ADVERTISEMENT

ಏರ್‌ಪೋರ್ಟ್‌ನಲ್ಲಿ ‘ಕೊರೊನಾ’ ಪರೀಕ್ಷೆ ಅನುಭವ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 19:30 IST
Last Updated 16 ಮಾರ್ಚ್ 2020, 19:30 IST
ಮೂಡ್ನಾಕೂಡು ಚಿನ್ನಸ್ವಾಮಿ
ಮೂಡ್ನಾಕೂಡು ಚಿನ್ನಸ್ವಾಮಿ   

ಪ್ಯಾರಿಸ್‌ನಿಂದ ಬೆಂಗಳೂರಿಗೆ ಹೊರಟೆ. ದುಬೈ ಮೂಲಕ ಸೋಮವಾರ ಬೆಳಿಗ್ಗೆ 8 ಗಂಟೆಗೆ ಬೆಂಗಳೂರು ಏರ್‌ಪೋರ್ಟ್‌ಗೆ ಬಂದಿಳಿದೆ. ನಮ್ಮ ವಿಮಾನದಲ್ಲಿ ನನ್ನೊಂದಿಗೆ 12 ಪ್ರಯಾಣಿಕರು (ನನ್ನನ್ನೂ ಸೇರಿ) ಬಂದರು. ಎಲ್ಲರನ್ನೂ ಏರ್‌ಪೋರ್ಟ್‌ ಸಿಬ್ಬಂದಿಯೇ ವಿಶೇಷವಾಗಿ ಇಮಿಗ್ರೇಷನ್‌ ಪರೀಕ್ಷೆ ಮಾಡಿಸಿ, ಪ್ರಾಥಮಿಕ ಆರೋಗ್ಯ ಪರೀಕ್ಷೆಯನ್ನೂ (ಥರ್ಮಲ್ ಟೆಸ್ಟ್) ಮಾಡಿಸಿದರು. ಎಲ್ಲರದ್ದೂ ನೆಗೆಟಿವ್ ಬಂತು. ಆದರೂ, ನಮ್ಮನ್ನೆಲ್ಲ ಆಂಬುಲೆನ್ಸ್‌ನಲ್ಲಿ ಕೂರಿಸಿಕೊಂಡು ದೇವನಹಳ್ಳಿಯ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋದರು. ಅಲ್ಲಿ, ಕೊರೊನ ಸೋಂಕಿತರ ಪರೀಕ್ಷೆಗಾಗಿ ಪ್ರತ್ಯೇಕ ವಾರ್ಡ್ (ಐಸೊಲೇಷನ್) ಮಾಡಿದ್ದಾರೆ. ಅಲ್ಲಿ, ಕೆಲ ಕಾಲ ನಮ್ಮನ್ನಿರಿಸಿ, ಪರೀಕ್ಷೆಗೊಳಪಡಿಸಿದರು. ಎಲ್ಲರದ್ದೂ ನೆಗೆಟಿವ್‌ ಬಂತು.

ನಾನು 60 ವರ್ಷದವನಾಗಿದ್ದರಿಂದ, ‘ನೀವು ಮನೆಯಲ್ಲಾದರೂ ಒಂದಷ್ಟು ದಿನ ಪ್ರತ್ಯೇಕವಾಗಿರಬೇಕು. ಮನೆಯಿಂದ ಹೊರ ಹೋಗಬಾರದು‘ ಎಂದು ಸಲಹೆ ನೀಡಿದರು. ’ಬೇಕಾದರೆ, ಈಗ ಇದೇ ವಾರ್ಡ್‌ನಲ್ಲಿ ಉಳಿಯಬಹುದು‘ ಎಂದರು. ’ನಾನು ಆರಾಮಾಗಿದ್ದೇನೆ. ಸುಮ್ಮ ಸುಮ್ಮನೆ ಯಾಕೆ ಇಲ್ಲಿ ಉಳಿಯೋದು. ಮನೆಯಲ್ಲೇ ಪ್ರತ್ಯೇಕವಾಗಿರ್ತೀನಿ. ಎಲ್ಲೂ ಹೋಗಲ್ಲ. ಏನಾದರೂ ಲಕ್ಷಣಗಳು ಕಂಡರೆ ನಾನೇ ಆಸ್ಪತ್ರೆಗೆ ಹೋಗ್ತೀನಿ‘ ಎಂದು ಹೇಳಿ ಅಲ್ಲಿಂದ ಮನೆಗೆ ಬಂದೆ.

