ಕೆಲವು ದಿನಗಳ ಹಿಂದೆ ಮಾಮೂಲಿಯಂತೆ ನಾನು ಬೆಳಗಿನ ವಾಯುವಿಹಾರ (ವಾಯುವಿಹಾರ ಶಬ್ದ ಮರೆಗೆ ಸರಿದು ‘ವಾಕಿಂಗ್ ಶಬ್ದ ಆವರಿಸಿಬಿಟ್ಟಿದೆ) ಮುಗಿಸಿ ನಮ್ಮ ಬಡವಾಣೆಗೆ ಹೊಂದಿಕೊಂಡಿರುವ ರಸ್ತೆ ಬದಿಯ ಒಂದು ಚಹಾ ಅಂಗಡಿಯಲ್ಲಿ ಕಾಫಿ ತಯಾರಿಸಲು ಹೇಳಿ ಹೊರಗೆ ನಿಂತಿದ್ದೆ. ಬೆಳಿಗ್ಗೆ ಎಂಟರ ಸಮಯ. ಚಹಾ ಅಂಗಡಿಯ ಪಕ್ಕದಲ್ಲೇ ದೊಡ್ಡ ವಿಸ್ತಾರವಾದ ಆವರಣದೊಳಗೆ ಒಂದು ಖಾಸಗಿ ಶಾಲೆ ಇದೆ. ಬೇಸಿಗೆ ರಜೆ ಮುಗಿದು ಆಗ ತಾನೇ ಶಾಲೆಗಳು ಪುನರಾರಂಭವಾಗಿದ್ದವು. ಅದೇ ಹೊತ್ತಿಗೆ ಅಲ್ಲಿಗೆ ಬಂದ ಹುಡುಗನೊಬ್ಬ ಚಹಾ ಅಂಗಡಿಯಿಂದ ಒಂದು ಪ್ಯಾಕೇಟ್ ಬಿಸ್ಕೇಟು ಹಾಗೂ ಒಂದು ಲೋಟ ಹಾಲು (ಚಹಾ ತಯಾರಿಸುವ ಹಾಲು) ಕೇಳಿ ಹೆಗಲೇರಿದ್ದ ಮೂಟೆಯಂತಹ ಬ್ಯಾಗನ್ನು ಕೆಳಗೆ ಇಳಿಸಿ ಬಿಸ್ಕೇಟ್ ತಿನ್ನತೊಡಗಿದ. ಚಹಾ ಅಂಗಡಿಯಾತ, ‘ಇವತ್ತೂ ತಿಂಡಿ ತಿನ್ನದೇ ಬಂದಿದ್ದೀಯಾ?’ ಎಂದು ಕೇಳಿದ್ದಕ್ಕೆ ಆ ಹುಡುಗ ‘ಇಲ್ಲ’ ಎನ್ನುವಂತೆ ತಲೆ ಅಲ್ಲಾಡಿಸಿದ. ನಾನು ಇಬ್ಬರ ಮುಖವನ್ನೂ ನೋಡಿದೆ. ಆಗ ಚಹಾ ಅಂಗಡಡಿಯ ಮಾಲೀಕ (ನನಗೂ ಪರಿಚಯದವರೇ) ‘ಸಾರ್.. ಈ ಹುಡ್ಗ ಆಗಾಗ ತಿಂಡಿ ತಿನ್ನದೇ ಬಂದಾಗ ಇಲ್ಲಿ ಬಿಸ್ಕತ್ತು ತಿಂದು ಹಾಲು ಕುಡ್ದು ಶಾಲೆಗೆ ಹೋಯ್ತಾನೆ’ ಎಂದರು.
