ಸುತ್ತಲೂ ಹಚ್ಚ ಹಸಿರಿನ ಪರಿಸರ. ವಾದ್ಯಗಳಿಂದ ಹೊರಡುವ ಶೃತಿ, ಸಂಗೀತದ ಆಲಾಪ ಅಲೆ ಅಲೆಯಾಗಿ ತೇಲಿ ಬರುತ್ತಿದ್ದರೆ, ಅದಕ್ಕೆ ಧ್ವನಿಗೂಡಿಸಿವೆ ಎಂಬಂತೆ ಪಕ್ಷಿಗಳ ಚಿಲಿಪಿಲಿ ಗಾನ. ಪ್ರತಿ ವರ್ಷವೂ ಈ ಸೊಬಗು ಮೇಳೈಸುವುದು ನಿಡ್ಲೆ ಎಂಬ ಪುಟ್ಟ ಹಳ್ಳಿಯಲ್ಲಿ. ಮೇ ತಿಂಗಳಲ್ಲಿ ಇಲ್ಲಿ ನಡೆಯುವ ‘ಕರುಂಬಿತ್ತಿಲ್ ಸಂಗೀತ ಶಿಬಿರ’ದಲ್ಲಿ.
ಚೆನ್ನೈನಲ್ಲಿ ನೆಲೆಸಿರುವ ಪ್ರಸಿದ್ಧ ವಯೊಲಿನ್ ವಾದಕ ವಿಠ್ಠಲ ರಾಮಮೂರ್ತಿ ಅವರು ಸಂಗೀತ ಪ್ರೇಮಿ ಸ್ನೇಹಿತರೊಡಗೂಡಿ ‘ಕರುಂಬಿತ್ತಿಲ್ ಸಂಗೀತ ಶಿಬಿರ’ವನ್ನು ಉಚಿತವಾಗಿ ನಡೆಸುತ್ತಿದ್ದಾರೆ. ದೇಶ–ವಿದೇಶದಲ್ಲಿರುವ ಸಂಗೀತದ ಕುಡಿಗಳನ್ನು ಬೆಸೆಯುತ್ತಿರುವ ಈ ಶಿಬಿರದಲ್ಲಿ, ಅನಿವಾಸಿ ಭಾರತೀಯ ಸಂಗೀತ ವಿದ್ಯಾರ್ಥಿಗಳು, ಹೊರ ದೇಶದ ಸಂಗೀತ ವಿದ್ವಾಂಸರು ಹಾಗೂ ಸಂಗೀತಾಸಕ್ತರು ಸೇರಿದಂತೆ ಈ ಬಾರಿ 320ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.
ಪ್ರತಿ ವರ್ಷ ಸಂಗೀತ ಕ್ಷೇತ್ರದ ವಿದ್ವಾಂಸರನ್ನು ಈ ಪುಟ್ಟ ಹಳ್ಳಿಗೆ ಕರೆಯಿಸಿ ಶಿಬಿರ ನಡೆಸಲಾಗುತ್ತದೆ. ಸಾಂಪ್ರದಾಯಿಕ ಶೈಲಿಯಲ್ಲಿರುವ ಪುರಾತನವಾದ ದೊಡ್ಡಮನೆ, ಅದರ ಆವರಣದಲ್ಲಿ ನಡೆಯುವ ಈ ಶಿಬಿರದಲ್ಲಿ, ಅಂದ–ಅಲಂಕಾರ, ಊಟ–ವಸತಿ ಹೀಗೆ ಪ್ರತಿ ಹಂತದಲ್ಲಿಯೂ ಹಳ್ಳಿಗಾಡಿನ, ತುಳುನಾಡಿನ ಸೊಗಡು ಇರುತ್ತದೆ. ಇಲ್ಲಿಯೇ ಸಾಂಪ್ರದಾಯಿಕ ಶೈಲಿಯಲ್ಲಿ ಅಡುಗೆ ತಯಾರಿಸಲಾಗುತ್ತದೆ. ಎಲ್ಲರೂ ಸೇರಿ ಊಟ ಮಾಡುತ್ತಾರೆ. ಮಕ್ಕಳು–ಹಿರಿಯರು ಎಲ್ಲರೂ ಒಂದೇಕಡೆ ಇದ್ದು ನಲಿಯುತ್ತಾರೆ. ಅತಿಥಿಗಳಿಗೆ ಮಾತ್ರ ಬೇರೆಡೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಶಿಬಿರಾರ್ಥಿಗಳು ಈ ದೊಡ್ಡ ಮನೆಯಲ್ಲಿಯೇ ತಂಗುತ್ತಾರೆ. ಇವೆಲ್ಲವೂ ನಗರವಾಸಿಗಳಿಗೆ ಹೊಸ ಅನುಭವ ಕಟ್ಟಿಕೊಡುತ್ತಿವೆ.
