ಸಂಸ್ಕೃತಿಯಲ್ಲಿ ರಾಜಕೀಯ ಹಸ್ತಕ್ಷೇಪದ ಪ್ರಶ್ನೆಯು ಬಹುಕಾಲದಿಂದ ಕಾಡುತ್ತಿದೆ. ರಾಜಕೀಯ ಪಕ್ಷಗಳ ಪರವಾಗಿ ಸಾಹಿತಿಗಳ ವಕ್ತಾರಿಕೆ ಪ್ರಶ್ನೆಯೂ ಅದಕ್ಕೀಗ ಸೇರಿಕೊಂಡಿದೆ. ಈ ಮಧ್ಯೆ ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಮಾಡಲಾಗಿರುವ ನಾಮನಿರ್ದೇಶನದ ವಿಷಯ ಕೂಡ ಹಲವು ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಯತ್ನವೇ ಭಿನ್ನ ಆಯಾಮಗಳ ಇಲ್ಲಿನ ಮೂರು ವಿಶ್ಲೇಷಣೆಗಳು...
ಸಂಸತ್ತಿನ ಸದನಗಳ ಅಥವಾ ರಾಜ್ಯಗಳ ವಿಧಾನಮಂಡಲದ ಸದಸ್ಯರು ಆ ಸದನದ ಸದಸ್ಯತ್ವದಿಂದ ಅನರ್ಹಗೊಳ್ಳುವುದು ಯಾವ ಸಂದರ್ಭದಲ್ಲಿ ಎಂಬುದನ್ನು ಸಂವಿಧಾನದ 10ನೆಯ ಪರಿಚ್ಛೇದದ ಎರಡನೆಯ ಪ್ಯಾರಾದಲ್ಲಿ ವಿವರಿಸಲಾಗಿದೆ.
ಒಂದು ರಾಜಕೀಯ ಪಕ್ಷದ ಟಿಕೆಟ್ ಪಡೆದು, ಚುನಾವಣೆ ಎದುರಿಸಿ, ಆಯ್ಕೆಯಾಗಿ ಬಂದ ನಂತರ ‘ಸದನದ ಸದಸ್ಯತ್ವ ಅವಧಿ ಪೂರ್ಣಗೊಳ್ಳುವ ಮೊದಲೇ ಸ್ವಇಚ್ಛೆಯಿಂದ ಆ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದರೆ’ ಅಂಥವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಬಹುದು (ಪ್ಯಾರಾ 2(1)(ಎ). ಸದಸ್ಯತ್ವದಿಂದ ಅನರ್ಹಗೊಳ್ಳುವ ಇತರ ಕೆಲವು ಸಂದರ್ಭಗಳೂ ಇವೆ. ಆದರೆ, ಆ ಸಂದರ್ಭಗಳು ಈಗಿನ ಚರ್ಚೆಯ ವ್ಯಾಪ್ತಿಯಲ್ಲಿ ಪ್ರಸ್ತುತವಲ್ಲ.
ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿದ್ದ ಕೆ.ಆರ್. ರಮೇಶ್ ಕುಮಾರ್ ಅವರು ಹತ್ತನೆಯ ಪರಿಚ್ಛೇದದ ಪ್ಯಾರಾ 2(1)(ಎ) ಅನ್ವಯ ವಿಧಾನಸಭೆಯ ಹಲವು ಸದಸ್ಯರನ್ನು ಅನರ್ಹಗೊಳಿಸಿದರು. ‘ರಾಜಕೀಯ ಪಕ್ಷದ ಸದಸ್ಯತ್ವಕ್ಕೆ ಸ್ವಇಚ್ಛೆಯಿಂದ ರಾಜೀನಾಮೆ ನೀಡುವುದು’ ಎಂಬುದನ್ನು ನ್ಯಾಯಾಲಯಗಳು ಹಾಗೂ ಹಲವು ವಿಧಾನಸಭೆಗಳ ಸ್ಪೀಕರ್ ಸ್ಥಾನದಲ್ಲಿದ್ದ ಬೇರೆ ಬೇರೆ ವ್ಯಕ್ತಿಗಳು ‘ವ್ಯಕ್ತಿ ತಾನು ಚುನಾಯಿತನಾಗಿ ಬಂದ ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುವುದು’ ಎಂಬ ಬಗೆಯಲ್ಲೂ ಅರ್ಥೈಸಿದ್ದಾರೆ. ಆ ವ್ಯಕ್ತಿ ತನ್ನ ಪಕ್ಷಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿರಬೇಕು ಎಂದೇನೂ ಇಲ್ಲ ಎಂಬ ರೀತಿಯಲ್ಲಿ ಅರ್ಥೈಸುವಿಕೆಗಳು ಆಗಿವೆ.
ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಎ.ಎಚ್. ವಿಶ್ವನಾಥ್ ಅವರು, ಆಗಿನ ಸ್ಪೀಕರ್ ರಮೇಶ್ ಕುಮಾರ್ ಅವರಿಂದ ಅನರ್ಹಗೊಂಡ ಶಾಸಕರಲ್ಲಿ ಒಬ್ಬರು. ಅನರ್ಹಗೊಳಿಸಿದ ಆದೇಶದಲ್ಲಿ ಸ್ಪೀಕರ್ ಅವರು, ಭಿನ್ನಮತೀಯ ಶಾಸಕರು ತಮ್ಮ ಪಕ್ಷಗಳ ಹಿತಾಸಕ್ತಿಗೆ ವಿರುದ್ಧವಾಗಿ ನಡೆಸಿದ ಚಟುವಟಿಕೆಗಳನ್ನು ಉಲ್ಲೇಖಿಸಿದ್ದರು. ಅನರ್ಹಗೊಂಡವರು, ‘ಆ ಸದನದ ಸದಸ್ಯರಾಗಿ ಮುಂದುವರಿಯುವುದರಿಂದಲೂ ಅನರ್ಹರಾಗಿರುತ್ತಾರೆ’ ಎಂದು ಹತ್ತನೆಯ ಪರಿಚ್ಛೇದ ಹೇಳುತ್ತದೆ. ಅಲ್ಲದೆ, ರಾಜ್ಯದ ಶಾಸನಸಭೆಗಳ ಹಾಗೂ ಸಂಸತ್ತಿನ ಎರಡು ಸದನಗಳ ಸದಸ್ಯ ಯಾರಾಗಬಹುದು ಎಂಬುದನ್ನು ವಿವರಿಸುವ ಸಂವಿಧಾನದ ಎರಡು ವಿಧಿಗಳು ಕೂಡ ಈ ವಿಚಾರದಲ್ಲಿ ಖಚಿತವಾದ ಮಾತು ಹೇಳಿವೆ. ಅಂದರೆ, ಹತ್ತನೆಯ ಪರಿಚ್ಛೇದದ 2ನೆಯ ಪ್ಯಾರಾದ ಅನ್ವಯ ಅನರ್ಹಗೊಂಡ ವ್ಯಕ್ತಿ ಸದನದ ಸದಸ್ಯ ಆಗುವಂತೆ ಇಲ್ಲ –ಸಂಸತ್ತಿನ ಸದಸ್ಯತ್ವಕ್ಕೆ ಸಂಬಂಧಿಸಿದ 101(2) ವಿಧಿ ಹಾಗೂ ರಾಜ್ಯ ವಿಧಾನಮಂಡಲಕ್ಕೆ ಸಂಬಂಧಿಸಿದ 191(2) ವಿಧಿ.
ಹತ್ತನೆಯ ಪರಿಚ್ಛೇದದ 2ನೆಯ ಪ್ಯಾರಾದ ಅಡಿ ಅನರ್ಹಗೊಳ್ಳುವುದು ಅಂದರೆ ಅರ್ಥವೇನು? ಅನರ್ಹಗೊಂಡವರು ಮತ್ತೆ ಸದನದ ಸದಸ್ಯನಾಗಲು ಎಷ್ಟು ಕಾಲ ಬೇಕು?
