ಕೆಲವು ನಿಮಿಷಗಳ ಕಾಲ ನಿವಾಂತ ಕುಂತು ಮೈ ಮರೆತವರಂತೆ ನಾವಿಬ್ಬರೂ ಮಾತಾಡುವುದನ್ನು ಕಂಡು ಜತೆಗೆ ಬಂದಿದ್ದವರು, ‘ಕಲ್ಲೂರಲ್ಲಿ ಶ್ರಮ ಆಗಿದೆ, ಅಲ್ಲೀಸಾಹೇಬ ಅಲ್ಲಿಗೆ ಹೋಗಬೇಕಾಗಿದೆ’ ಎನ್ನುವುದನ್ನು ನೆನಪಿಸಿದರು. ನಮ್ಮ ಕಡೆಗೆ ‘ಶ್ರಮ’ ಆಗಿದೆ ಎಂದರೆ ‘ಸಾವು’ ಆಗಿದೆ ಎಂದರ್ಥ. ಶ್ರಮದ ಪಾರ್ಥಿವ ಶರೀರ ದರ್ಶನ ಮಾಡಿ, ಅಲ್ಲೀಸಾಹೇಬ ಭಜನೆ ಹಾಡುಗಳನ್ನು ಅಲ್ಲಿ ಹಾಡಬೇಕಾದ ಸೂಚನೆ ಅದಾಗಿತ್ತು. ನಾವು ಮಾತಾಡುವುದು ಮತ್ತಷ್ಟು ಇತ್ತು ಎನ್ನುವಾಗಲೇ ಅಲ್ಲೀಸಾಹೇಬರಿಗೆ ಅಲ್ಲೇ ಬೀಳ್ಕೊಟ್ಟೆ.
ಅವರ ಹುಟ್ಟೂರು ಕೃಷ್ಣಪ್ಪನ ಖೈನೂರು, ಅವಧೂತ ಪರಂಪರೆಯ ಬೇರುಗಳಿರುವ ಊರು. ಅಲ್ಲಿನ ಕಂಬಾರ ರಾಚವ್ವ ಅನುಭಾವದ ಕವಯತ್ರಿ. ಊರ ಹೊರಗಿನ ಗುಂಪಾ, ಊರಲ್ಲಿರುವ ಕೆಳಗಿನ ಮತ್ತು ಮೇಲಿನ ಮಠಗಳು ಅಂತಹ ಪರಂಪರೆಯ ತಾಣಗಳು. ಖೈನೂರು ಕೃಷ್ಣಪ್ಪನೆಂದರೆ ಕಡಕೋಳ ಮಡಿವಾಳಪ್ಪನ ಶಿಷ್ಯಗುರುಪುತ್ರ ಮತ್ತು ವಿಮಲ ಕವಿತ್ವದ ತತ್ವಪದಕಾರ. ಅದೇ ಖೈನೂರು ನನ್ನದೆನ್ನುವ ಉಮೇದಿನ ಸಾಧಕಜೀವಿ ಅಲ್ಲೀಸಾಬ. ಪರಾತ್ಪರ ಕವಿ ಕೃಷ್ಣಪ್ಪನೇ ಅಲ್ಲೀಸಾಬನ ಮೈ ಮನ ತುಂಬಿಬಂದ ಹದುಳಪ್ರೀತಿ. ಅಲ್ಲೀಸಾಹೇಬನ ಪರಾಕಾಷ್ಠೆಯ ಸ್ವರದಲ್ಲಿ ಕೃಷ್ಣಪ್ಪನ ತತ್ವಪದಗಳೇ ಕೊರಳತುಂಬಿ ಕೇಳುತ್ತವೆ.