ಈ ಬಾರಿಯ ಶಿಬಿರದಲ್ಲಿ ಉಡುಪಿ ಗೋಪಾಲಕೃಷ್ಣನ್, ಟಿ.ವಿ. ರಾಮಪ್ರಸಾದ್, ಚಾರುಮತಿ ರಘುರಾಮನ್, ಅನಂತ ಆರ್. ಕೃಷ್ಣನ್, ಅಭಿಷೇಕ್ ರಘುರಾಮನ್, ಸುಂದರ ಕುಮಾರ್, ವಿಠ್ಠಲ ರಂಗನ್, ವಿ.ವಿ. ರಮಣಮೂರ್ತಿ, ಎ. ಚಂದನ್ ಕುಮಾರ್, ರಮಣ ಬಾಲಚಂದ್ರನ್ ಸೇರಿ ಹಲವು ವಿದ್ವಾಂಸರು ಭಾಗವಹಿಸಿ ಸಂಗೀತ ಪಾಠ ಮಾಡಿದರು. ಕಛೇರಿ ನಡೆಸಿಕೊಟ್ಟರು.
ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳ ಬಳಿಯ ನಿಡ್ಲೆ ಗ್ರಾಮದ ‘ಕರುಂಬಿತ್ತಿಲ್’ ಎಂಬುದು ವಿಠ್ಠಲ ರಾಮಮೂರ್ತಿ ಅವರ ಮನೆ ಇರುವ ಪ್ರದೇಶದ ಹೆಸರು (ಕರುಂಬಿತ್ತಿಲ್ ಎಂಬುದು ತುಳು ಪದ. ಕಬ್ಬು ಬೆಳೆಯುವ ಹಿತ್ತಿಲು ಎಂಬುದು ಇದರ ಅರ್ಥ). ಇಲ್ಲಿಯೇ ಇದ್ದು ಅವರು ಎಸ್‌ಎಸ್‌ಎಲ್‌ಸಿ ವರೆಗೆ ಓಗಿದರು. ಸಂಗೀತ ಕಲಿಯಲು ಇಲ್ಲಿ ಅಂತಹ ವಾತಾವರಣ ಇರಲಿಲ್ಲ. ಎರಡು ಕಡೆಯಿಂದ ನದಿ, ಮಧ್ಯ ಈ ಊರು ದ್ವೀಪದಂತೆ ಇತ್ತು. ಸೇತುವೆ ಇರಲಿಲ್ಲ. ಮಳೆಗಾಲದಲ್ಲಿ ಬೋಟ್‌ನಲ್ಲಿ ಹೋಗಬೇಕಿತ್ತು. ಬೋಟ್ ಕೆಟ್ಟು ನಿಂತಾಗ ಸಂಪರ್ಕವೇ ಸಾಧ್ಯವಾಗುತ್ತಿರಲಿಲ್ಲ. ತಾಯಿಯ ಆಸೆ ಮತ್ತು ಅಜ್ಜಿ–ಅಪ್ಪ ಅವರ ಸಹಕಾರದಿಂದ ಶಿವಮೊಗ್ಗಕ್ಕೆ ಹೋದ ವಿಠ್ಠಲ ರಾಮಮೂರ್ತಿ ಅಲ್ಲಿ ವೆಂಕಟರಮಣ ಅವರ ಬಳಿ ಸಂಗೀತ ಕಲಿತರು. ಮುಂದೆ ಚೆನ್ನೈಗೆ ತೆರಳಿ ಟಿ.ರುಕ್ಮಿಣಿ, ವಯೊಲಿನ್‌ನ ಮೇರು ಪರ್ವತ ಎಂದೇ ಕರೆಯಲಾಗುವ ಲಾಲಗುಡಿ ಜಯರಾಮ್ ಅವರಲ್ಲಿ ಹಾಗೂ ಗುರುಕುಲ ಪದ್ಧತಿಯಲ್ಲಿ ಸಂಗೀತ ಕಲಿತರು. ವಿಶ್ವದ ಬಹುತೇಕ ಕಡೆ ಕಾರ್ಯಕ್ರಮ ನೀಡಿ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ತಮ್ಮ ಕೀರ್ತಿ ಹರಡುವಂತೆ ಮಾಡಿದರು.
