ಮೊನ್ನೆ ನಮ್ಮ ಮಿತ್ರರಾದ ದಿವಾಕರ ಅವರು ಈಗ್ಗೆ ಸುಮಾರು ನಲವತ್ತು ವರ್ಷಗಳ ಹಿಂದೆ ತಮ್ಮ ಅನುಭವಕ್ಕೆ ಬಂದ ಒಂದು ಸಂಗತಿ ಎಂದು ಇದನ್ನು ಹೇಳಿದರು.
‘ನಮ್ಮ ಮಿತ್ರರಿಗೆ ಮಾಸ್ತಿ ವೆಂಕಟೇಶ ಅಯ್ಯಂಗಾರರು ಪ್ರಭುಸಮಾನರು. ಒಂದು ದಿನ ಅವರು ಪ್ರಭುವಿನ ಮನೆಗೆ ಹೋದರು. ನಡುಮನೆಯಲ್ಲಿ ಕುಳಿತಿದ್ದ ಪ್ರಭು ಎಂದಿನಂತೆ ಇವರನ್ನು ಬರಮಾಡಿಕೊಂಡು ಮಗಳಿಗೆ ಕಾಫಿ ತಂದುಕೊಡುವಂತೆ ಹೇಳಿ ಇವರ ಯೋಗಕ್ಷೇಮ ವಿಚಾರಿಸಿದರು. ಇವರ ಪಕ್ಕದಲ್ಲೇ ಒಂದು ಕುರ್ಚಿಯಲ್ಲಿ ಕುಳಿತರು. ಇವರು ಕಾಫಿ ಕುಡಿಯುತ್ತಿರುವಾಗ ಪ್ರಭು ದೂರದಲ್ಲಿ ಏನೋ ಕೇಳಿಬರುತ್ತಿದೆ ಎನಿಸುವಂತೆ ಕಿವಿಯ ಹಿಂದೆ ಕೈ ಇಟ್ಟುಕೊಂಡು ಹಾಗೇ ಕ್ಷಣ ಎರಡು ಆಲಿಸಿ ‘ಇಂದಿರಮ್ಮಾ, ರಾಮಯ್ಯು ವಂದೋ’ ಎಂದು ಕೂಗಿ ಹೇಳಿದರು.
ನಂತರ ನಮ್ಮ ಮಿತ್ರರಿಗೆ ‘ಕುಳಿತಿರಿ, ಈಗಲೇ ಬಂದೆ’ ಎಂದು ಹೇಳಿ ಮೊಗಸಾಲೆಯ ಕಡೆ ನಡೆದರು. ‘ಮೊಗಸಾಲೆಯ ಒಂದು ಮೂಲೆಯಲ್ಲಿ ಒಂದು ಕಾಡ್‌ಬೋರ್ಡ್ ಪೆಟ್ಟಿಗೆ ಇತ್ತು. ಪ್ರಭು ಅದನ್ನು ತಲೆಕೆಳಗಾಗಿ ಹಿಡಿದಾಗ ನಾಲ್ಕೈದು ಚಪ್ಪಲಿ ನೆಲಕ್ಕೆ ಬಿದ್ದವು. ಅಷ್ಟು ಹೊತ್ತಿಗೆ ಪ್ರಭುವಿನ ಮಗಳು ಇಂದಿರಮ್ಮ ಒಂದು ಚಾಕು ತಂದುಕೊಟ್ಟರು. ಪ್ರಭು ಆ ಚಾಕುವಿನಿಂದ ಚಪ್ಪಲಿಗಳಲ್ಲಿ ಒಂದರ ಉಂಗುಷ್ಟ, ಇನ್ನೊಂದರ ಬಾರು, ಮತ್ತೊಂದರ ಹಿಮ್ಮಡಿ ಎಂದು ಕೆಲವೊಂದನ್ನು ಕೊಯ್ದು ತೆಗೆದರು. ಹಾಗೆ ಕೊಯ್ದು ತೆಗೆದ ಚೂರುಗಳನ್ನು ಆ ಕಾಡ್‌ಬೋರ್ಡ್ ಪೆಟ್ಟಿಗೆಯೊಳಗೆ ಹಾಕಿ ಮುಚ್ಚಿಟ್ಟರು...’
