ’. ಇದರ ಲೇಖಕರು ನವೀನ್ ಸೂರಿಂಜೆ. ಇದೇ ಕಥೆಯನ್ನಾಧರಿಸಿ ನಿರ್ದೇಶಕ ಮಂಸೋಂರೆ ‘19.20.21’ ಚಿತ್ರ ಮಾಡಿ ಗಮನ ಸೆಳೆದಿದ್ದಾರೆ.
‘ನಾವೇ ಸೌಲಭ್ಯ ರೂಪಿಸಿಕೊಂಡರೆ ಅರಣ್ಯ ಇಲಾಖೆ ದೂರು ದಾಖಲಿಸುತ್ತದೆ. ರಸ್ತೆ ರಿಪೇರಿ ಮಾಡಿದ ನಾಲ್ವರ ಮೇಲೆ ಕೇಸಿದೆ. ಜಲವಿದ್ಯುತ್ ಮಾಡಿಕೊಳ್ಳಲು ಸರ್ಕಾರ ಅನುದಾನ ಕೊಡಬೇಕು. ಕೃಷಿ ಇಲಾಖೆಯಿಂದ ಪೈಪ್ ವ್ಯವಸ್ಥೆ ಆಗಬೇಕು. ರಸ್ತೆ ಬೇಕಿದ್ದರೆ ಅರಣ್ಯ ಇಲಾಖೆಯೇ ಸಮರ್ಪಕವಾಗಿ ನಿರ್ವಹಿಸಲಿ. ಕಾಡಬಾಗಿಲು ಸಮೀಪದ ಸೇತುವೆ ಮಳೆಗಾಲದಲ್ಲಿ ಮುರಿದು ಬಿದ್ದಿದೆ. ಸೇತುವೆ ಇಲ್ಲದಿರುವುದರಿಂದ ಪಡಿತರ ತರಲು ಕಾಲ್ನಡಿಗೆಯಲ್ಲಿ ಸಾಗಬೇಕಿದೆ. ಅಳಂಬದಲ್ಲಿ ಹೆಸರಿಗಷ್ಟೆ ಬಸ್ ನಿಲ್ದಾಣ ಇದೆ. ಆದರೆ, ಇದುವರೆಗೂ ಬಸ್ಸೇ ಬಂದಿಲ್ಲ.!’ಚೀಂಕ್ರ ಮಲೆಕುಡಿಯ, ಬರೆಂಗಾಡಿ ಮನೆ, ಕುತ್ಲೂರು
ಮಾಂಝೀ ಕಥೆ ನೆನಪಿಸಿದ ರಸ್ತೆ...
ಬಿಹಾರದ ಗಯಾ ಜಿಲ್ಲೆಯ ದಶರಥ್ ಮಾಂಝೀ ಎಂಬ ಸಾಮಾನ್ಯ ವ್ಯಕ್ತಿಯೊಬ್ಬ ತನ್ನ ಊರಿನ ಜನರು, ಪತ್ನಿಗಾಗಿ ಬೆಟ್ಟವನ್ನು ಕಡಿದು ರಸ್ತೆ ಮಾಡಿದ ಸಾಹಸಮಯ ಕಥೆಯಂತೆ ಕುತ್ಲೂರಿನ ಜನರು ಸುದೀರ್ಘ ಹನ್ನೆರಡು ವರ್ಷಗಳ ಕಾಲ ಆರು ಕಿಲೋಮೀಟರ್ ರಸ್ತೆ ನಿರ್ಮಿಸಿದ ಕಥೆಯೂ ರೋಚಕ.
ನಾರಾವಿ ಗ್ರಾಮ ಪಂಚಾಯಿತಿಯಿಂದ 12 ಕಿಲೋಮೀಟರ್ ದೂರದಲ್ಲಿರುವ ಅರಣ್ಯವಾಸಿಗಳಿಗೆ ಸಮರ್ಪಕವಾಗಿ ಇದುವರೆಗೂ ರಸ್ತೆ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ರಸ್ತೆಗಳು ಬೆಟ್ಟ ಪ್ರದೇಶದಲ್ಲಿ ಇರುವುದರಿಂದ ಮಳೆಗಾಲದಲ್ಲಿ ಕೊಚ್ಚಿಹೋಗುತ್ತವೆ. ಮತ್ತೆ ಮಳೆಗಾಲ ನಿಂತಮೇಲೆ ಯಾವುದೇ ಯಂತ್ರ ಬಳಸದೆ ಹಾರೆ, ಪಿಕಾಸಿ ಇತ್ಯಾದಿ ಸಲಕರಣೆ ಬಳಸಿ ರಸ್ತೆ ರಿಪೇರಿ ಮಾಡಬೇಕಾಗುತ್ತದೆ. ಪ್ರತಿದಿನ ಒಬ್ಬೊಬ್ಬರ ಮನೆಯಿಂದ ಊಟ, ಸ್ವಸಹಾಯ ಪದ್ಧತಿಯಲ್ಲಿ ಪ್ರತಿ ಮನೆಯವರೂ ರಿಪೇರಿಗೆ ಕೆಲಸಕ್ಕೆ ಹೋಗಬೇಕಾಗುತ್ತದೆ. ಇದು ಪ್ರತಿ ವರ್ಷದ ಕಾಯಕ.