ಲೋಕಸಭೆ ಮತ್ತು ವಿಧಾನಸಭೆಗೆ ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. ಅನರ್ಹತೆಯು ಆ ಅವಧಿಗೆ ಮಾತ್ರ ಸೀಮಿತವೇ? ಅಥವಾ ಅದು ‘ಶಾಶ್ವತ’ವೇ? ಅದು ‘ಶಾಶ್ವತ’ ಎಂಬ ನೆಲೆಯಿಂದ ಒಮ್ಮೆ ಆಲೋಚಿಸೋಣ. ಶಾಸನಸಭೆಯ ಸದಸ್ಯರನ್ನು ವಿಭಿನ್ನ ಸನ್ನಿವೇಶಗಳಲ್ಲಿ ಅನರ್ಹಗೊಳಿಸಲು ಅವಕಾಶ ನೀಡುವ ಅಂಶಗಳು ಸಂವಿಧಾನದಲ್ಲಿ ಬೇರೆಡೆಯೂ ಉಲ್ಲೇಖವಾಗಿದೆ. ಹಾಗೆಯೇ, ಪ್ರಜಾ ಪ್ರಾತಿನಿಧ್ಯ ಕಾಯ್ದೆ –1951ರ ಅನ್ವಯವೂ ಅನರ್ಹಗೊಳಿಸಬಹುದು. ಆದರೆ, ಇಲ್ಲೆಲ್ಲೂ ಅನರ್ಹತೆ ‘ಶಾಶ್ವತ’ ಎಂದಿಲ್ಲ. ಅನರ್ಹತೆಯು ಶಾಶ್ವತ ಎಂದು ವಾದಿಸಲು ಬೇಕಿರುವ ಪದಗಳ ಬಳಕೆ ಎಲ್ಲಿಯೂ ಆಗಿಲ್ಲ. ಹಾಗಾದರೆ, ಅನರ್ಹತೆಯು ಕಿರು ಅವಧಿಗೆ ಇದ್ದಿರಬೇಕು.
ಇಂತಹ ಪ್ರಶ್ನೆಗಳು ಈ ಹಿಂದೆ ಉದ್ಭವವಾದಾಗ, ಕೆಲವು ನ್ಯಾಯಾಲಯಗಳು ಹಾಗೂ ಕೇಂದ್ರ ಚುನಾವಣಾ ಆಯೋಗವು ಸಂವಿಧಾನದ 75(1ಬಿ), 164(1ಬಿ) ವಿಧಿಗಳನ್ನು ಗಮನಿಸಿ, ಕೆಲವು ನಿರ್ದೇಶನಗಳು ಅವುಗಳಲ್ಲಿವೆ ಎಂಬುದನ್ನು ಗುರುತಿಸಿವೆ. ವ್ಯಕ್ತಿಯೊಬ್ಬನನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರಗಳಲ್ಲಿ ಸಚಿವನನ್ನಾಗಿ ನೇಮಿಸಲು ಯಾವಾಗ ಸಾಧ್ಯವಿಲ್ಲ ಎಂಬುದನ್ನು ಎರಡೂ ವಿಧಿಗಳು ಬಹುತೇಕ ಒಂದೇ ಬಗೆಯ ಪದಗಳನ್ನು ಬಳಸಿ ವಿವರಿಸಿವೆ. ರಾಜ್ಯ ಸರ್ಕಾರಗಳ ವಿಚಾರದಲ್ಲಿ ನಿರ್ದೇಶನಗಳನ್ನು ಹೊಂದಿರುವ 164(1ಬಿ) ವಿಧಿಯು, ಹತ್ತನೆಯ ಪರಿಚ್ಛೇದದ 2ನೆಯ ಪ್ಯಾರಾ ಅನ್ವಯ ಅನರ್ಹಗೊಂಡವರನ್ನು ಅವರು ಸದಸ್ಯರಾಗಿದ್ದ ಸದನದ ಅವಧಿ ಪೂರ್ಣಗೊಳ್ಳುವವರೆಗೆ ಅಥವಾ ಪರಿಷತ್ತು/ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಅವರು ಸ್ಪರ್ಧಿಸಿ ವಿಜಯಿ ಎಂದು ಘೋಷಣೆಯಾಗುವವರೆಗೆ ಸಚಿವರನ್ನಾಗಿ ನೇಮಿಸುವಂತಿಲ್ಲ ಎಂದು ಹೇಳುತ್ತದೆ.
