ಹಣ, ಸಂಪತ್ತು, ಐಶ್ವರ್ಯ ಯಾರಿಗೆ ಬೇಡ? ಪ್ರತಿಯೊಬ್ಬ ಮನುಷ್ಯನಲ್ಲೂ ಪ್ರಾಪಂಚಿಕವಾದ ಸೌಖ್ಯದ ಬಯಕೆ ಮತ್ತು ಆ ಸೌಖ್ಯವೇ - ಏಳಿಗೆಯ ಮಾಪನ ಎನ್ನುವ ಗ್ರಹಿಕೆ ಇದ್ದೇ ಇರುವಂಥದ್ದು. ಅದು ಸಹಜವೂ ಹೌದು. ನಮ್ಮೆಲ್ಲರ ದುಡಿಮೆಯ ಗುರಿಯೂ ಒಂದಿಲ್ಲೊಂದು ರೀತಿಯಲ್ಲಿ ಈ ಗಳಿಕೆಯ ಸುತ್ತ ಗಿರಿಕಿ ಹೊಡೆಯುವಂಥದ್ದೇ. ಹಾಗಾಗಿ ಹಣ ಎಂದರೆ ಮೂಗು ಮುರಿಯುವಂತಿಲ್ಲ. ಮನುಷ್ಯನ ಅಗತ್ಯ-ಬಯಕೆ-ಮಹತ್ವಾಕಾಂಕ್ಷೆಗಳೆಲ್ಲವನ್ನೂ ಹಣವು ಸಾಧ್ಯವಾಗಿಸುತ್ತದೆ ಎಂದು ಅವನು ನಂಬಿ ರುವಾಗ-‘ದುಗ್ಗಾಣಿ’-ಕೆಟ್ಟದ್ದೋ, ಒಳ್ಳೆಯದೋ- ಬಲು ಮುಖ್ಯವಣ್ಣ ಎನ್ನಬಹುದು. ಲೌಕಿಕದಲ್ಲಿ ಚಲಾವಣೆಯಲ್ಲಿರುವುದೇ ಹಣ ಎನ್ನುವುದನ್ನು ವ್ಯಾವಹಾರಿಕ ಸತ್ಯವಾಗಿ ನೋಡಲು ಅಡ್ಡಿಯಿಲ್ಲ. ಹಾಗಾಗಿ ಹಣವುಳ್ಳವ ಎಲ್ಲ ರೀತಿಯಲ್ಲೂ ಮಾನ್ಯ, ಸ್ವೀಕಾರಾರ್ಹ ಎನ್ನುವಂತಹ ಸಮೀಕರಣ ಲೋಕದಲ್ಲಿ ಚಾಲ್ತಿಯಲ್ಲಿದೆ.
ಇಂಥ ಹಣದ ಶಕ್ತಿಯ ಹೆಗ್ಗಳಿಕೆಯನ್ನು ಭರ್ತೃ ಹರಿ ತನ್ನ ನೀತಿಶತಕದಲ್ಲಿ ಸೊಗಸಾಗಿ ವರ್ಣಿಸಿದ್ದಾನೆ:
ಯಸ್ಯಾಸ್ತಿ ವಿತ್ತಂ ಸ ನರಃ ಕುಲೀನಃ
ಸ ಪಂಡಿತಃ ಸ ಶ್ರುತವಾನ್ ಗುಣಜ್ಞಃ |
ಸ ಏವ ವಕ್ತಾ ಸ ಚ ದರ್ಶನೀಯಃ
ಸರ್ವೇ ಗುಣಾಃ ಕಾಂಚನಮಾಶ್ರಯಂತಿ||
ಸಾರಾಂಶ: ‘ಯಾರಲ್ಲಿ ಧನ–ಸಂಪತ್ತು ಹೇರಳವಾಗಿದೆಯೋ - ಆತನೇ ಉತ್ತಮ ಕುಲದವನು, ಪಂಡಿತನು, ಸದ್ಗುಣವಂತನು, ಮಾತನಾಡಲು ಅರ್ಹನು, ರೂಪವಂತನು, ದರ್ಶನೀಯನು - ಎಲ್ಲವೂ ಅವನೇ. ಹೀಗೆ ಸಕಲಗುಣಗಳೂ ಹಣವನ್ನು (ಕಾಂಚನ = ಚಿನ್ನ) ಆಶ್ರಯಿಸಿದೆ.’
ಇಲ್ಲಿ ಭರ್ತೃಹರಿ ‘ಹಣದ’ ಪ್ರಶಂಸೆಯನ್ನು ಮಾಡಿ ದ್ದಾನೆಯೇ ವಿನಾ ‘ಹಣವಂತನ’ ಪ್ರಶಂಸೆಯಲ್ಲ. ಹಣವನ್ನು ಪ್ರಶಂಸೆ ಮಾಡುತ್ತಲೇ, ಲೋಕವು ಧನವಂತನನ್ನು ನೋಡುವ ಮತ್ತು ಸ್ವೀಕರಿಸುವ ರೀತಿಯನ್ನು ವ್ಯಂಗ್ಯವಾಡಿದ್ದಾನೆ.