–ಮೇಲಿನದು ಒಂದು ಸಣ್ಣಕಥೆಯ ಪ್ರಾರಂಭ. ಬರೆದವನು ನಾನು. ಕಥೆಯಲ್ಲಿ ಬರುವ ದಿವಾಕರ ಕೂಡ ನಾನೇ. ಈ ಕಥೆಯನ್ನು ನಾನು ಬರೆಯುವುದಕ್ಕೆ ಕಾರಣ ಮಾಸ್ತಿಯವರ ಮನೆಯಲ್ಲಿಯೇ ನನ್ನ ಅನುಭವಕ್ಕೆ ಬಂದ ಒಂದು ಪ್ರಕರಣ.
ಮಾಸ್ತಿಯವರಿಗೆ ಜೀವನ ಬೇರೆ, ಸಾಹಿತ್ಯ ಬೇರೆ ಎಂದು ಯಾವತ್ತೂ ಅನಿಸಿರಲಿಕ್ಕಿಲ್ಲ. ಜೀವನದಲ್ಲಿ ಅವರಿಗೆ ಯಾರೂ ಅಮುಖ್ಯರಾಗಿರಲಿಲ್ಲ; ಯಾವುದೂ ಯಃಕಶ್ಚಿತವಾಗಿರಲಿಲ್ಲ. ನನಗವರು ಪರಿಚಯವಾಗುವುದಕ್ಕೆ ಎಷ್ಟೋ ವರ್ಷಗಳ ಮುಂಚಿನಿಂದಲೂ ಅವರನ್ನು ಹೆಚ್ಚು ಕಡಿಮೆ ಪ್ರತಿದಿನವೂ ಸ್ವಲ್ಪ ದೂರದಿಂದ ನೋಡುತ್ತಿದ್ದೆ. ಅವರು ಬೆಂಗಳೂರಿನ ಗವಿಪುರ ವಿಸ್ತರಣದಲ್ಲಿದ್ದ ತಮ್ಮ ಮನೆಯಿಂದ ಸಂಜೆ ಸುಮಾರು ಐದು ಗಂಟೆಗೆ ಹೊರಟು ಗಾಂಧಿಬಜಾರಿನ ಕೊನೆಯಲ್ಲಿದ್ದ ಬಸವನಗುಡಿ ಕ್ಲಬ್ಬನ್ನು ತಲುಪುತ್ತಿದ್ದರು. ತಲೆಯ ಮೇಲೆ ನಶ್ಯದ ಬಣ್ಣದ ಟೋಪಿ. ಮೈಮೇಲೆ ಅದೇ ಬಣ್ಣದ ಓವರ್‌ಕೋಟು. ಕೈಯಲ್ಲೊಂದು ಕೊಡೆ. ರಸ್ತೆಯಲ್ಲಿ ಬಿದ್ದಿರುತ್ತಿದ್ದ ಕಲ್ಲು, ಗಾಜಿನ ಚೂರು, ಮೊಳೆ ಮೊದಲಾದವುಗಳನ್ನು ಕೊಡೆಯಿಂದಲೋ ಕಾಲಿನ ಚಪ್ಪಲಿಯಿಂದಲೋ ಬದಿಗೆ ಸರಿಸುತ್ತಿದ್ದರು. ಆಗಾಗ ಎದುರಿಗೆ ಸಿಕ್ಕವರನ್ನು ಮಾತಾಡಿಸುತ್ತ ನಿಲ್ಲುತ್ತಿದ್ದರು. ಮಕ್ಕಳು ಕಂಡರೆ ಅವರಿಗೆ ತಕ್ಷಣ ಜೇಬಿನಿಂದ ಪೆಪ್ಪರಮೆಂಟೋ, ಚಾಕಲೇಟೋ ತೆಗೆದು ಕೊಡುತ್ತಿದ್ದರು.