ಕುಕ್ಕುಜೆ-ಅಂಜರೊಟ್ಟು- ಕೋಟ್ಯಂದಡ್ಕ, ಅಂಜರೊಟ್ಟು ಕುರಿಯಾಡಿ ಅಂಗನವಾಡಿ ರಸ್ತೆ ಹಾಗೂ ಅಳಂಬ- ಕುರಿಯಾಡಿ- ಪಂಜಾಲು ರಸ್ತೆ ಹಾಗೂ ಅಳಂಬ ನೆಲ್ಲಿದಡ್ಕ ರಸ್ತೆ ನಿರ್ಮಾಣಕ್ಕಾಗಿ ಇವರದ್ದು ದಶಕಗಳ ಬೇಡಿಕೆ.
ಅಂಗನವಾಡಿಗೆ ಆಹಾರ ತರುವ ಪೋಷಕರು
ಕುತ್ಲೂರು ಕುರಿಯಾಡಿ ಮಲೆಯಲ್ಲಿರುವ ಮಿನಿ ಅಂಗನವಾಡಿ ಗ್ರಾಮ ಪಂಚಾಯಿತಿಯಿಂದ 12 ಕಿ.ಮೀ. ದೂರದಲ್ಲಿ ಇದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗಿರುವ ಏಕೈಕ ಸರ್ಕಾರಿ ಕಟ್ಟಡ ಇದು. ಇಲ್ಲಿಗೆ ಸುಮಾರು 6 ಕಿ.ಮೀ. ದೂರ ಇರುವ ನೇಲ್ಯಪಲ್ಕೆ ಎಂಬಲ್ಲಿಯ ಅಂಗನವಾಡಿ ಕೇಂದ್ರಕ್ಕೆ ಪೌಷ್ಟಿಕ ಆಹಾರ ಸರಬರಾಜು ಆಗುತ್ತದೆ.
ಇಲ್ಲಿಂದ ಗ್ರಾಮದ ಜನರು ತಿಂಗಳಿಗೆ ಎರಡು ಮನೆಯವರಂತೆ ಆಹಾರವನ್ನು ಹೊತ್ತು ಅಂಗನವಾಡಿಗೆ ತಲುಪಿಸುತ್ತಾರೆ. ಈ ಅಂಗನವಾಡಿಗೆ ಇದೇ ಅರಣ್ಯ ಪ್ರದೇಶದ ಪಂಜಾಲು ಎಂಬಲ್ಲಿಂದ ಸುಮಾರು ಮೂರು ಕಿ.ಮೀ ದೂರದಿಂದ ಅಂಗನವಾಡಿ ಸಹಾಯಕಿ ಪ್ರತಿದಿನ ಬಂದು ಕಾರ್ಯನಿರ್ವಹಿಸುತ್ತಾರೆ. ಮಳೆಗಾಲದಲ್ಲಿ ಹೊಳೆ ದಾಟಿ ಮಕ್ಕಳು ಅಂಗನವಾಡಿಗೆ ಬರಲು ಸಾಧ್ಯವಾಗುವುದಿಲ್ಲ. ಜನರಿಗೆ ಸಂಪರ್ಕವೂ ದುಸ್ತರ.
ತುತ್ತಿನಚೀಲ, ಪಡಿತರ ತಾಪತ್ರಯ
ಕುತ್ಲೂರು ಅರಣ್ಯ ವ್ಯಾಪ್ತಿಯಲ್ಲಿ ಸುಮಾರು 30 ಮಲೆಕುಡಿಯರ ಮನೆಗಳಿವೆ. ಬಹುತೇಕರು ಸಂಚಾರ ಪಡಿತರ ವ್ಯವಸ್ಥೆ ಅವಲಂಬಿತರು. ತಿಂಗಳಿಗೆ ನಿಗದಿಪಡಿಸಿದ ಒಂದು ದಿನ ಪಡಿತರ ಸರಬರಾಜು ಆಗುತ್ತದೆ. ಆ ದಿನ ಎಲ್ಲ ಮನೆಯವರು ಹೋಗಿ ಪಡಿತರ ತರುತ್ತಾರೆ. ಇದು ಅವರ ತುತ್ತಿನ ಚೀಲದ ಅನಿವಾರ್ಯವೂ ಹೌದು.