ಸಮಾಜವು ವ್ಯಕ್ತಿಯ ಪಾತ್ರತೆಯನ್ನು ‘ಹಣ’ವೊಂದರಿಂದಲೇ ಅಳೆಯುವುದರಿಂದ, ಆ ವ್ಯಕ್ತಿಯೂ ಅದನ್ನು ನಿಜವೆಂದು ನಂಬುತ್ತಾನೆ. ಅಗತ್ಯ-ಬಯಕೆ-ಮಹತ್ವಾಕಾಂಕ್ಷೆಗಳ ಮೇರೆಯನ್ನು ಮೀರಿ ಹಿಂತಿರುಗಲಾರದಷ್ಟು ದೂರ ಕ್ರಮಿಸಿಬಿಡುತ್ತಾನೆ. ಇಂಥ ಮೇಲಾಟದ ವರ್ತುಲದೊಳಗೆ ಸಿಲುಕುವ ಸಾಧ್ಯತೆಯನ್ನು ಧ್ವನಿಸುತ್ತದೆ ಈ ಸುಭಾಷಿತ.
‘ಅರ್ಥ’ ಒಂದು ಪುರುಷಾರ್ಥವಾಗಿ ಅವನ ವಿಕಸನಕ್ಕೆ ದಾರಿಯಾಗದೆ, ತಡೆಯಾಗಿ ನಿಲ್ಲುವ ಪರಿಸ್ಥಿತಿ ಎದುರಾಗುತ್ತದೆ. ಹಾಗಾಗಿಯೇ ಏನೋ ದಾಸವರೇಣ್ಯರಾದ ಪುರಂದರದಾಸರು, ‘ಮಾನವಾ ಗಿರಿಸೋದು ದುಗ್ಗಾಣಿ, ಮಾನ ಹದಗೆಡಿಸೋದು ದುಗ್ಗಾಣಿ- ದುಗ್ಗಾಣಿ ಬಲು ಕೆಟ್ಟದ್ದಣ್ಣ’ ಎನ್ನುತ್ತಾರೆ. ಇಲ್ಲಿ ವಾಚ್ಯಾರ್ಥ ‘ದುಗ್ಗಾಣಿ ಕೆಟ್ಟದ್ದು’ ಎನ್ನುವಂತೆ ಕೇಳಿದರೂ, ‘ದುಗ್ಗಾಣಿಯನ್ನು’ ಕಾಣುವ ಮನುಷ್ಯನ ಮನಸ್ಸಿನ ಸಮಸ್ಯೆಯದು ಎಂದು ಸೂಚ್ಯವಾಗಿ ಗ್ರಹಿಸಬಹುದು. ‘ಪರಮ ಲಾಭವಗಳಿಸೆ ಜೀವಿತ ವ್ಯಾಪಾರಕಿರಬೇಕು ಮೂಲಧನವು ತತ್ವದೃಷ್ಟಿ’ ಎಂಬ ಡಿವಿಜಿಯವರ ಕಗ್ಗದ ಮಾತನ್ನು ನಾವು ಇಲ್ಲಿಯೂ ಅನ್ವಯಿಸಿಕೊಳ್ಳಬಹುದಷ್ಟೆ.
ಸುಭಾಷಿತವೊಂದು ‘ಸಂಪತ್ತನ್ನು’ ಧರ್ಮದೃಷ್ಟಿಯಿಂದ ಕಾಣುವ ಸಿರಿವಂತರ ಸ್ವಭಾವವನ್ನು ಹೀಗೆ ವರ್ಣಿಸುತ್ತದೆ:
ಭವಂತಿ ನಮ್ರಾಃ ತರವಃ ಫಲೋದ್ಗಮೈಃ
ನವಾಂಬುಬಿರ್ದೂರವಿಲಂಬಿನೋ ಘನಾಃ |
ಅನುದ್ಧತಾಃ ಸತ್ಪುರುಷಾಃ ಸಮೃದ್ಧಿಭಿಃ
ಸ್ವಭಾವ ಏವೈಷ ಪರೋಪಕಾರಿಣಾಮ್ ||
‘ಮರವು ಫಲಭರಿತವಾದಾಗ ಬಾಗುತ್ತದೆ – ಸೆಟೆದು ನಿಂತು ಹೆಮ್ಮೆ ಪಡುವುದಿಲ್ಲ. ಅದೆಲ್ಲೋ ಎತ್ತರದಲ್ಲಿ ಸಂಚರಿಸುತ್ತಿರವ ಮೋಡ – ಹನಿಗೂಡುತ್ತಿರುವಂತೆಯೇ ಭೂಮಿಯೆಡೆಗೆ ಧಾವಿಸುತ್ತದೆ. ಸತ್ಪುರುಷರು ಸಂಪತ್ತಿನಿಂದ ಅಹಂಕಾರಕ್ಕೊಳಗಾಗುವುದಿಲ್ಲ. ಪರೋಪಕಾರವೇ ಅವರ ಸ್ವಭಾವ.’
‘ಅರ್ಥ’ವು ನಿಜವಾಗಿ ಪುರುಷಾರ್ಥವಾಗ ಬೇಕೆಂದರೆ - ಈ ರೀತಿಯಲ್ಲಿ ಧರ್ಮದ ಜೊತೆ ಬೆಸೆದುಕೊಳ್ಳುವುದು ಅಗತ್ಯವಾಗುತ್ತದೆ. ಅರ್ಥದ ಬಗೆಗೆ ಇರಬಹುದಾದ ತತ್ತ್ವದೃಷ್ಟಿ ಇದುವೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.