ಬಸವನಗುಡಿ ಕ್ಲಬ್ಬಿನಲ್ಲಿ ಅವರು ತಮ್ಮ ಗೆಳೆಯರ ಜೊತೆ ಇಸ್ಪೀಟು ಆಡುತ್ತಿದ್ದರು– ಒಂದು ಆಟಕ್ಕೆ ಒಂದು ಪೈಸೆ ಪಣವಿಟ್ಟು. ಇಸ್ಪೀಟು ಒಂದು ನೆಪವಷ್ಟೆ. ಮುಖ್ಯೋದ್ದೇಶ ಜನರ ಜೊತೆ ಬೆರೆಯುವುದು, ಅವರ ಸುಖ, ದುಃಖ ಹಂಚಿಕೊಳ್ಳುವುದು. ಒಟ್ಟಿನಲ್ಲಿ ನಿಸಾರ್ ಅಹಮದರ ‘ಮಾಸ್ತಿ’ ಎಂಬ ಕವನದಲ್ಲಿರುವಂತೆ,
ನಂಬರೆರಡರ ಬಸ್ಸಿನೆದುರು ಬಾಳೆಯ ಸಿಪ್ಪೆ
ಟೈಲರನ ಎಡಗಾಲನುಳುಕಿಸಿದ್ದು;
ರಾತ್ರಿ ಪುರಭವನದಲ್ಲಿ ಸಂಗೀತ ಸಾಮ್ರಾಜ್ಞಿ
ಶಂಕರಾಭರಣದಲಿ ಪಲುಕಿಸಿದ್ದು;
ಅಬ್ದುಲನ ಹೈಕೋರ್ಟು ರಿಟ್ಟು ವಜಾ ಆದದ್ದು;
ಖೋಟ ನೋಟ್ ಕೃಷ್ಣನಿಗೆ ಕಠಿಣ ಸಜೆ ಆದದ್ದು;
ಬದರಿ ನಾದಿನಿಗೊಬ್ಬ ಒಳ್ಳೆ ವರ ಸಿಕ್ಕಿದ್ದು;
ರಷ್ಯ ಚೀನಾ ಕ್ಯೂಬ ಅಮೇರಿಕಾ ವಾರ್ತೆ ಮಿಕ್ಕದ್ದು-
ಅದೂ ಇದೂ ಇಪ್ಪತ್ತೆಂಟನಾಡುವುದು.
ಜನರ ಜೊತೆಯ ಒಡನಾಟದಿಂದಲೇ ಮಾಸ್ತಿಯವರಿಗೆ ಅವರ ಎಷ್ಟೋ ಕಥೆಗಳ ಹಂದರದ ಮುನ್ಸೂಚನೆ ಸಿಕ್ಕುತ್ತಿದ್ದಿರಬೇಕು. 1977ರಲ್ಲಿ ನಾನು ‘ಮಲ್ಲಿಗೆ’ ಮಾಸಪತ್ರಿಕೆಯ ಸಂಪಾದಕನಾಗಿದ್ದೆ. ಒಂದು ದಿನ ಅದೇ ಗಾಂಧಿಬಜಾರಿನಲ್ಲಿ ಮಾಸ್ತಿಯವರನ್ನು ಒಂದು ಕಥೆ ಬರೆದು ಕೊಡಲಾದೀತೆ ಎಂದು ಕೇಳಿದೆ. ಅದಕ್ಕೆ ಅವರು ‘ಅಯ್ಯೋ, ಈ ವಯಸ್ಸಲ್ಲಿ ಏನು ಕಥೆ ಬರೆದೇನಪ್ಪಾ, ಆಗೋಲ್ಲ ಆಗೋಲ್ಲ’ ಎಂದು ಬಿಟ್ಟರು. ಆಮೇಲೆ ಸುಮಾರು ಆರು ತಿಂಗಳೇ ಕಳೆದಿರಬೇಕು. ಒಂದು ದಿನ ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಫೋನಿನಲ್ಲಿ ‘ಏನು ದಿವಾಕರ್, ಚೆನ್ನಾಗಿದ್ದೀರೋ?’ ಎಂದು ಕೇಳುತ್ತಿರುವ ಮಾಸ್ತಿ! ನಿಜ ಹೇಳಬೇಕೆಂದರೆ, ಅದುವರೆಗೆ ಅಷ್ಟು ದೊಡ್ಡ ಮನುಷ್ಯರು ಯಾರೂ ನನಗೆ ಫೋನು ಮಾಡಿರಲಿಲ್ಲ. ‘ಕೆಲವು ತಿಂಗಳ ಹಿಂದೆ ನೀವು ಒಂದು ಕಥೆ ಬೇಕು ಅಂತ ಕೇಳಿದ್ದಿರಲ್ಲ, ನೆನಪುಂಟೆ?’ ಎಂದು ಕೇಳಿದರು.