ಅಲ್ಲೀಸಾಹೇಬನ ಅಪ್ಪ ಅಮೀನಸಾಹೇಬರು ಗುರುದೇವ ರಾನಡೆಯವರ ಒಡನಾಡಿ ಮಹೇಶ್ವರಪ್ಪ ಅವರಿಂದ ಗುರುಬೋಧೆ ಪಡೆದವರು. ‘ನಿಜಗುಣಶಾಲಿ’ ಮಹೇಶ್ವರಪ್ಪ ಲೋಕನುಡಿಯಲ್ಲಿ ಮೈಸೂರಪ್ಪ ಎಂದೇ ಪ್ರಸಿದ್ಧರು. ಗಡ್ಡಜಡೆಯ ಮೇಲೆತ್ತರದ ನಿಲುವಿನ ಅವರು ಅಷ್ಟೇ ಎತ್ತರದ ಅನುಭಾವ ಸಂಪನ್ನರು. ಅಂತಹ ಸಂಪನ್ನರ ಶಿಶುಮಗನಾದ ಆತ ಹಿಂದೂ ದೈವಗಳ ಗದ್ದುಗೆ, ಪಾದಗಟ್ಟೆ ಕಲ್ಲುಗಳನ್ನು ಸಿದ್ಧಮಾಡುವಲ್ಲಿ ಸಿದ್ಧಹಸ್ತ. ಹಾಗಂತ ಇತರೆ ಧರ್ಮದ ಗೋರಿಗಳಿಗೆ ಸಿದ್ಧಹಸ್ತನೆಂದಲ್ಲ. ಕಡಕೋಳ ಸೀಮೆಯ ಅನೇಕ ಗದ್ದುಗೆ ಕಟ್ಟೆಗಳ ಆಳೆತ್ತರದ ಕಲ್ಲುಗಳೆಲ್ಲ ‘ಖೈನೂರು ಮುಲ್ಲಾ’ ಅಮೀನಸಾಹೇಬನ ಶಿಲಾಕಾಯಕದ ಶಿಲೆಗಳು.
ಅರ್ಧ ಶತಮಾನದ ಹಿಂದೆ ಕಡಕೋಳದಲ್ಲಿ ತತ್ವಪದಗಳನ್ನು ಪರಂಪರಾಗತ ಸ್ವರಶಿಸ್ತು ಪಾಲಿಸಿ ಹಾಡುವ ಪದಕಾರರೇ ತುಂಬಿದ್ದರು. ಗವಿ ಭೀಮಾಶಂಕರ ಅವಧೂತರು, ಗೌಡಪ್ಪ ಸಾಧು, ಅಬ್ದುಲ್ಸಾ, ಸಾಧು ಶಿವಣ್ಣ, ಪೂಜೇರಿ ನಿಂಗಪ್ಪ, ಹುಡೇದ ಎಲ್ಲಪ್ಪ ಇನ್ನೂ ಅನೇಕರು ಏಕತಾರಿ ಪದ ಮತ್ತು ಪದಾರ್ಥಗಳನ್ನು ಹಾಳತವಾಗಿ ಬಾಳುವಲ್ಲಿ ಬಲಭೀಮರು. ಇಂಥವರ ಸಾಹಚರ್ಯದಿಂದ ಅಮೀನಸಾಹೇಬರಿಗೆ ತತ್ವಪದಗಳ ಹುಲುಸಾದ ಹುಗ್ಗಿ ಸಂಭ್ರಮ. ತನಗೆ ದಕ್ಕಿದ ತತ್ವಪದಗಳ ಈ ಮಹಾಪ್ರಸಾದವನ್ನು ಮಕ್ಕಳಾದ ಅಲ್ಲೀಸಾಬ ಮತ್ತು ಆದೀಮಸಾಬನಿಗೂ ಹಂಚಿ ಹಾಡುದೀಕ್ಷೆ ನೀಡಿದ್ದ.