ಹುಟ್ಟಿದ ಊರಿಗೆ ಏನಾದರೂ ಮಾಡಬೇಕು ಎಂಬ ತುಡಿತ. ತಮ್ಮೂರಲ್ಲೇ ಕರ್ನಾಟಕ ಶಾಸ್ತ್ರೀಯ ಸಂಗೀತದ ಉಚಿತ ಶಿಬಿರ ನಡೆಸಿ, ಸಂಗೀತಗಾರರನ್ನು ಹುಟ್ಟುಹಾಕಬೇಕು, ಆ ಮೂಲಕ ತಮ್ಮೂರ ಕೀರ್ತಿ ಹೆಚ್ಚಿಸಬೇಕು ಎಂಬ ನಿರ್ಧಾರಕ್ಕೆ ಬಂದರು. ತಾಯಿ ಮತ್ತು ಸಹೋದರಿ ಒತ್ತಾಸೆಯಾಗಿ ನಿಂತರು. ತಮಗೆ ಆತ್ಮೀಯರಾಗಿರುವ ಕಲಾವಿದರನ್ನು ಶಿಬಿರಕ್ಕೆ ಕರೆತಂದು ಅವರ ಮೂಲಕ ಪಾಠ ಮಾಡಿಸುವ ನಿರ್ಧಾರಕ್ಕೆ ವಿಠ್ಠಲ ಅವರು ಬಂದರು. 2000ನೇ ಇಸ್ವಿಯಲ್ಲಿ ಕಸ್ತೂರಿ ರಂಗನ್ ಅವರನ್ನು ಮೊದಲ ಬಾರಿಗೆ ಇಲ್ಲಿಗೆ ಕರೆತಂದು ಎರಡು ದಿನಗಳ ಶಿಬಿರ ನಡೆಸಿದರು. ಅದರಲ್ಲಿ 10 ಮಕ್ಕಳು ಪಾಲ್ಗೊಂಡಿದ್ದರು. ಆ ನಂತರ ಪ್ರತಿ ವರ್ಷವೂ ಬೇಸಿಗೆಯಲ್ಲಿ ಈ ಶಿಬಿರ ನಡೆಯುತ್ತಿದೆ. ಐದು ಅಥವಾ ಏಳು ದಿನ ಶಿಬಿರ ನಡೆಸಲಾಗುತ್ತದೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ ಮಾಡಬೇಕು ಎಂಬ ಹಂಬಲ ಇರುವವರು ಶಿಬಿರಕ್ಕೆ ಬರುತ್ತಾರೆ. ಬಾಲಮುರುಳಿಕೃಷ್ಣ ಅವರಂತಹ ಖ್ಯಾತ ನಾಮರು ನಾಲ್ಕು ದಿನ ಇಲ್ಲಿಯೇ ಇದ್ದು ಸಂಗೀತ ಕಲಿಸಿ ಹೋಗಿದ್ದಾರೆ. ಸಂಗೀತ ಕಲಿಕಾ ಕ್ಷೇತ್ರದಲ್ಲಿ ‘ಮೇ’ ಶಿಬಿರ ಎಂದೇ ಇದು ಪರಿಚಿತವಾಗುತ್ತಿದೆ.