ಅವರಿಗೆ ಇದ್ದಕ್ಕಿದ್ದಂತೆ ಕೆಲವು ಕಥೆ ಬರೆಯಬೇಕೆನ್ನಿಸಿತಂತೆ. ಅವುಗಳನ್ನು ಅವರ ಅಳಿಯಂದಿರು ಶೇಷಾದ್ರಿಯವರ ಕೈಯಲ್ಲಿ ಬರೆಯಿಸಿಬಿಟ್ಟರಂತೆ - ಒಂದಲ್ಲ ಎರಡಲ್ಲ, ಹತ್ತು ಕಥೆ. ‘ನಿಮಗೆ ಬೇಕಾದರೆ ನಾಳೆ ಬೆಳಿಗ್ಗೆ ಬನ್ನಿ. ನಮ್ಮ ಅಳಿಯಂದಿರು ಎಲ್ಲ ಕಥೆ ಓದಿ ಹೇಳ್ತಾರೆ. ನಿಮಗೆ ಯಾವ ಕಥೆ ಬೇಕೋ ಅದನ್ನ ತೊಗೊಂಡು ಹೋಗಿ’. ಮರುದಿನ ಬೆಳಿಗ್ಗೆ. ಅವರ ಮನೆಯ ವಿಶಾಲವಾದ ಹಾಲಿನ ಒಂದು ಬದಿಯಲ್ಲಿ ಎರಡು ಕುರ್ಚಿಗಳು. ಒಂದರಲ್ಲಿ ಶೇಷಾದ್ರಿಯವರು ಕುಳಿತು ಕಥೆ ಓದತೊಡಗಿದರು. ನಾನು ಇನ್ನೊಂದರಲ್ಲಿ ಕುಳಿತು ಅವರು ಓದುವುದನ್ನು ಕೇಳಿಸಿಕೊಳ್ಳುತ್ತಿದ್ದೆ. ಮಾಸ್ತಿಯವರಾದರೋ ಬೆನ್ನ ಹಿಂದೆ ಕೈಕಟ್ಟಿಕೊಂಡು ಶತಪಥ ತುಳಿಯುತ್ತಿದ್ದರು.