ಏರ್‌ಪೋರ್ಟ್‌ನಲ್ಲಿ ತುಂಬಾ ಕಟ್ಟುನಿಟ್ಟಾಗಿ ತಪಾಸಣೆ ಮಾಡುತ್ತಿದ್ದಾರೆ. ವಿದೇಶದಿಂದ ಬಂದವರೆಲ್ಲರನ್ನೂ ತುಂಬಾ ನಿಗಾ ಇಟ್ಟು ಪರೀಕ್ಷೆಗೆ ಒಳಡಿಸುತ್ತಿದ್ದಾರೆ. ವಿಶೇಷವಾಗಿ ಇಟಲಿ, ಜರ್ಮನಿ, ಚೀನಾದಿಂದ ಬಂದವರನ್ನು ಹೆಚ್ಚು ನಿಗಾವಹಿಸಿ ಪರೀಕ್ಷೆ ಮಾಡುತ್ತಿದ್ದಾರೆ. ದೇವನಹಳ್ಳಿ ಆಸ್ಪತ್ರೆಯಲ್ಲೂ ಒಂದಷ್ಟು ಜನರನ್ನು ನಿಗಾದಲ್ಲಿಟ್ಟಿದ್ದರು. ಅಲ್ಲಿದ್ದವರೆಲ್ಲರೂ ವಯಸ್ಸಾಗಿರುವವರು. ಅಲ್ಲಿ ಯಾವುದೇ ಪಾಸಿಟಿವ್ ಕೇಸ್‌ ಇರಲಿಲ್ಲ.

ADVERTISEMENT

ಏರ್‌ಪೋರ್ಟ್‌ನಲ್ಲಿ ಪರೀಕ್ಷೆಗಾಗಿ ಒಂದು ತಂಡವಿದೆ. ಅವರೆಲ್ಲಗೌನ್‌, ಕೈಗೆ ಗ್ಲೌಸ್‌ಗಳನ್ನು ಹಾಕಿಕೊಂಡು ಪರೀಕ್ಷೆ ಮಾಡುತ್ತಾರೆ. ಏರ್‌ಪೋರ್ಟ್‌ಗೆ ಬಂದಿಳಿದಾಗ, ಅವರೆಲ್ಲ ನಮ್ಮನ್ನು ಒಂಥರಾ ನೋಡಿದರು. ಇದನ್ನೆಲ್ಲ ನೋಡುತ್ತಿದ್ದಾಗ ‘ಇದೇನಿದು ಇಷ್ಟು ಪ್ಯಾನಿಕ್‌‘ ಸೃಷ್ಟಿ ಮಾಡ್ತಿದ್ದಾರಲ್ಲಾ ಅಂತ ಅನ್ನಿಸಿತು. ಆನಂತರ, ಜರ್ಮನಿ, ಫ್ರಾನ್ಸ್‌ ಗೆಳೆಯರಿಗೆ ಕರೆ ಮಾಡಿ ಮಾತನಾಡಿದ ಮೇಲೆ ಅಲ್ಲಿಯೂ ಇದೇ ರೀತಿ ದೇಶದ ಗಡಿಭಾಗದಲ್ಲೇ ಪ್ರಯಾಣಿಕರನ್ನು ಪರೀಕ್ಷೆಗೊಳಪಡಿಸುತ್ತಿದ್ದಾರೆಂದು ತಿಳಿದುಬಂತು.

ಪ್ಯಾರಿಸ್‌ನಲ್ಲಿ ಮೂರು ಕಡೆ ಕವಿಗೋಷ್ಠಿಗಳಿದ್ದವು. ಅಲ್ಲೆಲ್ಲ ಜನ ಆರಾಮಾಗಿದ್ದರು. ಇಷ್ಟೆಲ್ಲ ಪ್ಯಾನಿಕ್ ಆಗಿದ್ದನ್ನು ನಾನು ನೋಡಲಿಲ್ಲ. ಅಲ್ಲೂ ಕೊರೊನ ವೈರಸ್‌ ಸೋಂಕಿನಿಂದ ಸಾವುಗಳು ಸಂಭವಿಸಿದ್ದವು. ಜನರು ಮಾಸ್ಕ್‌ ಧರಿಸಿ ಓಡಾಡುತ್ತಿದ್ದರು. ಆದರೆ, ಗಾಬರಿಯಾಗುವಂತಹ ವಾತಾವರಣ ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.