ಈ ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳು ಒಂದು ಹಂತದವರೆಗೆ ಸಂಗೀತ ಕಲಿತವರೇ ಆಗಿರುತ್ತಾರೆ. ಬೇರೆ ಬೇರೆ ಗುರುಗಳ ಬಳಿ ಸಂಗೀತ ಅಭ್ಯಾಸದಲ್ಲಿ ತೊಡಗಿರುವ ವಿದ್ಯಾರ್ಥಿಗಳನ್ನು ಅವರ ಗುರುಗಳು ಶಿಬಿರಕ್ಕೆ ಕರೆ ತರುತ್ತಾರೆ. ಸಂಗೀತ ಶಿಕ್ಷಕರು, ಮಕ್ಕಳ ಪಾಲಕರೂ ಬರುತ್ತಾರೆ. ವಿಠ್ಠಲ ರಾಮಮೂರ್ತಿ ಅವರ ಕೋರಿಕೆಯ ಮೇರೆಗೆ, ಅವರ ಸ್ನೇಹಿತರ ಬಳಗದಲ್ಲಿರುವ ಖ್ಯಾತನಾಮ ಸಂಗೀತ ದಿಗ್ಗಜರು ಸ್ವಯಂಪ್ರೇರಿತರಾಗಿ ಬರುತ್ತಾರೆ. ವಿಠ್ಠಲ ರಾಮಮೂರ್ತಿ ಅವರ ಇಡೀ ಕುಟುಂಬದವರು ಶಿಬಿರ ಮುಗಿಯುವವರೆಗೂ ಇಲ್ಲಿಯೇ ಇರುತ್ತಾರೆ. ಶಿಬಿರಕ್ಕೆ ತಗಲುವ ವೆಚ್ಚವನ್ನು ಸ್ಥಳೀಯ ದಾನಿಗಳು, ವಿಠ್ಠಲ ಅವರ ಗೆಳೆಯರು ಹಾಗೂ ಶಿಷ್ಯರು ಭರಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಇದೊಂದು ಊರ ಹಬ್ಬದ ರೂಪ ಪಡೆಯುತ್ತಿದೆ.
‘ಈ ಸೇವೆ ನಮಗೂ ಖುಷಿ ಕೊಟ್ಟಿದೆ. ಗುರು–ಶಿಷ್ಯರ ಸಂಬಂಧವನ್ನೂ ಇದು ಗಟ್ಟಿಗೊಳಿಸುತ್ತದೆ’ ಎಂಬುದು ಈ ವರ್ಷದ ಶಿಬಿರದಲ್ಲಿ ಪಾಲ್ಗೊಂಡಿದ್ದ ಹಿರಿಯ ಕಲಾವಿದರಾದ ಉಡುಪಿ ಗೋಪಾಲಕೃಷ್ಣನ್, ಶ್ರೀಲಂಕಾದ ಪ್ರಸಿದ್ಧ ಮೃದಂಗ ವಾದಕ ಸ್ವಾಮಿನಾಥನ್ ಶರ್ಮಾ ಅವರ ಮೆಚ್ಚುಗೆಯ ಮಾತು.
ಹೆಚ್ಚಿನ ಸಂಗೀತ ಅಧ್ಯಯನ ಬಯಸುವ ಆಸಕ್ತ ವಿದ್ಯಾರ್ಥಿಗಳು ಹಾಗೂ ಪ್ರಸಿದ್ಧ ಸಂಗೀತಗಾರರ ಬೆಸುಗೆಗೂ ಶಿಬಿರ ಕಾರಣವಾಗುತ್ತಿದೆ. ಶಿಬಿರಕ್ಕೆ ಬರುವ ವಿದ್ವಾಂಸರ ಬಳಿ ನೇರವಾಗಿ ವಿದ್ಯಾರ್ಥಿಗಳೇ ಕೇಳಿಕೊಂಡು, ಅವರ ಬಳಿ ಸಂಗೀತ ಕಲಿಯಲು ಹೋಗುತ್ತಾರೆ. ಇನ್ನು ಕೆಲವರು ತಮಗೆ ಇಂತಹ ಗುರುಗಳ ಬಳಿ ಸಂಗೀತ ಅಧ್ಯಯನ ಮಾಡಬೇಕು ಎಂದು ಬಯಸಿದರೆ, ಅದಕ್ಕೆ ಮಾರ್ಗದರ್ಶನ ಮಾಡಲಾಗುತ್ತದೆ.