ಶೇಷಾದ್ರಿಯವರು ಓದತೊಡಗಿದ ಮೂರನೆಯ ಕಥೆ ‘ದುರದೃಷ್ಟದ ಹೆಣ್ಣು’ (ಅದು 1984ರಲ್ಲಿ ಪ್ರಕಟವಾದ ಮಾಸ್ತಿಯವರ ‘ಸಣ್ಣ ಕಥೆಗಳು-15’ ಎಂಬ ಸಂಕಲನದಲ್ಲಿದೆ.). ಅದು ಷಂಡನೊಬ್ಬ ತನ್ನ ಹಳ್ಳಿಯ ಯುವತಿಯನ್ನು ಮದುವೆಯಾಗಿ ಬೆಂಗಳೂರಿಗೆ ಬರುವ, ಅಪರಿಚಿತ ಗಂಡಸರನ್ನು ಅವಳ ಬಳಿಗೆ ಕರೆತರುವ ಕಥೆ. ಮೊದಲ ದಿನವ ಒಲ್ಲೆನೆನ್ನುವ ಅವಳಿಗೆ ಅವನು ಹೇಳುವುದಿದು: ‘ಅಯ್ಯೋ ಹುಚ್ಚಿ. ನನ್ನ ಗಂಡ ಅಂದು ನೀನು ಪಡೋ ಸುಖ ಏನು? ನನಗೆ ಬಹಳ ಅಂದರೆ ದಿನಕ್ಕೆ ಮೂರು ರೂಪಾಯಿ, ನಾಲ್ಕು ರೂಪಾಯಿ ಕೂಲಿ ಸಿಗುತ್ತೆ. ಈ ಮನುಷ್ಯ ಇಲ್ಲಿಗೆ ಬರೋ ಮುನ್ನ ಹತ್ತು ರೂಪಾಯಿ ಕೊಟ್ಟ. ಇಕೋ ರೂಪಾಯಿ’, ಎಂದು ಸೊಂಟದಿಂದ ಹತ್ತು ರೂಪಾಯಿ ನೋಟೊಂದನ್ನು ಸೆಳೆದು ಇವಳಿಗೆ ನೀಡುತ್ತ, ‘ಇದು ನಿನ್ನದು, ನೀನೇ ಇಟ್ಟುಕೊ. ನೀನು ಉಂಡು ಉಟ್ಟು ರಾಣಿಯಂತೆ ಬಾಳು. ನನ್ನನ್ನ ನೋಡಿಕೋ. ನಾನೊಬ್ಬ ಕೂಲಿ; ನೀನು ನನ್ನ ಹೆಂಡತಿ; ನಮ್ಮ ಬಾಳುವೆ ಏನು ಬಾಳುವೆ? ಇದು ಬಾಳುವೆ. ಕೈ ತುಂಬ ಹಣ, ಸುಖವಾಗಿರಬಹುದು’.
ಶೇಷಾದ್ರಿಯವರು ಈ ಭಾಗವನ್ನು ಓದಿದ್ದೇ, ಮಾಸ್ತಿ, ‘ಅಯ್ಯೋ ಪಾಪ! ಅವನು ಇನ್ನೇನು ತಾನೆ ಹೇಳಿಯಾನು’ ಎಂದರು. ಆ ಕ್ಷಣದಲ್ಲಿ ಅವರಿಗೆ ಅದು ತಾವು ಬರೆದ ಕಥೆಯೆಂಬ ಧ್ಯಾಸವೇ ಇರಲಿಲ್ಲ. ಅಥವಾ ತಮ್ಮ ಕಥೆಗೂ ನಿಜ ಜೀವನಕ್ಕೂ ನಡುವೆ ಯಾವುದೇ ಕಂದರ ಇರುವಂತೆ ಕಂಡಿರಲಿಲ್ಲ. ಮುಂದೊಂದು ದಿನ, ಯಾವ ಕಾರಣಕ್ಕೋ ಏನೊ, ಬೆಳಿಗ್ಗೆ ಬಹುಬೇಗ ಅವರ ಮನೆಯಲ್ಲಿ ಕೂತಿದ್ದೆ. ಮಾಸ್ತಿಯವರು ಒಳಮನೆಯಿಂದ ಬಂದವರೇ ಗೋಡೆಯ ಮೇಲಿದ್ದ ಅವರ ಪತ್ನಿಯ ಫೋಟೊಗೆ ನಮಸ್ಕರಿಸಿದರು. ಆ ಮೇಲೆ ನಾನು ಕೂತಿದ್ದ ಕುರ್ಚಿಯ ಬದಿಯಲ್ಲೇ ಇನ್ನೊಂದು ಕುರ್ಚಿಯಲ್ಲಿ ಕುಳಿತು ಆ ಫೋಟೊದ ಕಡೆ ಕೈ ತೋರಿಸುತ್ತ, ‘ನೋಡಿ, ಇವರು ನಮ್ಮಾಕೆ. ತುಂಬಾ ಒಳ್ಳೆಯವರು. ಇನ್ನೂ ಅಷ್ಟು ಬದುಕಬೇಕಾಗಿದ್ದ ಜೀವ’ ಎಂದರು.