ನನಗೆ ಕುತೂಹಲ ಉಂಟಾಗಿ ಆ ಮಗುವನ್ನು ಮಾತನಾಡಿಸಿದೆ. ಆತ ಹೀಗೆ ಹೇಳಿದ ‘ನಾನು ಮನೆಯಿಂದ ಆರು ಗಂಟೆಗೆ ಹಾಲು ಕುಡಿದು ತಿಂಡಿಯ ಬಾಕ್ಸ್ ತೆಗೆದುಕೊಂಡು ಹೊರಡಬೇಕು. ಆರೂವರೆಯಿಂದ ಏಳೂವರೆ ತನಕ ಟ್ಯೂಷನ್ ಕ್ಲಾಸ್ ಇರುತ್ತೆ. ಅದನ್ನು ಮುಗಿಸಿಕೊಂಡು ಮನೆಗೆ ಹೋಗಲು ಆಗುವುದಿಲ್ಲ, ಮನೆಗೆ ಹೋದ್ರೆ ಬಸ್ ಮಿಸ್ ಆಗಿಬಿಡುತ್ತೆ. ಒಂದೊಂದು ದಿನ ಮನೇಲಿ ತಿಂಡಿ ಆಗೋದು ತಡ ಆಗುತ್ತೆ. ಟ್ಯೂಷನ್ ತಪ್ಪಿಸೋದಕ್ಕೆ ಆಗೋದಿಲ್ಲ. ಆಗ ನಾನು ಇಲ್ಲಿಗೆ ಬಂದು ಬಿಸ್ಕತ್ತು ತಿಂದು ಹಾಲು ಕುಡಿಯುತ್ತೇನೆ’ ಎಂದು ವಿವರಣೆ ನೀಡಿದ. ಆಗ ನಾನು ‘ಸರಿಯಪ್ಪ, ಮಧ್ಯಾಹ್ನ ಊಟಕ್ಕೆ ಏನು ಮಾಡ್ತೀಯಾ?’ ಎಂದು ಕೇಳಿದೆ.
ಆತ ‘ನನ್ನ ತಮ್ಮ ಸಹ ಇದೇ ಸ್ಕೂಲಿಗೆ ಬರ್ತಾನೆ. ಅವನು ತಡವಾಗಿ ಹೊರಡೋದ್ರಿಂದ ಇಬ್ಬರಿಗೂ ಊಟದ ಬಾಕ್ಸ್ ತರ್ತಾನೆ’. ‘ಅಂದ್ರೆ ನಿಂಗೆ ಮಧ್ಯಾಹ್ನದ ತನಕ ಸಾಕಾಗುತ್ತಾ?’ ಎಂದು ಕೇಳಿದ್ದಕ್ಕೆ ‘ಪರವಾಗಿಲ್ಲ ಆಗುತ್ತೆ’ ಎಂದು ಹೇಳಿ ಬಿಸ್ಕತ್ತಿನ ಹಣ ನೀಡಿ ಸರಸರನೆ ಶಾಲೆಯ ಕಡೆ ನಡೆದುಬಿಟ್ಟ.
ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ಆ ಹುಡುಗನ ತಾಳ್ಮೆ ಹಾಗೂ ಕಲಿಕೆಯಲ್ಲಿನ ಉತ್ಸಾಹವನ್ನು ಗಮನಿಸಿ ನನಗೆ ‘ಭೇಷ್’ ಎನ್ನಿಸಬೇಕೆನ್ನಿಸಿತು. ಅದರ ಜೊತೆಗೇ ಶಾಲೆ, ಟ್ಯೂಷನ್‌ಗೆ ಬೆಳಿಗ್ಗೆ ಆರು ಗಂಟೆಗೆ ಶುರುವಾಗುವ ಆತನ ದಿನಚರಿಯ ಬಗ್ಗೆ ಆಶ್ಚರ್ಯ ಹಾಗೂ ಕನಿಕರವೆನಿಸಿತು. ಏಕೆಂದರೆ ಬೆಳಿಗ್ಗೆ ಆರು ಗಂಟೆ ಎಂದರೆ ಮಕ್ಕಳಿಗೆ (ಕೆಲವು ದೊಡ್ಡವರಿಗೂ ಸಹ) ಸವಿನಿದ್ರೆಯಿಂದ ಬಿಡುಗಡೆ ಪಡೆಯುವುದೆಂದರೆ ಸ್ವಲ್ಪ ಕಷ್ಟವೇ. ಇಂಥ ಪರಿಸ್ಥಿತಿಯಲ್ಲಿ ಈ ಬಾಲಕನಂಥ ಹಲವರು ತಮ್ಮ ದಿನಚರಿಯನ್ನು ಸೂರ್ಯೋದಯದ ಜೊತೆಗೇನೆ ಪ್ರಾರಂಭಿಸುವುದೆಂದರೆ ಇಂದಿನ ಕಲಿಕೆಯ ಕ್ರಮ (ಒತ್ತಡ)ವನ್ನು ಗ್ರಹಿಸಿಕೊಂಡರೆ ನಮ್ಮ ಬಾಲ್ಯದ ದಿನಗಳು ನೆನಪಾಗಿ ‘ಅಬ್ಬಾ ಹೀಗೂ ಉಂಟೇ...!’ ಎನ್ನುವಂತಾಗುತ್ತದೆ.