ಈ ಶಿಬಿರದ ಯಶಸ್ಸಿನ ಬಗ್ಗೆ ಕೇಳಿದರೆ ವಿಠ್ಠಲ ರಾಮಮೂರ್ತಿ ಹೇಳುವುದು ಹೀಗೆ, ‘ಈ ಶಿಬಿರದಿಂದ ಹೊರಬಂದ ಹನ್ನೆರಡು ವಿದ್ಯಾರ್ಥಿಗಳು ಪೂರ್ಣಾವಧಿ ಸಂಗೀತಗಾರರಾಗಿ ಬದುಕು ಕಟ್ಟಿಕೊಂಡಿದ್ದಾರೆ. ಈ ವರೆಗಿನ ಸಂಗೀತ ಶಿಬಿರದಲ್ಲಿ ಪಾಲ್ಗೊಂಡಿದ್ದ ಸುಮಾರು 60 ವಿದ್ಯಾರ್ಥಿಗಳು ಪ್ರಸಿದ್ಧ ಸಂಗೀತಗಾರರಲ್ಲಿ ಸಂಗೀತ ಕಲಿಯುತ್ತಿದ್ದಾರೆ. ಕೆಲವೇ ವರ್ಷಗಳಲ್ಲಿ ಅವರೆಲ್ಲರೂ ಉತ್ತಮ ಸಂಗೀತಗಾರರಾಗಿ ಹೊರಹೊಮ್ಮಲಿದ್ದು, ಇದು ಈ ಶಿಬಿರ ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಕೊಡಮಾಡುವ ದೊಡ್ಡ ಕೊಡುಗೆಯಾಗಲಿದೆ’.
ಹುಟ್ಟಿದ ಊರಿಗೆ ಏನಾದರೂ ಮಾಡಬೇಕು ಎನ್ನುವ ಬಯಕೆ ಹೊಂದಿರುವವರಿಗೆ ವಿಠ್ಠಲ ರಾಮಮೂರ್ತಿ ಅವರ ಮಾದರಿ ಕೆಲಸ ಪ್ರೇರಣೆ ಆಗಬಲ್ಲದು.
ಕರ್ನಾಟಕ ಶಾಸ್ತ್ರೀಯ ಸಂಗೀತ ತುಂಬಾ ಸರಳ. ಅದಕ್ಕೆ ಮಡಿವಂತಿಕೆ ಎಂಬುದಿಲ್ಲ. ಶಿಸ್ತುಬೇಕು ಅಷ್ಟೇ. ಈ ಸಂಗೀತ ಆಸ್ವಾದಿಸುವವರು ವಿಶ್ವವ್ಯಾಪಿಯಾಗಿದ್ದಾರೆ. ನಮ್ಮ ಶಿಬಿರಗಳಿಂದ ಹೆಚ್ಚು ಹೆಚ್ಚು ಸಂಗೀತಗಾರರು ಬೆಳೆದು ಕರ್ನಾಟಕ ಶಾಸ್ತ್ರೀಯ ಸಂಗೀತದ ನಿನಾದ ಜಗತ್ತಿನಾದ್ಯಂತ ಪಸರಿಸಬೇಕು ಎಂಬುದು ನನ್ನ ಬಯಕೆ..ವಿಠ್ಠಲ ರಾಮಮೂರ್ತಿ ಶಿಬಿರದ ರೂವಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.