ನಾಲ್ಕೈದು ನಿಮಿಷ ಕಳೆದ ಮೇಲೆ ಮನೆಯೊಳಕ್ಕೆ ಬಂದ ವಯಸ್ಸಾದವರೊಬ್ಬರನ್ನು ನೋಡಿದ್ದೇ ಮಾಸ್ತಿ, ‘ಏನು ನಾರಾಯಣ ರಾವ್? ಮನೇಲೆಲ್ಲ ಸೌಖ್ಯವೋ?’ ಎಂದು ವಿಚಾರಿಸಿದರು. ಆತ ‘ಮಗಳು ಪರೀಕ್ಷೆಗೆ ಕಟ್ಟಿದ್ದಾಳೆ. ಇನ್ನೂರು ರೂಪಾಯಿ ಬೇಕಾಗಿತ್ತು’ ಎಂದರು. ಅಷ್ಟು ದುಡ್ಡು ಕೊಟ್ಟು ಕಳಿಸಿದ ಮಾಸ್ತಿ ಸ್ವಲ್ಪ ಹೊತ್ತು ಸುಮ್ಮನಿದ್ದು, ಆಮೇಲೆ ‘ದಿವಾಕರ್, ನಾನು ತುಂಬ ಕಷ್ಟದಲ್ಲಿ ಬೆಳೆದವನು. ಆಮೇಲೆ ದೇವರು ನನ್ನನ್ನ ಚೆನ್ನಾಗಿಟ್ಟ. ಎಷ್ಟು ವರ್ಷ ಸರ್ವೀಸಿನಲ್ಲಿದ್ದೆನೋ ಅದಕ್ಕಿಂತ ಹೆಚ್ಚು ವರ್ಷ ಪೆನ್ಷನ್ ತೊಗೊಂಡಿದೇನೆ. ಹೀಗೆ ಯಾರಾದರೂ ಕಷ್ಟದಲ್ಲಿರುವವರು ಮನೆಗೆ ಬಂದರೆ ಕೈಲಾದಷ್ಟು ಕೊಟ್ಟು ಬಿಡುತ್ತೇನೆ. ಇಷ್ಟು ದಿನ ಯಾರಿಗೂ ಗೊತ್ತಿರದಿದ್ದ ಈ ಸಂಗತಿ ಇವತ್ತು ನಿಮಗೆ ಗೊತ್ತಾಗುವ ಹಾಗೆ ಆಯಿತು. ಈ ಸಂಗತಿಯನ್ನು ನೀವು ಯಾರಿಗೂ ಹೇಳಬಾರದು. ದಯವಿಟ್ಟು ಭಾಷೆ ಕೊಡುತ್ತೀರಾ?’ ಎಂದು ತಮ್ಮ ಕೈಚಾಚಿದರು.