ಬೆಳ್ತಂಗಡಿ ತಾಲ್ಲೂಕಿನ ನಾರಾವಿ, ಕುತ್ಲೂರು, ನಾವರ, ಸವಣಾಲು, ನೆರಿಯ, ಶಿಶಿಲ, ಸುಲ್ಕೇರಿ, ಧರ್ಮಸ್ಥಳ, ಚಾರ್ಮಾಡಿ, ಪಟ್ರಮೆ, ಶಿಬಾಜೆ ಹಾಗೂ ಉಡುಪಿ ಜಿಲ್ಲೆಯ ಈದು, ಮಾಳ, ಕಬ್ಬಿನಾಲೆ ಭಾಗದಲ್ಲಿ ಈ ಸಮುದಾಯದವರು ಹೆಚ್ಚು ವಾಸವಾಗಿದ್ದಾರೆ. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಚಿಕ್ಕಮಗಳೂರಿನ ಭಾಗದ ಅರಣ್ಯ ಪ್ರದೇಶದಲ್ಲೂ ಇದ್ದಾರೆ. ಅರಣ್ಯ ಮತ್ತು ಅರಣ್ಯದ ಅಂಚಿನಲ್ಲೇ ಹೆಚ್ಚಿನ ಕುಟುಂಬಗಳು ಇವೆ. ನಗರ ಪ್ರದೇಶಗಳಿಗೆ ಈಚೆಗೆ ಒಂದಷ್ಟು ಕುಟುಂಬಗಳು ವಲಸೆ ಹೋಗಿವೆ. 10ರಿಂದ 13 ಸಾವಿರ ಜನಸಂಖ್ಯೆ ಇದೆ.
ನಿಜ ಸಂಸ್ಕೃತಿಯ ಆರಾಧನೆ ಸುದೆಪೂಜೆ
ಮಲೆ ಕುಡಿಯರು ಮರ, ಗಿಡ, ಕಾಡು ನದಿ, ಬೆಟ್ಟ–ಗುಡ್ಡಗಳನ್ನು ಆರಾಧಿಸುವ ಕ್ರಮಗಳಲ್ಲಿ ಸುದೆಪೂಜೆ ಪ್ರಮುಖ ಆಚರಣೆ. ಕಾಡಿನಲ್ಲಿ ಹರಿಯುವ ನದಿಯನ್ನೇ ಪೂಜಿಸುವ ಪರಿಪಾಠ ಪ್ರತಿವರ್ಷ ಕುತ್ಲೂರಿನ ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿನ ಪೆರಿಂಚ ಸಮೀಪ ನಡೆಯುತ್ತದೆ.
ಕೃಷಿ ಚಟುವಟಿಕೆ ಮುಗಿದ ನಂತರ ಜನವರಿ, ಫೆಬ್ರುವರಿ ತಿಂಗಳಲ್ಲಿ ಸುದೆ ಪೂಜೆ ಆಚರಿಸುವ ಕ್ರಮವಿದೆ. ಪ್ರತಿಯೊಂದು ಮನೆಯಿಂದಲೂ ತೆಂಗಿನಕಾಯಿ, ಎಳನೀರು, ಅವಲಕ್ಕಿ- ಬೆಲ್ಲ ತರಲಾಗುತ್ತದೆ. ಬಳಿಕ ರಾಶಿಪೂಜೆಯನ್ನು ಊರಿನ ಮುಖ್ಯಸ್ಥರೇ ನಿಂತು ನಡೆಸುತ್ತಾರೆ.
ಸುಗ್ಗಿ ಸಂಭ್ರಮದ ಪುರ್ಸ ಪೂಜೆ: ಸುಗ್ಗಿ ಹುಣ್ಣಿಮೆ ಬೆಳದಿಂಗಳಲ್ಲಿ ವಿವಿಧ ವೇಷ ಧರಿಸಿ ಬಿದಿರಿನ ಕೋಲು ಹಿಡಿದು ದಿಮಿಸೋಲೆ ಪದಗಳನ್ನು ಹಾಡಿಕೊಂಡು ರಾತ್ರಿ ಮನೆ ಮನೆಗೆ ತೆರಳಳುತ್ತಾರೆ. ಮನೆಯಲ್ಲಿ ದೀಪ ಹಚ್ಚಿ ಅಕ್ಕಿಯನ್ನು ಇಡಲಾಗುತ್ತದೆ. ದೇವರಿಗೆ ಭಕ್ತಿಯಿಂದ ಪೂಜಿಸುವ ಸಾಂಸ್ಕೃತಿಕ ಆಚರಣೆ ಈ ಸಮುದಾಯದ ವೈಶಿಷ್ಟ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.