ನಿತ್ಯ ಜೀವನದ ಒಕ್ಕಲುತನದ ಜತೆಗೆ ಭಜನೆ ಪದಗಳನ್ನು ಹೆಂಡತಿ ಭಾನುಮಾ ಜೊತೆಗೂಡಿ ಹಾಡುವ ಕಾಯಕ. ಅದು ಬಳುವಳಿಯಾಗಿ ಮಕ್ಕಳಿಗೂ ದಕ್ಕಿದೆ. ಅಲ್ಲೀಸಾಹೇಬ ಅದೇ ಹಾದಿಯ ಅಂತಃಕರಣದ ಪಯಣಿಗ. ಮಡಿವಾಳಪ್ಪ ಮತ್ತು ಅವನ ಶಿಷ್ಯರ ತತ್ವಪದಗಳ ಹಾಡುಗಾರ. ಅಪ್ಪ–ಮಕ್ಕಳು ರಾತ್ರಿ ಹಗಲೆಲ್ಲಾ ಏಕತ್ರ ಮಾಡಿ ಹಾಡಿದರೂ ಮುಗಿಯದಷ್ಟು ಮಡಿವಾಳ ಪ್ರಭುವಿನ ಪದಗಳ ರಾಶಿ. ಇದು ಖೈನೂರು ಮುಲ್ಲಾ ಕುಟುಂಬ ಸಾಗಿಬಂದ ಪರಂಪರೆ.
‘ಎತ್ತಹೋದೆ ಎನ್ನ ಹಡೆದವ್ವ/ಮರ್ತ್ಯವು ಮುಳುಗಿತು ಎನಗವ್ವ/ಮುಂದೆ ದುಸ್ತರ ದಿನಗಳೆಯಲಿ ಹ್ಯಂಗವ್ವ’–ತನ್ನ ಹೆತ್ತವ್ವ ಸತ್ತಾಗ ಖೈನೂರು ಕೃಷ್ಣಪ್ಪ ರಚಿಸಿದ ಈ ತತ್ವಪದವನ್ನು ಭಾವತುಂಬಿ ಹಾಡುವ ಅಲ್ಲೀಸಾಹೇಬನ ಧ್ವನಿ ಮತ್ತು ದೇಹಭಾಷೆ ಕಾಡುಕಟುಕರ ಹೃನ್ಮನಗಳಲ್ಲಿ ತೇವಭಾವ ಭರಿಸಬಲ್ಲದು.
‘ಎಲ್ಲಿಯ ಬ್ರಾಹ್ಮಣರ ಕೃಷ್ಣಪ್ಪ, ಎಲ್ಲಿಯ ಮುಸುಲರ ಅಲ್ಲೀಸಾಬ ಅಮೀನಸಾಬರು?’ ಹಾಗಂತ ಕೆಲವು ಮಡಿವಂತ ಮನಸುಗಳು ಮಾತಾಡುತ್ತವೆ. ಹೀಗೆ ಹಂಗಿಸಿ ಮಾತಾಡುವ ಮಡಿವಂತ ಮಂಡ ಮೂಳರಿಗೆ ಮುಲ್ಲಾ ಅಲ್ಲೀಸಾಹೇಬನ ಬಲ್ಲೇಕ ಮಡಿವಾಳಪ್ಪನ ನುಡಿದಿವ್ಯದ ಪದ ಅಗ್ನಿಕುಂಡದ ಹಾಡಾಗಿ ಹೀಗೆ ಕುಟುಕುತ್ತದೆ:
‘ಮುಡಿಚೆಟ್ಟಿನೊಳು ಬಂದು/ಮುಟ್ಟಿತಟ್ಟೇನಂತೀರಿ/ಮುಟ್ಟಾದ ಮೂರು ದಿನಕ/ಹುಟ್ಟಿ ಬಂದೀರಿ ನೀವು/ಮುಡುಚೆಟ್ಯಾವಲ್ಯಾದ ಹೇಳಣ್ಣ’.
ರುದ್ರಮುನಿ ಶಿವಾಚಾರ್ಯರಿಗೂ ಅಲ್ಲೀಸಾಹೇಬನೆಂದರೆ ಎಲ್ಲಿಲ್ಲದ ಪ್ರೀತಿ. ಈ ಬಾರಿಯ ಶ್ರಾವಣ ಮಾಸದ ಚಿಣಮಗೇರಿ ಗುರುಸ್ಥಳ ಗುಡ್ಡದ ಪಾದಯಾತ್ರೆಯಲ್ಲಿ ಅಲ್ಲೀಸಾಹೇಬಗೆ ಭಜನಾ ತಂಡದ ಮುಂಚೂಣಿ ನಾಯಕತ್ವ ನೀಡಿ ಗೌರವಿಸಿದರು.