ನಾನು ಚಿಕ್ಕವನಿದ್ದಾಗ ಕಲಿಕೆಗಿಂದ ಇತರೆ ಕೆಲಸಗಳ ಒತ್ತಡವೇ ಜಾಸ್ತಿ ಇರುತ್ತಿತ್ತು. ತೀರಾ ಹಿಂದುಳಿದ ಕುಗ್ರಾಮದಂತಿದ್ದ ಹಳ್ಳಿಯ ಬದುಕಿನಲ್ಲಿ ‘ಬೇಸಾಯವೇ ಪ್ರಧಾನ ಚಟುವಟಿಕೆಯಾಗಿತ್ತು. ಹಾಗಾಗಿ ನಾನು(ನನ್ನಂಥ ಹಲವರು) ಬೆಳಿಗ್ಗೆ ಆರು ಗಂಟೆಗೆ ಎದ್ದರೂ ಟ್ಯೂಷನ್‌ನಂಥ ಓದು –ಬರಹದ ಕಾರ್ಯಕ್ರಮಗಳು ಇರಲಿಲ್ಲ. ಏನಿದ್ದರೂ ಮನೆಕೆಲಸ, ದನ–ಕರು, ಹಾಲು ಇತ್ಯಾದಿ ಕೆಲಸಗಳನ್ನು ಬೆಳಗಿನ ಉಪಹಾರದ ಹೆಸರಿನಲ್ಲಿ ಏನಾದರೂ ತಿಂದು ಮಧ್ಯಾಹ್ನಕ್ಕೆಂದು ಒಂದು ರೊಟ್ಟಿಯನ್ನು ಬಟ್ಟೆಯಲ್ಲಿ ಸುತ್ತಿ ಪುಸ್ತಕದ ಚೀಲದಲ್ಲಿ ಇಟ್ಟುಕೊಂಡು ಹಾಲಿನ ಕ್ಯಾರಿಯರ್‌ನ್ನು ಹಿಡಿದುಕೊಂಡು ಪೇಟೆಯ ಕಡೆಗೆ ಹೆಜ್ಜೆಹಾಕುತ್ತಿದ್ದೆ. ನಾಲ್ಕೂವರೆಗೆಲ್ಲಾ ಶಾಲೆಯಿಂದ ಹೊರಟು ಜೊತೆಗಾರರ ಸಂಗ ಅದೂ–ಇದೂ ಎಂದು ಆಟವಾಡುತ್ತ ಮನೆ ತಲುಪುವಾಗ ಆರು ಗಂಟೆ ಸಮೀಪಿಸುತ್ತಿತ್ತು. ಮತ್ತೆ ಒಂದಿಷ್ಟು ಕೆಲಸ ಮುಗಿಸಿ ಶಾಲೆಯ ಹೋಂವರ್ಕ್ ಸಾಧ್ಯವಾದಷ್ಟು ಬರೆದು ಊಟ ಮಾಡಿ ಮಲಗಿಬಿಡುತ್ತಿದ್ದೆ. ಇದು ನನ್ನಂತಹ ಹಲವಾರು ಜನರ ನಿತ್ಯ ಕ್ರಮವಾಗಿತ್ತು. ನಮಗೆ ಅಂದು ಯಾವುದೂ ಹೊರೆ ಅನ್ನಿಸುತ್ತಿರಲಿಲ್ಲ.
ಇಂದು ಬದುಕಿನ ಎಲ್ಲ ಅಂಗಗಳಲ್ಲಿ ಅಗಾಧವಾದ ಪರಿವರ್ತನೆಯಾಗಿದೆ. ಜ್ಞಾನದ ಖಾಖೆಗಳು ವಿಸ್ತರಿಸುತ್ತಾ ಹೋದಂತೆ ‘ಬುದ್ದಿ‘ ಕಸರತ್ತು, ಶಕ್ತಿಯೇ ಪ್ರಧಾನವಾಗಿ ನಮ್ಮನ್ನು, ನಮ್ಮ ದೈನಂದಿನ ಬದುಕನ್ನು ವಿಸ್ತರಿಸುತ್ತ ಹೋಗುವುದರ ಜೊತೆಗೆ ಹರವನ್ನೂ ನೀಡುತ್ತಿದೆ. ಹಾಗಾಗಿ ಪ್ರಕೃತಿಯ ಒಡನಾಟ, ಋತುಮಾನಕ್ಕನುಸಾರವಾಗಿ ತೆರೆದುಕೊಳ್ಳುತ್ತಿದ್ದ ನಮ್ಮ ಬಾಲ್ಯದ ದಿನಗಳು ಈಗ ನನ್ನಂಥವರಿಗೆ ನೆನಪು ಮಾತ್ರ.