ಮಾಸ್ತಿಯವರು ಹೊಸದಾಗಿ ಬರೆಯುತ್ತಿದ್ದ ಅನೇಕರ ಮೊದಲ ಪುಸ್ತಕಗಳನ್ನು ಪ್ರಕಟಿಸಿದವರು. ಬೇಂದ್ರೆಯವರ ‘ಗರಿ’ ಮತ್ತು ಕುವೆಂಪು ‘ಮಾಸ್ತಿಕೊಳಲು’ ಕವನ ಸಂಕಲನಗಳನ್ನು ಪ್ರಕಟಿಸಿದವರೂ ಅವರೇ. ಶಿಷ್ಯಸಮಾನರಾದ ಅವರಿಬ್ಬರಿಗೂ ಜ್ಞಾನಪೀಠ ಪ್ರಶಸ್ತಿ ಬಂತು. ಆದರೆ, ಮಾಸ್ತಿಯವರಿಗೆ ಆ ಪ್ರಶಸ್ತಿ ಬಂದದ್ದು ತೀರ ತಡವಾಗಿ. ಆ ಸಂದರ್ಭದ ಒಂದು ನೆನಪು: ನಾಡಿನ ಮೂಲೆ ಮೂಲೆಗಳಿಂದ ಲೆಕ್ಕವಿಲ್ಲದಷ್ಟು ಮಂದಿ ಅವರನ್ನು ಅಭಿನಂದಿಸುವ ಪತ್ರಗಳನ್ನು ಬರೆದರು. ಅವರೆಲ್ಲರಿಗೂ ಉತ್ತರ ಬರೆಯಬೇಕೆಂದಾಗ ನಾನು, ‘ಅದಕ್ಕೇನು ಸುಲಭ ಸಾರ್. ನೀವೊಂದು ಪತ್ರ ಬರೆದುಕೊಡಿ. ನಾನು ಅದನ್ನು ಸ್ಟೆನ್ಸಿಲ್ ಶೀಟ್‌ನಲ್ಲಿ ಕನ್ನಡದಲ್ಲಿ ಟೈಪು ಮಾಡಿಸಿ ನಿಮಗೆ ಎಷ್ಟು ಪ್ರತಿ ಬೇಕೋ ಅಷ್ಟು ಪ್ರತಿಗಳನ್ನು ತೆಗೆಸಿಕೊಂಡು ತರುತ್ತೇನೆ. ನೀವು ಯಾರಿಗೆ ಬರೆಯಬೇಕೋ ಅವರ ಹೆಸರು ಮೇಲೆ ಬರೆದು ಕೆಳಗೆ ಸಹಿ ಹಾಕಿದರೆ ಆಯಿತು’ ಎಂದೆ.
‘ಉಹೂಂ, ಹಾಗೆ ಮಾಡಕೂಡದಪ್ಪಾ. ನಮ್ಮ ಜನ ಎಲ್ಲೆಲ್ಲಿಂದಲೋ ಅಷ್ಟು ವಿಶ್ವಾಸದಿಂದ ಬರೆದಿದಾರೆ. ಅವರಿಗೆ ಒಬ್ಬೊಬ್ಬರಿಗೂ ನನ್ನ ಕೈಯಲ್ಲೇ ಬರೀಬೇಕು’ ಎಂದ ಮಾಸ್ತಿಯವರು ತಮ್ಮ ಆ ಇಳಿವಯಸ್ಸಿನಲ್ಲೂ ನೂರಾರು ಮಂದಿಗೆ ನೂರಾರು ಪತ್ರಗಳನ್ನು ಬರೆದರು.
ಅವರು ನನಗೆ ಅಷ್ಟು ಹತ್ತಿರವಾಗಿದ್ದರೂ ನಾನು ಒಮ್ಮೆ ಕೂಡ ಅವರಿಗೆ ನಾನೊಬ್ಬ ಬರಹಗಾರ ಎಂದು ಹೇಳಲಿಲ್ಲ. 1986ರಲ್ಲಿ ಕಥೆಗಾರ ಮಾವಿನಕೆರೆ ರಂಗನಾಥನ್ ಹೊರತಂದ ಕಥಾ ಸಂಕಲನವೊಂದರಲ್ಲಿ ಮಾಸ್ತಿಯವರದೇ ಮೊದಲ ಕಥೆ. ನನ್ನ ‘ಕ್ರೌರ್ಯ’ ಎಂಬ ಕಥೆಯೂ ಇದ್ದ ಆ ಸಂಕಲನ ಬಂದ ಮೇಲೆ ಒಂದು ದಿನ ಅವರು ಅದೂ ಇದೂ ಮಾತಾಡುತ್ತ ಕೊನೆಗೆ ‘ಈ ಪುಸ್ತಕದಲ್ಲಿ ದಿವಾಕರ್ ಅಂತ ಒಬ್ಬರು ಕಥೆ ಬರೆದಿದಾರಲ್ಲಾ, ಅವರು ನೀವೇನಾ? ಎಂದು ಕೇಳಿದರು. ನಾನು ಹೌದೆನ್ನಲೇಬೇಕಾಯಿತು. ಅವರು ‘ಓದಿದೆ. ಸಂತೋಷ’ ಎಂದವರೇ ಮತ್ತೇನೂ ಹೇಳಲಿಲ್ಲ. ಕ್ಷಣ ತಡೆದು ನಾನೇ ‘ನನ್ನ ಕಥೆ ಹೇಗನ್ನಿಸಿತು ಸರ್?’ ಎಂದು ಕೇಳಿದೆ. ‘ಬರವಣಿಗೆ ಚೆನ್ನಾಗಿದೆ. ಆದರೆ ಆ ತಂದೆ, ತಾಯಿಗಳ ವಿಷಯ. ಅಷ್ಟು ದುಷ್ಟರಾಗಿರ್ತಾರಾ? ಒಂದು ವೇಳೆ ದುಷ್ಟರಾಗಿದ್ದರೂ ನಾನು ಹಾಗೆ ಬರೆಯೋದಿಲ್ಲಾಪ್ಪ’ ಎಂದರು.