ಹೀಗಿರುವಾಗ, ಹತ್ತನೆಯ ಪರಿಚ್ಛೇದದ 2ನೆಯ ಪ್ಯಾರಾ ಅನ್ವಯ ವಿಧಿಸಲಾದ ಅನರ್ಹತೆಯ ಅವಧಿಯು, ಅವರು ಸದಸ್ಯರಾಗಿದ್ದ ಸದನದ ಅವಧಿ ಪೂರ್ಣಗೊಂಡಾಗ ಅಥವಾ ವಿಧಾನಸಭೆ/ಪರಿಷತ್ತಿಗೆ ಚುನಾವಣೆ ನಡೆದು ಅವರು ಅದರಲ್ಲಿ ಜಯ ಸಾಧಿಸಿದಾಗ ಕೊನೆಗೊಳ್ಳುತ್ತದೆ ಎಂದು ಚುನಾವಣಾ ಆಯೋಗ ಹಾಗೂ ನ್ಯಾಯಾಲಯಗಳು ಕೆಲವು ಪ್ರಕರಣಗಳಲ್ಲಿ ಹೇಳಿದ್ದಿದೆ.
ಅನರ್ಹಗೊಳಿಸುವ ಆದೇಶದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು, ‘ಅನರ್ಹತೆಯು ಕರ್ನಾಟಕದ 15ನೆಯ ವಿಧಾನಸಭೆಯ ಅವಧಿ ಪೂರ್ಣಗೊಳ್ಳುವಾಗ ಕೊನೆಗೊಳ್ಳುತ್ತದೆ’ ಎಂದು ಹೇಳಿದ್ದರು. ಅನರ್ಹಗೊಂಡವರು ವಿಧಾನಸಭೆಗೆ ಅಥವಾ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸದಿದ್ದರೆ, ಅನರ್ಹತೆಯು 15ನೆಯ ವಿಧಾನಸಭೆಯ ಅವಧಿ ಪೂರ್ಣಗೊಳ್ಳುವವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿತ್ತು.
ಆದರೆ, ಆಶ್ಚರ್ಯದ ಸಂಗತಿಯೆಂದರೆ, ವಿಶ್ವನಾಥ್ ಅವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವ ಮೂಲಕ ರಾಜ್ಯಪಾಲರು ವಿಚಿತ್ರವಾದ ಕೆಲಸವೊಂದನ್ನು ಮಾಡಿದ್ದಾರೆ! ಐದು ನಿರ್ದಿಷ್ಟ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ವ್ಯಕ್ತಿಗಳನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವ ಅಧಿಕಾರವನ್ನು ಸಂವಿಧಾನದ 171(5)ನೇ ವಿಧಿಯು ರಾಜ್ಯಪಾಲರಿಗೆ ನೀಡುತ್ತದೆ. ವಿಶ್ವನಾಥ್ ಅವರು ಆ ಐದರ ಪೈಕಿ ಯಾವುದಾದರೊಂದು ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರಬಹುದು, ಮಾಡಿಲ್ಲದಿರಬಹುದು. ಆದರೆ, ವಿಧಾನಪರಿಷತ್ತಿಗೆ ನಾಮನಿರ್ದೇಶನ ಆಗುವ ಮೂಲಕ ವಿಶ್ವನಾಥ್ ಅವರು ತಮ್ಮ ಅನರ್ಹತೆ ಚಾಲ್ತಿಯಲ್ಲಿ ಇದ್ದಾಗಲೇ ಕರ್ನಾಟಕದ ವಿಧಾನ ಮಂಡಲದ ಸದಸ್ಯರಾಗಲು ಬಯಸಿದ್ದಾರೆ. ಆ ಮೂಲಕ 191(2)ನೇ ವಿಧಿಯನ್ನು ಮುಜುಗರವಿಲ್ಲದೆ ಉಲ್ಲಂಘಿಸುತ್ತಿದ್ದಾರೆ.
191(2) ವಿಧಿಯು ನಿಗದಿ ಮಾಡಿದ್ದ ನಿರ್ಬಂಧವನ್ನು ತಪ್ಪಿಸಿಕೊಳ್ಳಲು ವಿಶ್ವನಾಥ್ ಅವರಿಗೆ ಇದ್ದ ಮಾರ್ಗ ಒಂದೇ ಆಗಿತ್ತು. ವಿಧಾನಸಭೆ ಅಥವಾ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಿ, ಜಯ ಗಳಿಸುವುದು ಆ ಮಾರ್ಗ. ಈ ನಾಮನಿರ್ದೇಶನವೇ ಕಾನೂನಿನ ಕಣ್ಣಿನಲ್ಲಿ ಅಸಿಂಧು.
ಲೇಖಕ: ಸುಪ್ರೀಂ ಕೋರ್ಟ್ ಹಾಗೂ ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.