ಈಚೆಗೆ ನನ್ನ ಜೊತೆ ಹೊಸದಾಗಿ ಒಬ್ಬರು ಆಗಾಗ ವಾಯುವಿಹಾರಕ್ಕೆ ಬರುತ್ತಾರೆ. ಆ ಸಮಯದಲ್ಲಿ ಹೀಗೆ ಲೋಕಾಭಿರಾಮವಾಗಿ ಮಾತನಾಡುವಾಗ ಒಂದು ಸಂದರ್ಭದಲ್ಲಿ ಅವರು ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಗಣನೀಯ ಪ್ರಮಾಣವನ್ನು ಇಳಿಮುಖವಾಗುತ್ತಿರುವ ಕುರಿತಂತೆ ‘ಅಂದು ಕಣಜ’ವೇ ಪ್ರಧಾನವಾಗಿತ್ತು. ಅಂದರೇ ದೇಶದ ಬಹುಪಾಲು ಜನರು ಕೃಷಿಯನ್ನೇ ನಂಬಿ ‘ಕಣಜ‘ವನ್ನು ತುಂಬಿಸುತ್ತಿದ್ದರು. ಅದರೊಂದಿಗೆ ಪರ್ಯಾಯವಾಗಿ ಬರುವ ಹೈನುಗಾರಿಕೆ ಸಾಕಾಣಿಕೆಯು ಮುಂತಾದ ಅಂಗಗಳೂ ಸಮೃದ್ಧಿಯಾಗಿರುತ್ತಿದ್ದವು. ಇಂದು ಕಣಜವೇ ಮಾಯವಾಗಿಬಿಟ್ಟಿದೆ.
ವರ್ತಮಾನದಲ್ಲಿ ‘ದುಡಿಮೆ’ ಎಂದರೆ ಕ್ಷೇತ್ರ ಯಾವುದಾರೂ ಸರಿ ಹಣ ಗಳಿಸಿ ‘ಕಿಸೆ’(ಜೇಬು) ತುಂಬಿಸುವುದೇ ಮುಖ್ಯವಾಗುತ್ತಿದೆ. ಹಣ ಗಳಿಕೆಯ ಹಂಬಲ ಬೃಹದಾಕಾರವಾಗಿ ನಮ್ಮನ್ನು ಅವಲಂಬಿಸಿರುವುದರಿಂದ ನಮ್ಮ ಮಕ್ಕಳನ್ನೂ ಬದುಕಿನ ಇತರೇ ಸಹಜ ಚಟುವಟಿಕೆಗಳಿಂದ ದೂರವಿರಿಸಿ ಕೇವಲ ಓದಿಗಷ್ಟೇ ಸೀಮಿತಗೊಳಿಸಿದ್ದೇವೆ. ಒಂದನೇ ತರಗತಿಯ ಮಗುವಿಗೂ ಟ್ಯೂಷನ್ ಈಗ ಅನಿವಾರ್ಯವಾಗುತ್ತಿದೆ. ಗೂಡುಗಳಂತಿರುವ ಅಸಂಖ್ಯ ಶಾಲೆಗಳಲ್ಲಿ ಮಕ್ಕಳು ಕಲಿಯಲಾಗದ್ದನ್ನೂ ಟ್ಯೂಷನ್‌ನಲ್ಲಿ ತುಂಬಿಸಿಕೊಳ್ಳುವಂತಾಗಿದೆ. ಏನೇ ಇದ್ದರೂ ಅಂದು ನನಗೆ ಸಿಕ್ಕಿದ ಬಾಲಕ ಬ್ರೆಡ್, ಬಿಸ್ಕತ್ತು ತಿಂದೂ ಟ್ಯೂಷನ್‌ನ್ನು ತಪ್ಪಿಸದೇ ಹಸಿವನ್ನೂ ಮರೆತು ಶಾಲೆಯ ಓದು ಮುಗಿಸಿ ಬೌದ್ಧಿಕವಾಗಿ ಮೇಲಕ್ಕೇರುವ ನಿಟ್ಟಿನಲ್ಲಿ ಸಾಗುತ್ತಿರುವಾಗ ಅಂಥವರಿಗೆ ಭೇಷ್ ಎನ್ನಬಹುದಲ್ಲ. ನೀವೇನಂತೀರಿ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.