ಅಂದಹಾಗೆ ಈ ಲೇಖನದ ಆರಂಭದಲ್ಲಿ ನಾನು ಉಲ್ಲೇಖಿಸಿದ ಕಥೆ ಹೇಗೆ ಮುಗಿಯುತ್ತದೆ ಗೊತ್ತೆ? ಒಬ್ಬ ಹಣ್ಣು ಹಣ್ಣು ಮುದುಕ ಬರುತ್ತಾನೆ. ‘ಬಂದೆಯಾ ರಾಮಯ್ಯಾ, ಬಾ, ಇವತ್ತು ನೀನು ಪುಣ್ಯಮಾಡಿದ್ದಿ ನೋಡು. ಇಕೊ, ಒಂದಲ್ಲ ಎರಡಲ್ಲ, ನಾಲ್ಕು ಜೊತೆ ಜೋಡು’ ಎಂದು ಸ್ವಾಗತಿಸುವ ಮಾಸ್ತಿ ಆ ಚಪ್ಪಲಿಗಳನ್ನು ಅವನ ಮುಂದೆ ಸರಿಸುತ್ತಾರೆ. ಅವನು ತನ್ನ ನಡುಗುವ ಕೈಗಳಿಂದ ಒಂದೊಂದು ಚಪ್ಪಲಿಯನ್ನೂ ಹೊಲಿದ ಮೇಲೆ ಮಾಸ್ತಿ ಅವನಿಗೆ ಇಪ್ಪತ್ತು ರೂಪಾಯಿಗಳ ಎರಡು ನೋಟು ಕೊಡುತ್ತಾರೆ. ಅವನೋ, ‘ಅಷ್ಟು ಬ್ಯಾಡ ಬುದ್ದೀ, ದುಡ್ದಿದ್‍ಕಿಂತ ಜಾಸ್ತಿ ಆಸೆ ಪಡೋದಾ? ಒಂದು ನೋಟು ಸಾಕು’ ಎನ್ನುತ್ತಾನೆ. ಜೊತೆಗೆ ‘ಯಾರ ತಾವೂ ಕೈ ವೊಡ್ಡಬಾರ್ದು ಬುದ್ದೀ. ಕೈಲಾಗೋವರ್ಗೂ ದುಡಿದು ತಿನ್ಬೇಕು’ ಎಂದೂ ಸೇರಿಸುತ್ತಾನೆ. ಪ್ರಭು ಇನ್ನು ಸ್ವಲ್ಪ ಹೊತ್ತು ಅವನನ್ನು ಕೂರಿಸಿಕೊಂಡು ಅದು ಇದು ಬೇರೆ ಮಾತನ್ನಾಡಿ ಅವನಿಗೆ ಎಲೆ ಅಡಿಕೆ ಮರ್ಯಾದೆ ಕೊಟ್ಟು ಕಳುಹಿಸಿದರು’ ಎನ್ನುವಲ್ಲಿಗೆ ಕಥೆ ಮುಗಿಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.