ಅನಕ್ಷರಸ್ಥನಾದ ಆತನಿಗೆ ಬುದ್ಧಿ ಬಂದಾಗಿನಿಂದಲೂ ಪ್ರತಿನಿತ್ಯವೂ ನಡಕೊಂಡೇ ಕಡಕೋಳಕ್ಕೆ ಹೋಗಿ ಮಡಿವಾಳಪ್ಪನ ಕರ್ತೃಗದ್ದುಗೆಗೆ ಸಾಷ್ಟಾಂಗ ಹಾಕುವುದನ್ನು ನಿಯಮದಂತೆ ಪಾಲಿಸುತ್ತಾ ಬಂದಿದ್ದಾನೆ. ಹಾಗೆ ಮಾಡಿದಾಗಲೇ ಅವನ ಮನಸಿಗೇನೋ ಆನಂದ. ಜೀವಕ್ಕೆ ಸಮಾಧಾನ. ಎತ್ತುಗಳ ನಿತ್ಯ ಬೇಸಾಯದ ಕ್ರಿಯೆಗಳನ್ನು ಆರಂಭಿಸುವಾಗ ಮಹಾಂತ ಮಡಿವಾಳ ಧ್ಯಾನವೇ ಮೊದಲು. ಹತ್ತಾರು ಎಕರೆ ಹೊಲಗಳನ್ನು ಉತ್ತಿ ಬಿತ್ತುವಲ್ಲಿ ಅಲ್ಲೀಸಾಬ ನಿಷ್ಣಾತ. ಸದ್ಗುರುನಾಥ ಇಪ್ಪತ್ತೆಕರೆ ಹೊಲ ದಯಪಾಲಿಸಿದ್ದಾನೆಂಬ ಭಕ್ತಿ ವಿನಯಗಳ ವಿನಮ್ರತೆ.
ಅಲ್ಲೀಸಾಹೇಬ ಮತ್ತು ಅವನ ಪತ್ನಿ ಮಾಬಣ್ಣಿ ಇಬ್ಬರೂ ಈಗ್ಗೆ ಇಪ್ಪತ್ತು ವರುಷಗಳ ಹಿಂದೆ ಗಡಿನಾಡಿನ ನೀಲೂರಪ್ಪನ ಬಳಿ ಗುರುಪದೇಶ ಪಡೆದು ನೀಲೂರು ಮೈಬೂಬ ಸುಬಾನಿ ದರ್ಗಾದ ಶಿಶುಮಕ್ಕಳಾಗಿದ್ದಾರೆ. ಗುರು ನೀಲೂರಪ್ಪ ತೊಡಿಸಿ ಹರಸಿದ ಹಸಿರು ಶಾಲು ಸದಾ ಅವನ ಹೆಗಲ ಮೇಲೆ. ಅದು ಅಲ್ಲಾ ಮತ್ತು ಅಲ್ಲಮನ ಸಂಕೇತ ಎಂಬ ನಂಬುಗೆ ಅಲ್ಲೀಸಾಹೇಬನದು. ತಲೆ ಮೇಲೆ ಬಿಳಿ ಟೊಪ್ಪಿಗೆ. ಬಿಳಿ ಧೋತರ ಅಂಗಿ. ಒಮ್ಮೊಮ್ಮೆ ಲುಂಗಿ. ಹಣೆಗೆ ಭಸ್ಮ ವಿಭೂತಿ. ಅದೆಲ್ಲವೂ ಗುರು ನೀಲೂರಪ್ಪ ತೋರಿದ ತಿಳಿಬೆಳಕಿನ ದಾರಿ. ಅದು ಮಹಾಂತ ಮಡಿವಾಳಪ್ಪನ ಮಹಾಮಾರ್ಗವಂತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.